ದಬಾಂಗ್ -3: ಕನ್ನಡದ ಅಂಗಳದಲ್ಲಿ ಬಾಲಿವುಡ್ ರಂಗೋಲಿ
‘ದಬಾಂಗ್’ ಎನ್ನುವ ಹೆಸರಿನಲ್ಲಿ ಕಳೆದ ಎರಡು ಬಾರಿ ಮೋಡಿ ಮಾಡಿದ ಸಲ್ಮಾನ್ ಖಾನ್ ಈ ಬಾರಿ ಕೂಡ ಅದೇ ದಾರಿಯಲ್ಲಿ ಯಶಸ್ವಿ ಪಯಣ ಮುಂದುವರಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಖಳನಟನಾಗಿ ಕಾಣಿಸಿಕೊಂಡಿರುವ ಕಾರಣ, ಕನ್ನಡಕ್ಕೆ ಡಬ್ಬಿಂಗ್ ರೂಪದಲ್ಲಿ ಬಂದಿರುವ ಚಿತ್ರ ಕನ್ನಡ ಸಿನಿರಸಿಕರಲ್ಲಿಯೂ ಕುತೂಹಲ ಮೂಡಿಸಿದೆ.
ಚುಲ್ ಬುಲ್ ಪಾಂಡೆ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಸಲ್ಮಾನ್ ಖಾನ್ ಹೇಗೆ ಪಾತ್ರ ನಿಭಾಯಿಸಿದ್ದಾರೆ ಎನ್ನುವುದನ್ನು ನಾವು ಈಗಾಗಲೇ ದಬಾಂಗ್ ಚಿತ್ರದ ಎರಡು ಸರಣಿಗಳಲ್ಲಿ ನೋಡಿದ್ದೇವೆ. ಅಂಥದೊಂದು ನಿರೀಕ್ಷೆಯೊಂದಿಗೆ ಚಿತ್ರ ಮಂದಿರದೊಳಗೆ ಕಾಲಿಡುವ ಪ್ರೇಕ್ಷಕರಿಗೆ ನಿರಾಶೆಯಾಗದಂತೆ ನೋಡಿಸಿಕೊಂಡು ಹೋಗುತ್ತದೆ ಚಿತ್ರ. ಸಾಮಾನ್ಯವಾಗಿ ಸಿನೆಮಾವೊಂದು ಭಾಗಗಳಾಗಿ ಮುಂದುವರಿದಾಗ ಕತೆ ಕೂಡ ಮುಂದೆ ಸಾಗುತ್ತಾ ಹೋಗುತ್ತದೆ. ಆದರೆ ಚಿತ್ರದಲ್ಲಿ ನಾಯಕನ ಫ್ಲಾಶ್ ಬ್ಯಾಕ್ ಸ್ಟೋರಿ ಹೇಳುವ ಮೂಲಕ ವಿಭಿನ್ನತೆ ತೋರಿಸಲಾಗಿದೆ. ಮಾತ್ರವಲ್ಲ ಮೊದಲ ಭಾಗದಿಂದಲೇ ಇದು ಎಂಬತ್ತರ ದಶಕದ ಸುಮಾರಿಗೆ ನಡೆಯುವಂಥ ಚಿತ್ರವಾಗಿ ಗಮನ ಸೆಳೆದಿತ್ತು. ಆ ಫ್ಲೇವರ್ ಉಳಿಸಿಕೊಳ್ಳುವಂತೆ ಮೂರನೇ ಭಾಗದ ಕತೆಯೂ ಇದೆ. ಅದಕ್ಕೆ ತಕ್ಕಂತೆ ನವಯುವಕನಾಗಿ ಬದಲಾಗುವ ಸಲ್ಮಾನ್ ಸೌಂದರ್ಯವನ್ನು ಪ್ರಶ್ನಿಸುವಂತಿಲ್ಲ. ಅದು ಆತನ ಮೊದಲ ಪ್ರೇಮದ ಕತೆ. ಪ್ರೀತಿಸಿದ ಹಳ್ಳಿ ಹುಡುಗಿ ಖುಷಿಯನ್ನು ಅವಳ ಆಸೆಯಂತೆ ಡಾಕ್ಟರ್ ಮಾಡುವ ಕನಸು ಕಂಡಿರುತ್ತಾನೆ. ಆದರೆ ಆಕೆಯನ್ನು ಏಕಮುಖವಾಗಿ ಪ್ರೇಮಿಸುವ ಬಾಲಿ ಸಿಂಗ್‌ಗೆ ಇದು ಅವರಿಬ್ಬರ ಪ್ರೀತಿ ಇಷ್ಟವಾಗುವುದಿಲ್ಲ. ಹಾಗಾಗಿ ಖುಷಿ ಮತ್ತು ಅವರ ಕುಟುಂಬವನ್ನು ಮುಗಿಸುತ್ತಾನೆ. ಅದಕ್ಕೆ ಪ್ರತಿದಾಳಿ ನಡೆಸುವ ನಾಯಕ ಬಾಲಿ ಸಿಂಗ್‌ನನ್ನು ಕೊನೆಗಾಣಿಸಿರುತ್ತಾನೆ. ಆದರೆ ಅಂದು ಸತ್ತು ಹೋಗಿದ್ದಾಗಿ ತಿಳಿದಂಥ ಬಾಲಿ ಸಿಂಗ್ ಮತ್ತೆ ಈಗ ವೇಶ್ಯಾವಾಟಿಕೆ ದಂಧೆಯ ಮೂಲಕ ಮರಳಿ ಪಾಂಡೆಗೆ ಎದುರಾಗುತ್ತಾನೆ. ಮುಂದೇನಾಗುತ್ತದೆ ಎಂದು ಕಲ್ಪಿಸುವುದು ಸುಲಭ. ಆದರೆ ನೋಡುವುದರಲ್ಲಿ ಮನೋರಂಜನೆ ಸಿಗುವಂತೆ ಮಾಡುವಲ್ಲಿ ನಿರ್ದೇಶಕ ಪ್ರಭುದೇವ ಗೆದ್ದಿದ್ದಾರೆ.
ಬಾಲಿವುಡ್ ಸಿನೆಮಾಗಳೆಂದರೆ ನಮ್ಮ ನೇಟಿವಿಟಿಯನ್ನು ನಿರೀಕ್ಷಿಸುವುದಿಲ್ಲ. ನಮ್ಮದೇ ಸ್ಟಾರ್ ಸಿನೆಮಾಗಳಲ್ಲಿ ಕೂಡ ನೇಟಿವಿಟಿ ನಿರೀಕ್ಷಿಸದಂಥ ಸಂದರ್ಭದಲ್ಲಿ, ಈ ಸಿನೆಮಾದಲ್ಲಿ ಗ್ರಾಮೀಣ ಸೊಗಡು ಮನಸೆಳೆಯುತ್ತದೆ. ಡಬ್ಬಿಂಗ್ ಚಿತ್ರಗಳೆಂದರೆ ಅದೇ ಕೇಳಿ ಬೇಸತ್ತ ಕಂಠಗಳೆಂದು ನಿರೀಕ್ಷಿಸಿದವರಿಗೆ ಚಿತ್ರದಲ್ಲಿ ಸಲ್ಮಾನ್ ನದೇ ಕಂಠ ಅಪ್ ಗ್ರೇಡೆಡ್ ಆಗಿ ಕೇಳಿದಂತಾಗುತ್ತದೆ. ಅದಕ್ಕೆ ಕಾರಣ, ಸುಮಂತ್ ಭಟ್ ಎನ್ನುವ ಕಂಠದಾನ ಕಲಾವಿದ ಎಂದು ಹೇಳ ೇಬೇಕು. ಅದೇ ರೀತಿ ಉಳಿದ ಪಾತ್ರಗಳಿಗೆ ಕನ್ನಡದ ಕಲಾವಿದರೇ ಕಂಠದಾನ ಮಾಡಿರುವುದು ಮತ್ತು ಕಲಾವಿದರ ತುಟಿಗಳ ಚಲನೆಗೆ ಹೊಂದುವಂಥ ಗ್ರಾಮ್ಯ ಕನ್ನಡದ ಸಂಭಾಷಣೆಗಳನ್ನು ನೀಡಿರುವುದು ಇದೊಂದು ಕನ್ನಡ ಸಿನೆಮಾನೇ ಎನ್ನುವ ಮಟ್ಟಕ್ಕೆ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಸಂಭಾಷಣೆಕಾರ ಗುರುಗಾಣಿಗ ಅವರನ್ನು ಮೆಚ್ಚಬೇಕು. ಮುಖ್ಯವಾಗಿ ಸುದೀಪ್ ಅಭಿಮಾನಿಗಳ ನಿರೀಕ್ಷೆಯಂತೆ ಚಿತ್ರದಲ್ಲಿ ಸುದೀಪ್‌ಗೆ ಪ್ರಧಾನ ಖಳನ ಪಾತ್ರವೇ ಇದೆ.
ಆದರೆ ಅದು ‘ಈಗ’ ಚಿತ್ರದ ಪಾತ್ರದಲ್ಲಿ ಅವರು ತೋರಿದಂಥ ಖಳನಟನ ಮ್ಯಾನರಿಸಮ್ ಗಿಂತ ಹೊಸದೇನನ್ನೂ ಹೇಳುವುದಿಲ್ಲ. ನವ ಅರ್ಬಾಜ್ ಮತ್ತು ಸೋನಾಕ್ಷಿಯವರದ್ದು ನಿರೀಕ್ಷಿತ ಪಾತ್ರ, ನಟನೆ. ಖುಷಿಯ ಪಾತ್ರದಲ್ಲಿ ಸಾಯಿ ಮಂಜ್ರೇಕರ್ ಸೊಗಸು. ಹಾಡುಗಳಲ್ಲಿ ಸಾಹಿತ್ಯ ಕೈಜಾರದಂತೆ ಅನೂಪ್ ಭಂಡಾರಿ ಎಚ್ಚರಿಕೆ ವಹಿಸಿದ್ದಾರೆ. ಸಂಗೀತ, ಛಾಯಾಗ್ರಹಣ ಆಕರ್ಷಕ. ಮನೋರಂಜನೆ ಬಯಸುವ ಪ್ರೇಕ್ಷಕರಿಗೆ ಎರಡೂ ಮುಕ್ಕಾಲು ಗಂಟೆ ದಾಟಿದ್ದೇ ತಿಳಿಯದಂತೆ ಸಾಗುವ ಚಿತ್ರ ಎಂದು ಹೇಳಬಹುದು.
ತಾರಾಗಣ : ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ, ಸಾಯಿ ಮಂಜ್ರೇಕರ್
ನಿರ್ದೇಶಕ : ಪ್ರಭುದೇವ
ನಿರ್ಮಾಪಕ : ಸಲ್ಮಾನ್ ಖಾನ್, ಅರ್ಬಾಜ್ ಖಾನ್