varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಸಂಪಾದಕೀಯ

ನಿಮ್ಮ ಸಹಭಾಗಿತ್ವದಲ್ಲಿ ನಡೆಯಲಿ ಈ ಅಭಿಯಾನ

ವಾರ್ತಾ ಭಾರತಿ : 30 Dec, 2019
ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ

ಇಂದು ನಿಮ್ಮ ನೆಚ್ಚಿನ ‘ವಾರ್ತಾ ಭಾರತಿ ಕನ್ನಡ ದೈನಿಕ’ವು ಮಾಧ್ಯಮರಂಗದಲ್ಲಿ ತನ್ನ ಪ್ರಯಾಣದ 16 ವರ್ಷ ಗಳನ್ನು ಪೂರ್ತಿಗೊಳಿಸಿ 17ನೇ ವರ್ಷದೆಡೆಗೆ ಹೆಜ್ಜೆ ಇಟ್ಟಿದೆ. ಅಪಾರ ಸಂಭ್ರಮದ ಈ ಸಂದರ್ಭದಲ್ಲಿ ‘ವಾರ್ತಾಭಾರತಿ’ ತಂಡದ ಪರವಾಗಿ ಜಗತ್ತಿನೆಲ್ಲೆಡೆಯ ನಮ್ಮ ಸಮಸ್ತ ಓದುಗ ಬಳಗಕ್ಕೆ, ನಮ್ಮನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತಿರುವ ನಮ್ಮೆಲ್ಲ ಹಿತೈಷಿಗಳಿಗೆ ಮತ್ತು ವಿಶೇಷವಾಗಿ ‘ವಾರ್ತಾಭಾರತಿ’ಯ ಜೊತೆ ವಿಶೇಷ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ಭಾವನಾತ್ಮಕ ನಂಟು ಬೆಸೆದುಕೊಂಡಿರುವ ಅಪಾರ ಸಂಖ್ಯೆಯ ನಮ್ಮ ಸಕ್ರಿಯ ಬೆಂಬಲಿಗರು ಹಾಗೂ ಅಭಿಮಾನಿ ಬಳಗಕ್ಕೆ ಮನದಾಳದ ಅಭಿನಂದನೆಗಳು.

‘ವಾರ್ತಾ ಭಾರತಿ’ಯ ಹಲವು ವಿಶೇಷತೆಗಳ ಪೈಕಿ ಅದರ ಓದುಗರು ಪದೇ ಪದೇ ಗುರುತಿಸಿ ಪ್ರಶಂಸಿಸಿರುವ ವಿಶೇಷತೆಯೇನೆಂದರೆ ಇದು ಯಾವುದೇ ಖಾಸಗಿ ಉದ್ಯಮಿ ಕುಟುಂಬದ ಪತ್ರಿಕೆಯಲ್ಲ. ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಪಂಥ, ಪಕ್ಷ ಅಥವಾ ಸಂಘಟನೆಯ ಮುಖವಾಣಿಯಲ್ಲ. ಇದು ಎಂದೂ ಯಾವುದೇ ಪುಢಾರಿ ಅಥವಾ ಪುರೋಹಿತರ ಆಶ್ರಯವನ್ನು ಅವಲಂಬಿಸಿಲ್ಲ. ಅನೈತಿಕವಾದ ಮಾತ್ರವಲ್ಲ ಶರ್ತಬದ್ಧವಾದ ಜಾಹೀರಾತುಗಳ ಕಡೆಗೂ ಈ ಪತ್ರಿಕೆ ಎಂದೂ ಕೈಚಾಚಿಲ್ಲ. ಆದ್ದರಿಂದಲೇ ಯಾವುದೇ ಸರಕಾರವನ್ನು, ಪಕ್ಷವನ್ನು, ಪುಢಾರಿಯನ್ನು ಅಥವಾ ಯಾವುದೇ ನಿರ್ದಿಷ್ಟ ಹಿತಾಸಕ್ತಿಯನ್ನು ಬೆಂಬಲಿಸಲೇಬೇಕು ಅಥವಾ ವಿರೋಧಿಸಲೇಬೇಕು ಎಂಬ ಅನಿವಾರ್ಯತೆಯೂ ಈ ಪತ್ರಿಕೆಗಿಲ್ಲ. ಸತ್ಯನಿಷ್ಠ, ನ್ಯಾಯನಿಷ್ಠ, ಜನಪರ, ಸ್ವತಂತ್ರ ಮತ್ತು ನಿಷ್ಪಕ್ಷ ಪತ್ರಿಕೋದ್ಯಮದ ಕನಸುಹೊತ್ತು ರಂಗಕ್ಕೆ ಬಂದ ಈ ಪತ್ರಿಕೆ ಇದೀಗ ತನ್ನ 17ನೇಯ ವರ್ಷದಲ್ಲೂ ಆ ತನ್ನ ಬದ್ಧತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ತಾನು ನೆಚ್ಚಿಕೊಂಡಿರುವ ದಿಕ್ಕು ಮತ್ತು ದಾರಿಯಲ್ಲೇ ಬೆಳೆಯುತ್ತಾ, ಬಲಗೊಳ್ಳುತ್ತಾ ಮುನ್ನಡೆಯುತ್ತಿದೆ, ಸಮಾಜದ ಒಂದು ಗಣ್ಯ ಭಾಗವನ್ನು ಆ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

2003ರಲ್ಲಿ ‘ವಾರ್ತಾಭಾರತಿ’ ರಂಗಕ್ಕೆ ಬಂದಾಗ ಅದು ಕೇವಲ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿತ್ತು. 8 ಪುಟಗಳೊಂದಿಗೆ ಆರಂಭವಾದ ಪತ್ರಿಕೆ ಕೆಲವೇ ವಾರಗಳಲ್ಲಿ 10 ಪುಟಗಳಿಗೆ ಮತ್ತು ಅಲ್ಲಿಂದ ಶೀಘ್ರವೇ 12 ಪುಟಗಳಿಗೆ ಬೆಳೆಯಿತು. ಮಂಗಳೂರು ಆವೃತ್ತಿಯೊಂದಿಗೆ ಆರಂಭವಾದ ಪತ್ರಿಕೆ ಮುಂದೆ, ರಾಜಧಾನಿ ಬೆಂಗಳೂರಿನಲ್ಲಿ ಒಂದು ಆವೃತ್ತಿಯನ್ನು ಆರಂಭಿಸಿತು. ತನ್ನ ಒಂದೊಂದು ಆವೃತ್ತಿಯ ಮೂಲಕ ಕನಿಷ್ಠ ಐದಾರು ಜಿಲ್ಲೆಗಳಿಗೆ ಮುಂಜಾನೆ ಬೇಗ ತಲುಪುವ ಪತ್ರಿಕೆ ಶಿವಮೊಗ್ಗದಿಂದ ತನ್ನ ಮೂರನೆಯ ಆವೃತ್ತಿಯನ್ನು ಪರಿಚಯಿಸುವ ಮೂಲಕ ತನ್ನ ಪ್ರಭಾವ ವಲಯವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿತು. ಮುಂದಿನ ವರ್ಷಗಳಲ್ಲಿ ಪತ್ರಿಕೆಯು ಇಂಟರ್‌ನೆಟ್ ಲೋಕಕ್ಕೆ ಕಾಲಿಟ್ಟು ಅಲ್ಲಿ ಜನಪ್ರಿಯವಾಗತೊಡಗಿತು.

ಉತ್ತರ ಕರ್ನಾಟಕದ ನಮ್ಮ ಸಹಸ್ರಾರು ಅಭಿಮಾನಿಗಳು ‘ವಾರ್ತಾ ಭಾರತಿ’ಯ ಹುಬ್ಬಳ್ಳಿ ಮತ್ತು ಕಲಬುರಗಿ ಆವೃತ್ತಿಗಳನ್ನು ಹೊರತರಬೇಕೆಂದು ಬಹುಕಾಲದಿಂದ ಆಗ್ರಹಿಸುತ್ತಿದ್ದರೂ ಆರ್ಥಿಕ ಇತಿಮಿತಿಗಳ ಕಾರಣ ಅದು ಸಾಧ್ಯವಾಗಲಿಲ್ಲ ಎಂಬ ಕೊರಗು ನಮಗೆ ಖಂಡಿತ ಇದೆ. ಆದರೆ ಇದೀಗ ಆ ಪ್ರದೇಶದ ಜನರು ದೊಡ್ಡ ಸಂಖ್ಯೆಯಲ್ಲಿ ಇಂಟರ್‌ನೆಟ್ ಮೂಲಕ ಪತ್ರಿಕೆಯನ್ನು ಓದುತ್ತಿದ್ದಾರೆ, ಮಾತ್ರವಲ್ಲ, ಪತ್ರಿಕೆಯ ಬಳಗದ ಜೊತೆ ಸತತ ಸಂಪರ್ಕದಲ್ಲೂ ಇದ್ದಾರೆಂಬುದು ನಮ್ಮ ಪಾಲಿಗೆ ಒಂದಷ್ಟು ನೆಮ್ಮದಿಯ ಸಂಗತಿಯಾಗಿದೆ. ಇಂದು ‘ವಾರ್ತಾಭಾರತಿ’ಯ ಮುದ್ರಿತ ಪ್ರತಿಗಳು ನಿತ್ಯ ಕೆಲವು ಲಕ್ಷ ಮಂದಿಗೆ ತಲುಪಿದರೆ, ಅಂತರ್ಜಾಲದ ವಿವಿಧ ವೇದಿಕೆಗಳ ಮೂಲಕ ಅದು ಇನ್ನೂ ಹಲವು ಪಟ್ಟು ಅಧಿಕ ಮಂದಿಗೆ ತಲುಪುತ್ತಿದೆ. ಪತ್ರಿಕೆಯ ಮುದ್ರಿತ ಪ್ರತಿ ದಿನಕ್ಕೆ ಒಮ್ಮೆ ಮಾತ್ರ ಓದುಗರ ಕೈಸೇರಿದರೆ, ಪ್ರತಿ ಐದಾರು ನಿಮಿಷಗಳಿಗೊಮ್ಮೆ ಆಯಾ ನಿಮಿಷದ ತಾಜಾ ಸುದ್ದಿಗಳನ್ನು ಒದಗಿಸುವ ವೆಬ್‌ಸೈಟ್ ಮತ್ತು ಆ್ಯಪ್‌ಗಳ ಮೂಲಕ ಪತ್ರಿಕೆಯು ಪ್ರತಿ ನಿಮಿಷವೂ ಹಲವಾರು ದೇಶಗಳ ಸಾವಿರಾರು ಓದುಗರ ಸುದ್ದಿದಾಹವನ್ನು ತಣಿಸುತ್ತಿದೆ. 

2010ರಲ್ಲಿ ಪರಿಚಯಿಸಲಾದ ನಮ್ಮ ಇ-ಪೇಪರ್ (VB E-Paper)  ಜಗತ್ತಿನೆಲ್ಲೆಡೆಯ ಕನ್ನಡಿಗರಿಗೆ ಪತ್ರಿಕೆ ಯನ್ನು ಲಭ್ಯಗೊಳಿಸಿತು. 2016 ರಲ್ಲಿ ಪರಿಚಯಿಸಲಾದ ನಮ್ಮ ಆನ್‌ಲೈನ್ ಆವೃತ್ತಿ varthabharati.in ಓದುಗರ ಒಂದು ಹೊಸ ಸಮುದಾಯವನ್ನೇ ಪತ್ರಿಕೆಗೆ ನಿಕಟಗೊಳಿಸಿತು. 2016ನಲ್ಲೇ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಮತ್ತು 2018 ರಲ್ಲಿ ಇನ್‌ಸ್ಟಾಗ್ರಾಮ್‌ಗಳಲ್ಲಿ ‘ವಾರ್ತಾಭಾರತಿ’ಯ ಪುಟಗಳು ಲಭ್ಯವಾದವು.

ಕಳೆದ ವರ್ಷ 2018ರಲ್ಲಿ ಪತ್ರಿಕೆ ತನ್ನದೇ ಆದ ಯೂ ಟ್ಯೂಬ್ YouTube ಚಾನೆಲ್ ಅನ್ನು ಆರಂಭಿಸಿತು. ಅದೇ ವರ್ಷ ಮೊಬೈಲ್ ಬಳಕೆದಾರರಿಗಾಗಿ ಅಂಡ್ರಾಯಿಡ್ (Android) ಮತ್ತು ಐಓಎಸ್ (IOS) ಆ್ಯಪ್‌ಗಳನ್ನೂ ಬಿಡುಗಡೆಗೊಳಿಸಲಾಯಿತು. ಮಾತ್ರವಲ್ಲ, ಇಂಗ್ಲಿಷ್ ಓದುಗರ ಬಹುಕಾಲದ ಆಗ್ರಹಕ್ಕೆ ಸ್ಪಂದಿಸಿ ಪತ್ರಿಕೆಯ ಆನ್‌ಲೈನ್ ಇಂಗ್ಲಿಷ್ ಆವೃತ್ತಿ (english.varthabharati.in) ಯನ್ನು ಆರಂಭಿಸಲಾಯಿತು. 

varthabharati.in ಇಂದು ಕನ್ನಡದ ಐದು ಅತ್ಯಂತ ಜನಪ್ರಿಯ ಆನ್‌ಲೈನ್ ಸುದ್ದಿತಾಣಗಳ ಸಾಲಲ್ಲಿದೆ. ನಿತ್ಯ ಕನಿಷ್ಠ 2.5 ಲಕ್ಷ ಮಂದಿ ಅನನ್ಯ ಸಂದರ್ಶಕರು (Unique Visitors) ‘ವಾರ್ತಾಭಾರತಿ’ಯ ವೆಬ್‌ಸೈಟ್ ಅನ್ನು ಸಂದರ್ಶಿಸುತ್ತಾರೆ. ನಿತ್ಯದ ಪುಟ ವೀಕ್ಷಣೆಯ (Daily Page Views) ಸಂಖ್ಯೆ 10ಲಕ್ಷಕ್ಕಿಂತ ಅಧಿಕವಿದೆ. varthabharati.in ಪ್ರತಿ ದಿನ 10,000ಕ್ಕೂ ಅಧಿಕ whatsapp ಗುಂಪುಗಳನ್ನು ತಲುಪಿ ಆಮೂಲಕ ಹಲವು ಸಹಸ್ರ ಓದುಗರಿಗೆ ತಲುಪುತ್ತಿದೆ. ‘ಡೈಲಿ ಹಂಟ್’ ಮತ್ತು ‘ನ್ಯೂಸ್ ಪಾಯಿಂಟ್’ ನಂತಹ ಪ್ರಮುಖ ಸುದ್ದಿ ಆ್ಯಪ್‌ಗಳಲ್ಲೂ ‘ವಾರ್ತಾ ಭಾರತಿ’ಯು ಸಾಕಷ್ಟು ಜನಪ್ರಿಯವಾಗಿದೆ.

‘ವಾರ್ತಾಭಾರತಿ’ಯ ಅಭಿಮಾನಿ ಓದುಗರಿಗೆ ಅಪಾರ ಹರ್ಷ ನೀಡಬಲ್ಲ ಒಂದು ಮಾಹಿತಿಯೇನೆಂದರೆ, ಫೇಸ್‌ಬುಕ್ (FaceBook)ನಲ್ಲಿ ಪ್ರಚಲಿತ ವರ್ಷ (2019) ದುದ್ದಕ್ಕೂ ‘ವಾರ್ತಾಭಾರತಿ’ಯು, ಹಲವು ವಿಷಯಗಳಲ್ಲಿ ಕನ್ನಡದ ಎಲ್ಲ ದಿನಪತ್ರಿಕೆಗಳ ಪೈಕಿ ಪ್ರಥಮ ಸ್ಥಾನವನ್ನು ಗಳಿಸಿರುವುದು ಮಾತ್ರವಲ್ಲ, ಅದನ್ನು ನಿರಂತರ ಉಳಿಸಿಕೊಂಡಿದೆ. ಉದಾ: ಹಂಚಿಕೆಯಾದ ವಾರ್ತೆಗಳ (Shared News Items) ಸಂಖ್ಯೆ, ಓದುಗರು ಮತ್ತು ವೀಕ್ಷಕರ ಪರಸ್ಪರ ಸಂವಹನದ (Interaction Rate)  ಪ್ರಮಾಣ, ವೀಡಿಯೊ ವೀಕ್ಷಣೆ (Video Views) , ಹೊಸ ಬೆಂಬಲಿಗರ ಸೇರ್ಪಡೆಯ (New Followers Added) ಪ್ರಮಾಣ, ಪುಟಗಳ ಬೆಳವಣಿಗೆಯ (Page Growth) ಮಟ್ಟ, ಹೀಗೆ ವಿವಿಧ ಮಾನದಂಡಗಳಿಂದ ‘ವಾರ್ತಾಭಾರತಿ’ಯು ಫೇಸ್‌ಬುಕ್‌ನಲ್ಲಿ ಈ ವರ್ಷದುದ್ದಕ್ಕೂ ಇತರೆಲ್ಲ ಕನ್ನಡ ದೈನಿಕಗಳಿಗಿಂತ ಬಹಳ ಮುಂದೆ ನಿಂತಿದೆ.

ಏಕಕಾಲದಲ್ಲಿ ಇಷ್ಟೆಲ್ಲಾ ಸಂಭ್ರಮದ ಸುದ್ದಿಗಳನ್ನು ತಮ್ಮ ಜೊತೆ ಹಂಚಿಕೊಳ್ಳುವಾಗ, ಅಷ್ಟೊಂದು ಸಂಭ್ರಮಕ್ಕೆ ಅರ್ಹವಲ್ಲದ ಒಂದು ವಿಷಯವನ್ನೂ ತಿಳಿಸಬೇಕಾಗಿದೆ. ಅಪಾರ ಆಶಯಗಳು ಮತ್ತು ತೀರಾ ಸೀಮಿತ ಆರ್ಥಿಕ ಬಂಡವಾಳದೊಂದಿಗೆ ಆರಂಭವಾದ ಈ ನಿಮ್ಮ ದೈನಿಕವು ತನ್ನ 17ನೇ ಹರೆಯದಲ್ಲೂ ಆರ್ಥಿಕವಾಗಿ ಸಂಪನ್ನ ಅನ್ನಬಹುದಾದ ಸ್ಥಿತಿಯಲ್ಲಿಲ್ಲ. ಈವರೆಗೆ ಕೇವಲ ನಿಮ್ಮ ಮುಖವಾಣಿಯಾಗಿ ಸೇವೆ ಸಲ್ಲಿಸಿರುವ ಈ ಪತ್ರಿಕೆ ಅದೇ ಪಾತ್ರದಲ್ಲಿ ಮುನ್ನಡೆಯಲು ಬಯಸುತ್ತದೆ. ಆ ನಿಟ್ಟಿನಲ್ಲಿ ‘ವಾರ್ತಾಭಾರತಿ’ ತಂಡವು ನಿಮ್ಮೆಲ್ಲರ ಸಕ್ರಿಯ ಸಹಭಾಗಿತ್ವವನ್ನು ನಿರೀಕ್ಷಿಸುತ್ತದೆ.

ನಮ್ಮ ಮುದ್ರಿತ ಆವೃತ್ತಿಯ ಓದುಗರು ಪ್ರತಿಗೆ ತಲಾ ರೂ. 4ರಿಂದ 6 (ಮಾಸಿಕ ಸುಮಾರು ರೂ.180) ಪಾವತಿಸುತ್ತಾರೆ. ಪತ್ರಿಕೆಯ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಈ ಮೊತ್ತ ಅದರ ಒಂದು ಪುಟ್ಟ ಭಾಗ ಮಾತ್ರ. ಆದ್ದರಿಂದಲೇ ಹೆಚ್ಚೆಚ್ಚು ಪ್ರತಿಗಳನ್ನು ಮಾರಿದಂತೆ ನಷ್ಟದ ಪ್ರಮಾಣವೂ ಹೆಚ್ಚುತ್ತದೆ. ನಷ್ಟವನ್ನು ಜಾಹೀರಾತುಗಳ ಆದಾಯದಿಂದ ಭರಿಸಬೇಕಾಗುತ್ತದೆ. ಪ್ರತಿ ವರ್ಷ, ಆ ವರ್ಷದ ನಷ್ಟಗಳನ್ನೆಲ್ಲ ಭರಿಸಲು ಬೇಕಾಗುವಷ್ಟು ಜಾಹೀರಾತು ಸಿಗುತ್ತದೆಂಬ ಖಾತರಿಯೇನೂ ಇರುವುದಿಲ್ಲ. ಆಗ ಸಾಲಕ್ಕೆ ಶರಣಾಗಬೇಕಾಗುತ್ತದೆ. ಆದರೂ ಪತ್ರಿಕೆಯ ಮೂಲ ಧ್ಯೇಯವನ್ನು ಪರಿಗಣಿಸಿ, ನಷ್ಟವಾದರೂ ಅತ್ಯಧಿಕ ಮಂದಿಗೆ ತಲುಪುತ್ತಿರಬೇಕೆಂಬ ಛಲವನ್ನು ಕೈಬಿಟ್ಟಿಲ್ಲ. ಶರ್ತಬದ್ಧವಾದ ಹೂಡಿಕೆ ಅಥವಾ ಜಾಹೀರಾತಿಗೆ ಕೈಚಾಚುವ ಬದಲು ಸಾಲಕ್ಕೆ ಶರಣಾಗುವುದು ಲೇಸೆಂಬ ಧೋರಣೆಯನ್ನು ಸದಾ ಉಳಿಸಿಕೊಂಡಿದ್ದೇವೆ. ಸಾಲಗಳು ಕೆಲವೊಮ್ಮೆ ತುಂಬಾ ದುಬಾರಿಯಾದರೂ ತಾತ್ವಿಕ ಶರಣಾಗತಿಗಿಂತ ಸಾವಿರಪಾಲು ವಾಸಿ ಎಂಬ ನಿಲುವು ತಾಳಿದ್ದೇವೆ.

ಸದ್ಯ ನಮ್ಮ ಮುದ್ರಿತ ಆವೃತ್ತಿಯ ಓದುಗರ ಸಂಖ್ಯೆಗೆ ಹೋಲಿಸಿದರೆ ಆನ್ ಲೈನ್ ಓದುಗರ ಸಂಖ್ಯೆ ಹಲವು ಪಟ್ಟು ಅಧಿಕವಿದೆ. ಆದರೆ ಅವರಲ್ಲಿ ಹೆಚ್ಚಿನವರು ಸದ್ಯ ಉಚಿತ ಓದುಗರಾಗಿದ್ದಾರೆ. ಅವರ ಪೈಕಿ ಕೇವಲ ಕೆಲವರು ಮಾತ್ರ ಸ್ವಪ್ರೇರಣೆಯಿಂದ ಸಣ್ಣ ಪುಟ್ಟ ಚಂದಾಗಳನ್ನು ಕಳಿಸುತ್ತಾರೆ. ನಿಜವಾಗಿ ಇಂದು ನಮ್ಮ ಓದುಗ ವಲಯವು ಎಷ್ಟೊಂದು ವಿಶಾಲವಾಗಿದೆಯೆಂದರೆ ನಮ್ಮೆಲ್ಲ ಆನ್ ಲೈನ್ ಓದುಗರು ನಮ್ಮ ಆರ್ಥಿಕ ಭಾರವನ್ನು ಹಂಚಿಕೊಳ್ಳಲು ಸಾಂಕೇತಿಕವಾಗಿ ಕೇವಲ ದಿನಕ್ಕೊಂದು ರೂಪಾಯಿಯ ಪ್ರಕಾರವಾದರೂ ನಮಗೆ ತಲುಪಿಸಿದರೆ ನಮ್ಮ ಹೆಚ್ಚಿನ ಸಮಸ್ಯೆಗಳು ಬಗೆಹರಿಯುತ್ತವೆ. ನಾವು ಬಲ್ಲಂತೆ, ನಮ್ಮ ಹೆಚ್ಚಿನ ಓದುಗರಿಗೆ ನಮ್ಮ ಭಾರವನ್ನು ಹಂಚಿಕೊಳ್ಳುವ ಆಸಕ್ತಿ ಮತ್ತು ಉತ್ಸಾಹ ಇದೆ. ಆದರೆ ಅದಕ್ಕಾಗಿ ಅಧಿಕೃತವಾಗಿ ‘ಚಂದಾ ಅಭಿಯಾನ’ದ ರೂಪದಲ್ಲಿ ಒಂದು ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ. ಚಂದಾ ಅಭಿಯಾನವನ್ನು ಸೆಪ್ಟಂಬರ್ 1ರಂದು ಆರಂಭಿಸಿದ್ದೇವೆ. ‘ವಾರ್ತಾಭಾರತಿ’ಯ ಎಲ್ಲ ಓದುಗರು, ಹಿತೈಷಿಗಳು ಬೆಂಬಲಿಗರು ಮತ್ತು ಅಭಿಮಾನಿಗಳು ಆಸಕ್ತಿವಹಿಸಿ ಸಕ್ರಿಯವಾಗಿ ಭಾಗವಹಿಸಬೇಕಾದ ಅಭಿಯಾನ ಇದು. ಪತ್ರಿಕೆಯ ಪ್ರತಿಯೊಬ್ಬ ಆನ್ ಲೈನ್ ಓದುಗರು ಪತ್ರಿಕೆಗೆ ಬೆಂಬಲ ರೂಪದಲ್ಲಿ ಸ್ವತಃ ತಮ್ಮ ಕಿಸೆಯಿಂದ ಕನಿಷ್ಠ ತಲಾ ರೂ. 1,000 ವಾರ್ಷಿಕ ಚಂದಾ ಕಳಿಸಿಕೊಡಬೇಕು ಮತ್ತು ತಮ್ಮ ಅಕ್ಕ ಪಕ್ಕದ ಓದುಗರನ್ನೂ ಹಾಗೆ ಮಾಡಲು ಪ್ರೇರೇಪಿಸಬೇಕು ಎಂದು ವಿನಂತಿಸುತ್ತಿದ್ದೇವೆ. ರೂ. 1,000ಕ್ಕಿಂತ ಹೆಚ್ಚು ಕಳಿಸಬಯಸುವವರಿಗೆ ಗರಿಷ್ಠ ಮಿತಿಯೇನೂ ಇಲ್ಲ. ಅದೆಷ್ಟೋ ಮಂದಿ ಚಂದಾ ಕಳಿಸಲು ಆಸಕ್ತರಾಗಿದ್ದರೂ ಹೇಗೆ ಕಳಿಸುವುದೆಂಬ ಗೊಂದಲದಲ್ಲಿರಬಹುದು ಅಥವಾ ಆನ್‌ಲೈನ್ ಪಾವತಿಯ ಪ್ರಕ್ರಿಯೆ ಅವರಿಗೆ ಹೊಸದಾಗಿರಬಹುದು. ಅಂತಹ ಎಲ್ಲ ಓದುಗರಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಬೇಕಾದುದು ಮತ್ತು ಪಾವತಿಯ ವಿವಿಧ ವಿಧಾನಗಳನ್ನು ಪರಿಚಯಿಸಬೇಕಾದುದು ನಮ್ಮ ಪ್ರಬುದ್ಧ ಓದುಗರ ಜವಾಬ್ದಾರಿಯಾಗಿರುತ್ತದೆ. ಯಾವುದೇ ಪಕ್ಷ ಅಥವಾ ಸಂಘಟನೆಯ ಹಂಗಿಲ್ಲದ ಈ ಪತ್ರಿಕೆ ಹಾಗೆಯೇ ನಿಷ್ಪಕ್ಷವಾಗಿ ಉಳಿಯಬೇಕೆಂದು ಬಯಸುವವರು ಸ್ವತಃ ತಾವೇ ಈ ಪತ್ರಿಕೆಯ ಪರವಾಗಿ ಕಾರ್ಯಕರ್ತರ ಪಾತ್ರ ನಿರ್ವಹಿಸಬೇಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)