ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ
ಒಳ್ಳೆಯ ಪತ್ರಕರ್ತ ಎಂದರೆ ಶುದ್ಧ ತುಪ್ಪ ಎಂದು ಹೇಳಿದ ಹಾಗೆ...: ಸೌರಭ್ ದ್ವಿವೇದಿ

ಸೌರಭ್ ದ್ವಿವೇದಿ ಸದ್ಯ ಹಿಂದಿ ಪತ್ರಿಕೋದ್ಯಮದಲ್ಲಿ ಅತ್ಯಂತ ಚಿರಪರಿಚಿತ ಹೆಸರು. ತಳಮಟ್ಟದಲ್ಲಿ ವರದಿಗಾರಿಕೆ, ರಾಷ್ಟ್ರ ರಾಜಕೀಯದ ಲೆಕ್ಕಾಚಾರಗಳು ಹಾಗೂ ಪ್ರಖರ ರಾಜಕೀಯ ವಿಶ್ಲೇಷಣೆವರೆಗೆ ಎಲ್ಲವನ್ನೂ ಸುಲಲಿತವಾಗಿ ನಿಭಾಯಿಸಿ ಈಗ ರಾಷ್ಟ್ರೀಯ ಮಾಧ್ಯಮ ರಂಗದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದವರು ಸೌರಭ್. ಸ್ಟಾರ್ ನ್ಯೂಸ್, ನವಭಾರತ್ ಟೈಮ್ಸ್, ದೈನಿಕ ಭಾಸ್ಕರ್ ಹಾಗೂ ಆಜ್‌ತಕ್‌ಗಳಲ್ಲಿ ದಶಕದ ಕಾಲ ಕೆಲಸ ಮಾಡಿರುವ ಈ ಜೆಎನ್‌ಯು ಹಳೆ ವಿದ್ಯಾರ್ಥಿಯ ನೇತೃತ್ವದಲ್ಲಿ ಇಂಡಿಯಾ ಟುಡೇ ಗ್ರೂಪ್ 2016ರಲ್ಲಿ ಪ್ರಾರಂಭಿಸಿದ thelallantop.com ಈಗ ದೇಶದ ಅತ್ಯಂತ ಪ್ರಸಿದ್ಧ ಹಿಂದಿ ಡಿಜಿಟಲ್ ಮಾಧ್ಯಮಗಳಲ್ಲಿ ಒಂದು. ಹಿಂದಿ ಪ್ರದೇಶಗಳ ರಾಜಕೀಯದ ನಾಡಿಮಿಡಿತವನ್ನು ಕರಗತ ಮಾಡಿಕೊಂಡಿರುವ ಸೌರಭ್ ತನ್ನ ವಸ್ತುನಿಷ್ಠ ವಿಶ್ಲೇಷಣೆಯಿಂದ ಟೀಕೆ, ಟ್ರೋಲ್‌ಗಳಿಗೂ ಹಲವು ಬಾರಿ ಗುರಿಯಾಗಿದ್ದಾರೆ. ಆದರೆ ತಾನು ತನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ, ಮತ್ತು ಅದನ್ನು ಹೀಗೇ ಮುಂದುವರಿಸುತ್ತೇನೆ ಎನ್ನುವ ಸೌರಭ್ ಇಲ್ಲಿ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ್ದಾರೆ.
ನಾನು ಯಾವುದೇ ‘ರೀತಿಯ’ ಪತ್ರಕರ್ತ ಅಲ್ಲ. ನಾನು ಪತ್ರಕರ್ತ, ಅಷ್ಟೇ. ಪತ್ರಕರ್ತ ಯಾವುದೇ ‘ಒಂದು ರೀತಿ’ ಇರಲು ಸಾಧ್ಯವಿಲ್ಲ. ಅದು ಅಂಗಡಿಯ ಹೊರಗೆ ‘ಇಲ್ಲಿ ಶುದ್ಧ ತುಪ್ಪ ಸಿಗುತ್ತದೆ’ ಎಂದು ಬೋರ್ಡ್ ಹಾಕಿದ ಹಾಗೆ. ಅರೆ, ತುಪ್ಪ ಎಂದರೆ ಶುದ್ಧ ತುಪ್ಪವೇ ಇರಬೇಕಲ್ಲ, ಅಶುದ್ಧ ತುಪ್ಪ ಅಂತ ಒಂದು ಬಗೆ ಇದೆಯೇ? ಅದೇ ರೀತಿ ಪತ್ರಕರ್ತ ಹೇಗಿರಬೇಕು? ಶತಮಾನಗಳಿಂದ ಪತ್ರಿಕೋದ್ಯಮದ ಒಂದು ನೀತಿ ಬೆಳೆದು ಬಂದಿದೆ. ಅದರದ್ದೇ ಆದ ಒಂದು ನೀತಿ ಸಂಹಿತೆ ಇದೆ. ಸೈನಿಕ ಎಂದರೆ ಹೇಗಿರಬೇಕು ಎಂದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಪತ್ರಕರ್ತ ಎಂದರೆ ಆತ ತಟಸ್ಥ ನಿಲುವು ಹೊಂದಿರಬೇಕು.
►ಇಂದು ಹೆಚ್ಚಿನ ಭಾರತೀಯ ಮಾಧ್ಯಮಗಳು ‘ಗೋದಿ ಮೀಡಿಯಾ’ ಆಗಿಬಿಟ್ಟಿವೆ ಎಂಬ ಆರೋಪ ಇದೆ. ಪ್ರಮುಖ ಹಿಂದಿ ಮಾಧ್ಯಮವೊಂದರ ಸಂಪಾದಕರಾಗಿ ಈ ಬಗ್ಗೆ ನೀವು ಏನು ಹೇಳುತ್ತೀರಿ?
- ಈ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ಯಾರಿಗೆ ಹೇಗೆ ಕಾಣುತ್ತದೋ ಹಾಗೆ ಹೇಳುತ್ತಾರೆ. ನಾವು ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ಏನು ಮಾಡಬೇಕೋ ಅದನ್ನೇ ಮಾಡುತ್ತಿದ್ದೇವೆ. ಸರಕಾರ, ವಿಪಕ್ಷ, ಸರಕಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆಯೇ ಎಂಬ ಬಗ್ಗೆ ಜನರನ್ನು ಜಾಗೃತರಾಗಿಸುವ ಕೆಲಸ ಮಾಧ್ಯಮಗಳದ್ದು. ಜನರು ಜಾಗೃತರಾಗಬೇಕಾದ್ದು ಎಲ್ಲಕ್ಕಿಂತ ಮುಖ್ಯ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಯಾರಿಗೆ ಯಾವ ಹಣೆಪಟ್ಟಿ ಹಚ್ಚುತ್ತಿದ್ದಾರೆ, ಯಾರು ಸರಿ, ಯಾರು ತಪ್ಪು, ನಾವೇ ಸರಿ ಇಂತಹ ಸರ್ಟಿಫಿಕೇಟ್ ನೀಡುವ ಗೋಜಿಗೆ ನಾನು ಹೋಗುವುದಿಲ್ಲ.
►ಆದರೆ ಇಂದು ಹೆಚ್ಚಿನ ಮಾಧ್ಯಮಗಳು ಯಾವುದೇ ಹಿಂಜರಿಕೆ ಇಲ್ಲದೆ ತಮಗೆ ಬೇಕಾದವರ ಪರವಾಗಿ ಕೆಲಸ ಮಾಡುತ್ತಿವೆ...
-ನೋಡಿ. ನಾನು ಮೀಡಿಯಾದವನಾಗಿದ್ದು ಮೀಡಿಯಾ ವಿಮರ್ಶಕನೂ ಆಗಲು ಸಾಧ್ಯವಿಲ್ಲ. ನಮ್ಮ ಕೆಲಸ ಪ್ರಜಾಪ್ರಭುತ್ವದ ಸೇವೆ ಮಾಡುವುದು. ಅದನ್ನು ನಾವು ವಸ್ತುನಿಷ್ಠವಾಗಿ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಜನರು ನಮ್ಮನ್ನು ಇಷ್ಟೊಂದು ಪ್ರೀತಿಸುತ್ತಿದ್ದಾರೆ. ನಾವು ತಟಸ್ಥ ನಿಲುವಿನವರು, ನಾವು ಯಾವುದೇ ಸರಕಾರವನ್ನು ಪ್ರೀತಿಸುವುದೂ ಇಲ್ಲ, ಅದಕ್ಕೆ ಹೆದರುವವರೂ ಅಲ್ಲ ಎಂದು ಜನರು ಗುರುತಿಸಿದ್ದಾರೆ. ಇದೇ ನಮ್ಮ ಪಾಲಿಗೆ ಬಹುದೊಡ್ಡ ಸರ್ಟಿಫಿಕೇಟ್.
►ಅದು ಸರಿ, ಆದರೆ ಒಟ್ಟಾರೆ ಭಾರತೀಯ ಮಾಧ್ಯಮ ಆ ಕೆಲಸ ಮಾಡುತ್ತಿಲ್ಲ ಎಂಬುದು ಈಗಿರುವ ದೂರು...
-ನಾನೂ ಅದೇ ಭಾರತೀಯ ಮಾಧ್ಯಮದ ಭಾಗವಾಗಿದ್ದೇನೆ. ನಾನು ಲಲ್ಲನ್ ಟಾಪ್ ಬಗ್ಗೆ ಮಾತಾಡಬಹುದು. ಉಳಿದಂತೆ ಜನರು ಬಹಳ ಜಾಣರಿದ್ದಾರೆ. ಅವರು ಪ್ರತಿಯೊಂದನ್ನೂ ನೋಡಿ, ವಿಶ್ಲೇಷಿಸುತ್ತಾರೆ. ತಮ್ಮ ಇಷ್ಟದ ಮಾಧ್ಯಮವನ್ನು ಫಾಲೋ ಮಾಡುತ್ತಾರೆ. ಲಲ್ಲನ್ ಟಾಪ್ ಇಷ್ಟೊಂದು ಜನಪ್ರಿಯತೆ ಗಳಿಸಿದೆ ಎಂದರೆ ಜನರು ಅದನ್ನು ಇಷ್ಟಪಟ್ಟಿದ್ದಾರೆ ಎಂದರ್ಥ. ನೋಡಿ ನನ್ನ ಮಿತ್ರ ಚಿತ್ರ ನಿರ್ದೇಶಕ ಸುಧೀರ್ ಮಿಶ್ರಾ ಅವರು ಒಂದು ಮಾತು ಹೇಳುತ್ತಾರೆ. ಚಿತ್ರ ನಿರ್ದೇಶಕ ತನ್ನ ಅಭಿಪ್ರಾಯವನ್ನು ಟ್ವಿಟರ್, ಫೇಸ್‌ಬುಕ್, ಭಾಷಣ ಮಾಡಿ ಹೇಳಬಾರದು, ಅದನ್ನು ತನ್ನ ಚಿತ್ರದಲ್ಲೇ ಹೇಳಬೇಕು. ಹಾಗೆಯೇ ಪತ್ರಕರ್ತ ತಾನು ಏನು, ತನ್ನ ಆದ್ಯತೆಗಳೇನು, ನಿಲುವು ಏನು ಎಂಬುದನ್ನು ತನ್ನ ವರದಿಗಾರಿಕೆಯಲ್ಲಿ ತೋರಿಸಬೇಕು.
►2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಹಿಂದಿ ಮಾಧ್ಯಮಗಳು ವಸ್ತುನಿಷ್ಠವಾಗಿ ಕೆಲಸ ಮಾಡಿದರುವ ಎಂದು ನಿಮಗೆ ಅನಿಸುತ್ತದೆಯೇ?
-ನೋಡಿ. ನಮ್ಮ lallantop ಎಲ್ಲರಿಗಿಂತ ಮೊದಲು ಚುನಾವಣೆಗೆ ಸಂಬಂಧಿಸಿ ಝಮೀನಿ ಹಕೀಕತ್ (ತಳಮಟ್ಟದ ವಾಸ್ತವಗಳು) ಎಂಬ ವಿಶೇಷ ವರದಿಗಳ ಸರಣಿ ಪ್ರಾರಂಭಿಸಿತು. ಇದರಲ್ಲಿ ಮೋದಿ ಸರಕಾರದ ಅತ್ಯಂತ ಪ್ರಮುಖ ಹತ್ತು ಹೊಸ ಯೋಜನೆಗಳನ್ನು ಎತ್ತಿಕೊಂಡು ಅವುಗಳ ನೇತೃತ್ವ ವಹಿಸಿದ್ದ ಸಚಿವರ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿ ಆ ಯೋಜನೆಗಳು ಏನಾಗಿವೆ? ಎಷ್ಟು ಯಶಸ್ಸು ಪಡೆದಿವೆ? ಎಷ್ಟು ವಿಫಲವಾಗಿವೆ? ಅವುಗಳಲ್ಲಿ ಏನೇನೋ ಲೋಪಗಳಿವೆ? ಏನು ಒಳ್ಳೆಯದಿದೆ? ಎಂದು ಸವಿವರವಾಗಿ ವರದಿ ಮಾಡಿತು. ಬಳಿಕ ಇಡೀ ದೇಶದಲ್ಲಿ ಸುಮಾರು ಇನ್ನೂರು ಲೋಕಸಭಾ ಕ್ಷೇತ್ರಗಳಿಗೆ ನಮ್ಮ ತಂಡ ಭೇಟಿ ನೀಡಿ ಅಲ್ಲಿಂದ ಪ್ರಾಮಾಣಿಕವಾಗಿ ವಸ್ತುಸ್ಥಿತಿ ವರದಿ ಮಾಡಿತು. ಇನ್ನು ಉಳಿದ ಮಾಧ್ಯಮಗಳು ಏನು ಮಾಡಿದವು ಎಂದು ಜನರೇ ನೋಡಿದ್ದಾರೆ. ಇನ್ನು ಮಾಧ್ಯಮಗಳ ವರದಿಗಳನ್ನು ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಅವರ ಸೋಷಿಯಲ್ ಮೀಡಿಯಾ ಬೆಂಬಲಿಗರು ಹಾಗೂ ಮತದಾರರು ತಮಗೆ ಬೇಕಾದಂತೆ ವಿಶ್ಲೇಷಿಸಿ ಜನರ ಮುಂದಿಡುತ್ತಾರೆ.
ನೋಡಿ, ಪುಲ್ವಾಮ ಭಯೋತ್ಪಾದಕ ದಾಳಿ ಯಾಯಿತು. ಅದು ಬೇಹು ವೈಫಲ್ಯದಿಂದಾಗಿತ್ತು. ಅದರ ಬಳಿಕ ಬಾಲಕೋಟ್‌ನಲ್ಲಿ ನಮ್ಮ ವಾಯುಪಡೆ ಭಾರೀ ದಾಳಿ ನಡೆಸಿತು. ರಾಜಕೀಯ ಪಕ್ಷಗಳೂ ಅದನ್ನು ಬೆಂಬಲಿಸಿದವು. ಇದು ಬಹಳ ದೊಡ್ಡ ವಿಷಯವಾಯಿತು. ಏಕೆಂದರೆ ಈ ಹಿಂದೆ ಈ ರೀತಿ ಪ್ರತಿ ದಾಳಿ ನಡೆಯುತ್ತಿರಲಿಲ್ಲ. ಮನಮೋಹನ್ ಸಿಂಗ್ ಅವಧಿಯಲ್ಲಿ ಅಲ್ಪಸ್ವಲ್ಪ ಇಂತಹ ದಾಳಿ ನಡೆದಿದ್ದವು. ಆದರೆ ಆಗ ನಡೆದ ದೊಡ್ಡ ಭಯೋತ್ಪಾದಕ ದಾಳಿಗಳಿಗೆ ಹೋಲಿಸಿದರೆ ಈ ಪ್ರತಿದಾಳಿಗಳು ಅಷ್ಟು ಸುದ್ದಿಯಾಗಲಿಲ್ಲ. ಬಿಜೆಪಿ ನಾಯಕರು ಎಲ್ಲೆಡೆ ಅದನ್ನೇ ಹೇಳುತ್ತಾ ಹೋದರು. ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯತೆ,ದೇಶಭಕ್ತಿಯ ಭಾವನೆಗಳು ಹೆಚ್ಚು ಚರ್ಚೆಗೆ ಬಂದವು. ಹೀಗೆ ಒಂದು ವಿಷಯ ಮುನ್ನೆಲೆಗೆ ಬಂದು ಬಿಟ್ಟಾಗ ಉಳಿದ ಹಲವು ವಿಷಯಗಳು ಹಿಂದೆ ಸರಿದು ಬಿಡುತ್ತವೆ. ಆಗ ವಿಪಕ್ಷ ಸಂಕಟಕ್ಕೆ ಸಿಲುಕಿತು. ಯಾರೋ ಒಬ್ಬರು ಬಾಲಕೋಟ್ ದಾಳಿಯ ಸಾಕ್ಷ್ಯ ಕೊಡಿ ಎಂದರು. ಆ ಸಂದರ್ಭದಲ್ಲಿ ಅಂತಹ ಹೇಳಿಕೆ ಜನರ ಭಾವನೆಗಳ ವಿರುದ್ಧ ಹೋಗುತ್ತದೆ. ಇನ್ನು ಮಾಧ್ಯಮಗಳ ಪಾತ್ರ ಚುನಾವಣೆಯಲ್ಲಿ ಒಂದು ಪ್ರಮುಖ ಅಂಶ ಮಾತ್ರ. ಅದೇ ಎಲ್ಲವೂ ಅಲ್ಲ. ನೀವು ಬಿಜೆಪಿ ಮತ್ತು ಇತರ ಪಕ್ಷಗಳ ತಳಮಟ್ಟದ ತಯಾರಿಯನ್ನು ಹೋಲಿಸಿ ನೋಡಿ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಅದಕ್ಕೆ ದುಡ್ಡಿನ ಕೊರತೆಯೂ ಇರಲಿಲ್ಲ. ಇನ್ನು ಅದು ಐದು ವರ್ಷವೂ ಚುನಾವಣಾ ತಯಾರಿ ಮಾಡುತ್ತಿರುವ ಪಕ್ಷ. ಹಾಗಾಗಿ ತಳಮಟ್ಟದಲ್ಲಿ ಅದು ಬಹಳ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತು. ಆದರೆ ಅದಕ್ಕೆ ಪ್ರತಿಯಾಗಿ ವಿಪಕ್ಷಗಳು ಅಷ್ಟೇ ತಾಲೀಮು ಮಾಡಿಕೊಳ್ಳಲಿಲ್ಲ. ಹೆಚ್ಚಿನ ಕಡೆಗಳಲ್ಲಿ ಅವುಗಳ ಮೈತ್ರಿ ಏರ್ಪಡಲೇ ಇಲ್ಲ. ಕೆಲವು ಕಡೆ ಮೈತ್ರಿ ಆದರೂ ತಳಮಟ್ಟದಲ್ಲಿ ಕಾರ್ಯಕರ್ತರು ಒಂದಾಗಲಿಲ್ಲ. ಜನಾದೇಶ ಬರುವ ಮೊದಲೇ ತೃತೀಯ ರಂಗದ ಮಾತು ಬಂತು. ಹತ್ತು ಪ್ರಧಾನಿ ಅಭ್ಯರ್ಥಿಗಳು ಬಂದರು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ರತಿರೋಧ ನೀಡುವಂತಹ ಜನಾಭಿಪ್ರಾಯ ರೂಪಿಸುವ ಕೆಲಸ ವಿಪಕ್ಷದಿಂದ ಆಗಲಿಲ್ಲ. ಕಾಂಗ್ರೆಸ್ ವರ್ಷಕ್ಕೆ 72 ಸಾವಿರ ಕೊಡುತ್ತೇನೆ ಎಂದಿತು. ಬಿಜೆಪಿ 6,000 ಕೊಡುತ್ತೇನೆ ಎಂದಿದ್ದೇ ರೈತರಿಗೆ ಸಾಕಾಯಿತು. ಇನ್ನು ಕಾಂಗ್ರೆಸ್ ನ ಆಶ್ವಾಸನೆ ಜನರಿಗೆ ತಳಮಟ್ಟದಲ್ಲಿ ತಲುಪಲೇ ಇಲ್ಲ. ಇನ್ನು ಮಾಧ್ಯಮಗಳಲ್ಲಿ ಕೆಲವರು ಆಡಳಿತ ಪಕ್ಷವನ್ನು ಪ್ರಶ್ನೆ ಮಾಡಿದರು. ಇನ್ನು ಕೆಲವರು ಮಾಡಲಿಲ್ಲ. ಕೆಲವರು ಸರಕಾರವನ್ನು ವಿರೋಧಿಸಿದರು, ಕೆಲವರು ಅದರ ಗುಣಗಾನ ಮಾಡಿದರು. ನಮ್ಮಂತಹವರು ಇದ್ದುದನ್ನು ಇದ್ದ ಹಾಗೆ ವರದಿ ಮಾಡಿದರು, ಪ್ರಶ್ನಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿದ್ದ ಉತ್ತಮ ಅಂಶಗಳನ್ನು ಪ್ರಶಂಸಿಸಿದೆವು, ಅದರಲ್ಲೇ ಇದ್ದ ಲೋಪದೋಷಗಳನ್ನು ಎತ್ತಿ ತೋರಿಸಿದೆವು. ಕಣ್ಣು ಮುಚ್ಚಿ ಸಮರ್ಥಿಸುವುದು, ವಿರೋಧಿಸಬೇಕೆಂದೇ ವಿರೋಧಿಸುವುದು - ಈ ಎರಡನ್ನೂ ಮಾಡದೆ ಸತ್ಯವನ್ನು ಜನರೆದುರು ಇಡುವ ಕೆಲಸ ನಾವು ಮಾಡಿದ್ದೇವೆ.
►ಪುಲ್ವಾಮ ದಾಳಿ ಬೇಹು ವೈಫಲ್ಯದಿಂದ ಆಯಿತು ಎಂದು ನೀವು ಹೇಳಿದಿರಿ. ಆದರೆ ಆಗ ಈ ಪ್ರಶ್ನೆಯನ್ನು ಮಾಧ್ಯಮಗಳು ಎತ್ತಲೇ ಇಲ್ಲ...
-ಹೌದು. ಒಂದು ವಾಹನದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆರ್‌ಡಿಎಕ್ಸ್ ಅಲ್ಲಿಗೆ ಹೇಗೆ ತಲುಪಿತು ಎಂಬುದು ಬಹುಮುಖ್ಯ ಪ್ರಶ್ನೆ. ನಾವು ಈ ಪ್ರಶ್ನೆ ಕೇಳಿದ್ದೇವೆ. ಆದರೆ ಮಾಧ್ಯಮಗಳು ಕೇಳಿದರೂ ಅದನ್ನು ಜನರ ಬಳಿ ತಲುಪಿಸಬೇಕಾದವರು ಯಾರು? ವಿಪಕ್ಷಗಳು ಆ ಕೆಲಸದಲ್ಲಿ ವಿಫಲವಾದವು. ಪುಲ್ವಾಮ ದಾಳಿ ಬೆನ್ನಿಗೇ ಬಾಲಕೋಟ್ ದಾಳಿ ಆಗಿದ್ದರಿಂದ ಆ ಸಂದರ್ಭವೂ ಅದೇ ರೀತಿ ಬದಲಾಯಿತು. ಅದೇ ಸಂದರ್ಭದಲ್ಲಿ ನಮ್ಮ ವಾಯುಪಡೆಯ ಹೆಲಿಕಾಪ್ಟರ್ ಪತನವಾಗಿ ಆರು ಮಂದಿ ಬಲಿಯಾದರು. ಆದರೆ ಅದು ನಮ್ಮವರದೇ ತಪ್ಪಿನಿಂದ ಎಂದು ಸರಕಾರ ಚುನಾವಣೆ ಮುಗಿದ ಬಳಿಕ ಜುಲೈನಲ್ಲಿ ಒಪ್ಪಿಕೊಂಡಿತು. ಇಲ್ಲಿ ಬೇಹು ವೈಫಲ್ಯದ ಪ್ರಶ್ನೆ ಮುಖ್ಯವಾದುದು. ಆದರೆ ಕೇವಲ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ ಪ್ರಯೋಜನವಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರ ಮೇಲೆ ಹೊಣೆಗಾರಿಕೆ ಹಾಕಿ ಬಿಡುತ್ತಾರೆ. ಜನರು, ರಾಜಕಾರಣಿಗಳು ಮಾಧ್ಯಮಗಳನ್ನು ದೂರುತ್ತಾರೆ. ಆದರೆ ಆ ಸಂದರ್ಭದಲ್ಲಿ ಜನರೇ ಅಂತಹದೊಂದು ವಾತಾವರಣ ಸೃಷ್ಟಿಸಿದ್ದರಿಂದ ಮಾಧ್ಯಮಗಳಲ್ಲೂ ಅದೇ ಕಾಣಲು ಸಿಕ್ಕಿತು.
►ಹಾಗಾದರೆ ಸೌರಭ್ ದ್ವಿವೇದಿ ಯಾವ ರೀತಿಯ ಪತ್ರಕರ್ತ?
-ನಾನು ಯಾವುದೇ ‘ರೀತಿಯ’ ಪತ್ರಕರ್ತ ಅಲ್ಲ. ನಾನು ಪತ್ರಕರ್ತ, ಅಷ್ಟೇ. ಪತ್ರಕರ್ತ ಯಾವುದೇ ‘ಒಂದು ರೀತಿ’ ಇರಲು ಸಾಧ್ಯವಿಲ್ಲ. ಅದು ಅಂಗಡಿಯ ಹೊರಗೆ ‘ಇಲ್ಲಿ ಶುದ್ಧ ತುಪ್ಪ ಸಿಗುತ್ತದೆ’ ಎಂದು ಬೋರ್ಡ್ ಹಾಕಿದ ಹಾಗೆ. ಅರೆ, ತುಪ್ಪ ಎಂದರೆ ಶುದ್ಧ ತುಪ್ಪವೇ ಇರಬೇಕಲ್ಲ, ಅಶುದ್ಧ ತುಪ್ಪ ಅಂತ ಒಂದು ಬಗೆ ಇದೆಯೇ? ಅದೇ ರೀತಿ ಪತ್ರಕರ್ತ ಹೇಗಿರಬೇಕು? ಶತಮಾನಗಳಿಂದ ಪತ್ರಿಕೋದ್ಯಮದ ಒಂದು ನೀತಿ ಬೆಳೆದು ಬಂದಿದೆ. ಅದರದ್ದೇ ಆದ ಒಂದು ನೀತಿ ಸಂಹಿತೆ ಇದೆ. ಸೈನಿಕ ಎಂದರೆ ಹೇಗಿರಬೇಕು ಎಂದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಪತ್ರಕರ್ತ ಎಂದರೆ ಆತ ತಟಸ್ಥ ನಿಲುವು ಹೊಂದಿರಬೇಕು, ಯಾರದ್ದೇ ಪರ ಅಥವಾ ವಿರೋಧ ಆತ ಇರಬಾರದು, ಜನಪರವಾಗಿರಬೇಕು. ಆದರೆ ಕೆಲವೊಮ್ಮೆ ಜನರೇ ತಪ್ಪು ದಾರಿ ತೋರಿಸುತ್ತಾರೆ. ಈಗ ಹೈದರಾಬಾದ್ ನಲ್ಲಿ ನೋಡಿ. ಅಲ್ಲಿ ಎನ್‌ಕೌಂಟರ್ ಆದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಹೆಚ್ಚಿನ ಜನರು ಇದು ಬಹಳ ಒಳ್ಳೆಯದಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಸಿನೆಮಾ ಅಲ್ಲ. ನಿಂತಲ್ಲೇ ನ್ಯಾಯ ಮಾಡುವ ಕೆಲಸ ಪೊಲೀಸರದ್ದಲ್ಲ. ಅದು ನ್ಯಾಯಾಲಯದ ಕೆಲಸ. ಇಲ್ಲಿ ಸಂವಿಧಾನದ, ಕಾನೂನಿನ ಪ್ರಕಾರ ದೇಶ ನಡೆಯಬೇಕು. ತಾಲಿಬಾನ್ ರೀತಿಯಲ್ಲಲ್ಲ. ಒಟ್ಟಾರೆ ಜನರಿಗೆ ಸರಕಾರಿ ಸಂಸ್ಥೆಗಳಿಂದ ಅಪರಾಧಿಗಳಿಗೆ ಶಿಕ್ಷೆಯಾಗುವ ಬಗ್ಗೆ ಭರವಸೆ ಕಡಿಮೆಯಾಗಿದೆ. ಆದರೆ ಇದು ಒಟ್ಟಾರೆ ನಮ್ಮ ಸಮಾಜದ ವೈಫಲ್ಯ ಎಂಬುದನ್ನು ನಾವು ಮರೆತಿದ್ದೇವೆ. ನಾವು ನಮ್ಮ ಮನೆ, ಶಾಲೆಗಳಲ್ಲಿ ಮಕ್ಕಳಿಗೆ ಎಷ್ಟು ಲಿಂಗ ತಾರತಮ್ಯದ ಬಗ್ಗೆ ಹೇಳಿಕೊಡುತ್ತೇವೆ? ನಮ್ಮ ಮನೆಗಳಲ್ಲೇ ಮಹಿಳೆಯರ ವಿರುದ್ಧ ಎಷ್ಟು ಅನ್ಯಾಯ ನಡೆಯುತ್ತಿದೆ? ನಾವು ಹೆಣ್ಣು ಮಕ್ಕಳಿಗೆ ತಗ್ಗಿ ಬಗ್ಗಿ ನಡೆ ಎಂದು ಹೇಳುತ್ತೇವೆ.
►ನೀವು ಪತ್ರಕರ್ತರಾದರೆ ಏನು ಮಾಡಬೇಕು ಎಂದು ಬಯಸಿದ್ದಿರಿ, ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೀರಾ?
-ನೋಡಿ, ತೃಪ್ತಿ, ಖುಷಿ ಬಹಳ ಸಬ್ಜೆಕ್ಟಿವ್. ಆದರೆ ನಾನು ಬಯಸಿದ್ದ ಬಹಳಷ್ಟು ಕೆಲಸ ಮಾಡಲು ನನಗೆ ಸಾಧ್ಯವಾಗಿದೆ ಎಂಬ ತೃಪ್ತಿ ನನಗಿದೆ. ಆದರೆ ಸಂಪೂರ್ಣ ತೃಪ್ತಿ ಯಾರಿಗೂ ಸಿಗುವುದಿಲ್ಲ, ಸಿಗಲೂ ಬಾರದು. ಅಲ್ಲಿಗೆ ಬೆಳವಣಿಗೆ ನಿಂತು ಹೋಗುತ್ತದೆ. ಇನ್ನು ಡಿಜಿಟಲ್ ಮೀಡಿಯಾ ನನ್ನಿಷ್ಟದ ಕ್ಷೇತ್ರವಾಗಿತ್ತು. ಅದರಲ್ಲಿ ನಾನು ಬಹಳಷ್ಟು ಜನರನ್ನು ತಲುಪುತ್ತಿದ್ದೇನೆ. ಅವರಲ್ಲಿ ಒಂದು ಆರೋಗ್ಯಕರ, ರಚನಾತ್ಮಕ ಚರ್ಚೆ ಬೆಳೆಸಲು ಕೊಡುಗೆ ನೀಡುತ್ತಿದ್ದೇನೆ. ಇದು ನನಗೆ ಬಹಳ ತೃಪ್ತಿ ನೀಡಿದೆ.
►ನೀವು ಜೆಎನ್‌ಯು ಹಳೆ ವಿದ್ಯಾರ್ಥಿ, ಜೊತೆಗೆ ವಸ್ತುನಿಷ್ಠ ಪತ್ರಕರ್ತರಾಗಿದ್ದೀರಿ. ಇಂದಿನ ದಿನಗಳಲ್ಲಿ ಈ ಎರಡೇ ಕಾರಣಗಳು ನಿಮ್ಮನ್ನು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲು ಸಾಕು...
-ಯಾರು ಹಣೆಪಟ್ಟಿ ಹಚ್ಚುವವರು? Thelallantop ಅಥವಾ ಸೌರಭ್ ದ್ವಿವೇದಿ ಏನು ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಘೋಷಿಸಲು ಸಾಧ್ಯವಿಲ್ಲ. ನನಗೆ ಪತ್ರಕರ್ತನಾಗಿ ವಸ್ತುನಿಷ್ಠವಾಗಿರಲು ಕಲಿಸಿದ್ದೇ ಜೆ ಎನ್ ಯು. ಅದು ಜೆಎನ್‌ಯು ವಿರುದ್ಧವೇ ಆಗಿದ್ದರೂ ಸರಿ. ಯಾವುದೇ ಗುರು ತನ್ನ ಶಿಷ್ಯನಿಗೆ ಪ್ರಶ್ನೆ ಕೇಳು ಎಂದೇ ಕಲಿಸುತ್ತಾನೆ. ಅದೇ ಗುರುವಿನ ಮಾತು ಸರಿ ಕಾಣದಿದ್ದರೆ ವಿದ್ಯಾರ್ಥಿ ಅವನನ್ನೇ ಪ್ರಶ್ನಿಸಬೇಕು. ಅದನ್ನು ಒಳ್ಳೆಯ ಗುರು ಪ್ರಶಂಸಿಸಬೇಕು. ವಿಶ್ಲೇಷಿಸಿ ನೋಡುವುದನ್ನು ಪ್ರತಿಯೊಂದು ವಿಶ್ವವಿದ್ಯಾಲಯ ಕಲಿಸಬೇಕು. ವಿವಿಗಳಲ್ಲಿ ಆ ದೇಶದ ಅತ್ಯಂತ ಫಲವತ್ತಾದ ಮನಸ್ಸುಗಳು ಇರುತ್ತವೆ. ಅಲ್ಲಿ ಚರ್ಚೆ, ಪ್ರಶ್ನೆ ಕೇಳುವುದು ಅತ್ಯಗತ್ಯ. ಅದನ್ನೇ ಜೆ ಎನ್ ಯು ಅತ್ಯಂತ ಅದ್ಭುತವಾಗಿ ಮಾಡಿಕೊಂಡು ಬಂದಿದೆ. ನೋಡಿ ಒಂದು ವಿಷಯ ಎಲ್ಲರೂ ತಿಳಿದುಕೊಳ್ಳಬೇಕು. ಸರಕಾರವನ್ನು ಪ್ರಶ್ನಿಸುವುದು ಎಂದರೆ ದೇಶವನ್ನು ಪ್ರಶ್ನಿಸುವುದಲ್ಲ, ಅದು ದೇಶವನ್ನು ನಡೆಸುತ್ತಿರುವವರನ್ನು ಪ್ರಶ್ನಿಸುವುದು. ಸರಕಾರದ ಭಕ್ತಿ ಹಾಗೂ ದೇಶ ಭಕ್ತಿ ಬೇರೆ ಬೇರೆ. ನೀವು ಸರಕಾರವನ್ನು ಪ್ರಶ್ನಿಸಿಯೂ ದೇಶಭಕ್ತರಾಗಬಹುದು, ಕೆಲವು ವಿಷಯಗಳಲ್ಲಿ ಸರಕಾರವನ್ನು ಬೆಂಬಲಿಸಿಯೂ ದೇಶಭಕ್ತರಾಗಬಹುದು. ಜೆ ಎನ್ ಯು ವಿದ್ಯಾರ್ಥಿಗಳು ತಪ್ಪು ಮಾಡಿದರೆ ವಸ್ತುನಿಷ್ಠ ಪತ್ರಕರ್ತನಾಗಿ ನಾನು ಅದನ್ನೂ ಪ್ರಶ್ನಿಸುತ್ತೇನೆ. ಜಪಾನ್‌ನಲ್ಲಿ ಬೌದ್ಧ ಧರ್ಮ ಅನುಸರಿಸುವವರ ಸಂಖ್ಯೆ ಹೆಚ್ಚಿದೆ. ಬುದ್ಧ ನಿಮ್ಮ ದೇಶದ ಮೇಲೆ ಆಕ್ರಮಣ ಮಾಡಿದರೆ ಏನು ಮಾಡುತ್ತೀರಿ ಎಂಬ ಕಪೋಲಕಲ್ಪಿತ ಪ್ರಶ್ನೆಯೊಂದನ್ನು ಅಲ್ಲಿನ ಜನರಿಗೆ ಕೇಳಲಾಯಿತು. ಆಗ ಜನರು ನಾವು ಬುದ್ಧನ ವಿರುದ್ಧ ಹೋರಾಡುತ್ತೇವೆ ಎಂದರು. ಏಕೆ ಎಂದು ಕೇಳಿದ್ದಕ್ಕೆ ಬುದ್ಧ ನಮ್ಮ ದೇವರು. ಆದರೆ ಈ ದೇಶ ನಮ್ಮೆಲ್ಲರ ದೇವರು, ಅದಕ್ಕೆ ಎಂದು ಉತ್ತರಿಸಿದರು. ಜೆ ಎನ್ ಯು ನಮಗೆ ಅತ್ಯುತ್ತಮ ಶಿಕ್ಷಣ ನೀಡಿದೆ. ಆದರೆ ಅಲ್ಲಿ ಏನಾದರೂ ತಪ್ಪಾದರೆ ಪತ್ರಕರ್ತನಾಗಿ ನಾನು ಮೊದಲು ಅದನ್ನು ಪ್ರಶ್ನಿಸುತ್ತೇನೆ. ಯಾರಾದರೂ ರಾಜಕೀಯ ಅಜೆಂಡಾ ಇಟ್ಟುಕೊಂಡು ಜೆ ಎನ್ ಯು ಗೆ ಹಾನಿ ಮಾಡಿದರೆ ಅದನ್ನೂ ನಾನು ಪ್ರಶ್ನಿಸುತ್ತೇನೆ.
►ನಿಮ್ಮ thelallantop ಬಹಳ ವಸ್ತುನಿಷ್ಠವಾಗಿ ರಾಜಕೀಯ ವರದಿ ಮಾಡುತ್ತದೆ. ಆದರೆ ನಿಮ್ಮ ಮಾಲಕರಾದ ಇಂಡಿಯಾ ಟುಡೇ ಗ್ರೂಪ್ ನ ಆಜ್ ತಕ್ ನೇರವಾಗಿ ಸರಕಾರದ ಪರವಾಗಿ ವಕಾಲತ್ತು ಮಾಡುತ್ತದೆ...
-ಈ ವಿಷಯದಲ್ಲಿ ನಾನೇನೂ ಹೇಳಲು ಬಯಸುವುದಿಲ್ಲ. ಒಬ್ಬ ಸೋದರನ ಬಳಿ ಅವನ ಇನ್ನೊಂದು ಸೋದರನ ಬಗ್ಗೆ ಕೇಳಿದ ಹಾಗಾಯಿತು. ಹಾಗೆ ನೋಡಿದರೆ ಇಂಡಿಯಾ ಟುಡೇ ಗ್ರೂಪ್ ನಲ್ಲೇ thelallantop ನಂತಹ ವೆಬ್ ಸೈಟ್ ಇರುವುದೂ ಅದರ ಹೆಗ್ಗಳಿಕೆಯಲ್ಲವೇ? ಆಜ್ ತಕ್ ನಿರಂತರವಾಗಿ ಹಿಂದಿಯ ನಂಬರ್ 1 ಚಾನಲ್ ಆಗಿದೆ ಎಂದರೆ ಜನರು ಅದನ್ನು ಇಷ್ಟಪಡುತ್ತಿದ್ದಾರೆ ಎಂದರ್ಥವಲ್ಲವೇ? ಇವೆಲ್ಲಾ ಜನರು ಹೇಗೆ ನೋಡುತ್ತಾರೆ ಹಾಗೆ.
ಮಾಧ್ಯಮಗಳು ವಸ್ತುನಿಷ್ಠ ವರದಿಗಳನ್ನು ಕೊಡಬೇಕು ಮತ್ತು ಓದುಗರು ಅಂತಹ ವರದಿಗಳನ್ನೇ ಹೆಚ್ಚೆಚ್ಚು ಓದಬೇಕು, ಪ್ರಚಾರ ಮಾಡಬೇಕು, ಪ್ರೋತ್ಸಾಹಿಸಬೇಕು. ಇಬ್ಬರೂ ಒಬ್ಬರ ಮೇಲೊಬ್ಬರು ಅವಲಂಬಿತರು.
►ಇಂದು ಮೀಡಿಯಾ ಮಾಲಕರು ಹೋಟೆಲ್ ಮಾಲಕರಂತೆ ವರ್ತಿಸುತ್ತಿದ್ದಾರೆ ಎಂಬ ದೂರಿದೆ... ಅಂದರೆ ಜನರು ಏನು ಬಯಸುತ್ತಾರೆ ಅದನ್ನೇ ಕೊಡುವ ಜಾಯಮಾನ...
-ಇಲ್ಲ ಇಲ್ಲ. ಇಂಡಿಯಾ ಟುಡೇ ಗ್ರೂಪ್ ಹಾಗೆ ಇಲ್ಲವೇ ಇಲ್ಲ. ನಮ್ಮ ಮಾಲಕ ಅರುಣ್ ಪೂರಿ ಒಬ್ಬ ನಿಷ್ಠುರ ಪತ್ರಕರ್ತ. ಅವರು 70ರ ದಶಕದಲ್ಲೇ ಇಂಡಿಯಾ ಟುಡೇ ಪ್ರಾರಂಭಿಸಿದರು. ಅದರ ನಂತರ ಇತರ ಹಲವು ಮಾಧ್ಯಮಗಳನ್ನು ಪ್ರಾರಂಭಿಸಿ ನಡೆಸುತ್ತಿದ್ದಾರೆ. ಅವರು ನಮಗೆ ಯಾವಾಗಲೂ ಒಬ್ಬ ವಸ್ತುನಿಷ್ಠ ಪತ್ರಕರ್ತರಾಗಿ ಎಂದೇ ಹೇಳಿದ್ದಾರೆ. ಅವರು ಕೇವಲ ಲಾಭದ ಲೆಕ್ಕಾಚಾರ ಮಾತ್ರ ನೋಡಿದ್ದರೆ ಅವರು thelallantopನಂತಹ ವೆಬ್ ಸೈಟ್ ಬರುತ್ತಲೇ ಇರಲಿಲ್ಲ. ನಾವು ಜವಾಬ್ದಾರಿಯುತ ಮಾಧ್ಯಮವಾಗಿ ಕೆಲಸ ಮಾಡುತ್ತಿದ್ದೇವೆ. ಇತರರ ಬಗ್ಗೆ ನಾನೇನೂ ಹೇಳುವುದಿಲ್ಲ.
►ಭಾರತೀಯ ಮಾಧ್ಯಮಗಳ ವಿಶ್ವಾಸಾರ್ಹತೆ ಅಪಾಯದಲ್ಲಿದೆ ಎಂದು ಹೇಳಲಾಗುತ್ತಿದೆ....
-ನಮ್ಮ ದೇಶದ ಮಾಧ್ಯಮಗಳ ಬಗ್ಗೆ ಇಂತಹ ಪ್ರಶ್ನೆ ಏಳುತ್ತಿರುವುದು ಚಿಂತೆಯ ವಿಷಯ. ಆದರೆ ಅದೇ ಸಂದರ್ಭದಲ್ಲಿ ನಮ್ಮ ಕೆಲವು ಚಾನಲ್‌ಗಳು ಹಾಗೂ ವೆಬ್ ಸೈಟ್ ಗಳ ವಿಶ್ವಾಸಾರ್ಹತೆ ಬಗ್ಗೆ ಅತ್ಯಂತ ಪ್ರಶಂಸೆಯ ಮಾತುಗಳೂ ಬರುತ್ತಿವೆ. ಈಗ ರಾಜಕೀಯದ ಧ್ರುವೀಕರಣ ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಹಾಗಾಗಿ ದೊಡ್ಡ ಸಂಖ್ಯೆಯ ಜನರು ತಮಗೆ ಬೇಕಾದ ರಾಜಕೀಯ ಸತ್ಯಗಳನ್ನು ಈಗಾಗಲೇ ಒಪ್ಪಿಕೊಂಡು ಅದೇ ನಿಲುವನ್ನು ಖಚಿತಪಡಿಸಿಕೊಳ್ಳಲು ಬೇಕಾದ ಮಾಧ್ಯಮಗಳನ್ನೇ ಫಾಲೋ ಮಾಡುತ್ತಾರೆ. ಆದರೆ ತಾವು ನಂಬಿರುವ ಸತ್ಯಗಳನ್ನೇ ಪ್ರಶ್ನಿಸುವುದು ಪ್ರಜಾಪ್ರಭುತ್ವ ಶಕ್ತವಾಗಲು ಬಹಳ ಮುಖ್ಯ. ಜನರು ಹಾಗೆ ಮಾಡಿದಾಗ ಮಾಧ್ಯಮಗಳೂ ಜಾಗೃತವಾಗಿರುತ್ತವೆ.
►ಭಾರತೀಯ ಮಾಧ್ಯಮಗಳ ಇಂದಿನ ಸ್ಥಿತಿಗೆ ಜನರು ಎಷ್ಟು ಜವಾಬ್ದಾರರು? ಅದನ್ನು ಸರಿದಾರಿಗೆ ತರಲು ಜನರು ಏನು ಮಾಡಬೇಕು?
-ಇದು ಎರಡೂ ಕಡೆಗಳ ಜವಾಬ್ದಾರಿಯಾಗಿದೆ. ಮಾಧ್ಯಮಗಳು ವಸ್ತುನಿಷ್ಟ ವರದಿಗಳನ್ನು ಕೊಡಬೇಕು ಮತ್ತು ಓದುಗರು ಅಂತಹ ವರದಿಗಳನ್ನೇ ಹೆಚ್ಚೆಚ್ಚು ಓದಬೇಕು, ಪ್ರಚಾರ ಮಾಡಬೇಕು, ಪ್ರೋತ್ಸಾಹಿಸಬೇಕು. ಇಬ್ಬರೂ ಒಬ್ಬರ ಮೇಲೊಬ್ಬರು ಅವಲಂಬಿತರು. ಒಬ್ಬರು ಇನ್ನೊಬ್ಬರನ್ನು ದೂರಿ ಪ್ರಯೋಜನವಿಲ್ಲ. ಆದರೆ ಸುಧಾರಣೆ ಮೊದಲು ಒಂದು ಕಡೆಯಿಂದ ಪ್ರಾರಂಭವಾಗಬೇಕು. ಕೆಲವು ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ, ಓದುಗರಲ್ಲೂ ಕೆಲವರು ಅಂತಹ ಮಾಧ್ಯಮಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ ಇದು ದೊಡ್ಡ ಸಂಖ್ಯೆಯಲ್ಲಿ ಆಗಬೇಕು.
►ಓದುಗರಿಂದಲೇ ಹಣ ಸಂಗ್ರಹಿಸಿ ಮಾಧ್ಯಮ ಸಂಸ್ಥೆ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಭಾರತದಲ್ಲಿ ಯಶಸ್ವಿಯಾಗಬಹುದೇ?
-ಈ ಪ್ರಯೋಗ ನಡೆಯುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾಲವೇ ಹೇಳಬೇಕು. ಆದರೆ ಇದು ಬಹಳ ಒಳ್ಳೆಯ ಬೆಳವಣಿಗೆ. ಇದರಿಂದ ಮಾಧ್ಯಮಗಳಲ್ಲಿ ಉತ್ತರದಾಯಿತ್ವ ಹೆಚ್ಚುತ್ತದೆ.
►ನಿಮ್ಮ ಪ್ರಕಾರ ಭಾರತೀಯ ಮಾಧ್ಯಮಗಳಲ್ಲಿ ಬದಲಾಗಲೇ ಬೇಕಾದ ಒಂದು ವಿಷಯ ಯಾವುದು?
-ಗ್ರೌಂಡ್ ರಿಪೋರ್ಟಿಂಗ್. ಮಾಧ್ಯಮಗಳು ಜನರ ಬಳಿ ಹೆಚ್ಚೆಚ್ಚು ಹೋಗಿ ವರದಿ ಮಾಡಬೇಕು. ಅದು ಹೆಚ್ಚಾದಷ್ಟು ಸತ್ಯ ಹೆಚ್ಚು ಬೆಳಕಿಗೆ ಬರುತ್ತವೆ.
►ನಿಮ್ಮ ಬಳಿ ಒಬ್ಬ ವಿದ್ಯಾರ್ಥಿ ಸಲಹೆ ಕೇಳಿದರೆ ಪತ್ರಕರ್ತನಾಗು ಎಂದು ಹೇಳುತ್ತೀರಾ?
-ಖಂಡಿತ ಹೇಳುತ್ತೇನೆ. ಇದು ಅತ್ಯಂತ ಜವಾಬ್ದಾರಿಯುತ, ಪ್ರತಿಷ್ಠಿತ ಉದ್ಯೋಗ. ಇಲ್ಲಿ ಗೌರವವೂ ಇದೆ, ಸಾಕಷ್ಟು ದುಡ್ಡೂ ಇದೆ. ಅತ್ಯಂತ ಸವಾಲಿನ ಕೆಲಸ ಇದು. ಪ್ರತಿದಿನ ಏನಾದರೂ ಹೊಸತು ಕಲಿಯಲು ಸಿಗುತ್ತದೆ. ಇದಕ್ಕಿಂತ ಸುಂದರ ಉದ್ಯೋಗ ಬೇರೇನಿದೆ ಹೇಳಿ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ