ರಕ್ತಹೀನತೆ ಕಾರಣಗಳು ಮತ್ತು ಲಕ್ಷಣಗಳು
ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಕೆಂಪು ರಕ್ತಕಣಗಳಲ್ಲಿರುವ ಹಿಮೊಗ್ಲೋಬಿನ್ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನು ಮಾಡುತ್ತದೆ. ರಕ್ತಹೀನತೆಯುಂಟಾದಾಗ ರಕ್ತದ ಮೂಲಕ ಶರೀರದಾದ್ಯಂತ ಆಮ್ಲಜನಕ ಪೂರೈಕೆ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ಆರೋಗ್ಯಕರ ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ತಗ್ಗಿಸುವ ಅಥವಾ ಕೆಂಪು ರಕ್ತಕಣಗಳ ವಿಭಜನೆಯನ್ನು ಅಥವಾ ನಷ್ಟವನ್ನು ಹೆಚ್ಚಿಸುವ ಇತರ ಕಾಯಿಲೆಗಳಿಗೂ ಕಾರಣವಾಗುತ್ತದೆ.
ಆರೋಗ್ಯಕರ ಮಹಿಳೆಯಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 12 ಗ್ರಾಂ (ಜಿ/ಡಿಎಲ್) ಇರಬೇಕು ಹಾಗೂ ಪುರುಷರಲ್ಲಿ 13 ಜಿ/ಡಿಎಲ್ ಇರಬೇಕಾಗುತ್ತದೆ. ಆರು ತಿಂಗಳಿಗೂ ಕಡಿಮೆ ಪ್ರಾಯದ ಶಿಶುಗಳಿಗೆ ಪ್ರತಿದಿನ 0.27 ಮಿಲಿಗ್ರಾಂ ಕಬ್ಬಿಣ ಅಗತ್ಯವಾಗಿರುತ್ತದೆ.
ರಕ್ತಹೀನತೆಯು ಶರೀರದಲ್ಲಿ ಕಬ್ಬಿಣದ ಕೊರತೆಯೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ.
ರಕ್ತಹೀನತೆಗೆ ಕಾರಣಗಳು
ರಕ್ತಹೀನತೆಯನ್ನು ಅದರ ಕಾರಣಗಳನ್ನು ಅವಲಂಬಿಸಿ ಮೂರು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ರಕ್ತ ನಷ್ಟ ಅಥವಾ ಕಡಿಮೆ ಅಥವಾ ದೋಷಯುಕ್ತ ಕೆಂಪು ರಕ್ತಕಣಗಳ ಉತ್ಪಾದನೆ ಅಥವಾ ಕೆಂಪುರಕ್ತಕಣಗಳ ನಾಶ ಇವು ರಕ್ತಹೀನತೆಗೆ ಪ್ರಮುಖ ಕಾರಣಗಳಾಗಿವೆ. ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳ ಸೇವನೆ, ಜಠರಗರುಳು ಸಮಸ್ಯೆ, ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಸ್ಥಿಮಜ್ಜೆ ಮತ್ತು ಕಾಂಡಕೋಶ ಸಮಸ್ಯೆಗಳು, ನಿರೋಧಕ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ಯಾದಿಗಳೂ ರಕ್ತಹೀನತೆಗೆ ಕಾರಣವಾಗಿವೆ.
ಲಕ್ಷಣಗಳು:
ಎದೆನೋವು, ಬವಳಿ ಬರುವಿಕೆ, ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಬಳಲಿಕೆ, ನಿಶ್ಶಕ್ತಿ, ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ನಿಶ್ಶಕ್ತಿ, ಗುಲ್ಮ ದೊಡ್ಡದಾಗುವಿಕೆ, ಮಲದ ಬಣ್ಣದಲ್ಲಿ ಬದಲಾವಣೆ, ಅನಿಯಮಿತ ಹೃದಯಬಡಿತ, ತಲೆನೋವು, ಶರೀರವು ಪೇಲವಗೊಳ್ಳುವುದು, ಆ್ಯಂಜಿನಾ ಮತ್ತು ಹೃದಯಘಾತ ಇತ್ಯಾದಿಗಳು ರಕ್ತಹೀನತೆಯ ಲಕ್ಷಣಗಳಲ್ಲಿ ಸೇರಿವೆ.
ರಕ್ತಹೀನತೆಯನ್ನು ನಿಭಾಯಿಸುವುದು ಹೇಗೆ?
ರಕ್ತಹೀನತೆಯಿಂದ ಬಳಲುತ್ತಿರುವವರು ಕಬ್ಬಿಣ ಮತ್ತು ವಿಟಾಮಿನ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಹಸಿರು ಸೊಪ್ಪುಗಳು,ಒಣಹಣ್ಣುಗಳು ಮತ್ತು ಬೀಜಗಳು ಅಧಿಕ ಮಟ್ಟದಲ್ಲಿ ಕಬ್ಬಿಣವನ್ನು ಹೊಂದಿರುತ್ತವೆ. ವಿಟಾಮಿನ್ ಬಿ-12 (ಫಾಲಿಕ್ ಆ್ಯಸಿಡ್) ಪೂರಕ,ಮಾಂಸ ಇತ್ಯಾದಿಗಳನ್ನೂ ಸೇವಿಸಲು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುತ್ತಾರೆ. ಕಿತ್ತಳೆ ಜಾತಿಯ ಹಣ್ಣುಗಳು,ದ್ವಿದಳ ಧಾನ್ಯಗಳು ಮತ್ತು ಕಡುಹಸಿರು ಸೊಪ್ಪುಗಳೂ ಫಾಲಿಕ್ ಆ್ಯಸಿಡ್ ಅನ್ನು ಒಳಗೊಂಡಿರುತ್ತವೆ. ಕಬ್ಬಿಣಾಂಶವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದು ಅಪಾಯಕಾರಿಯಾಗುತ್ತದೆ ಎನ್ನುವುದು ಗಮನದಲ್ಲಿರಲಿ.
ರಕ್ತಹೀನತೆ ಅಥವಾ ಅನಿಮಿಯಾದಲ್ಲಿ ವಿವಿಧ ಬಗೆಗಳಿವೆ. ಹೀಗಾಗಿ ವೈದ್ಯರು ರೋಗಿಯನ್ನು ವಿವಿಧ ರಕ್ತ ರೋಗಗಳ ಕುರಿತು ಪ್ರಾವೀಣ್ಯ ಹೊಂದಿರುವ ಹೆಮಟಾಲಜಿಸ್ಟ್ ಅಥವಾ ರಕ್ತಶಾಸ್ತ್ರಜ್ಞರ ಬಳಿ ಕಳುಹಿಸಬಹುದು.
ರಕ್ತಹೀನತೆಯಿಂದ ಬಳಲುತ್ತಿರುವವರು ಇಡಿಯ ಧಾನ್ಯಗಳು, ಚಹಾ, ಕಾಫಿ, ಡೇರಿ ಉತ್ಪನ್ನಗಳು, ಟ್ಯಾನಿನ್ ಒಳಗೊಂಡಿರುವ ಕಾರ್ನ್, ದ್ರಾಕ್ಷಿಯಂತಹ ಆಹಾರಗಳು, ಪಾಸ್ತಾದಂತಹ ಗ್ಲುಟೆನ್ ಸಮೃದ್ಧವಾಗಿರುವ ಖಾದ್ಯಗಳು, ಬಾರ್ಲಿ, ಗೋದಿ, ಓಟ್ಸ್, ಇಡಿಯ ಗೋದಿಯ ಉತ್ಪನ್ನಗಳಂತಹ ಆಹಾರಗಳಿಂದ ದೂರವಿರಬೇಕು.
ಕಂದು ಅಕ್ಕಿಯಂತಹ ಫೈಟೇಟ್‌ಗಳು ಅಥವಾ ಫೈಟಿಕ್ ಆಮ್ಲವನ್ನೊಳಗೊಂಡ ಆಹಾರಗಳನ್ನೂ ರಕ್ತಹೀನತೆ ರೋಗಿಗಳು ಸೇವಿಸಬಾರದು. ನೆಲಗಡಲೆ, ಕೊತ್ತಂಬರಿ ಸೊಪ್ಪು ಮತ್ತು ಚಾಕಲೆೆಟ್‌ಗಳು ಆಕ್ಸಾಲಿಕ್ ಆಮ್ಲವನ್ನು ಒಳಗೊಂಡಿರುವುದರಿಂದ ಇವುಗಳಿಂದಲೂ ಇಂತಹ ರೋಗಿಗಳು ದೂರವಿರಬೇಕಾಗುತ್ತದೆ.