ಮದನಿ ದರ್ಗಾ ಆಡಳಿತ ಸಮಿತಿಯಿಂದ ವಕ್ಫ್ ಆಸ್ತಿ ಕಬಳಿಕೆ: ಆರೋಪ
ವಕ್ಫ್ ಸೊತ್ತು ಹಿತರಕ್ಷಣಾ ಸಮಿತಿಯಿಂದ ತನಿಖೆಗೆ ಆಗ್ರಹ
ಮಂಗಳೂರು, ಡಿ.18: ಉಳ್ಳಾಲ ಸೈಯದ್ ಮದನಿ ದರ್ಗಾ ಆಡಳಿತ ಸಮಿತಿಯಿಂದ ವಕ್ಫ್ ಆಸ್ತಿ ಕಬಳಿಕೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಂಡು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ವಕ್ಫ್ ಸೊತ್ತು ಹಿತರಕ್ಷಣಾ ಸಮಿತಿ ಉಳ್ಳಾಲ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂಭಾಗದಲ್ಲಿ ಬುಧವಾರ ಸಂಜೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಉಳ್ಳಾಲ ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಅಲ್ ಕಾಮಿಲ್, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಉಳ್ಳಾಲದ ಸೈಯದ್ ಮದನಿ ದರ್ಗಾವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ದರ್ಗಾ ಸಮಿತಿಯು ಮೂರುವರೆ ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಇದು ಸಂಪೂರ್ಣ ಅನಧಿಕೃತ ಸಂಸ್ಥೆಯಾಗಿದೆ. ವಕ್ಫ್ ಆಸ್ತಿ ಕಬಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸರಕಾರವು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶರೀಅತ್ನಲ್ಲಿ ವಕ್ಫ್ ಪಾವಿತ್ರತೆ ಹೊಂದಿದೆ. ಆಸ್ತಿಯೊಂದು ವಕ್ಫ್ಗೆ ಸೇರಿದರೆ ಅದು ಕೊನೆವರೆಗೂ ವಕ್ಫ್ನದ್ದೇ ಆಗಿರುತ್ತದೆ. ವಕ್ಫ್ಗೆ ಆಸ್ತಿ ದಾನ ಮಾಡಿದ ವ್ಯಕ್ತಿ ಮೃತಪಟ್ಟ ಬಳಿಕ ಅದು ಆತನ ಕುಟುಂಬಸ್ಥರಿಗೆ ಸಿಗುವುದಿಲ್ಲ. ಅಂಥವರಿಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ವಕ್ಫ್ ಆಸ್ತಿ ವಿಷಯದಲ್ಲಿ ಯಾವುದೇ ವ್ಯಕ್ತಿ ಹಸ್ತಕ್ಷೇಪ ನಡೆಸುವಂತಿಲ್ಲ. ಆಸ್ತಿಯನ್ನು ಯಾರೂ ಖರೀದಿಸುವಂತಿಲ್ಲ; ಮಾರಾಟ ಮಾಡುವಂತಿಲ್ಲ. ವಕ್ಫ್ ಆಸ್ತಿ ದುರ್ಬಳಕೆ ಮಾಡಬಾರದೆಂದು ಪ್ರವಾದಿ ಮುಹಮ್ಮದ್ ಅವರೇ ಸ್ಪಷ್ಟಪಡಿಸಿದ್ದಾರೆ. ಇಂತಹದ್ದರಲ್ಲಿ ವಕ್ಫ್ ಆಸ್ತಿಯಲ್ಲಿ ಅಕ್ರಮ ನಡೆದಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಖಂಡಿಸಿದರು.
ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಮದನಿ ನಗರ ಮದ್ರಸ ಸದರ್ ಮುಅಲ್ಲಿಂ ಅಯ್ಯೂಬ್, ವಕ್ಫ್ ಸಂರಕ್ಷಣಾ ಸಮಿತಿ ಅಧ್ಯಕ್ಷ ರಿಯಾಝ್ ಅಲೆಕಳ, ಮುಸ್ತಫಾ ಮದನಿ ಮೇಲಂಗಡಿ, ಹಮೀದ್ ಮಂಚಿಲ, ಸೈಯದ್ ತಂಙಳ್, ಇಸ್ಮಾಯೀಲ್ ಮದನಿ ಮೊರಾಕ್ಕೊ ಮತ್ತಿತರರು ಉಪಸ್ಥಿತರಿದ್ದರು. ಮುಹಮ್ಮದ್ ತಾಜುದ್ದೀನ್ ನಿರೂಪಿಸಿ, ವಂದಿಸಿದರರು.