ಧಾರ್ಮಿಕ ಧ್ರುವೀಕರಣದ ಪೌರತ್ವ ಕಾಯ್ದೆ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾನೂನುಗಳು ಜನಪರವಾದ ಮರುಪರಿಶೀಲನೆಗೆ ಒಳಪಡಬೇಕು; ತಾರತಮ್ಯವಿಲ್ಲದ ಸಮತೆಯ ಕಾಯ್ದೆಗಳಾಗಬೇಕು; ನಿಜವಾದ ದೇಶಪ್ರೇಮದ ಪ್ರತೀಕವಾಗಬೇಕು; ದೇಶಪ್ರೇಮವೆಂಬುದು ಧಾರ್ಮಿಕ ಧ್ರುವೀಕರಣವಲ್ಲ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬೇಕು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ. ಅದೇ ರೀತಿ ಎನ್‌ಆರ್‌ಸಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್) ವಿರುದ್ಧವೂ ಪ್ರಬಲ ದನಿ ಎದ್ದಿದೆ. ಪ್ರತಿಭಟನೆಯು ಪ್ರಜಾಸತ್ತಾತ್ಮಕ ಹಕ್ಕು. ಇದೇ ಸಂದರ್ಭದಲ್ಲಿ ನಮ್ಮ ಪ್ರತಿಭಟನೆಗಳು ಹಿಂಸಾತ್ಮಕವಾಗಬಾರದು ಎಂದು ಹೇಳುತ್ತಲೇ ಪ್ರತಿಭಟನೆಯನ್ನು ಹತ್ತಿಕ್ಕಬೇಕೆಂಬ ಆಳುವ ವರ್ಗದ ಕ್ರಮಗಳೂ ಹಿಂಸಾತ್ಮಕವಾಗಬಾರದೆಂದು ಹೇಳಬೇಕಾಗುತ್ತದೆ. ಇಂದಿನ ಪರ- ವಿರೋಧಗಳ ಏರುದನಿಯ ಸನ್ನೀವೇಶದಲ್ಲಿ ಜನ ಸಾಮಾನ್ಯರಲ್ಲಿ ಗೊಂದಲಗಳಿರುವುದನ್ನು ಗಮನಿಸಿ ಈ ಕಾಯ್ದೆಗಳ ನೈಜ ವಿವರಗಳ ಜೊತೆಗೆ ಪ್ರತಿರೋಧಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಭಾರತ ಸರಕಾರವು ಮೊದಲಿಗೆ 1955ರಲ್ಲಿ ಪೌರತ್ವ ಕಾಯ್ದೆಯನ್ನು ರೂಪಿಸಿತು. ಈ ಮೂಲಕ ಕಾಯ್ದೆ ಮತ್ತು ಆನಂತರದ ತಿದ್ದುಪಡಿಗಳ ಪ್ರಕಾರ ಭಾರತಕ್ಕೆ ಬಂದಿರುವ ‘ಅಕ್ರಮ ವಲಸಿಗರಿಗೆ’ ಪೌರತ್ವ ಕೊಡುವುದನ್ನು ನಿಷೇಧಿಸಲಾಯಿತು. ಸೂಕ್ತ ಪ್ರವಾಸಿ ದಾಖಲೆಗಳಿಲ್ಲದೆ ಬಂದ ಮತ್ತು ಸೂಕ್ತ ದಾಖಲೆಗಳಿದ್ದರೂ ನಿಗದಿತ ಅವಧಿ ಮೀರಿ ನೆಲೆಸಿರುವ ವಲಸಿಗರನ್ನು ಗಡಿಪಾರು ಮಾಡುವ, ಜೈಲು ಶಿಕ್ಷೆ ಕೊಡುವ ಅಂಶಗಳನ್ನು ಈ ಕಾಯ್ದೆ ಒಳಗೊಂಡಿತ್ತು. ಈಗ ತಿದ್ದುಪಡಿಯಾಗಿರುವುದು ಈ ಕಾಯ್ದೆಗೆ. 2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತೀಯ ಜನತಾ ಪಕ್ಷವು ‘Indian will remain a natural home for persecuted Hindus' ಎಂದು ಘೋಷಿಸಿದ್ದಲ್ಲದೆ ಹೊರದೇಶದಿಂದ ಬಂದ ‘ಹಿಂದೂ ವಲಸಿಗರಿಗೆ’ 2015ರಲ್ಲಿ ದೀರ್ಘಾವಧಿ ವೀಸಾಗಳನ್ನು ನೀಡಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಅಲ್ಲಿನ ‘ಅಲ್ಪಸಂಖ್ಯಾತರಿಗೆ’ ಭಾರತ ಪ್ರವೇಶಕ್ಕೆ ಪಾಸ್‌ಪೋರ್ಟ್‌ನಿಂದ ವಿನಾಯಿತಿ ಕೊಟ್ಟಿತು. 1920 ಮತ್ತು 1946ರಲ್ಲಿ ಜಾರಿಯಲ್ಲಿದ್ದ ‘ಪಾಸ್‌ಪೋರ್ಟ್ ಕಾಯ್ದೆ’ಯ ಷರತ್ತುಗಳನ್ನು ಸಡಿಲಿಸಿತು. ಹಿಂದೂ, ಸಿಖ್, ಕ್ರೈಸ್ತ, ಜೈನ, ಪಾರ್ಸಿ ಮತ್ತು ಬೌದ್ಧ ಧರ್ಮದವರನ್ನು ಅಲ್ಪಸಂಖ್ಯಾತರು ಎಂದು ನಿಖರಗೊಳಿಸಲಾಯಿತು. ಆನಂತರ ಪಾಕಿಸ್ತಾನ, ಬಾಂಗ್ಲಾದೇಶಗಳ ಜೊತೆ ಅಫ್ಘಾನಿಸ್ತಾನವನ್ನೂ ಸೇರಿಸಿ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವ ತಿದ್ದುಪಡಿ ಮಸೂದೆಯನ್ನು 2016ರಲ್ಲೇ ಬಿಜೆಪಿ ಸರಕಾರವು ಪಾರ್ಲಿಮಂಟಿನಲ್ಲಿ ಮಂಡಿಸಿತು. ಈ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಆಗಲಿಲ್ಲ. 2016ರ ಆಗಸ್ಟ್ 12ರಂದು ಜಂಟಿ ಸಂಸದೀಯ ಸಮಿತಿಗೆ ವಹಿಸಲಾಯಿತು. ಈ ಸಮಿತಿಯು 2019ರ ಜನವರಿ 7ರಂದು ತನ್ನ ವರದಿ ನೀಡಿತು. ಜನವರಿ 8ರಂದು ಲೋಕಸಭೆಯಲ್ಲಿ ಮತ್ತೆ ಮಂಡಿಸಲಾಯಿತಾದರೂ ಲೋಕಸಭೆ ಅವಧಿ ಮುಗಿದ ಕಾರಣ ಅಂಗೀಕಾರವಾಗಲಿಲ್ಲ.
ಹಾಗೆಂದು ಭಾರತೀಯ ಜನತಾ ಪಕ್ಷ ತನ್ನ ಪಟ್ಟು ಬಿಡಲಿಲ್ಲ. 2019ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ವಿಷಯವನ್ನು ಸೇರಿಸಿದ್ದಲ್ಲದೆ, ಗೆದ್ದ ನಂತರ ಡಿಸೆಂಬರ್ 9ರಂದು ಲೋಕಸಭೆಯಲ್ಲಿ ಮಂಡಿಸಿ ಡಿಸೆಂಬರ್ 10ರಂದು ಅಂಗೀಕಾರ ಪಡೆಯಿತು. ಡಿಸೆಂಬರ್ 11ರಂದು ರಾಜ್ಯಸಭೆ ಅಂಗೀಕರಿಸಿತು. ಇದು ಸಂಕ್ಷಿಪ್ತ ಇತಿಹಾಸ.
ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಮೇತರರಿಗೆ ಮಾತ್ರ ಪೌರತ್ವ ಕೊಡಲು ಕಾರಣಗಳನ್ನು ಹೀಗೆ ನೀಡುತ್ತದೆ: ‘‘ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಸಂವಿಧಾನಗಳು ಒಂದು ನಿರ್ದಿಷ್ಟ ರಾಷ್ಟ್ರ ಧರ್ಮವನ್ನು ಒಪ್ಪಿದ್ದು, ಅದರ ಪರಿಣಾಮವಾಗಿ ಆ ದೇಶದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಧರ್ಮದ ಆಧಾರದ ಮೇಲೆ ಕಿರುಕುಳವನ್ನು ಅನುಭವಿಸುತ್ತಿದ್ದಾರೆ; ಭಯಗ್ರಸ್ತರಾಗಿದ್ದಾರೆ. ಆ ದೇಶಗಳಲ್ಲಿ ಈ ಧರ್ಮಗಳ ಆಚರಣೆ ಮತ್ತು ಪ್ರಚಾರದ ಹಕ್ಕುಗಳಿಗೆ ಧಕ್ಕೆ ತರಲಾಗಿದ್ದು ಅನೇಕರು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಇಂಥವರ ಪ್ರಯಾಣದ ದಾಖಲೆ ಮುಗಿದಿದ್ದರೂ ಅಥವಾ ಯಾವುದೇ ದಾಖಲೆಗಳಿಲ್ಲದಿದ್ದರೂ ಇನ್ನು ಮುಂದೆ ಭಾರತದ ಪೌರರಾಗಿರುತ್ತಾರೆ.’’
ಕಾಯ್ದೆಯ ಈ ಕಾರಣಗಳಲ್ಲೇ ತಾರತಮ್ಯ ಎಸಗಿರುವುದು ಸ್ಪಷ್ಟವಾಗಿದೆ. ಮುಸ್ಲಿಮರು ಪಟ್ಟಿಯಲ್ಲಿ ಇಲ್ಲದಿರುವುದೇ ಈ ತಾರತಮ್ಯ. ಇದಕ್ಕೆ ಕೇಂದ್ರ ಸರಕಾರ ಕೊಡುವ ಉತ್ತರ-ಸದರಿ ಮೂರು ರಾಷ್ಟ್ರಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ ಎಂಬುದಾಗಿದೆ. ರಾಷ್ಟ್ರ ಧರ್ಮ ಇರುವ ದೇಶಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಹಾಗಾದರೆ ನಿರ್ದಿಷ್ಟ ರಾಷ್ಟ್ರಧರ್ಮ ಇರುವ ಭೂತಾನ್ ಅನ್ನು ಈ ಪಟ್ಟಿಗೆ ಯಾಕೆ ಸೇರಿಸಲಿಲ್ಲ ಎಂದು ಪ್ರಶ್ನಿಸಬಹುದಾಗಿದೆ. ಅಷ್ಟೇಕೆ ನಮ್ಮ ದೇಶಕ್ಕೆ ಹೊಂದಿಕೊಂಡಿರುವ ನೇಪಾಳ, ಚೀನಾ, ಶ್ರೀಲಂಕಾ, ಮ್ಯಾನ್ಮಾರ್ ಮುಂತಾದವನ್ನೂ ಕಾಯ್ದೆಯ ಪಟ್ಟಿಗೆ ಯಾಕೆ ಸೇರಿಸಲಿಲ್ಲ? ಈ ದೇಶಗಳಿಂದಲೂ ನಮ್ಮ ದೇಶಕ್ಕೆ ವಲಸೆ ಬಂದಿದ್ದಾರಲ್ಲ? ಶ್ರೀಲಂಕಾದಿಂದ ತಮಿಳು ಭಾಷೆಯ ‘ಹಿಂದೂಗಳು’ ಬಂದಿದ್ದಾರೆ. ಮ್ಯಾನ್ಮಾರ್‌ನಿಂದ ರೋಹಿಂಗ್ಯಾ ಮುಸ್ಲಿಮರು ಬಂದಿದ್ದಾರೆ. ಚೀನಾ ಕಾರಣದಿಂದ ಟಿಬೆಟ್ ಬೌದ್ಧರು ಬಂದಿದ್ದಾರೆ. ಅಷ್ಟೇಕೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ಮುಸ್ಲಿಮ್ ಉಪಪಂಗಡದ ಅಲ್ಪಸಂಖ್ಯಾತರಾದ ಅಹಮದೀಯ ಮತ್ತು ಹಜಾರರನ್ನು ಕೈಬಿಡಲಾಗಿದೆ. ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ ವಲಸಿಗರಲ್ಲಿ ಧರ್ಮಾಧಾರಿತ ತಾರತಮ್ಯ ಮಾಡಲಾಗಿದೆ ಮತ್ತು ಇದೇ ಕಾರಣದಿಂದ ಭಾರತಕ್ಕೆ ಹೊಂದಿಕೊಂಡ ಇತರ ದೇಶಗಳನ್ನು ಕೈಬಿಡಲಾಗಿದೆ. ಈ ತಾರತಮ್ಯವು ಸಂವಿಧಾನದತ್ತ ಸಮಾನತೆ ಮತ್ತು ಸಹಿಷ್ಣುತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ.
ಇನ್ನೊಂದು ಅಂಶವನ್ನೂ ಇಲ್ಲಿ ಗಮನಿಸಬೇಕು: ಹಿಂದಿನ ಪೌರತ್ವ ಕಾಯ್ದೆಯಲ್ಲಿ ವಲಸಿಗರು ಹನ್ನೊಂದು ವರ್ಷ ಭಾರತದಲ್ಲಿದ್ದರೆ ಪೌರತ್ವಕ್ಕೆ ಪರಿಗಣಿಸುವ ಅವಕಾಶವಿತ್ತು. 2019ರ ಕಾಯ್ದೆಯು ಇದನ್ನು ಐದು ವರ್ಷಕ್ಕೆ ಇಳಿಸಿದೆ. 2014ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಬಂದವರಿಗೆ ಪೌರತ್ವ ಕೊಡಲಾಗುತ್ತದೆ. ಹೀಗೆ ಪೌರತ್ವ ಪಡೆಯುವವರ ಸಂಖ್ಯೆ ತುಂಬಾ ದೊಡ್ಡದಲ್ಲ ಎಂದು ಒಂದು ಮಾಹಿತಿ ತಿಳಿಸುತ್ತದೆ. ಈ ಮಾಹಿತಿಯ ಪ್ರಕಾರ 25,400 ಜನ ಹಿಂದೂಗಳು, 5,800 ಸಿಖ್ಖರು, 60 ಕ್ರೈಸ್ತರು ಇನ್ನೂ ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತರು ಭಾರತದ ಪೌರತ್ವ ಪಡೆಯುತ್ತಾರೆ. 1980,1990ರಲ್ಲಿ ಶ್ರೀಲಂಕಾದಿಂದ ಬಂದ 29,500 ಜನ ತಮಿಳರಿಗೆ ಪೌರತ್ವದ ಅವಕಾಶವಿಲ್ಲ. ಆದರೂ ಈ ಕಾಯ್ದೆಯ ಮೂಲಕ ಹಿಂದೂ ಧರ್ಮದವರಿಗೆ ಅಪಾರ ಅವಕಾಶ ಒದಗಿಸಲಾಗುತ್ತಿದೆ ಎಂದು ಬಿಂಬಿಸಲು ಕೇಂದ್ರ ಸರಕಾರವು ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿದೆ. ಮುಸ್ಲಿಮರನ್ನು ಕಾಯ್ದೆಯಿಂದ ಹೊರಗಿಟ್ಟಿದ್ದರಿಂದ ಮುಸ್ಲಿಮೇತರರ ಧ್ರುವೀಕರಣದ ರಾಜಕಾರಣವೂ ಇದರಲ್ಲಿದೆ. ಹೀಗಾಗಿ ಮುಸ್ಲಿಮರು ಮತ್ತು ಸಂವಿಧಾನದ ಜಾತ್ಯತೀತ ತತ್ವಕ್ಕೆ ಬದ್ಧರಾದವರೆಲ್ಲ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳ ವಿರೋಧಕ್ಕೆ ಬೇರೆ ಕಾರಣವಿದೆ. ಈ ಕಾಯ್ದೆಯ ಹಿಂದೆ ಅಡಗಿದ್ದ ಅಸ್ಸಾಂ ಒಪ್ಪಂದಕ್ಕೆ (ಸ್ಥಳೀಯ ಸಂರಕ್ಷಣೆ) ವಿರುದ್ಧವಾಗಿದೆ ಮತ್ತು ಮೂಲ ನಿವಾಸಿಗಳಿಗೆ ಧಕ್ಕೆಯಾಗುತ್ತದೆಯೆಂಬ ಆಕ್ರೋಶ ಅವರ ಪ್ರತಿಭಟನೆಯ ಪ್ರಧಾನ ಅಂಶವಾಗಿದೆ.
ಸಂವಿಧಾನದ 6ನೇ ಪರಿಚ್ಛೇದದಲ್ಲಿ ಬರುವ ಅಸ್ಸಾಂ, ಮೇಘಾಲಯ, ತ್ರಿಪುರ, ಮಿರೆರಾಂ ಬುಡಕಟ್ಟು ಪ್ರದೇಶಗಳಿಗೂ ಈ ಕಾಯ್ದೆ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ. ಆದರೂ ಅಸ್ಸಾಮಿನ 26 ಜಿಲ್ಲೆ, ಮೇಘಾಲಯದ ಶಿಲ್ಲಾಂಗ್, ತ್ರಿಪುರಾದ ಶೇ. 30ರಷ್ಟು ಪ್ರದೇಶಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಹೀಗಾಗಿ ದೇಶದ ಇತರ ಭಾಗದವರ ಪ್ರತಿರೋಧಕ್ಕೂ ಈಶಾನ್ಯ ರಾಜ್ಯಗಳ ಪ್ರತಿರೋಧಕ್ಕೂ ವ್ಯತ್ಯಾಸವಿದೆ.
ಕೆಲವರು ಭಾವಿಸಿರುವಂತೆ ಅಥವಾ ಭಯ ಪಟ್ಟಿರುವಂತೆ ಭಾರತದ ಖಾಯಂ ನಿವಾಸಿ ಮುಸ್ಲಿಮರ ಪೌರತ್ವಕ್ಕೆ ಖಂಡಿತ ಧಕ್ಕೆಯಾಗುವುದಿಲ್ಲ. ನಿಜ ಆದರೆ ಮುಸ್ಲಿಮೇತರ ಧಾರ್ಮಿಕ ಧ್ರುವೀಕರಣದ ಒಳತಂತ್ರವೊಂದು ಕಾಯ್ದೆಯಲ್ಲಿ ಕೆಲಸ ಮಾಡುತ್ತಿದೆಯೆಂಬುದು ಕೂಡಾ ನಿಜ.
ಎನ್‌ಆರ್‌ಸಿಯಿಂದಲೂ ಅನೇಕ ಅನಾಹುತಗಳು ಸಂಭವಿಸಲಿವೆ. ಅಸ್ಸಾಮಿಗೆ ಅನ್ವಯಿಸಿದ ಇದನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಗೃಹಸಚಿವರು ಹೇಳಿದ್ದಾರೆ. ಸ್ವತಃ ಅಸ್ಸಾಮಿನಲ್ಲೋ ಈ ಎನ್‌ಆರ್‌ಸಿಯಿಂದ ಸುಮಾರು 19ಲಕ್ಷ ಜನ ಅತಂತ್ರರಾಗುತ್ತಾರೆಂದು ಹೇಳಲಾಗಿದೆ. ಯಾಕೆಂದರೆ ರಾಷ್ಟ್ರೀಯ ಪೌರ ನೋಂದಣಿಗಾಗಿ ಕೇಳಿರುವ ದಾಖಲೆಗಳನ್ನು ಅಸಂಖ್ಯಾತರು ಒದಗಿಸಲಾಗುತ್ತಿಲ್ಲ. ಜನ್ಮ ಪ್ರಮಾಣ, ವಲಸೆ ಪ್ರಮಾಣ, ಜೀವವಿಮೆ, ಭೂ ಒಡೆತನ, ಪಾಸ್‌ಪೋರ್ಟ್, ಯಾವುದಾದರೂ ಸರಕಾರಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ, ವಿಳಾಸ ಪ್ರಮಾಣ, ಉದ್ಯೋಗ, ವಿದ್ಯಾರ್ಹತೆ ಪ್ರಮಾಣ- ಇವುಗಳಲ್ಲಿ ಯಾವುದಾದರೂ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಮಾತ್ರ ಪೌರತ್ವ ನೋಂದಣಿ ಆಗುತ್ತದೆ. ಈ ಯಾವ ಪ್ರಮಾಣ ದಾಖಲೆಗಳೂ ಇಲ್ಲದ ಅಸಂಖ್ಯಾತ ಬಡವರು, ಬುಡಕಟ್ಟಿನವರು, ಶ್ರಮಜೀವಿಗಳು ಮುಂದೆ ಅತಂತ್ರರಾಗುತ್ತಾರೆ. ಭಾರತದ ಪ್ರಜೆ ಎನ್ನಿಸಿಕೊಳ್ಳಲು ಸಾಧ್ಯವಾಗದೆಯೂ ಇರಬಹುದು!
ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾನೂನುಗಳು ಜನಪರವಾದ ಮರುಪರಿಶೀಲನೆಗೆ ಒಳಪಡಬೇಕು; ತಾರತಮ್ಯವಿಲ್ಲದ ಸಮತೆಯ ಕಾಯ್ದೆಗಳಾಗಬೇಕು; ನಿಜವಾದ ದೇಶಪ್ರೇಮದ ಪ್ರತೀಕವಾಗಬೇಕು; ದೇಶಪ್ರೇಮವೆಂಬುದು ಧಾರ್ಮಿಕ ಧ್ರುವೀಕರಣವಲ್ಲ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬೇಕು.