ಬಂಗಾರದ ಪಂಜರ
ಅಜ್ಜಿ ಹೇಳಿದ ಕತೆ
ಆಕೆ ಚೆಂದುಳ್ಳಿ ಚೆಲುವೆಯಂಥ ರಾಜಕುಮಾರಿ. ಅರಮನೆಯೊಳಗೆ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಸುಕುಮಾರಿ. ಒಮ್ಮೆ ಅವಳು ವಿಹಾರ ಮಾಡುತ್ತಾ ಅರಮನೆಯ ಉದ್ಯಾನವನದಲ್ಲಿರುವಾಗ ಅವಳಷ್ಟೇ ಚೆಂದವಾದ ಗಿಳಿಯೊಂದು ಅವಳ ಕಣ್ಣಿಗೆ ಬೀಳುತ್ತದೆ. ಖುಷಿಯಿಂದ ಗಿಳಿಯ ಅಂದ ಚೆಂದವನ್ನು ನೋಡುತ್ತಾ ಅವಳು ನಿಂತಲ್ಲೇ ನಿಲ್ಲುತ್ತಾಳೆ. ಹೀಗೆ ನಿಂತ ರಾಜಕುಮಾರಿಯನ್ನು ‘‘ಏನ್ ರಾಜುಕುಮಾರಿ ಚೆನ್ನಾಗಿದ್ದೀರಾ?’’ ಎಂದು ಆ ಗಿಳಿ ಪ್ರಶ್ನಿಸಿ ವಿಚಾರಿಸಿದಾಗ ಗಿಳಿ ಮಾತನಾಡುವುದನ್ನು ಕಂಡು ರಾಜಕುಮಾರಿಗೆ ಅಚ್ಚರಿಯಾಗುತ್ತದೆ. ಒಂದು ಕ್ಷಣ ಬಿಟ್ಟ ಕಣ್ಣು ಬಿಟ್ಟಂತೆಯೇ ಆ ಗಿಳಿ ಮಾತಿಗೆ ಮನಸೋತು ವೌನವಾಗಿ ಮಾತನಾಡುವ ಗಿಳಿಯನ್ನೇ ದಿಟ್ಟಿಸುತ್ತಾಳೆ. ವೌನವಾಗಿ ತನ್ನನ್ನೇ ನೋಡುತ್ತಿದ್ದ ರಾಜಕುಮಾರಿಯನ್ನು ಕಂಡು ‘‘ಏನ್ ರಾಜಕುಮಾರಿ ಚೆನ್ನಾಗಿದ್ದೀರಾ ತಾನೆ? ಎಂದು ಮತ್ತೆ ಗಿಳಿ ಕೇಳಿತು.
ಆಗ ರಾಜಕುಮಾರಿ ತನ್ನ ಸುಕೋಮಲ ಕೈಗಳಿಂದ ಆ ಗಿಳಿಯನ್ನು ಹಿಡಿದು ಮುದ್ದಿಸುತ್ತಾ ‘‘ಏನ್ ಚೆಂದಾನೋ ಏನೋ ನನಗಂತೂ ಗೊತ್ತಿಲ್ಲ ಗಿಳಿ. ಅದೇ ಅರಮನೆ, ಅದೇ ನಮ್ಮಪ್ಪ ಮಹಾರಾಜ, ಅದೇ ನಮ್ಮಮ್ಮ ಮಹಾರಾಣಿ, ಅದೇ ಸಿಂಹಾಸನ, ಅದೇ ದರ್ಬಾರು, ಅದೇ ಸೈನಿಕರು, ಅದೇ ಸೇವಕ-ಸೇವಕಿಯರು, ಅದೇ ಸಖಿಯರು, ಅದೇ ಮುಖಗಳು, ಅದೇ ಸ್ಥಳಗಳು, ಅದೇ ರಾಜೋಪಚಾರದ ತಿಂಡಿ ತಿನಿಸುಗಳು, ನನಗಂತೂ ಅದನ್ನೇ ನೋಡಿ ನೋಡಿ ಬೇಜಾರಾಗಿ ಹೋಗಿದೆ’’ ಎಂದು ರಾಜಕುಮಾರಿ ಮಾತನಾಡುವ ಗಿಳಿ ಮುಂದೆ ಬೇಸರದಿಂದ ಹೇಳಿದಳು. ಅವಳ ಬೇಸರದ ಮಾತು ಕೇಳಿದ ಗಿಳಿ ‘‘ಅಯ್ಯಯ್ಯೋ ಮಹಾರಾಜರ ಒಬ್ಳೇ ಮಗ್ಳು ರಾಜಕುಮಾರಿ ನೀವು ಬಾಳ ಸುಖವಾಗಿದ್ದೀರಾ ಅನ್ಕೊಂಡಿದ್ದೆ. ನಿಮ್ಗೂ ಇಷ್ಟೊಂದ್ ಬೇಸ್ರನಾ?’’ ಎಂದು ಅನುಕಂಪ ತೋರಿಸಿದ ಗಿಳಿ ‘‘ನಿಮ್ಗೆ ಬೇಸ್ರ ಕಳಿಯಕ್ಕೆ ನಾನು ದಿನಾಲು ಒಂದು ಕಥೆ ಹೇಳ್ಕೊಡ್ತಿನಿ ಸರಿನಾ’’ ಅಂತ ರಾಜಕುಮಾರಿಗೆ ಮಾತನಾಡುವ ಗಿಳಿ ಬಹು ಪ್ರೀತಿಯಿಂದ ಮಾತು ಕೊಟ್ಟಿತು
. ಅದರಂತೆ ಪ್ರತಿದಿನ ಗಿಳಿ ಉದ್ಯಾನ ವನಕ್ಕೆ ಬಂದು ರಾಜಕುಮಾರಿಯೊಡನೆ ಮಾತನಾಡುತ್ತಾ ಕಥೆ ಹೇಳುತ್ತಿತ್ತು. ಇದರಿಂದ ರಾಜಕುಮಾರಿ ಬೇಸರದಿಂದ ದೂರವಾಗಿ ಸಂತಸ ಪಡುತ್ತಿದ್ದಳು. ರಾಜರಾಣಿಯರ ಕಥೆ, ನರಿ-ಸಿಂಹಗಳ ಕಥೆ, ಕಾಗಕ್ಕ-ಗೂಗಕ್ಕನ ಕಥೆ, ಕಳ್ಳ-ಸುಳ್ಳರ ಕಥೆ, ಬಡವ-ಬಲ್ಲಿದರ ಕಥೆ, ಒಳ್ಳೆಯವರು-ಕೆಟ್ಟವರೆಲ್ಲರ ಕಥೆಗಳೆಲ್ಲವನ್ನೂ ಹೇಳುತ್ತಾ ಮಾತನಾಡುವ ಗಿಳಿಯು ಮಾತನಾಡುತ್ತಲೇ ರಾಜಕುಮಾರಿಗೆ ಬಹಳ ಆತ್ಮೀಯವಾಯಿತು. ಹೀಗೆ ಗಿಳಿ ಮತ್ತು ರಾಜಕುಮಾರಿಯ ಸ್ನೇಹ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಯಿತು. ಕೊನೆಗೆ ಬಿಡಿಸಲಾಗದ ಬಂಧವಾಯಿತು. ಒಂದು ಕ್ಷಣ ಆ ಗಿಳಿ ಬರುವುದು ತಡವಾಯಿತೆಂದರೆ ರಾಜಕುಮಾರಿ ತಳಮಳಿಸುತ್ತಿದ್ದಳು. ಅಷ್ಟೊಂದು ಗಾಢವಾಗಿ ಅವಳು ಗಿಳಿಯನ್ನು ಹಚ್ಚಿಕೊಂಡಿದ್ದಳು. ಪ್ರೀತಿಯಿಂದ ಅದನ್ನು ಮೆಚ್ಚಿಕೊಂಡಿದ್ದಳು.
‘ಹೀಗೇನೋ ಮಾತನಾಡುವ ಈ ಗಿಳಿ ಪ್ರತಿದಿನ ತಪ್ಪದೇ ಬಂದು ಕಥೆ ಹೇಳಿ ನನ್ನನ್ನು ಖುಷಿಪಡಿಸುತ್ತಿದೆ. ಆದರೆ ಮುಂದೆ ಅದು ಬಾರದೇ ಹೋದರೆ?’ ಎಂಬ ಹೀಗೊಂದು ಅನುಮಾನ ರಾಜಕುಮಾರಿಯ ತಲೆಗೆ ಬಂದಿತು. ಆಗ ತಕ್ಷಣವೇ ಅವಳು ಗಿಳಿಗೆ ಒಂದು ಚೂರೂ ಸುಳಿವು ಕೊಡದೆ ರಾಜಭಟರಿಗೆ ಹೇಳಿ ಆ ಗಿಳಿಯನ್ನು ಹಿಡಿದು ಬಂಗಾರದ ಪಂಜರದಲ್ಲಿ ಪ್ರೀತಿಯಿಂದಲೇ ಬಂಧಿಸಿಟ್ಟಳು. ಎಲ್ಲಾ ತರಹದ ರಾಜೋಪಚಾರದ ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಕೊಟ್ಟು ಗಿಳಿಯನ್ನು ಉಪಚರಿಸತೊಡಗಿದಳು. ಹೀಗಿರುವಾಗ ಕೆಲವು ದಿನಗಳು ಮಾತ್ರ ಗಿಳಿಯು ಬಂಗಾರದ ಪಂಜರದೊಳಗಿನಿಂದಲೇ ರಾಜಕುಮಾರಿಗೆ ಕಥೆಗಳನ್ನು ಹೇಳಿತು. ಆದರೆ ಮುಂದಕ್ಕೆ ಅದು ಕಥೆಗಳನ್ನು ಹೇಳಲಾರದೆ ಮುದುಡಿಕೊಂಡು ಪಂಜರದೊಳಗೆ ವೌನವಾಗಿ ಕುಳಿತು ಬಿಟ್ಟಿತು.
ಕಥೆ ಹೇಳದೆ ವೌನವಾದ ಗಿಳಿಯನ್ನು ಕಂಡು ‘‘ಏಕೆ ಗಿಳಿ ವೌನವಾಗಿ ಬಿಟ್ಟೆ? ನಿನ್ನನ್ನು ಬಂಗಾರದ ಪಂಜರದಲ್ಲಿಟ್ಟು ನಿನಗೆ ಬೇಕಾದ್ದೆಲ್ಲವನ್ನೂ ಕೊಟ್ಟು ನಾನು ಪ್ರೀತಿಯಿಂದ ನಿನ್ನನ್ನು ಸಾಕುತ್ತಿರುವೆ’’ ಎಂದು ಕಥೆ ಹೇಳುವಂತೆ ಗಿಳಿಗೆ ರಾಜಕುಮಾರಿ ಒತ್ತಾಯಿಸಿದಳು. ಆಗ ಗಿಳಿ ಬಾಯಿಬಿಟ್ಟಿತು ‘‘ಹೌದು ರಾಜಕುಮಾರಿ ನೀನು ನನಗೆ ಎಲ್ಲವನ್ನೂ ಕೊಟ್ಟು ಬಂಗಾರದ ಪಂಜರದಲ್ಲಿಟ್ಟೆ. ಆದರೆ ಪಂಜರ ಬಂಗಾರದ್ದೇ ಆದರೂ ಅದು ಬಂಧನವೇ. ಇಂತಹ ಬಂಧನದಲ್ಲಿ ನಾನ್ಯಾವ ಕಥೆ ಹೇಳಲಿ’’ ಎಂದು ಗಿಳಿ ನೊಂದು ನುಡಿಯಿತು. ರಾಜಕುಮಾರಿಗೆ ಈಗ ಅರ್ಥವಾಯಿತು. ತಕ್ಷಣವೇ ಗಿಳಿಯನ್ನು ಬಂಗಾರದ ಪಂಜರದಿಂದ ಹೊರಕ್ಕೆ ಬಿಟ್ಟಳು. ಜೈಲಿನಿಂದ ಬಿಡುಗಡೆಯಾದ ಕೈದಿಯ ಮುಖದಂತೆ ಬಂಧ ಮುಕ್ತವಾದ ಗಿಳಿಯ ಮುಖ ಆ ಒಂದು ಗಳಿಗೆಯಲ್ಲಿ ಸಂತಸದಿಂದ ಅರಳಿತು. ಅದನ್ನು ಗಮನಿಸಿದ ರಾಜಕುಮಾರಿ ‘‘ಇಂತಹ ಸಂತಸಕ್ಕೆ ಯಾವ ಅರಮನೆ ಸುಖ ತಾನೆ ಸಾಟಿಯಾದೀತು’’ ಎಂದು ಕೊಂಡಳು.
‘‘ರಾಜಕುಮಾರಿ ನೀನು ಅರಮನೆ ಎಂಬ ಬಂಗಾರದ ಪಂಜರದಲ್ಲಿ ಬಂಧಿಯಾಗಿರುವೆ. ಅಲ್ಲಿಂದ ಹೊರಬಂದು ಜಗತ್ತನ್ನು ನೋಡು. ಆಗ ಕಷ್ಟ ಸುಖ ಅಂದ್ರೆ ಏನೂ ಅಂತ ನಿನಗೆ ಗೊತ್ತಾಗುತ್ತೆ’’ ಎಂದು ರಾಜಕುಮಾರಿಗೆ ಹೇಳಿದ ಗಿಳಿ ಪಟ ಪಟನೆ ರೆಕ್ಕೆ ಬಡಿಯುತ್ತಾ ತನ್ನ ಸ್ವತಂತ್ರ ಬದುಕಿನತ್ತ ಹಾರಿಹೋಯಿತು. ಆದರೆ ತಾನು ಮಾತು ಕೊಟ್ಟಂತೆ ಪ್ರತಿದಿನ ಅರಮನೆ ಉದ್ಯಾನವನಕ್ಕೆ ಬಂದು ರಾಜಕುಮಾರಿಗೆ ಕಥೆ ಹೇಳುವುದನ್ನು ಮಾತ್ರ ಅದು ಎಂದೂ ಮರೆಯಲಿಲ್ಲ.