ಯಾಕೆ ಪೌರತ್ವ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಬೇಕು?
ಈಗ ಅಕ್ರಮ ಮುಸ್ಲಿಮ್ ನುಸುಳುಕೋರರೆಂದು ಅದು ಎಬ್ಬಿಸಿದ ಗದ್ದಲದ ನಿಜಬಣ್ಣ ಬಯಲಾಗಿದೆ. ಅಷ್ಟೇ ಅಲ್ಲ ಅದು ಅದಕ್ಕೆ ತಿರುಗುಬಾಣವಾಗಿದೆ. ಈ 19 ಲಕ್ಷ ಮಂದಿಯನ್ನು ದೇಶ ರಹಿತರನ್ನಾಗಿ ಮಾಡಿರುವ ದುರಂತಕ್ಕೆ ಬಿಜೆಪಿಯನ್ನು ದೂಷಿಸಲಾಗುತ್ತಿದೆ. ಇದರಿಂದಾಗಿ ಕಂಗಾಲಾಗಿರುವ ಬಿಜೆಪಿ, ತನ್ನ ರಾಜಕೀಯ ಹುಚ್ಚು ಕ್ರಮವನ್ನು ಸಿಎಬಿಯ ಮೂಲಕ ಸರಿಪಡಿಸಲು ಪ್ರಯತ್ನಿಸುತ್ತಿದೆ. ಸಿಎಬಿ ಎರಡು ಅಲಗಿನ ಕತ್ತಿಯಂತೆ ಕೆಲಸ ಮಾಡುತ್ತದೆಂದು ಅದು ತಿಳಿದಿದೆ.
ಬಿಜೆಪಿ ನೇತೃತ್ವದ ಸರಕಾರ ಈಗಾಗಲೇ ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದಿದೆ. ಈಗ ಇರುವ ಪೌರತ್ವ ಕಾಯ್ದೆ 1955ರಲ್ಲಿ ಜಾರಿಗೊಂಡ ಕಾಯ್ದೆಯಾಗಿದ್ದು ಅದಕ್ಕೆ ಈ ಹಿಂದೆ ಹಲವು ಬಾರಿ ತಿದ್ದುಪಡಿಗಳನ್ನು ಈಗ ಸರಕಾರ ತರುತ್ತಿರುವ ತಿದ್ದುಪಡಿ ಮಸೂದೆ (ಸಿಟಿಜನ್ಸ್ ಅಮೆಂಡ್ಮೆಂಟ್ ಬಿಲ್-ಸಿಎಬಿ) ಮಾಧ್ಯಮಗಳಲ್ಲಿ ಹಾಗೂ ಜನ ಸಮುದಾಯಗಳಲ್ಲಿ ಪಡೆದ ಗಮನವನ್ನು ಈ ಹಿಂದಿನ ಯಾವ ತಿದ್ದುಪಡಿಗಳೂ ಪಡೆದಿರಲಿಲ್ಲ. ಯಾಕೆ? ಈಗಿನ ತಿದ್ದುಪಡಿಯಲ್ಲಿ ಮುಸ್ಲಿಮರು ಆತಂಕ ಪಡಬೇಕಾದ ಗಂಭೀರವಾದ ವಿಷಯಗಳೇನಾದರೂ ಇವೆಯೇ? ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಅನುಷ್ಠಾನಿಸಲು ಹೊರಟಿರುವ ರಾಷ್ಟ್ರೀಯ ಪೌರತ್ವ ನೋಂದಣಿಗೂ ಈ ತಿದ್ದುಪಡಿ ಮಸೂದೆಗೂ ಏನಾದರೂ ಸಂಬಂಧವಿದೆಯೇ?
ಧರ್ಮದ ಆಧಾರದಲ್ಲಿ ಪೌರತ್ವ ನೀಡಲಾಗುವುದೆಂಬ ಆಶ್ವಾಸನೆಯೇ ತಿದ್ದುಪಡಿ ಮಸೂದೆ ಇಷ್ಟೊಂದು ವಿವಾದಾಸ್ಪದವಾಗಲು ಕಾರಣ. ಪ್ರಸ್ತಾವಿತ ಮಸೂದೆಯು ಧಾರ್ಮಿಕ ಕಿರುಕುಳ ತಾಳಲಾರದೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ/ ಬರುವ ಎಲ್ಲ ಹಿಂದೂ, ಬೌದ್ಧ, ಸಿಖ್, ಕ್ರಿಶ್ಚಿಯನ್, ಜೈನ ಹಾಗೂ ಪಾರ್ಸಿ ಅಕ್ರಮ ವಲಸಿಗರಿಗೆ ಅವರು 2014 ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ್ದಲ್ಲಿ ಅವರಿಗೆ ಪೌರತ್ವ ನೀಡುತ್ತದೆ. ಆದರೆ ಸಿಎಬಿ ಈ ದೇಶಗಳಿಂದ ಬಂದಿರುವ ಮುಸ್ಲಿಮ್ ವಲಸಿಗರು, ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದರೂ ಕೂಡ ಅವರನ್ನು ಭಾರತೀಯ ಪೌರತ್ವದಿಂದ ಹೊರಗಿಡುತ್ತದೆ. ಸಿಎಬಿ ಯಾಕಾಗಿ ಈ ರೀತಿಯ ತಾರತಮ್ಯ ಮಾಡುತ್ತದೆ ಎಂಬುದಕ್ಕೆ ಸರಕಾರದಿಂದ ಸ್ಪಷ್ಟ ಉತ್ತರವಿಲ್ಲ.
ಸಿಎಬಿಯ ಹಿಂದಿರುವ ನಿಜವಾದ ಉದ್ದೇಶಗಳೇನು ಎಂದು ತಿಳಿಯಬೇಕಾದರೆ ನಾವು ಅದನ್ನು ಅಸ್ಸಾಮಿನಲ್ಲಿ ಇತ್ತೀಚೆಗೆ ಜಾರಿಗೊಂಡ ರಾಷ್ಟ್ರೀಯ ಪೌರತ್ವ ನೋಂದಣಿಯ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ -ಎನ್ಆರ್ಸಿ) ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಅಲ್ಲಿ ಕನಿಷ್ಠ ಹತ್ತೊಂಬತ್ತು ಲಕ್ಷ ಜನರು, ಬಹುತೇಕ ಹಿಂದೂಗಳು ನೋಂದಣಿಯ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ. ಪಟ್ಟಿಯಲ್ಲಿ ತಮ್ಮ ಹೆಸರುಗಳು ಸೇರ್ಪಡೆಯಾಗಿಲ್ಲವೆಂಬುದು ಅವರನ್ನು ಭಾರೀ ಆತಂಕಕ್ಕೀಡು ಮಾಡಿದೆ. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಅಸ್ಸಾಂ ಘಟಕವು ಪಟ್ಟಿಯನ್ನು ತಿರಸ್ಕರಿಸಿದೆ. ಅದರ ನಾಯಕ ಹಾಗೂ ಅಸ್ಸಾಮಿನ ವಿತ್ತ ಸಚಿವ ಹಿಮಂತ ವಿಶ್ವ ಶರ್ಮಾ ‘‘ಯಾದಿಯಲ್ಲಿ ಇರಬಾರದ ಹಲವರ ಹೆಸರುಗಳಿವೆ ಮತ್ತು ಇರಬೇಕಾಗಿದ್ದವರ ಹೆಸರುಗಳು ಇಲ್ಲದಿರುವುದರಿಂದ ತನ್ನ ಸರಕಾರ ಅದನ್ನು ತಿರಸ್ಕರಿಸಲು ನಿರ್ಧರಿಸಿದೆ’’ ಎಂದರು.
ಅಸ್ಸಾಮಿನ ಎನ್ಆರ್ಸಿ ಬಿಜೆಪಿಯ ಬಣ್ಣ ಬಯಲು ಮಾಡಿದೆ: 1971ರ ಯುದ್ಧದ ಬಳಿಕ ಬೃಹತ್ ಸಂಖ್ಯೆಯ ಮುಸ್ಲಿಮರು ನಾಲ್ಕು ಮಿಲಿಯದಿಂದ ಹತ್ತು ಮಿಲಿಯದಷ್ಟು ಮಂದಿ, ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆಂದು ಬಿಜೆಪಿ ಹೇಳುತ್ತಾ ಬಂದಿತ್ತು. ಇದರಿಂದಾಗಿ ಸ್ಥಳೀಯ ಜನರ ಸಂಪನ್ಮೂಲ ಹಕ್ಕುಗಳನ್ನು ನೌಕರಿಗಳನ್ನು ಅಕ್ರಮ ವಲಸಿಗರು ಕಿತ್ತು ಕೊಂಡಿದ್ದಾರೆಂದು ಅದು ಪ್ರಚಾರ ಮಾಡಿತ್ತು. 2019ರ ಚುನಾವಣಾ ಪ್ರಚಾರದ ವೇಳೆ ಗೃಹ ಸಚಿವ ಅಮಿತ್ ಶಾ ಅಕ್ರಮ ವಲಸಿಗರನ್ನು ‘ಗೆದ್ದಲ ಹುಳ’ ಗಳೆಂದು ಕರೆದಿದ್ದರು. ಆದರೆ ಈಗ ಅಕ್ರಮ ಮುಸ್ಲಿಮ್ ನುಸುಳುಕೋರರೆಂದು ಅದು ಎಬ್ಬಿಸಿದ ಗದ್ದಲದ ನಿಜಬಣ್ಣ ಬಯಲಾಗಿದೆ. ಅಷ್ಟೇ ಅಲ್ಲ ಅದು ಅದಕ್ಕೆ ತಿರುಗುಬಾಣವಾಗಿದೆ. ಈ 19 ಲಕ್ಷ ಮಂದಿಯನ್ನು ದೇಶ ರಹಿತರನ್ನಾಗಿ ಮಾಡಿರುವ ದುರಂತಕ್ಕೆ ಬಿಜೆಪಿಯನ್ನು ದೂಷಿಸಲಾಗುತ್ತಿದೆ. ಇದರಿಂದಾಗಿ ಕಂಗಾಲಾಗಿರುವ ಬಿಜೆಪಿ, ತನ್ನ ರಾಜಕೀಯ ಹುಚ್ಚು ಕ್ರಮವನ್ನು ಸಿಎಬಿಯ ಮೂಲಕ ಸರಿಪಡಿಸಲು ಪ್ರಯತ್ನಿಸುತ್ತಿದೆ. ಸಿಎಬಿ ಎರಡು ಅಲಗಿನ ಕತ್ತಿಯಂತೆ ಕೆಲಸ ಮಾಡುತ್ತದೆಂದು ಅದು ತಿಳಿದಿದೆ: ಅಸ್ಸಾಮಿನ ಅಂತಿಮ ಎನ್ಆರ್ಸಿ ಯಾದಿಯಲ್ಲಿ ಯಾವೆಲ್ಲ ಹಿಂದೂ ಅಕ್ರಮ ವಲಸಿಗರ ಹೆಸರು ಇಲ್ಲವೋ ಅವರಿಗೆ ಅದು ಸಿಎಬಿ ಮೂಲಕ ನಾಗರಿಕತ್ವ ನೀಡಲು ಬಯಸುತ್ತದೆ; ಅದೇ ವೇಳೆ ಮುಸ್ಲಿಮರನ್ನು ಅದು ಯಾದಿಯಿಂದ ಸುಲಭವಾಗಿ ಹೊರಗಿಡಬಹುದು. ಈ ಮೂಲಕ ತಾನು ದೇಶದೊಳಗಿರುವ ಹಿಂದೂಗಳ ಬಗ್ಗೆಯಷ್ಟೇ ಅಲ್ಲ ದೇಶದ ಹೊರಗಿರುವ ಹಿಂದೂಗಳ ಬಗ್ಗೆಯೂ ಕಾಳಜಿ ಹೊಂದಿರುವ ಪಕ್ಷವೆಂಬ ಪ್ರತಿಷ್ಠೆ ತನ್ನದಾಗುತ್ತದೆ ಎಂದು ಅದು ಲೆಕ್ಕಾಚಾರ ಹಾಕಿದೆ.
ತಮ್ಮ ಹೆಸರು ಅಸ್ಸಾಮ್ನಲ್ಲಾಗಲಿ, ಇತರ ಭಾಗಗಳಲ್ಲಾಗಲಿ ಯಾದಿಯಲ್ಲಿಲ್ಲವೆಂದು ಹಿಂದೂಗಳು ಆತಂಕಿತರಾಗಬೇಕಾಗಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಗೃಹ ಸಚಿವ ಅಮಿತ್ ಶಾ- ಇಬ್ಬರೂ ಈಗಾಗಲೇ ಹೇಳಿದ್ದಾರೆ. ಅದೇನಿದ್ದರೂ ಸಿಎಬಿ ಬಳಿಕ ರಾಷ್ಟ್ರವ್ಯಾಪಿಯಾದ ಒಂದು ಎನ್ಆರ್ಸಿ ಜಾರಿಗೊಳಿಸಲಾಗುವುದೆಂಬ ಸರಕಾರದ ಪ್ರಸ್ತಾವದಿಂದಾಗಿ ದೇಶದ ಮುಸ್ಲಿಮರು ಆತಂಕಿತರಾಗಿದ್ದಾರೆ. ಈ ಯಾದಿಯಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ತಮ್ಮ ಹೆಸರು ಸೇರ್ಪಡೆಯಾಗದಿದ್ದಲ್ಲಿ ತಾವು ತಮ್ಮ ನಾಗರಿಕತ್ವ ಕಳೆದುಕೊಳ್ಳುತ್ತೇವೆ ಎಂಬ ಭಯ ಅವರನ್ನು ಕಾಡಲಾರಂಭಿಸಿದೆ. ಆದರೆ ಮುಸ್ಲಿಮೇತರರ ಹೆಸರು ಈಗ ಯಾದಿಯಲ್ಲಿಲ್ಲದಿದ್ದಲ್ಲಿ ಅವರಿಗೆ ಸಿಎಬಿಯ ಮೂಲಕ ನಾಗರಿಕತ್ವವನ್ನು ಮರಳಿ ಪಡೆಯುವ ಅವಕಾಶ ಇದ್ದೇ ಇರುತ್ತದೆ.
ಸಿಎಬಿ ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿಸುವ ಒಂದು ಕೋಮು ಕಾಯ್ದೆ ಎಂಬ ವಿಪಕ್ಷಗಳ ಆಪಾದನೆಯನ್ನು ಅಲ್ಲಗಳೆಯುತ್ತ ಬಿಜೆಪಿ ಈ ಕೆಳಗಿನ ವಾದಗಳನ್ನು ಹೂಡಿದೆ: ಮೊದಲನೆಯದಾಗಿ ಸಿಎಬಿ ಅನ್ವಯ ನಾಗರಿಕತ್ವ ನೀಡಲು ಧಾರ್ಮಿಕ ಕಿರುಕುಳ ಆಧಾರವೇ ಹೊರತು ಧರ್ಮ ಆಧಾರವಲ್ಲ. ಎರಡನೆಯದಾಗಿ ಮುಸ್ಲಿಮರಿಗೆ ಆಶ್ರಯ ಪಡೆಯಲು ಹಲವು ದೇಶಗಳಿವೆ, ಹಿಂದೂಗಳಿಗೆ ಹೋಗಲು ಭಾರತವಲ್ಲದೆ ಬೇರೆ ಯಾವ ದೇಶವೂ ಇಲ್ಲ. ಅಲ್ಲದೆ ಎಲ್ಲ ಹಿಂದೂಗಳು ಭಾರತದ ಸಹಜ (ನ್ಯಾಚುರಲ್) ನಾಗರಿಕರು.
ಆದರೆ ಮುಸ್ಲಿಮರಿಗಿರುವ ಹಾಗೆ ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿಗಳಿಗೆ ಆಶ್ರಯ ಪಡೆಯಲು ಬೇರೆ ದೇಶಗಳಿವೆಯಲ್ಲ? ಎಂಬ ಪ್ರಶ್ನೆಗೆ ಬಿಜೆಪಿ ಬಳಿ ಉತ್ತರವಿಲ್ಲ. ಸಿಎಬಿ ಅನ್ವಯ ಮುಸ್ಲಿಮರನ್ನು ನಾಗರಿಕತ್ವ ಯಾದಿಯಿಂದ ಹೊರಗಿಡಲು ಬಿಜೆಪಿ ನೀಡಿರುವ ಸಮರ್ಥನೆ ಅತಾರ್ಕಿಕವಷ್ಟೇ ಅಲ್ಲ ಸಾಂವಿಧಾನಿಕವಾಗಿ ತಪ್ಪುಕೂಡ. ಆದ್ದರಿಂದ ಈಗಿನ ರೂಪದಲ್ಲಿ ಅದನ್ನು ವಿರೋಧಿಸಲೇಬೇಕು.
ಕೃಪೆ: countercurrents.org