ಸರಳತೆ, ಆಪ್ತತೆ, ಮಾನವೀಯತೆ ಪ್ರತಿಬಿಂಬಿಸುವ ಕವಿತೆಗಳು
ಪುಸ್ತಕ ಪರಿಮಳ
'ಇದು ಯುದ್ಧ ಕಾಲ. ವಿರಾಮ ನಿಷಿದ್ಧ. ನಾವು ಎಚ್ಚರದಿಂದಿರಬೇಕು.... ಮಾತನಾಡಬೇಕು... ಪ್ರತಿರೋಧಿಸಬೇಕು... ಮತ್ತು ಕವಿತೆ ಬರೆಯಬೇಕು' ಎನ್ನುತ್ತಲೇ ಸದಾ ಜಾಗ್ರತಾವಸ್ಥೆಯಲ್ಲಿದ್ದು, ಸುತ್ತಣ ಆಗು-ಹೋಗುಗಳಿಗೆ ಸ್ಪಂದಿಸುತ್ತಲೇ ತಮ್ಮ 'ಹುಲಿಯ ನೆತ್ತಿಗೆ ನೆರಳು' ಎಂಬ ಚೊಚ್ಚಲ ಕವಿತಾ ಸಂಕಲನದ ಕಟ್ಟನ್ನು ಹಿಡಿದು ಓದುಗರಿಗೆ ಮುಖಾಮುಖಿಯಾಗಿದ್ದಾರೆ ನದೀಮ್ ಸನದಿ ಅವರು. ಓದಿದ್ದು ಇಂಜಿನಿಯರಿಂಗ್ ಪದವಿಯಾದರೂ ಸಾಹಿತ್ಯದ ಆಸಕ್ತಿ ಬೆಟ್ಟದಷ್ಟು. ಅವರ ಈ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಾಗಿದೆ ಎಂಬುದು ಹೆಮ್ಮೆಯ ಸಂಗತಿ. ಅತ್ಯಂತ ಸರಳವಾಗಿ, ಸಾಮಾನ್ಯ ಓದುಗನೂ ಅರ್ಥ ಮಾಡಿಕೊಳ್ಳುವಂತೆ ಬರೆವ ನದೀಮ್ ಕವಿತೆಗಳು ಒಂದೇ ಓದಿಗೆ ಸೆಳೆದುಕೊಳ್ಳುತ್ತವೆ. ತುಂಬ ಸೂಕ್ಷ್ಮ ವಿಷಯಗಳನ್ನು ಕವಿತೆಗಳಾಗಿಸಿರುವ ಅವರ ಶೈಲಿ ಇಷ್ಟಪಡುವಂಥದ್ದು. ದುರಿತ ಕಾಲದ ಈ ಸಂದಿಗ್ಧ ಸ್ಥಿತಿಯಲ್ಲಿ ಹಾಡುವ ಕೊರಳಿಗೂ ಕೊಡಲಿಯೇಟು ಕಾದಿದೆ. ಕಣ್ಣಿದ್ದು ಕುರುಡರಾಗುವ ಅಸಹಾಯಕತೆ ಬಂದೊದಗಿದೆ. ಮೀತಿ ಮೀರಿರುವ ಜಾತಿ-ಧರ್ಮಗಳ ಹೆಸರಿನ ಶೋಷಣೆ, ಕಣ್ಮರೆಯಾದ ಮನುಷ್ಯತ್ವದ ನೆರಳು, ಮಾನವೀಯ ಮೌಲ್ಯಗಳ ಅಧಃಪತನ, ಬದುಕಿನ ಪ್ರೀತಿ, ಆಶಾವಾದದ ಕುರಿತು ಕವಿತೆ ಕಟ್ಟಿ ಹಾಡಿರುವ ನದೀಮ್ ಇಷ್ಟವಾಗುತ್ತಾರೆ. ಸಂಕಲನದ 31 ಕವಿತೆಗಳು ವಿಭಿನ್ನ ನೆಲೆಗಟ್ಟಿನಲ್ಲಿ ಅಭಿವ್ಯಕ್ತವಾದ ವಸ್ತು, ವಿಷಯ ವೈವಿಧ್ಯತೆಯಿಂದ ಕೂಡಿವೆ.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡಬಲ್ಲುದೇ? ಎಂದರು ಬಸವಣ್ಣನವರು. ಇಂದು ಎಲ್ಲರ ಮನೆ-ಮನದೊಳಗೂ ಬೆಂಕಿ ಬಿದ್ದಿದೆ. ದ್ವೇಷ-ಅಸೂಯೆ, ಜಾತಿ-ಧರ್ಮ, ಮೇಲು-ಕೀಳು ಎಂಬ ತಾರತಮ್ಯದ ಬೆಂಕಿ ಎಲ್ಲೆಡೆಗೂ ಪಸರಿಸಿ, ನಮಗೆ ಗೊತ್ತಿಲ್ಲದ ಹಾಗೆ ಒಳ ಹೊರಗೂ ದಹಿಸುತ್ತಿದೆ. ಆ ಬೆಂಕಿಯ ನಂದಿಸಲು ಯಾವ ಫೈರ್ ಇಂಜಿನ್‌ಗೂ ಸಾಧ್ಯವಿಲ್ಲ. ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿ, ನಾಡಿಗೆ ಆಗಮಿಸಿ ಇಲ್ಲಿ ಹೊತ್ತಿ ಉರಿಯುತ್ತಿರುವ ಮನೆ-ಮನದ ಕ್ರೋಧಾಗ್ನಿಯ ಕಂಡು ತಣ್ಣಗಾಗಿ ಹೋಗುತ್ತದೆ ಎಂದರೆ ನಾವು ಇಲ್ಲಿ ಹೊತ್ತಿ ಉರಿಯುತ್ತಿಹ ಬೆಂಕಿಯ ತೀವ್ರತೆಯನ್ನು ಮನಗಾಣಬೇಕು. ಕವಿ 'ಕಾಡ್ಗಿಚ್ಚು' ಎಂಬ ಕವಿತೆಯ ಮೂಲಕ ಜನರ ಆಂತರ್ಯದ ಕ್ರೋಧಾಗ್ನಿಯ ಧಗೆಯನ್ನು ಬಣ್ಣಿಸುತ್ತಾನೆ. ಹೊತ್ತಿ ಉರಿವ ಬೆಂಕಿ ಆರಿ ತಣ್ಣಗಾಗಲಿ ಎಂಬ ಆಶಯ ವ್ಯಕ್ತಪಡಿಸುತ್ತಾನೆ.
ಕಾಡ್ಗಿಚ್ಚು
ಹಬ್ಬುತ್ತ ಹಬ್ಬುತ್ತ
ಜೀವಗಳ ಸುಡುತ್ತ
ಕೊನೆಗೂ ಊರ ತಲುಪಿದೆ
ಜನರ ಮನಗಳಲ್ಲಿ ಮನೆಗಳಲ್ಲಿ
ಹೊತ್ತಿ ಉರಿಯುತ್ತಿರುವ
ಕ್ರೋಧಾಗ್ನಿಯ ಕಂಡು
ತಣ್ಣಗಾಗಿದೆ
ಬಂದೂಕಿನ ಗುಂಡಿಗಿಂತಲೂ ಹೆಚ್ಚು ಶಕ್ತಿಶಾಲಿಯಾದುದು ಮಾತಿನ ಗುಂಡು. ಒಂದು ಬೆಚ್ಚನೆಯ ಪ್ರೀತಿ, ವಿಶ್ವಾಸ, ನಂಬಿಕೆಗಳು ನಾಮಾವಶೇಷವಾಗಲು ಮಾತಿನ ಭರ್ಚಿ ಸಾಕಷ್ಟೇ. ಇಂದು ಎಷ್ಟೊಂದು ಸಂಸಾರಗಳು, ಚೆಂದನೆಯ ಗೆಳೆತನಗಳು, ಜೀವ ಜೀವದ ಒಲವು ಮುರಿದು ಬಿದ್ದಿರುವುದಕ್ಕೆ ಗಾಳಿಮಾತುಗಳೇ ಕಾರಣ. ಇಲ್ಲಿ ಕವಿ ಪರೋಕ್ಷವಾಗಿ 'ಗಾಳಿಗೋಡೆ' ಕವಿತೆಯಲ್ಲಿ ಎಲ್ಲರಿಗೂ ಸ್ಪಷ್ಟ ಸಂದೇಶ ನೀಡಬಯಸುತ್ತಾನೆ. ನಂಬಿಕೆಯ ಸೌಧ ಕುಸಿದು ಬೀಳಬಾರದೆಂದರೆ ಗಾಳಿಸುದ್ದಿಗೆ ಕಿವಿಗೊಡಬೇಡಿ ಎಂದು.
ಗಾಳಿ ಮಾತೊಂದು
ಅದೇ ಗಾಳಿಯಲ್ಲಿ ತೇಲುತ್ತ
ನಿನ್ನತ್ತ ಧಾವಿಸುತ್ತಿದೆ
ನಂಬಿಕೆಯ ಗೋಡೆ
ದೃಢವಾಗಿ ನಿಂತಿರಲಿ
ದಿನಕರ ದೇಸಾಯಿ ಅವರು ತಮ್ಮ ಒಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ... ನನ್ನ ದೇಹದ ಬೂದಿ/ಗಾಳಿಯಲ್ಲಿ ತೂರಿಬಿಡಿ/ಹೋಗಿ ಬೀಳಲಿ ಅಲ್ಲಿ/ಭತ್ತ ಬೆಳೆಯುವಲ್ಲಿ/ಬೂದಿ ಗೊಬ್ಬರವನುಂಡು/ತೆನೆಯೊಂದು ನೆಗೆದು ಬರೆ/ಧನ್ಯವಾಯಿತು ಹುಟ್ಟು ಸಾವಿನಲ್ಲಿ/ ಸತ್ತ ನಂತರವೂ ದೇಹ ಪರರ ಸೇವೆಗೆ ಮಿಡಿಯುವಂತಿರಲಿ ಎಂಬ ನಿಸ್ವಾರ್ಥ ಭಾವ ಪ್ರಾಮಾಣಿಕ ಕವಿಯೊಬ್ಬನಿಗೆ ಮಾತ್ರ ಬರಲು ಸಾಧ್ಯ. ಅಂತೆಯೇ 'ಬಯಕೆ' ಕವಿತೆಯಲ್ಲಿ ಕವಿ ತಾನು ಏನಾಗುತ್ತೇನೆ ಎಂಬ ಸ್ಪಷ್ಟ ಅರಿವು ನೀಡಬಯಸುತ್ತಾನೆ. ನಿಷ್ಪ್ರಯೋಜಕ, ಜೀವಹಾನಿಗೈವ, ಭಯ ಬಿತ್ತುವ ಯಾವ ವಸ್ತುಗಳೂ ಆಗಬಯಸದೆ ನಾನೊಂದು ಬೀಜವಾಗುತ್ತೇನೆ ಎನ್ನುತ್ತಾನೆ. ಹತ್ತಾರು ಬೀಜಗಳಿಗೆ ಜೀವ ಕೊಡುತ್ತೇನೆ. ಹಬ್ಬುವ ಹಸಿರಿನಲ್ಲಿ ಉಸಿರಾಗುತ್ತೇನೆ ಎಂಬ ಸಾರ್ಥಕತೆಯ ಭಾವ ತುಂಬುತ್ತಾನೆ.
ನಾನು...
ಒಂದು ಬೀಜವಾಗಲು
ಬಯಸುತ್ತೇನೆ
ಕೆಳಕ್ಕೆ ಬಿದ್ದರೂ
ಕಳೆದು ಹೋಗುವುದಿಲ್ಲ
ಒಡೆದು ಚಿಗುರುತ್ತೇನೆ
ನೆಲದಿಂದೆದ್ದು ಮೇಲೆ ಬರುತ್ತೇನೆ
ಹತ್ತಾರು ಬೀಜಗಳಿಗೆ
ಜನ್ಮ ನೀಡುತ್ತೇನೆ
ಮಾನವ ಕುಲವೆಲ್ಲ ಒಂದೇ ಎನ್ನುವ 'ನನ್ನ ಜಾತ್ಯತೀತ ಕವಿತೆ' ಸಮತೆಯ ಬದುಕೇ ಸಕಲ ಧರ್ಮಗಳ ಮೂಲ ತಳಹದಿಯಾಗಬೇಕು ಎನ್ನುತ್ತದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಮುಗ್ಧ, ಅಮಾಯಕರ ಶೋಷಣೆ, ಹತ್ಯೆ ನಡೆಸುವ ಮತಾಂಧರಿಗೆ ಕೋಮು ಸಾಮರಸ್ಯದ ಪಾಠ ಹೇಳುತ್ತದೆ. ದೇವನೊಬ್ಬ ನಾಮ ಹಲವು ಸೂತ್ರದಡಿಯಲ್ಲಿ ಬಾಳು ನಡೆಸಲು ಪ್ರೇರೇಪಿಸುತ್ತದೆ.
ದೀಪಾವಲಿಯಲಿ 'ಅಲಿ'
ರಮಝಾನದಲಿ 'ರಾಮ'
ನೆಲೆಸಿಹರೆಂಬುದನು ಮರೆತಿಹರು
ಗಾಂಧಿಯನ್ನು ಪ್ರತಿಮೆಯಾಗಿ ಪಡೆದ ಎರಡು ಕವಿತೆಗಳು, ಗಲಭೆಯಲಿ ಸತ್ತವನೊಬ್ಬನ ಅಫಿಡವಿಟ್, ಪರಿವೆ ಇಲ್ಲದ ದೇವರು, ಇನ್ನಿಲ್ಲಿ ಮನುಷ್ಯರಿಲ್ಲ ಮುಂತಾದ ಕವಿತೆಗಳು ಕಾಡುತ್ತವೆ, ಕಣ್ಣೀರಾಗಿಸುತ್ತವೆ. ನದೀಮ್ ಮೊದಲ ಕವನ ಸಂಕಲನದಲ್ಲಿಯೇ ಅವರ ಮುಂದಣ ಹಾದಿಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ರಹಮತ್ ತರೀಕೆರೆ ಹೇಳುವಂತೆ ನಮ್ಮ ಕಾಲದ ಆರೋಗ್ಯವಂತ ಮನಸ್ಸೊಂದು ಲೋಕಕ್ಕೆ ಮಿಡಿದ ಸಾಕ್ಷ್ಯಾಧಾರದಂತಿರುವ ಇಲ್ಲಿನ ಕವನಗಳು ಹೆಚ್ಚು ತ್ರಾಸ ಕೊಡದೆ ಎಲ್ಲರ ಮನಸನ್ನು ತಾಕುತ್ತವೆ. ಅವರೇ ಒಂದು ಕವಿತೆಯಲ್ಲಿ ಹೇಳಿದಂತೆ ಏನೇ ಆದರೂ ಕವಿತೆ ಉಸಿರಾಡುತ್ತಲೇ ಇರಲಿ ಎಂಬ ಸದಾಶಯದೊಂದಿಗೆ ಶುಭ ಕೋರುತ್ತೇನೆ.