varthabharthi


ಅಂಬೇಡ್ಕರ್ ಚಿಂತನೆ

ಅಪರಾಧಿಗೆ ನೀಡಿದ ಶಿಕ್ಷೆಯನ್ನು ಸ್ಥಗಿತಗೊಳಿಸಿ, ಕಾಯ್ದೆಯನ್ನು ಉಲ್ಲಂಘಿಸದಿರಿ

ವಾರ್ತಾ ಭಾರತಿ : 20 Dec, 2019

ಜಾಧವಜಿ ಗಾಂಧಿ ಮತ್ತು ಧೀರಜಲಾಲ ಎಂಬಿಬ್ಬರು ಧನವಂತ ಜೂಜುಕೋರರಿಗೆ ಮುಂಬೈ ಹೈಕೋರ್ಟು ನೀಡಿದ ಸೆರೆಯ ಶಿಕ್ಷೆಯನ್ನು ತನ್ನ ಅಧಿಕಾರದಿಂದ ಸ್ಥಗಿತಗೊಳಿಸಿದ ಸರಕಾರ ನ್ಯಾಯದಾನದ ಕಾರ್ಯದಲ್ಲಿ ಆಕ್ಷಮ್ಯ ಹಸ್ತಕ್ಷೇಪ ಮಾಡಿತು. ಈ ಬಗೆಗೆ ಮುಂಬೈ ಸರಕಾರದ ಗೃಹಮಂತ್ರಿಗಳಾದ ಮುಸ್ಕಿಯ ವಿರುದ್ಧ ನಿಂದನಾ ಗೊತ್ತುವಳಿಯನ್ನು ಲೆಜಿಸ್ಲೆಟಿವ್ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು.

ಈ ಸೂಚನೆಯ ಸಮರ್ಥನೆಗಾಗಿ ಸ್ವತಃ ಬ್ಯಾ. ಜಮನಾದಾಸ ಮೆಹ್ತಾ ಮತ್ತು ಖ್ಯಾತಕಾಯ್ದೆ ಪಂಡಿತ ಮತ್ತು ಅಸೆಂಬ್ಲಿಯ ಸ್ವತಂತ್ರ ಕಾರ್ಮಿಕ ಪಕ್ಷದ ನಾಯಕರಾದ ಬ್ಯಾ. ಬಿ.ಆರ್. ಅಂಬೇಡ್ಕರ್ ಅವರು ವಿಸ್ತೃತವಾದ ಭಾಷಣವನ್ನು ಮಾಡಿದರು. ಡಾ. ಅಂಬೇಡ್ಕರ ಅವರು ದಿ. 7 ಮಾರ್ಚ್ 1938ರಂದು ಮಾಡಿದ ಭಾಷಣ--
ಅಧ್ಯಕ್ಷ ಮಹಾಶಯರೆ, ನಾನು ಈ ಗೊತ್ತುವಳಿಯನ್ನು ಬೆಂಬಲಿಸಲು ಎದ್ದುನಿಂತಿದ್ದೇನೆ. ಚರ್ಚೆಯ ಕೊನೆಗೆ ಈ ಗೊತ್ತುವಳಿಯ ಮೇಲೆ ನಾನು ಮಾತಾಡುತ್ತಿರುವುದರಿಂದ ಮತ್ತು ಗೃಹಮಂತ್ರಿಗಳಿಗೆ ಉತ್ತರ ನೀಡಲು ಅವಕಾಶ ನೀಡಬೇಕಾಗಿರುವುದರಿಂದ, ನಾನು ಸ್ವಲ್ಪದರಲ್ಲಿ ನನ್ನ ಮಾತು ಮುಗಿಸುತ್ತೇನೆ.
ನಾನು ಹೇಳಲಿರುವ ಮೊದಲ ಸಂಗತಿಯೆಂದರೆ, ಯಾವ ಕೃತಿಗಾಗಿ ನಿಂದಾವಾಚಕ ಗೊತ್ತುವಳಿಯನ್ನು ಮಂಡಿಸಲಾಗಿದೆಯೋ, ನಡೆದ ಅಂತಹ ಘಟನೆಯ ಬಗ್ಗೆ ನನಗೆ ಕಿಂಚಿತ್ತೂ ವಿಸ್ಮಯವೆನಿಸುತ್ತಿಲ್ಲ.

ಸದ್ಯದ ಸರಕಾರವು ಅಧಿಕಾರವನ್ನು ಸ್ವೀಕರಿಸಿದಂದಿನಿಂದ ಕಾಯ್ದೆಭಂಗದಲ್ಲಿ ನಿಸ್ಸಂದೇಹವಾಗಿಯೂ ಸೇರ್ಪಡೆ ಮಾಡಬಹುದಾದಂತಹ ಹಲವು ಕೃತಿಗಳನ್ನು ಈ ಸರಕಾರವು ಮಾಡುತ್ತ ಬಂದಿದೆ. ಅವರ ಈ ಕೃತಿಯಂತೂ ಶಿಖರ ಪ್ರಾಯವೇ ಎನ್ನಲಡ್ಡಿಯಿಲ್ಲ ಎಂದೇ ನನ್ನ ಭಾವನೆ.
ಆದಾಗ್ಯೂ, ಈ ಸಂಪೂರ್ಣ ಕಾರ್ಯದ ಒಂದು ಭಾಗವು ನಡೆದ ನಾಟಕದ ಒಂದು ಅಂಕದಂತಿದೆ. ಅದು ಎಂದು ಕೊನೆಗೊಳ್ಳುವುದೋ ತಿಳಿಯದು, ಅದರಲ್ಲಿಯ ಮೊದಲ ಕೃತಿಯೆಂದರೆ ಬಾರ್ಡೊಲಿಯ ರೈತರ ಜಪ್ತಿ ಮಾಡಿದ ಭೂಮಿಯನ್ನು ಮರಳಿ ಕೊಡಿಸುವ ಗಂಡಾಂತರವನ್ನು ಸರಕಾರ ಹೊತ್ತಿದ್ದು. (ಒಬ್ಬ ಸದಸ್ಯ ನಡುವೆಯೇ ಎದ್ದು ಮಾತಾಡಲು ಪ್ರಯತ್ನಿಸುತ್ತಾನೆ). ನನಗಿರುವುದು ಕೆಲವೇ ಸಮಯ, ಹೀಗಾಗಿ ನನ್ನ ಭಾಷಣವನ್ನು ಸರಿಯಾಗಿ ಆಲಿಸಬೇಕೆಂದು ವಿನಂತಿಸುತ್ತೇನೆ.
ಅಪರಾಧಿಗೆ ನೀಡಿದ ಶಿಕ್ಷೆಯನ್ನು ಸ್ಥಗಿತಗೊಳಿಸುವುದೆಂದರೆ ಕಾಯ್ದೆಯನ್ನು ಉಲ್ಲಂಘಿಸಿದಂತೆಯೇ.
ಅಧ್ಯಕ್ಷ: ಆರ್ಡರ್, ಆರ್ಡರ್ ಸಚಿವರೇ ಕೆಳಗೆ ಕೂರುತ್ತೀರಾ? (ಡಾ. ಅಂಬೇಡ್ಕರರಿಗೆ) ಈ ಬಗ್ಗೆಯ ಚರ್ಚೆಯನ್ನು ಮುಂದುವರಿಸಿದರೆ ಅದು ಸತತ ಬೆಳೆಯುವ ಭೀತಿ ನನಗೆ ಕಾಡುತ್ತಿದೆ. ಸರಕಾರದ ಗತ ಕಾರ್ಯದ ಬಗೆಗೆ ಅದು ಹೇಗೆ ದೋಷಿಯೋ ಅಲ್ಲವೋ ಎನ್ನುವುದು ಸದ್ಯದ ವಿಷಯವಲ್ಲ. ಪ್ರಸ್ತುತ ಗೊತ್ತುವಳಿ ವಿಷಯವಾದ ವಿಶಿಷ್ಟ ಕೃತಿಯ ನಿಷೇಧಾರ್ಹವೋ ಅಲ್ಲವೋ ಎನ್ನುವುದರ ವಾದದ ವಿಷಯ. ತಕ್ಷಣದ ಸಾರ್ವಜನಿಕ ಮಹತ್ವದ ನಿಯಮದ ವಿಷಯಕ್ಕೆ ಈ ಗೊತ್ತುವಳಿಯು ಸಂಬಂಧ ಹೊಂದಿದೆ. ಗೊತ್ತುವಳಿಗೆ ಅನುಮತಿ ಪಡೆಯಲು ಕಾರಣಿಭೂತವಾದ ನಿಯಮವನ್ನು ವಾದದಲ್ಲೂ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಸಭೆಯ ಎದುರಿಗೆ ಬಂದ ನಿಯಮದ ವಿಷಯದ ಬಗ್ಗೆ ಮಾತಾಡಬೇಕೆಂದು ನಾನು ಸಚಿವರಲ್ಲಿ ವಿನಂತಿಸಿಕೊಳ್ಳುತ್ತೇನೆ.
ಡಾ. ಅಂಬೇಡ್ಕರ್: ಅಧ್ಯಕ್ಷರೇ, ತಮ್ಮೆದುರಿಗೆ ಈ ವಿಷಯವನ್ನು ಮಂಡಿಸಲು ನಾನು ಅನುಮತಿಯನ್ನು ಪಡೆಯುತ್ತಿದ್ದೇನೆ. ತುಲನೆ ಮಾಡಲು ಒಂದು ವಿಷಯವನ್ನು ಹೇಳುವುದಕ್ಕೂ ಮತ್ತು ಅದರ ಉಚಿತತೆ-ಅನುಚಿತತೆಯನ್ನು ನಿರ್ಧರಿಸುವ ದೃಷ್ಟಿಯಿಂದ ಚರ್ಚೆಗೆ ಅದನ್ನು ಬಳಸುವುದಕ್ಕೂ ವ್ಯತ್ಯಾಸವಿದೆ. ಬಾರ್ಡೊಲಿಯ ಜಪ್ತಿಗೊಂಡ ಭೂಮಿಯನ್ನು ಮರಳಿ ನೀಡುವ ಬಗೆ ಸರಿಯೋ, ತಪ್ಪೋ ಎಂಬುವುದನ್ನು ಚರ್ಚೆ ಮಾಡಿದ್ದರೆ ನಿಮ್ಮ ಮಾತು ಖಂಡಿತವಾಗಿಯೂ ನನಗೆ ಅನ್ನಿಸುತ್ತಿತ್ತು. ಆದರೆ ಸರಕಾರ ಮಾಡಿದ ಗತಕೃತಿಯ ಶಿಖರ ಸ್ಥಿತಿಯನ್ನು ಸದ್ಯದ ಕೃತಿಯು ತಲುಪಿದೆ. ಅದರ ಬಗೆಗೆ ಹೇಳಿದ ಅಥವಾ ಸರಿಯೋ, ತಪ್ಪೋ ಎಂದು ಕೇವಲ ನಿರ್ದೇಶನ ಮಾಡಿದ ಮಾತ್ರಕ್ಕೆ ನಿಯಮವನ್ನು ಭಂಗಗೊಳಿಸಿದಂತಾಗುವುದಿಲ್ಲ.
ಅಧ್ಯಕ್ಷ: ನಿಯಮದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಸಭೆಯ ಎದುರಿಗಿದೆ. ಬೇರೆ ವಿಷಯವನ್ನು ಹೇಳುವುದರಿಂದ ಮತ್ತೊಂದು ವಿಷಯ ಚರ್ಚೆಗೆ ಬರಬಹುದೆಂಬ ಕಾರಣಕ್ಕೆ ಸ್ಥೂಲವಾಗಿದ್ದರೂ ಇತರ ವಿಷಯದ ಬಗೆಗೆ ನಿರ್ದೇಶ ಮಾಡಲು ಮುಕ್ತ ಅವಕಾಶ ನೀಡುವುದು ಯೋಗ್ಯವೆಂದು ನನಗನಿಸುತ್ತದೆ.
ಡಾ. ಅಂಬೇಡ್ಕರ್:  ಹಾಗಾದರೆ ಸಭೆಯ ಎದುರಿಗಿರುವ ವಿಷಯವನ್ನಷ್ಟೇ ನಾನು ಪ್ರಸ್ತಾಪ ಮಾಡುತ್ತೇನೆ. ಮೊದಲನೆಯದೆಂದರೆ, ಈ ಮೊಕದ್ದಮೆಗೆ ಸಂಬಂಧಿಸಿದ ವಿಷಯವೆಲ್ಲ ನಿಮಗೆ ಗೊತ್ತಿಲ್ಲ. ಗೊತ್ತಿರುವುದು ಕೇವಲ ಪತ್ರಿಕಾ ವರದಿಯನ್ನು ಆಧರಿಸಿದೆ. ನಿಯಮ ಬದ್ಧವಾದ ಪುರಾವೆ ನಮ್ಮೆದುರಿಗಿಲ್ಲ. ಈ ಖಟ್ಲೆಗೆ ಸಂಬಂಧಿಸಿದ ಸತ್ಯ ಸಂಗತಿಯನ್ನು ಸಭೆಯ ಎದುರಿಗಿಡುವಂತೆ ಗೃಹಮಂತ್ರಿಗಳಿಗೆ ವಿನಂತಿ ಮಾಡಿಕೊಳ್ಳಲಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅದರಿಂದಾಗಿ ನಾನೂ ಉಳಿದ ಸದಸ್ಯರೂ ತುಂಬ ದೊಡ್ಡ ಅಡಚಣೆಯನ್ನು ಎದುರಿಸಬೇಕಾಗಿದೆ. ಪ್ರಾಯಃ ಈ ಸತ್ಯಸಂಗತಿಯು ಕೊನೆಗೆ ಬೆಳಕಿಗೆ ಬಂದಾಗ ಪ್ರಸ್ತುತ ಈ ಚರ್ಚೆಯ ಅನಾವಶ್ಯಕವೆಂದು ಅನಿಸಿದರೆ, ಅದರ ಸಂಪೂರ್ಣ ಹೊಣೆಯು ಗೃಹಮಂತ್ರಿಯ ತಲೆಯ ಮೇಲೆ ಬೀಳುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. ಏಕೆಂದರೆ ಸಭೆಯನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಸ್ತುತ ಪ್ರಕರಣದಲ್ಲಿಯ ಸಂಪೂರ್ಣ ವಿವರವನ್ನು ಮಂಡಿಸಲು ಅವರೇ ನಿರಾಕರಿಸಿದ್ದಾರೆ. ಅವರದನ್ನು ಹಾಗೆ ಮಂಡಿಸಿದ್ದರೆ, ಗೊತ್ತುವಳಿಯ ಪ್ರವರ್ತಕರು ಅದನ್ನು ಪ್ರಾಯಃ ಹಿಂದಕ್ಕೆ ಪಡೆಯುತ್ತಿದ್ದರು. ಇಲ್ಲವೇ ಪ್ರಾಯಃ ಇತರ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಲು ತಮಗೆ ಇಚ್ಛೆಯಿಲ್ಲ ಎಂದು ಹೇಳುತ್ತಿದ್ದರು. ಆದರೆ ಗೃಹಮಂತ್ರಿಗಳು ಹಾಗೇನೂ ಮಾಡದೆ ಇರುವುದರಿಂದ ಈ ಚರ್ಚೆ ಒಂದು ವೇಳೆ ವ್ಯರ್ಥ ಎಂದೇನಾದರೂ ಅನಿಸಿದರೆ, ಅದಕ್ಕೆ ಮೇಲೆ ಹೇಳಿದಂತೆ ಗೃಹಮಂತ್ರಿಗಳೇ ಹೊಣೆಯಾಗುತ್ತಾರೆ. ವೃತ್ತಪತ್ರಿಕೆಯಲ್ಲಿ ಲಭ್ಯವಿದ್ದ ಮಾಹಿತಿಯ ಮೇರೆಗೆ ಎದುರಿಗೆ ಗೋಚರಿಸುವ ಪ್ರಮುಖ ಸಂಗತಿ ಎಂದರೆ, ಅಪರಾಧಿಯ ಶಿಕ್ಷೆಯನ್ನು ತಡೆಹಿಡಿಯಲು ಯೋಗ್ಯ ಎನಿಸಬಹುದಾದ ಏನಾದರೂ ಸಮರ್ಥನಿಯವಾದ ಕಾರಣ ಸಭೆಗೆ ಲಭಿಸಿದೆಯೇ? ಗೃಹಮಂತ್ರಿಗಳು ಹೇಳುವುದೇನೆಂದರೆ. ಹೈಕೋರ್ಟಿಗೆ ಶಿಕ್ಷೆಯನ್ನು ಸ್ಥಗಿತಗೊಳಿಸುವ ಅಧಿಕಾರವಿಲ್ಲ. ಹೀಗಾಗಿ ಹೈಕೋರ್ಟು ನಿರಾಕರಿಸಿದ್ದು ಜಾಣತನದ್ದೋ, ಮೂರ್ಖತನದ್ದೋ ಎಂಬ ಪ್ರಶ್ನೆ ಇಲ್ಲಿ ಏಳುವುದಿಲ್ಲ. ಮಹತ್ವದ ಪ್ರಶ್ನೆ ಎಂದರೆ, ಕಾನೂನಿನಂತೆ ಶಿಕ್ಷೆಗೊಳಗಾದ ಅಪರಾಧಿಯ ಶಿಕ್ಷೆಯನ್ನು ಕಡಿಮೆ ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಗೃಹಮಂತ್ರಿಗೆ ನೀಡಲಾಗಿದ್ದು, ಅವರದನ್ನು ಸರಿಯಾಗಿ ಜಾರಿಗೊಳಿಸಿದರೋ ಇಲ್ಲವೋ? ತಾರತಮ್ಯವನ್ನು ನೋಡುವ ವಿಶೇಷ ಸವಲತ್ತು ಎಂದು ಅವರಿಗದನ್ನು ನೀಡಲಾಗಿದ್ದು, ಅವರದನ್ನು ಯೋಗ್ಯವಾದ ರೀತಿಯಲ್ಲಿ ಬಳಕೆಗೆ ತಂದರೋ ಇಲ್ಲವೋ! ಗೃಹಮಂತ್ರಿಗಳು ತಮ್ಮ ಹಕ್ಕನ್ನು ಯೋಗ್ಯವಾದ ರೀತಿಯಲ್ಲಿ ಜಾರಿಗೊಳಿಸಿದರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಕೆಲವು ವಿಷಯಗಳನ್ನು ಸ್ಪಷ್ಟ ಪಡಿಸುವ ಅಗತ್ಯವಿದೆ.
 ಪತ್ರಿಕಾ ವರದಿಯಂತೆ ತಟ್ಟನೆ ಗಮನಕ್ಕೆ ಬರುವ ಸಂಗತಿ ಎಂದರೆ, ಭಯಂಕರ ಪ್ರಮಾಣದಲ್ಲಿ ಜೂಡಾಡುವ ಜನರು ಬಡವರು, ಹೊಟ್ಟೆಗೆ ಅನ್ನ ಸಿಗದೆ ಅನ್ಯ ಮಾರ್ಗವಿಲ್ಲದೆ ಜೂಜಿನಂತಹ ನಿಂದ್ಯ ಕೃತಿಯ ಕಡೆಗೆ ಹೊರಳಲೇಬೇಕಾಯಿತು ಎನ್ನುವುದು ಇಲ್ಲ. ವರದಿಯಂತೆ ಅವರೆಲ್ಲ ಶ್ರೀಮಂತ ವ್ಯಾಪಾರಿಗಳಾಗಿದ್ದರು. ಅವರ ಬಳಿ ಅಪಾರ ಸಂಪತ್ತು ಇದೆ. ಹಲವು ಕಂಪೆನಿಗಳ ಮಾಲಕರಾಗಿದ್ದಾರೆ. ನಗರದ ಬೇರೆ ಬೇರೆ ಕಡೆಗಳಲ್ಲಿ ಹಿಂದೂಸ್ಥಾನದ ಹಲವು ಪ್ರದೇಶಗಳಲ್ಲಿ ಅವರ ಕಾರ್ಯಲಯಗಳಿದ್ದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿದೆ. ಹೀಗಾಗಿ ಈ ಜನರು ಬಾಬತ್ತಿನಲ್ಲಿ ಬಡತನ ಅಥವಾ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಜೂಜಿನ ಹಾದಿ ಹಿಡಿದರು ಎಂದು ಖಚಿತವಾಗಿ ಹೇಳುವಂತಿಲ್ಲ. ಗೋಚರಿಸಿದ ವಸ್ತುಸ್ಥಿತಿಯು ಸಂಪೂರ್ಣ ವಿರುದ್ಧವಾಗಿದ್ದು, ಮೇಲಿನ ಘಟನೆಯ ಕಾರಣವನ್ನು ಈ ಜನರಿಗೆ ಹೋಲಿಸುವುದು ಸಾಧ್ಯವಾಗಿದೆ. ಅಲ್ಲಾಗಲಿ ಅಥವಾ ಹೈಕೋರ್ಟ್‌ನ ಮುಂದೆಯಾಗಲಿ ಸಲ್ಲಿಸಿದ ಅರ್ಜಿಯಲ್ಲೂ ಈ ಜನರ ಶಿಕ್ಷೆಯನ್ನು ಸ್ಥಗಿತಗೊಳಿಸಲು ತೋರಿಸಿದ ಅನ್ಯಕಾರಣದಲ್ಲೂ ಇದು ಕಂಡು ಬರುವುದಿಲ್ಲ. ಅಪರಾಧಿಗಳು ರೋಗಗ್ರಸ್ತರಾಗಿದ್ದರು ಎಂದು ತೋರಿಸುವ ಯಾವ ಪುರಾವೆಯೂ ಇಲ್ಲ. ಅವರ ಕುಟುಂಬದ ಮೇಲೆ ದೊಡ್ಡ ಸಂಕಟ ಬಂದೆರಗಿದೆ ಎನ್ನುವುದು ಕಣ್ಣಿಗೆ ಬೀಳುವುದಿಲ್ಲ. ನಮ್ಮೆದುರಿಗೆ ಬಂದ ಮಾಹಿತಿಯ ಮೇಲಿಂದ ಇದನ್ನು ಸ್ವೀಕರಿಸದೆ ಕಾರಣಗಳೂ ಸಿಗುತ್ತಿಲ್ಲ. ಆದ್ದರಿಂದ ಈ ಎಲ್ಲ ಊಹೆಗಳನ್ನು ಬದಿಗಿರಿಸಬೇಕಾಗುತ್ತದೆ. ಮೂರನೆಯ ಸಂಭವನೀಯ ಕಾರಣ ಯಾವುದೆಂದರೆ, ಮೇಲಿನ ನ್ಯಾಯಾಲಯಕ್ಕೆ ಇವರು ಅಪೀಲು ಮಾಡಲಿದ್ದರು. ಇದರ ವಿರುದ್ಧ ಏನು ಹೇಳಬೇಕೆನ್ನುವುದು ಸರ್ವಶುೃತ, ಗೃಹಮಂತ್ರಿಗಳಿಗಂತೂ ನನಗಿಂತ ಹೆಚ್ಚು ಗೊತ್ತಿರಬಹುದು. ಅವರು ನನಗಿಂತಲೂ ದೊಡ್ಡ ವಕೀಲರು. ಪ್ರಿವ್ಹಿ ಕೌನ್ಸಿಲು ನೂರಾರು ಖಟ್ಲೆಯಲ್ಲಿ ಹಾಕಿದ ನಿಯಮವೇನೆಂದರೆ, ನ್ಯಾಯದ ತತ್ವದ ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸಿದ ಹೊರತು ಹಿಂದೂಸ್ಥಾನದಲ್ಲಿಯ ಕ್ರಿಮಿನಲ್ ಪ್ರೊಸಿಜರ್ ಕೋಡ್‌ನಂತೆ ಸಾಮಾನ್ಯ ಕಲಮಿನ ಭಂಗದ ಬಗ್ಗೆ ಮುಕ್ತತೆಯನ್ನು ನೀಡಲಾಗಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ತನ್ನ ಬುದ್ಧಿಗನುಗುಣವಾಗಿ ಪ್ರಿವ್ಹಿ ಕೌನ್ಸಿಲ್ ಕ್ರಿಮಿನಲ್ ಅಪೀಲುಗಳನ್ನು ಸ್ವೀಕರಿಸುವ ತನ್ನ ಅಧಿಕಾರ ಕ್ಷೇತ್ರವನ್ನು ತೀರ ಸೀಮಿತಗೊಳಿಸಿಕೊಂಡಿದೆ. ಪ್ರಸ್ತುತ ಖಟ್ಲೆಯಲ್ಲಿ ಯಾರ ಎದುರಿಗೆ ಈ ಖಟ್ಲೆ ನಡೆಯಿತೋ ಆ ಚೀಫ್‌ಪ್ರೆಸಿಡೆನ್ಸಿ ಮೆಜಿಸ್ಟ್ರೇಟ್ ಅಥವಾ ಯಾರ ಎದುರಿಗೆ ಈ ವಿಷಯದ ಅಪೀಲು ಮಾಡಬಹುದೋ ಅಂಥ ಹೈಕೋರ್ಟು ಇವರಿಬ್ಬರೂ ಕ್ರಿಮಿನಲ್ ಪ್ರೊಸಿಜರ್ ಕೋಡ್‌ನ ಕಲಮಿನ ಅಥವಾ ಸರ್ವ ಸಾಧಾರಣ ನ್ಯಾಯತತ್ವದ ಯಾವುದೇ ದೃಷ್ಟಿಯಿಂದ ಭಂಗ ಮಾಡಿದರು ಎಂದು ತೋರಿಸುವ ಎಳ್ಳಿನಷ್ಟೂ ಪುರಾವೆಯಿಲ್ಲ. ಇಂಥ ಸ್ಥಿತಿಯಲ್ಲಿ ಈ ಜನರ ಶಿಕ್ಷೆಯನ್ನು ತಡೆಹಿಡಿಯಬಹುದಾದ ಸಬಲ ಕಾರಣ ಗೃಹಮಂತ್ರಿಗಳಿಗೆ ಸಿಕ್ಕಿರಬಹುದು ಎಂದು ಒಪ್ಪಲು ಎದುರಿಗೆ ಬಂದಿರುವ ವಸ್ತುಸ್ಥಿತಿಯನ್ನು ನೋಡಿದರೆ ಯಾವ ಒಂದು ಪುರಾವೆಯೂ ಕಾಣಿಸುವುದಿಲ್ಲ.
ಅದೇ ರೀತಿ ನನಗೆ ಗೊತ್ತಿರುವಂತೆ, ಸದಾ ಅಪರಾಧಿಗಳ ಶಿಕ್ಷೆಯನ್ನು ಈ ಮೊದಲಿನ ಯಾವುದೇ ಗೃಹಮಂತ್ರಿಯು ಯಾವುದೇ ಕಾರಣದಿಂದ ತಡೆಹಿಡಿದ ಒಂದೂ ಉದಾಹರಣೆಯೂ ಕಾಣಸಿಗಲಾರದು. ಈ ಪ್ರಾಂತದ ಸರ್ವಶ್ರೇಷ್ಠ ನ್ಯಾಯಮಂಡಳಿಯು ನ್ಯಾಯಬುದ್ಧಿಯಿಂದ ನೀಡಿದ ಶಿಕ್ಷೆಯನ್ನು ತಡೆಹಿಡಿಯಲು ಅನಾರೋಗ್ಯ ಅಥವಾ ಖಾಸಗಿ ಸಮಸ್ಯೆಯ ನೆಪವನ್ನು ಯಾವುದೇ ಕೋರ್ಟು ಈವರೆಗೆ ಯೋಗ್ಯವೆಂದು ಒಪ್ಪಿದ್ದಿಲ್ಲ.
ಹೀಗಿರುವಾಗ ಗೃಹಮಂತ್ರಿಯವರು ಹೈಕೋರ್ಟಿನ ನಿರ್ಣಯವನ್ನು ಲೆಕ್ಕಿಸದೆ ಅದು ನೀಡಿದ ಶಿಕ್ಷೆಯನ್ನು ತಡೆಹಿಡಿಯುವ ಯಾವುದೇ ಸಬಲ ಕಾರಣ ಎದುರಿಗೆ ಬರಲಿಲ್ಲ. ನಡೆದ ಘಟನೆಯು ನಿಂದನೀಯವಾದುದು. ಮಾನಗೇಡಿಯಾದುದು ಎಂದೇ ಹೇಳಬೇಕಾಗುತ್ತದೆ. ಹೈಕೋರ್ಟಿನ ಮುಂದೆ ಈ ಆರೋಪಿಗಳ ಪರವಾಗಿ ಯಾವ ವಕೀಲರು ವಾದಿಸಿದರೋ, ಅವರು ಈ ಅಪರಾಧಿಗಳಿಗೆ ಕಾರಾಗೃಹದಲ್ಲಿ ವಿಶೇಷ ಸವಲತ್ತು ಸಿಗಬೇಕು, ಅವರನ್ನು ‘ಬಿ’ ವರ್ಗದ ಕೈದಿ ಎಂದು ಪರಿಗಣಿಸಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವಿಷಯ ಗೃಹಮಂತ್ರಿಗಳಿಗೆ ಗೊತ್ತಿದೆ. ಕೊನೆಪಕ್ಷ ಪತ್ರಿಕೆಗಳ ಮೂಲಕ ಈ ವಿಷಯ ನಮಗೂ ತಿಳಿದುಬಂತು. ಲಭಿಸಿದ ಮತ್ತೂ ಒಂದು ಮಾಹಿತಿಯೆಂದರೆ, ಆರೋಪಿಯ ಪರವಾಗಿ ವಕೀಲರು ಅಪರಾಧಿಗಳ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂದು ಮತ್ತು ಒಂದು ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳನ್ನೂ ತಿರಸ್ಕರಿಸಲಾಯಿತು. ಆದರೆ ಇವೇ ಎರಡೂ ಅರ್ಜಿಗಳಲ್ಲಿ ಒಂದಕ್ಕೆ ಗೃಹಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈ ಕೃತಿಯ ಮೂಲಕ ಗೃಹಮಂತ್ರಿಗಳು ಮಾಡಿದ ಅಪರಾಧವು ಕಾನೂನು, ಸುವ್ಯವಸ್ಥೆಯ ಬಗೆೆಗಿನ ಉಪೇಕ್ಷೆಯನ್ನು ನಿರ್ಮಾಣ ಮಾಡುವ ಕಾರ್ಯವು ಬೇರೆ ಯಾವುದೇ ಕೃತಿಯ ಮೂಲಕ ಪರಿಣಾಮಕರವಾದ ರೀತಿಯಲ್ಲಿ ಸಾಧಿಸಬಹುದು ಎಂದೆನಿಸುವುದಿಲ್ಲ. ನಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ಹೀಗೆ ವ್ಯಕ್ತ ಮಾಡಲು ನನಗೆ ಯಾವುದೇ ಹಿಂಜರಿಕೆ ಎನಿಸುವುದಿಲ್ಲ. ಗೃಹಮಂತ್ರಿಗಳಿಗೆ ನಾನು ಕೇಳುವುದೇನೆಂದರೆ, ಎರಡನೇ ಪ್ರಶ್ನೆಯು ಮುಖ್ಯಮಂತ್ರಿಗೆ ಸಂಬಂಧಿಸಿದ್ದು, ಸಚಿವ ಮುನ್ವಿಯವರು ನೀಡಿದ ಆಜ್ಞೆಯ ವಿಷಯ ಮಂತ್ರಿಮಂಡಲದ ಅನುಮತಿಯನ್ನು ಪಡೆದು ಹೊರಡಿಸಲಾಗಿದೆಯೇ? ಅಥವಾ ಗೃಹಮಂತ್ರಿಗಳು ಆ ಆಜ್ಞೆಯನ್ನು ತಮ್ಮ ಇಚ್ಛೆಯಿಂದಲೇ ಹೊರಡಿಸಿದ್ದಾರೆಯೇ? ಈ ಪ್ರಶ್ನೆಯನ್ನು ಕೇಳಲು ಸಬಲ ಕಾರಣವೂ ಇದೆ. ಹೊಸ ಸಂವಿಧಾನದ ಪ್ರಕಾರ ಕಾಂಗ್ರೆಸ್ ಮಂತ್ರಿ ಮಂಡಲವು ಸಾಮುದಾಯಿಕ ಜವಾಬ್ದಾರಿಯ ತತ್ವದಂತೆ ಆಡಳಿತ ನಡೆಸುತ್ತಲಿದೆ ಎಂದು ಕೊಂಡರೂ, ಅದಕ್ಕೆ ಖಚಿತ ಪುರಾವೆಯಿಲ್ಲದಿದ್ದರೂ, ನಾವು ಒಪ್ಪಿ ನಡೆಯುತ್ತಿದ್ದೇವೆ ಮತ್ತು ಇದರಿಂದಾಗಿ ಈ ವಿಷಯ ಒಟ್ಟು ಮಂತ್ರಿಮಂಡಲದ ಎದುರಿಗೆ ಅಥವಾ ಕಾಯ್ದೆ ದೃಷ್ಟಿಯಿಂದ ಪ್ರಾಂತದ ಆಡಳಿತಕ್ಕೆ ಜವಾಬ್ದಾರಿಯಿರುವ ವ್ಯಕ್ತಿ ಎಂಬ ಕಾರಣಕ್ಕೆ ಕೊನೆಪಕ್ಷ ಮುಖ್ಯಮಂತ್ರಿಯ ಎದುರಿಗೆ ಇಡಲಾಗಿತ್ತು ಎಂದು ಒಪ್ಪಲು ನಮಗೆ ಯಾವ ಅಡ್ಡಿಯೂ ಇಲ್ಲ. ಈ ಉಲ್ಲೇಖ ಮಾಡುವುದು, ಹಾಗೆಯೇ ಈಗಿನ ಪಶ್ನೆ ಕೇಳುವುದು ನನಗೆ ಅಗತ್ಯವಿದ್ದು ಎನಿಸಿತು. ಏಕೆಂದರೆ ನಡೆದ ಘಟನೆಯು ನನ್ನ ಪ್ರಕಾರ ಅತ್ಯಂತ ಗಂಭೀರ ಸ್ವರೂಪದ್ದು, ಅಪರಾಧಿ ಆರೋಪಿಗೆ ನೀಡಿದ ಶಿಕ್ಷೆಯನ್ನು ಜಾರಿಗೊಳಿಸುವ ಬದಲಿಗೆ ಸ್ಥಗಿತಗೊಳಿಸುವುದೆಂದರೆ ಕಾಯ್ದೆಯನ್ನು ಉಲ್ಲಂಘಿಸಿದಂತೆ. ನನ್ನ ಮಾತಿನ ತಾತ್ಪರ್ಯವೇನೆಂದರೆ, ಪ್ರಾಂತಿಯ ಸರಕಾರದ ಆಡಳಿತ ಮತ್ತು ಜನತೆಯ ಕಲ್ಯಾಣದ ಮೇಲೆ ಗಂಭೀರ ಪರಿಣಾಮ ಬೀರುವ ಸದ್ಯದ ಈ ಕೃತಿಯು ಮುಖ್ಯಮಂತ್ರಿಯ ಅರಿವಿಗೆ ಬರದೆ ನಡೆದಿದೆ. ನನ್ನ ಈ ತಾತ್ಪರ್ಯ ಸರಿಯೋ ತಪ್ಪೋ ಎನ್ನ್ನುವುದು ನನಗೆ ಗೊತ್ತಾಗಲೇಬೇಕು. ಆದ್ದರಿಂದ ಮಂತ್ರಿಮಂಡಲವು ಈ ಪ್ರಶ್ನೆಗೆ ಉತ್ತರಿಸುತ್ತದೆ ಎಂದು ನಾನು ಅಂದುಕೊಂಡಿದ್ದೇನೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)