ಮಂಗಳೂರು ನಗರಕ್ಕೆ 24x7 ಕುಡಿಯುವ ನೀರಿನ ವ್ಯವಸ್ಥೆ: ಸುಯೆಝ್ ಸಂಸ್ಥೆಗೆ 793 ಕೋಟಿ ರೂ.ಗಳ ಗುತ್ತಿಗೆ
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.12: ಮಂಗಳೂರು ನಗರಕ್ಕೆ ಕುಡಿಯುವ ನೀರು ವಿತರಣಾ ವ್ಯವಸ್ಥೆಯ ಜಾಲ ವಿಸ್ತರಣೆ, ಪುನರ್ವಸತಿ ಮತ್ತು ಪೂರೈಕೆ ಸೇರಿದಂತೆ 24x7 ಕುಡಿಯುವ ನೀರಿನ ಸಮಗ್ರ ವ್ಯವಸ್ಥೆಯ ಗುತ್ತಿಗೆಯನ್ನು ವಿದೇಶಿ ಮೂಲದ ಸುಯೆಝ್ ಸಂಸ್ಥೆ (ಎಸ್ಯುಇಝೆಡ್) ಪಡೆದುಕೊಂಡಿದೆ. 793 ಕೋಟಿ ರೂ.ಗಳ ಈ ಗುತ್ತಿಗೆ ಒಪ್ಪಂದವು ಮೂರು ವರ್ಷಗಳ ಕಾಮಗಾರಿ ಹಾಗೂ 8 ವರ್ಷಗಳ ನಿರ್ವಹಣೆಯನ್ನು ಹೊಂದಿರುತ್ತದೆ.
ಸ್ಮಾರ್ಟ್ ಸಿಟಿಯ ಗರಿಯನ್ನು ಹೊತ್ತುಕೊಂಡಿರುವ ಮಂಗಳೂರು ನಗರವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕುಡಿಯುವ ನೀರಿನದ್ದು ಕೂಡಾ ಒಂದು. ಹಾಗಾಗಿ ನಗರಕ್ಕೆ ಸಮಗ್ರ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಈ ಗುತ್ತಿಗೆ ಒಪ್ಪಂದದಡಿ ಕಲ್ಪಿಸಲು ಮಹಾನಗರ ಪಾಲಿಕೆ ಮುಂದಾಗಿದೆ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ ಹಣಕಾಸು ನೆರವಿನಂದ ನಡೆಸಲಾಗುವ ಈ 24x7 ನೀರು ಸರಬರಾಜು ಯೋಜನೆಯು 2036ರ ಜನಸಂಖ್ಯೆ ಆಧಾರ ಹಾಗೂಬೇಡಿಕೆಯ ಆಧಾರದಲ್ಲಿ ಸಂಪೂರ್ಣ ನೀರು ಪೂರೈಕೆಯ ವಿತರಣಾ ಜಾಲವನ್ನು ನವೀಕರಿಸುವುದಾಗಿದೆ.
ಇದು ಟ್ಯಾಂಕ್ಗಳ ನಿರ್ಮಾಣ, ನೀರಿನ ಕೊಳವೆ ಅಳವಡಿಸುವುದು, ಮನೆ ಸಂಪರ್ಕ ಕಲ್ಪಿಸುವುದು, ಮೀಟರ್ಗಳ ಅಳವಡಿಕೆ, ವಾಲ್ವ್ಗಳ ಜೋಡಣೆಯನ್ನೂ ಒಳಗೊಂಡಿರುತ್ತದೆ. ಇದು 96,300 ಸಂಪರ್ಕಗಳು ಮತ್ತು 2,148 ಕಿ.ಮೀ ನೀರು ವಿತರಣಾ ಜಾಲವನ್ನು ಹೊಂದಲಿದೆ. ಮೂರು ವರ್ಷಗಳ ಕಾಲ ನಡೆಯಲಿರುವ 1,388 ಕಿ.ಮೀ ಕುಡಿಯುವ ನೀರಿನ ಜಾಲದ ವಿನ್ಯಾಸ ಮತ್ತು ಪೈಪ್ ಅಳವಡಿಕೆ, ಫಿಲ್ಟರ್ ಹೌಸ್, ಪಂಪಿಂಗ್ ಕೇಂದ್ರಗಳ ವಿನ್ಯಾಸ ಮತ್ತು ನಿರ್ಮಾಣವನ್ನು ಮಾಡಲಾಗುತ್ತದೆ. ಬಳಿಕ ಎಂಟು ವರ್ಷಗಳ ಕಾಲ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ಹಾಗೂ ನಿರ್ವಹಣೆಯ ಸಂಪೂರ್ಣ ಜವಾಬ್ಧಾರಿಯ್ನು ಸುಯೆಝ್ ಸಂಸ್ಥೆ ವಹಿಸಲಿದೆ.
ವೈಯಕ್ತಿಕ ಸೇವೆ ಮತ್ತು ದೂರು, ಬೇಡಿಕೆಗಳ ಕುರಿತಂತೆಯೂ 24x7 ಕಾಲ್ ಸೆಂಟರ್ ಮತ್ತು ಗ್ರಾಹಕ ಏಜೆನ್ಸಿಗಳನ್ನು ರಚಿಸುವ ಮೂಲಕ ನೆಟ್ವರ್ಕ್ ಕಾರ್ಯಕ್ಷಮತೆ, ನೀರಿನ ಗುಣಮಟ್ಟ ಮತ್ತು ಗ್ರಾಹಕ ಸೇವೆಯನ್ನು ಸುಧಾರಿಸುವ ಜವಾಬ್ದಾರಿಯನ್ನು ಸಹ ಸಂಸ್ಥೆ ನಿರ್ವಹಿಸಲಿದೆ. ಭಾರತದಲ್ಲಿ 30 ವರ್ಷಗಳಿಗಿಂತ ಹೆಚ್ಚು ಕಾಲ ವಿವಿಧ ನಗರಗಳಲ್ಲಿ ನೀರಿನ ವಿತರಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆಯು 2012ರಲ್ಲಿ ಹೊಸದಿಲ್ಲಿಯ ಮಾಲ್ವಿಯಾ ನಗರಕ್ಕೆ ಕುಡಿಯುವ ನೀರಿನ ವಿತರಣೆ ಹಾಗೂ ಸೇವೆಗಳ ಸುಧಾರಣೆ ಯೋಜೆಯ ಒಪ್ಪಂದವನ್ನು ಮಾಡಿಕೊಂಡಿತು. ಇದೀಗ ಕೋಲ್ಕತಾ, ದಾವಣಗೆರೆ, ಕೊಯಮತ್ತೂರು ಮೊದಲಾದ ಪ್ರಮುಖ ನಗರಗಳಿಗೂ ನೀರಿನ ವ್ಯವಸ್ಥೆಯ ಗುತ್ತಿಗೆ ವಹಿಸಲು ಮುಂದಾಗಿದೆ. ಪ್ರಸ್ತುತ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗುತ್ತಿಗೆಯನ್ನು ಸುಯೆಝ್ ಸಂಸ್ಥೆ ಗೆದ್ದುಕೊಂಡಿದೆ.
ಸುಯೆಝ್ ಸಂಸ್ಥೆಗೆ ಕಾಮಗಾರಿ ಆದೇಶ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24x7 ಕುಡಿಯುವ ನೀರಿನ ಸಮಗ್ರ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ 793 ಕೋಟಿ ರೂ.ಗಳ ಗುತ್ತಿಗೆಯನ್ನು ಸುಯೆಝ್ ಸಂಸ್ಥೆ ಪಡೆದಿದ್ದು, ಕಾಮಗಾರಿ ಆದೇಶವನ್ನು ಈಗಾಗಲೇ ನೀಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಸಂಸ್ಥೆಯು ಸರ್ವೆ ನಡೆಸಲಿದೆ. ಬಳಿಕ ಮುಂದಿನ ಮಳೆಗಾಲ ಮುಗಿದು ಟ್ಯಾಂಕ್ಗಳ ನಿರ್ಮಾಣ, ಪೈಪ್ಲೈನ್ ಅಳವಡಿಕೆ, ವಿಸ್ತರಣಾ ಜಾಲದೊಂದಿಗೆ ಮೂರು ವರ್ಷಗಳ ಕಾಲ ಕಾಮಗಾರಿಯನ್ನು ಸಂಸ್ಥೆ ನಡೆಸಲಿದೆ. ಕುಡ್ಸೆಂಪ್ ಮೂಲಕ ಸಂಸ್ಥೆಗೆ ಕಾಮಗಾರಿಯನ್ನು ವಹಿಸಲಾಗಿದೆ. 8 ವರ್ಷಗಳ ನಿರ್ವಹಣೆಯ ಜವಾಬ್ಧಾರಿಯೂ ಗುತ್ತಿಗೆ ವಹಿಸಿದ ಸಂಸ್ಥೆ ನಿರ್ವಹಿಸಲಿದೆ.
-ಲಿಂಗೇಗೌಡ, ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್, ಮಂಗಳೂರು ಮಹಾನಗರ ಪಾಲಿಕೆ