ಹದ್ದಾಗುವುದು ಬೇಡ; ಹಂಸ ಆಗಲಿ
ಪಾಕಿಸ್ತಾನವನ್ನು ಮಾದರಿ ಮಾಡಿಕೊಂಡು ಭಾರತವನ್ನು ಧರ್ಮಾಧಾರಿತ ಮಾಡಲು ಹೊರಟಿರುವ ಮೋದಿ, ಶಾ ಗ್ಯಾಂಗ್ ತಮಗೆ ಅರಿವಿಲ್ಲದೇ ಸ್ವತಃ ತಾವೇ ಪಾಕ್‌ನ ಪರಮ ಭಕ್ತರಾಗಿಬಿಡುತ್ತಿದ್ದಾರೆ. ಅದಕ್ಕಾಗಿಯೇ ಬೇರೆ ಬೇರೆ ದೇಶಗಳ ಹಾಗೂ ಬೇರೆ ಬೇರೆ ಧರ್ಮಗಳ ಮಾದರಿಗಳನ್ನು ಅಳವಡಿಸಿಕೊಳ್ಳುವಾಗ ವಿವೇಕ, ವಿವೇಚನೆಗಳು ಬೇಕು.
ಯಾಕೋ ಕನ್ನಡ ಟಿವಿ ಸೀರಿಯಲ್ ಸಿಲ್ಲಿ ಲಲ್ಲಿ ನೆನಪಾಗುತ್ತಿದೆ. ಅಲ್ಲೊಂದು ಪಾತ್ರ ಬರುತ್ತದೆ. ಸಮಾಜ ಸೇವಕಿ ಲಲಿತಾಂಬ ಅಂತ. ಆ ಪಾತ್ರ ಬಾಯಿ ಬಿಟ್ಟರೆ ನನ್ನ ನಂಬಿ, ನನ್ನ ನಂಬಿ ಪ್ಲೀಸ್ ಅಂತಿರುತ್ತದೆ. ಪೌರತ್ವ ತಿದ್ದುಪಡಿಯನ್ನು ಕಾಯ್ದೆ ಮಾಡಿದ ಮೇಲೆ ಆತಂಕಗೊಂಡ ಜನ ಸಮುದಾಯವನ್ನು ಉದ್ದೇಶಿಸಿ ನಮ್ಮ ಪ್ರಧಾನಿಯವರು ಆತಂಕಕ್ಕೆ ಒಳಗಾಗಬೇಡಿ, ನನ್ನನ್ನು ನಂಬಿ, ನಾನು ನಿಮ್ಮ ಸೇವಕ ಅಂತ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದಾಗ ಪ್ರಧಾನಿ ಮೋದಿಯವರ ಮಾತಿಗೂ ಸಿಲ್ಲಿ ಲಲ್ಲಿ ಸೀರಿಯಲ್‌ನ ಸಮಾಜ ಸೇವಕಿ ಲಲಿತಾಂಬ ಮಾತಿಗೂ ತಾಳಮೇಳ ಆಗುತ್ತಿದೆಯಲ್ಲಾ ಅನ್ನಿಸಿಬಿಟ್ಟಿತು.
ವಿಪರ್ಯಾಸವೆಂದರೆ, ಇತ್ತೀಚಿನ ದಿನಗಳಲ್ಲಿ ಜನರು ನರೇಂದ್ರ ಮೋದಿಯವರನ್ನು ನಂಬಿದಷ್ಟು ಬಹುಶಃ ಬೇರೆ ಯಾರನ್ನೂ ನಂಬಿಲ್ಲ. ಜನರು ಹುಚ್ಚೆದ್ದು ನಂಬಿದರು. ಮೋದಿಯವರು ನಂಬಿಸಿದ್ದು, ಜನರು ನಂಬಿದ್ದು ಒಂದಾ ಎರಡಾ? ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯರ ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇನೆ ಅಂದರು. ಜನ ನಂಬಿದರು. ಇನ್ನೂ ನಂಬಿಕೊಂಡು ಕಾಯುತ್ತಿರುವವರೂ ಇರಬಹುದು. ಆದರೆ ಇಂದು ಜನರು ತಾವು ಬ್ಯಾಂಕ್‌ನಲ್ಲಿ ಇಟ್ಟಿರುವ ಹಣಕ್ಕೇನೆ ಗ್ಯಾರಂಟಿ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಜೊತೆಗೆ, ಪ್ರತಿವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಠೇಂಕಾರ ಮಾಡುತ್ತ ಜನರಿಗೆ ಮಾತುಕೊಟ್ಟರು. ಜನರು ನಂಬಿದರು. ಅಧಿಕಾರಕ್ಕೂ ತಂದರು. ಆದ್ದರಿಂದು ಉದ್ಯೋಗದ ಕ್ಷೇಮ ಸಮಾಚಾರ ನೋಡಿದರೆ, ಹೊಸ ಉದ್ಯೋಗಗಳು ಸೃಷ್ಟಿಸುವುದು ಇರಲಿ ಇದ್ದಬದ್ದ ಉದ್ಯೋಗಗಳೇ ಉದುರಿ ಹೋಗುತ್ತಿವೆ. ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಂತ ಹೆಚ್ಚಾಗಿರುವುದು ಮೋದಿ ಜಮಾನದಲ್ಲೆ. ಹೀಗೇನೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದು ರೈತರ ಸಂಕಷ್ಟವನ್ನು ದುಪ್ಪಟ್ಟು ಮಾಡಿಬಿಟ್ಟರು. ಜೊತೆಗೆ ಅಸಮರ್ಪಕ ಜಿಎಸ್‌ಟಿ ತಂದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿಬಿಟ್ಟರು.
ಒಂದಾ? ಎರಡಾ? ನೋಟ್‌ಬ್ಯಾನ್ ಮಾಡಿದ ಮೇಲೆ ಉಂಟಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಮೋದಿಯವರು ದೇಶಕ್ಕೆ ನೀಡುವ ವಚನ - ನಾನು ದೇಶದಿಂದ ಕೇವಲ 50 ದಿನಗಳನ್ನು ಮಾತ್ರ ಭಿಕ್ಷೆ ಬೇಡುತ್ತಿದ್ದೇನೆ. ನಾನು ಮಾತಿಗೆ ತಪ್ಪಿದರೆ, ನನ್ನದು ತಪ್ಪು ನಿರ್ಧಾರ ಎಂದು ಸಾಬೀತಾದರೆ, ನಾಕೂ ದಾರಿ ಸೇರುವ ಒಂದು ಸರ್ಕಲ್‌ನಲ್ಲಿ ನನ್ನನ್ನು ನಿಲ್ಲಿಸಿ ನನಗೆ ಯಾವುದೇ ಶಿಕ್ಷೆ ವಿಧಿಸಿದರೂ ಆ ಶಿಕ್ಷೆ ಅನುಭವಿಸಲು ನಾನು ಸಿದ್ಧನಿದ್ದೇನೆ ಎನ್ನುವ ಪ್ರಧಾನಿ ಮೋದಿಯವರ ಮಾತುಗಳಿಗೆ ಇನ್ನೇನು 3 ವರ್ಷ ತುಂಬಲಿದೆ! ಈಗಲೂ ನೋಟ್‌ಬ್ಯಾನ್‌ನಿಂದಾದ ಅನಾಹುತಗಳು ಇನ್ನೂ ಭಾರತವನ್ನು ಸುಡುತ್ತಿವೆ. ಎಲ್ಲವೂ ಮಹಾಭಾರತದ ಉತ್ತರನ ಪೌರುಷದಂತೆ ಕಂಡು ಬರುತ್ತಿದೆ. ಇದು ನಂಬಿದವರ ತಪ್ಪೋ ನಂಬಿಸಿದವರ ತಪ್ಪೋ ತಿಳಿಯದಾಗಿದೆ. ಇದನ್ನೆಲ್ಲಾ ನೋಡಿದಾಗ, ಜನರು ಮೋದಿಯವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಿಲ್ಲ ಎಂದು ಹೇಗೆ ಅನ್ನಿಸುತ್ತದೊ ಹಾಗೇನೆ ಮೋದಿಯವರಷ್ಟು ಜನರಿಗೆ ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ ಅಂತಲೂ ಅನ್ನಿಸಿಬಿಡುತ್ತದೆ. ಈ ಮಾತುಗಳನ್ನು ನೊಂದು ನುಡಿಯುತ್ತಿರುವೆ.
ಮೋದಿಯವರ ಆಳ್ವಿಕೆಯ ವೈಖರಿಯು ಜನ ಸಮುದಾಯದಲ್ಲಿ ಮಲಗಿರುವ ಜಾತಿ, ಧರ್ಮ, ಭಾಷೆ, ಇತ್ಯಾದಿ ಇತ್ಯಾದಿ ಭಾವನೆ, ನಂಬಿಕೆಗಳನ್ನು ಕೆರಳಿಸಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿರುವಂತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ - ಈ ಪೌರತ್ವ ತಿದ್ದುಪಡಿ ಕಾಯ್ದೆ. ಇಂಥವುಗಳು ಎಲ್ಲಿಗೆ ಕರೆದೊಯ್ಯುತ್ತವೆ? ಮತ್ತಷ್ಟು ಆರ್ಥಿಕ ಕುಸಿತ, ಮತ್ತಷ್ಟು ಉದ್ಯೋಗ ನಾಶ, ಮತ್ತಷ್ಟು ಬೆಲೆ ಏರಿಕೆ, ಸರಕಾರ ಅಂತ ಇದೆಯೊ ಇಲ್ಲವೊ ಎಂದು ಅಂದುಕೊಳ್ಳುವಷ್ಟು ಜನರೇ ಕಾನೂನು ಕೈಗೆ ತೆಗೆದುಕೊಂಡು ನಡೆಸುವ ಗುಂಪು ಥಳಿತ ಇತ್ಯಾದಿ. ಈ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮೋದಿಯವರು ಸೋಲುತ್ತಿದ್ದಾರೆ. ಈ ಸಮಸ್ಯೆಗಳು ಉಂಟುಮಾಡುತ್ತಿರುವ ನೋವನ್ನು ಮರೆಸುವುದಕ್ಕೆ ಜನರ ಭಾವನೆ, ನಂಬಿಕೆಗಳನ್ನು ಉದ್ರೇಕಿಸುತ್ತಿದ್ದಾರೆ- ಒಂದು ನೋವನ್ನು ಮರೆಸಲು ಇನ್ನೊಂದು ನೋವನ್ನು ಉಂಟುಮಾಡಿದಂತೆ. ಆದರೆ ಭಾವನೆ, ನಂಬಿಕೆಗಳನ್ನು ಕೆರಳಿಸಿ ಛೂ ಬಿಟ್ಟರೆ ಅವು ಭೂತ ಪಿಶಾಚಿಗಳಾಗಿಬಿಡುತ್ತವೆ, ರಕ್ತ ಕೇಳುತ್ತವೆ. ಇಂದು ಇದಾಗುತ್ತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಭಾರತವನ್ನು ಧರ್ಮಾಧಾರಿತ ಮಾಡಿದರೆ, ನಮ್ಮ ಸಂವಿಧಾನಕ್ಕೆ ಇಲಿ-ಹೆಗ್ಗಣಗಳು ಬಿಲ ತೋಡಿ ಅದರ ಜೀವವನ್ನೆ ತಿಂದು ಹಾಕಿ ಸಂವಿಧಾನದ ಸ್ವರೂಪವನ್ನೆ ಕುರೂಪ ಮಾಡಿದಂತಾಗುತ್ತದೆ. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ - ಭಾರತವು ಮತ್ತೊಂದು ಪಾಕಿಸ್ತಾನ ಆಗುವುದು ಬೇಡ ಎನ್ನುವ ಮಾತು ಎಚ್ಚರಿಕೆ ಗಂಟೆಯಾಗಿದೆ. ಧರ್ಮಾಧಾರಿತ ಪಾಕಿಸ್ಥಾನವು ನಮಗೆ ಮಾದರಿಯಾದರೆ ಭಾರತವು ಭಾರತೀಯತೆಯನ್ನು ಕಳೆದುಕೊಂಡು ಬಿಡುತ್ತದೆ. ನನ್ನ ವೈರಿ ಅತ್ಯಾಚಾರ ಮಾಡುತ್ತಿದ್ದಾನೆಂದು ಅದಕ್ಕೆ ತಾನು ಅತ್ಯಾಚಾರ ಮಾಡುತ್ತೇನೆ ಎನ್ನುವ ಮನಸ್ಥಿತಿಯು ಆ ರೀತಿ ಆಲೋಚನೆ ಮಾಡುವವರನ್ನೇ ಅಧಃಪತನಕ್ಕೆ ಕೊಂಡೊಯ್ಯುತ್ತದೆ. ಪಾಕಿಸ್ತಾನವನ್ನು ಮಾದರಿ ಮಾಡಿಕೊಂಡು ಭಾರತವನ್ನು ಧರ್ಮಾಧಾರಿತ ಮಾಡಲು ಹೊರಟಿರುವ ಮೋದಿ, ಶಾ ಗ್ಯಾಂಗ್ ತಮಗೆ ಅರಿವಿಲ್ಲದೇ ಸ್ವತಃ ತಾವೇ ಪಾಕ್‌ನ ಪರಮ ಭಕ್ತರಾಗಿಬಿಡುತ್ತಿದ್ದಾರೆ.
ಅದಕ್ಕಾಗಿಯೇ ಬೇರೆ ಬೇರೆ ದೇಶಗಳ ಹಾಗೂ ಬೇರೆ ಬೇರೆ ಧರ್ಮಗಳ ಮಾದರಿಗಳನ್ನು ಅಳವಡಿಸಿಕೊಳ್ಳುವಾಗ ವಿವೇಕ, ವಿವೇಚನೆಗಳು ಬೇಕು. ಉದಾಹರಣೆಗೆ, ಹದ್ದು ಎಷ್ಟೇ ಎತ್ತರಕ್ಕೆ ಹಾರಿದರೂ ಅದರ ಕಣ್ಣು ಭೂಮಿ ಮೇಲೆ ನಾರುತ್ತ ಬಿದ್ದಿರುವ ಹೊಲಸಿನ ಕಡೆಗೆ ಇರುತ್ತದೆ. ಆದರೆ ಹಂಸ, ಹಾಲಿನ ಜೊತೆ ನೀರನ್ನು ಬೆರೆಸಿಟ್ಟರೂ ಹಾಲನ್ನು ಮಾತ್ರ ಸೇವಿಸುತ್ತದೆಂಬ ನ್ಯಾಯ ಪರಿಕಲ್ಪನೆ - ಪರಮಹಂಸರ ಸ್ವಭಾವ. ನಮ್ಮ ದರ್ಶನಗಳೊಳಗೆ ಇರುವ ವೈರುಧ್ಯ ಭಿನ್ನತೆಗಳನ್ನು ಬದಿಗೆ ಸರಿಸಿ ಏಕತೆಯನ್ನು ಕಾಣುವಿಕೆ. ವಿವೇಕಾನಂದರು ಕೂಡ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಇತ್ಯಾದಿ ಭಿನ್ನ ಧರ್ಮಗಳಲ್ಲಿರುವ ಒಳಿತನ್ನು ತನ್ನದು ಎಂದುಕೊಂಡರು. ಉದಾಹರಣೆಗೆ ಇಸ್ಲಾಮಿನಲ್ಲಿ ಅಂತರ್ಗತವಾಗಿರುವ ಸಹೋದರತ್ವ ಹಾಗೂ ಅಪ್ಪುಗೆ (Hugging)ಗಳು, ಅಸ್ಪಶ್ಯತೆ ಮತ್ತು ಜಾತಿ ಭೇದದ ರೋಗಗ್ರಸ್ತದ ಚಾತುರ್ವರ್ಣದ ಹಿಂದೂ ಧರ್ಮಕ್ಕೆ ಔಷಧಿಯಾಗುವುದಿಲ್ಲವೇ? ಇಂದು ಆಗಬೇಕಾದ್ದು ಇದು.
ಆಳ್ವಿಕೆಯಲ್ಲೂ ಕೂಡ, ಪಾಳೆಗಾರರದು ಒರಟು ಆಳ್ವಿಕೆ ಎನಿಸಿಕೊಂಡರೆ, ಚಕ್ರವರ್ತಿಯಾದವನಿಗೆ ಸಬ್ ಕಾ ವಿಶ್ವಾಸ್ ಇರಬೇಕು. ಇಲ್ಲದಿದ್ದರೆ, ಚಕ್ರವರ್ತಿ ಸ್ಥಾನದಲ್ಲಿ ಪಾಳೆಗಾರ ಕೂತಿದ್ದಾನೆ ಎನ್ನಿಸಿಬಿಡುತ್ತದೆ. ನೋಡಿ, ಗೇಲಿಗೆ ಒಳಗಾಗುತ್ತಿದ್ದ ಗ್ಯಾನಿ ಜೈಲ್‌ಸಿಂಗ್ ರಾಷ್ಟ್ರಪತಿಗಳಾದ ಮೇಲೆ ಆ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಂಡರು. ಅಷ್ಟೇಕೆ ರಾಜ್ಯ ರಾಜಕಾರಣದಲ್ಲಿ ಎಚ್.ಡಿ. ದೇವೇಗೌಡರ ಬಗ್ಗೆ ಎಷ್ಟೆಷ್ಟೂ ಆಕ್ಷೇಪಣೆಗಳು ನಮಗಿರಬಹುದು. ಆದರೆ ಪ್ರಧಾನಿ ಪಟ್ಟ ಅಲಂಕರಿಸಿದ ಮೇಲೆ ಆ ಸ್ಥಾನಕ್ಕೆ ತಕ್ಕಂತೆ ಅವರು ನಡೆದುಕೊಂಡರು. ಪಂಜಾಬ್, ಕಾಶ್ಮೀರ, ಈಶಾನ್ಯ ಭಾರತದ ಬಿಕ್ಕಟ್ಟುಗಳನ್ನು ಜನರ ಹೃದಯ ಗೆದ್ದು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಮನಮೋಹನ್ ಸಿಂಗ್‌ರ ಬಗ್ಗೆ ಕೂಡ ನನಗೆ ತುಂಬಾನೆ ಆಕ್ಷೇಪಣೆಗಳಿವೆ. ಆದರವರು ಮುಳುಗುತ್ತಿರುವ ಭಾರತದ ಆರ್ಥಿಕತೆ ಕಂಡು ಹಿಟ್ಲರ್‌ನಂತೆ ಘರ್ಜಿಸದೆ ಸಂಕಟದಿಂದ ಮಾತುಗಳನ್ನಾಡುತ್ತಿದ್ದಾರೆ. ಆ ಮೆಲುದನಿಯ ಮಾತುಗಳನ್ನು ಈಗ ಆಲಿಸಬೇಕೆನಿಸುತ್ತದೆ. ಹಾಗೇನೆ “If India is not secular, then India is not India at all” ಎಂದ ಬಿಜೆಪಿಯ ವಾಜಪೇಯಿಯವರೂ ಕೂಡ ದೇವೇಗೌಡರಂತೆ ಚಕ್ರವರ್ತಿಯಂತೆಯೇ ನಡೆದುಕೊಂಡರು. ಮೋದಿ, ಶಾರಿಗೆ ಒಂದು ಪ್ರಾರ್ಥನೆ: ಹದ್ದಾಗಬೇಡಿ; ಹಂಸವಾಗಿ. ಇದಾಗಲು ಈಗ ಜನಮುಖಿ ಸಂಘಟನೆಗಳು, ವಿರೋಧ ಪಕ್ಷಗಳು ಮಾತ್ರವಲ್ಲ ಆರೆಸ್ಸೆಸ್, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಲ್ಲಿ ಇರಬಹುದಾದ ಮುಗ್ಧ ದೇಶಭಕ್ತರೂ ಸೇರಿದಂತೆ ದೇಶ ಮಾತಾಡಬೇಕಾದ ಕಾಲ ಸನ್ನಿಹಿತವಾಗಿದೆ.