ಧಾರ್ಮಿಕ ಅಂಧಶ್ರದ್ಧೆಗೆ ವೈಚಾರಿಕ ಚಿಂತನೆ ನೀಡಿದ ಹರಿಕಾರ ಸೈಯದ್ ಅಹಮದ್ ಖಾನ್
ಅಲ್ಪಸಂಖ್ಯಾತರಿಗೆ ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಆಧುನಿಕ ಸೆಕ್ಯುಲರ್ ಶಿಕ್ಷಣವನ್ನು ನೀಡಿ ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುವಂತೆ ಮಾಡುವ ಕಳಕಳಿ ಅವರಿಗಿತ್ತು. ಇದಕ್ಕಾಗಿ ಅವರು 1859ರಲ್ಲಿ ಮುರಾದಾಬಾದ್‌ನಲ್ಲಿ, 1863ರಲ್ಲಿ ಫಜಿಪುರದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ವೈಚಾರಿಕ-ವೈಜ್ಞಾನಿಕವಾಗಿ ಹಿಂದುಳಿದಿದ್ದ ಮುಗ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಅಂಧ ಶ್ರದ್ಧೆಯಿಂದ ಹೊರಬರಲು ದಾರಿ ತೋರಿದರು.
ಭಾರತದಂತಹ ಬಹುಧರ್ಮೀಯ, ಬಹು ಜಾತೀಯ, ಬಹುರಾಷ್ಟ್ರೀಯ ದೇಶವನ್ನು ಒಂದು ರಾಷ್ಟ್ರ ಎಂದು ಪರಿಗಣಿಸಲು ಆ ದೇಶದ ಅತಿ ಚಿಕ್ಕ ಸಮೂಹವನ್ನು ಸಹ ಸೌಹಾರ್ದದಿಂದ ನೋಡಿ ನಿಜವಾದ ಇತಿಹಾಸದ ಬೆಳಕಿನಲ್ಲಿ ಸಮತೋಲನವಾದ ದಿಟ್ಟ, ಶಾಂತಿಯುತ ನಿರ್ಣಯ ತೆಗೆದುಕೊಂಡಾಗ ಮಾತ್ರ ದೇಶವನ್ನು ಒಂದು ರಾಷ್ಟ್ರೀಯ ಚೇತನ ಎಂದು ಪರಿಗಣಿಸಲು ಸಾಧ್ಯ - ಸರ್ ಸೈಯದ್ ಅಹಮದ್ ಖಾನ್.
ಬ್ರಿಟಿಷರ ಕಾಲದಲ್ಲಿದ್ದ ಅಸ್ಥಿರತೆ, ಹಿಂಸೆ, ಅನಾಚಾರ, ಭ್ರಷ್ಟಾಚಾರ, ಕೋಮುಗಲಭೆ, ದಂಗೆ, ಅಸಹನೆ, ನಿರುದ್ಯೋಗ, ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ, ಆತ್ಮಹತ್ಯೆಗಳು ಈಗ ಮರುಕಳಿಸಿ ಬಂದಂತಿದೆ. ಇಂದು ದೇಶಕ್ಕೆ ಮೊದಲಿಗಿಂತಲೂ ಹೆಚ್ಚು ಸಾಂಪ್ರದಾಯಿಕ ಸೌಹಾರ್ದದ ಅವಶ್ಯಕತೆ ಇದೆ. ಧರ್ಮ ಮತ್ತು ರಾಜಕಾರಣ ಒಂದಾದರೆ ದೇಶದ ಏಳಿಗೆ ಕುಂಠಿತವಾಗುತ್ತದೆ. ಬ್ರಿಟಿಷರು ಅಟ್ಟಹಾಸ ಮೆರೆದು ತಮ್ಮ ಶಿಕ್ಷಣ ವ್ಯವಸ್ಥೆಯಿಂದ ಮಿಶನರಿಗಳ ಮುಖಾಂತರ ಭಾರತೀಯರನ್ನು ಮತಾಂತರಗೊಳಿಸಿ ಭಾರತದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರು. ಆ ಸಂದರ್ಭದಲ್ಲಿ ರಾಜರಾಂ ಮೋಹನ್‌ರಾಯ್, ದಯಾನಂದ ಸರಸ್ವತಿಯವರಂತೆ ಸರ್ ಅಹಮದ್ ಖಾನರು ಭಾರತೀಯ ಸಮಾಜದಲ್ಲಿ ಪರಿವರ್ತನೆ ತರಲು, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ 1875ರಲ್ಲಿ ‘‘ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ’’ವನ್ನು ಸ್ಥಾಪಿಸಿ ನೊಂದು, ಬೆಂದು, ದಿಕ್ಕು-ದೆಸೆ ಇಲ್ಲದಂತಾಗಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಆಶಾಕಿರಣರಾದರು. ಅಲ್ಪಸಂಖ್ಯಾತರಿಗೆ ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಆಧುನಿಕ ಸೆಕ್ಯುಲರ್ ಶಿಕ್ಷಣವನ್ನು ನೀಡಿ ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುವಂತೆ ಮಾಡುವ ಕಳಕಳಿ ಅವರಿಗಿತ್ತು. ಇದಕ್ಕಾಗಿ ಅವರು 1859ರಲ್ಲಿ ಮುರಾದಾಬಾದ್‌ನಲ್ಲಿ, 1863ರಲ್ಲಿ ಫಜಿಪುರದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ವೈಚಾರಿಕ-ವೈಜ್ಞಾನಿಕವಾಗಿ ಹಿಂದುಳಿದಿದ್ದ ಮುಗ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಅಂಧಶ್ರದ್ಧೆಯಿಂದ ಹೊರಬರಲು ದಾರಿ ತೋರಿದರು. ಅಂಧಶ್ರದ್ಧೆಯ ಧರ್ಮವನ್ನು ಆಧುನಿಕ ದೃಷ್ಟಿಯಿಂದ ನೋಡಲು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಪ್ರತಿ ಒಬ್ಬ ಭಾರತೀಯ ವಿಶೇಷವಾಗಿ ಅಲ್ಪಸಂಖ್ಯಾತ ಮುಸಲ್ಮಾನರು ಅಲಿಗಡ ಚಳವಳಿಯಲ್ಲಿ ಭಾಗವಹಿಸಲೆಂದು ‘‘ಅಖಿಲ ಭಾರತ ಮುಸ್ಲಿಮ್ ಸಮಾವೇಶ’’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆತ್ಮೀಯರಾದ ಪಂಡಿತ್ ಕೇದಾರನಾಥ್, ಪ್ರೊ. ಜಾದವ್ ಚಂದ್ರ ಚಕ್ರವರ್ತಿ ಅವರೊಂದಿಗೆ ಪರಾಮರ್ಶಿಸಿ ಮುಸಲ್ಮಾನರ ಏಳಿಗೆಯ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ‘ಅಲಿಗಡ ಮುಸ್ಲಿಂ ಯೂನಿವರ್ಸಿಟಿ’ ಸ್ಥಾಪಿಸಿದ ಮೊದಲ ದಿನದಿಂದಲೇ ಸಂಸ್ಕೃತ ಭಾಷೆಯನ್ನು ಪ್ರೋತ್ಸಾಹಿಸಲು ಪಂಡಿತ್ ಕೇದಾರನಾಥ್‌ರನ್ನು ನೇಮಿಸಿದರು. ಚಕ್ರವರ್ತಿಯ ಗಣಿತವನ್ನು ಕಲಿಯದ ಗಣಿತ ಜ್ಞಾನವನ್ನು ಅಪೂರ್ಣ ಎಂದು ಹೇಳಲಾಗುತ್ತಿದ್ದ ಆ ಒಂದು ಕಾಲದಲ್ಲಿ ಪ್ರೊ. ಜಾದವ್ ಚಂದ್ರ ಚಕ್ರವರ್ತಿಯನ್ನು ಗಣಿತದ ಅಧ್ಯಾಪಕರನ್ನಾಗಿ ನೇಮಿಸಿದರು.
ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ‘ಅಲಿಗಡ ಇನ್‌ಸ್ಟಿಟ್ಯೂಟ್ ಗೆಝೆಟ್’, ‘ತಹಝೀಲುಲ್ ಅಖ್ಲಾಸ್’ ಪತ್ರಿಕೆಯನ್ನು ಹೊರತಂದರು. 1864ರಲ್ಲಿ ‘ಸೈಂಟಿಫಿಕ್ ಸೊಸೈಟಿ’ ಸ್ಥಾಪಿಸಿದರು. ಧರ್ಮವನ್ನು ವಿಜ್ಞಾನದಿಂದ ಬೆಸೆಯಬೇಕೆಂಬ ಅವರ ಇಚ್ಛೆಗೆ ಮೂಲಭೂತವಾದಿಗಳಿಂದ ಕೊಲೆ ಬೆದರಿಕೆ ಮತ್ತು ಮದೀನಾದಿಂದ ‘‘ಫತ್ವಾ’ವನ್ನು ಎದುರಿಸಿ ‘ಕಾಫಿರ್’ ಎಂಬ ಹಣೆಪಟ್ಟಿ ಹೊತ್ತರು.
22ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ನಂತರ 1839ರಲ್ಲಿ ಬ್ರಿಟಿಷ್ ಸರಕಾರದ ಉನ್ನತ ‘ಮುಂಶಿ’ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1841ರಲ್ಲಿ ದಿಲ್ಲಿಯ 232 ಸ್ಮಾರಕಗಳ ಐತಿಹಾಸಿಕ ಸಂಶೋಧನೆಯ ಒಂದು ಪರಿಚಯದ ‘ಅಸ್ಸಾರುಸ್ಸನಾದೀದ್’ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕಕ್ಕಾಗಿ ಅವರನ್ನು ರಾಯಲ್ ಏಶಿಯಾಟಿಕ್ ಸೊಸೈಟಿ ಲಂಡನ್ನಿನ ಫೆಲೋ ಆಗಿ ನೇಮಿಸಲಾಯಿತು. 1857ರ ದಂಗೆಯಲ್ಲಿ ಸರ್ವಸ್ವವನ್ನು ಕಳೆದುಕೊಂಡ ಅವರಿಗೆ ಅವರ ಆತ್ಮೀಯ ಸ್ನೇಹಿತ ಶೇಕ್ಸ್‌ಪಿಯರ್ ಅಲಿಗಡದ ತನ್ನ ಸ್ನೇಹಿತನ ಧ್ವಂಸಗೊಂಡ ಮನೆಯನ್ನು ಸೈಯದ್ ಅಹಮದ್ ಖಾನರಿಗೆ ಕೊಡಲು ಬಂದಾಗ ‘‘ಧ್ವಂಸಗೊಂಡ ಮನೆಯ ಮೇಲೆ ನಾನೇನು ಮನೆಕಟ್ಟ್ಟಲಿ. ಇನ್ನು ನಾನು ಮನೆ ಕಟ್ಟುವುದಿಲ್ಲ’’ ಎಂದು ಶಪಥ ಮಾಡಿ ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿಸಿದರು. ಬ್ರಿಟಿಷ್ ಸರಕಾರದ ಪ್ರತಿಕ್ರಿಯೆಯನ್ನು ಲೆಕ್ಕಿಸದೆ ಜನಕ್ರಾಂತಿಯ ಕಾರಣಗಳ ಬಗ್ಗೆ ಪುಸ್ತಕ ಬರೆದು ಗಂಡಾಂತಕಾರಿ ವಿಷಯಗಳನ್ನು ಪ್ರಸ್ತಾಪಿಸಿ ಬ್ರಿಟಿಷರನ್ನು ಸಹ ಹೊಣೆಗಾರರನ್ನಾಗಿ ಮಾಡಿದರು. ಮಾತೃ ಭಾಷೆಯಲ್ಲೇ ಶಿಕ್ಷಣ ಆಗಬೇಕೆಂದು ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಿ ದೇಶ-ವಿದೇಶಗಳಿಂದ ಪುಸ್ತಕಗಳನ್ನು ತರಿಸಿ ಉರ್ದುಭಾಷೆಗೆ ಅನುವಾದಿಸಿ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತರು. ಆದರೆ ಅದೇ ವೇಳೆ ಹಿಂದೂ-ಹಿಂದಿ-ಹಿಂದೂಸ್ಥಾನ ಆಂದೋಲನ ಆರಂಭಗೊಂಡಿದ್ದರಿಂದ ಬಹಳ ನೊಂದು ಉರ್ದು ಭಾಷೆಯ ಪರವಾಗಿ ನಿಂತು ದೇಶದ್ರೋಹಿ ಎಂಬ ಹೆಸರನ್ನು ಪಡೆದರು.
ಸರ್ ಸೈಯದ್ ಅಹಮದ್ ಖಾನರ ವಿದ್ವತ್ತಿಗೆ ತಲೆಬಾಗಿ 1889ರಲ್ಲಿ ಎಡಿನ್‌ಬರಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್.ಎಂ.ಡಿ. ಪದವಿ ನೀಡಿ ಗೌರವಿಸಿತು. ಇಂದು ಸರ್ ಸೈಯದ್ ಅಹಮದ್ ಖಾನರು ಇಲ್ಲ. ಅವರು ತೀರಿಹೋಗಿ ಶತಮಾನಗಳೇ ಕಳೆದು ಹೋಗಿವೆ. ಆದರೂ ಅವರ ಬಹುಮುಖಿ ವ್ಯಕ್ತಿತ್ವದ ಬೆಳಕಿನಲ್ಲಿ ಕೋಟ್ಯಂತರ ಭಾರತೀಯರು ತಮ್ಮ ಭವಿಷ್ಯವನ್ನು ಕಟ್ಟುಕೊಂಡಿದ್ದಾರೆ. ಭಾರತೀಯರಿಗೆ ಸ್ವಾಭಿಮಾನದ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ನಾವು ಅವರಿಗೆ ಋಣಿ ಆಗಿರಬೇಕು. ಏಕೆಂದರೆ ಅವರು ಉತ್ತರ-ಪಶ್ಚಿಮ ಪ್ರಾಂತಗಳಲ್ಲಿ ಯೂರೋಪಿಯನ್ ವೈಜ್ಞಾನಿಕ ಅಧ್ಯಯನ ಮತ್ತು ಅಧ್ಯಾಪನದ ಬೀಜವನ್ನು ಬಿತ್ತಿ ಪರಂಪರೆಯಿಂದ ಅಂಧಕಾರದಲ್ಲಿದ್ದ ಸಮಾಜಕ್ಕೆ ವಿವೇಕದ ಬೆಳಕನ್ನು ನೀಡಿ ಅಲ್ಪಸಂಖ್ಯಾತ ಭಾರತೀಯರ ಬದುಕಿನಲ್ಲಿ ಚೈತನ್ಯವನ್ನು ತುಂಬಿದವರು.