ಈರುಳ್ಳಿ ಬೆಲೆ ಏರಿಕೆ ವಿರುದ್ಧ ನವ ವಧು-ವರರ ವಿನೂತನ ಪ್ರತಿಭಟನೆ!
ಹೊಸದಿಲ್ಲಿ, ಡಿ.14: ಭಾರತೀಯ ಸಂಪ್ರದಾಯದಂತೆ ವಧು-ವರರು ಮದುವೆ ವೇಳೆ ಹೂವಿನ ಹಾರ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ, ಉತ್ತರಪ್ರದೇಶದ ವಾರಾಣಸಿಯಲ್ಲಿ ನೂತನ ವಧು-ವರರು ಮದುವೆಯ ದಿನ ಹೂವಿನ ಹಾರಗಳ ಬದಲಿಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯಿಂದ ನಿರ್ಮಿಸಿರುವ ಹಾರವನ್ನು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಏರುತ್ತಿರುವ ಈರುಳ್ಳಿ ಬೆಲೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.
ಮದುವೆಗೆ ಬಂದ ಅತಿಥಿಗಳು ನೂತನ ದಂಪತಿಗೆ ಈರುಳ್ಳಿಗಳನ್ನು ಉಡುಗೊರೆಯಾಗಿ ನೀಡಿದ್ದು ಮತ್ತೊಂದು ವಿಶೇಷವಾಗಿತ್ತು.
‘‘ಕಳೆದ ಒಂದು ತಿಂಗಳಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದೆ. ಇದೀಗ ಜನರು ಈರುಳ್ಳಿಯನ್ನು ಚಿನ್ನ ಎಂದು ಪರಿಗಣಿಸುತ್ತಿದ್ದಾರೆ. ಈ ಮದುವೆಯಲ್ಲಿ ವಧು-ವರರು ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾರವನ್ನು ಬಳಸಿದ್ದಾರೆ’’ ಎಂದು ಸಮಾಜವಾದಿ ಪಕ್ಷದ ಕಮಲ್ ಪಟೇಲ್ ಹೇಳಿದ್ದಾರೆ.
‘‘ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ಏರಿಕೆಯನ್ನು ಖಂಡಿಸಲು ನೂತನ ವಧು-ವರರು ಬಯಸಿದ್ದರು. ಹೀಗಾಗಿ ಈ ನೂತನ ಪದ್ಧತಿಗೆ ಮೊರೆ ಹೋಗಲು ನಿರ್ಧರಿಸಿದರು. ಈರುಳ್ಳಿ ಹಾಗೂ ಇತರ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸುವ ಸಂದೇಶ ನೀಡಲು ವಧು-ವರರು ಪ್ರಯತ್ನಿಸಿದ್ದಾರೆ. ದಂಪತಿಯ ಪಾಲಿಗೆ ಇದೊಂದು ಐತಿಹಾಸಿಕ ಘಟನೆಯಾಗಿದೆ’’ ಎಂದು ಸಮಾಜವಾದಿ ಪಕ್ಷದ ಇನ್ನೋರ್ವ ನಾಯಕ ಸತ್ಯ ಪ್ರಕಾಶ್ ಹೇಳಿದ್ದಾರೆ.