ಜಲಿಯನ್ವಾಲಾಬಾಗ್ ಮರು ಸೃಷ್ಟಿ ಗೆ ಯತ್ನ?
ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಾಲೆಯೊಂದರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮರುಸೃಷ್ಟಿಸಲಾಯಿತು. ಸುಪ್ರೀಂಕೋರ್ಟ್ ಮಹಾಪರಾಧ ಎಂದು ಕರೆದ ಈ ಪ್ರಕರಣದ ಮರುಸೃಷ್ಟಿ ನಡೆದದ್ದು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಸರಕಾರಿ ಗಣ್ಯರ ಸಮ್ಮುಖದಲ್ಲಿ. ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು, ಆ ಶಾಲೆಯ ಪರವಾನಿಗೆಯನ್ನು ವಜಾಗೊಳಿಸಬೇಕಾದ ಪ್ರಕರಣ ಇದು. ಆದರೆ ಪೊಲೀಸರು ಈ ಬಗ್ಗೆ ನಿಗೂಢ ವೌನವನ್ನು ತಾಳಿದರು. ಕಟ್ಟಕಡೆಗೆ ಸಾರ್ವಜನಿಕರೇ ಇದರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಬೇಕಾಯಿತು. ದೂರು ದಾಖಲಾಗಿದೆಯಾದರೂ, ಸಂಬಂಧಪಟ್ಟ ಸಂಸ್ಥೆಯ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅದೇ ಪೊಲೀಸ್ ಇಲಾಖೆ, ಇದೀಗ ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಂದು ಹಾಕಿದೆ.
ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿಲೇಳುತ್ತಿದೆ. ಈ ಪ್ರತಿಭಟನೆಯನ್ನು ‘ಬಟ್ಟೆ ನೋಡಿ’ ವ್ಯಾಖ್ಯಾನಿಸಲು ಹೊರಟ ಪ್ರಧಾನಮಂತ್ರಿಯ ಲೆಕ್ಕಾಚಾರಗಳೂ ತಲೆಕೆಳಗಾಗುವಂತೆ ಜಾತಿ ಧರ್ಮ ಮೀರಿ ಜನರು ಪ್ರತಿಭಟನೆಗಳಲ್ಲಿ ಒಂದಾಗುತ್ತಿದ್ದಾರೆ. ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಲಾಠಿ ಮತ್ತು ಗೋಲಿಬಾರ್ಗಳ ಮೂಲಕ ದಮನಿಸಲು ಯತ್ನಿಸಿದರೂ ಹೋರಾಟದ ಕಾವು ನಿಂತಿಲ್ಲ. ಪೊಲೀಸರೇ ಹಿಂಸಾಚಾರಗಳನ್ನು ನಡೆಸಿ ಅದನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ತಲೆಕಟ್ಟಲು ಯತ್ನಿಸಿದ ಸಂಚೂ ವಿಫಲವಾಯಿತು. ಇದೀಗ ಪ್ರತಿಭಟನೆ ದಕ್ಷಿಣ ಭಾರತ ಮಾತ್ರವಲ್ಲ, ಕರ್ನಾಟಕಕ್ಕೂ ಕಾಲಿಟ್ಟಿದೆ.
ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ದೇಶಕ್ಕೆ ಹೊಸತಲ್ಲ. ರೈತರ ಸಂಕಟಗಳ ವಿರುದ್ಧ, ಪೆಟ್ರೋಲ್ ಬೆಲೆಯೇರಿಕೆಯಾದಾಗಲೆಲ್ಲ ಜನರು ಬೀದಿಗಿಳಿದಿದ್ದಾರೆ. ರೈತ ಸಂಘ, ಕಾರ್ಮಿಕ ಸಂಘಟನೆಗಳೆಲ್ಲ ಇಂತಹ ಪ್ರತಿಭಟನೆಯ ಮೂಲಕವೇ ಅರಳಿಕೊಂಡವುಗಳು. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ. ಈ ದೇಶದ ಕೋಟ್ಯಂತರ ಜನರ ಬದುಕಿನ ಅಳಿವುಉಳಿವುಗಳನ್ನು ನಿರ್ಧರಿಸುವ ಒಂದು ನೀತಿಯ ವಿರುದ್ಧ ದೇಶದ ಜನರು ಧ್ವನಿಯೇ ಎತ್ತ ಬಾರದು ಎಂದರೆ, ಇದನ್ನು ಪ್ರಜಾಸತ್ತಾತ್ಮಕ ಸರಕಾರ ಎಂದು ಕರೆಯುವುದು ಹೇಗೆ? ಸರಕಾರ ತನ್ನ ನೀತಿಯ ವಿರುದ್ಧ ಪ್ರತಿಭಟಿಸಬಾರದು ಎಂದು ಪೊಲೀಸ್ ಇಲಾಖೆಗಳ ಮೂಲಕ ಬಲ ಪ್ರಯೋಗಿಸುವುದೇ ಸಿಎಎ ಮಸೂದೆಯ ಸಂವಿಧಾನ ವಿರೋಧಿ ಗುಣ ಲಕ್ಷಣಗಳನ್ನು ಹೇಳುತ್ತದೆ.
ಸಿಎಎಯ ಪರಿಣಾಮ ಉತ್ತರ ಭಾರತದಲ್ಲಿ ಬೀರಿದಷ್ಟು ಕರ್ನಾಟಕದಲ್ಲಿ ಬೀರಲಾರದು. ಆದರೆ ನಾಡಿನ ಎಲ್ಲ ಮತಧರ್ಮೀಯರೂ ತಮ್ಮ ಪೌರತ್ವವನ್ನು ಸಾಬೀತು ಪಡಿಸಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನರೂ ಅದರ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಕರ್ನಾಟಕದ ಜನರು ಎಂದಿಗೂ ಹಿಂಸೆಯ ಪರವಾಗಿರುವ ಜನರಲ್ಲ. ಅದೆಷ್ಟು ಲಕ್ಷ ಜನ ಸೇರಿದರೂ ಇಲ್ಲಿ ಹಿಂಸಾಚಾರ ನಡೆದಿಲ್ಲ. ಆದರೆ ಈ ಬಾರಿ ಜನರು ಪ್ರತಿಭಟಿಸಲಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಪ್ರತಿಭಟನೆಗಳನ್ನು ಸಂಪೂರ್ಣ ನಿರಾಕರಿಸಲಾಯಿತು. ಬೆಂಗಳೂರಿನಲ್ಲಿ ಜನರು ತಂಡೋಪತಂಡವಾಗಿ ಪ್ರತಿಭಟನೆಗಿಳಿದಂತೆಯೇ ಪೊಲೀಸರು ಅವರನ್ನು ಬಲವಂತವಾಗಿ ಜೈಲಿಗೆ ತಳ್ಳಿದರು. ರಾಮಚಂದ್ರ ಗುಹಾರಂತಹ ಹಿರಿಯ ಚಿಂತಕರನ್ನೂ ಬಿಡದೇ ಪೊಲೀಸರು ಎಳೆದೊಯ್ದರು. ಆದರೆ ಜನರು ಸಾಗರೋಪಾದಿಯಾಗಿ ಬಂದು ಸೇರಿದಂತೆಯೇ ಪೊಲೀಸರು ಅಸಹಾಯಕರಾದರು. ಆದರೂ ಬೆಂಗಳೂರಿನಲ್ಲಿ ಪ್ರತಿಭಟನಾಕಾರರು ಯಾವುದೇ ಹಿಂಸೆಗಿಳಿಯಲಿಲ್ಲ ಎನ್ನುವುದು ಗಮನಾರ್ಹವಾಗಿದೆ.
ಆದರೆ ಮಂಗಳೂರಿನಲ್ಲಿ ತದ್ವಿರುದ್ಧವಾದುದು ನಡೆಯಿತು. ಇಲ್ಲಿ ಸಣ್ಣ ಸಂಖ್ಯೆಯ ಹೆಚ್ಚೆಂದರೆ ಒಂದಿನ್ನೂರು ಮಂದಿ ಪ್ರತಿಭಟನೆಗಾಗಿ ಸೇರಿದ್ದರು. ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯ ಜನರನ್ನು ಪೊಲೀಸರಿಗೆ ನಿಯಂತ್ರಿಸಲು ಸಾಧ್ಯವಾಯಿತು. ಆದರೆ ಮಂಗಳೂರಿನ 200ರಷ್ಟಿದ್ದ ಜನರನ್ನು ಪೊಲೀಸರಿಗೆ ಯಾಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ? ಕನಿಷ್ಠ ಶಾಂತವಾಗಿ ಪ್ರತಿಭಟಿಸಲು ಅವಕಾಶ ನೀಡಿದ್ದರೂ ಮಂಗಳೂರಿನಲ್ಲಿ ಯಾವುದೇ ಹಿಂಸಾಚಾರಗಳು ಸಂಭವಿಸುತ್ತಿರಲಿಲ್ಲ. ಆದರೆ ಪ್ರತಿಭಟನೆ ಶಾಂತವಾಗಿರುವುದೇ ಪೊಲೀಸರಿಗೆ ಇಷ್ಟವಿಲ್ಲವೇನೋ ಎಂಬಂತೆ ಅವರು ವರ್ತಿಸಿದರು. ಪ್ರತಿಭಟನಾಕಾರರು ಹಿಂಸೆಗೆ ಸಿದ್ಧರಾಗಿ ಬಂದಿದ್ದಾರೆಯೋ ಇಲ್ಲವೋ, ಆದರೆ ಪೊಲೀಸರು ಸಿದ್ಧರಾಗಿ ಬಂದಂತೆಯೇ ಇತ್ತು. ಒಂದು ಗುಂಪು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಪ್ರತಿಭಟನಾಕಾರರು ಮಾತ್ರವಲ್ಲದೆ, ಅಮಾಯಕರ ಮೇಲೂ ಯದ್ವಾತದ್ವಾ ಲಾಠಿಗಳನ್ನು ಬೀಸತೊಡಗಿದರು. ಅತ್ಯಂತ ವಿಷಾದನೀಯವೆಂದರೆ, ಪೊಲೀಸರ ಗೋಲಿಬಾರ್ಗೆ ಎರಡು ಜೀವಗಳು ಬಲಿಯಾದವು.
ಪ್ರತಿಭಟನಾಕಾರರ ವಿರುದ್ಧ ಲಾಠಿ ಬಳಸಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ಆದೇಶ ನೀಡಿದ್ದರು. ಬೆಂಗಳೂರಿನಲ್ಲಿ ಪ್ರತಿಭಟನಾಕಾರರು ಯಾವುದೇ ಹಿಂಸೆ ನಡೆಸದೇ ಇದ್ದರೂ ಅವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದರು. ದಕ್ಷಿಣ ಕನ್ನಡದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ, ಗೋಲಿಬಾರ್ ನಡೆಸಿ ಎರಡು ಜೀವಗಳನ್ನು ಆಹುತಿ ತೆಗೆದುಕೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಲೇ ಬೇಕಾದಂತಹ ಸನ್ನಿವೇಶ ಸೃಷ್ಟಿಯಾದದ್ದು ಹೇಗೆ? ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಯಾವುದೇ ಮಾರಾಕಾಸ್ತ್ರಗಳನ್ನು ಹೊಂದಿರಲಿಲ್ಲ. ಘೋಷಣೆ ಕೂಗಿದಾಕ್ಷಣ ಪೊಲೀಸರು ಯದ್ವಾತದ್ವಾ ಲಾಠಿಗಳನ್ನು ಬಳಸುವುದಕ್ಕೆ ಹಕ್ಕುಗಳನ್ನು ನೀಡಿದವರು ಯಾರು? ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸದೇ ನೇರವಾಗಿ ಪ್ರತಿಭಟನಾಕಾರರ ಎದೆಗೆ ಗುಂಡಿಟ್ಟಿದ್ದಾರೆ. ಅಸ್ಸಾಮಿನಲ್ಲಿ ಕೂಡ ಪೊಲೀಸರು ಇಷ್ಟೊಂದು ಬರ್ಬರವಾಗಿ ವರ್ತಿಸಿಲ್ಲ. ಅಂದರೆ ಪೊಲೀಸರು ಇಂತಹದೊಂದು ಹಿಂಸಾಚಾರಕ್ಕೆ ಸಿದ್ಧರಾಗಿಯೇ ಬಂದಿದ್ದರೇ? ಎನ್ನುವ ಅನುಮಾನ ಕಾಡುತ್ತದೆ. 200ರಷ್ಟು ಮಂದಿ ಸೇರಿ ನಾಲ್ಕು ಘೋಷಣೆಗಳೊಂದಿಗೆ ಮುಗಿಯಬಹುದಾದ ಪ್ರತಿಭಟನೆಯನ್ನು ರಾಡಿ ಎಬ್ಬಿಸಿ ದೊಂಬಿಯಾಗಿ ಪರಿವರ್ತಿಸಿದ ಹೆಗ್ಗಳಿಕೆಗಾಗಿ ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.
ಈ ದೇಶವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ ಸರಕಾರ ಆಳುತ್ತಿದೆಯೇ ಎಂದು ಅನುಮಾನ ಪಡುವಷ್ಟು ಆತಂಕಕಾರಿ ಬೆಳವಣಿಗೆಗಳು ದೇಶದೊಳಗೆ ನಡೆಯುತ್ತಿವೆ. ಪೊಲೀಸ್ ಅಧಿಕಾರಿಗಳ ಎದುರೇ ಶಾಲೆಯೊಂದರಲ್ಲಿ ಬಾಬರೀ ಮಸೀದಿ ಧ್ವಂಸದ ಮರು ಸೃಷ್ಟಿ ನಡೆಯುತ್ತದೆ, ಮಗದೊಂದೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನೇರವಾಗಿ ಗುಂಡಿಕ್ಕುತ್ತಾರೆ. ಈ ದೇಶದಲ್ಲಿ ಇನ್ನೊಂದು ‘ಜಲಿಯನ್ ವಾಲಾಬಾಗ್’ ಹತ್ಯಾಕಾಂಡವನ್ನು ಮರು ಸೃಷ್ಟಿಸಲು ಪೊಲೀಸ್ ನೇತೃತ್ವದಲ್ಲೇ ಸರಕಾರ ಯತ್ನಿಸುತ್ತಿದೆಯೆ? ಎಂಬ ಸಂಶಯ ದೇಶವನ್ನು ಕಾಡತೊಡಗಿದೆ. ಈ ದೇಶ ಆರ್ಥಿಕವಾಗಿ ಕುಸಿದು ಕೂತಿದೆ. ಅದನ್ನು ಮೇಲೆತ್ತಲು ವಿಫಲವಾಗಿರುವ ಸರಕಾರ ವಿಷಯಾಂತರ ಮಾಡಲು ಸಿಎಎ ಜಾರಿಗೊಳಿಸಿ ಜನರ ಆಕ್ರೋಶದ ದಿಕ್ಕನ್ನು ತಿರುಗಿಸಿದೆ. ಆದರೆ ಇದರಿಂದ ದೇಶದ ಆರ್ಥಿಕ ಸಮಸ್ಯೆಗಳು ಮುಚ್ಚಿ ಹೋಗುವುದಿಲ್ಲ. ದೇಶದಲ್ಲಿ ಅರಾಜಕತೆ ಹೆಚ್ಚಿದಂತೆಯೇ ಆರ್ಥಿಕವಾಗಿ ಇನ್ನಷ್ಟು ದಿವಾಳಿಯಾಗುತ್ತದೆ. ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಹೊರಟವರು, ಭಾರತವನ್ನು ಇನ್ನೊಂದು ಉಗಾಂಡವನ್ನಾಗಿಸುತ್ತಿದ್ದಾರೆ. ಭಾರತ ಈವರೆಗೆ ನಮ್ಮನ್ನು ಉಳಿಸಿ ಬೆಳೆಸಿದೆ. ಆ ಭಾರತವನ್ನು ಉಳಿಸುವುದಕ್ಕಾಗಿ ಸಕಲರು ಜಾತಿ ಧರ್ಮ ಬದಿಗಿಟ್ಟು ಒಂದಾಗುವ ದಿನ ಬಂದಿದೆ.