ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಜನರ ಆರೋಗ್ಯ: ಇದು ‘ಸಿಂಡೆಮಿಕ್’ಗಳ ಕಾಲ!
ಸಾಂಕ್ರಾಮಿಕ (‘ಎಪಿಡೆಮಿಕ್’) ರೋಗಗಳ ಬೀಡಾಗಿದ್ದ 19 ಮತ್ತು 20ನೇ ಶತಮಾನದ ಜಗತ್ತು ಇಂದು ದೇಹದ ಪರಿಧಿಯಾಚೆಗಿರುವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಪರಿಸರದ ಅಂಶಗಳ ಕಾರಣದಿಂದಾಗಿ ಸೃಷ್ಟಿಯಾಗಿರುವ ‘ಸಿಂಡೆಮಿಕ್’ ರೋಗಗಳ ಕಾಲವಾಗಿದೆ. ಲ್ಯಾನ್ಸೆಟ್ ವರದಿಯ (2017) ಸಲಹೆಯಂತೆ ಪ್ರಪಂಚದಾದ್ಯಂತ ಸರಕಾರಗಳು ‘ಜಾಗತಿಕ ಸಿಂಡೆಮಿಕ್’ಗಳನ್ನು ತಡೆಗಟ್ಟಲು 1 ಬಿಲಿಯನ್ ಡಾಲರ್ ವೆಚ್ಚದ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಾಮಾಜಿಕ ಬದ್ಧತೆಯಿದ್ದರೆ ಇದೇನು ಕಷ್ಟವಾಗಲಾರದು. ಈಗಲಾದರೂ ಸರಕಾರ ಮತ್ತು ವೈದ್ಯಕೀಯ ಕ್ಷೇತ್ರ ಜನರ-ಆರೋಗ್ಯ ಕ್ಷೇತ್ರದ ಈ ಜ್ಞಾನವನ್ನು ತನ್ನೊಳಗೆ ಸೇರಿಸಿಕೊಳ್ಳಬೇಕು.
ಕಾಶ್ಮೀರದ ವಿಧಿ 370ರ ರದ್ದು, ನಿರಂತರ ಭಯೋತ್ಪಾದನೆ ಪ್ರೇರಿತ ಕಲಹಗಳು, ಸರಕಾರದ ಪೆಲೆಟ್ ಗನ್ನುಗಳ ಬಳಕೆ, ಬಹುದಿನಗಳ ಕರ್ಫ್ಯೂ ಹಾಗೂ ಸಂಪರ್ಕ ಕಡಿತದಿಂದ ತೀವ್ರಗೊಳ್ಳುತ್ತಿರುವ ಕಾಶ್ಮೀರಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಲ್ಯಾನ್ಸೆಟ್ ನಿಯತಕಾಲಿಕೆಯು ಇತ್ತೀಚೆಗಿನ ತನ್ನ ಸಂಪಾದಕೀಯದಲ್ಲಿ ಕಾಳಜಿಯನ್ನು ವ್ಯಕ್ತಪಡಿಸಿತ್ತು. ಭಾರತದ ವೈದ್ಯ ಸಮುದಾಯವನ್ನು ಪ್ರತಿನಿಧಿಸುವ ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ (ಐಎಮ್ಎ), ‘‘ಕಾಶ್ಮೀರದ ಜನರ ಆರೋಗ್ಯವನ್ನು ವಿಶ್ಲೇಷಿಸುವ ನೆಪದಲ್ಲಿ ಭಾರತದ ರಾಜಕೀಯ ನಿರ್ಧಾರಗಳ ಬಗ್ಗೆ ಮಾತನಾಡುವ ಯಾವ ಅಧಿಕಾರವೂ ಲ್ಯಾನ್ಸೆಟ್ಗಿಲ್ಲ. ಲ್ಯಾನ್ಸೆಟ್ ನಿಯತಕಾಲಿಕೆಯ ಬಗ್ಗೆ ತಳೆದಿದ್ದ ವಿಶ್ವಾಸ ಮತ್ತು ಗೌರವವನ್ನು ನಾವು ಹಿಂಪಡೆಯುತ್ತಿದ್ದೇವೆ’’ ಎಂದು ಲ್ಯಾನ್ಸೆಟ್ನ ಸಂಪಾದಕೀಯವನ್ನು ಖಂಡಿಸಿದೆ. ಐಎಮ್ಎನ ಈ ನಿಲುವು ಪ್ರಪಂಚದ ವೈದ್ಯಕೀಯ ಮತ್ತು ಜನರ-ಆರೋಗ್ಯ (Population Health Experts) ತಜ್ಞರಿಂದ ಟೀಕೆಗೆ ಒಳಪಟ್ಟಿದೆ. ಜನರ ಆರೋಗ್ಯಕ್ಕೂ ರಾಜಕೀಯ-ಸಾಮಾಜಿಕ ಸ್ಥಿತ್ಯಂತರಗಳಿಗೂ ಸಂಬಂಧವಿಲ್ಲ ಎಂದು ತಿಳಿದಿರುವ ಐಎಮ್ಎ ತನ್ನ ಜನಾರೋಗ್ಯ ಕ್ಷೇತ್ರದ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಿದೆ.
ವ್ಯಕ್ತಿಯ ಆರೋಗ್ಯದಲ್ಲಾಗುವ ಏರಿಳಿತಗಳಿಗೆ ಕಾರಣಗಳನ್ನು ವಿಶ್ಲೇಷಿಸಿದಾಗ ಅನಾರೋಗ್ಯದ ಸಮಗ್ರ ಮುಖದ ಪರಿಚಯವಾಗುತ್ತದೆ. ಸಾಮಾನ್ಯವಾಗಿ ಆರೋಗ್ಯವನ್ನು ವ್ಯಕ್ತಿಯ ನಿಯಂತ್ರಣದಲ್ಲಿರುವ ಅಂಶವೆಂದು ಗ್ರಹಿಸುತ್ತೇವೆ. ಆದರೆ ವ್ಯಕ್ತಿಯ ನೇರ ನಿಯಂತ್ರಣದಲ್ಲಿ ಇಲ್ಲದಿರುವ ಸಾಮಾಜಿಕ-ಆರ್ಥಿಕ- ಸಾಂಸ್ಕೃತಿಕ-ಪರಿಸರದ ಅಂಶಗಳು ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ದೇಹದ ಜೈವಿಕ ಕ್ರಿಯೆಗಳನ್ನೇ ಬದಲಿಸುವಷ್ಟು ಪರಿಣಾಮಕಾರಿಯಾಗಿರುತ್ತವೆ. ಹಲವು ಅಧ್ಯಯನಗಳು (ಸಿಂಗರ್, 1990 ಮತ್ತು ಇತರರು) ಇದಕ್ಕೆ ಪುರಾವೆ ಒದಗಿಸಿದ್ದರೂ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆಯ ಮಾದರಿಗಳು ಈ ಅಂಶಗಳನ್ನು ಗುರುತಿಸುವಲ್ಲಿ ಬಹುಪಾಲು ಸೋತಿವೆ. ಆರೋಗ್ಯವನ್ನು ಕೇವಲ ವ್ಯಕ್ತಿಯ ನಿಯಂತ್ರಣದಲ್ಲಿರುವ ಅಂಶವೆಂದು ಪರಿಗಣಿಸಿರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ರೂಪುಗೊಳ್ಳುವ ಸರಕಾರದ ಯೋಜನೆಗಳು ಸಹ ಸೋಲುತ್ತವೆ. ಉದಾಹರಣೆಗೆ, ಸರಕಾರದ ಆಯುಷ್ಮಾನ್ ಭಾರತದಂತಹ ಆರೋಗ್ಯ ವಿಮೆಯಾಗಲೀ ಅಥವಾ ಒಬ್ಬ ವ್ಯಕ್ತಿಯ ಖಾತೆಗೆ ತಿಂಗಳಿಗೆ ಐದು ಸಾವಿರ ರೂ. ಜಮೆ ಮಾಡುವ ಪ್ರಸ್ತಾವನೆಯಾಗಲೀ ಆ ವ್ಯಕ್ತಿಯ ಪರಿಸರದಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ: ಅದೇ ಕೊಳಕು ರಸ್ತೆ, ಕಲುಷಿತ ವಾಯು ಮತ್ತು ನೀರು, ನೈರ್ಮಲ್ಯದ ಕೊರತೆ, ಉಣ್ಣಲು ಅಪೌಷ್ಟಿಕ ಆಹಾರ, ಅರಣ್ಯ-ಕೃಷಿ ಸಂಕಷ್ಟ, ದುಬಾರಿ ಶಿಕ್ಷಣ, ನಿರುದ್ಯೋಗ ಅಷ್ಟೇ ಅಲ್ಲದೆ ಜೀವನದ ಅಭಿವೃದ್ಧಿಗೆ ಅಗತ್ಯವಿರುವ ಸುರಕ್ಷಿತ ಉದ್ಯೋಗದ ಕೊರತೆ, ಸಾಮಾನ್ಯ ವ್ಯಾಪಾರಿಗಳ ಹತೋಟಿಗೆ ನಿಲುಕದ ಜಾಗತಿಕ ಆರ್ಥಿಕ ಅಸ್ಥಿರತೆ, ಧರ್ಮ ಮತ್ತು ಜಾತಿಯ ಕಲಹಗಳು, ಸಂಸ್ಕೃತಿ-ಪರಂಪರೆಯ ಹೆಸರಿನಲ್ಲಿ ನಡೆಯುವ ಆಯಾ ಸಮುದಾಯದ ಅವೈಜ್ಞಾನಿಕ ಸಂಪ್ರದಾಯ-ನಂಬಿಕೆಗಳು, ಇತ್ಯಾದಿ. ಈ ಎಲ್ಲಾ ಅಂಶಗಳು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತವೆ. ಇವ್ಯಾವುವೂ ವ್ಯಕ್ತಿಯ ಖಾತೆಗೆ ಜಮೆಯಾಗುವ ಹಣದಿಂದಾಗಲಿ ಅಥವಾ ಸೀಮಿತ ಯೋಜನೆಗಳಿಂದಾಗಲಿ ಪೂರ್ಣ ಪರಿಹಾರ ಕಂಡುಕೊಳ್ಳುವುದಿಲ್ಲ. ಹಾಗಾಗಿ ಯೋಜನೆಗಳ ಮೂಲ ಉದ್ದೇಶ ಒಳ್ಳೆಯದಾಗಿದ್ದರೂ ಮಾನವನ ಆರೋಗ್ಯಾಭಿವೃದ್ಧಿಗೆ ಯೋಜನೆಗಳು ಬಹು ಆಯಾಮಗಳನ್ನು ಹೊಂದಬೇಕಾಗುತ್ತದೆ. ಕೇವಲ ರೋಗಗಳ ಚಿಕಿತ್ಸೆಯಿಂದ ಜನರ ಆರೋಗ್ಯ ಸುಧಾರಿಸುವುದಿಲ್ಲ. ಜನರ ಆರೋಗ್ಯ ಸುಧಾರಣೆಯಾಗಲು ರೋಗಗಳು ಸೃಷ್ಟಿಯಾಗದಂತಹ ಪರಿಸರವನ್ನು ರೂಪಿಸಬೇಕು. ಇದು ಸರಕಾರದ ಜವಾಬ್ದಾರಿ. ಏಕೆಂದರೆ ಆರೋಗ್ಯವು ಪ್ರಜೆಯ ಮೂಲಭೂತ ಹಕ್ಕು. ಇಂತಹ ಸುಧಾರಣೆಗೆ ಮೇಲಿನ ಎಲ್ಲಾ ಅಂಶಗಳ ಸುಸ್ಥಿರ ಅಭಿವೃದ್ಧಿಯಾಗಬೇಕು. ಆರೋಗ್ಯವು ವ್ಯಕ್ತಿಯ ನಿಯಂತ್ರಣದಲ್ಲಿ ಇಲ್ಲದಿರುವುದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ಸಂಸ್ಕರಿತ ಆಹಾರ ಉತ್ಪನ್ನಗಳ ಆಕರ್ಷಣೆ. ಐದು ರೂಪಾಯಿಗೆ ಸಿಗುವ ಕೋಕಾ ಕೋಲಾ, ಮೂರು ರುಪಾಯಿಗೆ ಸಿಗುವ ಚಾಕೊಲೆಟ್, ಬಿಸ್ಕೆಟ್, ಬನ್, ಕುರ್ಕುರೆ ಮುಂತಾದ ಸಂಸ್ಕರಿತ ಆಹಾರ ಉತ್ಪನ್ನಗಳು ರುಚಿಕರ ಆದರೆ ಅಪೌಷ್ಟಿಕ. ಅಲ್ಲದೆ ಇದರ ಸೇವನೆ ನಾಲಿಗೆಯ ರುಚಿಮೊಗ್ಗುಗಳಿಗೆ ಆರೋಗ್ಯಕರ ಆಹಾರದ ರುಚಿಯನ್ನೇ ತಿರಸ್ಕರಿಸುವ ಚಟವನ್ನು ಒಗ್ಗಿಸುತ್ತದೆ. ಹಣ್ಣು-ತರಕಾರಿ, ಬೇಳೆ-ಕಾಳುಗಳಿಗಿಂತ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಇವು ಬಡವರನ್ನೂ ಆಕರ್ಷಿಸುತ್ತವೆ. ಇದರಿಂದ ಶ್ರೀಮಂತರ ರೋಗಗಳಾಗಿದ್ದ ಬೊಜ್ಜು, ಸಕ್ಕರೆ ಕಾಯಿಲೆ, ಹೃದ್ರೋಗ ಮತ್ತು ಕ್ಯಾನ್ಸರ್ (ಸಾಂಕ್ರಮಿಕವಲ್ಲದ ರೋಗಗಳು) ಈಗ ಬಡವರನ್ನೂ ಬಾಧಿಸುತ್ತಿವೆ. ಅಷ್ಟೇ ಅಲ್ಲದೆ ವಿಶ್ವದ ಶೇ. 20ರಷ್ಟು ಗ್ರೀನ್ ಹೌಸ್ ಅನಿಲ ಬಿಡುಗಡೆ ಮಾಡುವ ಈ ಆಹಾರ ಉದ್ಯಮಗಳು ಹವಾಮಾನ ಬದಲಾವಣೆಗೂ ಕಾರಣವಾಗಿವೆ (ವಿಶ್ವ ಸಂಸ್ಥೆ ವರದಿ, 2019). ಈ ಅಂಶಗಳ ಕ್ರೋಢೀಕರಣದಿಂದ ಸಾಂಕ್ರಮಿಕವಲ್ಲದ ರೋಗಗಳು ಹೆಚ್ಚುತ್ತಿವೆ. ಐದೇ ತಿಂಗಳಲ್ಲಿ ಕರ್ನಾಟಕದ 13.93 ಲಕ್ಷ ಮಂದಿಗೆ ಹೃದ್ರೋಗ ಸಮಸ್ಯೆ ಕಾಣಿಸಿಕೊಂಡಿರುವುದಕ್ಕೆ ಪರಿಸರ ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೂ ಕಾರಣ (ಎನ್ಸಿಡಿ ಕ್ಲಿನಿಕ್ ವರದಿ, 2019). ಈ ರೋಗಗಳ ಜೊತೆಗೆ ಬಡತನದಿಂದ ಉಂಟಾಗುವ ನೈರ್ಮಲ್ಯದ ಕೊರತೆ ಮತ್ತು ಅಪೌಷ್ಟಿಕತೆ ಸಾಂಕ್ರಮಿಕ ರೋಗಗಳನ್ನೂ ತಂದಿಡುತ್ತದೆ! ಹಾಗಾಗಿ ಶ್ರೀಮಂತರ ರೋಗಗಳು ಎಂದೆನಿಸಿಕೊಳ್ಳುತ್ತಿದ್ದ ಸಾಂಕ್ರಮಿಕವಲ್ಲದ ರೋಗಗಳ ಜೊತೆಗೆ ಸಾಂಕ್ರಮಿಕ ರೋಗಗಳನ್ನೂ ಅನುಭವಿಸಬೇಕಾಗಿರುವ ಪರಿಸ್ಥಿತಿ ಇಂದು ಬಡವರಿಗಿದೆ. ಬಹು ರಾಷ್ಟ್ರೀಯ ಆಹಾರ ಉದ್ಯಮಗಳು ಸರಕಾರಗಳ ಲಾಬಿಗೆ 22.3 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿವೆ. ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಸರಕಾರಗಳೇ ಈ ಕಂಪೆನಿಗಳಿಗೆ ಸುಮಾರು 5 ಟ್ರಿಲಿಯನ್ ಡಾಲರ್ ಹಣವನ್ನು ಸಬ್ಸಿಡಿಗಾಗಿ ವ್ಯಯಿಸಿವೆ (ವಿಶ್ವ ಸಂಸ್ಥೆ ವರದಿ, 2019). ಇನ್ನು ಜನರ ಆರೋಗ್ಯ ಸುಧಾರಣೆ ಹೇಗೆ ಆದೀತು? ಹಾಗೆಯೇ, ಯುದ್ಧ, ಭಯೋತ್ಪಾದನೆ ಮತ್ತು ಆಂತರಿಕ ಕಲಹಗಳು ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಮೂಲ ಕಾರಣಗಳಾಗಬಹುದು. ಉದಾಹರಣೆಗೆ, ನಿರಂತರ ಆಂತರಿಕ ಕಲಹದ ಗೂಡಾಗಿರುವ ಅಫ್ಘಾನಿಸ್ಥಾನ ಮಹಿಳೆಯ ಗರ್ಭಧಾರಣೆಗೆ ಪ್ರಪಂಚದಲ್ಲೇ ಅತಿ ಅಪಾಯಕಾರಿ ದೇಶವೆಂದು ವಿಶ್ವಸಂಸ್ಥೆಯ ಅಧ್ಯಯನಗಳು ತಿಳಿಸಿವೆ. ಇಲ್ಲಿ ಪ್ರತಿ 10 ಲಕ್ಷಕ್ಕೆ 1,600 ತಾಯಂದಿರು ಪ್ರಸವ ಸಮಯದಲ್ಲೇ ಸಾವನ್ನಪ್ಪುತ್ತಾರೆ. ಆಂತರಿಕ ಯುದ್ಧಗಳಿಂದುಂಟಾಗುವ ಸಾವು ನೋವುಗಳು ದೇಶದ ಅಭಿವೃದ್ಧಿಯನ್ನು ಕುಂಟಿತಗೊಳಿಸಿದೆ. ನಿರಂತರ ಬಡತನದಿಂದ ಉಂಟಾಗುವ ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರದ ಕೊರತೆ ಸಾಂಕ್ರಮಿಕ ರೋಗಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ಅತಿ ಹೆಚ್ಚು ಮಕ್ಕಳು ಮತ್ತು ವಯಸ್ಕರು ಕ್ಷಯ ರೋಗ (12,468) ಮಲೇರಿಯಾ (ವರ್ಷಕ್ಕೆ 3,29,754), ಕಾಲರಾ (ವರ್ಷಕ್ಕೆ 1,44,605) ಮುಂತಾದ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆಂತರಿಕ ಕಲಹಗಳ ಬೀಡಾಗಿರುವ ಸೊಮಾಲಿಯಾ, ಇರಾಕ್ ಮತ್ತು ಸುಡಾನ್ ದೇಶಗಳಲ್ಲೂ ಇಂತಹದ್ದೇ ಪರಿಸ್ಥಿತಿಯಿದೆ. ಈ ಸಾಲಿಗೆ ನಮ್ಮ ದೇಶವೂ ಸೇರ್ಪಡೆಯಾಗುತ್ತಿರುವ ಪರಿಸ್ಥಿತಿಗೆ ಕಾರಣಗಳೇನು ಎಂಬುದನ್ನು ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆಂತರಿಕ ಕಲಹ ಮತ್ತು ಭಯೋತ್ಪಾದನೆ ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗುತ್ತವೆ. 2012ರಲ್ಲಿ ಭಾರತದ ಕಾಶ್ಮೀರದ 10 ಜಿಲ್ಲೆಗಳ 400 ಹಳ್ಳಿಗಳಲ್ಲಿ ಸರಕಾರವೇ ನಡೆಸಿರುವ ಅಧ್ಯಯನದ ಪ್ರಕಾರ ಸುಮಾರು ಶೇ.80ಕ್ಕೂ ಅಧಿಕ ಕಾಶ್ಮೀರಿಗಳು ಪೋಸ್ಟ್ ಟ್ರೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಪ್ರೇರಿತ ಖಿನ್ನತೆಗೆ ಒಳಗಾಗಿದ್ದಾರೆ. ಸುಮಾರು ಶೇ.26ರಷ್ಟು ಜನ ನಿರಂತರ ಆತಂಕದ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಕಾಶ್ಮೀರದ ಒಬ್ಬ ವ್ಯಕ್ತಿಯು ಆತನ/ಆಕೆಯ ಜೀವಮಾನದಲ್ಲಿ ಸರಾಸರಿ 8 ಹಿಂಸಾತ್ಮಕ ಕಲಹಗಳನ್ನು ಕಣ್ಣಾರೆ ಕಂಡಿರುತ್ತಾರೆ. ಆಂತರಿಕ ಕಲಹ, ಭಯೋತ್ಪಾದನೆ ಮತ್ತು ನೆರೆ ದೇಶಗಳ ನಡುವಿನ ಕಲಹಗಳನ್ನು ಪ್ರಗತಿಪರ, ಜೀವಪರ ಮತ್ತು ವೈಚಾರಿಕ ಪ್ರಜ್ಞೆಯ ರಾಜಕೀಯ ನಿಲುವುಗಳಿಂದ ಪರಿಹರಿಸಿಕೊಳ್ಳಬಹುದು. ಈ ರೀತಿಯ ರಾಜಕೀಯ ಪ್ರಜ್ಞೆಗೆ ಸಾಮಾಜಿಕ-ಆರ್ಥಿಕ-ಪರಿಸರದ ಸ್ಥಿತ್ಯಂತರಗಳ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಗ್ರಹಿಕೆ ಇರಬೇಕಾಗುತ್ತದೆ. ಆದರೆ ಇದು ಸಾಧ್ಯವಾಗದೆ ಜನರ ಆರೋಗ್ಯ ಬಲಿಯಾಗಿದೆ.
ವಿವಿಧ ಅಂಶಗಳು ಕ್ರೋಡೀಕರಣಗೊಳ್ಳುತ್ತಾ ವ್ಯಕ್ತಿಯ ಆರೋಗ್ಯವನ್ನು ಹದಗೆಡಿಸುವ ಇಂತಹ ಪ್ರಕ್ರಿಯೆಗೆ ‘ಸಿಂಡೆಮಿಕ್’ ಎನ್ನಲಾಗುತ್ತದೆ. ಸಾಂಕ್ರಾಮಿಕ (‘ಎಪಿಡೆಮಿಕ್’) ರೋಗಗಳ ಬೀಡಾಗಿದ್ದ 19 ಮತ್ತು 20ನೇ ಶತಮಾನದ ಜಗತ್ತು ಇಂದು ದೇಹದ ಪರಿಧಿಯಾಚೆಗಿರುವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಪರಿಸರದ ಅಂಶಗಳ ಕಾರಣದಿಂದಾಗಿ ಸೃಷ್ಟಿಯಾಗಿರುವ ‘ಸಿಂಡೆಮಿಕ್’ ರೋಗಗಳ ಕಾಲವಾಗಿದೆ. ಲ್ಯಾನ್ಸೆಟ್ ವರದಿಯ (2017) ಸಲಹೆಯಂತೆ ಪ್ರಪಂಚದಾದ್ಯಂತ ಸರಕಾರಗಳು ‘ಜಾಗತಿಕ ಸಿಂಡೆಮಿಕ್’ಗಳನ್ನು ತಡೆಗಟ್ಟಲು 1 ಬಿಲಿಯನ್ ಡಾಲರ್ ವೆಚ್ಚದ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಾಮಾಜಿಕ ಬದ್ಧತೆಯಿದ್ದರೆ ಇದೇನು ಕಷ್ಟವಾಗಲಾರದು. ಈಗಲಾದರೂ ಸರಕಾರ ಮತ್ತು ವೈದ್ಯಕೀಯ ಕ್ಷೇತ್ರ ಜನರ-ಆರೋಗ್ಯ ಕ್ಷೇತ್ರದ ಈ ಜ್ಞಾನವನ್ನು ತನ್ನೊಳಗೆ ಸೇರಿಸಿಕೊಳ್ಳಬೇಕು.
(ಡಾ. ಸುಶಿ ಕಾಡನಕುಪ್ಪೆ ಎಮ್.ಡಿ.ಎಸ್., ಪಿಎಚ್ಡಿ. ರೀಡರ್,
ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗ,
ವಿ.ಎಸ್. ದಂತ ಮಹಾವಿದ್ಯಾನಿಲಯ ಮತ್ತು ಆಸ್ಪತ್ರೆ
ಬೆಂಗಳೂರು
ಸಲಹಾಗಾರರು: ಜೀವನಕೌಶಲ್ಯ ಮತ್ತು ಪೀರ್ಎಜುಕೇಶನ್, ರಾಜೀವ್ಗಾಂಧಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೂತ್ ಡೆವಲಪ್ಮೆಂಟ್, ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್ ಆ್ಯಂಡ್ ಸ್ಪೋರ್ಟ್ಸ್, ಭಾರತ ಸರಕಾರ, ಶ್ರೀಪೆರಂಬದೂರ್)