ಪ್ರತಿಭಟನೆಯಿಂದ ನ್ಯಾಯ ಮರೀಚಿಕೆ, ಆದರೂ ಧ್ವನಿ ಎತ್ತಿದ ತೃಪ್ತಿ: ಅಲಿ ಹಸನ್
ಅಲಿ ಹಸನ್
ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ, ಮುಸ್ಲಿಮ್ವರ್ತಕರ ಸಂಘ, ಮಾಂಸ ವ್ಯಾಪಾರಸ್ಥರ ಸಂಘ, ಮಂಗಳೂರು ಸೆಂಟ್ರಲ್ ಕಮಿಟಿ, ಮಾನವ ಸಮಾನತಾ ಮಂಚ್, ದ.ಕ. ಜಿಲ್ಲಾ ಗಿಲ್ನೆಟ್ ಮೀನುಗಾರರ ಸಂಘ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ರಿಕ್ಷಾ ಚಾಲಕರ ಸಂಘ, ದ.ಕ. ಜಿಲ್ಲಾ ರಿಕ್ಷಾ ಚಾಲಕ-ಮಾಲಕರ ಸಂಘದ ಒಕ್ಕೂಟ, ಪಿಯುಸಿಎಲ್, ಕೋಮು ಸೌಹಾರ್ದ ವೇದಿಕೆ, ಮುಸ್ಲಿಮ್ ಜಸ್ಟೀಸ್ ಫೋರಂ... ಹೀಗೆ ಹಲವು ಸಂಘಟನೆಗಳಲ್ಲಿ ಸಕ್ರಿಯ ರಾಗಿರುವ ಅಲಿ ಹಸನ್ ಜೊತೆ ‘ವಾರ್ತಾಭಾರತಿ’ ಮಾತುಕತೆ ನಡೆಸಿತು.
ಕುದ್ರೋಳಿ ಕಸಾಯಿಖಾನೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಏನಾಯಿತು?
ಸ್ಮಾರ್ಟ್ ಸಿಟಿ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸುವ ಬಗ್ಗೆ ನಾಲ್ಕು ತಿಂಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳು ಸಂಘದ ಮುಖಂಡರ ಜೊತೆ ಸಮಾಲೋಚನೆ ನಡೆಸಿತ್ತು. ಅಭಿವೃದ್ಧಿಪಡಿಸುವಾಗ ಯಾವುದಕ್ಕೆಲ್ಲಾ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ನಾವು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಮಂಗಳೂರು ಸ್ಮಾರ್ಟ್ ಸಿಟಿ ಆಗುವಾಗ ಕಸಾಯಿ ಖಾನೆ, ಮಾರುಕಟ್ಟೆಗಳು ಕೂಡ ಸ್ಮಾರ್ಟ್ ಆಗಬೇಕು ಎಂಬುದು ನಮ್ಮ ಅಭಿಲಾಶೆಯಾಗಿದೆ.
► ಹಲವು ವರ್ಷದಿಂದ ಮಾಂಸ ವ್ಯಾಪಾರದಲ್ಲಿ ತೊಡಗಿಸಿಕೊಂಡ ತಾವು ಸಂಘಟನಾತ್ಮಕವಾಗಿ ಒಂದಲ್ಲೊಂದು ಸಮಸ್ಯೆಗೆ ಸಿಲುಕಿದಿರಿ. ಅದನ್ನು ಹೇಗೆ ಎದುರಿಸಿದಿರಿ?
ಈ ‘ಗೋಮಾಂಸ’ವು ಯಾವಾಗ ರಾಜಕೀಯ ಅಸ್ತ್ರವಾಯಿತೋ, ಆವಾಗಿನಿಂದ ಮಾಂಸ ವ್ಯಾಪಾರಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚತೊಡಗಿತು. ಕಾನೂನು ರೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದರೂ ಸೂಕ್ತ ನ್ಯಾಯ ಸಿಗದ ಕಾರಣ ಅನಿವಾರ್ಯವಾಗಿ ನಾವು ಸಂಘಟಿತರಾಗಬೇಕಾಯಿತು. ಆ ಮೂಲಕ ನಮ್ಮ ಹಕ್ಕಿಗಾಗಿ ನ್ಯಾಯಯುತ ಹೋರಾಟ ಮಾಡತೊಡಗಿದೆವು. ಆವಾಗ ಒಂದಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡೆವು. ವ್ಯಾಪಾರಿಗಳ ಮೇಲೆ ಅಲ್ಲಲ್ಲಿ ಪೊಲೀಸ್ ಇಲಾಖೆಯು ಪ್ರಕರಣವನ್ನೂ ದಾಖಲಿಸಿಕೊಂಡಿತು. ಆದಾಗ್ಯೂ ಎದೆಗುಂದಲಿಲ್ಲ. ಕಾನೂನು ಹೋರಾಟದ ಮೂಲಕವೇ ಸಮಸ್ಯೆಯನ್ನು ಎದುರಿಸುತ್ತಾ ಬಂದೆವು. ಈಗಲೂ ನಮ್ಮ ವ್ಯಾಪಾರವು ಅಭದ್ರತೆಯಿಂದ ಕೂಡಿದೆ. ಆದರೂ ಎದೆಗುಂದದೆ ಮುಂದುವರಿಸುತ್ತಿದ್ದೇವೆ.
►ಅಕ್ರಮ ಗೋ ಸಾಗಾಟ ಪ್ರಕರಣ ಅಥವಾ ಅಕ್ರಮ ಕಸಾಯಿ ಖಾನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪವಿದೆಯಲ್ಲಾ?
ನಾನಂತೂ ಅಕ್ರಮ ಗೋ ಸಾಗಾಟ, ಅಕ್ರಮ ಕಸಾಯಿ ಖಾನೆಯನ್ನು ಬೆಂಬಲಿಸುವುದಿಲ್ಲ. ಯಾರೇ ಆಗಲಿ, ಅಕ್ರಮ ಜಾನುವಾರು ಸಾಗಾಟ ಮಾಡಿದರೆ, ಅಕ್ರಮ ಕಸಾಯಿ ಖಾನೆ ತೆರೆದರೆ ಅವರ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಜರುಗಿಸಲಿ. ಆದರೆ, ಕಾನೂನು ಕ್ರಮದ ಹೆಸರಿನಲ್ಲಿ ಸಕ್ರಮವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಭಾರತ ಗೋ ಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಸ್ಥಳೀಯರಿಗೆ ಭಕ್ಷಿಸಲು ಮಾಂಸ ಸಿಗದಿರುವುದು ವಿಪರ್ಯಾಸ. ಈ ಅಡ್ಡಿ-ಆತಂಕವನ್ನು ಸರಕಾರವೇ ನಿಲ್ಲಿಸಬೇಕು.
►ಈ ಅಕ್ರಮ ಅಥವಾ ಸಮಸ್ಯೆಗೆ ಪರಿಹಾರ ಏನು?
ಈಗ ಎಲ್ಲರ ಕಣ್ಣು ಕುದ್ರೋಳಿಯ ಕಸಾಯಿ ಖಾನೆಯ ಮೇಲೆ. ಅಲ್ಲೇ ಅಕ್ರಮ ನಡೆಯುತ್ತಿದೆ ಎಂಬ ಭಾವನೆ ಇದೆ. ಸಂಘ ಪರಿವಾರದವರು ಕೂಡ ಕುದ್ರೋಳಿ ಕಸಾಯಿ ಖಾನೆಯ ಗುತ್ತಿಗೆ ವಹಿಸಿ ಕೊಂಡು ಅದನ್ನು ಮುಚ್ಚಲು ಪ್ರಯತ್ನಿಸಿದರು. ಸರಕಾರಿ ನಿಯಮಾವಳಿಯಂತೆ ನಡೆ ಯುವ ಕುದ್ರೋಳಿ ಕಸಾಯಿ ಖಾನೆಯಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಇನ್ನು ಅಕ್ರಮ ಜಾನುವಾರು ಸಾಗಾಟ ಅಥವಾ ಅಕ್ರಮ ಕಸಾಯಿಖಾನೆ ತಲೆ ಎತ್ತದಂತೆ ನೋಡಿಕೊಳ್ಳಲು ಪ್ರತೀ ತಾಲೂಕಿಗೊಂದು ಕಸಾಯಿ ಖಾನೆಯನ್ನು ಸರಕಾರವೇ ತೆರೆಯಲಿ. ಆ ಮೂಲಕ ಎಲ್ಲಾ ರೀತಿಯ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಿದೆ.
►ಮಾಂಸ ರಹಿತ ದಿನದ ಬಗ್ಗೆ....
ಮಾಂಸ ರಹಿತ ದಿನಾಚರಣೆಯಲ್ಲಿ ಹುರುಳಿಲ್ಲ. ಸರಕಾರ ಕೆಲವು ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆ ದಿನಗಳಲ್ಲಿ ಮಾಂಸ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದೆ. ಆದರೆ ಮಾಂಸ ತಿನ್ನುವವ ಹೇಗೋ ತಿನ್ನುತ್ತಾನೆ. ಒಂದೆರಡು ದಿನ ಮುಂಚೆ ಮಾಂಸವನ್ನು ಮನೆಗೆ ಕೊಂಡು ಹೋಗಿ ಮಾಂಸ ರಹಿತ ದಿನದಂದೇ ತಿನ್ನುವುದನ್ನು ತಡೆಯಲು ಸಾಧ್ಯವೇ? ಇನ್ನು ಮಾಂಸ ರಹಿತ ದಿನವು ನಗರಕ್ಕೆ ಸೀಮಿತವಾಗಿದೆ. ಗ್ರಾಮಾಂತರ ಪ್ರದೇಶದ ಮಾಂಸದ ಅಂಗಡಿಗಳು ಎಂದಿನಂತೆ ತೆರೆದಿರುತ್ತದೆ. ಈ ತಾರತಮ್ಯವನ್ನು ಸರಕಾರವೇ ಹೋಗಲಾಡಿಸಬೇಕು.
►ರಿಕ್ಷಾ ಚಾಲಕರ ಸಂಘಟನೆಯಲ್ಲಿ ತೊಡಗಿಸಿಕೊಂಡ ತಾವು ರಿಕ್ಷಾ ಚಾಲಕರು ಎದುರಿಸುವ ಸಮಸ್ಯೆಯನ್ನು ಗುರುತಿಸುವಿರಾ?
ಕಳೆದ 7 ವರ್ಷದಿಂದ ರಿಕ್ಷಾ ಪ್ರಯಾಣ ಅಥವಾ ಬಾಡಿಗೆ ದರ ಹೆಚ್ಚಳವಾಗಿಲ್ಲ. ಪ್ರತೀ ಕಿ.ಮೀ.ಗೆ 25 ರೂ. ಇದ್ದುದು ಹಾಗೇ ಇದೆ. ದೇಶದ ಆರ್ಥಿಕ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ. ಇತರ ಕ್ಷೇತ್ರದಲ್ಲಿರುವಂತೆ ರಿಕ್ಷಾ ಚಾಲಕರು, ಮಾಲಕರು ಕೂಡ ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರ ಬದುಕು ಶೋಚನೀಯವಾಗಿದೆ. ಹಾಗಾಗಿ ರಿಕ್ಷಾ ಚಾಲಕರ ಕನಿಷ್ಠ ಪ್ರಯಾಣ ದರವನ್ನು 30ರೂ.ಗೆ ಏರಿಸುವ ಬೇಡಿಕೆಗೆ ಮೊದಲು ಆದ್ಯತೆ ನೀಡಬೇಕು. ಈ ಬಗ್ಗೆ ನಾವು ಈಗಾಗಲೆ ಜಿಲ್ಲಾಧಿಕಾರಿ ಸಹಿತ ಸಾರಿಗೆ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವೆ.
►ಅಸಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿರುವ ಬಗ್ಗೆ...
ಕಾನೂನು ಮೀರಿ ಯಾವುದೇ ಮೀನುಗಾರಿಕೆ ನಡೆಯಬಾರದು. ಇದು ಮೀನುಗಾರರು ಅಥವಾ ಅಧಿಕಾರಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಬಹುದು. ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಕೂಡ ಅಸಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ನ್ಯಾಯಬದ್ಧವಾಗಿ ನಡೆಸುವ ಮೀನುಗಾರರು ಕೂಡ ಜಿಲ್ಲಾಡಳಿತಕ್ಕೆ ಸಾಥ್ ನೀಡುತ್ತಿದ್ದಾರೆ.
►ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿರುವ ತಾವು ಅನೇಕ ಹೋರಾಟ-ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದೀರಿ. ಇದರಿಂದ ನ್ಯಾಯ ಸಿಕ್ಕಿದೆಯೇ ಅಥವಾ ಭವಿಷ್ಯದಲ್ಲಿ ಸಿಗಬಹುದು ಎಂಬ ವಿಶ್ವಾಸವಿದೆಯೇ?
ಆರಂಭದ ದಿನಗಳಲ್ಲಿ ನಡೆಸಿದ ಹೋರಾಟ- ಪ್ರತಿಭಟನೆಗೆ ನ್ಯಾಯ ಸಿಗುತ್ತಿತ್ತು. ಆದರೆ, ಈಗ ನ್ಯಾಯ ಮರೀಚಿಕೆಯಾಗುತ್ತಿದೆ. ಆದರೂ ಕೂಡ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ಜನರಲ್ಲಿದೆ ಎಂಬ ಸಂದೇಶವನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದ ತೃಪ್ತಿ ನನಗಿದೆ.