ಗೂಗಲ್‌ನಲ್ಲಿ ಇವುಗಳನ್ನೆಂದಿಗೂ ಸರ್ಚ್ ಮಾಡಬೇಡಿ
ಹೆಚ್ಚಿನವರಿಗೆ ಗೊತ್ತಿಲ್ಲದ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್ ಮೊರೆ ಹೋಗುವುದು ಅಭ್ಯಾಸವಾಗಿಬಿಟ್ಟಿದೆ. ಆಹಾರಗಳಿಂದ ಹಿಡಿದು ಆನ್‌ಲೈನ್ ಬ್ಯಾಂಕಿಂಗ್‌ವರೆಗೆ, ಔಷಧಿಗಳ ಖರೀದಿಗೆ ಹೀಗೆ ಪ್ರತಿಯೊಂದಕ್ಕೂ ನಾವು ಗೂಗಲ್‌ನ್ನು ತಡಕಾಡುತ್ತೇವೆ. ಆದರೆ ಗೂಗಲ್ ನಮಗೆ ಬೇಕಾದ ಮಾಹಿತಿಗಳನ್ನು ಒದಗಿಸುವ ಜಾಲತಾಣಗಳನ್ನು ತೋರಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಮಾತ್ರ ಆಗಿದೆ ಎನ್ನುವುದನ್ನು ನಾವು ಮರೆತುಬಿಡುತ್ತೇವೆ. ಗೂಗಲ್ ತನ್ನದೇ ಸ್ವಂತದ್ದಾದ ವಿಷಯಗಳನ್ನು ಹೊಂದಿಲ್ಲ. ಹೀಗಾಗಿ ಗೂಗಲ್‌ನಲ್ಲಿ ನಾವು ಹುಡುಕಾಡುವ ಪ್ರತಿಯೊಂದೂ ಸರಿಯಾಗಿರುತ್ತದೆ ಅಥವಾ ನಿಖರವಾಗಿರುತ್ತದೆ ಎಂದೇನಿಲ್ಲ. ನೀವು ಗೂಗಲ್‌ನಲ್ಲಿ ಎಂದಿಗೂ ಹುಡುಕಾಡಬಾರದ ಕೆಲವು ವಿಷಯಗಳು ಇಲ್ಲಿವೆ.......
►ಆನ್‌ಲೈನ್ ಬ್ಯಾಂಕಿಂಗ್
ಗೂಗಲ್ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ನಕಲಿ ಬ್ಯಾಂಕಿಂಗ್ ವೆಬ್‌ಸೈಟ್‌ಗಳಿವೆ. ಹೀಗಾಗಿ ನಿಮಗೆ ಸರಿಯಾದ ಅಧಿಕೃತ ಯುಆರ್‌ಎಲ್ (ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ವೆಬ್ ವಿಳಾಸ) ಗೊತ್ತಿಲ್ಲದಿದ್ದರೆ ನಿಮ್ಮ ಬ್ಯಾಂಕಿನ ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್‌ನ್ನು ಗೂಗಲ್‌ನಲ್ಲಿ ಎಂದಿಗೂ ಸರ್ಚ್ ಮಾಡಬೇಡಿ. ಸುರಕ್ಷತೆಗಾಗಿ ಯಾವಾಗಲೂ ಗೂಗಲ್‌ನ ಅಡ್ರೆಸ್ ಬಾರ್‌ನಲ್ಲಿ ನಿಮ್ಮ ಬ್ಯಾಂಕಿನ ಆನ್‌ಲೈನ್ ಬ್ಯಾಂಕಿಂಗ್ ಪೋರ್ಟಲ್‌ನ ಅಧಿಕೃತ ಯುಆರ್‌ಎಲ್‌ನ್ನೇ ನಮೂದಿಸಿ. ಏಕೆಂದರೆ ನೀವು ನಿಮ್ಮ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಂತೆಯೇ ಇರುವ ಫಿಷಿಂಗ್ ಸೈಟ್‌ನಲ್ಲಿ ನಿಮ್ಮ ಬ್ಯಾಂಕಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ್ನು ನಮೂದಿಸಬಹುದು. ಇದರಿಂದಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ದುಡ್ಡು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
► ಕಂಪನಿಗಳ ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆಗಳು
ಇದು ವ್ಯಾಪಕ ಆನ್‌ಲೈನ್ ವಂಚನೆಗಳಲ್ಲೊಂದಾಗಿದೆ. ವಂಚಕರು ಅಮಾಯಕರಿಗೆ ಪಂಗನಾಮ ಹಾಕಲು ಅಸಲಿ ಕಸ್ಟಮರ್ ಕೇರ್ ನಂಬರ್‌ಗಳು ಎಂದು ಅವರು ಭಾವಿಸುವಂತಾಗಲು ನಕಲಿ ಬಿಸಿನೆಸ್ ಲಿಸ್ಟಿಂಗ್‌ಗಳು ಮತ್ತು ಕಸ್ಟಮರ್ ಕೇರ್ ನಂಬರ್‌ಗಳನ್ನು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿರುತ್ತಾರೆ. ಇವುಗಳನ್ನು ನಂಬಿದರೆ ಪಂಗನಾಮ ಬೀಳುವುದು ಗ್ಯಾರಂಟಿ.
► ಆ್ಯಪ್ಸ್ ಮತ್ತು ಸಾಫ್ಟ್‌ವೇರ್‌ಗಳು
ಮೊಬೈಲ್ ಆ್ಯಪ್‌ಗಳಿಗಾಗಿ ಯಾವಾಗಲೂ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಂತಹ ಅಧಿಕೃತ ಆ್ಯಪ್ ಸ್ಟೋರ್‌ಗಳಲ್ಲಿಯೇ ಸರ್ಚ್ ಮಾಡಿ. ಗೂಗಲ್‌ನಲ್ಲಿ ಆ್ಯಪ್‌ಗಳಿಗಾಗಿ ಸರ್ಚ್ ಮಾಡಿದರೆ ನೀವು ನಿಮಗೆ ಗೊತ್ತಿಲ್ಲದಂತೆ ಮಾಲವೇರ್‌ಗಳನ್ನು ಒಳಗೊಂಡ ನಕಲಿ ಆ್ಯಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
► ಔಷಧಿಗಳು ಮತ್ತು ರೋಗಗಳ ಲಕ್ಷಣಗಳು
ಗೂಗಲ್ ಔಷಧಿಗಳಿಗಾಗಿ ಸರ್ಚ್ ಮಾಡುವ ಸ್ಥಳವೇ ಅಲ್ಲ. ನಿಮಗೆ ಅನಾರೋಗ್ಯವುಂಟಾದಾಗ ವೈದ್ಯರನ್ನು ಭೇಟಿಯಾಗುವುದನ್ನು ಬಿಟ್ಟು ಗೂಗಲ್‌ನಲ್ಲಿ ಮಾಹಿತಿಗಳನ್ನು ಹುಡುಕಾಡುವುದು ಅಪ್ಪಟ ಮೂರ್ಖತನವಾಗುತ್ತದೆ. ಅಲ್ಲದೆ ಗೂಗಲ್‌ನಲ್ಲಿ ನೀವು ಕಂಡ ಮಾಹಿತಿಯನ್ನು ಆಧರಿಸಿ ಔಷಧಿಗಳನ್ನು ಸೇವಿಸುವುದು ಅಪಾಯಕಾರಿಯೂ ಆಗುತ್ತದೆ.
►ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ
ನಿಮಗೆ ಅಸ್ವಸ್ಥತೆಯುಂಟಾಗಿದ್ದರೆ ನೇರವಾಗಿ ವೈದ್ಯರ ಬಳಿಗೆ ತೆರಳಿ. ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಲು ಬಯಸಿದ್ದರೆ ಡಯೆಟಿಷಿಯನ್ ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಿ. ನೀವು ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸಿದ್ದರೆ ವೈದ್ಯರನ್ನು ಭೇಟಿಯಾದ ಬಳಿಕವೇ ಮುಂದುವರಿಯಿರಿ. ಪ್ರತಿಯೊಬ್ಬ ಮಾನವನ ಶರೀರವು ವಿಶಿಷ್ಟವಾಗಿರುತ್ತದೆ. ಹೀಗಾಗಿ ಈ ಪ್ರಕರಣಗಳಲ್ಲಿ ಗೂಗಲ್‌ನಲ್ಲಿ ಸರ್ಚ್ ಮಾಡಿ ಮಾಹಿತಿಗಳನ್ನು ಪಡೆದುಕೊಳ್ಳಬೇಡಿ.
►ವೈಯಕ್ತಿಕ ಹಣಕಾಸು ಮತ್ತು ಹೂಡಿಕೆ
ಆರೋಗ್ಯದಂತೆ ವೈಯಕ್ತಿಕ ಹಣಕಾಸು ವಿಷಯಗಳು ಪ್ರತಿಯೊಬ್ಬರಿಗೆ ವಿಶಿಷ್ಟವಾಗಿರುತ್ತವೆ. ಪ್ರತಿಯೊಬ್ಬರನ್ನೂ ಶ್ರೀಮಂತರನ್ನಾಗಿಸುವ ಒಂದೇ ಹೂಡಿಕೆ ಯೋಜನೆಯಿರಲು ಸಾಧ್ಯವಿಲ್ಲ. ಹೀಗಾಗಿ ಹೂಡಿಕೆ ಮಾಡುವಾಗ ಗೂಗಲ್‌ನ ಬದಲು ಅನುಭವಿ ಹಣಕಾಸು ತಜ್ಞರ ಸಲಹೆ ಪಡೆದುಕೊಳ್ಳಿ.
► ಸರಕಾರಿ ವೆಬ್‌ಸೈಟ್‌ಗಳು
ಬ್ಯಾಂಕಿಂಗ್ ವೆಬ್‌ಸೈಟ್‌ಗಳಂತೆ ಮುನಸಿಪಲ್ ತೆರಿಗೆ,ಆಸ್ಪತ್ರೆಗಳಂತಹ ಸರಕಾರಿ ವೆಬ್‌ಸೈಟ್‌ಗಳು ವಂಚಕರ ಮುಖ್ಯ ಗುರಿಗಳಾಗಿರುತ್ತವೆ. ಯಾವ ವೆಬ್‌ಸೈಟ್ ಅಸಲಿ ಎನ್ನುವುದನ್ನು ಕಂಡುಕೊಳ್ಳುವುದು ಕಷ್ಟವಾಗುವುದರಿಂದ ಗೂಗಲ್‌ನಲ್ಲಿ ಹುಡುಕಾಡುವ ಬದಲು ಯಾವಾಗಲೂ ನಿರ್ದಿಷ್ಟ ಸರಕಾರಿ ವೆಬ್‌ಸೈಟ್‌ನ್ನು ನೇರವಾಗಿ ಭೇಟಿಯಾಗಿ.
► ಸಾಮಾಜಿಕ ಜಾಲತಾಣಗಳು
ಸಾಮಾಜಿಕ ಜಾಲತಾಣಗಳ ಲಾಗಿನ್ ಪೇಜ್ ಅನ್ನು ಎಂದೂ ಗೂಗಲ್‌ನಲ್ಲಿ ಸರ್ಚ್ ಮಾಡಬೇಡಿ. ಅದು ಫಿಷಿಂಗ್‌ಗೆ ಕಾರಣವಾಗಬಹುದು. ಏನಿದ್ದರೂ ನೇರವಾಗಿ ನಿಮ್ಮ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಯುಆರ್‌ಎಲ್‌ನ್ನು ಟೈಪಿಸಿ ನಿಮ್ಮ ಸಾಮಾಜಿಕ ಜಾಲತಾಣ ಖಾತೆಗೆ ಲಾಗಿನ್ ಆಗಿ.
► ಇ-ಕಾಮರ್ಸ್ ವೆಬ್‌ಸೈಟ್‌ಗಳು ಅಥವಾ ಆಫರ್‌ಗಳು
ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಆಫರ್‌ಗಳನ್ನು ನೀಡುವ ಸ್ವಘೋಷಿತ ನಕಲಿ ವೆಬ್ ಪೇಜ್‌ಗಳು ಗೂಗಲ್ ಸರ್ಚ್‌ನಲ್ಲಿ ತುಂಬಿಕೊಂಡಿವೆ. ಇದು ಇನ್ನೊಂದು ಪಕ್ಕಾ ವಂಚನೆ ತಂತ್ರವಾಗಿದ್ದು,ಜನರ ಆನ್‌ಲೈನ್ ಬ್ಯಾಂಕಿಂಗ್ ಲಾಗಿನ್ ವಿವರಗಳನ್ನು ಕದಿಯಲು ಆಕರ್ಷಕ ಆಫರ್‌ಗಳ ಆಮಿಷವನ್ನೊಡ್ಡಿ ವಂಚಕ್ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಪ್ರಚೋದಿಸಲಾಗುತ್ತದೆ.
►ಉಚಿತ ಆ್ಯಂಟಿ ವೈರಸ್ ಆ್ಯಪ್ ಅಥವಾ ಸಾಫ್ಟ್‌ವೇರ್
ಗೂಗಲ್ ಸರ್ಚ್‌ನಲ್ಲಿ ಹಲವಾರು ನಕಲಿ ಉತ್ಪನ್ನಗಳು ತುಂಬಿಹೋಗಿದ್ದು ಅಸಲಿ ಉತ್ಪನ್ನಗಳನ್ನು ಗುರುತಿಸುವುದು ಕಠಿಣವಾಗಿದೆ. ಹೀಗಾಗಿ ಆ್ಯಂಟಿ ವೈರಸ್ ಆ್ಯಪ್‌ಗಳು ಅಥವಾ ಸಾಫ್ಟ್‌ವೇರ್‌ಗಳಿಗಾಗಿ ಗೂಗಲ್‌ನಲ್ಲೆಂದೂ ಹುಡುಕಾಡಬೇಡಿ.
► ಕೂಪನ್ ಕೋಡ್‌ಗಳು
ನೀವು ಶಾಪಿಂಗ್ ಮಾಡಿದಾಗ ರಿಯಾಯಿತಿಗಾಗಿ ಕೂಪನ್ ಕೋಡ್ ನಿಮಗೆ ಲಭಿಸಿದರೆ ಪರವಾಗಿಲ್ಲ,ಇಲ್ಲದಿದ್ದರೆ ಅದಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡಬೇಡಿ. ಇದರಿಂದ ನೀವು ನಕಲಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಅದು ಅಗ್ಗದ ದರದಲ್ಲಿ ನಿಮಗೆ ನಕಲಿ ಕೂಪನ್‌ಗಳನ್ನು ಮಾರಾಟ ಮಾಡಿ ,ಬಳಿಕ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯಬಹುದು.