varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ದಕ್ಷಿಣ ಭಾರತಕ್ಕಿದೆ ಭಾರೀ ಹೊಣೆಗಾರಿಕೆ

ವಾರ್ತಾ ಭಾರತಿ : 30 Dec, 2019
ರವೀಶ್ ಕುಮಾರ್, ಕನ್ನಡಕ್ಕೆ: ನೂರ್ ಜಹಾನ್ ಅಬೂಬಕರ್

            ರವೀಶ್ ಕುಮಾರ್

ದೇಶದ ಸಾಕ್ಷಿಪ್ರಜ್ಞೆ ಎಂದೇ ಪ್ರತಿಯೊಬ್ಬ ಪ್ರಜ್ಞಾವಂತನೂ ಗುರುತಿಸುವ ಪತ್ರಕರ್ತ ರವೀಶ್ ಕುಮಾರ್. ‘ಎನ್‌ಡಿಟಿವಿ ಇಂಡಿಯಾ’ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ. ಪ್ರತಿರಾತ್ರಿ ಪ್ರೈಮ್ ಟೈಮ್ ಮೂಲಕ ದೇಶದ ಪರಿಸ್ಥಿತಿ ಹಾಗೂ ಮಾಧ್ಯಮಗಳ ದ್ವಂದ್ವ - ಎರಡಕ್ಕೂ ಕನ್ನಡಿ ಹಿಡಿಯುವ ರವೀಶ್ ಸರಕಾರಗಳ ನಿದ್ದೆಗೆಡಿಸಿದವರು, ಜನರನ್ನು ಬಡಿದೆಚ್ಚರಿಸಿದವರು ಹಾಗೂ ಸರಕಾರದ ಭಕ್ತರ ದ್ವೇಷಕ್ಕೆ ಗುರಿಯಾದವರು. ಇವರು ಜನಪರ ಪತ್ರಿಕೋದ್ಯಮಕ್ಕಾಗಿ 2019 ರಮೋನ್ ಮ್ಯಾಗ್ಸೇಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಂದು ನಮ್ಮ ನಾಗರಿಕತೆ ಛಿದ್ರಗೊಂಡಿದೆ. ಅದು ಕಲುಷಿತಗೊಂಡುಬಿಟ್ಟಿದೆ. ಈಗ ನಾವು ಸಮುದಾಯಗಳಾಗಿ ವಿಭಜಿತರಾಗಿದ್ದೇವೆ. ದೇಶದ ಗೃಹ ಸಚಿವರು ಒಂದು ಧರ್ಮದವರನ್ನು ಹೊರತುಪಡಿಸಿ ನೆರೆ ದೇಶಗಳಿಂದ ಆಶ್ರಯ ಕೇಳಿಕೊಂಡು ಬರುವ ಇತರರಿಗೆ ನಾಗರಿಕತೆ ನೀಡುತ್ತೇವೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಾರೆ. ಇದು ಭಾರತದ ಉದಾರ ನೀತಿಯಾಗಲು ಸಾಧ್ಯವಿಲ್ಲ. ಯಾತನೆ ಸಹಿಸಲಾಗದೆ ಬರುವವರಿಗೆ ನಾಗರಿಕತೆ ನೀಡುವುದು ಮಾನವೀಯತೆಯ ನೆಲೆಯಲ್ಲಿ ಎಂದಾದರೆ ಕೇವಲ ಒಂದು ಧರ್ಮದವರನ್ನು ಬಿಟ್ಟು ಬಿಡುವುದು ಮಾನವೀಯತೆ ಆಗುವುದಿಲ್ಲ. ಆಶ್ರಯ ಕೇಳಿಕೊಂಡು ಬರುವವರಿಗೆ ಧರ್ಮವಿಲ್ಲ. ಆತನಿಗೆ ದೇಶವೇ ಇಲ್ಲದಿದ್ದರೆ ಧರ್ಮವೆಲ್ಲಿಂದ ಬರುತ್ತದೆ?

2019 ಬಂತು ಮತ್ತು ಹೋಗಿಯೂ ಬಿಟ್ಟಿತು. ಪ್ರತಿವರ್ಷ ಹೀಗೇ ಆಗುತ್ತದೆ. ಹೀಗೇ ಆಗಬೇಕಿತ್ತು. ಇದಲ್ಲದೆ ಇನ್ನೇನು ಆಗಬೇಕಿತ್ತು ಎಂದು ನೀವೇ ಹೇಳಿ. 2014ರಲ್ಲಿ ಮೋದಿ ಪ್ರಧಾನ ಮಂತ್ರಿ ಆದರು. ಪ್ರತಿದಿನ ಹೊಸ ಹೊಸ ಈವೆಂಟುಗಳು ನಡೆಯುತ್ತಿದ್ದವು. ಸ್ಕಿಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ಟಾರ್ಟ್ ಅಪ್ ಇಂಡಿಯಾ, ಮುದ್ರಾ ಯೋಜನೆ, ಆಯುಷ್ಮಾನ್ ಯೋಜನೆ ಹೀಗೆ. ಐದು ವರ್ಷ ಯೋಜನೆಗಳಿಗೆ ಚಾಲನೆ ನೀಡುವ ವರ್ಷಗಳಾದವು. ಈ ಪೈಕಿ ಕೆಲವು ಬಂದ್ ಆದವು ಇನ್ನು ಕೆಲವು ಅದು ಹೇಗೋ ನಡೆಯುತ್ತಿವೆ. ನಾಲ್ಕೂ ದಿಕ್ಕುಗಳಲ್ಲಿ ಭರವಸೆಯ ಅವಶೇಷಗಳೇ ಕಾಣುತ್ತಿವೆ. ಈಗ ಒಂದು ಹೊಸ ಜನಸಮೂಹವನ್ನು ಸೃಷ್ಟಿಸಲಾಗಿದೆ. ನಿಜವಾಗಿ ಅದು ಜನರು ಅಲ್ಲವೇ ಅಲ್ಲ. ಅದು ಈಗ ಸರಕಾರವಾಗಿದೆ. ಈ ಜನಸಮೂಹ ತಾನು ಮೋದಿ ಭಕ್ತನಾಗುವುದೇ ತನ್ನ ಕೆಲಸ ಎಂದು ತಿಳಿದುಕೊಂಡಿದೆ. ಹಾಗಾಗಿ ಈ ಸಮೂಹ ಏನೇ ಆದರೂ ಮೋದಿಯನ್ನು ಸಮರ್ಥಿಸುತ್ತಿರುತ್ತದೆ. 2014ರಿಂದ 2019ರವರೆಗೆ ಭಾರತದ ಇತಿಹಾಸದಲ್ಲಿ ಮಾತನಾಡುತ್ತಾ ಕಳೆದ ವರ್ಷಗಳಾಗಿ ದಾಖಲಾಗಿವೆ. ಈ ಅವಧಿಯಲ್ಲಿ ಭಾರತ ಭರಪೂರ ಮಾತಾಡಿತು. ಮನಸ್ಸಲ್ಲಿದ್ದ ಸಿಟ್ಟನ್ನೆಲ್ಲಾ ಹೊರಹಾಕಿತು ಮತ್ತು ಖಾಲಿಯಿದ್ದ ಜಾಗದಲ್ಲೆಲ್ಲ ದ್ವೇಷ ತುಂಬಿಕೊಂಡಿತು.

ಇಂದು ನಮ್ಮ ನಾಗರಿಕತೆ ಛಿದ್ರಗೊಂಡಿದೆ. ಅದು ಕಲುಷಿತಗೊಂಡುಬಿಟ್ಟಿದೆ. ಈಗ ನಾವು ಸಮುದಾಯಗಳಾಗಿ ವಿಭಜಿತರಾಗಿದ್ದೇವೆ. ದೇಶದ ಗೃಹ ಸಚಿವರು ಒಂದು ಧರ್ಮದವರನ್ನು ಹೊರತುಪಡಿಸಿ ನೆರೆ ದೇಶಗಳಿಂದ ಆಶ್ರಯ ಕೇಳಿಕೊಂಡು ಬರುವ ಇತರರಿಗೆ ನಾಗರಿಕತೆ ನೀಡುತ್ತೇವೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಾರೆ. ಇದು ಭಾರತದ ಉದಾರ ನೀತಿಯಾಗಲು ಸಾಧ್ಯವಿಲ್ಲ. ಯಾತನೆ ಸಹಿಸಲಾಗದೆ ಬರುವವರಿಗೆ ನಾಗರಿಕತೆ ನೀಡುವುದು ಮಾನವೀಯತೆಯ ನೆಲೆಯಲ್ಲಿ ಎಂದಾದರೆ ಕೇವಲ ಒಂದು ಧರ್ಮದವರನ್ನು ಬಿಟ್ಟು ಬಿಡುವುದು ಮಾನವೀಯತೆ ಆಗುವುದಿಲ್ಲ. ಆಶ್ರಯ ಕೇಳಿಕೊಂಡು ಬರುವವರಿಗೆ ಧರ್ಮವಿಲ್ಲ. ಆತನಿಗೆ ದೇಶವೇ ಇಲ್ಲದಿದ್ದರೆ ಧರ್ಮವೆಲ್ಲಿಂದ ಬರುತ್ತದೆ? ಅವರು ಎದುರಿಸುತ್ತಿರುವ ಸಂಕಟ ಹಿಂದೂವೂ ಅಲ್ಲ, ಮುಸ್ಲಿಮ್ ಕೂಡ ಅಲ್ಲ. ಇಡೀ ಜಗತ್ತನ್ನು ತನ್ನ ಅತಿಥಿ ಎಂದು ಪರಿಗಣಿಸುವ ಭಾರತ ಈಗ ತನ್ನ ಅತಿಥಿಗಳನ್ನು ಹಿಂದೂ ಮತ್ತು ಮುಸ್ಲಿಮರು ಎಂದು ಗುರುತಿಸುತ್ತಿದೆ. ಇದು ಭಾರತದ ಸೋಲಾಗಿದೆ. ಸ್ವತಃ ತನ್ನಿಂದಲೇ ಭಾರತ ಸೋಲುತ್ತಿದೆ.

ಭಾರತದ ಜನರು ಜಗತ್ತಿನ ಹಲವು ದೇಶಗಳಿಗೆ ಹೋದರು. ಅಲ್ಲಿ ಅವರು ಯಶಸ್ಸು ಗಳಿಸಿದರು. ಮುಸ್ಲಿಮ್ ದೇಶಗಳಿಗೂ ಹೋದರು. ಕ್ರಿಶ್ಚಿಯನ್ ದೇಶಗಳಿಗೂ ಹೋದರು. ಅಲ್ಲಿನ ನಾಗರಿಕತೆ ಪಡೆದರು. ಆ ಯಾವ ದೇಶಗಳೂ ಇಲ್ಲಿಂದ ಹೋದವರಿಗೆ ಧರ್ಮದ ಆಧಾರದಲ್ಲಿ ಭೇದಭಾವ ಮಾಡಲಿಲ್ಲ. ಅಮೆರಿಕ, ಬ್ರಿಟನ್, ಮಲೇಷಿಯಾ, ಆಸ್ಟ್ರೇಲಿಯಾದಿಂದ ಪ್ರಾರಂಭಿಸಿ ನ್ಯೂಝಿಲ್ಯಾಂಡ್‌ವರೆಗಿನ ದೇಶಗಳಲ್ಲಿ ನಾಗರಿಕತೆ ಪಡೆದಿರುವ ಭಾರತೀಯರು ಈಗ ನಮ್ಮ ದೇಶದಲ್ಲಿ ಅಮಿತ್ ಶಾ ತರುತ್ತಿರುವ ನಾಗರಿಕ ಮಸೂದೆ ಸರಿಯೇ ಎಂದು ಹೇಳಬೇಕು. ಇಲ್ಲಿಂದ ಹೋದವರಿಗೆ ಧರ್ಮದ ಆಧಾರದಲ್ಲಿ ನಾಗರಿಕತೆ ನೀಡದೆ ಇರುತ್ತಿದ್ದರೆ ಅದು ಸರಿಯಾಗುತ್ತಿತ್ತೇ? ಹಾಗಾದರೆ ಅವರು ಈಗ ತಮ್ಮ ಭಾರತದಲ್ಲಿ ಹೀಗೆ ಆಗುವುದನ್ನು ಅದು ಹೇಗೆ ಸಹಿಸುತ್ತಿದ್ದಾರೆ? ಸಹಿಸುತ್ತಾರೆ ಎಂದಾದರೆ ಅವರು ಅಮೆರಿಕದಲ್ಲಿ ಪಡೆದಿರುವ ಪೌರತ್ವವನ್ನು ಬಿಡಬೇಕು. ಹಾಗೆಯೇ ಇತರ ದೇಶಗಳಲ್ಲಿ ತಾವು ಪಡೆಯುತ್ತಿರುವ ಸೌಲಭ್ಯಗಳನ್ನು ಬಿಟ್ಟು ಬಿಡಬೇಕು. ಅವರು ಭಾರತಕ್ಕೆ ಮರಳಿ ಬರಬೇಕು. 2014ರ ನಂತರದ ರಾಜಕೀಯ ಭಾರತದ ಅಂತರಾತ್ಮದ ಮೇಲೆ ಮಾಡಿರುವ ಪ್ರಹಾರ ದಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಶತಮಾನಗಳೇ ಬೇಕಾಗಬಹುದು. ಹಿಂದೂ ಜನಾಭಿಪ್ರಾಯದ ಹೆಸರಲ್ಲಿ ಮಾತಾಡುವುದಕ್ಕೆ ಸಾಧ್ಯವಿಲ್ಲದ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೂ ಜನಾಭಿಪ್ರಾಯವನ್ನು ಉತ್ತರ ಪ್ರದೇಶ, ಬಿಹಾರ ಹಾಗೂ ವಿಶೇಷವಾಗಿ ಹಿಂದಿ ಪ್ರದೇಶಗಳ ರಾಜಕೀಯ ಶಕ್ತಿಯ ಆಧಾರದಲ್ಲಿ ಬೆಳೆಸಲಾಗುತ್ತಿದೆ. ಇದರಿಂದ ಭಾರತೀಯತೆಯ ವಾತಾವರಣ ಕಲುಷಿತಗೊಳ್ಳುತ್ತಿದೆ.

ದಕ್ಷಿಣ ಆಫ್ರಿಕಾ ಕೂಡ ಇದೇ ರೀತಿಯ ಪರ್ಮಿಟ್ ವ್ಯವಸ್ಥೆ ತಂದಿತ್ತು. ಏಶ್ಯ ಮೂಲದ ಜನರಿಗೆ ಗುರುತಿಗೆ ಬೆರಳಚ್ಚು ಕಡ್ಡಾಯಗೊಳಿಸಲಾಯಿತು. ಇದರ ವಿರುದ್ಧ ಗಾಂಧೀಜಿ ಧ್ವನಿ ಎತ್ತಿದರು. ಆಗ ಅವರು ಕೇವಲ ಭಾರತೀಯರ ಪರವಾಗಿ ಧ್ವನಿ ಎತ್ತಲಿಲ್ಲ. ಅದರಲ್ಲಿ ಚೀನಿಯರೂ ಇದ್ದರು. ಆಗ ಗಾಂಧೀಜಿ ಜೊತೆ ಸೇಠ್ ಹಾಜಿ ಹಬೀಬ್ ಅವರೂ ಇದ್ದರು. ಇಬ್ಬರೂ ಗುಜರಾತಿನವರು. ಹೊಸ ಪರ್ಮಿಟ್ ರಾಜ್ ವಿರುದ್ಧ ಟ್ರಾನ್ಸ್ವಾಲ್‌ನ ಆ ಸಭಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯುತ್ತಿರುವಾಗ ಹಾಜಿ ಹಬೀಬ್ ಅವರು ಈ ಕಾನೂನನ್ನು ನಾವು ಪಾಲಿಸುವುದಿಲ್ಲ ಎಂದು ಈಶ್ವರನ ಪ್ರಮಾಣ ಮಾಡಿ ಹೇಳುತ್ತೇವೆ ಎಂದು ಘೋಷಿಸಿದರು. ಆಗ ಈಶ್ವರನ ಮೇಲೆ ಶಪಥ ಮಾಡುವುದು ಬಹಳ ದೊಡ್ಡ ವಿಷಯ, ಬಹಳ ಯೋಚಿಸಿ ಆ ಮಾತು ಹೇಳಬೇಕು ಎಂದು ಗಾಂಧೀಜಿ ಹೇಳಿದರು. ಈಶ್ವರನ ಹೆಸರಲ್ಲಿ ಮಾಡಿದ ಪ್ರಮಾಣ ಮುರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಎಲ್ಲರೂ ಬಹಳ ಯೋಚಿಸಿ ಟ್ರಾನ್ಸ್ವಾಲ್ ನಗರದ ಆ ಕಾನೂನನ್ನು ಪಾಲಿಸುವುದಿಲ್ಲ ಎಂದು ಪ್ರಮಾಣ ಮಾಡಿದರು. ಅಲ್ಲೇ ಸತ್ಯಾಗ್ರಹ ಪ್ರಾರಂಭವಾಯಿತು. ಅದೇ ಸತ್ಯಾಗ್ರಹ ಭಾರತದ ಸ್ವಾತಂತ್ರಕ್ಕೆ ದಿಕ್ಕು ತೋರಿಸಿತು. ಇಂದು ಅದೇ ಭಾರತ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್‌ಶಿಪ್ ಹಾಗೂ ನಾಗರಿಕ ಮಸೂದೆ ಬಗ್ಗೆ ಮೌನವಾಗಿದೆ. ಈ ಭಾರತ ಗಾಂಧಿಯನ್ನು ಮರೆತು ಬಿಟ್ಟಿದೆ. ಈಗ ಇಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಲಾಗುತ್ತಿದೆ.

ಅದಕ್ಕೇ ಹೇಳುತ್ತಿದ್ದೇನೆ. 1857ರಿಂದ 1947ರವರೆಗಿನ ಆದರ್ಶಗಳು ಹಾಗೂ ಕನಸುಗಳ ಭಾರತಕ್ಕೆ 2019 ವಂಚಿಸಿದೆ. ಹಾಗಾಗಿ ಈ ವರ್ಷ ಹೋಗಿ ಬಿಡಲಿ. ನಿಮ್ಮ ಹೃದಯ ವಿಶಾಲಗೊಳಿಸಿಕೊಳ್ಳಿ. ಒಳ್ಳೆಯದನ್ನೇ ಯೋಚಿಸಿ. ಹೊಸತನ್ನು ಯೋಚಿಸಿ. ಹೊಸ ಯೋಚನೆಗಳನ್ನು ಬೆಂಬಲಿಸಿ. ದಕ್ಷಿಣ ಭಾರತದಿಂದಲೂ ಧ್ವನಿ ಬರಲಿ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತಕ್ಕೆ ಬಹುದೊಡ್ಡ ಜವಾಬ್ದಾರಿ ಬರಲಿದೆ. ಆಗ ದಕ್ಷಿಣ ಭಾರತ ಆ ಸವಾಲನ್ನು ಎದುರಿಸಲು ಎದ್ದು ನಿಲ್ಲಬೇಕಾಗಿದೆ. ಕೋಮುವಾದದ ಈ ಬಿರುಗಾಳಿಗೆ ವಿರುದ್ಧವಾಗಿ ಒಂದು ಒಣಹುಲ್ಲು ಕೂಡ ಎಲ್ಲಾದರೂ ಉಳಿದಿದ್ದರೆ ಅದು ಎದ್ದು ನಿಲ್ಲಬೇಕು. ತನಗಾಗಿ ಅಲ್ಲ, ನಾವೆಲ್ಲರೂ ನೂರು ವರ್ಷಗಳ ಬಲಿದಾನ ಗಳಿಂದ ಪಡೆದಿರುವ ಭಾರತದ ಕಲ್ಪನೆಗಾಗಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)