ಹಿಂಸೆ ಕ್ರೌರ್ಯ ಅಪರಾಧ ಶಿಕ್ಷೆ ಹಾಗೂ ನಾಗರಿಕ ಪ್ರಜ್ಞೆ
ಸಂಸ್ಕೃತಿಯಲ್ಲಿ ಸಹನೆ ಮತ್ತು ಸಹಬಾಳ್ವೆ ಶತಮಾನಗಳಿಂದಲೂ ಅಂತರ್ಗತವಾಗಿದೆ ಎಂದು ಹೇಳುತ್ತಲೇ ಬಂದಿರುವ ನಾವು ನಮ್ಮ ಸುತ್ತಲಿನ ಸಮಾಜದ ಗರ್ಭದಲ್ಲೇ ಅಡಗಿರುವ ದೌರ್ಜನ್ಯ, ಹಿಂಸೆ, ಕ್ರೌರ್ಯ ಮತ್ತು ಅಸಹನೆಯನ್ನು ಸಹಿಸುತ್ತಲೇ ಬಂದಿದ್ದೇವೆ. ಭಾರತದಲ್ಲಿ ಹಿಂಸೆ ಮತ್ತು ಕ್ರೌರ್ಯ ಪ್ರಾಚೀನ ಕಾಲದಿಂದಲೂ ಸಾಪೇಕ್ಷ ನೆಲೆಯಲ್ಲೇ ವ್ಯಕ್ತವಾಗಿವೆ. ಮನುಸ್ಮತಿಯ ಕಾಲದಿಂದ ಆಧುನಿಕ ಡಿಜಿಟಲ್ ಯುಗದವರೆಗೆ ಹಿಂಸೆ ಮತ್ತು ಕ್ರೌರ್ಯವನ್ನು ನಮ್ಮದೇ ಆದ ಸಾಪೇಕ್ಷತೆಯ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಾ ಬಂದಿದ್ದೇವೆ. ಸಹಿಷ್ಣುತೆಯ ಪ್ರಶ್ನೆ ಎದುರಾದಾಗ ಕಪ್ಪೆ ಚಿಪ್ಪಿನೊಳಗೆ ತೂರಿಕೊಳ್ಳುವ ನಾವು ಎಲ್ಲರನ್ನೂ ಸಹಿಸಿಕೊಳ್ಳುವ ದೊಡ್ಡ ಪರಂಪರೆಯನ್ನೇ ಮುಂದಿಟ್ಟುಬಿಡುತ್ತೇವೆ. ಏನನ್ನು ಸಹಿಸಿಕೊಳ್ಳಬಹುದು ಎನ್ನುವುದು ಪೂರ್ವನಿರ್ಧರಿತವಾಗಿರುತ್ತದೆ. ಸಹಿಸಲಾರದ್ದನ್ನು ಸಹಿಸಿಕೊಳ್ಳುವಂತೆ ನಟಿಸುತ್ತೇವೆ. ಆದರೆ ಈ ಸಹನೆ ಸಾಪೇಕ್ಷವಾಗಿರುತ್ತದೆ. ಸೂಕ್ಷ್ಮವಾಗಿ ಅಗತ್ಯವಿದ್ದೆಡೆ ವ್ಯಕ್ತವಾಗುತ್ತಲೂ ಇರುತ್ತದೆ. ಈ ಸಾಪೇಕ್ಷತೆಯನ್ನು ಮರೆಮಾಚಲೆಂದೇ ಕಳೆದ ಮೂರು ದಶಕಗಳ ಬೆಳವಣಿಗೆಗಳಲ್ಲಿ ಅನ್ಯರನ್ನು ಸೃಷ್ಟಿಸುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದಿದೆ. ಸಂದರ್ಭಾನುಸಾರ ಅನ್ಯರ ಪರಿಕಲ್ಪನೆಯೂ ಸಾಪೇಕ್ಷವಾಗಿ ಬಿಡುತ್ತದೆ. ಮತಧರ್ಮ, ಜಾತಿ, ಭಾಷೆ, ಜನಾಂಗೀಯತೆ ಮತ್ತು ಪ್ರಾದೇಶಿಕತೆಯ ನೆಲೆಯಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಪ್ರಕಟವಾಗುತ್ತಲೇ ಇರುವ ಅಸಹನೆ ಮತ್ತು ದ್ವೇಷ ನಮ್ಮ ಸುತ್ತಲಿನ ಸಮಾಜದ ಗರ್ಭದಲ್ಲಿ ಅಡಗಿರುವ ಹಿಂಸೆ ಮತ್ತು ಕ್ರೌರ್ಯವನ್ನು ಹೊರಹಾಕುತ್ತಲೇ ಇದೆ. 1947ರ ನೌಖಾಲಿಯಿಂದ 2018ರ ಮುಝಫ್ಫರ್‌ಪುರದವರೆಗೆ ಈ ಹಿಂಸೆ ಮತ್ತು ಕ್ರೌರ್ಯದ ರುದ್ರ ನರ್ತನವನ್ನು ನೋಡುತ್ತಲೂ ಬಂದಿದ್ದೇವೆ. ಇಲ್ಲಿ ಸಹನೆಯ ಕಟ್ಟೆ ಒಡೆದಿತ್ತೋ ಅಥವಾ ಅಡಗಿದ್ದ ಅಸಹನೆ ತಂತಾನೇ ಹೊರಹೊಮ್ಮಿತ್ತೋ ಎನ್ನುವು ದನ್ನು ವಿಶ್ಲೇಷಿಸುವಾಗ ಮತ್ತೊಮ್ಮೆ ನಾವು ಸಾಪೇಕ್ಷತೆಗೆ ಮೊರೆಹೋಗುತ್ತೇವೆ.
ಭಾರತೀಯ ಸಮಾಜದ ಮುಖ್ಯವಾಹಿನಿ ಯಲ್ಲಿ ಎಲ್ಲ ರೀತಿಯ ಹಿಂಸೆ, ಕ್ರೌರ್ಯ ಸಂಚಲನ ಮೂಡಿಸುವುದಿಲ್ಲ. ಎಲ್ಲ ರೀತಿಯ ಹಿಂಸಾತ್ಮಕ ಧೋರಣೆ ವಿಚಲಿತಗೊಳಿಸುವುದಿಲ್ಲ. ಹಿಂಸೆಗೊಳಗಾದವರು ಯಾರು, ಕ್ರೌರ್ಯಕ್ಕೆ ಬಲಿಯಾದವರು ಯಾರು ಮತ್ತು ದೌರ್ಜನ್ಯ ಎಸಗುವುದು ಯಾರು ಎನ್ನುವುದು ಸಮಾಜದ ಅಭಿವ್ಯಕ್ತಿಯನ್ನು ನಿರ್ಧರಿಸುತ್ತದೆ. ಹಾಗಾಗಿಯೇ ಇಂದಿಗೂ ಒಬ್ಬ ವಿವಾಹಿತ ದಲಿತ ಕುದುರೆ ಸವಾರಿ ಮಾಡುವುದನ್ನು, ಒಬ್ಬ ದಲಿತ ದೇವಾಲಯ ಪ್ರವೇಶಿಸುವುದನ್ನು, ಒಬ್ಬ ಯುವಕ ಅಥವಾ ಯುವತಿ ಅನ್ಯ ಜಾತಿಯವರೊಡನೆ ಮದುವೆಯಾಗುವುದನ್ನು ಸಹಿಸಿಕೊಳ್ಳದ ಸಮಾಜ ಮೇಲ್ನೋಟಕ್ಕೆ ಶಾಂತಿಪ್ರಿಯ, ಸೌಹಾರ್ದಪ್ರಿಯ ಸಮಾಜ ಎನಿಸಿದರೂ ಆಂತರ್ಯದಲ್ಲಿ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತದೆ, ದೌರ್ಜನ್ಯವನ್ನು ಸ್ವೀಕರಿಸುತ್ತದೆ, ಹಲ್ಲೆ ಆಕ್ರಮಣವನ್ನು ಸಮರ್ಥಿಸುತ್ತದೆ. ಹತ್ಯೆಯನ್ನು ಗೌರವ ಹತ್ಯೆ ಅಥವಾ ಮರ್ಯಾದಾ ಹತ್ಯೆ ಎನ್ನಲಾಗುತ್ತದೆ. ಗೌರವ ಉಳಿಸಿಕೊಳ್ಳಲು ಹತ್ಯೆ ಮಾಡುವ ಏಕೈಕ ದೇಶ ಬಹುಶಃ ಭಾರತವೇ ಇರಬಹುದು. ಏಕೆಂದರೆ ಇಲ್ಲಿ ಗೌರವ/ಘನತೆ ಎಷ್ಟು ಸಾಪೇಕ್ಷವೋ ಮನುಜ ಜೀವ ಮತ್ತು ಜೀವ ಹತ್ಯೆಯೂ ಅಷ್ಟೇ ಸಾಪೇಕ್ಷವಾದುದು.
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತ ವಾಗಿರುವ ಶ್ರೇಷ್ಠತೆಯ ವ್ಯಸನ ಮತ್ತು ಶುದ್ಧೀಕರಣದ ವ್ಯಾಧಿ ಸಮಾಜದಲ್ಲಿ ಇಂತಹ ವಿಕೃತಿಗಳನ್ನು ಶತಮಾನಗಳಿಂದಲೂ ಸೃಷ್ಟಿಸುತ್ತಲೇ ಬಂದಿದೆ. ಧರ್ಮ ಮತ್ತು ಸಂಸ್ಕೃತಿಯ ಸಂಕಥನ ಗಳಲ್ಲಿ ಮಾನವರಿಗಿಂತಲೂ ಅತೀತ ಶಕ್ತಿಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ ಬಂದಿರುವ ಸಾಂಪ್ರದಾಯಿಕ ಸಮಾಜದ ಮನಸ್ಸುಗಳು ಈ ವಿಕೃತಿಗಳ ಮೂಲ ಬೇರುಗಳ ಸಂರಕ್ಷಣೆಗಾಗಿ ಇಂದಿಗೂ ಶ್ರಮಿಸುತ್ತಿವೆ. ಪ್ರಜಾತಂತ್ರ ವ್ಯವಸ್ಥೆ, ಮುಕ್ತ ಸಮಾಜ, ಮಾನವೀಯ ವೌಲ್ಯಗಳು ಅಥವಾ ಭ್ರಾತೃತ್ವದ ಪರಿಕಲ್ಪನೆಗಳು ಈ ಮೂಲ ಬೇರುಗಳನ್ನು ಅಲುಗಾಡಿಸಲಾಗುತ್ತಿಲ್ಲ. ಈ ಚೌಕಟ್ಟನ್ನು ಭೇದಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದರೂ ಸಮಾಜದ ಅಂತಃಸತ್ವವನ್ನು ತಲುಪಲು ಸಾಧ್ಯವಾಗಿಲ್ಲ. ಏಕೆಂದರೆ ಈ ದೇಶದ ಆಳುವ ವರ್ಗಗಳಲ್ಲಿ ಈ ಬೇರುಗಳು ಗಟ್ಟಿಯಾಗಿವೆ. ಆಧಿಪತ್ಯ ರಾಜಕಾರಣದಲ್ಲಿ ನೆಲೆ ಮಾಡಿವೆ. ಹಾಗಾಗಿಯೇ ಜಾತಿ, ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಕಗ್ಗೊಲೆಗಳು, ಹತ್ಯಾಕಾಂಡಗಳು ಸಾಂಪ್ರದಾಯಿಕ ಸಮಾಜವನ್ನು ವಿಚಲಿತಗೊಳಿಸುವುದಿಲ್ಲ. ಹೆಣ್ಣು ಹಸುಳೆಗಳಾಗಲೀ, ವೃದ್ಧ ಮಹಿಳೆಯರಾಗಲೀ, ವಯಸ್ಕ ಹೆಣ್ಣುಮಕ್ಕಳಾಗಲೀ ಹೆಣ್ತನದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಹತ್ಯಾಕಾಂಡಗಳು ಸಮಾಜದ ಪ್ರಜ್ಞೆಯನ್ನು ಕಲಕುವುದಿಲ್ಲ. ಏಕೆಂದರೆ ಹೆಣ್ತನವೂ ಸಾಂಪ್ರದಾಯಿಕ-ಸಾಂಸ್ಕೃತಿಕ ನೆಲೆಯಲ್ಲೇ ನಿಷ್ಕರ್ಷೆಗೊಳಗಾಗುತ್ತದೆ.
ಇಂತಹ ಒಂದು ಸಮಾಜದಲ್ಲಿ ನಾವು ನಿರ್ಭಯಾ, ಸೌಜನ್ಯಾ, ದಾನಮ್ಮ, ಪಾಯಲ್, ಪ್ರಿಯಾಂಕಾ, ಪ್ರಿಯಾಂಕಾ ರೆಡ್ಡಿ, ಉನ್ನಾವೊದ ಇಬ್ಬರು ಮಹಿಳೆಯರು, ಕಥುವಾದ ಹಸುಳೆ ಈ ಘಟನೆಗಳನ್ನು ಎದುರಿಸುತ್ತಿದ್ದೇವೆ. ಮತ್ತೊಂದೆಡೆ ಕಂಬಾಲಪಲ್ಲಿ, ಖೈರ್ಲಾಂಜಿ, ಉನ, ಲಕ್ಷ್ಮಣಪುರಬಾಥೆ, ತ್ಸುಂಡೂರು, ಬತಾನಿತೊಲ, ಕರಂಚೇಡು ನಡೆಯುತ್ತಲೇ ಇರುತ್ತವೆ. ನೆಲ್ಲಿ, ಮಥುರಾ, ಮುಂಬೈ, ಅಯೋಧ್ಯಾ, ಗುಜರಾತ್, ಮುಝಫ್ಫರ್‌ಪುರ ನಡೆಯುತ್ತಲೇ ಹೋಗುತ್ತದೆ. ಈ ಎಲ್ಲ ಘಟನೆಗಳಲ್ಲೂ ಕಾಣಬಹುದಾದ ಸಮಾನ ಎಳೆ ಎಂದರೆ ಈ ದೇಶದ ಶೋಷಿತ ಸಮುದಾಯಗಳ ವಿರುದ್ಧ ಇರುವ ದ್ವೇಷ ಮತ್ತು ಮಹಿಳೆಯರ ಬಗ್ಗೆ ಇರುವ ತಾತ್ಸಾರ, ಹೆಣ್ತನದ ಬಗ್ಗೆ ಇರುವ ಅಸಡ್ಡೆ, ಅನ್ಯರ ವಿರುದ್ಧ ಇರುವ ಕ್ರೋಧ. ಈ ಘಟನೆಗಳಲ್ಲಿ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಕಾಣುವಷ್ಟೇ ಗಾಢವಾಗಿ ಪುರುಷ ಪ್ರಧಾನ ಸಮಾಜದ ಕರಾಳ ಮುಖವನ್ನೂ ಕಾಣಬಹುದು, ಮತೀಯ ರಾಜಕಾರಣದ ಕ್ರೂರ ಸ್ವರೂಪವನ್ನೂ ಕಾಣಬಹುದು. ಹಾಗೆಯೇ ಈ ಘಟನೆಗಳ ನಡುವೆ ನಿಂತು ಸುತ್ತ ನೋಡಿದಾಗ ಭಾರತದ ಒಂದು ಸುಶಿಕ್ಷಿತ ವರ್ಗ, ಸಮುದಾಯ ಯಾವ ರೀತಿಯಿಂದಲೂ ಬಾಧಿತವಾಗದೆ, ವಿಚಲಿತಗೊಳ್ಳದೆ ಇರುವುದನ್ನೂ ಗುರುತಿಸಬಹುದು. ಈ ವರ್ಗ ಅಥವಾ ಸಮುದಾಯದ ದೃಷ್ಟಿಯಲ್ಲಿ ಸಾವು ಸಹ ಸಾಪೇಕ್ಷ ಎನಿಸಿಬಿಡುತ್ತದೆ. ನೆಲ್ಲಿಯಿಂದ ಮುಝಫ್ಫರ್‌ಪುರದವರೆಗಿನ ಪಯಣದ ಗಾಯದ ಗುರುತುಗಳು ಮಾಸುವ ಮುನ್ನವೇ ಭಾರತ ಮತ್ತೊಂದು ಪರ್ವದತ್ತ ಹೊರಳುತ್ತಿರುವುದನ್ನೂ ಗಮನಿಸಬಹುದು.
ತೆಲಂಗಾಣದಲ್ಲಿ ಪ್ರಿಯಾಂಕಾ ರೆಡ್ಡಿ (ದಿಶಾ) ಎಂಬ ಮಹಿಳೆ ಯ ಮೇಲಿನ ಅತ್ಯಾಚಾರ ಮತ್ತು ಆಕೆಯ ಸಜೀವ ದಹನ, ಉತ್ತರ ಪ್ರದೇಶದ ಉನ್ನಾವೊದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಸಜೀವ ದಹನ ಮತ್ತು ತೆಲಂಗಾಣ ಪೊಲೀಸರಿಂದ ನಡೆದ ಎನ್‌ಕೌಂಟರ್ ಈ ಸಂದರ್ಭದಲ್ಲಿ ಮಾಸದಿರುವ ಗಾಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿವೆ. ತೆಲಂಗಾಣ ಪೊಲೀಸರ ಎನ್‌ಕೌಂಟರ್ ನಕಲಿಯೋ, ಅಸಲಿಯೋ ಅಥವಾ ಆತ್ಮರಕ್ಷಣೆಗಾಗಿ ಕೈಗೊಂಡ ಕ್ರಮವೋ ಎನ್ನುವುದು ವಿಚಾರಣೆಯ ನಂತರವೇ ತಿಳಿಯುತ್ತದೆ. ಆದರೆ ಇಂದು ಚರ್ಚೆಗೊಳಗಾಗಬೇಕಿರುವುದು ಎನ್‌ಕೌಂಟರ್ ಒಂದು ಶಿಕ್ಷೆಯ ವಿಧಾನವಾಗುವುದು ಸಾಧ್ಯವೇ ಎನ್ನುವ ಪ್ರಶ್ನೆ. ಕ್ಷಿಪ್ರ ನ್ಯಾಯ ಅಥವಾ ತ್ವರಿತ ನ್ಯಾಯದ ಪರಿಕಲ್ಪನೆಯನ್ನು ಸಂಯಮ ಮತ್ತು ಸಂವೇದನೆಯ ಚೌಕಟ್ಟಿನಿಂದ ಹೊರಗಿಟ್ಟು ನೋಡಿದಾಗ ಎನ್‌ಕೌಂಟರ್ ಸ್ವೀಕೃತ ಎನಿಸಿಬಿಡುತ್ತದೆ. ಆದರೆ ಯಾವುದೇ ನ್ಯಾಯ ವ್ಯವಸ್ಥೆಯ ಮೂಲ ಉದ್ದೇಶ ಸಮಾಜ ಸುಧಾರಣೆಯೇ ಹೊರತು ಶಿಕ್ಷೆ ಮತ್ತು ಅಪರಾಧಗಳ ಲೋಕ ಅಲ್ಲ ಎನ್ನುವುದನ್ನು ನಾವು ಗ್ರಹಿಸಬೇಕಿದೆ. ಸಮಾಜ ಸುಧಾರಣೆಯ ಮಾರ್ಗದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಪರಾಧ ಮತ್ತು ಶಿಕ್ಷೆ ಮುನ್ನೆಲೆಗೆ ಬರುತ್ತವೆ.
ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ ಸತ್ಯಾ ಸತ್ಯತೆಗಳೇನೇ ಇದ್ದರೂ, ಈ ವ್ಯವಸ್ಥೆಯ ಕ್ರೌರ್ಯವನ್ನು ಸಮರ್ಥಿಸುವ, ಸ್ವೀಕರಿಸುವ ಮತ್ತು ಸ್ವಾಗತಿಸುವ ಮನಸ್ಸುಗಳು ಹೇಗೆ ರೂಪುಗೊಂಡವು ಎನ್ನುವುದನ್ನು ನಾವು ಗಮನಿಸಬೇಕಿದೆ. ನಿರ್ಭಯಾಳಿಂದ ಪ್ರಿಯಾಂಕಾವರೆಗೆ ಪುರುಷ ಕಾಮತೃಷೆಗೆ ಬಲಿಯಾಗಿರುವ ಅಸಂಖ್ಯಾತ ಹೆಣ್ಣು ಜೀವಗಳು ನ್ಯಾಯಕ್ಕಾಗಿ ಕಾತುರದಿಂದ ಎದುರುನೋಡುತ್ತಿರುವಾಗಲೇ, ನೋಡಿ ಈ ರೀತಿಯಲ್ಲೂ ನ್ಯಾಯ ಒದಗಿಸಬಹುದು ಎಂದು ತೆಲಂಗಾಣ ಪೊಲೀಸರು ಹೇಳುತ್ತಿದ್ದಾರೆ. ಈ ಸಮರ್ಥನೆಯನ್ನು ಹೇಗೆ ಒಪ್ಪುವುದು? ನಾಗರಿಕ ಸಮಾಜದಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೇ ಪ್ರಧಾನವಾಗಿಬಿಟ್ಟರೆ ಸಂವೇದನೆಯೇ ನಾಶವಾಗಿಬಿಡುತ್ತದೆ. ದುರದೃಷ್ಟವಶಾತ್ ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಈ ನಿಟ್ಟಿನಲ್ಲೇ ಸಮಾಜವನ್ನು ಕರೆದೊಯ್ಯುತ್ತಿದೆ. ಆರೋಪಿಗೂ ಅಪರಾಧಿಗೂ ಇರುವ ವ್ಯತ್ಯಾಸವನ್ನೂ ಗ್ರಹಿಸದ ಮಟ್ಟಿಗೆ ನಾಗರಿಕ ಸಮಾಜ ತನ್ನ ಪ್ರಜ್ಞೆಯನ್ನು ಕಳೆದುಕೊಂಡುಬಿಟ್ಟಿದೆ. ಗುಂಪುಥಳಿತ ಈ ಬೆಳವಣಿಗೆಯ ಕೂಸು ಎನ್ನಬಹುದು. ಉನದಲ್ಲಿ ನಡೆದ ಹೃದಯವಿದ್ರಾವಕ ಘಟನೆ, ದಾದ್ರಿಯಲ್ಲಿ ನಡೆದ ಹಗಲು ಹ
್ಯೆ ಈ ಕೂಸಿನ ಕ್ರೂರ ಸ್ವರೂಪ ಎನ್ನಬಹುದು. ಪೊಲೀಸರು ನೀಡುವ ಕ್ಷಿಪ್ರ ನ್ಯಾಯಕ್ಕೂ, ದಾದ್ರಿಯಲ್ಲಿ ಗೋ ಸಂರಕ್ಷಣೆಯ ಪ್ರಕರಣದಲ್ಲಿ ಮತೀಯ ಶಕ್ತಿಗಳು ನೀಡುವ ಕ್ಷಿಪ್ರ ನ್ಯಾಯಕ್ಕೂ ವ್ಯತ್ಯಾಸವಾದರೂ ಏನಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿ ಅಪರಾಧಿಯೆಂದು ಸಾಬೀತಾಗುವ ಮುನ್ನವೇ ಶಿಕ್ಷೆಗೊಳಪಡುತ್ತಾನೆ. ಒಂದು ಕಾನೂನಿನ ಚೌಕಟ್ಟಿಗೆ ಒಳಪಡುತ್ತದೆ ಮತ್ತೊಂದು ಮತೀಯ ರಾಜಕಾರಣದ ಅರಣ್ಯದಲ್ಲಿ ಕಳೆದುಹೋಗುತ್ತದೆ. ಜಾತಿ ಸಂಘರ್ಷಗಳಲ್ಲಿ, ದಲಿತರ ವಿರುದ್ಧ ನಡೆದ ಗಲಭೆೆ ಗಳಲ್ಲಿ, ಕೋಮುಗಲಭೆಗಳಲ್ಲಿ ಈ ಕ್ರೂರ ಸಮಾಜದ ವಿರಾಟ್ ಸ್ವರೂಪವನ್ನು ಸಮಕಾಲೀನ ಭಾರತ ಕಂಡಿದೆ. ಅಸಂಖ್ಯಾತ ಅಮಾಯಕರು ಯಾವುದೇ ಅಪರಾಧ ಎಸಗದೆಯೇ ಮತೀಯ ವಾದಿಗಳಿಂದ ಎನ್‌ಕೌಂಟರ್ ಶಿಕ್ಷೆ ಅನುಭವಿಸಿದ್ದಾರೆ. ಲಕ್ಷಾಂತರ ಹೆಣ್ಣುಮಕ್ಕಳು ಪುರುಷ ಸಮಾಜದ ತೋಳ್ಬಲ ಪ್ರದರ್ಶನಕ್ಕೆ ಸರಕುಗಳಂತಾಗಿ ಪ್ರಾಣ ತೆತ್ತಿದ್ದಾರೆ, ಬದುಕು ಕಳೆದುಕೊಂಡಿದ್ದಾರೆ, ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಸೂರತ್, ಮುಂಬೈ, ಗುಜರಾತ್, ಮುಝಫ್ಫರ್‌ಪುರದ ಕೋಮು ಗಲಭೆಗಳಲ್ಲಿ ಅತ್ಯಾಚಾರಕ್ಕೊಳಗಾದ ಅಮಾಯಕ ಮಹಿಳೆಯರಿಗೆ, ಹತ್ಯೆಗೀಡಾದ ಅಮಾಯಕ ಜನರಿಗೆ ನ್ಯಾಯ ದೊರೆಯುವುದಿರಲಿ, ಅವರ ಆಕ್ರಂದನವನ್ನು ಕೇಳುವವರೂ ಇರಲಿಲ್ಲ. ಏಕೆಂದರೆ ಅವರು ಅತ್ಯಾಚಾರಕ್ಕೊಳಗಾಗುವ ಅರ್ಹತೆ ಯನ್ನು ಪಡೆದುಬಿಟ್ಟಿದ್ದರು. ಸಾಂಸ್ಕೃತಿಕ ರಾಜಕಾರಣದ ಒಂದು ದನಿ ಈ ಅರ್ಹತೆಯ ಪಟ್ಟಿಯನ್ನು ಸಿದ್ಧಪಡಿಸಿಬಿಟ್ಟಿತ್ತು. ಈ ಪಟ್ಟಿಯನ್ನು ಪ್ರಶ್ನಿಸುವವರು ದ್ರೋಹಿಗಳಾಗಿ ಕಾಣತೊಡಗಿದ್ದರು. ಮತಧರ್ಮಗಳ ಸಂಘರ್ಷದಲ್ಲಿ ಹರಕೆಯ ಕುರಿಗಳಂತೆ ಬಲಿಯಾದ ಈ ಜೀವಗಳ ನೋವಿಗೆ ಸ್ಪಂದಿಸಿದ ಕೆಲವೇ ಮನಸುಗಳು ಬಹಿಷ್ಕೃತವಾಗಿಬಿಟ್ಟವು. ಇಂದು ಈ ಮನಸುಗಳು ದೇಶದ್ರೋಹಿ
ಗಳಾಗಿ ಕಾಣುತ್ತಿವೆ. ಇಲ್ಲಿ ಮೂಲತಃ ಗಮನಿಸಬೇಕಿರುವ ಅಂಶವೆಂದರೆ ಮೂರು ದಶಕಗಳ ಈ ಪ್ರಕ್ಷುಬ್ಧ ವಾತಾವರಣದಲ್ಲಿ ಮತ್ತು ಕ್ಷುದ್ರ ರಾಜಕಾರಣದಲ್ಲಿ ಹಲ್ಲೆ, ಆಕ್ರಮಣ, ಥಳಿತ, ಹತ್ಯೆ ಮತ್ತು ಅತ್ಯಾಚಾರ ಇವೆಲ್ಲವೂ ಸಾಪೇಕ್ಷವಾಗಿಬಿಟ್ಟಿವೆ. ಹಲ್ಲೆಗೊಳ ಗಾದವರು ಅವರಲ್ಲವೇ, ಹತ್ಯೆಗೀಡಾದವರು ನಮ್ಮವರಲ್ಲ ಬಿಡಿ, ಅತ್ಯಾಚಾರಕ್ಕೊಳಗಾದವರಲ್ಲಿ ನಮ್ಮವರಿಲ್ಲವಲ್ಲಾ ಇಂತಹ ಉದ್ಗಾರಗಳ ನಡುವೆಯೇ ಭಾರತೀಯ ಸಮಾಜ ಮಾನವೀಯತೆಯ ಬೇಲಿಗಳನ್ನು ದಾಟಿ ಕ್ರೂರ ಅರಣ್ಯ ನ್ಯಾಯದ ನಡುವೆ ಸಿಲುಕಿಬಿಟ್ಟಿದೆ. ಇದನ್ನು ಭೌಗೋಳಿಕ ದೇಶ, ಸಾಂಸ್ಕೃತಿಕ ರಾಷ್ಟ್ರೀಯತೆ, ಧರ್ಮ ರಕ್ಷಣೆ ಮತ್ತು ಸಾಂಪ್ರದಾಯಿ ಕತೆಯ ಸಂರಕ್ಷಣೆಯ ಹೆಸರಿನಲ್ಲಿ ಸಮರ್ಥಿಸುತ್ತಲೇ ಬರಲಾಗಿದೆ. ಈ ಸಮರ್ಥನೆಯ ಪರಂಪರೆಯೇ ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣ ಬಹುಪಾಲು ಜನತೆಗೆ ಸ್ವೀಕೃತ ಎನಿಸಲು ಕಾರಣವಾಗಿದೆ. ಜಾತಿಯ ನೆಲೆಯಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಮತ್ತು ಆಕ್ರಮಣ ಗಳು ಈ ಪರಂಪರೆಯ ನೆಲೆಯಲ್ಲೇ ನಿಷ್ಕರ್ಷೆಗೊಳಗಾಗುತ್ತವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಜಾತಿ ಶ್ರೇಣೀಕರಣದ ಕ್ರೂರ ಮತ್ತು ಅಸಹ್ಯ ಸ್ವರೂಪವನ್ನು ಕಾಣುತ್ತಲೇ ಬಂದಿದ್ದೇವೆ.
ಭಾರತೀಯ ಸಮಾಜದ ಒಂದು ವರ್ಗ ವ್ಯವಸ್ಥಿತವಾಗಿ ರೂಪಿಸಿರುವ ಈ ವಿಷವ್ಯೆಹದಿಂದ ಹೊರಬಂದು ಮಾನವ ಸಂವೇದನೆಯ ನೆಲೆಯಲ್ಲಿ ನ್ಯಾಯಾನ್ಯಾಯಗಳ ನಿಷ್ಕರ್ಷೆ ಮಾಡದೆ ಹೋದರೆ ಬಹುಶಃ ಭಾರತ ಅನಾಗರಿಕತೆಯತ್ತ ನಡೆದುಬಿಡುತ್ತದೆ. ಈಗಾಗಲೇ ನಾಗರಿಕ ವೌಲ್ಯಗಳನ್ನು ಕಳೆದುಕೊಂಡ ಒಂದು ಸಾಂಪ್ರದಾಯಿಕ ಸಮಾಜವಾಗಿ ಭಾರತ ವಿಶ್ವಮಾನ್ಯತೆ ಪಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಈ ಪ್ರಕ್ರಿಯೆಗೆ ಅಧಿಕೃತ ಮೊಹರು ಸಹ ದೊರೆತಿದೆ. ಕ್ಷಿಪ್ರ ನ್ಯಾಯದ ಕಲ್ಪನೆಯಲ್ಲಿ ಎನ್‌ಕೌಂಟರ್ ಸಂಸ್ಕೃತಿಯನ್ನು ಸಮರ್ಥಿಸುವುದು ಅಥವಾ ಉತ್ತೇಜಿಸುವುದು ನಮ್ಮನ್ನು ಬರ್ಬರ ಶಿಲಾಯುಗದತ್ತ ಕೊಂಡೊಯ್ಯುತ್ತದೆ. ಉನ್ನಾವೊ ಘಟನೆಯಲ್ಲಿ ಈ ಬರ್ಬರತೆಯ ಮತ್ತೊಂದು ಆಯಾಮವನ್ನು ಕಂಡಿದ್ದೇವೆ. ಈ ಘಟನೆಯ ನಂತರದಲ್ಲಿ ಅಧಿಕಾರಸ್ಥರಲ್ಲಿ ಕಂಡುಬಂದಿರುವ ನಿಷ್ಕ್ರಿಯತೆ ಬರ್ಬರತೆಯ ಸಮರ್ಥನೆ ಎಂದೇ ಹೇಳಬೇಕಾಗುತ್ತದೆ. ಮನುಕುಲದ ಮೇಲಿನ ಅತ್ಯಾಚಾರ, ಹಲ್ಲೆ ಮತ್ತು ಹತ್ಯೆಯ ಪ್ರಯತ್ನಗಳತ್ತಲೇ ಗಮನಹರಿಸುತ್ತಿರುವ ನಾವು ಈ ದೇಶದ ನೆಲದ ಕಾನೂನು ಮತ್ತು ಸಂವಿಧಾನ, ಸಾಂವಿಧಾನಿಕ ವೌಲ್ಯ ಮತ್ತು ಪ್ರಜಾತಂತ್ರ ವ್ಯವಸ್ಥೆಯೂ ಹಲ್ಲೆಗೊಳಗಾಗುತ್ತಿರುವುದನ್ನು ಇನ್ನೂ ಗಂಭೀರವಾಗಿ ಗಮನಿಸಬೇಕಿದೆ. ನಾಗರಿಕ ಪ್ರಜ್ಞೆ ಜಾಗೃತವಾಗಬೇಕಿದೆ.