ಅಗತ್ಯವಿಲ್ಲದ ಬ್ಯಾಂಕ್ ಖಾತೆಗಳನ್ನು ಮುಚ್ಚಿಬಿಡಿ
ಜಾಗೃತಿ
ಹೆಚ್ಚಿನವರು ಬ್ಯಾಂಕುಗಳಲ್ಲಿ ಎಸ್‌ಬಿ ಅಥವಾ ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಈ ಖಾತೆಗಳಲ್ಲಿ ಇರುವುದು ನಮ್ಮದೇ ದುಡ್ಡು, ಆದರೂ ಬ್ಯಾಂಕಿನವರು ಆಗಾಗ್ಗೆ....ವಿಶೇಷವಾಗಿ ಖಾತೆಯಲ್ಲಿ ಕನಿಷ್ಠ ಶಿಲ್ಕು ಕಾಯ್ದುಕೊಳ್ಳದ್ದಕ್ಕಾಗಿ ದಂಡದ ರೂಪದಲ್ಲಿ ಹೆಚ್ಚುವರಿ ಶುಲ್ಕಗಳನ್ನು ನಮ್ಮ ಮೇಲೆ ಹೇರುತ್ತಲೇ ಇರುತ್ತಾರೆ. ಹೀಗೆ ಶುಲ್ಕ ವಿಧಿಸುವಾಗ ಗ್ರಾಹಕರಿಗೆ ಪೂರ್ವ ಸೂಚನೆಯನ್ನು ನೀಡುವ ಕನಿಷ್ಠ ಸೌಜನ್ಯವೂ ಬ್ಯಾಂಕುಗಳಿಗೆ ಇರುವುದಿಲ್ಲ. ತಮಗೆ ಮನಬಂದಂತೆ ಶುಲ್ಕಗಳನ್ನು ನಮ್ಮ ಖಾತೆಗಳಿಂದ ಕಡಿತಗೊಳಿಸುತ್ತಲೇ ಇರುತ್ತವೆ. ಈ ಎಟಿಎಂ ಜಮಾನಾದಲ್ಲಿ ಬ್ಯಾಂಕ್ ಶಾಖೆಗಳಿಗೆ ಹೋಗುವವರು ಕಡಿಮೆ ಮತ್ತು ತಮ್ಮ ಉಳಿತಾಯ ಖಾತೆ ಪಾಸ್‌ಬುಕ್‌ಗಳನ್ನು ಆಗಾಗ್ಗೆ ಅಪ್‌ಡೇಟ್ ಮಾಡಿಸುವವರೂ ಕಡಿಮೆ. ಹೀಗಾಗಿ ಬ್ಯಾಂಕುಗಳು ನಮ್ಮ ಖಾತೆಗಳಿಂದ ಹಣ ಕಡಿತಗೊಳಿಸಿದ್ದು ನಮಗೆ ಗೊತ್ತಾಗುವುದೂ ಕಷ್ಟ. ಇವನ್ನೆಲ್ಲ ಹೆಚ್ಚಿನ ಬ್ಯಾಂಕುಗಳು ಎಸ್‌ಎಂಎಸ್ ಮೂಲಕ ತಿಳಿಸುವ ಗೋಜಿಗೆ ಹೋಗುವುದಿಲ್ಲ.
ಕಳೆದ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿ ಕನಿಷ್ಠ ಸರಾಸರಿ ಶಿಲ್ಕು (ಎಂಎಬಿ) ಅನ್ನು ಕಾಯ್ದುಕೊಳ್ಳದ್ದದಕ್ಕಾಗಿ ಗ್ರಾಹಕರಿಂದ ದಂಡದ ರೂಪದಲ್ಲಿ 9,271 ಕೋ.ರೂ. ಆದಾಯವನ್ನು ಗಳಿಸಿವೆ.
ಈ ರಗಳೆಯಿಂದ ಪಾರಾಗಲು ಅತ್ಯಗತ್ಯವಲ್ಲದ ಬ್ಯಾಂಕ್ ಖಾತೆಗಳನ್ನು ಮುಚ್ಚುವುದು ಒಳ್ಳೆಯ ಮಾರ್ಗವಾಗಿದೆ. ನೀವು ಖಾತೆಯನ್ನು ಮುಚ್ಚಲು ಬಯಸಿದ್ದರೆ ನಿಮ್ಮ ಖಾತೆಯಲ್ಲಿ ಎಂಎಬಿ ಇಲ್ಲವೆಂದು ಬ್ಯಾಂಕುಗಳು ವಿಧಿಸಿದ ದಂಡಶುಲ್ಕಗಳು ಇದ್ದಬದ್ದ ಶಿಲ್ಕನ್ನು ತಿಂದು ಹಾಕಿ ಖಾತೆಯಲ್ಲಿ ಡೆಬಿಟ್ ಬ್ಯಾಲನ್ಸ್ ತೋರಿಸುತ್ತಿದ್ದರೆ ಖಾತೆಯನ್ನು ಮುಚ್ಚಲು ಬ್ಯಾಂಕುಗಳು ಅವಕಾಶ ನೀಡುವುದಿಲ್ಲ. ಅವರು ನಿಮ್ಮ ಖಾತೆಗೆ ಖರ್ಚು ಹಾಕಿರುವ ಮೊತ್ತವನ್ನು ಪಾವತಿಸಿದ ಬಳಿಕವೇ ಖಾತೆಯನ್ನು ಮುಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ಉಳಿತಾಯ ಖಾತೆಯನ್ನು ಮುಚ್ಚಲು ಬಯಸುವವರು ತಮ್ಮ ಖಾತೆಯಲ್ಲಿ ಕನಿಷ್ಠ ಸರಾಸರಿ ಶಿಲ್ಕನ್ನು ಕಾಯ್ದುಕೊಳ್ಳಬೇಕು. ಇದರಿಂದ ಹೆಚ್ಚುವರಿ ಶುಲ್ಕಗಳ ಹೊರೆಯಿಂದ ಪಾರಾಗಬಹುದು.
ಅಲ್ಲದೆ, ನೀವು ಖಾತೆ ಆರಂಭಿಸಿದ ಒಂದು ವರ್ಷದೊಳಗೆ ಅದನ್ನು ಮುಚ್ಚಲು ಬಯಸಿದರೆ ಅದಕ್ಕೂ ಬ್ಯಾಂಕುಗಳು ಸಮಾಪನ ಶುಲ್ಕವನ್ನು ವಿಧಿಸುತ್ತವೆ. ಖಾತೆ ಆರಂಭಿಸಿದ 14 ದಿನಗಳಲ್ಲಿ ಅಥವಾ ಒಂದು ವರ್ಷದ ನಂತರ ಅದನ್ನು ಮುಚ್ಚಿದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. 14 ದಿನಗಳ ನಂತರ ಆದರೆ ಒಂದು ವರ್ಷದೊಳಗೆ ಖಾತೆಯನ್ನು ಮುಚ್ಚಿದರೆ ಈ ಶುಲ್ಕವನ್ನು ಪಾವತಿಸಲೇಬೇಕು.
ಬ್ಯಾಂಕುಗಳು ತಮ್ಮ ಗ್ರಾಹಕರಿಂದ ವಸೂಲು ಮಾಡುವ ಹೆಚ್ಚುವರಿ ಶುಲ್ಕಗಳು ಕೇವಲ ಎಂಎಬಿಗೆ ಸೀಮಿತವಾಗಿಲ್ಲ. ಇನ್ನೂ ಹಲವಾರು ಶುಲ್ಕಗಳನ್ನು ನಮ್ಮ ಖಾತೆಗಳಿಂದ ಕಡಿತಗೊಳಿಸಲಾಗುತ್ತದೆ. ನಗದು ವಹಿವಾಟುಗಳು, ಡಿಜಿಟಲ್ ವಹಿವಾಟುಗಳು, ಉಚಿತ ಮಿತಿಯ ನಂತರ ಎಟಿಎಂ ಹಿಂದೆಗೆತಗಳು, ಎಸ್‌ಎಂಎಸ್ ಶುಲ್ಕಗಳು ಇತ್ಯಾದಿ ಎಂದು ಬ್ಯಾಂಕುಗಳು ಶುಲ್ಕಗಳನ್ನು ವಿಧಿಸುತ್ತಲೇ ಇರುತ್ತವೆ.
ಗ್ರಾಹಕ ಸೇವೆಗಳು ಮತ್ತು ಚಟುವಟಿಕೆಗಳ ಮೇಲೆ ವಿವಿಧ ಶುಲ್ಕಗಳನ್ನು ಹೇರುವುದರಿಂದ ಶಾಖೆಗಳಲ್ಲಿಯ ದೈನಂದಿನ ನಿರ್ವಹಣೆಯ ಖರ್ಚುವೆಚ್ಚಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬ್ಯಾಂಕುಗಳು ಹೇಳುತ್ತವೆ. ಇದು ಸ್ವಲ್ಪ ಮಟ್ಟಿಗೆ ನಿಜ, ಆದರೆ ಬ್ಯಾಂಕುಗಳು, ವಿಶೇಷವಾಗಿ ಖಾಸಗಿ ಬ್ಯಾಂಕುಗಳು ಗ್ರಾಹಕರಿಗೆ ಗೊತ್ತಿಲ್ಲದೆ ಅವರ ಖಾತೆಗಳಿಂದ ವಿವಿಧ ಶುಲ್ಕಗಳನ್ನು ಕಡಿತಗೊಳಿಸುತ್ತವೆ.
ಹೀಗಾಗಿ ಗ್ರಾಹಕರಿಗೆ ಈ ಎಲ್ಲ ಶುಲ್ಕಗಳ ಬಗ್ಗೆ ಗೊತ್ತಿರಬೇಕು. ಬ್ಯಾಂಕಿನ ಸೇವೆ ಇಷ್ಟವಾಗದಿದ್ದರೆ ಅವರು ಕಡಿಮೆ ಮತ್ತು ಸಕಾರಣ ಶುಲ್ಕಗಳನ್ನು ವಿಧಿಸುವ ಬ್ಯಾಂಕುಗಳು ಅಥವಾ ಶೂನ್ಯ ಶಿಲ್ಕು ಖಾತೆಗಳಿಗೆ ಬದಲಾಗಬಹುದು
ಉಳಿತಾಯ ಖಾತೆಯಲ್ಲಿ ಎಂಎಬಿ ಇಲ್ಲದಿದ್ದಾಗ ಬ್ಯಾಂಕುಗಳು ಸಾಮಾನ್ಯವಾಗಿ ಮಾಸಿಕ 200 ರೂ.ನಿಂದ 800 ರೂ.ವರೆಗೂ ಶುಲ್ಕ ವಿಧಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಸ್ವಲ್ಪ ಕಡಿಮೆ ಶುಲ್ಕ ವಿಧಿಸುತ್ತವೆ. ನಗದು ವಹಿವಾಟುಗಳಿಗೆ ಉಚಿತ ಮಿತಿಯ ಬಳಿಕ ಪ್ರತಿ ವಹಿವಾಟಿಗೆ 5 ರೂ.ನಿಂದ 150 ರೂ.ವರೆಗೆ ಶುಲ್ಕ ಹೇರಲಾಗುತ್ತದೆ. ಎಟಿಎಂ ವಹಿವಾಟುಗಳು ಉಚಿತ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ಖಾಸಗಿ ಬ್ಯಾಂಕುಗಳು 20 ರೂ.ನಿಂದ 40 ರೂ.ವರೆಗೆ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 5 ರೂ.ನಿಂದ 10 ರೂ.ಶುಲ್ಕ ವಿಧಿಸುತ್ತವೆ. ಇವು ಸೇರಿದಂತೆ ವಿವಿಧ ಬ್ಯಾಂಕುಗಳು ವಿಧಿಸುವ ಶುಲ್ಕಗಳ ಬಗ್ಗೆ ಮಾಹಿತಿಯಿದ್ದರೆ ಹಾಲಿ ಖಾತೆಯನ್ನು ಮುಚ್ಚಿ ಕಡಿಮೆ ಶುಲ್ಕ ಮತ್ತು ಉತ್ತಮ ಸೇವೆಯ ಬ್ಯಾಂಕಿನಲ್ಲಿ ಹೊಸದಾಗಿ ಖಾತೆಯನ್ನು ಆರಂಭಿಸಬಹುದು.
ಖಾತೆ ಸಮಾಪನ ಶುಲ್ಕಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಹೊಂದಿಲ್ಲ. ಹಿಗಾಗಿ ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಶುಲ್ಕಗಳನ್ನು ವಿಧಿಸುತ್ತವೆ.