ವಿಚಾರ ಕ್ರಾಂತಿಗೆ ಆಹ್ವಾನ
ಕುವೆಂಪುರವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವದಲ್ಲಿ 8-12-1974ರಂದು ಮಾಡಿದ ಭಾಷಣ.
ಇಂದು ರಾಷ್ಟ್ರಕವಿ ಕುವೆಂಪು ಹುಟ್ಟಿದ ದಿನ
ಶತಮಾನಗಳ ಬೋಧನೆ ಮತ್ತು ನಂಬಿಕೆಗಳ ಫಲವಾಗಿ ನಿಮ್ಮ ವಿಚಾರ ಶಕ್ತಿಯೇ ಕುಂಠಿತವಾಗಿ ಹೋಗಿದೆ. ವಿಜ್ಞಾನ ಸಂಪನ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರನಾಗರಿಕತೆಯನ್ನು ಅನುಕರಿಸಿದ್ದೇವೆ ಹೊರತು ಅದರ ವೈಜ್ಞಾನಿಕ ದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ. ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ, ಸಾಮಾಜಿಕ ಮತ್ತು ಮತಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು.
ಸನ್ಮಾನ್ಯರಾದ ಸರ್ವಶ್ರೀ ಕುಲಾಧಿಪತಿಗಳಲ್ಲಿ, ಕುಲಪತಿಗಳಲ್ಲಿ, ಸೆನೆಟ್ ಸದಸ್ಯರಲ್ಲಿ ಮತ್ತು ಸ್ನಾತಕಮಿತ್ರ ಮಹಾಶಯರಲ್ಲಿ ವಿಜ್ಞಾಪನೆ.
ಈ ವರ್ಷದ ಘಟಿಕೋತ್ಸವ ಭಾಷಣ ಮಾಡಲು ನನ್ನನ್ನಿಲ್ಲಿಗೆ ಎಳೆತಂದಿದ್ದಾರೆ ಡಾ.ನರಸಿಂಹಯ್ಯನವರು. ಸುಮಾರು ಒಂದೂವರೆ ತಿಂಗಳ ಹಿಂದೆ ಒಂದು ಹಗಲು ಯಾವ ಪೂರ್ವಸೂಚನೆಯನ್ನೂ ನೀಡದೆ ಅತ್ಯಂತ ಅನಿರೀಕ್ಷಿತವಾಗಿ, ಏಕಾಕಿಯಾಗಿ, ಏಕಾಏಕಿ, ನಮ್ಮ ಮನೆಗೆ ಬಂದು ನಿರಾಯುಧನಾಗಿದ್ದ ನನ್ನ ಮೇಲೆ ಆಕ್ರಮಣ ನಡೆಸಿದರು. ನಾನು ಕೈಮುಗಿದು ಪರಿಪರಿಯಲ್ಲಿ ಬೇಡಿಕೊಂಡರೂ ಬಿಡಲಿಲ್ಲ. ಈ ಕೆಲಸಕ್ಕೆ ನನ್ನ ಅನರ್ಹತೆಯನ್ನು ವಿಶದಪಡಿಸಿದರೂ ಪ್ರಯೋಜನವಾಗಲಿಲ್ಲ. ಅವರ ನಿರಾಡಂಬರ ನಿಷ್ಪೃಹ ನಿರಹಂಕಾರದ ವ್ಯಕ್ತಿತ್ವದ ಓಜಿಗೆ ನಾನು ಶರಣಾಗಲೇಬೇಕಾಯಿತು. ಒಪ್ಪಿಕೊಂಡು ಇಂದು ಇಲ್ಲಿಗೆ ಬಂದು ನಿಮ್ಮ ಮುಂದೆ ಉಪದೇಶಭಾಷಣ ಮಾಡಲು ನಿಂತಿದ್ದೇನೆ.
ಜಗತ್ತು, ಅದರಲ್ಲಿಯೂ ನಮಗೆ ಪ್ರಕೃತವಾಗಿರುವ ಭಾರತೀಯ ಜಗತ್ತು, ಭಯಂಕರ ಸಮಸ್ಯೆಗಳ ಜಟಿಲ ಕಂಟಕಮಯ ಸಂಕಟದಲ್ಲಿ ಸಿಕ್ಕಿ ದಿಕ್ಕುಗಾಣದೆ ದಾರಿತಪ್ಪಿತೋಳಲುತ್ತಿರುವಾಗ ಯಾರು ತಾನೆ ಏನು ಉಪದೇಶ ಭಾಷಣಮಾಡಿ ನಿಮ್ಮ ಮನಸ್ಸನ್ನು ಆಶಾವಾದದತ್ತ ಕರೆದೊಯ್ಯಲು ಸಾಧ್ಯ? ‘‘ಸರ್ವನಾಶದಲ್ಲಿಯೂ ಆಶಾವಾದಿ’’ ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತಿದ್ದ ಕವಿಯ ಚೇತನವೂ ಕಿಬ್ಬಿಯಂಚಿನಲ್ಲಿ ತತ್ತರಿಸುತ್ತಾ ನಿಂತಂತಿದೆ. ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ. ನೀವಿನ್ನೂ ಜೀವನದ ಉತ್ಸಾಹದಲ್ಲಿರುವ ಯುವಜನರು; ಎಂತಹ ಕಷ್ಟಗಳು ಎದುರಾದರೂ ಧೈರ್ಯದಿಂದ ಇದಿರಿಸುವ ಸಾಹಸ ಚೇತನರಾಗಿದ್ದೀರಿ. ನಾವು ಎದೆಗೆಟ್ಟರೂ ನೀವು ಎದೆಗೆಡುವುದಿಲ್ಲ ಎಂಬ ಭರವಸೆ ನನಗಿದೆ.
ನನ್ನ ಉಪದೇಶ ಭಾಷಣದಿಂದ ಮಹತ್ಸಾಧನೆಯಾಗಿ ಬಿಡುತ್ತದೆ ಎಂಬ ನಂಬಿಕೆ ಏನೂ ನನಗಿಲ್ಲ. ಏಕೆಂದರೆ ಹಿಂದೆಯೂ ನಮ್ಮ ರಾಷ್ಟ್ರದ ನೂರಾರು ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಘಟಿಕೋತ್ಸವ ಭಾಷಣಗಳು ಸಾವಿರಾರು ನಡೆದಿವೆ. ಆ ಭಾಷಣಗಳನ್ನು ಕೇಳಿ ‘‘ಸತ್ಯಂ ವದ-ಧರ್ಮಂ ಚರ’’ ಮೊದಲಾದ ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ನಿಮ್ಮಂತಹ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ ರಂಗದಲ್ಲಿ, ಅಧಿಕಾರ ರಂಗದಲ್ಲಿ, ಶಿಕ್ಷಣ ರಂಗದಲ್ಲಿ ನಿರ್ಲಜ್ಜೆಯಿಂದ ಪಾಪಮಯ ಭ್ರಷ್ಟಾಚಾರಗಳಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿರುವುದನ್ನು ನೆನೆದರೆ ಬದುಕು ಬೆಬ್ಬಳಿಸಿ ಹದುಗುವಂತಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯ ಆತ್ಮಶ್ರೀಯ ತೇಜಸ್ಸಿಗೊಳಗಾಗಿ ಸ್ವಾರ್ಥತ್ಯಾಗದ ಮತ್ತು ಸರಳ ಜೀವನದ ಧ್ಯೇಯಜ್ಯೋತಿಯಿಂದ ದೀಪ್ತವಾಗಿ ಇಷೀಕಾಸ್ತ್ರಗಳಾಗಿದ್ದ ಜೀವರುಗಳೆಲ್ಲ ಇಂದು ಮತ್ತೆ ತಮ್ಮ ನಿಜ ಸ್ವರೂಪದ ಹುಲ್ಲುಕಡ್ಡಿಗಳಾಗಿವೆ. ಎಲ್ಲರೂ ಹಾಗಾಗಿಲ್ಲ, ನಿಜ. ಗಾಂಧೀಜಿಯ ಅನುಯಾಯಿಗಳಾಗಿದ್ದ ವಿನೋಬಾಜಿ, ಜಯಪ್ರಕಾಶ ನಾರಾಯಣರಂತಹ ಕೆಲವರಾದರೂ ಆ ಧ್ಯೇಯಜ್ಯೋತಿಯನ್ನು ಬೆಳಗುತ್ತಾ ನಾಡನ್ನು ಎಚ್ಚರಿಸುವ ಮತ್ತು ಮುನ್ನಡೆಸುವ ಕ್ಲಿಷ್ಟಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅಲ್ಪಸಂಖ್ಯಾತರಾಗಿರುವ ಆ ಗುಂಪಿನವರು ರಾಜಕೀಯ ರಂಗದಲ್ಲಿ ಅಧಿಕಾರದಲ್ಲಿರುವ ಬಹುಸಂಖ್ಯಾತರೊಡನೆ ಹೋರಾಡಬೇಕಾಗಿ ಬಂದಿರುವ ದುರಂತ ದುಃಸ್ಥಿತಿಯೊದಗಿದೆ, ನಮ್ಮ ನಾಡಿಗೆ.
ಇಂತಹ ಪರಿಸ್ಥಿತಿ ಇರುವ ಬದುಕಿನ ಕಣಕ್ಕೆ ನೀವು ಇಂದು ನಿಮ್ಮ ವಿದ್ಯಾರ್ಥಿದಶೆಯಿಂದ ಉತ್ತೀರ್ಣರಾಗಿ ಪ್ರವೇಶಿಸುತ್ತಿದ್ದೀರಿ. ಎಂತಹ ಭಯಂಕರ ಹೋರಾಟ ಕಾದಿದೆಯೊ ನಿಮಗೆ ಆ ಕಾಲಪುರುಷನೆ ಬಲ್ಲ!
ನಮ್ಮ ಸ್ವಾತಂತ್ರ್ಯ ಸಂಪಾದನೆಗೆ ನಮ್ಮ ರಾಷ್ಟ್ರಪಿತನನ್ನೇನೊ ಉಪಯೋಗಿಸಿ ಕೊಂಡೆವು, ಆತ ಬೋಧಿಸಿದ ಸ್ವದೇಶಿ, ಸತ್ಯಾಗ್ರಹ, ಅಹಿಂಸೆ, ಗ್ರಾಮ ಸ್ವರಾಜ್ಯ, ಸರಳಜೀವನ, ತ್ಯಾಗಬುದ್ಧಿ ಮೊದಲಾದ ಕೈದುಗಳನ್ನಾಂತು. ಆದರೆ ಸ್ವಾತಂತ್ರ್ಯ ಸಂಪಾದನೆ ಆದೊಡನೆಯೆ ಆತನನ್ನು ತೊಲಗಿಸಿದೆವು; ಆತನ ದೇಹಕ್ಕೆ ಗುಂಡಿಕ್ಕಿದವನೇನೊ ಒಬ್ಬನೆ; ಆದರೆ ತರುವಾಯ ಆತನ ಧ್ಯೇಯಕ್ಕೆ ಉರುಳಿಕ್ಕಿ ಕೊಂದವರು ಹಲವರು ಆತನ ಅನುಯಾಯಿಗಳೆ! ನೆಹರೂ ಅವರ ಮುಂದಾಳುತನದ ನೇತೃತ್ವದಲ್ಲಿ ನಾವು ಗಾಂಧೀಜಿಯ ತತ್ವಗಳನ್ನೆಲ್ಲ ಮೂಲೆಗೊತ್ತಿ, ನಮ್ಮ ರಾಷ್ಟ್ರವನ್ನು ಏಕಾಏಕಿ ಅಭಿವೃದ್ಧಿ ಶ್ರೀಮಂತ ಪಾಶ್ಚಾತ್ಯ ದೇಶಗಳ ಸರಿಸಮಕ್ಕೇರಿಸುವ ಹುಮ್ಮಸ್ಸಿನಲ್ಲಿ ಸಂಪೂರ್ಣವಾಗಿ ಅವರ ಅನುಕರಣೆಗೆ ದೀಕ್ಷಿತರಾದೆವು. ತರುವಾಯ ಸ್ವದೇಶದ ಮತ್ತು ವಿದೇಶದ ಕೆಲವು ರಾಜಕೀಯ ಮತ್ತು ಆರ್ಥಿಕಪ್ರಾಜ್ಞರು ಕೊಟ್ಟ ಎಚ್ಚರಿಕೆಯನ್ನೂ ನಾವು ಲೆಕ್ಕಿಸಲಿಲ್ಲ; ಪ್ರತಿಗಾಮೀ ಸೂಚನೆಗಳೆಂದೂ ಅವನ್ನು ತಿರಸ್ಕರಿಸಿದೆವು. ಆದರೂ ಗಾಂಧೀಜಿಯನ್ನು ಕೈಬಿಟ್ಟೆವು ಎಂದಾಗಬಾರದೆಂದು ಅವರ ಧ್ಯೇಯಗಳನ್ನು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಟ್ಟೆವು: ಅಂದರೆ ಆ ಧ್ಯೇಯಗಳ ಜೀವ ತೆಗೆದು, ಜೀವವಿದ್ದರೆ ಅವುಗಳಿಂದ ತೊಂದರೆಯಾಗಬಹುದೆಂಬ ಮುಂದಾಲೋಚನೆಯಿಂದ ಅವುಗಳನ್ನು ಕೊಂದು, ಚರ್ಮ ಸುಲಿದು, ಹದಹಾಕಿ, ಪ್ರದರ್ಶನ ಮಂದಿರಗಳನ್ನು ಕಟ್ಟಿಸಿಟ್ಟೆವು. ಅವುಗಳ ಪೂಜೆಗೂ ಏರ್ಪಾಟುಮಾಡಿ, ಅವರ ಭಕ್ತರನ್ನು ಸಮಾಧಾನಪಡಿಸಿ, ಮೂಲೆಗೆ ತಳ್ಳಿ, ಮತ್ತೆ ನಮ್ಮ ಪಾಶ್ಚಾತ್ಯರ ಅನುಕರಣೆಯ ಪಾಂಚವಾರ್ಷಿಕ ಯೋಜನೆಗಳ ಯಾಗಕ್ಕೆ ಶುರುಮಾಡಿದೆವು.
ಪರಕೀಯರ ಶೋಷಣೆಯಿಂದ ನಮ್ಮ ದೇಶ ಎಂತಹ ಬಡತನಕ್ಕೆ ಇಳಿದಿತ್ತು ಎಂದರೆ ಯಂತ್ರನಾಗರಿಕತೆಯಲ್ಲಿ ತುಂಬ ಮುಂದುವರಿದ ದೇಶಗಳಂತೆ ಮಹಾ ಮಹಾ ಕಾರ್ಖಾನೆಗಳ ಮತ್ತು ಕೈಗಾರಿಕೆಗಳ ಭಾರವನ್ನು ಹೊರುವ ತ್ರಾಣವೆ ಅದಕ್ಕಿರಲಿಲ್ಲ. ಆದರೂ ಅದರ ಹೆಗಲಮೇಲೆ ಅದನ್ನೆಲ್ಲ ಹೇರಿದೆವು, ಕೋಟ್ಯಂತರ ಧನದ ಸಾಲವೆತ್ತಿ. ನಮಗೆ ಆಗ ತುರುತಾಗಿ ಬೇಕಾಗಿದ್ದುದು ಅನ್ನ, ನೀರು, ಬಟ್ಟೆ, ಗುಡಿಸಲು. ಆದರೆ ನಾವು ಮೋಟಾರು ಕಾರುಗಳನ್ನು ತಯಾರಿಸುವ ಏರ್ಪಾಡಿಗೆ ಬೆಂಬಲ ಕೊಟ್ಟೆವು. ನಾವೂ ಉಪಗ್ರಹಗಳನ್ನು ಹಾರಿಸಬೇಕೆಂದು ಹಠತೊಟ್ಟೆವು. ನಾವೂ ರಿಯಾಕ್ಟರುಗಳನ್ನು ಸ್ಥಾಪಿಸಿದೆವು. ಕೊನೆಗೆ ಆಟಂ ಸಾಧನವನ್ನೂ ಸಿಡಿಸಿದೆವು. ಹೀಗೆ ಅನೇಕ ರೀತಿಯ ಭೋಗದ ಮತ್ತು ಷೋಕಿಯ ವಸ್ತುಗಳ ತಯಾರಿಕೆಗೆ ಬಡರೈತರ ತೆರಿಗೆಯ ಧನವನ್ನು ವ್ಯಯಮಾಡಿದೆವು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಭೋಗಜೀವನ ನಡೆಸುವ ಶ್ರೀಮಂತರ ಸುಖಕ್ಕಾಗಿ. ಹಳ್ಳಿಗಳನ್ನೂ ರೈತವರ್ಗವನ್ನೂ ಮರೆತುಬಿಟ್ಟೆವು. ಅಥವಾ ಮರೆತೇಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುವುದಕ್ಕಾಗಿಯೂ ಜೀವವಾಡುವಷ್ಟರಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು. ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇತ್ತು. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿರಲಿಲ್ಲ. ಯಾವುದಕ್ಕೆ ಮೊದಲ ಗಮನ ಕೊಡಬೇಕಾಗಿತ್ತೊ ಅದಕ್ಕೆ ಕೊಡಲಿಲ್ಲ. ಬಡರೈತನನ್ನು ಹಿಂಡಿ ತೆಗೆದ ತೆರಿಗೆ ದವಸ ಧಾನ್ಯಗಳು ನಗರಗಳ ಶ್ರೀಮಂತ ವರ್ಗಕ್ಕೂ ಅಧಿಕಾರ ವರ್ಗದ ಧಾಳಾಧೂಳಿಗೂ ವ್ಯಯವಾಯಿತು. ರಾಷ್ಟ್ರಪತಿ ಯಿಂದ ಹಿಡಿದು ರಾಯಭಾರಿ, ಪ್ರಧಾನಿ, ಮಂತ್ರಿ, ಲೋಕಸಭಾ ಸದಸ್ಯ, ಮೇಲ್ಮನೆ, ಕೆಳಮನೆ, ಐಎಎಸ್, ಐಪಿಎಸ್ ಇತ್ಯಾದಿ ಅಧಿಕಾರಿಗಳ ವರೆಗೆ ಸಮೃದ್ಧ ಸಂಬಳ ಗಿಂಬಳಗಳ ಹಂಚಿಕೆ ನಡೆಯಿತು. ದೊಡ್ಡ ದೊಡ್ಡ ವಿದ್ವತ್ಪೂರ್ಣವಾದ ಹೆಸರು ಹೊತ್ತ ನಕಲಿ ಸಂಸ್ಥೆಗಳೂ ಈ ಲೂಟಿಯಲ್ಲಿ ಭಾಗಿಯಾಗುವುದನ್ನು ಮರೆಯಲಿಲ್ಲ. ಗ್ರಾಮಸ್ವರಾಜ್ಯ ಪರಿಕಲ್ಪನೆಯ ವಿಕೇಂದ್ರೀಕರಣದ ಸ್ಥಾನದಲ್ಲಿ ಸಂಪೂರ್ಣ ಕೇಂದ್ರೀಕರಣ ಸ್ಥಾಪನೆಯಾಗಿ, ದಿಲ್ಲಿಗೆ ಹೋಗಿ ಬರುವುದೆ ಕರ್ತವ್ಯಕರ್ಮದ ಪ್ರಧಾನಭಾಗವಾಯಿತು. ಆಡಳಿತ ಮತ್ತು ನ್ಯಾಯ ವಿತರಣೆಗಳು ಬ್ರಿಟಿಷರ ಕಾಲದಲ್ಲಿದ್ದುದಕ್ಕಿಂತಲೂ ಜಟಿಲವಾಗಿ ಅನಕ್ಷರಸ್ಥ ಹಳ್ಳಿಗರು ಅಧಿಕಾರದ ಗಾಣಕ್ಕೆ ಸಿಕ್ಕಿ ನರಳುವಂತಾಯಿತು. ನಮ್ಮ ಹೊಟ್ಟೆಗೆ ಬೇಕಾದ ಕೆಲವು ಅತ್ಯಾವಶ್ಯಕ ವಸ್ತುಗಳನ್ನು ಮಾರಿ ದುಡಿದ ವಿದೇಶಿ ವಿನಿಮಯದಿಂದ ವರ್ಷವರ್ಷವೂ 1,400 ಕೋಟಿ ರೂಪಾಯಿ ಪೆಟ್ರೋಲು ಎಣ್ಣೆ ತರಿಸಿ ಸುಡುತ್ತೇವಂತೆ! ಹೀಗೆ ಹೇಳುತ್ತಾ ಹೋದರೆ ಕೊನೆಮುಟ್ಟುವುದೆಲ್ಲಿ? ಈ ವಿಚಾರದಲ್ಲಿ ನನಗಿಂತಲೂ ಆ ಆ ಕ್ಷೇತ್ರಗಳಲ್ಲಿ ಪರಿಣತರಾದವರಿಂದ ಈಗ ಒದಗಿರುವ ದುಃಸ್ಥಿತಿಯ ಕಥೆಯ ವಿವರಗಳನ್ನು ನೀವು ಕೇಳಿದರೆ ಮೂರ್ಛೆ ಹೋಗುತ್ತೀರೊ ಏನೋ?
ಇಂತಹ ಪರಿಸ್ಥಿತಿಯ ಪಿತ್ರಾರ್ಜಿತ ಆಸ್ತಿಗೆ ನೀವು ಹಕ್ಕುದಾರರಾಗಿ ಹೋಗುತ್ತಿದ್ದೀರಿ. ಏಕೆ ಹೀಗಾಯಿತು? ಸಮಾಜವಾದವೇ ನಮ್ಮ ಗುರಿ ಎಂದು ಘೋಷಿಸಿದ್ದೆವು; ಪ್ರಜಾಸತ್ತೆಯೆ ನಮ್ಮ ವಿಧಾನ ಮಾರ್ಗ ಎಂದೂ ಸಾರಿಸಾರಿ ಪ್ರತಿಜ್ಞೆ ಮಾಡಿದ್ದೆವು. ಆದರೂ ಹೀಗಾಯಿತಲ್ಲ ಏಕೆ? ಇತರ ದೇಶಗಳು ಶತಮಾನಗಳ ವಿಕಾಸದಿಂದ ಸಾವಧಾನವಾಗಿ, ಆದರೂ ಸುದೃಢವಾಗಿ ಸಾಧಿಸಿದ್ದನ್ನು ನಾವು ತಕ್ಷಣವೆ ಸಾಧಿಸಲು ಹೊರಟಿದ್ದು ನಮಗೊದಗಿರುವ ಅಪಘಾತಕ್ಕೆ ಮೂಲಕಾರಣವಾಯಿತು. ನೂರಕ್ಕೆ ತೊಂಬತ್ತರಷ್ಟು ಅನಕ್ಷರರಿರುವ ದೇಶದಲ್ಲಿ ಅದೆಂತಹ ಪ್ರಜಾಸತ್ತೆ ಸಾಧ್ಯವಾದೀತು? ಅದರಲ್ಲಿಯೂ ನಮ್ಮ ದೇಶ, ಯಾವತ್ತೂ ಪ್ರಜಾಸತ್ತೆಯ ಗಾಳಿಯನ್ನೂ ಮೂಸಿ ನೋಡದಿದ್ದ ದೇಶ. ರಾಜರನ್ನು ಪ್ರತ್ಯಕ್ಷ ದೇವರೆಂದು ಪೂಜಿಸಿದ ದೇಶ; ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶ! ಮತಮೌಢ್ಯ ಎಂಬ ನಿತ್ಯರೋಗವು ಅದರ ನಾಡಿನಾಡಿಗಳಲ್ಲಿ ಮಾತ್ರವಲ್ಲದೆ ಎಲುಬಿನಲ್ಲಿಯೂ ಐದುಸಾವಿರ ವರ್ಷಗಳಿಂದ ಸರ್ವವ್ಯಾಪಿಯಾಗಿದ್ದು ವರ್ಗ ವರ್ಣ ಮತ ಜಾತಿ ಪಂಥ ಪಂಗಡ ಎಂಬ ನೂರಾರು ಭೇದಗಳಿಂದ ನರಳುತ್ತಿರುವ ದೇಶ! ಇಲ್ಲಿ ‘‘ಡೆಮಾಕ್ರಸಿ’’ (Democracy) ಬರಿಯ ‘‘ಮಾಕರಿ’’ (Mockery) ಆಗಿದೆ. ಅಮೆರಿಕದಂತಹ ಮುಂದುವರಿದ ದೇಶದಲ್ಲಿಯೇ ಅದರ ಮಹಾಧ್ಯಕ್ಷರ ಚುನಾವಣೆಯಲ್ಲಿ ಧನಸಂಪತ್ತಿಯೆ ನಿರ್ಣಾಯಕ ಶಕ್ತಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಹಿಂದೆ ಅಬ್ರಹಾಂ ಲಿಂಕನ್ ಅಂತಹ ಬಡವರೂ ನೀತಿಸಂಪನ್ನರಾಗಿದ್ದ ಪಕ್ಷದಲ್ಲಿ ಮಹಾಧ್ಯಕ್ಷತೆಗೆ ಏರುವ ಸನ್ನಿವೇಶವಿತ್ತು. ಈಗ ಕೋಟ್ಯಧೀಶ್ವರರಲ್ಲದವರಾರೂ ಚುನಾವಣೆಯನ್ನು ಗೆಲ್ಲುವು ದಿರಲಿ, ಚುನಾವಣೆಗೆ ನಿಲ್ಲುವುದೂ ಅಸಾಧ್ಯ. ಇನ್ನು ನಮ್ಮ ದೇಶದಲ್ಲಿ ಆ ರೀತಿಯ ಚುನಾವಣಾ ಪದ್ಧತಿಯಿಂದ ಏನೇನು ಅನಾಹುತ ವಾಗಬಹುದೋ ಅದೆಲ್ಲ ಆಗಿದೆ ಮತ್ತು ಆಗುತ್ತಲೂ ಇದೆ. ಜಾತಿ, ಮತ, ಹೆಂಡ, ದುಡ್ಡು ಇವೇ ವೋಟರುಗಳು; ವೋಟುಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ ಮೂಕ ವಾಹನಗಳಷ್ಟೆ! ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ, ಯಾವ ಉಪಾಯದಿಂದಾದರೂ, ಕಾಳಸಂತೆಯ ಕಪ್ಪುಹಣವೊ, ಕಳ್ಳಸಾಗಣೆಯ ಹಳದಿ ಹಣವೊ, ಅಂತೂ ಹೆಚ್ಚು ಹಣ ಒಟ್ಟುಮಾಡಿದರಾಯ್ತು ನಮ್ಮ ಚುನಾವಣೆಗಳಲ್ಲಿ ಗೆಲ್ಲಬಹುದು. ಒಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದರಾಯ್ತು, ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನೂ ಅಧಿಕಾರದ ಭಯದಿಂದಲೂ ದುಡ್ಡಿನ ಬಲದಿಂದಲೂ ವಶಪಡಿಸಿಕೊಂಡು ತಮ್ಮ ಸರ್ವಾಧಿಕಾರಕ್ಕೆ ವ್ಯಾಘಾತ ಒದಗದಂತೆ ನೋಡಿಕೊಳ್ಳಬಹುದು. ಒಂದುವೇಳೆ ಜನಶಕ್ತಿ ಎಚ್ಚತ್ತು ಪ್ರತಿಭಟಿಸಿದರೂ ಅದನ್ನು ವಿಫಲಗೊಳಿಸಲು ವಿಶೇಷಾಜ್ಞೆಗಳನ್ನೂ ಪೊಲೀಸ್ ಪಡೆಯನ್ನೂ ಕಡೆಗೆ ಸೈನ್ಯಬಲವನ್ನೂ ಪ್ರಯೋಗಿಸಬಹುದು.
ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯ ದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ? Politics is the last resort of a scoundrel ಎಂದಿದ್ದನಂತೆ ಒಬ್ಬ ಪಾಶ್ಚಾತ್ಯ ಮನೀಷಿ. ನಮ್ಮ ಇಂದಿನ ರಾಜಕಾರಣರಂಗವನ್ನು ನೋಡಿದರೆ ಅವನು ತನ್ನ ಸೂಕ್ತಿಯನ್ನು ತಿದ್ದಿಕೊಳ್ಳುತ್ತಿದ್ದನು,-Politics is the first resort of a scoundrel ಎಂದು ಬದಲಾಯಿಸಿ! ಈಗ ನಮ್ಮ ರಾಜಕೀಯ ರಂಗ ಹೇಗಾಗಿದೆ ಎಂದರೆ ಪ್ರಾಮಾಣಿಕರೂ ಸಂಭಾವಿತರೂ ಸುಸಂಸ್ಕೃತರೂ ಯಾರೂ ಅದರ ಹತ್ತಿರ ಸುಳಿಯಲೂ ಅಂಜುತ್ತಾರೆ. ಚುನಾವಣೆಯ ರೀತಿಯನ್ನೇ ಬದಲಾಯಿಸದಿದ್ದರೆ ಮಾನಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮತ್ತು ನಿಜವಾದ ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಚೆ ನಿಮಗಿದ್ದರೆ ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ಧತಿಯನ್ನೆ ಬದಲಾಯಿಸಿ ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್ತವ್ಯ ನಿಮ್ಮ ಹೆಗಲಮೇಲೆ ಬೀಳುತ್ತದೆ. ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕಮಾರ್ಗಕ್ಕೆ ತಿರುಗಿಸದಿದ್ದರೆ ಖದೀಮರೂ, ಚಾರಿತ್ರಹೀನರೂ ಪ್ರಜಾಸತ್ತೆಯ ಹುಸಿಹೆಸರಿನ ಹಿಂದೆ ಪ್ರಚ್ಛನ್ನಸರ್ವಾಧಿಕಾರ ನಡೆಸುತ್ತಾರೆ.
ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೇ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಅಮೂರ್ತ ವಸ್ತು, ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ-ಅತ್ಯಂತ ಅಂತರತಮ-ಸತ್ಯಸ್ಯ ಸತ್ಯವಾದ ಸನಾತನ ತತ್ವಕ್ಕೆ (ಅದನ್ನು ಅಧ್ಯಾತ್ಮ ಎಂದು ಹೆಸರಿಸುತ್ತೇವೆ.) ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೆ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟಸಾಧ್ಯವಾಗಿದೆ. ಅದರ ಹೆಸರು ‘ಮತ’! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.
ಐಕ್ಯಕ್ಕೂ ಮೈತ್ರಿಗೂ ಸಾಧನವಾಗುವ ಆ ಚಿರಂತನ ಅಧ್ಯಾತ್ಮವನ್ನು ಈ ಅಜ್ಞಾನಜನ್ಯವಾದ ಮತಭಾವನೆ ಆಕ್ರಮಿಸಿ ವರ್ಣ ಜಾತಿ ಪಂಥ ಕೋಮು ಪಂಗಡಗಳೆಂಬ ನೂರಾರು ಭೇದಭಾವನೆಗಳ ಬಿರುಕು ಒಡಕುಗಳಿಗೆ ಸಮಾಜವು ಸಿಕ್ಕಿ ಛಿದ್ರಛಿದ್ರವಾಗುವಂತೆ ಮಾಡಿದೆ. ಈ ಭೇದಭಾವಗಳೂ ಛಿದ್ರಗಳೂ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ನಿಜವಾದ ಸಮಾನತಾಭಾವನೆಯ ಪ್ರಜಾಸತ್ತೆ ಬರಿಯ ಮರುಮರೀಚಿಕೆಯ ಭ್ರಾಂತಿಜಲವಾಗುತ್ತದೆ. ಆದ್ದರಿಂದ ಸಮಾಜವಾದದ ಪ್ರಜಾಸತ್ತೆ ನಿಮ್ಮ ಗುರಿಯಾಗಿದ್ದರೆ ಮತಭಾವನೆಯ ಶನಿಸಂತಾನವಾದ ಜಾತಿಪದ್ಧ್ದತಿಯ ಸಂಪೂರ್ಣ ವಿನಾಶಕ್ಕೆ ನೀವು ಕಂಕಣ ಕಟ್ಟಿಕೊಂಡು ಹೋರಾಡಬೇಕು.
ಈ ಬಿರುಕು ಒಡಕುಗಳಿಗೆ ಮತ್ತು ಭೇದಭಾವನೆಗಳಿಗೆ ಮೂಲಕಾರಣ ಎಲ್ಲಿದೆ ಎಂಬುದನ್ನು ಹುಡುಕಿ, ನೀವು ಅದರ ಬೇರಿಗೆ ಬೆಂಕಿ ಹೊತ್ತಿಸಿ ಸಮಾನತೆಯನ್ನು ಸಾಧಿಸಬೇಕಾಗಿದೆ. ಮೊದಲು ನಿಮ್ಮ ನಿಮ್ಮ ಹೃದಯಗಳನ್ನೆ ಶೋಧಿಸಿಕೊಳ್ಳಬೇಕು. ಶತಮಾನಗಳ ಬೋಧನೆ ಮತ್ತು ನಂಬಿಕೆಗಳ ಫಲವಾಗಿ ನಿಮ್ಮ ವಿಚಾರ ಶಕ್ತಿಯೇ ಕುಂಠಿತವಾಗಿ ಹೋಗಿದೆ. ವಿಜ್ಞಾನ ಸಂಪನ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರನಾಗರಿಕತೆಯನ್ನು ಅನುಕರಿಸಿದ್ದೇವೆ ಹೊರತು ಅದರ ವೈಜ್ಞಾನಿಕ ದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ. ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ, ಸಾಮಾಜಿಕ ಮತ್ತು ಮತಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು.
ನಲ್ವತ್ತು ವರ್ಷಗಳ ಪೂರ್ವದಲ್ಲಿಯೆ ನಾನು ಹಾಡಿದ ಒಂದು ಕವನದ ಕಡೆಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಅದು ನಿಮ್ಮ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿ ನಿಮಗೆ ದಾರಿತೋರಿ ನಡೆಸಲಿ ಎಂದು ಹಾರೈಸುತ್ತೇನೆ:
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟಿ ಕೀಳಬನ್ನಿ.
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.
ಓ, ಬನ್ನಿ, ಸೋದರರೆ, ಬೇಗ ಬನ್ನಿ!
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ:
ಓ, ಬನ್ನಿ, ಸೋದರರೆ, ವಿಶ್ವಪಥಕೆ!
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪದಗಳು ಮಂತ್ರಗಳಾಗಿ ನಿಮ್ಮನ್ನು ಜಾತಿಮತಗಳಿಂದಲೂ ಪಾರುಮಾಡಿ ನಿಮ್ಮಿಂದ ನಿಜವಾದ ಪ್ರಜಾಸತ್ತೆ ಮತ್ತು ಸಮಾಜವಾದ ಸ್ಥಾಪನೆಯಾಗಲಿ ಎಂದು ಹಾರೈಸುತ್ತೇನೆ.
ನಮಗೆ ಬೇಕಾಗಿರುವ ಶಿಕ್ಷಣದ ಸ್ವರೂಪ, ರಾಷ್ಟ್ರೀಯ ಶಿಕ್ಷಣೋದ್ದೇಶ, ದೇಶಭಾಷಾ ಶಿಕ್ಷಣ ಮಾಧ್ಯಮ, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ, ಗ್ರಾಮಸ್ವರಾಜ್ಯ, ನಿರುದ್ಯೋಗ, ಅಭಾವ ಪೀಡೆ, ಬೆಲೆಏರಿಕೆ ಇತ್ಯಾದಿ ಪ್ರಚಲಿತ ಬಿಸಿಬಿಸಿ ಸಮಸ್ಯೆಗಳಾವುವನ್ನೂ ನಾನು ಪ್ರಸ್ತಾಪಿಸಿಲ್ಲ. ಏಕೆಂದರೆ ಅವುಗಳಿಗಿರುವ ಕಾರಣಗಳೆಲ್ಲ ಜನ್ಯಅನಿಷ್ಟ ವರ್ಗಕ್ಕೆ ಸೇರುತ್ತವೆ. ಆ ಉಪಕಾರಣಗಳಿಗೆಲ