ಉಪ್ಪಿನಂಗಡಿ: ಬಸ್‍ಗಳಿಗೆ ಕಲ್ಲು ತೂರಾಟ
ಉಪ್ಪಿನಂಗಡಿ: ಪೌರತ್ವ ಮಸೂದೆಯನ್ನು ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯಾದ್ಯಂತ ಮೂಡಿದ ಭೀತಿಯ ವಾತಾವರಣದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಶುಕ್ರವಾರ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ಬೆಳ್ತಂಗಡಿ ತಾಲೂಕಿನ ಬಂಗಾರಕಟ್ಟೆಯ ಕಾರಂದೂರು ಎಂಬಲ್ಲಿ ಒಂದು ಬಸ್‍ಗೆ ಹಾಗೂ ಕುಪ್ಪೆಟ್ಟಿಯಲ್ಲಿ ನಾಲ್ಕು ಬಸ್‍ಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.
ಶುಕ್ರವಾರ ಬೆಳಗ್ಗಿನಿಂದಲೇ ಪೇಟೆಯಲ್ಲಿ ಜನಸಂಖ್ಯೆ ತೀರಾ ವಿರಳವಿತ್ತಲ್ಲದೇ, ಬಹುತೇಕ ಖಾಸಗಿ ವಾಹನಗಳು ರಸ್ತೆಗಿಳಿಯದ್ದ ರಿಂದ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಗ್ಗೆ ಮಂಗಳೂರಿಗೆ ಹೊರಟವರು ಮಂಗಳೂರಿಗೆ ಹೋಗಲಾಗದೇ ಬಿ.ಸಿ.ರೋಡಿನಿಂದ ವಾಪಸಾಗುತ್ತಿದ್ದರು. ಹೆದ್ದಾರಿಯಲ್ಲಿಯೂ ಘನ ವಾಹನಗಳ ಸಂಚಾರ ವಿರಳವಾಗಿತ್ತು.
ಐದು ಬಸ್‍ಗಳಿಗೆ ಕಲ್ಲು: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯಲ್ಲಿ ರಸ್ತೆ ಮಧ್ಯೆ ಟಯರ್ ಉರಿಸಿದ ದುಷ್ಕರ್ಮಿಗಳು ಅಲ್ಲೇ ಸಮೀಪದ ಬೋವಿನಕಡವು ಎಂಬಲ್ಲಿ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದರು. ಬಳಿಕ ಅದೇ ಸ್ಥಳದಲ್ಲಿ ಮೂರು ಕೆಎಸ್ಸಾರ್ಟಿಸಿ ಬಸ್‍ಗಳಿಗೆ ಕಲ್ಲೆಸೆದು ಹಾನಿ ಮಾಡಲಾಯಿತು. ಬೋವಿನಕಡವು ನಿರ್ಜನ ಪ್ರದೇಶವಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳು ಆವರಿಸಿದೆ. ಆದ್ದರಿಂದ ಈ ಪರಿಸರದ ಅನುಕೂಲತೆಯನ್ನು ಪಡೆದ ದುಷ್ಕರ್ಮಿಗಳು ಬಸ್‍ಗಳಿಗೆ ಕಲ್ಲೆಸೆದು ಅಲ್ಲಿಂದ ಪರಾರಿಯಾಗುತ್ತಿದ್ದರು. ಸ್ಥಳಕ್ಕೆ ಪೊಲೀಸರು ತೆರಳಿದಾಗ ಅಲ್ಲಿ ಯಾರೂ ಇರುತ್ತಿರಲಿಲ್ಲ. ಆದರೆ ಪೊಲೀಸರು ಅಲ್ಲಿಂದ ವಾಪಸಾಗಿ ಒಂದು ಗಂಟೆಯಾಗುವಷ್ಟು ಹೊತ್ತಿಗೆ ಮತ್ತೆ ಅದೇ ಸ್ಥಳದಲ್ಲಿ ಬಸ್‍ಗಳಿಗೆ ಕಲ್ಲೆಸೆಯುವ ಘಟನೆ ನಡೆಯುತ್ತಿತ್ತು. ಧರ್ಮಸ್ಥಳದಿಂದ ಮಡಿಕೇರಿಗೆ ಬರುವ ಕೆಎಸ್ಸಾರ್ಟಿಸಿ ಬಸ್‍ಗೆ ಕಲ್ಲೆಸೆದರೆ, ಅದಾಗಿ ಒಂದು ಗಂಟೆಯ ಬಳಿಕ ಉಪ್ಪಿನಂಗಡಿಯಿಂದ ಧರ್ಮಸ್ಥಳವಾಗಿ ಬೆಂಗಳೂರು ಹೋಗುವ ಕೆಎಸ್ಸಾರ್ಟಿಸಿ ಬಸ್‍ಗೆ ಕಲ್ಲೆಸೆಯಲಾಯಿತು. 11:25ರ ಸುಮಾರಿಗೆ ಪುತ್ತೂರಿನಿಂದ ಉಪ್ಪಿನಂಗಡಿಯಾಗಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್‍ಗೆ ಕಲ್ಲೆಸೆಯಲಾಯಿತು. ಇದರಿಂದಾಗಿ ಬಸ್‍ನ ಗಾಜುಗಳಿಗೆ ಹಾನಿಯಾಗಿದ್ದು ಬಿಟ್ಟರೆ, ಬೇರೇನೂ ಅಪಾಯ ಸಂಭವಿಸಿಲ್ಲ. ಇದರಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‍ನಲ್ಲಿ ಕಳುಹಿಸಿಕೊಡಲಾಯಿತು. ಬೆಳಗ್ಗೆ ಬಂಗಾರಕಟ್ಟೆಯ ಕಾರಂದೂರಿನಲ್ಲಿಯೂ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿತ್ತು.
ಓರ್ವ ವಶ: ಬೋವಿನಕಡವು ಎಂಬಲ್ಲಿ ಬಸ್‍ಗಳಿಗೆ ಕಲ್ಲೆಸೆಯುತ್ತಿದ್ದ ಪ್ರಕರಣದಲ್ಲಿ ಅನುಮಾನದ ಮೇರೆಗೆ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಶುಕ್ರವಾರ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದು, ಮುಂಜಾಗೃತ ಕ್ರಮವಾಗಿ ಬೆಳಗ್ಗೆಯೇ ಪೊಲೀಸರು ಅಂಗಡಿಗಳನ್ನು ಬಂದ್ ನಡೆಸುವಂತೆ ಸೂಚಿಸಿದ್ದರು.