ಬಿಜೆಪಿ ವಾದಿಸುವಂತೆ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಶೇ. 23ರಿಂದ ಶೇ. 3.7ಕ್ಕೆ ಇಳಿದಿದ್ದು ನಿಜವೇ?
ಸ್ವತಂತ್ರ ರಾಷ್ಟ್ರವಾದ ಬಳಿಕ ಪಾಕಿಸ್ತಾನದಲ್ಲಿ 1951ರಲ್ಲಿ ಮೊದಲ ಜನಗಣತಿ ನಡೆಸಲಾಯಿತು. ಈ ಜನಗಣತಿಯಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎರಡೂ ಒಳಗೊಂಡಿದ್ದವು. ಈ ಜನಗಣತಿಯ ಪ್ರಕಾರ, 1951ರಲ್ಲಿ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 85.80 ಆಗಿತ್ತು; ಮುಸ್ಲಿಮೇತರರ ಪಾಲು ಶೇ. 14.20 ಆಗಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ: 1951ರ ಜನಗಣತಿಯಲ್ಲಿ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಒಂದೇ ಸಮವಾಗಿ ಹಂಚಿಕೊಂಡಿರಲಿಲ್ಲ: ಪಶ್ಚಿಮ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಕೇವಲ ಶೇ. 3.44 ಇತ್ತು, ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾ ದೇಶದಲ್ಲಿ) ಅವರ ಸಂಖ್ಯೆ ಶೇ. 23.20 ಆಗಿತ್ತು.
ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ (ಕ್ಯಾಬ್) ಮಂಡಿಸುತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು: ‘‘ಸ್ವಾತಂತ್ರದ ವೇಳೆ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ.23ರಷ್ಟು ಇದ್ದ ಮುಸ್ಲಿಮೇತರರು 2011ರ ವೇಳೆಗೆ ಶೇ 3.77ಕ್ಕೆ ಇಳಿದಿದ್ದರು.’’
ಶಾ ಮುಂದುವರಿದು ಹೇಳಿದರು:
‘‘1947ರಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಶೇ. 22ರಷ್ಟಿದ್ದ ಮುಸ್ಲಿಮೇತರರ ಜನಸಂಖ್ಯೆ 2011ರಲ್ಲಿ ಶೇ.7.8ಕ್ಕೆ ಇಳಿಯಿತು.’’
ರಾಜ್ಯ ಸಭೆಯಲ್ಲಿ ಕ್ಯಾಬ್ನ್ನು ಮಂಡಿಸುವಾಗಲೂ ಅಮಿತ್ ಶಾ ತನ್ನ ಇದೇ ವಾದವನ್ನು ಪುನರುಚ್ಚರಿಸಿದರು. ಬಿಜೆಪಿ ಮತ್ತು ಅದರ ಬೆಂಬಲಿಗರು ಇದೇ ವಾದವನ್ನು ಮಂಡಿಸುತ್ತಾ ಬಂದಿದ್ದಾರೆ. 1947ರಲ್ಲಿ ದೇಶ ವಿಭಜನೆಯಾದ ಬಳಿಕ ಮುಸ್ಲಿಮೇತರರು (ವಿಶೇಷವಾಗಿ ಹಿಂದೂಗಳು) ಭಾರೀ ಕಿರುಕುಳಕ್ಕೆ ಗುರಿಯಾಗಿದ್ದಾರೆಂದು ಸಾಬೀತು ಪಡಿಸಲು ಬಿಜೆಪಿ ಮತ್ತು ಅದರ ಬಲಪಂಥೀಯ ಹಿಂದೂ ಸಂಘಟನೆಗಳು ಇದೇ ರೀತಿಯ ಅಂಕಿ ಸಂಖ್ಯೆಗಳನ್ನು ಉಲ್ಲೇಖಿಸುತ್ತ ಬಂದಿವೆ.
ಆದರೆ ಈ ಅಂಕಿಸಂಖ್ಯೆಗಳು ಎಷ್ಟು ಸತ್ಯ? ಇಂತಹ ವಾದಗಳಿಗೆ ಆಧಾರವೇನು?
ಪಾಕಿಸ್ತಾನದ ಜನಗಣತಿಯ ದತ್ತಾಂಶಗಳನ್ನು ವಿಶ್ಲೇಷಿಸಿರುವ ‘ಇಂಡಿಯಾ ಟುಡೇ’ ಈ ಅಂಕಿ ಸಂಖ್ಯೆಗಳು ನಿಜವಲ್ಲ; ದೋಷಪೂರಿತವೆಂದು ತೋರಿಸಿಕೊಟ್ಟಿದೆ.
1947ರ ಆಗಸ್ಟ್ 14ರಂದು ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾದಾಗ ಅದರಲ್ಲಿ ಆಗ ಪೂರ್ವ ಪಾಕಿಸ್ತಾನವೆಂದು ಕರೆಯಲಾಗುತ್ತಿದ್ದ, ಇಂದಿನ ಬಾಂಗ್ಲಾದೇಶವೂ ಸೇರಿತ್ತು. ಅಮಿತ್ ಶಾ ತಾನು ನೀಡಿದ ಅಂಕಿ ಸಂಖ್ಯೆಗಳಿಗೆ ಮೂಲ ಆಧಾರ ಯಾವುದೆಂದು ಹೇಳಿಲ್ಲ.
1940ರಿಂದ ನಡೆದಿರುವ ಜನಗಣತಿಯಲ್ಲಿ ಅವಿಭಜಿತ ಭಾರತದ ಜನಸಂಖ್ಯೆಯ ಅಂಕಿ ಸಂಖ್ಯೆಗಳಿರುವುದರಿಂದ ಅವುಗಳನ್ನು ಉಲ್ಲೇಖಿಸಿ ಈಗ ವಾದಿಸುವುದು ಅರ್ಥಹೀನವಾಗುತ್ತದೆ.
ಸ್ವತಂತ್ರ ರಾಷ್ಟ್ರವಾದ ಬಳಿಕ ಪಾಕಿಸ್ತಾನದಲ್ಲಿ 1951ರಲ್ಲಿ ಮೊದಲ ಜನಗಣತಿ ನಡೆಸಲಾಯಿತು. ಈ ಜನಗಣತಿಯಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎರಡೂ ಒಳಗೊಂಡಿದ್ದವು. ಈ ಜನಗಣತಿಯ ಪ್ರಕಾರ, 1951ರಲ್ಲಿ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 85.80 ಆಗಿತ್ತು; ಮುಸ್ಲಿಮೇತರರ ಪಾಲು ಶೇ. 14.20 ಆಗಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ: 1951ರ ಜನಗಣತಿಯಲ್ಲಿ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಒಂದೇ ಸಮವಾಗಿ ಹಂಚಿಕೊಂಡಿರಲಿಲ್ಲ: ಪಶ್ಚಿಮ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಕೇವಲ ಶೇ. 3.44 ಇತ್ತು, ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾ ದೇಶದಲ್ಲಿ) ಅವರ ಸಂಖ್ಯೆ ಶೇ. 23.20 ಆಗಿತ್ತು.
ಇಂದಿನ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಜನಸಂಖ್ಯೆಯಲ್ಲಿ ಕಂಡು ಬರುವ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಜನಸಂಖ್ಯಾ ತಖ್ತೆಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಬೇಕಾಗುತ್ತದೆ.
ಇಂದು ಪಾಕಿಸ್ತಾನವೆಂದು ಕರೆಯಲ್ಪಡುವ ದೇಶದಲ್ಲಿ 1951ರಲ್ಲಿ ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇ. 90.56ರಷ್ಟು ಇದ್ದರು. 1961ರಲ್ಲಿ ನಡೆದ ಜನಗಣತಿಯ ಪ್ರಕಾರ ಪಶ್ಚಿಮ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ. 2.83ರಷ್ಟು ಇಳಿದಿತ್ತು.
1972ರಲ್ಲಿ ಪೂರ್ವ ಪಾಕಿಸ್ತಾನ ಬಾಂಗ್ಲಾ ದೇಶವಾಗಿದ್ದಾಗ ನಡೆದ ಮೂರನೇ ಜನಗಣತಿಯ ಪ್ರಕಾರ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ. 3.25 ಆಗಿತ್ತು.
1981ರಲ್ಲಿ ನಡೆದ ಜನಗಣತಿಯ ಪ್ರಕಾರ ಪಾಕಿಸ್ತಾನದ ಮುಸ್ಲೀಮೇತರರ ಜನಸಂಖ್ಯೆ ತೀರಾ ಅಲ್ಪ, ಅಂದರೆ ಶೇ. 3.25ರಿಂದ ಶೇ. 3.30ಕ್ಕೆ ಏರಿತು.
ಪಾಕಿಸ್ತಾನದಲ್ಲಿ ಮುಂದಿನ ಜನಗಣತಿ ನಡೆದದ್ದು ಹದಿನೇಳು ವರ್ಷಗಳ ಬಳಿಕ 1998ರಲ್ಲಿ. ಈ ಜನಗಣತಿಯ ಪ್ರಕಾರ ಪಾಕಿಸ್ತಾನದ ಮುಸ್ಲಿಮೇತರರ ಜನಸಂಖ್ಯೆ ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ. 3.70 ಆಗಿತ್ತು.
ಇತ್ತೀಚೆಗೆ, 2017ರಲ್ಲಿ ಪಾಕಿಸ್ತಾನ ಹೊಸತಾಗಿ ಒಂದು ಜನಗಣತಿ ನಡೆಸಿದೆಯಾದರೂ ಅದರ ಧಾರ್ಮಿಕ ದತ್ತಾಂಶಗಳನ್ನು ಅದಿನ್ನೂ ಪ್ರಕಟಮಾಡಿಲ್ಲ.
ಹೀಗೆ ಪಾಕಿಸ್ತಾನದ ಜನಗಣತಿಯನ್ನಾಧರಿಸಿ ನಾವು ಈ ತೀರ್ಮಾನಗಳಿಗೆ ಬರಬಹುದು.
1) ಮುಸ್ಲಿಮೇತರರ ಜನಸಂಖ್ಯೆ ಎಂದು ಕೂಡ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ. 23 ಆಗಿರಲಿಲ್ಲ.
2) ಅವಿಭಜಿತ ಪಾಕಿಸ್ತಾನದಲ್ಲಿ ಕೂಡ ಮುಸ್ಲಿಮೇತರರ ಜನಸಂಖ್ಯೆಯ ಪಾಲು ಯಾವತ್ತೂ ಶೇ. 15ರ ಮಟ್ಟ ತಲುಪಿರಲಿಲ್ಲ. (ಗರಿಷ್ಠ ಎಂದರೆ 1951ರಲ್ಲಿ ಶೇ. 14.2)
3) ಇಂದಿನ ಪಾಕಿಸ್ತಾನಕ್ಕೆ ಬಂದರೆ, ಮುಸ್ಲಿಮೇತರರ ಜನಸಂಖ್ಯೆ 1951ರಲ್ಲಿ ಅಲ್ಲಿಯ ಜನಸಂಖ್ಯೆಯ ಶೇ. 3.44 ಆಗಿತ್ತು.
4) ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ದಶಕಗಳ ಕಾಲದಿಂದ ಒಟ್ಟು ಜನಸಂಖ್ಯೆಯ ಶೇ. 3.5ನ್ನು ದಾಟಿರಲಿಲ್ಲವೆಂಬುದು ಜನಗಣತಿ ದತ್ತಾಂಶಗಳಿಂದ ಸ್ಪಷ್ಟವಾಗುತ್ತದೆ. ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)ದಲ್ಲಿ ಈಗ ಏನಾಗಿದೆ ನೋಡೋಣ. 1971ರಲ್ಲಿ ಬಾಂಗ್ಲಾದೇಶದ ಪೂರ್ವ ಪಾಕಿಸ್ತಾನದಲ್ಲಿ 1951ರ ಜನಗಣತಿಯಂತೆ ಮುಸ್ಲಿಮೇತರರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.23.20 ಆಗಿತ್ತು. ಕಳೆದ ಹಲವು ದಶಕಗಳಲ್ಲಿ ಈ ಜನಸಂಖ್ಯೆ ಕಡಿಮೆಯಾಗಿದೆಯಾದರೂ ಬಿಜೆಪಿ ಹೇಳುವಷ್ಟು ಕಡಿಮೆಯಾಗಿಲ್ಲ.
1961ರ ವೇಳೆಗೆ ಪೂರ್ವ ಪಾಕಿಸ್ತಾನದಲ್ಲಿದ್ದ ಮುಸ್ಲಿಮೇತರರ ಜನಸಂಖ್ಯೆ ಶೇ. 19.57ಕ್ಕೆ 1974ರಲ್ಲಿ ಶೇ.14.60ಕ್ಕೆ, 1981ರಲ್ಲಿ ಶೇ.13.40ಕ್ಕೆ, 1991ರಲ್ಲಿ ಶೇ. 11.70ಕ್ಕೆ ಮತ್ತು 2001ರಲ್ಲಿ ಶೇ. 10.40ಕ್ಕೆ ಇಳಿಯಿತು. 2011ರ ಜನಗಣತಿಯ ಪ್ರಕಾರ ಬಾಂಗ್ಲಾದೇಶದ ಮುಸ್ಲಿಮೇತರರ ಜನಸಂಖ್ಯೆ ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ ಇದೆ. ಹೀಗೆ, 1951 ಮತ್ತು 2011ರ ನಡುವೆ, 60 ವರ್ಷಗಳ ಅವಧಿಯಲ್ಲಿ ಅಲ್ಲಿಯ ಮುಸ್ಲಿಮೇತರರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 23.20ರಿಂದ ಶೇ. 10ಕ್ಕಿಂತಲೂ ಕೆಳಕ್ಕೆ (ಶೇ.9.40ಕ್ಕೆ) ಇಳಿದಿದೆ.
ಬಿಜೆಪಿ ಈ ಕೆಳಗಿನಂತೆ ವಾದಿಸಿದೆ:
1. ಸ್ವಾತಂತ್ರ್ಯದ ವೇಳೆ ಪಾಕಿಸ್ತಾನದಲ್ಲಿದ್ದ ಮುಸ್ಲಿಮೇತರರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.23 ಇದ್ದದ್ದು 2011ರಲ್ಲಿ ಶೇ.3.7ಕ್ಕೆ ಇಳಿಯಿತು.
2. ಇದೇ ಅವಧಿಯಲ್ಲಿ ಬಾಂಗ್ಲಾದೇಶದ ಮುಸ್ಲಿಮೇತರರ ಜನಸಂಖ್ಯೆ ಶೇ. 22ರಿಂದ ಶೇ. 7.8ಕ್ಕೆ ಇಳಿದಿದೆ.
3. ಈ ಎರಡು ಇಸ್ಲಾಮಿಕ್ ದೇಶಗಳಲ್ಲಿ ಮುಸ್ಲಿಮೇತರರ ಜನಸಂಖ್ಯೆ ಕಡಿಮೆಯಾಗಲು ವ್ಯಾಪಕವಾದ ಧಾರ್ಮಿಕ ಕಿರುಕುಳವೇ ಕಾರಣ.
1947ರಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ಸಾವಿರಾರು ಮುಸ್ಲಿಮೇತರರಿಗೆ ಕಿರುಕುಳ ನೀಡಲಾಯಿತು ಎಂಬುದು ನಿಜ. ಇಷ್ಟೇ ಅಲ್ಲದೆ ಸಾವಿರಾರು ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು 1947ರಲ್ಲಿ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದರು ಮತ್ತು ಸಾವಿರಾರು ಮುಸ್ಲಿಮರು ಭಾರತ ತೊರೆದು ಪಾಕಿಸ್ತಾನಕ್ಕೆ ಹೋದರು. ಈ ವ್ಯಾಪಕವಾದ ವಲಸೆ ಕಿರುಕುಳ ಹಾಗೂ ಹತ್ಯೆಗಳು ಉಭಯ ದೇಶಗಳ ಜನಸಂಖ್ಯೆ ಧಾರ್ಮಿಕ ಲೆಕ್ಕಾಚಾರವನ್ನು ಬದಲಿಸಿದವು. ಆದರೆ ಸೂಕ್ತ ದತ್ತಾಂಶಗಳ ಕೊರತೆಯಿಂದಾಗಿ 1947ರಲ್ಲಿ ಪಾಕಿಸ್ತಾನದಲ್ಲಿದ್ದ ಮುಸ್ಲಿಮೇತರರ ಜನಸಂಖ್ಯೆಯ ಪಾಲು ನಿಖರವಾಗಿ ತಿಳಿದಿಲ್ಲ.
1951ರಲ್ಲಿ ಪಾಕಿಸ್ತಾನದಲ್ಲಿ ನಡೆದ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಿಸುವಾಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದ ವಿಷಯದಲ್ಲಿ ಬಿಜೆಪಿ ಎರಡು ಪ್ರದೇಶಗಳ ದತ್ತಾಂಶಗಳನ್ನು ಬೆರಕೆ ಮಾಡಿದೆ ಎಂಬುದು ಗೊತ್ತಾಗುತ್ತದೆ.
ಮೊದಲನೆಯದಾಗಿ, ಅದು ಮುಸ್ಲಿಮೇತರರು ಪಾಕಿಸ್ತಾನದ ಜನಸಂಖ್ಯೆಯ ಶೇ.23ರಷ್ಟು ಇದ್ದರು ಎಂದು ಹೇಳಿತು. ಸತ್ಯ ಸಂಗತಿ ಏನೆಂದರೆ ಇದು ಕೇವಲ ಪೂರ್ವಪಾಕಿಸ್ತಾನದ ಜನಸಂಖ್ಯೆಯಲ್ಲಿ ಮುಸ್ಲಿಮೇತರರ ಪಾಲು, ಇಡೀ ದೇಶದ್ದಲ್ಲ.
ಎರಡನೆಯದಾಗಿ, ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಶೇ. 23ರಿಂದ ಶೇ.3.7ಕ್ಕೆ ಇಳಿಯಿತು ಎಂದು ಬಿಜೆಪಿ ವಾದಿಸಿದೆ. ಇದು ಕೂಡ ಸರಿಯಲ್ಲ. ಏಕೆಂದರೆ, ಮೊದಲ ಜನಗಣತಿಯ ಲಾಗಾಯ್ತು ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು 3.5 ಶೇಕಡಾದಷ್ಟೇ ಇತ್ತು.
ಮೂರನೆಯದಾಗಿ, ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಜನಸಂಖ್ಯೆಯ ಶೇಕಡವಾರು ಗಣನೀಯವಾಗಿ ಕುಸಿದಿದೆ ಎಂಬ ಬಿಜೆಪಿಯ ವಾದ ಸರಿ. ಆದರೆ ಈ ಕುಸಿತ ಶೇ.22ರಿಂದ ಶೇ.7.8ಕ್ಕೆ ಇಳಿದಿದೆ ಎಂದು ಅದು ಹೇಳುವುದು ತಪ್ಪು. ಯಾಕೆಂದರೆ ಸರಕಾರಿ ಅಧಿಕೃತ ದತ್ತಾಂಶಗಳ ಪ್ರಕಾರ ಇಳಿಕೆಯಾಗಿರುವುದು ಶೇ.23.20ರಿಂದ (1951) ಶೇ.9.40ಕ್ಕೆ (2011).
ನಾಲ್ಕನೆಯದಾಗಿ, ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಕಡಿಮೆಯಾಗಲು ಧಾರ್ಮಿಕ ಕಿರುಕುಳ ಕಾರಣವೆಂದು ಬಿಜೆಪಿ ವಾದಿಸಿದೆ. ಪೂರ್ವ ಪಾಕಿಸ್ತಾನದಲ್ಲಿ ಮತ್ತು ಬಳಿಕ ಬಾಂಗ್ಲಾದೇಶದಲ್ಲಿ ಕೂಡ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಯಿತೆಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಬಾಂಗ್ಲಾದೇಶದಿಂದ ವಲಸೆ ಹೋಗಲು ಮುಸ್ಲಿಮೇತರರಿಗೆ ಇತರ ಕಾರಣಗಳೂ ಇದ್ದವು.
ಬಾಂಗ್ಲಾದೇಶದಲ್ಲಿ ಭಾಷೆಯನ್ನಾಧರಿಸಿದ ಕಿರುಕುಳ ಮತ್ತು ಭಾರತದಲ್ಲಿ ಉತ್ತಮವಾದ ಆರ್ಥಿಕ ಅವಕಾಶಗಳು ಕೂಡ ಸಾವಿರಾರು ಅಕ್ರಮ ವಲಸಿಗರು ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು ಕಾರಣವಾಗಿತ್ತು. ಅಲ್ಲದೆ ಈ ಅಕ್ರಮ ವಲಸಿಗರು ಕೇವಲ ಹಿಂದೂಗಳಲ್ಲ. ಇವರಲ್ಲಿ ಗಣನೀಯ ಸಂಖ್ಯೆಯ ಬಂಗಾಲಿ ಮುಸ್ಲಿಮರು ಕೂಡ ಇದ್ದಾರೆ. ಹೀಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಎಂಬುದು ಬಹು ಕಾರಣಗಳ ಒಂದು ವಿಷಯವಾಗಿದೆ ಅದಕ್ಕೆ ಕೇವಲ ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ ಕಾರಣವೆಂದು ವಾದಿಸುವುದು ತಪ್ಪಾಗುತ್ತದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗಿದೆ, ಅವರ ಮೇಲೆ ಅತ್ಯಾಚಾರ ನಡೆಸಲಾಗಿದೆ ಮತ್ತು ಅವರನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ ಎಂಬುದು ನಿಜ. ಇದು ಮುಖ್ಯವಾಗಿ ದಶಕಗಳ ಕಾಲ ಇದ್ದ ಮಿಲಿಟರಿ ಆಡಳಿತದ ಅವಧಿಯಲ್ಲಿ ನಡೆದಿತ್ತು.
ಒಟ್ಟಿನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರ ಪರವಾಗಿ ತಾನು ಭಾರೀ ಕೆಲಸ ಮಾಡುತ್ತಿದ್ದೇನೆಂದು ಹೇಳುವ ಬಿಜೆಪಿ, 1951ರ ಬಾಂಗ್ಲಾದೇಶದ (ಹಿಂದಿನ ಪೂರ್ವ ಪಾಕಿಸ್ತಾನದ) ಮುಸ್ಲಿಮೇತರರ ಶೇ.23 ಸಂಖ್ಯೆಯನ್ನು 1998ರಲ್ಲಿ ಪಾಕಿಸ್ತಾನದಲ್ಲಿದ್ದ ಶೇ.3.7 ಮುಸ್ಲಿಮೇತರರ ಸಂಖ್ಯೆಯೊಂದಿಗೆ ಹೋಲಿಸಿದಂತೆ ಕಾಣುತ್ತದೆ. ಈ ರೀತಿಯಾಗಿ, ಪ್ರತಿಶತ ಪ್ರಮಾಣವನ್ನು ಬೆರಕೆ ಮಾಡಿದ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಪಾಲು ಒಟ್ಟು ಜನಸಂಖ್ಯೆಯ ಶೇ.23ರಿಂದ ಶೇ. 3.7ಕ್ಕೆ ಇಳಿದಿದೆ ಎಂಬ ವಾದ ಹುಟ್ಟಿಕೊಂಡಿದೆ.
ಕೃಪೆ: indiatoday.in