ದೇಶದ ಆರ್ಥಿಕ ಪರಿಸ್ಥಿತಿ ಕುಸಿಯಲು ಮೋದಿ ಕಾರಣ: ಮಾಸ್ ಇಂಡಿಯಾ
ಡಿ.14ರಂದು ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ
ಉಡುಪಿ, ಡಿ.12: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರಿಯಾಗಿ ಗಮನ ಕೊಡಲಿಲ್ಲ. ಇದರ ಪರಿಣಾಮವಾಗಿ ದೇಶದ ಆರ್ಥಿಕ ಸ್ಥಿತಿ ತುಂಬಾ ಕುಸಿದಿದೆ. ಇದಕ್ಕೆ ಮೋದಿ ಹಾಗೂ ನಾವು ಆರಿಸಿರುವ ಸಂಸದರೇ ಕಾರಣ ಎಂದು ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟ್ಯಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ನಿರುದ್ಯೋಗಿಗಳ ಸಂಖ್ಯೆ ಶೇ.100ರಷ್ಟು ಹೆಚ್ಚಾಗಿದೆ. ಖಾಸಗಿ ಉದ್ಯಮಿಗಳು ಉದ್ಯಮವನ್ನು ಮುಚ್ಚುತ್ತಿದ್ದಾರೆ. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಕೃಷಿ ಉದ್ಯಮ ಶೇ.70ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಸರಕಾರಿ ಕಂಪೆನಿಗಳನ್ನು ಸರಕಾರ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುತ್ತಿವೆ.
ದೇಶದ ಆದಾಯ ತೆರಿಗೆ, ಮಾರಾಟ ತೆರಿಗೆ ಸಂಗ್ರಹ ಶೇ.50ರಷ್ಟು ಕಡಿಮೆ ಆಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಇಳಿಯಲು ಪ್ರಮುಖ ಕಾರಣ ನೋಟು ರದ್ಧತಿಯಾಗಿದೆ. ಅಲ್ಲದೆ ರಿಸರ್ವ್ ಬ್ಯಾಂಕಿನ 32ಲಕ್ಷ ಕೋಟಿ ರೂ.ವನ್ನು ಕೇಂದ್ರ ಸರಕಾರ ಬಳಕೆ ಮಾಡಿರುವುದು ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ. ದೇಶದಲ್ಲಿ ಹೆಚ್ಚಿನ ರಾಜಕಾರಣಿಗಳು ಕಪ್ಪು ಹಣವನ್ನು ಹೊಂದಿ ದ್ದಾರೆ. ಉದ್ಯಮಿಗಳು ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಈರುಳ್ಳಿ ಬೆಲೆ 200ರೂ.ವರೆಗೆ ಹೋಗಲು ನೆರೆ ಕಾರಣ ಅಲ್ಲ. ಸರಕಾರ ಈ ಬಗ್ಗೆ ಸುಳ್ಳು ಹೇಳುತ್ತಿವೆ. ಈ ವಿಚಾರದಲ್ಲಿ ಜನ ಯಾವುದೇ ಮಾತನ್ನು ಕೇಳಲು ಸರಕಾರ ಸಿದ್ಧ ಇಲ್ಲ. ಆಯುಷ್ಮಾನ್ ಯೋಜನೆಯಿಂದ ಜನರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಇದರ ವಿರುದ್ಧ ಡಿ.14ರಂದು ಬೆಳಗ್ಗೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಡಿ.21ರಂದು ಬೆಂಗಳೂರು, ಡಿ.29ರಂದು ಕೋಲಾರ, ಮುಂದೆ ಮಹಾರಾಷ್ಟ್ರದಲ್ಲೂ ಧರಣಿ ಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮಾಸ್ ಇಂಡಿಯಾ ಸದಸ್ಯೆ ವೀಣಾ ದೀಪಕ್ ಮಾತನಾಡಿ, ಇಂದು ಸರಕಾರ ವಿವಿಧ ಇಲಾಖೆಗಳ ಅನುದಾನವನ್ನು ಕಡಿತ ಮಾಡುತ್ತಿವೆ. ಅದರ ಬದಲು ಸರಕಾರ ಕೂಡಲೇ ವಿಐಪಿ ಸಂಸ್ಕೃತಿ ಹಾಗೂ ಸರಕಾರಿ ಖರ್ಚನ್ನು ಕಡಿಮೆ ಮಾಡಿ, ಆ ಹಣವನ್ನು ದೇಶದ ಉನ್ನತಿಗಾಗಿ ಬಳಸಬೇಕು. ಜನರ ಸೇವೆ ಮಾಡುವ ಜನಪ್ರತಿನಿಧಿಗಳಿಗೆ ಪಿಂಚಣಿಯ ಅಗತ್ಯ ಇಲ್ಲ. ಅದಕ್ಕಾಗಿ ಸರಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾಸ್ ಇಂಡಿಯಾ ಬ್ರಹ್ಮಾವರ ಅಧ್ಯಕ್ಷ ರಾಜೇಶ್ ಪೆರೇರ, ಲಕ್ಷ್ಮೀನಗರ ಅಧ್ಯಕ್ಷ ಜಯ ಪೂಜಾರಿ ಉಪಸ್ಥಿತರಿದ್ದರು.