ನೀವು ಚಹಾಪ್ರಿಯರೇ?: ಹಾಗಿದ್ದರೆ ಅತಿಯಾದ ಚಹಾ ಸೇವನೆಯ ದುಷ್ಪರಿಣಾಮಗಳು ತಿಳಿದಿರಲಿ
ಚಹಾ ಕೆಲವರಿಗೆ ಕೇವಲ ಪಾನೀಯವಲ್ಲ,ಅದಿಲ್ಲದೆ ಅವರಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅವರ ದಿನವು ಚಹಾದೊಂದಿಗೆ ಆರಂಭಗೊಂಡು ಅದರೊಂದಿಗೇ ಮುಗಿಯುತ್ತದೆ. ಈ ಮಧ್ಯೆ ಏನಿಲ್ಲವೆಂದರೂ ಐದಾರು ಕಪ್ ಚಹಾವನ್ನು ಅವರು ಸೇವಿಸಿರುತ್ತಾರೆ. ಆದರೆ ಹೀಗೆ ಅತಿಯಾದ ಚಹಾ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ?
ಚಹಾದಲ್ಲಿ ಕೆಫೀನ್ ಇರುತ್ತದೆ ಮತ್ತು ಅತಿಯಾದ ಕೆಫೀನ್ ಸೇವನೆ ಹಲವಾರು ವಿಧಗಳಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ,ಇದು ಆರಂಭದಲ್ಲಿ ವ್ಯಕ್ತಿಗೆ ಗೊತ್ತೂ ಆಗುವುದಿಲ್ಲ. ಅತಿಯಾದ ಚಹಾಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿಯಿಲ್ಲಿದೆ......
ಎದೆಯುರಿ
ನೀವು ಕೆಫೀನ್ ಸೇವನೆಯನ್ನು ನಿಯಂತ್ರಿಸದಿದ್ದರೆ ಎದೆಯುರಿ ಮತ್ತು ಇತರ ಹೃದಯನಾಳೀಯ ಸಮಸ್ಯೆಗಳಿಂದ ನರಳುವ ಹೆಚ್ಚಿನ ಅಪಾಯದಲ್ಲಿರುತ್ತೀರಿ. ಚಹಾ ಮತ್ತು ಕಾಫಿಯಲ್ಲಿರುವ ಕೆಫೀನ್ ಜಠರದಲ್ಲಿ ಆಮ್ಲದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿ ಹಾಗೂ ಆ್ಯಸಿಡಿಟಿ ಅಥವಾ ಆಮ್ಲೀಯತೆಯನ್ನುಂಟು ಮಾಡುತ್ತದೆ. ನೀವು ಈಗಾಗಲೇ ಆಮ್ಲೀಯತೆಯ ಸಮಸ್ಯೆಯನ್ನು ಹೊಂದಿದ್ದರೆ ಅತಿಯಾದ ಕೆಫೀನ್ ಸೇವನೆಯು ಅದನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.
ತಲೆನೋವುಗಳು
ತಲೆನೋವು ಇದ್ದಾಗ ಚಹಾ ಸೇವನೆಯು ಅದನ್ನು ತಗ್ಗಿಸಲು ನೆರವಾಗಬಹುದು,ಆದರೆ ಅತಿಯಾದ ಚಹಾ ಸೇವನೆಯ ಚಟವು ತದ್ವಿರುದ್ಧ ಪರಿಣಾಮವನ್ನುಂಟು ಮಾಡುತ್ತದೆ. ಕೆಫೀನ್ ಸೇವನೆಯನ್ನು ನಿಯಂತ್ರಿಸದಿದ್ದರೆ ಅದು ಆಗಾಗ್ಗೆ ತಲೆನೋವುಗಳಿಗೆ ಕಾರಣವಾಗುತ್ತದೆ.
ಹೆಚ್ಚಿನ ಒತ್ತಡ ಮತ್ತು ಉದ್ವೇಗ
ಚಹಾ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುವುದು ಜನರ ಸಾಮಾನ್ಯ ನಂಬಿಕೆ. ಆದರೆ ಅತಿಯಾದ ಚಹಾ ಸೇವನೆಯು ನಿಮ್ಮನ್ನು ಒತ್ತಡ ಮತ್ತು ಖಿನ್ನತೆಗೆ ಗುರಿಯಾಗಿಸಬಹುದು. ದಿನದಿಂದ ದಿನಕ್ಕೆ ನಿಮ್ಮಲ್ಲಿ ಆತಂಕ,ಉದ್ವೇಗಗಳು ಹೆಚ್ಚುತ್ತಿದ್ದರೆ ನೀವು ಕೆಫೀನ್ ಸೇವನೆಯನ್ನು ಕಡಿಮೆ ಮಾಡಲೇಬೇಕಾಗುತ್ತದೆ.
ನಿದ್ರೆಗೆ ವ್ಯತ್ಯಯ
ರಾತ್ರಿವೇಳೆಯಲ್ಲಿ ಎಚ್ಚರವಾಗಿರಲು ಒಂದು ಕಪ್ ಚಹಾ ಸೇವನೆ ನೆರವಾಗುತ್ತದೆ ನಿಜ,ಆದರೆ ಇದರ ಇನ್ನೊಂದು ಮುಖವೂ ಇದೆ. ದಿನದಲ್ಲಿ 3-4 ಕಪ್‌ಗಳಿಗಿಂತ ಹೆಚ್ಚು ಚಹಾ ಸೇವಿಸಿದರೆ ರಾತ್ರಿ ನಿದ್ರೆ ಬರುವುದು ಕಷ್ಟವಾಗಬಹುದು. ಅತಿಯಾದ ಕೆಫೀನ್ ಮೆಲಾಟೋನಿನ್ ಉತ್ಪಾದನೆಗೆ ಅಡ್ಡಿಯನ್ನುಂಟು ಮಾಡುವ ಮೂಲಕ ನೈಸರ್ಗಿಕ ನಿದ್ರೆ ಆವರ್ತನಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ. ಅಲ್ಲದೆ ನಿದ್ರೆಗೆ ಕನಿಷ್ಠ ಒಂದು ಗಂಟೆ ಮೊದಲು ಚಹಾ ಅಥವಾ ಕಾಫಿಯನ್ನೆಂದಿಗೂ ಸೇವಿಸಕೂಡದು.
ವಾಕರಿಕೆ ಮತ್ತು ಅಶಾಂತಿ
ಚಹಾ ಎಲೆಗಳಲ್ಲಿ ಟ್ಯಾನಿನ್‌ಗಳಿರುತ್ತವೆ . ಇವು ಜಠರವನ್ನು ಕೆರಳಿಸಿ ಪಚನ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಜೊತೆಗೆ ವಾಕರಿಕೆಗೆ ಕಾರಣವಾಗುತ್ತದೆ ಮತ್ತು ದಿನವಿಡೀ ಮನಸ್ಸನ್ನು ಅಶಾಂತವಾಗಿರಿಸುತ್ತದೆ.
ಕೆಫೀನ್ ಅವಲಂಬನೆ
ನೀವು ಅತಿಯಾದ ಚಹಾ ಸೇವನೆಯ ಚಟವನ್ನು ಹೊಂದಿದ್ದರೆ ಅದನ್ನು ಬಿಡುವುದು ತುಂಬ ಕಷ್ಟವಾಗುತ್ತದೆ. ನೀವು ಮತ್ತು ನಿಮ್ಮ ಶರೀರ ಕೆಲಸ ಮಾಡಲು ಕೆಫೀನ್ ಅನ್ನು ಅವಲಂಬಿಸಿರುತ್ತೀರಿ. ಕೆಫೀನ್ ಸೇವನೆಯನ್ನು ಕಡಿಮೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನೀವಿನ್ನೂ ಕೆಫೀನ್ ಅವಲಂಬನೆಯನ್ನು ಬೆಳೆಸಿಕೊಂಡಿರದಿದ್ದರೆ ಚಹಾ ಸೇವನೆಗೆ ಕಡಿವಾಣ ಹಾಕಲು ಇದು ಸಕಾಲವಾಗಿದೆ.
ಗರ್ಭಾವಸ್ಥೆಯಲ್ಲಿ ತೊಂದರೆ
ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವನೆಯು ಗರ್ಭಿಣಿಯರಿಗೆ,ಬಾಣಂತಿಯರಿಗೆ ಮತ್ತು ಅವರ ನವಜಾತ ಶಿಶುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಅದು ಗರ್ಭಾವಸ್ಥೆಯಲ್ಲಿನ ತೊಂದರೆಗಳನ್ನು ಹೆಚ್ಚಿಸಬಲ್ಲದು. ಹೀಗಾಗಿ ಗರ್ಭಿಣಿಯರು ಚಹಾ ಅಥವಾ ಕಾಫಿ ಸೇವನೆಯಿಂದ ದೂರವಿದ್ದು ಮೂಲಿಕೆ ಕಷಾಯಗಳನ್ನು ಸೇವಿಸುವುದು ಒಳ್ಳೆಯದು.