ಕಲಬುರಗಿಯಲ್ಲಿ ಮತ್ತೆ ಜೋರಾದ ಸಿಎಎ ವಿರೋಧಿ ಪ್ರತಿಭಟನೆ
ಕಲಬುರಗಿ, ಡಿ.23: ಜಿಲ್ಲೆಯಲ್ಲಿ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ಕಲಬುರಗಿ ಜಿಲ್ಲೆಯ ಚಿಂಚೋಳಿ, ಜೇವರ್ಗಿ ಮತ್ತು ಸೇಡಂ ತಾಲೂಕಿನಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯಿತು.
ಚಿಂಚೋಳಿ ಪಟ್ಟಣದ ಬಡಿ ದರ್ಗಾದಿಂದ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು. ಬೀದರ್-ಶ್ರೀರಂಗಪಟ್ಟಣದ ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸಲಾಯಿತು. ಕಪ್ಪು ಪಟ್ಟಿ ಧರಿಸಿ ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲಾಯಿತು. ಈ ವೇಳೆ ಜೇವರ್ಗಿ ಶಾಸಕ ಅಜಯ್‌ಸಿಂಗ್ ಕೂಡ ಭಾಗಿಯಾಗಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಸವಾರರು ಪರದಾಡುವಂತಾಯಿತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು. ಅಲ್ಲದೆ, ತಾಲೂಕು ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.