ಪೊಲೀಸರು ವಿಡಿಯೋವನ್ನು ಮಾಧ್ಯಮಗಳಿಗೆ ನೀಡಿದ್ದು ಯಾಕೆ: ದಿನೇಶ್ ಗುಂಡುರಾವ್ ಪ್ರಶ್ನೆ
ಉಡುಪಿ, ಡಿ.24: ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿದ ಮೇಲೆ ವಿಡಿಯೋಗಳ ಕುರಿತು ತನಿಖೆ ನಡೆಯಬೇಕಾಗಿತ್ತು. ಅದು ಬಿಟ್ಟು ಪೊಲೀಸರು ಯಾಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಮತ್ತು ಮಾಧ್ಯಮಗಳಿಗೆ ನೀಡಿದ್ದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.
ಮಣಿಪಾಲದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಸಿಐಡಿ, ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ಕಮಿಷನರ್, ಇಬ್ಬರು ಇನ್‌ಸ್ಪೆಕ್ಟರ್‌ಗಳ ಮೇಲೆ ಶಂಕೆ ಇದೆ. ಪ್ರತಿಭಟನೆ ಮಾಡುವುದಕ್ಕೆ ಸರಕಾರ ಅವಕಾಶ ಕೊಡಬೇಕಾಗಿತ್ತು. ಪೋಲಿಸರಿಗೆ ಪರಿಸ್ಥಿತಿ ಹ್ಯಾಂಡಲ್ ಮಾಡಲು ಆಗಿಲ್ಲ. ಪೊಲೀಸರು ಪ್ರಚೋದನಕಾರಿಯಾಗಿ ನಡೆದುಕೊಂಡಿದ್ದಾರೆ. ಇದಕ್ಕೆ ಸರಕಾರದ ವೈಫಲ್ಯವೇ ಕಾರಣ ಎಂದು ಅವರು ಟೀಕಿಸಿದರು.
ಎನ್.ಆರ್.ಸಿ ಜಾರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದೇಶವನ್ನು ಒಡೆಯುವ ಕೆಲಸ ಮಾಡಬಾರದು. ಮೋದಿ, ಅಮಿತ್ ಶಾ ತಮ್ಮ ಪ್ರತಿಷ್ಟೆಯನ್ನು ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟುಬಿಡಬೇಕು. ಈ ಬಗ್ಗೆ ಎಲ್ಲರನ್ನೂ ಚರ್ಚೆಗೆ ಕರೆಯಬೇಕು. ಇದರಲ್ಲಿ ಸಂವಿಧಾನ ವಿರೋಧಿ ಅಂಶ ಗಳಿವೆ. ಆದುದರಿಂದ ಇದು ಮೂಲ ಸಿದ್ದಾಂತಕ್ಕೆ ಧಕ್ಕೆ ತರುವ ಕಾನೂನು. ಆದುದರಿಂದ ಸರಕಾರ ಈ ಬಗ್ಗೆ ಪುನರಾಲೋಚನೆ ಮಾಡಬೇಕು ಎಂದರು.
ಗಲಾಟೆ ನಡೆಯಬೇಕೆಂಬ ಉದ್ದೇಶದಿಂದ ಬಿಜೆಪಿ ನಾಯಕರು ಅನವಶ್ಯಕ ವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ, ಸುರೇಶ್ ಅಂಗಡಿ ಇವರೆಲ್ಲ ಬೆಂಕಿ ಹಚ್ಚುವ ಕೆಟಗರಿ ಯವರು. ಪ್ರತಾಪ್ ಸಿಂಹ ಎಲ್ಲಿಂದನೊ ಬಂದು ಅಪ್ಪಿತಪ್ಪಿ ಸಂಸದರಾಗಿದ್ದಾರೆ. ತೇಜಸ್ವಿ, ಸುರೇಶ್, ಸಿ.ಟಿ. ರವಿ ಮೇಲೆ ದೂರು ನೀಡಿದ್ದೇವೆ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.