ತುಳುನಾಡಿನ ಮೂಲ ನಿವಾಸಿ ಮುಸ್ಲಿಮ್ ದೈವಗಳು
ಕೇಂದ್ರ ಸರಕಾರ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರನ್ನು ಪರಕೀಯರಂತೆ ನೋಡಲು ಬಳಸಿದಲ್ಲಿ ಅದು ಕರಾವಳಿ ಕರ್ನಾಟಕ ಮತ್ತು ಕೇರಳದ ಶ್ರದ್ಧಾಭಕ್ತಿಯ ದೈವಗಳಿಗೆ ಮಾಡಿದ ಅವಮಾನ. ಪೌರತ್ವ ಕಾಯ್ದೆಯನ್ನು ಮುಸ್ಲಿಮರತ್ತ ತಿರುಗಿಸುವವರು ಪವಿತ್ರ ಪಾಡ್ದನ ಮತ್ತು ಕರಾವಳಿಯ ದೈವಸ್ಥಾನ ದೇವಸ್ಥಾನಗಳ ಇತಿಹಾಸವನ್ನು ಅರಿತುಕೊಂಡು ಈ ನೆಲದ ಮೂಲನಿವಾಸಿಗಳು ಯಾರು? ವಲಸಿಗರು ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ.
ಪೌರತ್ವ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾದ ಮೂಲ ನಿವಾಸಿಗಳು ಮತ್ತು ವಲಸಿಗರು ಯಾರು ಎಂಬ ಪ್ರಶ್ನೆ ಎದ್ದಿದೆ. ದಲಿತರು, ಆದಿವಾಸಿಗಳು ಈ ನೆಲದ ಮೂಲ ನಿವಾಸಿಗಳು ಎಂಬುದು ಎಲ್ಲಾ ಇತಿಹಾಸಕಾರರು ಹೇಳುತ್ತಾರೆ. ಆದಿವಾಸಿಗಳ ನಂತರದ ಮೂಲನಿವಾಸಿಗಳ ಸಾಲಿನಲ್ಲಿ ಹಿಂದೂ ವರ್ಗಗಳು ಬರುತ್ತದೆ ಎಂದುಕೊಂಡರೆ ಅದು ತಪ್ಪು.
ಕರಾವಳಿಯ ಜನಪದ ಕತೆ ಕಾವ್ಯಗಳನ್ನು ಗಮನಿಸಿದರೆ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರು ಜೊತೆಯಾಗಿಯೇ ಕಂಡು ಬರುತ್ತಾರೆ. ಕರಾವಳಿಯ ಹಿಂದೂಗಳ ಶ್ರದ್ಧಾಭಕ್ತಿಯ ಪುರಾತನ ದೈವಗಳ ಪಾಡ್ದನಗಳ ಸಾರದಲ್ಲಿ ಎಲ್ಲೂ ಕೂಡಾ ದಲಿತ ಮತ್ತು ಮುಸ್ಲಿಮ್ ಹೊರತುಪಡಿಸಿದ ಅಂಶಗಳೇ ಇಲ್ಲ. ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ದೈವಗಳನ್ನು ಪ್ರಾರ್ಥಿಸುವ ಕಾವ್ಯವನ್ನು ಪಾಡ್ದನ ಎನ್ನುತ್ತಾರೆ. ದೈವಗಳನ್ನು ಆವೇಶಭರಿಸುವ ಸಂದರ್ಭದಲ್ಲಿ ಅಥವಾ ದೈವಗಳನ್ನು ಪ್ರಾರ್ಥಿಸುವ ಸಂದರ್ಭದಲ್ಲಿ ದೈವದ ವೀರಗಾಥೆಯನ್ನು ನಿರೂಪಿಸುವ ಕಥನ ಕಾವ್ಯವೇ ಪಾಡ್ದನ. ಸರಳವಾಗಿ ಹೇಳುವುದಾದರೆ ಪಾಡ್ದನಗಳೆಂದರೆ ಕರಾವಳಿ ಕರ್ನಾಟಕ ಮತ್ತು ಕೇರಳದ ಹಿಂದೂಗಳ ಪವಿತ್ರ ಪುರಾಣ ವಚನ ಕಾವ್ಯಗಳು.
ಕರಾವಳಿಗರ ಪವಿತ್ರವಾದ ಪಾಡ್ದನವೆಂಬ ಇತಿಹಾಸದಲ್ಲಿರುವ ಉಲ್ಲೇಖಗಳು ಕುತೂಹಲಕಾರಿ. ದೈವಗಳು ಎಂದರೆ ಪುರಾತನ ಕಾಲದಲ್ಲಿ ಇದ್ದ ದಲಿತರು, ಆದಿವಾಸಿಗಳ ಪೂರ್ವಜರು. ಅವರು ಈಗಲೂ ಇದ್ದು, ನಮ್ಮ ಕಷ್ಟಗಳನ್ನು ಪರಿಹರಿಸುತ್ತಾರೆ ಎನ್ನುವುದು ಕರಾವಳಿಗರ ನಂಬಿಕೆ. ಕೆಲ ದೈವಗಳು ನಮ್ಮ ಕಾಲಮಾನಕ್ಕೆ ನಿಲುಕದ್ದು. ಇನ್ನೂ ಕೆಲ ದೈವಗಳು ಇತ್ತೀಚಿನ ಕಾಲಮಾನದ್ದು. ನಮ್ಮ ಊಹೆಗೂ ನಿಲುಕದ ಕಾಲಮಾನದ ದೈವಗಳ ಪಾಡ್ದನ ಕರಾವಳಿಯ ನಿಜವಾದ ಇತಿಹಾಸ ಎನ್ನಬಹುದು.
ಕರಾವಳಿಯ ಪವಿತ್ರ ಪಾಡ್ದನಗಳು ದೈವಗಳ ವೀರಗಾಥೆಯ ಜೊತೆ ಜೊತೆಗೆ ಇಲ್ಲಿನ ಮೂಲ ನಿವಾಸಿಗಳು ಯಾರು ಎಂಬುದನ್ನೂ ನಿರೂಪಿಸುತ್ತಾ ಹೋಗುತ್ತದೆ.
ಮಲೆಕುಡಿಯ ಎಂಬ ಆದಿವಾಸಿ ಸಮುದಾಯ ಬೆಳ್ತಂಗಡಿ, ನೆರಿಯಾ, ಕಾರ್ಕಳ ಕಾಡಿನಲ್ಲಿ ವಾಸವಾಗಿದೆ. ಈ ಮೂಲನಿವಾಸಿ ಸಮುದಾಯಗಳು ಪುರ್ಸ ಪೂಜೆ ಎಂಬ ಧಾರ್ಮಿಕ ಆಚರಣೆಯನ್ನು ಮಾಡುತ್ತದೆ. ವೈದಿಕರ ಅವಶ್ಯಕತೆ ಇಲ್ಲದ ಪ್ರಕೃತಿ ಪೂಜೆ ಇದಾಗಿರುತ್ತದೆ. ಈ ಪೂಜೆಯಲ್ಲಿ ಪಾಡ್ದನವನ್ನು ಹಾಡಲಾಗುತ್ತದೆ. ಅರ್ಥವಾಗದ ಭಾಷೆಯ ರೀತಿಯಲ್ಲಿರುವ ಈ ಪಾಡ್ದನದಲ್ಲಿ ಸಾಯಿಬೊ ಎಂಬ ಪದ ಪದೇ ಪದೇ ಬರುತ್ತದೆ. ಈ ಆದಿವಾಸಿ ಮಲೆಕುಡಿಯ ಎಂಬ ಮೂಲ ನಿವಾಸಿಗಳಿಗೂ ಸಾಯಿಬ(ಬ್ಯಾರಿ, ಮುಸ್ಲಿಮ್)ರಿಗೂ ಏನು ಸಂಬಂಧ ಎಂದು ಕೆದಕುತ್ತಾ ಪಾಡ್ದನದ ಅರ್ಥ ತಿಳಿದುಕೊಳ್ಳಬೇಕು.
ಮಲೆಕುಡಿಯರ ಪುರ್ಸ ಪೂಜೆಯಲ್ಲಿ ಹಾಡುವ ಪಾಡ್ದನದ ಕತೆ ಹೀಗಿದೆ....
ಮಲೆಕುಡಿಯರು ಕಾಡಂಚಿನಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದರು. ಎಲ್ಲಿಯವರೆಗೆ ಕೃಷಿ ಕಾಯಕ ಮಾಡುತ್ತಿದ್ದರು ಎಂದರೆ ದೇವರ ಪೂಜೆ ಮಾಡಲೂ ಪುರುಸೊತ್ತಿಲ್ಲದಷ್ಟು. ನನ್ನನ್ನು ಯಾಕೆ ಜನ ಆರಾಧನೆ ಮಾಡುತ್ತಿಲ್ಲ ಎಂದು ಕದ್ರಿ ಜೋಗಿಗಳಿಂದ ಪೂಜಿಸಲ್ಪಡುತ್ತಿದ್ದ ಶಿವನಿಗೆ ಸೋಜಿಗವಾಗುತ್ತದೆ. ಕದ್ರಿ ಗುಡ್ಡ ಹತ್ತಿದ ಶಿವ ದೃಷ್ಟಿ ಹಾಯಿಸಿದಾಗ ಮಲೆಕುಡಿಯರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಈ ಮಲೆಕುಡಿಯರು ಪೂಜೆಗಾಗಿ ಸಮಯ ಹಾಳು ಮಾಡುವುದು ಸರಿಯಲ್ಲ ಎಂದರಿತ ಶಿವ ತಾನೇ ಜನರನ್ನು ಭೇಟಿಯಾಗಲು ಹೊರಡುತ್ತಾನೆ. ಪಾರ್ವತಿ ನಾನೂ ಬರುತ್ತೇನೆ ಎಂದು ಹಠ ಹಿಡಿದಾಗ, ನಾನೊಬ್ಬನೇ ಹೋಗಿ ಬರುತ್ತೇನೆ. ನೀನು ಕದ್ರಿಯಲ್ಲೇ ಇದ್ದುಕೊಂಡು ಜನರ ರಕ್ಷಣೆ ಮಾಡುತ್ತಿರು ಎಂದು ವಿನಂತಿಸಿದರೂ ಪಾರ್ವತಿ ಸುಮ್ಮನಿರದೆ ಹಠ ಮಾಡುತ್ತಾಳೆ. ಕೊನೆಗೆ ಶಿವನು ಪಾರ್ವತಿಯ ಜತೆಗೂಡಿ ಜನ ಸಂಪರ್ಕಕ್ಕೆ ಹೊರಡುತ್ತಾರೆ. ಕದ್ರಿ ದಾಟಿ ಮಲ್ಲಿಕಟ್ಟೆಗೆ ಬರುವಾಗ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಬೊಟ್ಟಿಕಲ್ಲು ಸಾಯಿಬ ಸಿಗುತ್ತಾನೆ. ಶಿವ ಪಾರ್ವತಿಯ ಜತೆ ತಾನೂ ಬರುವುದಾಗಿ ಬೊಟ್ಟಿಕಲ್ಲು ಸಾಯಿಬ ವಿನಂತಿ ಮಾಡಿಕೊಂಡು ಹೊರಡುತ್ತಾನೆ. ಕುಂಟಾಲ ಪಂಜುರ್ಲಿ ದೈವ, ಬೊಟ್ಟಿಕಲ್ಲು ಸಾಯಿಬ (ಬ್ಯಾರಿ ಮುಸ್ಲಿಮ್) ಸೇರಿದಂತೆ 101 ಜನರ ಜೊತೆ ಶಿವ ಪಾರ್ವತಿ ಸಂಚಾರ ಮಾಡುತ್ತಾರೆ. ಸಂಚಾರದ ವೇಳೆ ದೇವರು ಎಂದು ತಿಳಿಯಬಾರದು ಎಂದುಕೊಂಡು ಶಿವಪಾರ್ವತಿಯರು ಕೊರಗ ಕೊರಪಲ್ದಿಯಾಗಿ (ಕೊರಗರು ಎಂದರೆ ಕರಾವಳಿಯ ಅಸ್ಪೃಶ್ಯತೆಗೆ ಒಳಗಾದ ಅತಿಸೂಕ್ಷ್ಮ ಸಮುದಾಯ) ವೇಷ ಬದಲಿಸುತ್ತಾರೆ.
ಬೆಳಗ್ಗೆದ್ದು ಪೂಜಾರಿಕೆ ಮಾಡುತ್ತಿದ್ದ ಜೋಗಿ ನೋಡಿದಾಗ ಕದ್ರಿ ದೇವಸ್ಥಾನದಲ್ಲಿ ಶಿವಪಾರ್ವತಿಯರು ಇರಲಿಲ್ಲ. ಅರ್ಚಕ ಜೋಗಿ ಮಠದ ಎತ್ತರಕ್ಕೆ ಬಂದು ನೋಡಿದಾಗ ಶಿವಪಾರ್ವತಿಯರು ಬೆದ್ರ ಮಾರ್ಗವಾಗಿ ಮನೆಮನೆಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರಂತೆ. ಈ ರೀತಿ ಕೊರಗ ಕೊರಪೊಲು ರೂಪದಲ್ಲಿ ಶಿವಪಾರ್ವತಿಯರು ಮಲೆಕುಡಿಯರ ಮನೆಗೆ ಬಂದ ದಿನವನ್ನು ‘ಪುರ್ಸ ಪರ್ಬ’ (ಪುರ್ಸ ಹಬ್ಬ) ಎಂದು ಆಚರಿಸುತ್ತಾರೆ.
ಇಡೀ ಪುರ್ಸ ಹಬ್ಬದ ಪೂಜೆಯಲ್ಲಿ ಹಾಡಲಾಗುವ ಪಾಡ್ದನದಲ್ಲಿ ಶಿವ ಪಾರ್ವತಿ ಮತ್ತು ಪಂಜುರ್ಲಿ ದೈವಕ್ಕಿಂತ ಹೆಚ್ಚು ಸ್ತುತಿ ಮಾಡುವುದು ಸಾಯಿಬನನ್ನು! ಪಾಡ್ದನದ ಪ್ರತೀ ವಾಕ್ಯದ ಕೊನೆಗೆ ‘ಸಾಯಿಬೊ’ ಎಂಬ ಕೂಗು ಇರುತ್ತದೆ. ಮಲೆಕುಡಿಯರ ಮನೆ ಬಾಗಿಲಿಗೆ ದೇವರನ್ನು ಕೊರಗರ ರೂಪದಲ್ಲಿ ಕರೆ ತಂದವನು ಇದೇ ಸಾಯಿಬ ಅರ್ಥಾತ್ ಕರಾವಳಿಯ ಬ್ಯಾರಿ ಮುಸ್ಲಿಮ್! ಅಂದರೆ ಇಲ್ಲಿನ ಆದಿವಾಸಿಗಳು ದೇವರ ಪೂಜೆ ಮಾಡುವುದನ್ನು ರೂಢಿಸಿಕೊಳ್ಳುವ ಮೊದಲೇ ಮುಸ್ಲಿಮರು ಇದ್ದರು ಎಂಬುದನ್ನು ಈ ಪಾಡ್ದನ ಮತ್ತು ಆಚರಣೆ ದೃಢೀಕರಿಸುತ್ತದೆ.
ಸುಳ್ಯ, ಕಾಸರಗೋಡು ಗಡಿ ಭಾಗದಲ್ಲಿ ಮಾಪುಳ್ತಿ ಭೂತವನ್ನು ಆರಾಧನೆ ಮಾಡುತ್ತಾರೆ. ಮಾಪುಳ್ತಿ ಭೂತ ಬ್ಯಾರಿ ಭೂತ. ಜುಮಾದಿಯ ಕೋಲ ನಡೆಯುತ್ತಿದ್ದಾಗ ಗೌರವ ಕೊಡದೆ ಕೆಲಸ ಮಾಡುತ್ತಿದ್ದ ಮಾಪುಳ್ತಿ ಎಂಬ ಬ್ಯಾರಿ ಮಹಿಳೆಯನ್ನು ಜುಮಾದಿ ಮಾಯ ಮಾಡುತ್ತಾಳೆ. ನಂತರ ಮಾಪುಳ್ತಿಯನ್ನು ತನ್ನ ಜೊತೆ ಜುಮಾದಿ ಇರಿಸಿಕೊಳ್ಳುತ್ತಾಳೆ. ಕೆಲ ಪ್ರದೇಶಗಳಲ್ಲಿ ಜುಮಾದಿ ದೈವಕ್ಕೆ ಕೋಲ/ನೇಮ/ಜಾತ್ರೆ ನಡೆಯುವ ಮೊದಲು ಮಾಪುಳ್ತಿ ಬ್ಯಾರ್ದಿ ಭೂತಕ್ಕೆ ಕೋಲ ನಡೆಯಬೇಕು. ಮಾಪುಳ್ತಿ ಭೂತದ ಕೋಲದ ಬಳಿಕವೇ ಜುಮಾದಿ ಕೋಲ ಪ್ರಾರಂಭವಾಗುತ್ತದೆ. ಕರಾವಳಿಯ ನೆಲಕ್ಕೆ ಬ್ಯಾರಿ ಮುಸ್ಲಿಮರು ವಲಸಿಗರೂ ಅಲ್ಲ, ಎಲ್ಲಿಂದಲೋ ಬಂದವರೂ ಅಲ್ಲ. ಮನುಷ್ಯನೊಬ್ಬ ದೈವವಾಗುವ ಅನಾದಿ ಕಾಲಕ್ಕೆ ಬ್ಯಾರಿ ಎಂಬ ಸಮುದಾಯ ಸೇರಿತ್ತು ಎನ್ನುವುದಕ್ಕೆ ಜುಮಾದಿ ಜೊತೆ ಪೂಜಿಸಲ್ಪಡುವ ಮಾಪುಳ್ತಿ ಬ್ಯಾರ್ದಿ ಭೂತ ಸಾಕ್ಷಿ !
ಮಂಜೇಶ್ವರದ ಮಾಡ ಅರಸು ಮಂಜೇಷ್ಣಾರ್ ಅಣ್ಣ ತಮ್ಮ ದೈವಗಳ ನೇಮ/ ಜಾತ್ರೆಯು ಮುಸ್ಲಿಮರು ಇಲ್ಲದೆ ನಡೆಯುವುದೇ ಇಲ್ಲ. ಊರಿನ ಯಜಮಾನಿಕೆಯ ಮನೆ, ಬ್ರಾಹ್ಮಣರಿಗೆ ಎಷ್ಟು ಮರ್ಯಾದೆ ಈ ಭೂತ ನೀಡುತ್ತದೋ ಅದರ ದುಪ್ಪಟ್ಟು ಮರ್ಯಾದೆ ಮುಸ್ಲಿಮರಿಗೆ ಇಲ್ಲಿ ಸಲ್ಲುತ್ತದೆ. ತುಳುನಾಡಿಗರ ಅಲಿಖಿತ ದೈವವಾಣಿಯಾಗಿರುವ ಜನಪದ ಪಾಡ್ದನಗಳ ಪ್ರಕಾರ ತುಳುನಾಡಿನಲ್ಲಿ ಹಿಂದೂಗಳಿಗಿಂತಲೂ ಮೊದಲು ಬ್ಯಾರಿ ಮುಸ್ಲಿಮರಿದ್ದರೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಪಾಡ್ದನಗಳ ಪ್ರಕಾರ ಅರಸು ಮಂಜೇಷ್ಣಾರ್ ಅಣ್ಣ ತಮ್ಮ ದೈವಗಳು ಘಟ್ಟದಿಂದ ಇಳಿದು ಬಂದಾಗ ಮಂಜೇಶ್ವರ ಮಾಡದಲ್ಲಿ ಉಳಿದುಕೊಳ್ಳಲು ಜಾಗ ಸಿಗಲಿಲ್ಲವಂತೆ. ದೈವಗಳು ಸಂತರ ಜೊತೆ ಮಾತನಾಡಿದಾಗ ಮಾಡ ಮಸೀದಿಯ ಜಾಗದಲ್ಲಿ ನೆಲೆಯೂರುವಂತೆ ಸಂದೇಶ ಬಂತಂತೆ ಎನ್ನುವ ನಂಬಿಕೆಯಿದೆ. ಅದರಂತೆ ಅಣ್ಣ ತಮ್ಮ ದೈವ/ಭೂತಗಳು ಮಾಡ ಮಸೀದಿಯ ಜಾಗದಲ್ಲಿ ನೆಲೆಯೂರಿ ಕಾರ್ಣಿಕ ತೋರಿಸಲಾರಂಭಿಸಿದವು.
ಅನಾದಿ ಕಾಲದಿಂದಲೂ ಅರಸು ಮಂಜೇಷ್ಣಾರ್ ಅಣ್ಣ ತಮ್ಮ ದೈವದ ನೇಮ ನಡೆಯಬೇಕು ಎಂದಿದ್ದರೆ ಮಸೀದಿಯಿಂದ ಮೌಲ್ವಿಗಳು ಬರಲೇಬೇಕು. ಅದಕ್ಕಾಗಿ ಸ್ವತಃ ದೈವವನ್ನು ಅವಾಹಿಸಿಕೊಂಡು ಶುಕ್ರವಾರ ಮಸೀದಿಗೆ ತೆರಳಿ ಮೌಲ್ವಿಗಳನ್ನು ಜಾತ್ರೆಗೆ ಆಹ್ವಾನಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜಾತ್ರೆಗೆ ಬರುವ ಮುಸ್ಲಿಮರಿಗೆ ಅತ್ಯಂತ ಎತ್ತರದ ಜಾಗದಲ್ಲಿ ರಾಜರಂತೆ ಕುಳಿತುಕೊಂಡು ದೈವದ ಕೋಲವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಎತ್ತರದ ಜಾಗದಲ್ಲಿ ಕುಳಿತುಕೊಂಡ ಮುಸ್ಲಿಮರಿಂದ ಅನುಮತಿಯನ್ನು ಪಡೆದುಕೊಂಡು ದೈವ ಕುಣಿತ ಪ್ರಾರಂಭಿಸುತ್ತದೆ. ಘಟ್ಟದಿಂದ ಇಳಿದು ಬಂದ ದೈವಗಳಿಗೆ ಮುಸ್ಲಿಮರ ಹೊರತಾದ ಜಾಗವೇ ಸಿಗಲಿಲ್ಲ ಎಂದಾದರೆ ಕರಾವಳಿಯ ಮೂಲ ನಿವಾಸಿಗಳು ಯಾರಾಗಿದ್ದರು ಎಂದು ಯೋಚಿಸಬೇಕಾಗುತ್ತದೆ.
ಕಾಸರಗೋಡ್‌ನಿಂದ ಉಡುಪಿಯವರೆಗೆ ಇರುವ ಕಡಲ ತೀರದ ಮೀನುಗಾರ ಮೊಗವೀರರು ಬೊಬ್ಬರ್ಯ ದೈವವನ್ನು ಆರಾಧಿಸುತ್ತಾರೆ. ಬೊಬ್ಬರ್ಯ ದೈವ ಮುಸ್ಲಿಮ್ ದೈವಕ್ಕೆ ಒಂದೊಳ್ಳೆ ಉದಾಹರಣೆ. ಇದಲ್ಲದೇ ಇಡೀ ಕರಾವಳಿಯಲ್ಲಿ ಅಲಿಭೂತ, ಮಾಪಿಳ್ಳೆ ಭೂತ, ಬ್ಯಾರ್ದಿ ಭೂತಗಳನ್ನು ಶ್ರದ್ಧಾಭಕ್ತಿಯಿಂದ ಹಿಂದೂಗಳು ಆರಾಧನೆ ಮಾಡುತ್ತಾರೆ. ಕರಾವಳಿಯಲ್ಲಿ ಜನರ ಬದುಕು ಆರಂಭವಾದಂದಿನಿಂದಲೇ ಬ್ಯಾರಿ ಮುಸ್ಲಿಮರ ಜೊತೆ ಹಿಂದೂಗಳ ಬದುಕು ಸಾಗಿದೆ. ಅದಕ್ಕೆ ಬ್ಯಾರಿ ಮುಸ್ಲಿಮನಿಂದಲೇ ನಿರ್ಮಿಸಲ್ಪಟ್ಟ ಬಪ್ಪನಾಡುವಿನಂತಹ ಪುರಾತನ ದುರ್ಗಾಪರಮೇಶ್ವರಿ ದೇಗುಲ, ಬ್ಯಾರಿ ಮುಸ್ಲಿಮ್ ದೈವಗಳು, ದೈವಸ್ಥಾನಗಳೇ ಸಾಕ್ಷಿ.
ಕೇಂದ್ರ ಸರಕಾರ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರನ್ನು ಪರಕೀಯರಂತೆ ನೋಡಲು ಬಳಸಿದಲ್ಲಿ ಅದು ಕರಾವಳಿ ಕರ್ನಾಟಕ ಮತ್ತು ಕೇರಳದ ಶ್ರದ್ಧಾಭಕ್ತಿಯ ದೈವಗಳಿಗೆ ಮಾಡಿದ ಅವಮಾನ. ಪೌರತ್ವ ಕಾಯ್ದೆಯನ್ನು ಮುಸ್ಲಿಮರತ್ತ ತಿರುಗಿಸುವವರು ಪವಿತ್ರ ಪಾಡ್ದನ ಮತ್ತು ಕರಾವಳಿಯ ದೈವಸ್ಥಾನ ದೇವಸ್ಥಾನಗಳ ಇತಿಹಾಸವನ್ನು ಅರಿತುಕೊಂಡು ಈ ನೆಲದ ಮೂಲನಿವಾಸಿಗಳು ಯಾರು? ವಲಸಿಗರು ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ.