ಅಸಹಾಯಕ ಪ್ರಜೆಗಳ ತಲ್ಲಣ ‘ದಿ ಲೀಡರ್’
ರಂಗಾಂತರಂಗ
ನಿರರ್ಥಕವಾಗಿ ಬಾಳುವ ಬದುಕಿನಲ್ಲಿ ಮಾನವನಿಗೆ ತನ್ನ ಅಸ್ತಿತ್ವದ ಪ್ರಶ್ನೆ ಕಾಡತೊಡಗುತ್ತದೆ. ಅರಾಜಕತೆ ಸೃಷ್ಟಿಯಾದ ದೇಶದಲ್ಲಿ ಮಾನವೀಯ ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತವೆ. ಜನರ ನಿರ್ಭಾವುಕತೆ ಮತ್ತು ಏಕಾಂಗಿತನ ಹೆಚ್ಚುತ್ತದಂತೆ. ಇಂತಹದೇ ಸಂದರ್ಭದಲ್ಲಿ ಅಂದರೆ, ಎರಡನೇ ಮಹಾಯುದ್ಧದ ಬಳಿಕ ರೊಮೇನಿಯಾದ ಫ್ರೆಂಚ್ ಬರಹಗಾರ ಯುಜಿನೊ ಐನೆಸ್ಕೊ ರಚಿಸಿದ ‘ದಿ ಲೀಡರ್’ ಒಂದು ಅಂಕದ ಅಸಂಗತ ನಾಟಕ. ಈ ನಾಟಕವನ್ನು ಇತ್ತೀಚೆಗೆ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ‘ಆಯನ ನಾಟಕದ ಮನೆ’ ಅಭಿನಯಿಸಿತು. ಇಲ್ಲಿನ ಪಾತ್ರಗಳು ಯಾವುದೇ ದೇಶ, ಭಾಷೆ, ಕಾಲದಲ್ಲೂ ಕಾಣಸಿಗುವಂತಹುಗಳೇ ಆಗಿವೆ. ನಟರು ತಮ್ಮ ಅಭಿನಯ ಸಾಮರ್ಥ್ಯದ ಮೂಲಕವೇ ಇಡೀ ನಾಟಕವನ್ನು ಅದ್ಭುತವಾಗಿ ಕಟ್ಟಿಕೊಕೊಟ್ಟಿದ್ದಾರೆ.
ನಾಟಕದ ಕಥಾವಸ್ತು, ವೌನ, ಸತ್ವಭರಿತ ಸಂಭಾಷಣೆ, ಹಂತ ಹಂತವಾದ ಅದರ ಏಕಮುಖ ಬೆಳವಣಿಗೆ, ಕಥೆಯ ನಿರ್ದಿಷ್ಟ ಅಂತ್ಯ, ನಾಯಕ, ನಾಯಕಿ ಇವೆಲ್ಲ ನಾಟಕದ ಜೀವಾಳ. ನಾಟಕವೆಂದರೆ ಹೀಗೇ ಇರುತ್ತವೆ ಎಂದುಕೊಂಡಿದ್ದ ಮತ್ತು ಈವರೆಗೂ ಇಂತಹ ಸಾಂಪ್ರದಾಯಿಕ ನಾಟಕಗಳನ್ನೇ ನೋಡಿ ಮೆಚ್ಚಿಕೊಂಡ ಸಾಮಾನ್ಯ ಪ್ರೇಕ್ಷಕರಿಗೆ ‘ದಿ ಲೀಡರ್’ನಂತಹ ಅಸಂಗತ ನಾಟಕ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ. ಅಸಂಗತ ಬದುಕನ್ನು ಅಸಂಬದ್ಧವಾಗಿ ನಿರೂಪಿಸುವ ನಾಟಕದಲ್ಲಿನ ಎಲ್ಲವೂ ನೆಲೆಗೇಡಿಗಳ ಯೋಚನೆ ಅಥವಾ ಇಡೀ ನಾಟಕ ಒಂದು ಬಗೆಯ ಅರ್ಥವಾಗದ ಕನಸಿನಂತೆ ತೋರುತ್ತದೆ ಮತ್ತು ಕಾಡುತ್ತದೆ ಕೂಡಾ.
ಅಸಂಗತ ನಾಟಕಗಳು ನವ್ಯ ಸಾಹಿತ್ಯ ಚಳವಳಿಯ ಕೊಡುಗೆಯಾಗಿದ್ದು, ಅವುಗಳು ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದ ಬಂದಿರುವ ನಾಟಕಗಳಾಗಿವೆ. ಅಸಂಗತ ನಾಟಕಗಳ ಮೂಲ ಫ್ರೆಂಚ್ ದೇಶ. ಬಿಎಂಶ್ರೀ, ಪಿ.ಲಂಕೇಶ್, ಚಂಪಾ, ಗಿರೀಶ್ ಕಾರ್ನಾಡ್
, ಶ್ರೀರಂಗರು ಮುಂತಾದ ಸಂವೇದನಾಶೀಲ ಪ್ರಾಜ್ಞರಿಂದ ಕನ್ನಡದಲ್ಲೂ ಇಂತಹ ಅಸಂಗತ ನಾಟಕಗಳು ರಚನೆಯಾಗಿವೆ ಮತ್ತು ಯಶಸ್ಸು ಕಂಡಿವೆ. ಎಲ್ಲೋ ಹಾಳಾಗಿ ಹೋಗಿರುವ ಆಯಾ ಸಮುದಾಯದ ನಾಯಕ, ರಾಜಕೀಯ ಜನನಾಯಕರಿಗಾಗಿ ಕಾಯುವಿಕೆ ಎನ್ನುವುದು ಪ್ರಜೆಗಳಿಗೆ ಮನುಕುಲದಷ್ಟು ಹಳೆಯದು. ಲೀಡರ್ ಬಗೆಗಿನ ಜನಸಾಮಾನ್ಯರ ಕಲ್ಪನೆಗೂ ಮತ್ತು ನೈಜ್ ಲೀಡರ್‌ಗೂ ಸಾಮ್ಯತೆ ಎನ್ನುವುದು ಎಂದೂ ಇರುವುದಿಲ್ಲ. ಇಲ್ಲಿನ ಎಲ್ಲ ಪಾತ್ರಗಳ ಒಂದೇ ಒಂದು ಆಸೆ ಎಂದರೆ ಲೀಡರ್‌ನನ್ನು ಕಂಡು ಕಣ್ತುಂಬಿಕೊಳ್ಳುವುದು. ಅದಕ್ಕಾಗಿ ಅವು ಕಾಯುತ್ತವೆ, ಕಾಯುವಿಕೆಯೊಂದೆ ತಮ್ಮ ಪರಮ ಗುರಿ ಎಂಬಂತೆ. ಈ ಕಾಯುವಿಕೆಯಂತಹ ಒಂದು ಅಮೂರ್ತ ವಿಷಯದ ಮೂಲಕ ನಾಟಕದುದ್ದಕ್ಕೂ ರಾಜಕೀಯ ಪ್ರಜ್ಞೆ ಇರದ ಅಸಹಾಯಕ ಪ್ರಜೆಗಳ ತಲ್ಲಣ ಅನಾವರಣಗೊಂಡಿದೆ.
ಜನರ ಸನಿಹಕ್ಕೂ ಸುಳಿಯಲೊಲ್ಲದ ಲೀಡರ್‌ಗೆ ಹೊಗಳುಭಟರಿದ್ದಾರೆ, ಭಕ್ತಗಣವಿದೆ. ಕಾರ್ಪೊರೇಟ್ ಎನ್ನುವ ಹೆಗ್ಗಣವನ್ನು ಮುದ್ದು ಮಾಡುತ್ತ ಬಗಲಲ್ಲೇ ಇಟ್ಟುಕೊಂಡು ಲೀಡರ್ ಭಾಷಣ ಬಿಗಿಯುತ್ತಾನೆ, ಥೇಟು ಸರ್ವಾಧಿಕಾರಿಯ ಹಾಗೆ. ಇಲ್ಲಿನ ಕಾಯುವಿಕೆ ಪ್ರಸ್ತುತ ದಿನಗಳನ್ನು ಅಣಕಿಸುತ್ತದೆ. ಉದ್ಯೋಗಕ್ಕಾಗಿ ಅದೆಷ್ಟು ಬೇಸತ್ತರೂ ಈ ಬಗ್ಗೆ ಪ್ರಶ್ನಿಸದ, ಪ್ರತಿಭಟಿಸದ ಈಗಿನ ಯುವಜನ ಉದ್ಯೋಗವೇ ತಮ್ಮತ್ತ ನಡೆದು ಬರುತ್ತದೆ ಎಂಬ ಭ್ರಮೆಯಲ್ಲಿ ಕಾದು ಕುಳಿತಿಲ್ಲವೆ? ಹತಾಸೆಗೊಳಗಾಗಿ ಆತ್ಮಹತ್ಯೆಯಂತಹ ಯೋಚನೆ ಮಾಡುತ್ತಾರೆಯೇ ಹೊರತು ಇವರು ಎಂದಿಗೂ ಪ್ರಶ್ನಿಸಲಾರರು? ತಾವು ನೆಚ್ಚಿದ ನಾಯಕನ ಆರಾಧನೆ ಅದೆಷ್ಟೊಂದು ಅಶ್ಲೀಲವಾದದ್ದು ಮತ್ತು ಅದು ಹೇಗೆ ಆತನನ್ನು ಸರ್ವಾಧಿಕಾರಿಯಾಗಿಯೂ, ಪ್ರಜೆಗಳನ್ನು ಭಿಕಾರಿಗಳನ್ನಾಗಿಯೂ ಮಾಡುತ್ತದೆ ಎನ್ನುವ ಬಗೆ ಇಲ್ಲಿ ನಗ್ನಗೊಂಡಿದೆ. ರಂಗದ ಮೇಲೆ ಲೀಡರ್‌ಗಾಗಿ ಜನತೆಯ ಕಾಯುವಿಕೆ ಹೇಗಿತ್ತೆಂದರೆ ನನ್ನೂರ ಮೊಹರಂ ಹಬ್ಬದಲ್ಲಿನ ಆ ಕತ್ತಲ ರಾತ್ರಿಯಲ್ಲಿ ಅಲೈದೇವರು ಏಳುವುದನ್ನು ಜನ ಕಾದು ಕುಳಿತಂತೆ, ಅವನಿಗಾಗಿ ಪದಕಟ್ಟಿ ಗುಣಗಾನ ಮಾಡಿದಂತೆಯೇ ಥೇಟು. ಮುಖವಿಲ್ಲದ ಸರ್ವಾಧಿಕಾರಿ ದೇವರು ಎದ್ದು ಬರುವಾಗ ಜನ ಹುಚ್ಚೆದ್ದು ಕುಣಿಯುತ್ತಾರಲ್ಲ ಹಾಗೆಯೇ ಲೀಡರ್ ಬರುತ್ತಾನೆಂದು ಜನ ಕುಣಿಯುತ್ತಾರೆ ಇಲ್ಲೂ ಕೂಡಾ. ದೇವರು ಹೊಳೆಗೆ ಹೋಗುವಾಗ ಜನರೆಲ್ಲ ಬಪ್ಪಾರ್ಲೆ ಮಲಗಿ ದೇವರು ಹೊತ್ತ್ತುಕೊಂಡವರಿಂದ ತುಳಿಸಿಕೊಳ್ಳುತ್ತಾರಲ್ಲ ಹಾಗೇ ಲೀಡರ್ ಎನ್ನುವ ಮನುಷ್ಯಾಕೃತಿಯೊಂದು ಮಲಗಿದವರನ್ನು ತುಳಿಯುತ್ತ, ದಾಟುತ್ತ ಅಸಂಗತವಾಗುತ್ತದೆ. ಈ ಅಸಂಗತ ನಾಟಕದಲ್ಲಿನ ಸಂಭಾಷಣೆಗಳು ಮತ್ತು ಸನ್ನಿವೇಶಗಳು ಮೇಲುನೋಟಕ್ಕೆ ಚಲ್ಲಾಪಿಲ್ಲಿಯಾದಂತೆಯೋ, ಅಸಂಬದ್ಧವಾಗಿರುವಂತೆಯೋ ತೋರುವುದು ನಿಜ. ಆದರೆ, ನಾಟಕವನ್ನು ಇಡಿಯಾಗಿ ಗ್ರಹಿಸಿದಾಗ, ಹರವಿದಂತಿರುವ ಎಲ್ಲ ಸನ್ನಿವೇಶ ಮತ್ತು ಸಂಭಾಷಣೆಗಳನ್ನು ಜೋಡಿಸಿ ಮೆಲುಕು ಹಾಕಿದಾಗ ಪ್ರೇಕ್ಷಕನ ಮನಸ್ಸು ಅದಕ್ಕೆ ತನ್ನದೇ ಆದ ಒಂದು ಬಗೆಯ ವೈಯಕ್ತಿಕ ಅರ್ಥ ಕೊಟ್ಟುಕೊಳ್ಳುತ್ತದೆ. ಅದು ಉಳಿದ ಪ್ರೇಕ್ಷಕರು ಕೊಟ್ಟುಕೊಳ್ಳುವ ಅರ್ಥದೊಡನೆ ಹೊಂದಿಕೆಯಾಗಬೇಕೆಂದಿಲ್ಲ. ಆದರೆ, ವೈಯಕ್ತಿಕ ನೆಲೆಯಲ್ಲಿ ಹೀಗೆ ರೂಪುಗೊಳ್ಳುವ ಅರ್ಥ ನಿಜಕ್ಕೂ ತುಂಬಾ ಪರಿಣಾಮಕಾರಿಯಾದದ್ದು. ಈ ನೆಲೆಯಲ್ಲಿ ‘ದಿ ಲೀಡರ್’ ನಾಟಕದ ನಟರು ಮತ್ತು ನಿರ್ದೇಶಕರು ಬಹುತೇಕ ಯಶಸ್ವಿಯಾಗಿದ್ದಾರೆ.
ಲಕ್ಷ್ಮಣ್ ಕೆ.ಪಿ. ಅವರು ನಿರ್ದೇಶಿಸಿರುವ ಈ ‘ದಿ ಲೀಡರ್’ ನಾಟಕದ ಪಾತ್ರಗಳು ಪ್ರಾದೇಶಿಕ ಭಾಷೆಯಲ್ಲಿ ಸಂಭಾಷಿಸುತ್ತವೆಯಾದರೂ ಅವುಗಳ ವೇಷಭೂಷಣವೆಲ್ಲ ವಿದೇಶಿಮಯವಾಗಿದೆ. ರಂಗದ ಮೇಲೆ ಯಾರೋ ವಿದೇಶಿ ನಟರನ್ನು ನೋಡಿದ ಹಾಗೆ ಭಾಸವಾಗುತ್ತದೆ. ಪಾತ್ರಗಳ ಧಿರಿಸು ಸ್ಥಳೀಯವಾಗಿದ್ದರೆ ಪ್ರೇಕ್ಷಕರಿಗೆ ಇನ್ನೂ ಹೆಚ್ಚು ಆಪ್ತವಾಗಿರುತ್ತಿತ್ತು. ಅಲ್ಲದೆ, ರಂಗದೊಳಗೆ ಇನ್ನಷ್ಟು ವೌನವೂ ಬೇಕೆನಿಸುತ್ತದೆ.