13 ಭಾರತೀಯ ನಗರಗಳಿಗೆ ಭೂಕಂಪದ ಹೆಚ್ಚಿನ ಅಪಾಯ: ಅಧ್ಯಯನ
file photo
ಹೊಸದಿಲ್ಲಿ,ಡಿ.15: ಮಹಾರಾಷ್ಟ್ರದ ರತ್ನಗಿರಿ ಮತ್ತು ಆಂಧ್ರಪ್ರದೇಶದ ವಿಜಯವಾಡ ಹಾಗೂ ಉತ್ತರ ಮತ್ತು ಈಶಾನ್ಯ ಭಾರತದಲ್ಲಿಯ ಇತರ 11 ನಗರಗಳು ಭೂಕಂಪ ಸಂಭವಿಸಿದ ಸಂದರ್ಭಗಳಲ್ಲಿ ಅತ್ಯಂತ ಹೆಚ್ಚಿನ ಸಾವುನೋವುಗಳ ಅಪಾಯವನ್ನು ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ ಎಂದು ನೂತನ ಅಧ್ಯಯನ ವರದಿಯೊಂದು ತಿಳಿಸಿದೆ.
ದೇಶಾದ್ಯಂತ ಭೂಕಂಪನ ಸಕ್ರಿಯ ವಲಯದಲ್ಲಿನ 50 ನಗರಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಈ ಅಧ್ಯಯನದಲ್ಲಿ 15 ನಗರಗಳು ಮಧ್ಯಮ ಅಪಾಯವನ್ನು ಎದುರಿಸುತ್ತಿರುವುದು ಕಂಡು ಬಂದಿದೆ.
ದೇಶದ ಶೇ.59ರಷ್ಟು ಭಾಗವು ಭೂಕಂಪಗಳಿಗೆ ಸುಲಭಭೇದ್ಯವಾಗಿದೆ ಎಂದಿರುವ ವರದಿಯು,ಭಾರತದಲ್ಲಿ ಈ ಹಿಂದೆ ಸಂಭವಿಸಿರುವ ಭೂಕಂಪಗಳಲ್ಲಿ ಶೇ.90ಕ್ಕೂ ಹೆಚ್ಚಿನ ಸಾವುನೋವುಗಳು ಕಟ್ಟಡಗಳ ಕುಸಿತದಿಂದ ಸಂಭವಿಸಿದ್ದವು ಮತ್ತು ಈ ಕಟ್ಟಡಗಳನ್ನು ಭೂಕಂಪದ ಆಘಾತಗಳನ್ನು ತಡೆದುಕೊಳ್ಳುವಂತೆ ನಿರ್ಮಿಸಲಾಗಿರಲಿಲ್ಲ ಎಂದು ಹೇಳಿದೆ.
ರಾಷ್ಟ್ರಿಯ ವಿಪತ್ತು ನಿರ್ವಹಣೆ ಪ್ರಾಧಿಕಾರವು ಐಐಐಟಿ-ಹೈದರಾಬಾದ್ನ ಸಹಯೋಗದೊಂದಿಗೆ ಅಭಿವೃದ್ಧಿ ಗೊಳಿಸಿರುವ ಭೂಕಂಪ ವಿಪತ್ತು ಅಪಾಯ ಸೂಚಿಯು ನಿರ್ದಿಷ್ಟ ಸ್ಥಳವೊಂದರಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ಮಾತ್ರವಲ್ಲ,ಅದರ ಪರಿಣಾಮಗಳಿಗೆ ಒಡ್ಡಿಕೊಳ್ಳುವ ಜನರ ಸಂಖ್ಯೆ ಮತ್ತು ನಗರದಲ್ಲಿಯ ಕಟ್ಟಡಗಳು ಕುಸಿತಕ್ಕೊಳಗಾಗುವ ಸಾಧ್ಯತೆ ಇವುಗಳನ್ನೂ ಪರಿಗಣಿಸುತ್ತದೆ. ಅಧ್ಯಯನವು ಪೂರ್ಣಗೊಳ್ಳಲು 13 ವರ್ಷಗಳ ಸಮಯವನ್ನು ತೆಗೆದುಕೊಂಡಿತ್ತು.
ಅಧ್ಯಯನಕ್ಕೆ ಆಯ್ದುಕೊಳ್ಳಲಾದ ನಗರಗಳು ಭೂಕಂಪನ ವಲಯ 4 ಅಥವಾ 5ರಲ್ಲಿರುವ ಹೆಚ್ಚಿನ ಜನಸಾಂದ್ರತೆಯ ಪ್ರದೇಶಗಳಲ್ಲಿವೆ. ಈ ಪ್ರದೇಶಗಳು ಭೂಕಂಪಗಳಿಗೆ ಹೆಚ್ಚು ಸುಲಭಭೇದ್ಯವಾಗಿವೆ ಎಂದು ಭಾರತೀಯ ಗುಣಮಟ್ಟಗಳ ಮಾನಕ ಸಂಸ್ಥೆಯು ಹೇಳಿದೆ.