ಮಕ್ಕಳ ಬೆಳವಣಿಗೆಗೆ ಪರಿಸರ ಪೂರಕವಾಗಿರಲಿ: ಬಿ.ಎಸ್.ಯಡಿಯೂರಪ್ಪ
ಚಿಣ್ಣರ ಮಾಸೋತ್ಸವದ ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ, ಡಿ.25: ಮಕ್ಕಳು ಭತ್ತ ತುಂಬುವ ಚೀಲಗಳಾಗಬಾರದು, ಅವರು ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂಬ ಕುವೆಂಪು ಅವರ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೆತ್ತವರು ಹಾಗೂ ಅಧ್ಯಾಪಕರು ನಿಭಾಯಿಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳೂರಿನ ಓಎನ್ಜಿಸಿ-ಎಂಆರ್ಪಿಎಲ್ಗಳ ಸಹಯೋಗದೊಂದಿಗೆ ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಹಾಗೂ ಸ್ನಾನಗೃಹ ‘ಸ್ವಚ್ಛಾಂಗಣ’ವನ್ನು ಉದ್ಘಾಟಿಸಿ, ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀಕೃಷ್ಣ ಮಠದ ಚಿಣ್ಣ ಸಂತರ್ಪಣೆ ಶಾಲೆಗಳ ಮಕ್ಕಳಿಗಾಗಿ ನಡೆದ ಚಿಣ್ಣರ ಮಾಸೋತ್ಸವದ ವಿಜೇತ ಶಾಲೆಗಳಿಗೆ ಹಾಗೂ ಮಕ್ಕಳಿಗೆ ಬಹುಮಾನವನ್ನು ರಾಜಾಂಗಣದಲ್ಲಿ ವಿತರಿಸಿ ಅವರು ಮಾತನಾಡುತಿದ್ದರು.
ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಪೂರಕ ಪರಿಸರವನ್ನು, ಶುದ್ಧ ಪರಿಸರವನ್ನು ಒದಗಿಸಿದರೆ, ಮಕ್ಕಳು ಆರೋಗ್ಯ ಪೂರ್ಣರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ ಅತ್ಯಾಧುನಿಕ ರೀತಿಯಲ್ಲಿ ‘ಸ್ವಚ್ಛಾಂಗಣ’ ನಿರ್ಮಾಣ ಗೊಂಡಿದೆ ಎಂದೂ ಯಡಿಯೂರಪ್ಪ ಶ್ಲಾಘಿಸಿದರು.
ಪಲಿಮಾರುಮಠದ ಶ್ರೀವಿದ್ಯಾಧೀಶತೀರ್ಥರ ಹಿಂದಿನ ಪರ್ಯಾಯ ಸಂದರ್ಭದಲ್ಲಿ ಪ್ರಾರಂಭಗೊಂಡ ಚಿಣ್ಣರ ಸಂತರ್ಪಣೆ ಕಳೆದ 16 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ರಾಜ್ಯ ಸರಕಾರ ಬಿಸಿಯೂಟ ಯೋಜನೆಯನ್ನು ಪ್ರಾರಂಭಿಸುವ ಮೊದಲೇ ಸ್ವಾಮೀಜಿ ಈ ಯೋಜನೆಯನ್ನು ಆರಂಭಿಸಿ ಮಾದರಿಯಾಗಿದ್ದಾರೆ ಎಂದೂ ಅವರು ಹೇಳಿದರು.
ಇದೀಗ ಕೃಷ್ಣ ಮಠದ ಪರಿಸರದಲ್ಲಿ ಎಂಆರ್ಪಿಎಲ್ನ ಸಿಎಸ್ಆರ್ ಯೋಜನೆಯಡಿ ಎರಡು ಕೋಟಿರೂ.ಗಳ ವೆಚ್ಚದಲ್ಲಿ ಶೌಚಾಲಯ ಸಮುಚ್ಛಯ ವನ್ನು ನಿರ್ಮಿಸಿ ಇಲ್ಲಿಗೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ನೀಡಿರುವುದು ಅನುಕರಣೀಯ. ಎಲ್ಲರೂ ಸೇರಿ ಕರ್ನಾಟಕವನ್ನು ಸ್ವಚ್ಛವಾಗಿಸುವ ಮೂಲಕ ಸ್ವಚ್ಛ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪೌರತ್ವ ಕಾಯ್ದೆ ಅಗತ್ಯ: ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮಾತನಾಡಿದರು. ಸುರಕ್ಷಿತ ಭಾರತದ ನಿರ್ಮಾಣಕ್ಕೆ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೊಳ್ಳಬೇಕು ಎಂದರು.
ಕಾಯ್ದೆ ಜಾರಿಯಿಂದ ಯಾರಿಗೂ ಹಾನಿ ಇಲ್ಲ. ಇದರಿಂದ ದೇಶಕ್ಕೆ ಉಗ್ರರ ಹಾವಳಿ ತಪ್ಪಲಿದೆ. ಮಹಿಳೆಯರು ರಾತ್ರಿ 12 ಗಂಟೆಯಲ್ಲೂ ಸುರಕ್ಷಿತವಾಗಿ ನಡೆದಾಡಬಹುದು. ಭಾರತೀಯರಿಗೆ ರಕ್ಷಣೆ ನೀಡುವ ಕಾಯ್ದೆ ಇದಾಗಿದ್ದು, ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಮೀನುಗಾರಿಕಾ ಹಾಗೂ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್, ಸುನಿಲ್ ಕುಮಾರ್, ಎಂಆರ್ಪಿಎಲ್ನ ಎಂಡಿ ಎಂ.ವೆಂಕಟೇಶ್, ಪೌರಾಯುಕ್ತ ಆನಂದ ಕಲ್ಲೊಳಿಕರ್ ವೇದಿಕೆಯಲ್ಲಿದ್ದರು.
ಪಲಿಮಾರು ಮಠದ ದಿವಾಣರಾದ ಶಿಬರೂರು ವೇದವ್ಯಾಸ ತಂತ್ರಿ ಅತಿಥಿಗಳನ್ನು ಸ್ವಾಗತಿಸಿದರೆ, ಆಡಳಿತಾಧಿಕಾರಿ ಪ್ರಹ್ಲಾದ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೆ ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರಲ್ಲದೇ, ಸ್ವಾಮೀಜಿಗಳಿಂದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.