ಗುಜರಾತ್ ದಂಗೆಗಳಲ್ಲಿ ಆಸ್ತಿ ನಷ್ಟವನ್ನು ಯಾರು ಭರಿಸಿದ್ದರು?
ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಆಸ್ತಿ ಜಪ್ತ್ತಿ
ಭಾರತವು ಪ್ರತಿಭಟನೆಗಳು ಮತ್ತು ಕೋಮುದಂಗೆಗಳೊಂದಿಗೆ ಗುರುತಿಸಿಕೊಂಡ ವಿವಿಧ ಬಗೆಯ ಹಿಂಸಾಚಾರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಧ್ವಂಸದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ ದಂಗೆ ಆರೋಪಿಗಳ ವಿರುದ್ಧ ‘ಪ್ರತೀಕಾರ’ವನ್ನು ಬಹಿರಂಗವಾಗಿ ಘೋಷಿಸಲಾಗಿದೆ. ಬಹುಶಃ ಇದು ಪೊಲೀಸರು ಹಿಂಸಾಚಾರದ ಆರೋಪಿಗಳು ಎಂದು ಮುಸ್ಲಿಮರನ್ನು ಭಾರೀ ಸಂಖ್ಯೆಯಲ್ಲಿ ಗುರುತಿಸುತ್ತಿರುವ ಅಪರೂಪದ ಸಂದರ್ಭಗಳಲ್ಲೊಂದಾಗಿರುವುದು ಇದಕ್ಕೆ ಕಾರಣವೇ?
ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಆಸ್ತಿಪಾಸ್ತಿಗಳಿಗೆ ಆಗಿರುವ ನಷ್ಟವನ್ನು ಪ್ರತಿಭಟನಾಕಾರರಿಂದ ವಸೂಲು ಮಾಡುವ ಆದೇಶವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಬ್ಬರದೇ ನಿರ್ಧಾರವಾಗಿದೆ ಎಂದು ಯಾರಾದರೂ ಭಾವಿಸಿದ್ದರೆ ಮಂಗಳವಾರ ಲಕ್ನೋದಲ್ಲಿ ಮಾಡಿದ ತನ್ನ ಭಾಷಣದಲ್ಲಿ ಯೋಗಿ ಕ್ರಮವನ್ನು ಸ್ಪಷ್ಟ ಶಬ್ದಗಳಲ್ಲಿ ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಸುಳ್ಳು ಮಾಡಿದ್ದಾರೆ.
ಪ್ರತಿಭಟನೆ ಸಂದರ್ಭ ಹಿಂಸಾಚಾರದಲ್ಲಿ ತೊಡಗಿದ್ದರು ಎಂದು ಗುರುತಿಸಲಾಗಿರುವ 28 ಜನರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿರುವ ರಾಮಪುರ ಆಡಳಿತವು, ತಮ್ಮ ನಿಲುವನ್ನು ವಿವರಿಸುವಂತೆ ಇಲ್ಲವೇ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆ ಸೂಚಿಸಿದೆ. ಮುಝಫ್ಫರ್‌ನಗರದಲ್ಲಿ ಸುಮಾರು ಮೂರು ಡಝನ್ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಅವುಗಳಲ್ಲಿರುವ ಸರಕುಗಳನ್ನು ಮತ್ತು ಅಗತ್ಯವಾದರೆ ಅಂಗಡಿಗಳನ್ನೂ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡುವುದು ಈ ಕ್ರಮದ ಉದ್ದೇಶವಾಗಿದೆ. ಕಾನ್ಪುರದಲ್ಲಿ 28 ಜನರನ್ನು ಆಸ್ತಿ ನಷ್ಟದಲ್ಲಿ ಭಾಗಿಯಾದವರು ಎಂದು ಗುರುತಿಸಲಾಗಿದೆ.
ಭಾರತವು ಪ್ರತಿಭಟನೆಗಳು ಮತ್ತು ಕೋಮುದಂಗೆಗಳೊಂದಿಗೆ ಗುರುತಿಸಿಕೊಂಡ ವಿವಿಧ ಬಗೆಯ ಹಿಂಸಾಚಾರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಧ್ವಂಸದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ ದಂಗೆ ಆರೋಪಿಗಳ ವಿರುದ್ಧ ‘ಪ್ರತೀಕಾರ’ವನ್ನು ಬಹಿರಂಗವಾಗಿ ಘೋಷಿಸಲಾಗಿದೆ. ಬಹುಶಃ ಇದು ಪೊಲೀಸರು ಹಿಂಸಾಚಾರದ ಆರೋಪಿಗಳು ಎಂದು ಮುಸ್ಲಿಮರನ್ನು ಭಾರೀ ಸಂಖ್ಯೆಯಲ್ಲಿ ಗುರುತಿಸುತ್ತಿರುವ ಅಪರೂಪದ ಸಂದರ್ಭಗಳಲ್ಲೊಂದಾಗಿರುವುದು ಇದಕ್ಕೆ ಕಾರಣವೇ?
ಗುಜರಾತ್ ಕೋಮು ದಂಗೆಗಳ ಸಂದರ್ಭ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ವಿರುದ್ಧವೂ ಇಂತಹುದೇ ಕ್ರಮವನ್ನು ಕೈಗೊಳ್ಳಲಾಗಿತ್ತೇ? ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ್ದ ಹಿಂಸಾಚಾರಗಳ ಕುರಿತು ವಿಕಿಪೀಡಿಯಾ ಲೇಖನದಲ್ಲಿಯ ಕೆಲವು ಆಯ್ದ ಭಾಗಗಳು ಇಲ್ಲಿವೆ.....
‘‘ದಂಗೆಗಳ ಸಂದರ್ಭ 420 ಲ.ರೂ.ವೌಲ್ಯದ ಆಸ್ತಿಗಳನ್ನು ಧ್ವಂಸಗೊಳಿಸಲಾಗಿತ್ತು, ಈ ಪೈಕಿ ಮುಸ್ಲಿಮರು 320 ಲ.ರೂ.ವೌಲ್ಯದ ಆಸ್ತಿಗಳನ್ನು ಕಳೆದುಕೊಂಡಿದ್ದರು. ಆಸ್ತಿಪಾಸ್ತಿಗಳಿಗೆ ವ್ಯಾಪಕ ನಷ್ಟವನ್ನುಂಟು ಮಾಡಲಾಗಿತ್ತು. 273 ದರ್ಗಾಗಳು, 241ಮಸೀದಿಗಳು, 19ದೇವಸ್ಥಾನಗಳು ಮತ್ತು ಮೂರು ಚರ್ಚ್ ಗಳನ್ನು ಧ್ವಂಸಗೊಳಿಸಲಾಗಿತ್ತು ಅಥವಾ ಹಾನಿಯನ್ನುಂಟು ಮಾಡಲಾಗಿತ್ತು. 100,000 ಮನೆಗಳು, 1,100 ಹೋಟೆಲ್‌ಗಳು, 15,000 ಉದ್ಯಮಗಳು, 3,000 ಕೈಗಾಡಿಗಳು ಮತ್ತು 5,000 ವಾಹನಗಳು ಇವು ಮುಸ್ಲಿಮರು ಅನುಭವಿಸಿದ್ದ ಆಸ್ತಿ ನಷ್ಟದ ಅಂದಾಜುಗಳಾಗಿವೆ’’
ಈ ಬೃಹತ್ ನಷ್ಟವನ್ನು ಯಾರು ಪಾವತಿಸಿದ್ದರು? ಹಿಂಸಾಚಾರದ ಆರೋಪಿಗಳಿಂದ ಇದನ್ನು ಬಲಾತ್ಕಾರದಿಂದ ವಸೂಲು ಮಾಡಲಾಗಿತ್ತೇ?
‘‘ದಂಗೆಗಳಿಗೆ ಸಂಬಂಧಿಸಿದಂತೆ ಒಟ್ಟು 27,780 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ 11,167 ಜನರನ್ನು (3,269 ಮುಸ್ಲಿಮರು, 7,896 ಹಿಂದೂಗಳು) ಕ್ರಿಮಿನಲ್ ಚಟುವಟಿಕೆಗಳಿಗಾಗಿ ಮತ್ತು 16,615 ಜನರನ್ನು (2,811 ಮುಸ್ಲಿಮರು, 13,804 ಹಿಂದೂಗಳು) ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಬಂಧಿತರ ಪೈಕಿ ಶೇ.90ರಷ್ಟು ಜನರಿಗೆ, ಕೊಲೆ ಮತ್ತು ಬೆಂಕಿ ಹಚ್ಚುವಿಕೆ ಶಂಕೆಗಳಲ್ಲಿ ಅವರನ್ನು ಬಂಧಿಸಲಾಗಿತ್ತಾದರೂ, ತಕ್ಷಣವೇ ಜಾಮೀನುಗಳನ್ನು ಮಂಜೂರು ಮಾಡಲಾಗಿತ್ತು ಎಂದು ಸಿಸಿಟಿ ಟ್ರಿಬ್ಯೂನಲ್ ವರದಿ ಮಾಡಿತ್ತು. ಹಾಗೆ ಬಿಡುಗಡೆಗೊಂಡವರಿಗೆ ರಾಜಕೀಯ ನಾಯಕರು ಸಾರ್ವಜನಿಕ ಸ್ವಾಗತಗಳನ್ನು ನೀಡಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿದ್ದವು’’ ಎಂದು ಇದೇ ಲೇಖನದಲ್ಲಿ ಹೇಳಲಾಗಿದೆ.
ಇತರ ವರದಿಗಳಂತೆ ಎರಡು ಲಕ್ಷಕ್ಕೂ ಅಧಿಕ ಮುಸ್ಲಿಮರು ನಿರ್ವಸಿತರಾಗಿದ್ದರು ಮತ್ತು 17 ವರ್ಷಗಳೇ ಕಳೆದಿದ್ದರೂ ಅವರಲ್ಲಿ ಹೆಚ್ಚಿನವರು ಈಗಲೂ ಕೊಳಗೇರಿಗಳ ಜೋಪಡಿಗಳಲ್ಲಿ ಬದುಕುತ್ತಿದ್ದಾರೆ.
ಹೀಗಾಗಿ ಬಲಿಪಶುಗಳು ಮುಸ್ಲಿಮರಾಗಿದ್ದು, ಅಪರಾಧಿಗಳು ಹಿಂದೂಗಳಾಗಿದ್ದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅವರನ್ನು ಯುದ್ಧವನ್ನು ಗೆದ್ದ ವೀರರಂತೆ ಸ್ವಾಗತಿಸಲಾಗುತ್ತದೆ. ಆದರೆ ಅಪರಾಧಿಗಳು ಮುಸ್ಲಿಮರಾಗಿದ್ದರೆ ಅವರು ‘ಪ್ರತೀಕಾರ’ವನ್ನು ಎದುರಿಸಬೇಕಾಗುತ್ತದೆ. 2014ರಿಂದೀಚಿಗೆ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳಲ್ಲಿ 24 ಮುಸ್ಲಿಮರು ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಹಿಂದೂ ಅಪರಾಧಿಗಳನ್ನು ಬಲವಂತಗೊಳಿಸಲಾಗಿತ್ತೇ? ಇಲ್ಲ, ಬದಲಿಗೆ ಇಂತಹ ಹಲವಾರು ಅಪರಾಧಿಗಳನ್ನು ರಾಜಕೀಯ ನಾಯಕರು ಬಹಿರಂಗವಾಗಿಯೇ ಸನ್ಮಾನಿಸಿದ್ದಾರೆ. ಅಸ್ಸಾಮಿನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿ ನಷ್ಟ ಸಂಭವಿಸಿದೆ. ಪ್ರತಿಭಟನಾಕಾರರಿಂದ ನಷ್ಟದ ಮೊತ್ತವನ್ನು ವಸೂಲು ಮಾಡುವಂತೆ ಪ್ರಧಾನಿಯರೇಕೆ ಆ ರಾಜ್ಯದ ತನ್ನ ಪಕ್ಷದ ಮುಖ್ಯಮಂತ್ರಿಗೆ ಸೂಚಿಸಬಾರದು?
ಸರಕಾರವು ಪ್ರತಿಭಟನಾಕಾರರನ್ನು ಸಮಾಧಾನಿಸುವ ಮತ್ತು ದೋಷಪರಿಹಾರಕ ಸಾಂವಿಧಾನಿಕ ಕ್ರಮಗಳ ಮೂಲಕ ಅವರಲ್ಲಿಯ ಭೀತಿಯನ್ನು ನಿವಾರಿಸುವ ಬದಲು ಜನರಲ್ಲಿ ಕೋಮು ಆಧಾರದಲ್ಲಿ ಇನ್ನಷ್ಟು ಒಡಕು ಮೂಡಿಸಲು ಇದನ್ನು ಬಳಸಿಕೊಳ್ಳುವ ಯೋಜನೆಯನ್ನು ಹೊಂದಿರುವಂತಿದೆ ಮತ್ತು ಇದು ಅವರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸೂಕ್ತವಾಗಿದೆ.