ಕೃತಿ ಪರಿಚಯ
ಈ ಹೊತ್ತಿನ ಹೊತ್ತಿಗೆ
ಚಿನಾರ್ ವೃಕ್ಷದ ಅಳು

ಭಾರತ ಎನ್ನುವ ಬೇರು ನೂರಾರು ಭಾಷೆಗಳ ಕೊಂಬೆ ರೆಂಬೆಗಳನ್ನು ಹಿಡಿದುಕೊಂಡಿದೆ. ಭಾಷೆ ಬೇರೆಯಾದಾಕ್ಷಣ ಬದುಕು, ನೋವು ಸಂಕಟಗಳು ಬೇರೆ ಬೇರೆಯಾಗಿರುವುದಿಲ್ಲ. ಅದರ ಅಭಿವ್ಯಕ್ತಿಯ ವಿಧಾನದಲ್ಲಿ ಆಯಾ ಭಾಷೆ ಸಂಸ್ಕೃತಿಯ ಹಿನ್ನೆಲೆಯಿರುತ್ತದೆ. ಒಂದು ಕತೆ ಒಂದು ಭಾಷೆಯ ಮೂಲಕ ಅಭಿವ್ಯಕ್ತಿಗೊಳ್ಳುವಾಗ, ಆ ನೆಲದ ಸಂಸ್ಕೃತಿಯನ್ನೂ, ಪರಂಪರೆಯನ್ನೂ ನಮಗೆ ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಭಾರತದ ವಿವಿಧ ಭಾಷೆಗಳ ಸಣ್ಣ ಕಥೆಗಳನ್ನು ‘ಚಿನಾರ್ ವೃಕ್ಷದ ಅಳು’ ಹೆಸರಿನಲ್ಲಿ ಡಾ. ಬಸವರಾಜ ಸಾದರ ಅವರು ಕನ್ನಡಕ್ಕೆ ತಂದಿರುವುದು ಮಹತ್ವದ ಕೆಲಸವಾಗಿದೆ. ಇಲ್ಲಿರುವ ವಿವಿಧ ಕಥೆಗಳು ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇಲ್ಲಿರುವ ಕಥೆಗಳ ಕುರಿತಂತೆ ಡಾ. ಎಚ್. ಎಸ್. ರಾಘವೇಂದ್ರರಾವ್ ಅವರು ಹೀಗೆ ಬರೆಯುತ್ತಾರೆ ‘‘ಈ ಕಥೆಗಳು ಹೆಚ್ಚು ಆಧುನಿಕವೂ, ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ...ಇಲ್ಲಿನ ಅಷ್ಟೂ ಕಥೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವೀಯವಾದ ನೆಲೆಗಳನ್ನು ಅನುಸಂಧಾನ ಮಾಡುತ್ತದೆ. ಯಾರೋ ಒಬ್ಬನನ್ನು ಅಥವಾ ಒಂದು ವರ್ಗವನ್ನು ಶತ್ರು ಎಂದು ಗುರುತಿಸದೆ, ಸನ್ನಿವೇಶದ ಸಂಕೀರ್ಣತೆಯನ್ನು ಗ್ರಹಿಸುತ್ತವೆ. ...’’
ಚಿನಾರ್ ವೃಕ್ಷದ ಅಳು ಎನ್ನುವುದೇ ಒಂದು ಅಪರೂಪದ ರೂಪಕ ಮತ್ತು ವರ್ತಮಾನದ ರಾಜಕೀಯ ಸಂದರ್ಭದಲ್ಲಿ ಅದು ಇನ್ನಷ್ಟು ಮಹತ್ವವನ್ನು ಪಡೆಯುತ್ತದೆ. ಕಾಶ್ಮೀರಿ ಜನತೆಯ ಬದುಕಿನಲ್ಲಿ ಗಾಢವಾಗಿ ಬೆರೆತಿರುವ ಚಿನಾರ್ ವೃಕ್ಷವು ಆ ಸಂಸ್ಕೃತಿಯ ಒಂದು ಮಹಾನ್ ರೂಪಕದಂತಿದೆ. ಒಂದು ಪವಿತ್ರ ಮರವಾಗಿ ಮಾತ್ರವಲ್ಲ, ಕಾಶ್ಮೀರಿಗಳ ಅಸ್ಮಿತೆಯ ಸಂಕೇತವಾಗಿಯೂ ಅದು ಮಹತ್ವವನ್ನು ಪಡೆದಿದೆ. ಆಧುನಿಕತೆಯ ಭರಾಟೆ ಹಾಗೂ ಮನುಷ್ಯನ ಸ್ವಾರ್ಥದಿಂದಾಗಿ ಇಂತಹ ವೃಕ್ಷ ಈಗ ಅವಸಾನದ ಅಂಚಿಗೆ ಹೋಗುತ್ತಿದೆ. ಚಿನಾರ್ ವೃಕ್ಷದ ಅವಸಾನವೆಂದರೆ ಕಾಶ್ಮೀರಿಗರಿಗೆ ತಮ್ಮ ಸಂಸ್ಕೃತಿಯ ಅವಸಾನವೇ ಎಂಬ ನೋವು ಕಾಡುತ್ತಿದೆ. ಇಂಥ ಮರವೊಂದರ ಅವಸಾನದ ನೋವನ್ನೇ ಧ್ವನಿಪೂರ್ಣವಾಗಿ ಕಥೆಯಾಗಿಸಿದ್ದಾರೆ ಸ್ನೇಹಾ ಮೊಂಟು. ಕೊಂಕಣಿ ಭಾಷೆಯಲ್ಲಿ ದಾಮೋದರ ವೌಜೋ ಬರೆದ ಬರ್ಗರ್, ಅಸ್ಸಾಮಿ ಭಾಷೆಯಲ್ಲಿ ಸಂಜೀವ ಪೋಳ್ ಡೇಕಾ ಅವರ ನಾಚಿಕೆ, ಒರಿಯಾ ಭಾಷೆಯಲ್ಲಿ ಭೂಪೇನ್ ಮಹಾಪಾತ್ರ ಅವರ ಎಂ. ಕೆ. ಗಾಂಧಿ, ಬಂಗಾಳಿಯಲ್ಲಿ ವಿನೋದ ಘೋಸಾಲ್ ಅವರ ಎಸ್‌ಎಮ್‌ಎಸ್, ಒರಿಯಾ ಭಾಷೆಯ ಜಾನಪದ ಕಥೆ ಕಕ್ಕಸಿನವನ ಕನಸು, ಮಲಯಾಳಂ ಭಾಷೆಯಲ್ಲಿ ಈ. ಪಿ. ಕುಮಾರ್ ಬರೆದ ಕಣ್ಣೀರಿನಾಕಳು, ಬಂಗಾಳಿಯಲ್ಲಿ ದಿವ್ಯೇಂದು ಪಲಿತ್ ಬರೆದ ಅಬನ್, ಸಿಂಧಿಯಲ್ಲಿ ವಾಸದೇವ್ ಮೋಹಿ ಸಿದ್ನಾನಿ ಬರೆದ ಒಂದು ಬದಲಾವಣೆ ಕಥೆಗಳು ಇಲ್ಲಿವೆ. ಒಟ್ಟು ವಿವಿಧ ಭಾಷೆಗಳ 11 ಕಥೆೆಗಳಿವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 100 ರೂಪಾಯಿ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ