ದಾಖಲೆಗಳ ಸಂಗ್ರಹಕ್ಕೆ ರಾಜ್ಯ ವಕ್ಫ್ ಬೋರ್ಡ್ ಸೂಚನೆ
‘ಎನ್ಆರ್ ಸಿ’ ಬಗ್ಗೆ ಮಸೀದಿಗಳಲ್ಲಿ ಜಾಗೃತಿ
ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಬೆಂಗಳೂರು, ಡಿ.13: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಸಿಆರ್) ದೇಶಾದ್ಯಂತ ಜಾರಿಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಸೂಚನೆಯಂತೆ ಎಲ್ಲ ಮಸೀದಿಗಳು, ಮದ್ರಸಾಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದೆ.
2021ರಲ್ಲಿ ದೇಶದಲ್ಲಿ ಜನಗಣತಿ ನಡೆಯಲಿದೆ. ಅದಕ್ಕೂ ಮುನ್ನ ಕೇಂದ್ರ ಹಾಗೂ ರಾಜ್ಯ ಸರಕಾರವು ಮನೆಗಳು ಹಾಗೂ ಜನಸಂಖ್ಯೆ ಎಣಿಕೆ ಕಾರ್ಯವನ್ನು 2020ರಲ್ಲಿ ಕೈಗೆತ್ತಿಕೊಳ್ಳಲಿವೆ. ಈ ಪ್ರಕ್ರಿಯೆ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಪೌರತ್ವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಎಲ್ಲ ಜಿಲ್ಲೆಗಳ ಜಿಲ್ಲಾ ವಕ್ಫ್ ಅಧಿಕಾರಿಗಳು, ಮುತವಲ್ಲಿಗಳು, ಮಸೀದಿಗಳ ಆಡಳಿತ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ನವೆಂಬರ್ 13ರಂದು ಸುತ್ತೋಲೆಯನ್ನು ಹೊರಡಿಸಿದೆ.
ಮಸೀದಿಗಳ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರು ತಮ್ಮ ದಾಖಲೆಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ವಕ್ಫ್ ಅಧಿಕಾರಿಗಳು, ಮುತವಲ್ಲಿಗಳು ಹಾಗೂ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಜನಸಾಮಾನ್ಯರಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.
ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ತಾಲೂಕು ಮಟ್ಟದಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು, ಸಂಘ ಸಂಸ್ಥೆಗಳ ಕಚೇರಿಗಳಲ್ಲೂ ಈ ಬಗ್ಗೆ ಮಾಹಿತಿಯನ್ನು ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಸೀದಿಗಳು ತಮ್ಮ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತ ಕುಟುಂಬ ಸದಸ್ಯರ ಜನನ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲೆಗಳು, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್ ಇತ್ಯಾದಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಂಗ್ರಹಿಸಿ ಕೊಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕಾಲಕಾಲಕ್ಕೆ ಈ ದಾಖಲೆಗಳನ್ನು ನವೀಕರಿಸುತ್ತಿರಬೇಕು. ಇದಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳಬೇಕು. ಮಸೀದಿಗಳು ತಮ್ಮ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರ ವಿವರಗಳನ್ನು ಒಳಗೊಂಡ ರಿಜಿಸ್ಟರ್ ಹೊಂದಿರಬೇಕು. ಮಸೀದಿಗಳು ಇಲ್ಲದೇ ಇರುವಂತಹ ಪ್ರದೇಶಗಳಲ್ಲಿ ಸಮೀಪದ ಮಸೀದಿಗಳ ಪ್ರತಿನಿಧಿಗಳು ಅಲ್ಲಿನ ಜನರಿಗೆ ಜಾಗೃತಿ ಮೂಡಿಸಿ ಅವರ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ರಾಜ್ಯ ವಕ್ಫ್ ಬೋರ್ಡ್ ನಿರ್ದೇಶನ ನೀಡಿದೆ. ಎನ್ಆರ್ಸಿಯನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಘೋಷಣೆ ಮಾಡುವ ಮುನ್ನವೇ ನಗರದ ಹಲವಾರು ಮಸೀದಿಗಳಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಅಲ್ಪ ಸಂಖ್ಯಾತರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಹಿತಿ ಕಲೆ ಹಾಕುವ ಕೆಲಸವನ್ನು ಆರಂಭಿಸಿದೆ.
1987ರ ಜುಲೈ 1ಕ್ಕಿಂತ ಮುಂಚಿತವಾಗಿ ಜನಿಸಿದವರ ಬಳಿ ಜನನ ಪ್ರಮಾಣ ಪತ್ರವಿದ್ದರೆ ಸಾಕು ಎಂದು ಕಾನೂನಿನಲ್ಲಿ ಸೇರಿಸಲಾಗಿದೆ. ಆದರೆ ಹಲವಾರು ಪ್ರಕರಣಗಳಲ್ಲಿ ಮನೆಗಳಲ್ಲಿಯೇ ಹೆರಿಗೆಗಳು ಆಗಿರುತ್ತವೆ. ಅಂತಹವರು ಜನನ ಪ್ರಮಾಣಪತ್ರಗಳನ್ನು ಪಡೆದಿರುವುದಿಲ್ಲ. ಈ ತಾಂತ್ರಿಕ ಅಂಶದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲದೆ ಮಸೀದಿಗಳನ್ನು ಮುಸ್ಲಿಮರ ಅಭಿವೃದ್ಧಿಯ ಕೇಂದ್ರಗಳನ್ನಾಗಿ ಬಳಸಿಕೊಂಡು ಅವರ ದಾಖಲಾತಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು.
ಅಬ್ದುಲ್ ಅಝೀಮ್,
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಅಲ್ಪಸಂಖ್ಯಾತರಲ್ಲಿ ದಾಖಲಾತಿಗಳು ಸಮಪರ್ಕವಿಲ್ಲದೆ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಪರದಾಡುತ್ತಿರುತ್ತಾರೆ. ಮತದಾನದ ವೇಳೆಯೂ ಕಳೆದ ಬಾರಿ ನನ್ನ ಹೆಸರು ಮತದಾರರ ಪಟ್ಟಿಯಲ್ಲಿತ್ತು. ಆದರೆ ಈ ಬಾರಿ ಇಲ್ಲ ಎಂಬ ದೂರುಗಳು ಸಾಮಾನ್ಯ. 2021ರಲ್ಲಿ ದೇಶಾದ್ಯಂತ ಜನಗಣತಿ ನಡೆಯುತ್ತದೆ. 2020ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಮನೆಗಳ ಸಮೀಕ್ಷೆ ನಡೆಯಲಿದೆ. ಈ ವೇಳೆಗಾಗಲೇ ಅಲ್ಪಸಂಖ್ಯಾತರು ತಮ್ಮ ದಾಖಲಾತಿಗಳನ್ನು ಸರಿಯಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡಲು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಸೀದಿಗಳು ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರ. ಇಲ್ಲಿ ದೃಢೀಕೃತ ದಾಖಲಾತಿಗಳು ಸಂಗ್ರಹವಾದರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಅತೀವೃಷ್ಟಿ ಅಥವಾ ನೆರೆ ಹಾವಳಿಯಂತಹ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ದಾಖಲಾತಿಗಳನ್ನು ಕಳೆದುಕೊಂಡಲ್ಲಿ, ಮಸೀದಿಯಲ್ಲಿ ಸಂಗ್ರಹಿಸಿಟ್ಟಿರುವ ದೃಢೀಕೃತ ದಾಖಲಾತಿಗಳ ನಕಲು ಪ್ರತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ಈ ಸುತ್ತೋಲೆ ಹೊರಡಿಸಲಾಗಿದೆ.
ಎ.ಬಿ.ಇಬ್ರಾಹೀಂ ಅಡೂರ್, ಅಲ್ಪಸಂಖ್ಯಾತರ ಕಲ್ಯಾಣ,
ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ
ಮುಸ್ಲಿಮರಲ್ಲಿ ಅನಕ್ಷರಸ್ಥರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇವತ್ತು ದಾಖಲಾತಿಗಳನ್ನು ಸಿದ್ಧಪಡಿಸಲು ಹೋದಾಗ ಸರಕಾರಿ ಕಚೇರಿಗಳಲ್ಲಿ ಅವರ ಹೆಸರುಗಳನ್ನು ಸ್ಪಷ್ಟವಾಗಿ ಬರೆಯುವುದಿಲ್ಲ. ಸರಕಾರಿ ದಾಖಲಾತಿಗಳಲ್ಲಿ ತನ್ನ ಹೆಸರು ಹೇಗೆ ನಮೂದಾಗಿದೆ ಎಂಬುದರ ಅರಿವು ಇವರಿಗೆ ಇರುವುದಿಲ್ಲ. ಎನ್ಆರ್ಸಿಗಾಗಿ ದಾಖಲಾತಿ ಪರಿಶೀಲನೆ ವೇಳೆ ಹೆಸರುಗಳು, ವಿಳಾಸದ ವ್ಯತ್ಯಾಸ ಕಂಡು ಬಂದರೆ ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೆ? ಮಸೀದಿಗಳನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ.
ಡಾ. ಸಯ್ಯದ್ ಮುಝಮ್ಮಿಲ್ ಅಹ್ಮದ್,
ಸಾಮಾಜಿಕ ಕಾರ್ಯಕರ್ತ
ನಮ್ಮ ಮಸೀದಿಯ ವ್ಯಾಪ್ತಿಯಲ್ಲಿ ನೆರವಿನ ಅಗತ್ಯವಿರುವವರನ್ನು ಗುರುತಿಸುವ ಉದ್ದೇಶದಿಂದ ಈಗಾಗಲೇ ಮಾಹಿತಿ ಸಂಗ್ರಹಿಸುವ ಕೆಲಸ ನಡೆಸಲಾಗುತ್ತಿದೆ. ಇದೀಗ ಎನ್ಆರ್ಸಿ ಜಾರಿಗೆ ತರುತ್ತಿರುವರಿಂದ ನಾವು ಸಂಗ್ರಹಿಸುತ್ತಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು, ಸಂಬಂಧಪಟ್ಟವರಿಗೆ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮಾರ್ಗದರ್ಶನ ಹಾಗೂ ನೆರವು ನೀಡಲಾಗುವುದು.
ಫಯಾಝ್ ಪಾಷ,
ಮಕ್ಕಾ ಮಸ್ಜಿದ್ ಟ್ರಸ್ಟ್ ಉಪಾಧ್ಯಕ್ಷ