varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಕೂಡಿ ಕಟ್ಟುವ ಕೆಲಸ

ವಾರ್ತಾ ಭಾರತಿ : 30 Dec, 2019
ದಿನೇಶ್ ಅಮೀನ್ ಮಟ್ಟು

ದಿನೇಶ್ ಅಮೀನ್ ಮಟ್ಟು

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಅಮೀನ್ ಮಟ್ಟು ಅವರು ನಾಡಿನ ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿರುವವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಹೊರಹೊಮ್ಮಿದ ಅಮೀನ್ ಮಟ್ಟು, ನಾಡಿನ ಪ್ರಮುಖಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಮಾತ್ರವಲ್ಲ, ಅಂಕಣಕಾರರಾಗಿಯೂ ಗುರುತಿಸಿಕೊಂಡವರು. ಬರಹಕ್ಕಷ್ಟೇ ಸೀಮಿತವಾಗಿ ಉಳಿಯದೆ, ಪ್ರಗತಿ ವಿರೋಧಿ ಶಕ್ತಿಗಳ ವಿರುದ್ಧ ಸಂಘಟಿತವಾಗಿ ಬೀದಿಗಿಳಿದು ಮಾತನಾಡುತ್ತಿರುವವರು.

ದಕ್ಷಿಣ ಕನ್ನಡ ಮೊದಲಿನಿಂದಲೂ ವಾಣಿಜ್ಯಮಯ ನೆಲ. ಮೂವತ್ತು ವರ್ಷಗಳಲ್ಲಿ ಈ ಜಿಲ್ಲೆ ಇನ್ನೊಂದು ಅಪಾಯಕಾರಿ ತಿರುವು ಪಡೆದಿದೆ. ವಾಣಿಜ್ಯಮಯ ದಕ್ಷಿಣ ಕನ್ನಡ, ಕೋಮುವಾದಿ ದಕ್ಷಿಣ ಕನ್ನಡ ಆಗಿದೆ. ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮುವಾದ ಮತ್ತು ಹೊಸ ಆರ್ಥಿಕ ನೀತಿಯ ಮೂಲಕ ಹುಟ್ಟಿಕೊಂಡ ಕ್ರೋನಿ ಬಂಡವಾಳವಾದ ಏಕಕಾಲಕ್ಕೆ ಪ್ರವೇಶಿಸಿದ ಪರಿಣಾಮದ ಫಲವನ್ನು ದೇಶ ಇಂದು ಉಣ್ಣುತ್ತಿದೆ. ಕೋಮುವಾದದ ಜೊತೆ ಕ್ರೋನಿ ಬಂಡವಾಳವಾದ ಸೇರಿಕೊಂಡರೆ ಏನಾಗಬಹುದೆಂಬುದಕ್ಕೆ ಇಂದಿನ ದಕ್ಷಿಣ ಕನ್ನಡ ಜೀವಂತ ಉದಾಹರಣೆ.

‘ನಾನು ದಕ್ಷಿಣ ಕನ್ನಡದವ; ಆದರೆ ಕೋಮು ವಾದಿಯಲ್ಲ - ಹೀಗೆ ತಮ್ಮನ್ನು ಪರಿಚಯಿಸಿ ಕೊಳ್ಳಬೇಕಾದ ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಜಿಲ್ಲೆಯ ಜನರಿದ್ದಾರೆ.

ಇತ್ತೀಚಿನವರೆಗೂ ಒಂದು ಕಾಲ ಇತ್ತು, ನಾನು ಮಂಗಳೂರಿನವ ಎಂದು ಹೇಳಿದರೆ ಸಾಕಿತ್ತು, ಗುರುತಿಲ್ಲದವರ ಮನೆಯೊಳಗೆ, ಮನಸ್ಸಿನೊಳಗೆ ಪ್ರವೇಶಿಸಲು ಬೇರೆ ವಿಸಿಟಿಂಗ್ ಕಾರ್ಡ್ ಬೇಡ ಇತ್ತು. ಮಂಗಳೂರಿನವರೆಂದರೆ ದೇಶ ಸುತ್ತಿದವರು, ಕೋಶ ಓದಿದವರು, ವಿಶಾಲಹೃದಯಿಗಳು, ಸಾಹಸಿಗಳು, ಸ್ವಾಭಿಮಾನಿಗಳು, ಪ್ರಾಮಾಣಿಕರು, ಉದ್ಯಮಶೀಲರು, ಪ್ರಗತಿಪರರು, ಸಂಸ್ಕಾರವಂತರು, ಆತಿಥ್ಯದಲ್ಲಿ ಎತ್ತಿದ ಕೈ, ಹೀಗೆ ಎಷ್ಟೊಂದು ಬಿರುದಾವಲಿಗಳು.

ಈ ಗುಣಧರ್ಮಗಳಿಂದಾಗಿಯೇ ಇಲ್ಲಿ ಹುಟ್ಟಿದ ಐದು ಬ್ಯಾಂಕುಗಳು ದೇಶಾದ್ಯಂತ ಗ್ರಾಹಕರ ವಿಶ್ವಾಸ ಗಳಿಸಿದ್ದು, ಇದರಿಂದಾಗಿಯೇ ದೇಶ-ವಿದೇಶದ ತಿಂಡಿಪೋತರು ಉಡುಪಿ ಹೊಟೇಲ್‌ಗಳು, ಕರಾವಳಿ ನಾನ್ ವೆಜ್ ರೆಸ್ಟೊರೆಂಟ್‌ಗಳನ್ನು ಅರಸಿಕೊಂಡು ಹೋಗುತ್ತಿರುವುದು, ಇವೆಲ್ಲ ಮಾರುಕಟ್ಟೆಯಲ್ಲಿ ಹೋಗಿ ಖರೀದಿ ಮಾಡಿದ ಖ್ಯಾತಿ ಅಲ್ಲ, ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಸಂಪಾದಿಸಿದ ಕೀರ್ತಿಕಿರೀಟಗಳೂ ಅಲ್ಲ.

ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ, ಬ್ರಾಹ್ಮಣ, ಬ್ಯಾರಿ, ಬಿಲ್ಲವ, ಕೊರಗ, ಮೊಗವೀರ, ಕ್ರಿಶ್ಚಿಯನರು ಕೂಡಿ ಕಟ್ಟಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಣಬಹುದು. ಇದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ದುಡ್ಡು ಮಾತ್ರ ಅಲ್ಲ ಜನರ ವಿಶ್ವಾಸಾರ್ಹತೆಯನ್ನೂ ಸಂಪಾದಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡು ಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?).

ಬೆಂಗಳೂರು ಜಿಲ್ಲೆ ಹೊರತುಪಡಿಸಿದರೆ ರಾಜ್ಯದ ಬೊಕ್ಕಸಕ್ಕೆ ಅತ್ಯಧಿಕ ತೆರಿಗೆ ನೀಡುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಾದರೂ ಇಲ್ಲಿನ ಜನ ತಮ್ಮ ಬದುಕಿಗಾಗಿ ಸರಕಾರವನ್ನು ಅವಲಂಬಿಸಿದವರಲ್ಲ. ಇವರಲ್ಲಿ ಹೆಚ್ಚಿನವರು ಸರಕಾರದ ಯೋಜನೆಗಳು, ಸಬ್ಸಿಡಿ, ಮೀಸಲಾತಿ ಇತ್ಯಾದಿ ಬಗ್ಗೆ ತಲೆಕೆಡಿಸಿಕೊಂಡವಲ್ಲ. ಸರಕಾರಿ ನೌಕರಿಯಲ್ಲಿಯೂ ಇವರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಬುದ್ಧಿವಂತರ ಈ ಜಿಲ್ಲೆಯ ಎಷ್ಟು ಮಂದಿ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿದ್ದಾರೆ? ಕಷ್ಟಪಟ್ಟು ದುಡಿಯಬೇಕು, ಚೆನ್ನಾಗಿ ದುಡ್ಡು ಮಾಡಬೇಕು, ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಊರಲ್ಲಿ ತಲೆ ಎತ್ತಿ ಎದೆಯುಬ್ಬಿಸಿ ಓಡಾಡಬೇಕು- ಇವಿಷ್ಟೇ ಇವರಿಗೆ ಗೊತ್ತಿರುವುದು. ಇದಕ್ಕಾಗಿ ಮುಂಬೈ, ದುಬೈ, ಕುವೈತ್, ಅಂಡಮಾನ್, ನಿಕೋಬಾರ್ ಎಲ್ಲಿಗೆ ಹೋಗಲೂ ಉಟ್ಟ ಉಡುಗೆಯಲ್ಲಿ ಸಿದ್ಧ.

ದಕ್ಷಿಣ ಕನ್ನಡದ ಜನ ವಲಸೆ ಹೋಗಲು ಸಾಮಾಜಿಕ, ಭೌಗೋಳಿಕ, ಮತ್ತು ಪ್ರಾಕೃತಿಕ ಕಾರಣಗಳಿವೆ. ಕಡಲು ಮತ್ತು ಘಟ್ಟಗಳ ಸಾಲುಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಅವಿಭಜಿತ ದಕ್ಷಿಣಕನ್ನಡದ ಎರಡು ಮೂಲ ವೃತ್ತಿಗಳಾದ ಕೃಷಿ ಮತ್ತು ಮೀನುಗಾರಿಕೆ ಎಂದೂ ಲಾಭದಾಯಕ ವಾಗಿರಲಿಲ್ಲ. ಇವೆರಡೂ ಮಳೆ ಮತ್ತು ಕಡಲಿನ ಜೊತೆ ನಡೆಸುವ ಜೂಜಾಟ, ಅನಿಶ್ಚಿತತೆ ಮತ್ತು ಅಸುರಕ್ಷತೆಯ ವೃತ್ತಿಗಳು. ಅಡಿಕೆ ಮತ್ತು ತೆಂಗು ಹೊರತುಪಡಿಸಿದರೆ ಮಳೆನೀರು ನಂಬಿದ ಉಳಿದ ಬೆಳೆಗಳ ಕೃಷಿ ಇಲ್ಲಿ ಎಂದೂ ಲಾಭದಾಯಕವಾಗಿರಲಿಲ್ಲ. ಈ ಸ್ಥಿತಿಯಲ್ಲಿ ಜನ ಸೋತು ಕಡಲಿಗೆ ಬಿದ್ದು ಸಾಯಬೇಕಿತ್ತು. ಇವರು ಸಾಯಲಿಲ್ಲ, ಕಡಲು ದಾಟಿಕೊಂಡು ಹೋಗಿ ಮುಂಬೈ, ದುಬೈ, ಕುವೈತ್ ಸೇರಿ ಬದುಕು ಗೆದ್ದರು.

ಪ್ರಾರಂಭದಲ್ಲಿ ಊರು ಬಿಟ್ಟು ಹೋದವರಲ್ಲಿ ಹೆಚ್ಚಿನವರು ನೆಲೆ ನಿಂತದ್ದು ಮುಂಬೈನಲ್ಲಿ, ಮೊದಲು ಊರು ಬಿಟ್ಟ ಭೂಮಾಲಕರಾದ ಬಂಟರು ಮತ್ತು ಬ್ರಾಹ್ಮಣರು ಹೊಟೇಲ್ ಗಳನ್ನು ಮಾಡಿದರೆ, ಅವರ ಬೆನ್ನಲ್ಲೇ ಬಡತನವನ್ನು ಗೆಲ್ಲಲು ಮತ್ತು ಅವಮಾನದಿಂದ ಮುಖ ಮುಚ್ಚಿಕೊಳ್ಳಲು ಊರು ಬಿಟ್ಟು ಹೋದ ಒಕ್ಕಲಿನ ಬಿಲ್ಲವರು ಧಣಿಗಳ ಹೊಟೇಲ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಎಲ್ಲರೂ ಕೂಡಿ ಹೊಟೇಲ್ ಉದ್ಯಮವನ್ನು ಕಟ್ಟಿ ಬೆಳೆಸಿದರು. ಇನ್ನೊಂದೆಡೆ ಅನಿಶ್ಚಿತ ಆದಾಯದ ಮೀನುಗಾರಿಕೆಯಿಂದಾಗಿ ಮೊಗವೀರ ಯುವಕರು ಕೂಡಾ ಊರು ಬಿಟ್ಟು ಮುಂಬೈ ಸೇರಿದರು.

ಇವರ ಜೊತೆಗೆ ಕೃಷಿ ಮತ್ತು ಮೀನುಗಾರಿಕೆಯ ಮೇಲೆಯೇ ನಿಂತಿರುವ ತಮ್ಮ ವ್ಯಾಪಾರ ಮಂಕಾಗುತ್ತಿರು ವುದನ್ನು ಗಮನಿಸಿದ ಮುಸ್ಲಿಮರು ಹೆಚ್ಚು ಆದಾಯದ ಉದ್ಯೋಗದ ಹುಡುಕಾಟದಲ್ಲಿ ಕೊಲ್ಲಿ ರಾಷ್ಟ್ರಗಳೆಡೆ ವಲಸೆ ಹೋದರು. ಕ್ರಿಶ್ಚಿಯನ್ನರು ಎಲ್ಲರಿಗಿಂತ ಮೊದಲು ಸಮುದ್ರ ಲಂಘನ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಹಿಂದೂಗಳು ಕೊಲ್ಲಿ ರಾಷ್ಟ್ರಗಳಲ್ಲಿ ಹೋಗಿ ನೆಲೆ ಕಂಡುಕೊಂಡಿದ್ದಾರೆ. (ಒಂಬತ್ತು ವರ್ಷಗಳ ಹಿಂದೆ ದುಬೈಯಿಂದ ಬರುತ್ತಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದಾಗ ಸಾವಿಗೀಡಾದವರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಹಿಂದೂಗಳು)

ಈ ರೀತಿ ಊರುಬಿಟ್ಟವರ ಸಂಪಾದನೆಯ ದುಡ್ಡಿನಿಂದಲೇ ಊರಲ್ಲಿನ ಮುಳಿಹುಲ್ಲಿನ ಮನೆಗಳು ಹೆಂಚು-ತಾರಸಿಗಳ ಮನೆಗಳಾಗಿ ಪರಿವರ್ತನೆಗೊಂಡದ್ದು, ತಂಗಿ-ತಮ್ಮಂದಿರು ಕಾಲೇಜು ಮೆಟ್ಟಿಲು ಹತ್ತಿದ್ದು, ತಂದೆ- ತಾಯಿಗಳು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದದ್ದು, ಲಕ್ಷಗಟ್ಟಲೆ ವರದಕ್ಷಿಣೆ ಕೊಟ್ಟು ಅಕ್ಕ-ತಂಗಿಯರ ಮದುವೆ ನಡೆದದ್ದು. ಹಳೆಯ ದೇವಸ್ಥಾನ-ದೈವಸ್ಥಾನಗಳ ಜೀರ್ಣೋದ್ಧಾರ ನಡೆದದ್ದು.

ದಕ್ಷಿಣ ಕನ್ನಡಿಗರ ಮೇಲೆ ಮೊದಲಿನಿಂದಲೂ ಅಂಟಿ ಕೊಂಡಿರುವ ಒಂದಷ್ಟು ಕುಖ್ಯಾತಿಗಳೆಂದರೆ ‘ಬಲು ಲೆಕ್ಕಾಚಾರದ ಮಂದಿ’, ‘ಶೋಮ್ಯಾನ್‌ಗಳು’, ‘ಸಾಮಾಜಿಕ ಸ್ಪಂದನ ಇಲ್ಲದ ಬೂರ್ಜ್ವಾಗಳು’ ಎನ್ನುವುದು ಮಾತ್ರ. ಆದರೆ ದ.ಕ.ಮಂದಿಯನ್ನು ‘ಕೂಪಮಂಡೂಕಗಳು’, ‘ಆಧುನಿಕತೆಯ ವಿರೋಧಿಗಳು’, ‘ಸಂಸ್ಕಾರಹೀನರು’, ‘ಅಪ್ರಾಮಾಣಿಕರು’ ಎಂದು ಟೀಕಿಸಿದ್ದು ಕಡಿಮೆ.

ನಾನು ಮೊಗವೀರ, ಬ್ಯಾರಿ, ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಪ್ರೀತಿ-ಪ್ರೇಮ, ಸ್ನೇಹ-ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು. ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್‌ಕ್ರೀಮ್ ಪಾರ್ಲರ್‌ಗಳಿಗೆ ಹೋಗುವುದು ಕೂಡಾ ನಡೆದಿತ್ತು.

ಆಗಿನ್ನೂ ಶಾಲೆಗಳಲ್ಲಿ ಓದುತ್ತಿದ್ದ ಮುಸ್ಲಿಮ್ ಹುಡುಗಿಯರಿಗೆ ಬುರ್ಕಾ ಇರಲಿಲ್ಲ, ಹಿಂದೂ ಹುಡುಗರ ಹಣೆಯಲ್ಲಿ ಕೇಸರಿ ನಾಮ, ಹೆಗಲಲ್ಲಿ ಕೇಸರಿ ಶಾಲುಗಳಿರಲಿಲ್ಲ. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಪ್ರೀತಿ-ಸ್ನೇಹ ಸಂಬಂಧಗಳ ಗಾಳಿಸುದ್ದಿಗಳು ಆಗಲೂ ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು. ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ ಮತ್ತು ಜಗಳ ಎರಡನ್ನೂ ಮಾಡುತ್ತಿ ರಲಿಲ್ಲ. ಯಾಕೆಂದರೆ ಅಂತಹ ಪ್ರಕರಣಗಳು ಹಿಂದೂಗಳ ನಡುವೆ ಕೂಡಾ ನಡೆದು ಹೊಡೆದಾಟ, ಜಗಳಗಳು ನಡೆಯುತ್ತಿತ್ತು.

ಮೂವತ್ತು ವರ್ಷಗಳ ಹಿಂದೆ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು. ಅವರು ಕೂಡಾ ಈಗ ಸುಖವಾಗಿದ್ದಾರೆ.

ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿ ಯಲ್ಲಿ ರಕ್ತ ಹರಿಯುತ್ತಿದೆ. ಮುಂಬೈ, ದುಬೈ, ಕುವೈತ್‌ಗಳಲ್ಲಿಯೂ ಹಿಂದಿನ ಉದ್ಯೋಗಾವಕಾಶ ಇಲ್ಲ. ಹೊರದೇಶಗಳಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಹೊರಟವರಿಗೆ ವೀಸಾ ಸಿಗುತ್ತಿಲ್ಲ, ಪಾಸ್‌ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್‌ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತು ಹಾಕುವುದು ಕಷ್ಟ. ಈ ಚಕ್ರವ್ಯೆಹದೊಳಗೆ ಸಿಕ್ಕಿಹಾಕಿಕೊಂಡ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ, ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ. ವಿನಾಕಾರಣ ಪ್ರೀತಿ ಮಾಡುತ್ತಿದ್ದವರು, ವಿನಾಕಾರಣ ದ್ವೇಷ ಮಾಡುತ್ತಿದ್ದಾರೆ.

ನೀವು ಮುಸ್ಲಿಮರನ್ನು ಯಾಕೆ ದ್ವೇಷಿಸುತ್ತೀರಿ? ಎಂಬ ಸರಳ ಪ್ರಶ್ನೆಯನ್ನು ಇತ್ತೀಚೆಗೆ ನನಗೆ ಗೊತ್ತಿರುವ ಊರಿನ ಕೆಲವು ಹಿರಿಯ-ಕಿರಿಯರ ಮುಂದಿಟ್ಟೆ. ಯಾರೂ ಮಾತನಾಡಲಿಲ್ಲ. ನಾನೇ ಮುಂದುವರಿಸಿದೆ ‘ನೋಡಿ ನಿಮಗೆಲ್ಲ ಒಳಗಿಂದೊಳಗೆ ಮುಸ್ಲಿಮರ ಬಗ್ಗೆ ದ್ವೇಷ ಇಲ್ಲದೆ ಇದ್ದರೂ ಅಸಹನೆ ಇದೆ ಅಲ್ವಾ?’ ಎಂದು ಕೇಳಿದೆ. ಕೆಲವರು ಹೌದು ಎನ್ನುವಂತೆ ತಲೆಯಾಡಿಸಿದರೂ ಬಾಯಿ ಬಿಟ್ಟು ಏನೂ ಹೇಳಲಿಲ್ಲ. ಮತ್ತೆ ನಾನೇ ಮುಂದುವರಿಸಿದೆ. ‘ನೋಡಿ, ಇಷ್ಟು ವರ್ಷಗಳಿಂದ ಈ ಊರಲ್ಲಿದ್ದೀರಿ, ಇಲ್ಲಿಯೇ ನಿಮಗೆ ಗೊತ್ತಿರುವ ಮುಸ್ಲಿಮ್ ಕುಟುಂಬಗಳಿವೆ. ನಿಮ್ಮೂರಿನ ಮುಸ್ಲಿಮ್ ಯುವಕರು ಹಿಂದೂ ಹುಡುಗಿಯನ್ನು ಛೇಡಿಸಿದ, ಮಾನಹಾನಿ ಮಾಡಿದ ಎಷ್ಟು ಪ್ರಕರಣಗಳು ನಡೆದಿವೆ?’ ಎಂದು ಪ್ರಶ್ನಿಸಿದೆ. ಗುಂಪಲ್ಲಿರುವ ಕೆಲವು ಯುವಕರು ನಿಧಾನ ತಲೆ ಎತ್ತಿದರು. ‘ಅಷ್ಟು ಧೈರ್ಯ ಬೇಕಲ್ಲಾ ಅವರಿಗೆ, ನಾವೇನು ಬಳೆ ತೊಟ್ಟುಕೊಂಡಿದ್ದೆವೇಯಾ?’ ಎಂದು ಸಿಡಿದರು.

‘ನಿಮ್ಮೂರಿನ ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಪ್ರೀತಿಯಾ ನಿಮಗೆ? ಹಾಗಿದ್ದರೆ ಇದೇ ಊರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಹಿಂದೂ ಯುವಕರೇ ಛೇಡಿಸಿದ, ಕಾಡಿಸಿದ, ವಂಚಿಸಿದ ಹತ್ತು ಪ್ರಕರಣಗಳನ್ನು ನಾನು ಹೇಳ್ತೇನೆ. ಅವರನ್ನೇನು ಮಾಡ್ತೀರಿ?’ ಎಂದು ಯುವಕರನ್ನು ಕೇಳಿದೆ, ಎಲ್ಲರೂ ತಲೆ ತಗ್ಗಿಸಿದರು.

ಅಷ್ಟರಲ್ಲಿ ಚರ್ಚೆಯ ವಿಷಯ ಹಿರಿಯರ ತಲೆಯ ಒಳಕ್ಕೆ ಇಳಿಯಲಾರಂಭಿಸಿತ್ತು, ಅವರೆಲ್ಲರೂ ‘ನಮ್ಮೂರಿನ ಮುಸ್ಲಿಮರು ಅಂತಹವರಲ್ಲ ಬಿಡಿ, ಎಷ್ಟು ವರ್ಷಗಳ ಒಡನಾಟ ನಮ್ಮದು. ಯುಪಿ-ಬಿಹಾರ ಯಾಕೆ? ಕೇರಳದಲ್ಲಿಯೂ ಮುಸ್ಲಿಮ್ ಟೆರರಿಸ್ಟ್‌ಗಳಿದ್ದಾರಂತಲ್ಲಾ? ನೋಡಿ ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಬಿಡೋದಿಲ್ಲ ಅಂದ್ರೆ ಹೇಗೆ, ಪುಲ್ವಾಮ ನಡೆದದ್ದು ಯಾರ ಕುಮ್ಮಕ್ಕಿನಿಂದ? ಎಲ್ಲ ಭಯೋತ್ಪಾದಕರೂ ಅವರೇ ಅಲ್ವಾ? ಅವರಿಂದಾಗಿ ಇಲ್ಲಿನ ಮುಸ್ಲಿಮರನ್ನು ನಂಬದ ಹಾಗಾಗಿದೆ ಎಂದೆಲ್ಲ ಒಬ್ಬ ಯುವಕ ಉಸಿರು ಬಿಗಿಹಿಡಿದು ಬಾಯಿ ಪಾಠ ಮಾಡಿಕೊಂಡವರಂತೆ ಒದರಿದ. ಇವೆಲ್ಲ ನೀನು ಎಲ್ಲಿ ತಿಳಿದುಕೊಂಡದ್ದು? ಎಂದು ಅವನನ್ನು ಕೇಳಿದೆ. ಅವನು ಉತ್ತರಿಸಲಿಲ್ಲ, ಅವನ ಕೈಯಲ್ಲಿ ಮೊಬೈಲ್ ಇತ್ತು.

ಹಿಂದೆ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆಗಳು ಕಳೆದ 30-40 ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಲು ಸಾಧ್ಯವೇ? ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು? ಮತಾಂತರವೇ ಕಾರಣವೆಂದಾದರೆ ಹಿಂದೂಗಳು ಕ್ರಿಶ್ಚಿಯನರನ್ನು ದ್ವೇಷಿಸ ಬೇಕಿತ್ತು, ಮುಸ್ಲಿಮರನ್ನಲ್ಲ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿರುವುದು ಕ್ರಿಶ್ಚಿಯನ್ ಧರ್ಮಕ್ಕೆ, ಮುಸ್ಲಿಮ್ ಧರ್ಮಕ್ಕಲ್ಲ. ಮತ್ತೆ ಯಾಕೆ ಈ ಪರಿ ಹಿಂದೂ- ಮುಸ್ಲಿಮ್ ದ್ವೇಷ? ಈ ಪ್ರಶ್ನೆಗೆ ಸರಳವಾದ ಉತ್ತರ ಇದೆ, ಆದರೆ ಯೋಚಿಸುವ ಶಕ್ತಿಯನ್ನು ಧರ್ಮದ ನಶೆ ಕಿತ್ತುಕೊಂಡಿದೆ. ಧರ್ಮ ಎನ್ನುವುದು ರಾಜಕೀಯದ ಅಸ್ತ್ರವಾಗಿದೆ ಈ ಬದಲಾವಣೆ ರಾತ್ರಿಹಗಲಾಗುವುದರೊಳಗೆ ನಡೆದುದಲ್ಲ. ಬಾಬರಿ ಮಸೀದಿ ಧ್ವಂಸದ ನಂತರ ದೇಶದಾದ್ಯಂತ ಭುಗಿಲೆದ್ದ ಕೋಮು ವಾದಕ್ಕಿಂತಲೂ ಮೊದಲೇ ದಕ್ಷಿಣ ಕನ್ನಡದಲ್ಲಿ ಕೋಮುವಾದ ಪ್ರಯೋಗ ಶಾಲೆಗೆ ಅಡಿಗಲ್ಲು ಹಾಕಲಾಗಿತ್ತು.

ನನ್ನ ವೃತ್ತಿಗುರುಗಳಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರಿಗೆ 25 ವರ್ಷಗಳ ಹಿಂದೆ ಈ ಪ್ರಶ್ನೆ ಕಾಡಿತ್ತು. ಅವರು ತಮ್ಮ ಓದುಗರೊಡನೆ ಸಂಪಾದಕ ಎಂಬ ಅಂಕಣದಲ್ಲಿ ಹೀಗೆ ಬರೆದಿದ್ದರು:

‘ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಯ ದಾಪುಗಾಲು ಹಾಕುತ್ತಿರುವ ದಕ್ಷಿಣ ಕನ್ನಡಜಿಲ್ಲೆ ಕನ್ನಡನಾಡಿನ ಅಭಿಮಾನ ಕಳಶವಾಗುವುದೆಂಬ ನಿರೀಕ್ಷೆಯಲ್ಲಿ ಎದೆಯುಬ್ಬಿಸಿದವರಲ್ಲಿ ನಾನೂ ಒಬ್ಬ. ಯಾಕೆಂದರೆ ನಾಡಿನ ಇತರ ಜಿಲ್ಲೆಗಳ ಜನಮೆಚ್ಚುವ ಎಲ್ಲ ಗುಣಗಳೂ ನಮ್ಮಲ್ಲಿದ್ದುವು. ಆಡಳಿತದಲ್ಲಿ ಲಂಚಗುಳಿತನವೆಂಬುದು ಕಿಂಚಿತ್ತೂ ಇಲ್ಲಿರಲಿಲ್ಲ. ಸಾರ್ವಜನಿಕ ಮುಖಂಡರು ಇಲ್ಲಿ ಸ್ವಚ್ಛತೆಗೆ ಹೆಸರಾಗಿದ್ದರು. ವಿದ್ಯಾರ್ಥಿ ಸಮೂಹ ಪ್ರತಿಭೆಯ ಆಗರವಾಗಿತ್ತು. ಆದರ್ಶ ಅಧ್ಯಾಪಕರ ದೊಡ್ಡಪಟ್ಟಿಯೇ ಇಲ್ಲಿತ್ತು. ವಿದ್ಯಾವಂತ ಯುವಕರು ಪುಸ್ತಕಪ್ರಿಯರಾಗಿದ್ದರು. ವಿಚಾರವಂತಿಕೆ ಬೆಳೆಸಿಕೊಂಡಿದ್ದರು. ಚಿತ್ರಮಂದಿರಗಳ ಮುಂದೆ ಕ್ಯೂ ನಿಲ್ಲುವುದು ಅಪಮಾನಕಾರಿಯೆಂದು ಆಗಿನ ಯುವಕರು ತಿಳಿದಿದ್ದರು. ಕನ್ನಡನಾಡಿನ ಇತರ ಯಾವ ಭಾಗದಲ್ಲೂ ಇಲ್ಲದಷ್ಟು ತೀವ್ರವಾದ ಕಾರ್ಮಿಕ ಚಳವಳಿ ಇಲ್ಲಿ ಬೇರುಬಿಟ್ಟಿತ್ತು. ಇಲ್ಲಿನ ರಾಜಕೀಯದಲ್ಲಿ ಸಮಾಜವಾದಿಗಳು ಸಕ್ರಿಯರಾಗಿದ್ದರು. ಮದ್ಯಪಾನ ಮಹಾಪರಾಧವೆಂಬ ಭಾವನೆ ಈ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಮೋಸ ವಂಚನೆ ಮಾಡಿ ಅಥವಾ ಇನ್ನಿತರ ವಾಮಾಚಾರಗಳಿಂದ ಹಣ ಗಳಿಸುವವರು ಸಾರ್ವಜನಿಕರ ತಿರಸ್ಕಾರಕ್ಕೆ ಈಡಾಗುತ್ತಿದ್ದರು

 ಹಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಹೀಗೇಕಾಯಿತು? ಎಂಬ ಪ್ರಶ್ನೆಯನ್ನು ವಡ್ಡರ್ಸೆಯವರು, ರೋಶನಿ ನಿಲಯದ ಸಮಾಜವಿಜ್ಞಾನ ಪ್ರಾಧ್ಯಾಪಕ ಡಾ.ಜಿ.ಆರ್.ಕೃಷ್ಣ ಅವರ ಮುಂದಿಟ್ಟಾಗ ಅವರಿಂದ ಬಂದ ಉತ್ತರ ಹೀಗಿತ್ತು:

‘ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಇಂದು ಪೂರ್ಣವಾಗಿ ವಾಣಿಜ್ಯಮಯವಾಗಿದೆ. ಈ ದೇಶದಲ್ಲಿಂದು ಮಹಾಪೀಡೆ ಎನ್ನಿಸಿಕೊಂಡಿರುವ ವಿದ್ಯೆಯ ವ್ಯಾಪಾರ ಆರಂಭವಾದುದು ಇಲ್ಲಿಯೇ. ರಾಜಕೀಯಕ್ಕೂ ವಾಣಿಜ್ಯಗಣನೆ ಬಂದಿದೆ. ಗಂಡು ಹೆಣ್ಣಿನ ಮಾನವೀಯ ಸಂಬಂಧವೂ ಕೂಡಾ ಇಲ್ಲಿ ವಾಣಿಜ್ಯ ವಸ್ತುವಾಗಿದೆ. ಜಿಲ್ಲೆಯ ಪ್ರೌಢಕಲೆಯಾದ ಯಕ್ಷಗಾನವೂ ವ್ಯಾಪಾರದ ಡೇರೆಯಲ್ಲಿ ಸಿಕ್ಕಿ ನಶಿಸುತ್ತಿದೆ. ಆದ್ದರಿಂದ ನೀವು ಹೊರಡಿಸುವ ಪತ್ರಿಕೆ ಈ ವ್ಯಾಪಾರಿ ಸೂತ್ರಕ್ಕೆ ಸಲ್ಲುವಂತಿರಬೇಕು.

ವಾಣಿಜ್ಯಮಯವಾಗಿರುವ ಜಿಲ್ಲೆಯ ಜನಜೀವನಕ್ಕೆ ಅವರು ಹಲವು ನಿದರ್ಶನಗಳನ್ನಿತ್ತರು. ಅವರ ಅಭಿಪ್ರಾಯ ದಲ್ಲಿ, ಈ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಕಾರ್ಮಿಕ ಚಳವಳಿಯ ನೆಲೆತಪ್ಪಿದ್ದುದಕ್ಕೂ ಇದೇ ಕಾರಣ. ಇಲ್ಲಿನ ಸಭೆ ಸಮಾರಂಭಗಳು ಅಥವಾ ಶಾಲಾ ವಾರ್ಷಿಕೋತ್ಸವಗಳಿಗೆ ಹಣವಂತರು ಅಥವಾ ಬ್ಯಾಂಕ್ ಅಧಿಕಾರಿಗಳನ್ನೇ ಮುಖ್ಯ ಅತಿಥಿಗಳಾಗಿ ಕರೆಯುವುದೇ ಈಗೊಂದು ಫ್ಯಾಷನ್ ಆಗಿರುವುದನ್ನು ಪ್ರಸ್ತಾಪಿಸಿದರು. ಬುದ್ಧಿಗೆ ಇಲ್ಲೀಗ ಬೆಲೆ ಇಲ್ಲದಾಗುತ್ತಿದೆ ಎಂದು ಕೃಷ್ಣ ಹೇಳಿದ್ದನ್ನು ವಡ್ಡರ್ಸೆ ಬರೆದಿದ್ದರು.

ದಕ್ಷಿಣ ಕನ್ನಡ ಮೊದಲಿನಿಂದಲೂ ವಾಣಿಜ್ಯಮಯ ನೆಲ. ಕಳೆದ ಮೂವತ್ತು ವರ್ಷಗಳಲ್ಲಿ ಈ ಜಿಲ್ಲೆ ಇನ್ನೊಂದು ಅಪಾಯಕಾರಿ ತಿರುವು ಪಡೆದಿದೆ. ವಾಣಿಜ್ಯಮಯ ದಕ್ಷಿಣ ಕನ್ನಡ, ಕೋಮುವಾದಿ ದಕ್ಷಿಣ ಕನ್ನಡ ಆಗಿದೆ. ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮವಾದ ಮತ್ತು ಹೊಸ ಆರ್ಥಿಕ ನೀತಿಯ ಮೂಲಕ ಹುಟ್ಟಿಕೊಂಡ ಕ್ರೋನಿ ಬಂಡವಾಳವಾದ ಏಕಕಾಲಕ್ಕೆ ಪ್ರವೇಶಿಸಿದ ಪರಿಣಾಮದ ಫಲವನ್ನು ದೇಶ ಇಂದು ಉಣ್ಣುತ್ತಿದೆ. ಕೋಮುವಾದದ ಜೊತೆ ಕ್ರೋನಿ ಬಂಡವಾಳವಾದ ಸೇರಿಕೊಂಡರೆ ಏನಾಗಬಹುದೆಂಬುದಕ್ಕೆ ಇಂದಿನ ದಕ್ಷಿಣ ಕನ್ನಡ ಜೀವಂತ ಉದಾಹರಣೆ. ಇದು ಕೋಮು ಭಾರತದ ಮಿನಿಯೇಚರ್. ಈ ದೃಷ್ಟಿಯಿಂದ ದಕ್ಷಿಣ ಕನ್ನಡ ದೇಶದ ಕೋಮುವಾದಿಗಳಿಗೆ ಮಾದರಿಯಾಗಿರುವ ಕೋಮುವಾದದ ಪ್ರಯೋಗಶಾಲೆ.

ಕಳೆದು ಹೋಗಿರುವ ದಕ್ಷಿಣ ಕನ್ನಡವನ್ನು ಹುಡುಕ ಬೇಕಾದರೆ ‘ಪ್ರಯೋಗಶಾಲೆ’ಯ ಪ್ರಯೋಗ ಪಶುಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ಸಂಘ ಪರಿವಾರದ ಪ್ರಯೋಗಾಲಯದ ಪ್ರಯೋಗ ಪಶುಗಳು- ಬಿಲ್ಲವ, ಬಂಟ ಮತ್ತು ಮೊಗವೀರ ಜಾತಿಗಳು. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಈ ಮೂರುಜಾತಿಗಳ ಸಂಖ್ಯೆ ಮುಕ್ಕಾಲು ಪಾಲಿನಷ್ಟಿದೆ. ಈ ಮೂರು ಪ್ರಮುಖ ಜಾತಿಗಳಷ್ಟು ಸಂಘಟಿತ ಜಾತಿಗಳನ್ನು ದೇಶದ ಬೇರೆ ಯಾವ ಪ್ರದೇಶದಲ್ಲಿಯೂ ಕಾಣಲಾಗದು.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಎಂಟೂವರೆ ಸಾವಿರ ಚದರ ಕಿ.ಮೀ. ವಿಸ್ತಾರದಲ್ಲಿ ಸ್ವಂತ ಕಟ್ಟಡ ಹೊಂದಿರುವ ಸುಮಾರು 250 ಬಿಲ್ಲವ ಸಂಘಗಳಿವೆ, ಬಂಟರ ಭವನ ಗಳು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಒಂದೊಂದು ಭವನವೂ ಮಿನಿ ವಿಧಾನಸೌಧದಂತಿವೆ. ಮೊಗವೀರ ಸಮುದಾಯ ಸಂಘಟನೆ ಕಟ್ಟಡಗಳಲ್ಲಿ ಕಾಣಸಿಗದಿದ್ದರೂ ಬುಡಕಟ್ಟು ಜನಾಂಗದ ಲಕ್ಷಣಗಳನ್ನು ಹೊಂದಿರುವ ಇವರಲ್ಲಿ ಸ್ಥಳೀಯ ಕೂಡು ಕಟ್ಟು ಬಲಿಷ್ಠವಾಗಿವೆ. ಈ ಮೂರು ಜಾತಿಗಳ ಜೊತೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಸೇರಿಕೊಂಡರೆ ದಕ್ಷಿಣ ಕನ್ನಡದ ಜನಸಂಖ್ಯೆಯ ಶೇ.90ರಷ್ಟಾಗುತ್ತದೆ.

ಬ್ಯಾರಿಗಳೆಂದು (ಬ್ಯಾರ ಎಂದರೆ ತುಳುವಿನಲ್ಲಿ ವ್ಯಾಪಾರ ಎಂದರ್ಥ) ಕರೆಯಲಾಗುವ ಇಲ್ಲಿನ ಮುಸ್ಲಿಮರು ಹುಟ್ಟು ವ್ಯಾಪಾರಿಗಳು ಮತ್ತು ಕೃಷಿಕರು. ದನದ ವ್ಯಾಪಾರ ಮಾತ್ರ ಅಲ್ಲ, ಮೀನು, ಮಾಂಸ, ತೆಂಗು, ಮಾವು, ಹುಣಸೆಯಿಂದ ಹಿಡಿದು ಸೋಗೆ-ಕಸಬರಿಗೆವರೆಗೆ ಮನೆಮನೆಗೆ ಬಂದು ವ್ಯಾಪಾರ ನಡೆಸುವವರು ಇದೇ ಬ್ಯಾರಿಗಳು. ಉಳಿದೆಡೆಯ ಬಡಮುಸ್ಲಿಮ್ ಎನ್ನುವ ಹಣೆಪಟ್ಟಿಯನ್ನು ಅವರು ನಿಧಾನವಾಗಿ ಕಳಚಿಕೊಂಡಿದ್ದಾರೆ. ಆರ್ಥಿಕ ಮತ್ತು ಶೈಕ್ಷಣಿಕ ಮುನ್ನಡೆಯಿಂದಾಗಿ ಇಲ್ಲಿನ ಮುಸ್ಲಿಮರಲ್ಲಿ ದೊಡ್ಡ ಪ್ರಮಾಣದ ಮಧ್ಯಮ ಮತ್ತು ಮೇಲುಮಧ್ಯಮ ವರ್ಗವೊಂದು ಕಳೆದ 2-3 ದಶಕಗಳಲ್ಲಿ ಸೃಷ್ಟಿಯಾಗಿದೆ.

ಆದರೆ ಈ ಎಲ್ಲ ಸಮುದಾಯಗಳು ಇತ್ತೀಚಿನ ವರ್ಷಗಳವರೆಗೂ ಜಾತಿ-ಧರ್ಮದ ಹೆಸರಲ್ಲಿ ಪರಸ್ಪರ ಎಂದೂ ಕಾದಾಡಿಲ್ಲ. ಕಾದಾಡಬೇಕಾಗಿದ್ದ ಒಂದು ಕಾಲ ಇತ್ತು, ಅದಕ್ಕೆ ಕಾರಣಗಳೂ ಇದ್ದವು. ಒಂದು ಕಾಲದಲ್ಲಿ ಬಂಟರು, ಜೈನರು, ಬ್ರಾಹ್ಮಣರು ಭೂಮಾಲಕರಾಗಿದ್ದರೆ, ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಯವರು ಗೇಣಿದಾರರಾಗಿದ್ದರು. ಆ ಕಾಲದಲ್ಲಿ ಭೂಮಾಲಕರಿಂದ ಸಾಕಷ್ಟು ದೌರ್ಜನ್ಯ, ಕಿರುಕುಳ, ಅವಮಾನಗಳು ಗೇಣಿದಾರರ ಮೇಲೆ ನಡೆದಿದೆ. ಆದರೆ ಭೂಸುಧಾರಣೆ ಜಾರಿಗೆ ಬಂದಾಗ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಘರ್ಷಣೆ, ಪ್ರತಿಭಟನೆ, ರಕ್ತಪಾತ ನಡೆದಿರ ಲಿಲ್ಲ. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಯಶಸ್ವಿಯಾಗಿ ಜಾರಿಗೆ ಬಂದ ಜಿಲ್ಲೆ ದಕ್ಷಿಣ ಕನ್ನಡ. ಅದೊಂದು ರಕ್ತ ರಹಿತ ಕ್ರಾಂತಿ. ಬಹುಸಂಖ್ಯಾತ ಬಂಟ, ಬ್ರಾಹ್ಮಣ, ಜೈನ ಭೂಮಾಲಕರು ಕಾಯ್ದೆಗೆ ತಲೆಬಾಗಿ ಗೇಣಿದಾರರಿಗೆ ಜಮೀನನ್ನು ಬಿಟ್ಟುಕೊಟ್ಟರು. ತಮ್ಮ ಭೂಮಿಯನ್ನು ಕಬಳಿಸಿದರು ಎಂಬ ಕಾರಣಕ್ಕೆ ಈ ಜಮೀನ್ದಾರ ಜಾತಿಗಳು ಗೇಣಿದಾರರ ಮೇಲೆ ದ್ವೇಷ ಸಾಧಿಸಲು ಹೋಗಲಿಲ್ಲ.

ಆದರೆ ಭೂ ಸುಧಾರಣೆ ಕಾಯ್ದೆ ದಕ್ಷಿಣ ಕನ್ನಡದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಮೇಲೆ ಪ್ರಭಾವ ಬೀರಿದ್ದು ಮಾತ್ರವಲ್ಲ, ಅದರ ಅಡ್ಡಪರಿಣಾಮ ಜಿಲ್ಲೆಯ ರಾಜಕೀಯ ಕ್ಷೇತ್ರದ ಮೇಲೂ ಆಗಿತ್ತು. ಶಂಕರ್ ಆಳ್ವ, ಕೆ.ಕೆ.ಶೆಟ್ಟಿ, ಕೆ.ಆರ್.ಆಚಾರ್ ಮೊದಲಾದವರು ಪ್ರತಿನಿಧಿಸಿದ್ದ ಮಂಗಳೂರು ಲೋಕಸಭಾ ಕ್ಷೇತ್ರ ಮೊದಲ ಬಾರಿ 1977ರಲ್ಲಿ ದೇವರಾಜ ಅರಸು ಅವರ ಸೋಷಿಯಲ್ ಇಂಜಿನಿಯರ್ ಫಲವಾಗಿ ಬಿ.ಜನಾರ್ದನ ಪೂಜಾರಿ ಪಾಲಾಯಿತು. ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ ಮಲ್ಯ, ರಂಗನಾಥ ಶೆಣೈ, ಟಿ.ಎ.ಪೈ ಪಕ್ಕಕ್ಕೆ ಸರಿದು ಆಸ್ಕರ್ ಫೆನಾರ್ಂಡಿಸ್ ಪ್ರವೇಶವಾಯಿತು.

ಕರಾವಳಿಯಲ್ಲಿ ಕೋಮುವಾದದ ಪ್ರಯೋಗಶಾಲೆಗೆ ಅಡಿಗಲ್ಲು ಬಿದ್ದದ್ದೇ ಈ ಕಾಲದಲ್ಲಿ. ಈ ಪ್ರದೇಶದಲ್ಲಿ ಆರೆಸ್ಸೆಸ್‌ಗೆ ಸೀಮಿತವಾದ, ಆದರೆ ಗಟ್ಟಿಯಾದ ನೆಲೆ ಮೊದಲಿನಿಂದಲೂ ಇತ್ತು. ವ್ಯಾಪಾರದ ಮೂಲಕ ಆರ್ಥಿಕವಾಗಿ ಬಲಾಢ್ಯರಾಗಿದ್ದ ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು) ನೀಡುತ್ತಿದ್ದ ದೇಣಿಗೆಯಿಂದಾಗಿ ಆರೆಸ್ಸೆಸ್‌ನ ಪ್ರಭಾವ ದ.ಕ.ದಲ್ಲಿತ್ತು. ಆದರೆ ಎಂಬತ್ತರ ದಶಕದ ಕೊನೆಯವರೆಗೂ ಕೊಂಕಣಿ- ಬ್ರಾಹ್ಮಣರಿಂದಾಚೆ ಸಂಘವನ್ನಾಗಲಿ, ಜನಸಂಘವನ್ನಾಗಲಿ ಬೆಳೆಸಲು ಸಾಧ್ಯ ವಾಗಿರಲಿಲ್ಲ.

ಎಂಬತ್ತರ ದಶಕದ ಕೊನೆಯಲ್ಲಿನ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳು ಮೊದಲ ಬಾರಿಗೆ ಆರೆಸ್ಸೆಸ್‌ಗೆ ತನ್ನ ನೆಲೆ ವಿಸ್ತರಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿತು.ಭೂ ಸುಧಾರಣೆ ಕಾಯ್ದೆಯಿಂದಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಮುನಿಸಿಕೊಂಡಿದ್ದ ಬಂಟ- ಬ್ರಾಹ್ಮಣ-ಕೊಂಕಣಿ-ಜೈನ ಸಮುದಾಯ ರಾಜಕೀಯ ಪ್ರಾತಿನಿಧ್ಯದಿಂದಲೂ ವಂಚಿತ ರಾಗಿ ರಾಜಕೀಯ ಪರ್ಯಾಯದ ಹುಡುಕಾಟದಲ್ಲಿತ್ತು.

ಆ ಸಂದರ್ಭದ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಈ ಹುಡುಕಾಟವನ್ನು ಸಲೀಸು ಮಾಡಿತು. 1977ರ ಲೋಕಸಭಾ ಚುನಾವಣೆ ಯ ನಂತರ ದೇಶದಲ್ಲಿ ಮೊದಲ ಬಾರಿ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬಂದಿತ್ತು. ಮೊದಲ ಬಾರಿ ಜನ ಸಂಘ ಕೇಂದ್ರದಲ್ಲಿ ಆಡಳಿತ ಪಕ್ಷದ ರೂಪ ಪಡೆದು ರೆಕ್ಕೆ ಬಿಚ್ಚಲಾರಂಭಿಸಿತ್ತು. ಇದೇ ಸಮಯಕ್ಕೆ ರಾಜ್ಯದಲ್ಲಿ ಡಿ.ದೇವರಾಜ ಅರಸು ಅವರ ಬಂಡಾಯದ ಹಾದಿ ಕಾಂಗ್ರೆಸ್ ನೆಲೆ ಬಿರುಕು ಬಿಡುವಂತೆ ಮಾಡಿತ್ತು. ಸಹಜ ವಾಗಿ ಬಂಟರು ಮತ್ತು ಕೊಂಕಣಿಗಳು ಬಿಜೆಪಿ ಕಡೆ ಆಕರ್ಷಿತರಾದರು..

ಕೇರಳದಲ್ಲಿರುವ ಈಳವರು ನೂರು ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಬಿಲ್ಲವರಿಗಿಂತ ನಿಕೃಷ್ಟ ಸ್ಥಿತಿಯಲ್ಲಿದ್ದರು. ಬಡತನ, ಜಾತೀಯತೆ, ಅನಕ್ಷರತೆ ಅಂಧಶ್ರದ್ಧೆಗಳಿಂದಾಗಿ ಅವರು ನೆಲಹಿಡಿದಿದ್ದರು. ಆದರೆ ನಾರಾಯಣ ಗುರು ಅವರ ಚಳವಳಿ ಈಳವರ ಬದುಕಿನ ಚಿತ್ರವನ್ನೇ ಬದಲಿಸಿತು. ಗುರುಗಳಿಗೆ ದೇವಸ್ಥಾನ ಸ್ಥಾಪನೆ ಸಾಮಾಜಿಕ ಚಳವಳಿಯ ಭಾಗವಾಗಿತ್ತು.

ಅದರ ನಂತರ ಆರೆಸ್ಸೆಸ್ ಕಣ್ಣಿಗೆ ಬಿದ್ದದ್ದು ಮೊಗವೀರ ಸಮಾಜ. ಸಾಹಸಿಗಳು, ನೇರನಡೆ-ನುಡಿಯವರೂ, ಸ್ವಲ್ಪ ಹುಂಬರೂ ಆಗಿರುವ ಮೊಗವೀರರನ್ನು ಸೆಳೆಯಲು ಆರೆಸ್ಸೆಸ್ ಕರಾವಳಿಯಲ್ಲಿ ಮೊದಲ ಬಾರಿಗೆ ಹಿಂದೂ-ಮುಸ್ಲಿಮ್ ದಾಳವನ್ನು ಉರುಳಿಸಿತ್ತು. ಇದಕ್ಕೆ ದುರ್ಬಳಕೆಯಾಗಿದ್ದು ನಾಡಮೀನುಗಾರಿಕೆ ಇದ್ದ ಕಾಲದಲ್ಲಿ ಮೊಗವೀರ-ಬ್ಯಾರಿಗಳ ನಡುವಿನ ವ್ಯಾವಹಾರಿಕವಾದ ಸಂಬಂಧ. ಮೀನು ಹಿಡಿಯುವವರು ಮೊಗವೀರರು, ಅದನ್ನು ಸಗಟುರೂಪದಲ್ಲಿ ಖರೀದಿಸುವವರು ಬ್ಯಾರಿ ವ್ಯಾಪಾರಿಗಳು, ಮತ್ತೆ ಅವರಿಂದ ಚಿಲ್ಲರೆ ರೂಪದಲ್ಲಿ ಖರೀದಿಸಿ ಮನೆಮನೆಗೆ ಕೇಕ ಕೊಂಡು ಹೋಗುವವರು ಮೊಗವೀರ ಮಹಿಳೆಯರು-ಇದು ಆಗಿನ ಮೀನು ವ್ಯಾಪಾರಿ ವರ್ತುಲ.

ವ್ಯಾಪಾರದಲ್ಲಿ ಕೊಡು-ಕೊಳ್ಳುವ ವಿಚಾರದಲ್ಲಿ ಆಗಾಗ ಜಗಳದ ಕಿಡಿ ಹಾರುವುದು ಸಾಮಾನ್ಯ ವಿದ್ಯಮಾನ. ಬಹಳ ಮುಖ್ಯವಾಗಿ ಸಗಟು ವ್ಯಾಪಾರಿಗಳಾದ ಬ್ಯಾರಿಗಳು ಮತ್ತು ಅವರಿಂದ ಚಿಲ್ಲರೆ ಖರೀದಿಸುವ ಮೊಗವೀರ ಮಹಿಳೆಯರ ನಡುವೆ ಹಾಸ್ಯ-ಕೀಟಳೆಗಳೆಲ್ಲ, ಒಮ್ಮಾಮ್ಮೆ ಅತಿರೇಕಕ್ಕೆ ಹೋಗಿ ಘರ್ಷಣೆಗಳು ನಡೆಯುತ್ತಿತ್ತು. ಇಂತಹ ಜಗಳಗಳೆಲ್ಲ ಹಿರಿಯರ ಮಧ್ಯಪ್ರವೇಶದಿಂದ ಇತ್ಯರ್ಥವಾಗುತ್ತಿತ್ತು. ಮೊದಲ ಬಾರಿಗೆ ಸಂಘ ಪರಿವಾರದ ನಾಯಕರು ಈ ಜಗಳಕ್ಕೆ ಹಿಂದೂ-ಮುಸ್ಲಿಮರ ನಡುವಿನ ಜಗಳದ ಬಣ್ಣ ಬಳಿದು ಮೊಗವೀರರನ್ನು ಪ್ರಚೋದಿಸಲು ಶುರು ಮಾಡಿದ್ದರು. ಬ್ಯಾರಿ ವ್ಯಾಪಾರಿಗಳು ವ್ಯವಹಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಅಸಹನೆಯನ್ನು ಮನಸ್ಸಿನೊಳಗೆ ಇಟ್ಟುಕೊಂಡೇ ಇದ್ದ ಮೊಗವೀರ ಪುರುಷರನ್ನು, ಸಂಘ ಪರಿವಾರದ ಹೊಸ ಪ್ರಚೋದನೆ ಇನ್ನಷ್ಟು ಕೆರಳಿಸತೊಡಗಿತ್ತು. ಮುಸ್ಲಿಮರು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಾಗಿದ್ದದ್ದು ಮತ್ತು ಆ ಪಕ್ಷ ಅವರನ್ನು ಬೆಂಬಲಿಸುತ್ತಿದ್ದುದು ಕೂಡಾ ಮೊಗವೀರರು ಕಾಂಗ್ರೆಸ್ ವಿರೋಧಿ ಪಾಳಯದ ಕಡೆ ಸರಿಯಲು ಕಾರಣವಾಯಿತು. ಮೊಗವೀರ ಸಮಾಜದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಮಲ್ಪೆಯ ಮಾಳಿಗೆ ಮನೆಯ ಮಧ್ವರಾಜ್ ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಕಾರಣ, ಬಿಜೆಪಿ ಕಡೆ ಸರಿಯುತ್ತಿದ್ದ ಅವರನ್ನು ತಡೆದು ನಿಲ್ಲಿಸುವ ತಳಮಟ್ಟದ ನಾಯಕರು ಆ ಸಮಾಜದಲ್ಲಿ ಇರಲಿಲ್ಲ. ಈ ಹಂತದಲ್ಲಿಯೇ ಬಿಜೆಪಿಯ ಕಮಲ ಅರಳಲು ಶುರುಮಾಡಿದ್ದು. ಅಂತಹವರಿಗೆ ಸಹಜವಾಗಿಯೇ ಪರ್ಯಾಯವಾಗಿ ಕಂಡದ್ದು ಬಿಜೆಪಿ. ಇದರ ಪರಿಣಾಮ ವೇ 1984ರಲ್ಲಿ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಬಿಜೆಪಿ 18 ಸ್ಥಾನಗಳನ್ನು ಗೆದ್ದದ್ದು. ರಾತ್ರಿ ಹಗಲಾಗುವುದರೊಳಗೆ ಇಲ್ಲಿ ಕಮಲ ಅರಳಿದ್ದಲ್ಲ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೊಡ್ಡ ಪಾತ್ರ ಇದೆ. ಈ ರೀತಿ ಬಂಟ, ಬ್ರಾಹ್ಮಣ, ಕೊಂಕಣಿ, ಮೊಗವೀರ ಸಮಾಜಗಳನ್ನು ತನ್ನೆಡೆ ಸೆಳೆಯುತ್ತಾ ಬಂದ ಸಂಘ ಪರಿವಾರ ಗೆಲ್ಲಲು ಕೊನೆಗೆ ಉಳಿದದ್ದು ಬಿಲ್ಲವರು ಮಾತ್ರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಗಳಲ್ಲಿ ಜನಸಂಖ್ಯೆಯ ಮೂಲಕ ನಿರ್ಣಾಯಕ ಪಾತ್ರ ವಹಿಸುವಷ್ಟು ಸಾಮರ್ಥ್ಯ ಇರುವ ಬಿಲ್ಲವರು ಒಟ್ಟು ಜನಸಂಖ್ಯೆಯ ಶೇ.35ರಷ್ಟಿದ್ದಾರೆ. ಅಂದರೆ ಪ್ರತಿ ಮೂವರು ಮತದಾರರಲ್ಲಿ ಒಬ್ಬರು ಬಿಲ್ಲವರು. ಶೇ.24 ರಷ್ಟು ಮುಸ್ಲಿಮರಿದ್ದರೆ, ಶೇ.ಎಂಟರಷ್ಟು ಕ್ರಿಶ್ಚಿಯನರಿದ್ದಾರೆ. ಒಂದು ಕಾಲದಲ್ಲಿ ಈ ಮೂರು ಸಮುದಾಯಗಳ ಸಂಘಟಿತ ಗುಂಪು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಓಟು ಬ್ಯಾಂಕ್.

ಆಸ್ಕರ್ ಫೆನಾರ್ಂಡಿಸ್ ಅವರಂತಹ ಒಬ್ಬ ಕ್ರಿಶ್ಚಿಯನ್ ಸಮುದಾಯದ ನಾಯಕ ಉಡುಪಿ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿರುವುದು ಇದೇ ಕಾರಣದಿಂದ. ಇಂತಹದ್ದೊಂದು ಚುನಾವಣಾ ಗೆಲುವನ್ನು ಇಂದಿನ ರಾಜಕೀಯ ಸ್ಥಿತಿಯಲ್ಲಿ ಊಹಿಸಿಕೊಳ್ಳಲೂ ಸಾಧ್ಯ ಇಲ್ಲ. ಕಾಂಗ್ರೆಸ್ ಓಟು ಬ್ಯಾಂಕಿನಿಂದ ಬಿಲ್ಲವ ಮತಗಳು ಚದುರಿಹೋಗಿರುವ ಕಾರಣದಿಂದಾಗಿಯೇ ಇಲ್ಲಿ ಕಾಂಗ್ರೆಸ್ ಅವಸಾನಗೊಂಡಿರುವುದು ಮತ್ತು ಬಿಜೆಪಿ ಉದಯಮಾನವಾಗಿರುವುದು. ಸತತ ನಾಲ್ಕು ಬಾರಿ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಬಿಲ್ಲವ ನಾಯಕರಾಗಿಯೇ ಬಿ.ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಪ್ರಸ್ತುತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಇಬ್ಬರು ಬಿಲ್ಲವ ಶಾಸಕರಿದ್ದಾರೆ, ಅವರಿಬ್ಬರೂ ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು. ಕಾಂಗ್ರೆಸ್ ಪಕ್ಷದಿಂದ ಒಬ್ಬರು ರಾಜ್ಯಸಭಾ ಸದಸ್ಯರಿದ್ದಾರೆ. ಸಂಘ ಪರಿವಾರದ ಸುಮಾರು ಮೂರು ದಶಕಗಳ ಸತತ ಕೋಮುವಾದದ ಪ್ರಯೋಗದಿಂದ ಬಿಜೆಪಿ ಗೆದ್ದಿದೆ, ಬಿಲ್ಲವರು ಸೋತಿದ್ದಾರೆ.

ಬಿಲ್ಲವರ ವರ್ತಮಾನ ಹೆಮ್ಮೆ ಪಡುವಂತಹದ್ದಲ್ಲ, ಗತವೈಭವದ ಇತಿಹಾಸ ಮಾತ್ರ ರೋಚಕ ಅಷ್ಟೇ ಸ್ಫೂರ್ತಿದಾಯಕ. ಬಿಲ್ಲವರು ಮೂಲತ: ಕೃಷಿಕರು, ಸೈನಿಕರು, ವೈದ್ಯರು ಎನ್ನುತ್ತದೆ ಇತಿಹಾಸ. ಮೂಲತಃ ಕೃಷಿಕರಾಗಿದ್ದ ಬಿಲ್ಲವರು ಯಾವುದೋ ಕಾಲಘಟ್ಟ ದಲ್ಲಿ ಕುತ್ತಿಗೆಗೆ ಕಟ್ಟಿಕೊಂಡ ಶೇಂದಿ ತೆಗೆಯುವ ಮೂರ್ತೆಗಾರಿಕೆಯ ವೃತ್ತಿಯಿಂದಲೇ ಅವರ ದುರಂತ ಕತೆ ಪ್ರಾರಂಭವಾಗುತ್ತದೆ. ಎಡ್ಗರ್ ಥರ್ಸ್ಟನ್ ಅವರು ‘ದಕ್ಷಿಣ ಭಾರತದ ಜಾತಿಗಳು ಮತ್ತು ಮೂಲನಿವಾಸಿಗಳು’ ಎನ್ನುವ ಗ್ರಂಥದಲ್ಲಿ ಜಿಲ್ಲೆಯ ಬಹುಸಂಖ್ಯೆಯ ಜನಾಂಗವಾಗಿರುವ ಬಿಲ್ಲವರು ತುಳುನಾಡಿನ ಅರಸರ ಸೈನಿಕರಾಗಿದ್ದರು, ಅವರು ಬಿಲ್ಲು-ಬಾಣಗಳಿಂದ ಯುದ್ಧ ಮಾಡುತ್ತಿರುವ ಕಾರಣಕ್ಕಾಗಿ ಅವರನ್ನು ಬಿಲ್ಲವರು ಎಂದು ಕರೆಯಲಾಗುತ್ತಿದೆ’ ಎಂದು ದಾಖಲಿಸಿದ್ದಾರೆ.

 ಇನ್ನೊಬ್ಬ ಇತಿಹಾಸಕಾರ ಡಾ.ಗುರುರಾಜ ಭಟ್ಟರು ಈ ಅಭಿಪ್ರಾಯವನ್ನು ಅನುಮೋದಿಸುವುದು ಮಾತ್ರ ಅಲ್ಲ, ಇನ್ನೂ ಮುಂದುವರಿದು ‘ಬಿಲ್ಲವರು ಮತ್ತು ಮೊಗವೀರರು ಒಂದೇ ತಾಯಿಯ ಮಕ್ಕಳು’ ಎನ್ನುತ್ತಾರೆ. ಇದಕ್ಕೆ ಆಧಾರವಾಗಿ ಕ್ರಿ.ಪೂ.ಮೂರನೆಯ ಶತಮಾನದ ಅಶೋಕನ ಶಿಲಾಶಾಸನವನ್ನು ಉಲ್ಲೇಖಿಸುತ್ತಾರೆ. ಈ ಸಮಾಜಕ್ಕೆ ಸೇರಿರುವ ಕೋಟಿ-ಚೆನ್ನಯ ಮತ್ತು ಕಾಂತಾಬಾರೆ-ಬುದಾಬಾರೆಯಂತಹ ವೀರರು ಕೂಡಾ ಇತಿಹಾಸಕಾರರ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಒಂದು ಕಾಲದಲ್ಲಿ ಕೃಷಿಕರಾಗಿದ್ದ ಬಿಲ್ಲವ ಭೂಮಾಲಕರಿಗೆ ಸೇರಿರುವ ನೂರಾರು ಗುತ್ತು-ಬರ್ಕೆಗಳಿದ್ದವು. ಈ ಬಗ್ಗೆ ಇತ್ತೀಚೆಗೆ ವಿಸ್ತೃತವಾದ ಅಧ್ಯಯನವೂ ನಡೆದಿದೆ. ಕೃಷಿಕರಾಗಿದ್ದ ಬಿಲ್ಲವರು ಭೂಒಡೆತನವನ್ನು ಕಳೆದುಕೊಂಡು ಗೇಣಿದಾರರಾಗಿ ಪರಿವರ್ತನೆಗೊಂಡದ್ದರ ಹಿಂದೆಯೂ ಸಾಮಾಜಿಕವಾದ ಮೋಸ ಇದೆ. ಆ ಕಾಲದ ಆಳರಸರಲ್ಲಿ ದಿವಾನರು, ಶಾನುಭೋಗರು ಮತ್ತು ಪಟೇಲರಾಗಿ ಕೆಲಸ ಮಾಡುತ್ತಿದ್ದವರು ಬ್ರಾಹ್ಮಣರು, ಜೈನರು ಮತ್ತು ಗೋವಾ ಕಡೆಯಿಂದ ಬಂದಿದ್ದ ಗೌಡ ಸಾರಸ್ವತರು.

ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರು ತುಳುನಾಡಿನಲ್ಲಿ ಮೊದಲಬಾರಿ ಭೂ ದಾಖಲೆಗಳನ್ನು ಸಿದ್ಧ್ದಪಡಿಸುವಾಗ ಅನಕ್ಷರಸ್ಥರಾದ ಬಿಲ್ಲವ ಭೂಮಾಲಕರನ್ನು ಒಕ್ಕಲುಗಳು, ಗೇಣಿದಾರರರೆಂದು ದಾಖಲಿಸಿರುವುದು ಕೂಡಾ ಆಗಿನ ಶಾನುಭೋಗರು, ಪಟೇಲರು. ಆ ಕಾಲದಲ್ಲಿ ತುಳುನಾಡಿನಾದ್ಯಂತ ವ್ಯಾಪಾರ ಮಾಡಿಕೊಂಡಿದ್ದವರು ಕೊಂಕಣಿಗಳು. ತಮ್ಮ ದುರಭ್ಯಾಸಗಳಿಂದಾಗಿ, ಕೊಂಕಣಿ ವರ್ತಕರ ಬಳಿ ಸಾಲ ಮಾಡಿ ತೀರಿಸಲಾಗದ ಬಿಲ್ಲವರು ಕೊನೆಗೆ ಜಮೀನು ಅಡವಿಟ್ಟು ಅದನ್ನು ಮಾರಿಕೊಂಡು ತಮ್ಮದೇ ಜಮೀನಿನಲ್ಲಿ ಗೇಣಿದಾರರಾದ ಕತೆಗಳು ಸಾಕಷ್ಟಿವೆ. (ನನ್ನ ಮುತ್ತಜ್ಜನ ಕಾಲದಲ್ಲಿ ಭೂಮಾಲಕರಾಗಿದ್ದ ಕಿನ್ನಿಗೋಳಿ ಸಮೀಪದ ಐಕಳ ಗುತ್ತುವಿನ ಒಡೆಯರಾಗಿದ್ದ ನಮ್ಮ ಕುಟುಂಬ ಕಾಲಾನುಕ್ರಮದಲ್ಲಿ ಗೇಣಿದಾರರಾಗಿ, ಕೊನೆಗೆ ಭೂ ಸುಧಾರಣೆ ಕಾಯ್ದೆ ಜಾರಿಗೆ ಕೆಲವು ವರ್ಷ ಮೊದಲು ಅದನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಘಟನೆಗೆ ನಾನು ಕೂಡಾ ಸಾಕ್ಷಿ)

ಇಂತಹ ಬಿಲ್ಲವರಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲು, ಸಾಮಾಜಿಕವಾಗಿ ಸುಧಾರಣೆಗೊಳ್ಳಲು ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಒಂದು ಅವಕಾಶ ಒದಗಿ ಬಂದಿತ್ತು. ಅದು ಉಳುವವನಿಗೆ ಒಡೆತನ ನೀಡುವ ಭೂ ಸುಧಾರಣಾ ಕಾಯ್ದೆ. ಈ ಕಾಯ್ದೆ ಅತ್ಯಂತ ಯಶಸ್ವಿಯಾಗಿ ಜಾರಿಗೆ ಬಂದ ಜಿಲ್ಲೆ ದಕ್ಷಿಣ ಕನ್ನಡ. 1987ರ ಕಂದಾಯ ಇಲಾಖೆಯ ವರದಿಯ ಪ್ರಕಾರ ಇಡೀ ರಾಜ್ಯದಲ್ಲಿ ಭೂ ಒಡೆತನ ಪಡೆದ ಗೇಣಿದಾರರ ಒಟ್ಟು ಸಂಖ್ಯೆ 4,85,419 ಎಂದಾದರೆ, ಕೇವಲ ದಕ್ಷಿಣ ಕನ್ನಡದಲ್ಲಿ ಭೂ ಒಡೆತನ ಪಡೆದ ಕುಟುಂಬಗಳ ಸಂಖ್ಯೆ 1,36,880. ಈ ಗೇಣಿದಾರರಲ್ಲಿ ಮುಕ್ಕಾಲು ಪಾಲು ಬಿಲ್ಲವರೇ ಇದ್ದಿರಬಹುದು. ಆದರೆ ಭೂ ಸುಧಾರಣೆ ಕಾಯ್ದೆ ಕೂಡಾ ಬಿಲ್ಲವರ ಬದುಕಿನ ಸುಧಾರಣೆಯಲ್ಲಿ ದೊಡ್ಡ ಪಾತ್ರ ವಹಿಸಲಿಲ್ಲ.

ಸಹಜವಾದ ಬೆಳವಣಿಗೆಯಲ್ಲಿ ಭೂಮಿ ಕಳೆದುಕೊಂಡ ಬಂಟರು, ಬ್ರಾಹ್ಮಣರು ಆರ್ಥಿಕವಾಗಿ ಇನ್ನಷ್ಟು ಬಡವರಾಗಬೇಕಿತ್ತು, ಭೂಮಿ ಪಡೆದುಕೊಂಡ ಬಿಲ್ಲವರು ಇನ್ನಷ್ಟು ಸ್ಥಿತಿವಂತರಾಗಬೇಕಿತ್ತು. ಆದರೆ ಇದು ತಿರುವು ಮುರುವು ಆಗಿದೆ. ಭೂ ಸುಧಾರಣಾ ಕಾಯ್ದೆಯ ಜಾರಿಯ ನಂತರ ಕೋರ್ಟಿನಲ್ಲಿದ್ದ ಭೂ ವ್ಯಾಜ್ಯಗಳೆಲ್ಲ ಇತ್ಯರ್ಥವಾಗಿ ಬಿಲ್ಲವರು ಗೇಣಿದಾರರ ಸ್ಥಾನದಿಂದ ಭೂಮಾಲಕರ ಸ್ಥಾನಕ್ಕೆ ಭಡ್ತಿ ಪಡೆದರೂ ಇದರಿಂದ ಅವರ ಆರ್ಥಿಕ ಸ್ಥಿತಿಯೇನೂ ಸುಧಾರಿಸಲಿಲ್ಲ. ಸಾಮಾಜಿಕ ಗೌರವವನ್ನೂ ಅವರು ಸಂಪಾದಿಸಲಿಲ್ಲ.

ಇದಕ್ಕೆ ಕಾರಣಗಳಿವೆ. ಮೊದಲನೆಯದಾಗಿ, ದಕ್ಷಿಣ ಕನ್ನಡದಂತಹ ಮಳೆಯಾಶ್ರಿತ ಜಮೀನಿನಲ್ಲಿ ಬತ್ತದ ಕೃಷಿ, ಇಂದು ಮಾತ್ರವಲ್ಲ ಅಂದೂ ಕೂಡಾ ಲಾಭದಾಯಕ ವೃತ್ತಿಯಾಗಿ ಇರಲಿಲ್ಲ.ಇರುವುದೇ ಸಣ್ಣ ಹಿಡುವಳಿಗಳು. ಕಾಲಾನುಕ್ರಮದಲ್ಲಿ ಕುಟುಂಬದ ಸದಸ್ಯರ ನಡುವೆ ಹಂಚಿ ಹೋಗಿ ಅವು ಇನ್ನಷ್ಟು ಸಣ್ಣ ಹಿಡುವಳಿಗಳಾಗುತ್ತಾ ಬಂದಿವೆ. ಆದ್ದರಿಂದ ಇಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಕಡಿಮೆ. ಒಂದುಕಾಲದಲ್ಲಿ ಊರಿನ ಹುಡುಗರೆಲ್ಲರೂ ಮುಂಬೈಗೆ ಹೊಟೇಲ್ ಕೆಲಸಕ್ಕೆ ಹೋದರೆ, ಮನೆಯಲ್ಲಿರುವ ಮಹಿಳೆಯರು ಬೀಡಿ ಕಟ್ಟುವವರು. ಇದರಿಂದ ಕೃಷಿಕರಿಗೆ ಕೂಲಿಯಾಳುಗಳದ್ದು ಕೂಡಾ ಸಮಸ್ಯೆ. ಆದ್ದರಿಂದ ಭೂ ಒಡೆತನ ಬಿಲ್ಲವರ ಬದುಕಿನ ಆರ್ಥಿಕ ಉನ್ನತಿಗೆ ನೆರವಾಗಲಿಲ್ಲ.

ಎರಡನೆಯದಾಗಿ ದುರಭ್ಯಾಸ. ಭೂಸುಧಾರಣೆಯು ಬಂಟ, ಬ್ರಾಹ್ಮಣ, ಕೊಂಕಣಿಗಳಲ್ಲಿ ಮೂಡಿಸಿದ ಅಸುರಕ್ಷತೆ ಅವರನ್ನು ಬದುಕಿಗೆ ಪರ್ಯಾಯ ದಾರಿ ಹುಡುಕುವಂತೆ ಮಾಡಿತು. ಭೂ ಒಡೆತನ ಬಿಲ್ಲವರ ಬದುಕಿಗೆ ಕೊಟ್ಟ ಸುರಕ್ಷತೆಯ ಭಾವ ಅವರನ್ನು ಮಹತ್ವಾಕಾಂಕ್ಷಿಗಳನ್ನಾಗಿ ಇನ್ನಷ್ಟು ಶ್ರಮಜೀವಿಗಳನ್ನಾಗಿ ಮಾಡಬೇಕಾಗಿತ್ತು. ಆದರೆ ಯಾವ ಹೋರಾಟ, ಚಳವಳಿ ಇಲ್ಲದೆ ಅನಾಯಾಸವಾಗಿ ಸಿಕ್ಕ ಪುಕ್ಕಟೆ ಭೂಮಿ ಅವರನ್ನು ಸೋಮಾರಿಗಳಾಗಿ, ಬೇಜವಾಬ್ದಾರಿಗಳನ್ನಾಗಿ ಮಾಡಿತು. ಬಿಲ್ಲವ ಕುಟುಂಬದ ಹಿರಿಯರು ಭೂ ಒಡೆಯರಾದ ನಂತರ, ಗೇಣಿ ಕಟ್ಟುವ ಜವಾಬ್ದಾರಿ ಇಲ್ಲದೆ ನಿರಾಳರಾದರು, ದುರಭ್ಯಾಸಗಳ ದಾಸರಾದರು. ಕೋಳಿ ಅಂಕ, ಜೂಜಾಟ, ಕುಡಿತಕ್ಕಾಗಿ ದುಡಿದದ್ದನ್ನೆಲ್ಲಾ ಖಾಲಿ ಮಾಡಿ ಸಾಲದ ಸುಳಿಗೆ ಸಿಕ್ಕಿ ಇನ್ನಷ್ಟು ಬಡವರಾದರು.

ಕೃಷಿಕರಾಗಿದ್ದ ಬಿಲ್ಲವರ ಪ್ರಧಾನ ವೃತ್ತಿ ಮೂರ್ತೆಗಾರಿಕೆ ಎಂದೂ ಆಗಿರಲಿಲ್ಲ, ಅದೊಂದು ಉಪವೃತ್ತಿಯಾಗಿತ್ತು. ಬಿಲ್ಲವರೆಲ್ಲರೂ ಶೇಂದಿ ತೆಗೆಯುವವರಾಗಿರಲಿಲ್ಲ, ಆದರೆ ಶೇಂದಿ ತೆಗೆಯುವವರೆಲ್ಲರೂ ಬಿಲ್ಲವರಾಗಿದ್ದರು. ಇದಲ್ಲದೆ ಬಹುತೇಕ ಶೇಂದಿ ಅಂಗಡಿಗಳ ಗುತ್ತಿಗೆದಾರರು ಬಿಲ್ಲವರೇ ಆಗಿದ್ದರು. ಯಾವಾಗ ಕೇವಲ ಕೃಷಿಯಿಂದ ಮಾತ್ರ ಕುಟುಂಬ ಪೋಷಣೆ ಸಾಧ್ಯ ಇಲ್ಲದಂತಹ ಪರಿಸ್ಥಿತಿಯಲ್ಲಿ ಹೆಚ್ಚಿನವರು ಈ ಉಪವೃತ್ತಿಯನ್ನೇ ಹೆಚ್ಚು ಅವಲಂಬಿಸತೊಡಗಿರಬಹುದು. ಈ ವೃತ್ತಿಯಿಂದಾಗಿ ಸಾಮಾಜಿಕ ಶ್ರೇಣಿಯಲ್ಲಿ ಅವರು ಕೆಳಗೆ ತಳ್ಳಲ್ಪಟ್ಟರು.

 ಜಾತಿ ಮೂಲದ ಅಸಮಾನತೆ, ಅಸ್ಪಶ್ಯತೆ, ಅನ್ಯಾಯಗಳ ವಿರುದ್ಧ ಬಹಳಷ್ಟು ಬಿಲ್ಲವ ವಿದ್ಯಾವಂತ ಯುವಕರು ಪ್ರತಿರೋಧದ ದನಿ ಎತ್ತುತ್ತಿದ್ದ ಕಾಲದಲ್ಲಿಯೇ ಬಿಲ್ಲವರಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ಮೂಡತೊಡಗಿದ್ದು. ಆಗಲೇ ಕ್ರಿಶ್ಚಿಯನ್ ಮಿಷನರಿಗಳು ದಕ್ಷಿಣ ಕನ್ನಡ ಪ್ರವೇಶಿಸಿದ್ದು. ಆ ಅವಧಿಯಲ್ಲಿ ಸಾವಿರಾರು ಬಿಲ್ಲವರು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿದ್ದರು. ಇದನ್ನು ತಡೆಯಲಿಕ್ಕಾಗಿಯೇ ಬಿಲ್ಲವ ನಾಯಕರು ಬ್ರಹ್ಮಸಮಾಜ ಸ್ಥಾಪಿಸಿದ್ದರು.

1869ರಲ್ಲಿಯೇ ಬೃಹತ್ ಬಿಲ್ಲವ ಸಮ್ಮೇಳನ ಮಂಗಳೂರಿನಲ್ಲಿ ನಡೆದಿತ್ತು. ಸುಮಾರು 5000 ಮಂದಿ ಸೇರಿದ್ದ ಆ ಸಮ್ಮೇಳನದಲ್ಲಿ ಕೋಲ್ಕತಾ ಬ್ರಹ್ಮಸಮಾಜದ ನಾಯಕರು ಆಗಮಿಸಿದ್ದರು. ಅವರ ಪ್ರೇರಣೆಯಿಂದ 1870ರಲ್ಲಿಯೇ ಬಿಲ್ಲವ ನಾಯಕರಿಂದಲೇ ಬ್ರಹ್ಮಸಮಾಜದ ಮಂಗಳೂರು ಕೇಂದ್ರ ಸ್ಥಾಪನೆಯಾಗಿತ್ತು. ಇದು ಕ್ರೈಸ್ತ ಧರ್ಮಕ್ಕೆ ಆಗುತ್ತಿರುವ ಮತಾಂತರದ ವಿರುದ್ಧ ಮಾತ್ರವಲ್ಲ, ಹಿಂದೂ ಧರ್ಮದ ಹೆಸರಲ್ಲಿ ನಡೆಯುತ್ತಿದ್ದ ಅಸ್ಪಶ್ಯತೆ, ಜಾತೀಯತೆ, ಅಂಧಶ್ರದ್ಧೆಗಳ ವಿರುದ್ಧದ ಬಿಲ್ಲವರ ಮೊದಲ ಪ್ರತಿಭಟನೆಯಾಗಿತ್ತು. ಇದೇ ಸಮಯದಲ್ಲಿ ಕೇರಳದಲ್ಲಿ ನಾರಾಯಣ ಗುರುಗಳ ನೇತೃತ್ವದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಳವಳಿ ಪ್ರಾರಂಭವಾಗಿತ್ತು.

ಕೇರಳದಲ್ಲಿರುವ ಈಳವರು ನೂರು ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಬಿಲ್ಲವರಿಗಿಂತ ನಿಕೃಷ್ಟ ಸ್ಥಿತಿಯಲ್ಲಿದ್ದರು. ಬಡತನ, ಜಾತೀಯತೆ, ಅನಕ್ಷರತೆ ಅಂಧಶ್ರದ್ಧೆಗಳಿಂದಾಗಿ ಅವರು ನೆಲಹಿಡಿದಿದ್ದರು. ಆದರೆ ನಾರಾಯಣ ಗುರು ಅವರ ಚಳವಳಿ ಈಳವರ ಬದುಕಿನ ಚಿತ್ರವನ್ನೇ ಬದಲಿಸಿತು. ಗುರುಗಳಿಗೆ ದೇವಸ್ಥಾನ ಸ್ಥಾಪನೆ ಸಾಮಾಜಿಕ ಚಳವಳಿಯ ಭಾಗವಾಗಿತ್ತು.

ಅವರು ಕೇರಳದಲ್ಲಿ ದೇವಸ್ಥಾನಗಳನ್ನು ಮಾತ್ರವಲ್ಲ, ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಕೇಂದ್ರದ ಮೂಲಕ (ಎಸ್‌ಎನ್‌ಡಿಪಿ) ರಾಜ್ಯದಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳು, ಉಚಿತ ವಿದ್ಯಾರ್ಥಿನಿಲಯ, ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರು. ಗುರುಗಳು ಜೀವಂತವಿದ್ದಾಗಲೇ ಅಲ್ಲಿ ಕೈಗಾರಿಕಾ ಸಮ್ಮೇಳನಗಳನ್ನು ನಡೆಸಿದ್ದರು. ಮದ್ಯ ಮಾಡದಂತೆ, ಮಾರದಂತೆ, ಕುಡಿಯ ದಂತೆ ಕರೆ ನೀಡಿ ಶೇಂದಿ ತೆಗೆಯುವ ವೃತ್ತಿಯನ್ನೇ ಕೈಬಿಡುವಂತೆ ಮಾಡಿದರು ಜೊತೆಗೆ ಪರ್ಯಾಯ ವೃತ್ತಿಯಾಗಿ ನಾರಿನ ಉದ್ಯಮಕ್ಕೆ ಪ್ರೋತ್ಸಾಹ ನೀಡಿದರು. ಭೂತಾರಾಧನೆಯೂ ಸೇರಿದಂತೆ ಹಲವಾರು ಬಗೆಯ ಅಂಧಶ್ರದ್ಧೆ, ಮೂಢನಂಬಿಕೆಗಳ ವಿರುದ್ಧ ಸಮರವನ್ನೇ ಸಾರಿದ್ದರು. ಪೂಜಾ ವಿಧಾನಗಳು ಮತ್ತು ವಿವಾಹಗಳನ್ನು ಸರಳಗೊಳಿಸಿದ್ದರು.

ಕೇರಳದಲ್ಲಿ ನಾರಾಯಣ ಗುರು ಚಳವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್‌ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸ ಅಲ್ಲಿ ನಡೆಯಿತು.

ಈ ಖ್ಯಾತಿಯ ಹಿನ್ನೆಲೆಯಲ್ಲಿಯೇ ಮಂಗಳೂರಿನ ಬಿಲ್ಲವ ವರ್ತಕರಾದ ಕೊರಗಪ್ಪನವರು ಕೇರಳದ ಕಣ್ಣಾನೂರಿಗೆ ನಾರಾಯಣ ಗುರುಗಳನ್ನು ಭೇಟಿಯಾಗಿ ಮಂಗಳೂರಿಗೆ ಆಹ್ವಾನಿಸಿದರು. 1912ರಲ್ಲಿ ನಾರಾಯಣ ಗುರುಗಳು ಕುದ್ರೋಳಿಗೆ ಬಂದು ಗೋಕರ್ಣನಾಥೇಶ್ವರ ದೇವಾಲಯ ಸ್ಥಾಪಿಸಿದರು. ಈ ಕೊರಗಪ್ಪನವರ ಹಿನ್ನೆಲೆ ಆ ಕಾಲದಲ್ಲಿದ್ದ ಕೋಮು ಸೌಹಾರ್ದಕ್ಕೆ ಒಂದು ಉದಾಹರಣೆ. ಕೊರಗಪ್ಪನವರು ಸಿ.ಅಬ್ದುಲ್ ರಹಿಮಾನ್ ಎಂಬವರ ಜೊತೆಯಲ್ಲಿ ಪಾಲುದಾರಿಕೆಯಲ್ಲಿ ಸಿ.ಅಬ್ದುಲ್ ರಹಿಮಾನ್ ಆ್ಯಂಡ್ ಕೊರಗಪ್ಪ ಕಂಪೆನಿ ಎಂಬ ವ್ಯಾಪಾರ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಒಣಮೀನಿನ ರಫ್ತು ಮಾಡುತ್ತಿದ್ದರು. ಈ ಹಿನ್ನೆಲೆಯಿಂದ ನೋಡಿದರೆ ಗೋಕರ್ಣನಾಥೇಶ್ವರ ದೇವಸ್ಥಾನ ಸ್ಥಾಪನೆಯಲ್ಲಿ ಮುಸ್ಲಿಮ್ ಮತ್ತು ಮೊಗವೀರರ ಪರೋಕ್ಷ ಪಾತ್ರ ಇದೆ.

ಬಿಲ್ಲವರ ಸುಧಾರಣೆಗೆ ಇನ್ನೊಂದು ಅವಕಾಶ ನಾರಾಯಣ ಗುರುಗಳ ಮೂಲಕ ಒದಗಿ ಬಂದಿತ್ತು. ಕೋಮುವಾದವನ್ನು ಎದುರಿಸಲು ನಾರಾಯಣ ಗುರುಗಳ ಚಿಂತನೆ ಹೇಳಿ ಮಾಡಿಸಿದ ಅಸ್ತ್ರ. ಆದರೆ ಗುರುಗಳು ಬಂದು ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರೂ ಅವರ ಚಿಂತನೆಗಳು ಬಿಲ್ಲವರ ಬದುಕಿನೊಳಗೆ ಅಂದಿನಿಂದ ಇಂದಿನ ವರೆಗೆ ಇಳಿಯಲೇ ಇಲ್ಲ. ಕೇರಳದ ಈಳವರಂತೆ ದಕ್ಷಿಣ ಕನ್ನಡದ ಈಳವರು ನಾರಾಯಾಣ ಗುರುಗಳ ಚಿಂತನೆಯ ಮೂಲಕ ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದರೆ ಬಹುಶಃ ದಕ್ಷಿಣ ಕನ್ನಡ ಇಂದಿನಂತೆ ಕೋಮುವಾದದ ಪ್ರಯೋಗಶಾಲೆ ಖಂಡಿತ ಆಗುತ್ತಿರಲಿಲ್ಲ.

ಬಂಟರು, ಬ್ರಾಹ್ಮಣರು, ಕೊಂಕಣಿಗಳು, ಜೈನರು ಇಂದು ಸಂಘ ಪರಿವಾರದ ಜೊತೆಗೆ ಇಲ್ಲವೆ ಬಿಜೆಪಿ ಜೊತೆ ಸೇರಿಕೊಂಡರೆ ಅವರಿಗೆ ಸಮರ್ಥನೆಗಳಿವೆ. ಅವರು ಅರಸು ಸರಕಾರದ ಭೂಸುಧಾರಣಾ ಕಾಯ್ದೆಯಿಂದ ಭೂಮಿ ಕಳೆದುಕೊಂಡವರು, ಬಿಲ್ಲವ ರಾಜಕೀಯ ನಾಯಕರಿಂದಾಗಿ ಅವರು ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಂಡವರು. ಕಾಂಗ್ರೆಸ್ ಪಕ್ಷವನ್ನು ದ್ವೇಷಿಸಲು ಈ ಕಾರಣಗಳು ಸಾಕು. ಆದರೆ ಬಿಲ್ಲವರಿಗೆ ಅಂತಹ ಕಾರಣಗಳೇ ಇಲ್ಲ. ಬಿಲ್ಲವರು ಉಳುತ್ತಿದ್ದ ಭೂಮಿಯ ಒಡೆಯರಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆದದ್ದು ಕಾಂಗ್ರೆಸ್ ಪಕ್ಷದಿಂದ, ಇವರು ತಮ್ಮ ಗುರುವೆಂದು ಸ್ವೀಕರಿಸಿದ್ದ ನಾರಾಯಣ ಗುರುಗಳ ಚಿಂತನೆಯ ಪ್ರತಿಯೊಂದು ಅಕ್ಷರ, ಸಂಘ ಪರಿವಾರ ಪ್ರತಿಪಾದಿಸುತ್ತಿರುವ ಪುರೋಹಿತಶಾಹಿ ವ್ಯವಸ್ಥೆ ಮತ್ತು ಕೋಮುವಾದದ ವಿರುದ್ಧವಾಗಿರುವಂತಹದ್ದು.

ಹೀಗಿದ್ದರೂ ಬಿಲ್ಲವರು ಕೋಮುವಾದದ ಕಾಲಾಳುಗಳಾದದ್ದು ಹೇಗೆ? ಇದಕ್ಕೆ ಮುಖ್ಯ ಕಾರಣ ಬಿಲ್ಲವರ ನಾಯಕತ್ವ. ಬಿಲ್ಲವ ನಾಯಕರಾಗಿದ್ದ ಕೊರಗಪ್ಪನವರು, ಬಂಟರ ನಾಯಕರಾದ ಎ.ಬಿ.ಶೆಟ್ಟಿಯವರಿಗಿಂತ ಹಿರಿಯರಾದರೂ ಸಮಕಾಲೀನರು,ಇಬ್ಬರೂ ಸ್ನೇಹಿತರಂತೆ. ಕೊರಗಪ್ಪನವರು ನಾರಾಯಣ ಗುರುಗಳನ್ನು ಕರೆತಂದು ಕುದ್ರೋಳಿ ದೇವಸ್ಥಾನ ಸ್ಥಾಪಿಸಿದರು, ಎ.ಬಿ.ಶೆಟ್ಟಿಯವರು ಬಂಟ ವಿದ್ಯಾರ್ಥಿಗಳಿಗಾಗಿ ಬಂಟ್ಸ್ ಹಾಸ್ಟೆಲ್ ಪ್ರಾರಂಭಿಸಿದರು, ವಿಜಯ ಬ್ಯಾಂಕ್ ಸ್ಥಾಪಿಸಿದರು.

ಬಿಲ್ಲವ ನಾಯಕರ ಆದ್ಯತೆ ನೂರು ವರ್ಷಗಳ ನಂತರವೂ ಬದಲಾಗಿಲ್ಲ. ಸುಮಾರು ನಾಲ್ಕು ದಶಕಗಳ ಕಾಲ ಬಿಲ್ಲವ ಸಮಾಜದ ಏಕಮೇವಾದ್ವಿತೀಯ ನಾಯಕರಾಗಿ ಮೆರೆದ ಬಿ.ಜನಾರ್ದನ ಪೂಜಾರಿಯವರ ಆದ್ಯತೆಯೂ ನಾರಾಯಣ ಗುರುಗಳು ಹೇಳಿದ್ದ ವಿದ್ಯೆ-ಉದ್ಯೋಗ ಆಗಿರಲಿಲ್ಲ. ಈ ಅಮಾಯಕ ಯುವಕರಿಗೆ ಸರಿ-ತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದವರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆ ತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟರು. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ

ಇಂದಿಗೂ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಇಲ್ಲವೆ ಇಂಜಿನಿಯರ್ ಕಾಲೇಜು ಇಲ್ಲ. ಒಂದೇ ಒಂದು ಹಾಸ್ಟೆಲ್ ಇಲ್ಲ. ಬಿಲ್ಲವ ಸಮಾಜದಲ್ಲಿ ಶ್ರೀಮಂತರಿಗೆ, ಕೊಡುಗೈದಾನಿಗಳಿಗೆ ಕೊರತೆ ಇಲ್ಲ. ಅವರನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳುವ ನಾಯಕತ್ವ ಇಲ್ಲ. ಬಂಟರು ದೇವಸ್ಥಾನ ಕಟ್ಟಲಿಲ್ಲ, ಮೆಡಿಕಲ್, ಇಂಜಿನಿಯರ್ ಕಾಲೇಜುಗಳು ಸೇರಿದಂತೆ ಸಾಲುಸಾಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಕೂಡಾ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳ ಸ್ಥಾಪನೆಯಲ್ಲಿ ಹಿಂದೆ ಬಿದ್ದಿಲ್ಲ. ಹಾಗೆ ನೋಡಿದರೆ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಸಂದೇಶವನ್ನು ಪಾಲಿಸಿಕೊಂಡು ಬಂದವರು ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಲ್ಲ, ಅದು ಬಂಟ, ಬ್ಯಾರಿ, ಕ್ರಿಶ್ಚಿಯನ್ ಸಮುದಾಯ.

ಇಂದಿನ ಜಾತಿ ಆಧಾರಿತ ರಾಜಕೀಯದಲ್ಲಿ ಜನನಾಯಕ ರಾಗಿ ಬೆಳೆಯಲು ಜನಾರ್ದನ ಪೂಜಾರಿಯವರಿಗೆ ಉಳಿದವರಿಗಿಂತ ಹೆಚ್ಚು ಅವಕಾಶಗಳಿದ್ದವು. ಇದಕ್ಕೆ ಚುನಾವಣೆ ಯಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಸಂಖ್ಯೆಯಲ್ಲಿ ಅವರ ಜಾತಿಗೆ ಸೇರಿರುವ ಬಿಲ್ಲವರಿರುವುದು ಕಾರಣ. ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕರು, ಸರಳಜೀವಿಗಳು ಮತ್ತು ಶ್ರಮಜೀವಿಗಳು. ಕೈ, ಮೈ ಶುದ್ಧ ಇಟ್ಟುಕೊಂಡಿರುವ ಹಳೆತಲೆಮಾರಿನ ಈ ರಾಜಕಾರಣಿಗೆ ಸಮಕಾಲೀನ ರಾಜಕೀಯ ಸಾಮಾಜಿಕ ಬದಲಾವಣೆಯನ್ನು ಗ್ರಹಿಸಲಾಗಿಲ್ಲ. ಅದನ್ನು ಗ್ರಹಿಸುವ ಶಕ್ತಿಯೂ ಇಲ್ಲ, ನಿವೃತ್ತಿಯಾಗುವ ದೊಡ್ಡ ಮನಸ್ಸೂ ಇಲ್ಲ. ಯುವ ನಾಯಕರನ್ನು ಬೆಳೆಸುವ ಔದಾರ್ಯ, ದೂರದೃಷ್ಟಿ ಎರಡೂ ಇಲ್ಲ.

ಕೋಮುವಾದ ಎನ್ನುವುದು ಒಂದು ಸಿದ್ಧಾಂತ, ಅದನ್ನು ಜಾತ್ಯತೀತತೆಯ ಸಿದ್ಧಾಂತದ ಮೂಲಕ ಎದುರಿಸಬೇಕು. ಜನಾರ್ದನ ಪೂಜಾರಿಯವರು ರಾಜಕೀಯವನ್ನು ಸೈದ್ಧಾಂತಿಕ ಹೋರಾಟ ಎಂದು ತಿಳಿದುಕೊಂಡೇ ಇಲ್ಲ. ಉದಾಹರಣೆಗೆ ಕೋಮುವಾದವನ್ನು ಎದುರಿಸಲು ಪೂಜಾರಿ ಕೈಗೆತ್ತಿಕೊಂಡದ್ದು ಕುದ್ರೋಳಿ ದೇವಸ್ಥಾನದ ನವೀಕರಣವನ್ನು. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಸ್ಥಾನವನ್ನು ನವೀಕರಿಸಿ ವರ್ಣಾಶ್ರಮ ವ್ಯವಸ್ಥೆಯನ್ನು ಚಾಚುತಪ್ಪದೆ ಪಾಲಿಸುವ ಶೃಂಗೇರಿ ಪೀಠದ ಸ್ವಾಮಿಗಳನ್ನುಕರೆತಂದು ಉದ್ಘಾಟಿಸಿದರು.

ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಪರ್ಯಾಸವೆಂದರೆ, ಆಚರಣೆಯಲ್ಲಿ ಬಿಲ್ಲವ ನಾಯಕರ ಪ್ರಯತ್ನವೆಲ್ಲ ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿಯೇ ನಡೆಯುತ್ತಾ ಬಂದಿರುವುದು. ಗುರುಗಳು ಶೇಂದಿ ತೆಗೆಯುವುದನ್ನು ನಿಷೇಧಿಸಿದರು, ದಕ್ಷಿಣಕನ್ನಡದ ಬಿಲ್ಲವರು ಸರಕಾರ ಜೊತೆ ಹೋರಾಡಿ, ರಾಜ್ಯದಾದ್ಯಂತ ಮೂರ್ತೆಗಾರಿಕೆ ಇದ್ದ ನಿಷೇಧವನ್ನು ಜಿಲ್ಲೆಯಲ್ಲಿ ಸಡಿಲಿಸುವಂತೆ ಮಾಡಿದರು. ನಾರಾಯಣ ಗುರು ಸರಳ ಪೂಜಾ ವಿಧಾನವನ್ನು (ಶಿವಗಿರಿಗೆ ಹೋಗಿ ನೋಡಿ) ಆಚರಣೆಗೆ ತಂದರು,ವೈದಿಕರ ಬದಲಿಗೆ ಶೂದ್ರ ಅರ್ಚಕರನ್ನು ನೇಮಿಸಿದರು. ಗುರುಗಳೇ ಸ್ಥಾಪಿಸಿದ್ದ ಸರಳ ಕುದ್ರೋಳಿ ಗೋಕರ್ಣ ನಾಥೇಶ್ವರ ದೇವಾಲಯವನ್ನು ನವೀಕರಿಸಿ ಸನ್ಮಾನ್ಯ ಜನಾರ್ದನ ಪೂಜಾರಿಗಳು ಭೂಮಂಡಲದಲ್ಲಿದ್ದ ಎಲ್ಲ ದೇವರುಗಳನ್ನು ತಂದು ಪ್ರತಿಷ್ಠಾಪಿಸಿ ವೈಭವಪೇತ ಪೂಜೆ-ಉತ್ಸವಗಳನ್ನು ಮಾಡಲು ಶುರು ಮಾಡಿದರು. ಗುರುಗಳು ಸರಳ ವಿವಾಹಕ್ಕೆ ಸಂಹಿತೆಯನ್ನೇ ರಚಿಸಿದ್ದರು, ದಕ್ಷಿಣ ಕನ್ನಡದಲ್ಲಿ ಇಂದು ವರದಕ್ಷಿಣೆ ಮತ್ತು ಅದ್ಧೂರಿ ಮದುವೆಯ ಆರ್ಥಿಕ ಭಾರವನ್ನು ಹೊರಲಾಗದೆ ಹೆಣ್ಣು ಹೆತ್ತವರು ಗೋಳಾಡುತ್ತಿದ್ದಾರೆ. ಆದರೆ ಕುದ್ರೋಳಿ ದೇವಸ್ಥಾನ ದೊಳಗೆ ಲಕ್ಷಾಂತರ ಬಾಡಿಗೆಯ ವಿವಾಹ ಮಂಟಪ ನಿರ್ಮಿಸಿ ಅದ್ಧೂರಿ ಮದುವೆಯನ್ನು ಅನಿವಾರ್ಯ ಮಾಡಲಾಗಿದೆ. ದಕ್ಷಿಣ ಕನ್ನಡದ ನೂರಾರು ಬಿಲ್ಲವ/ಗುರು ಭವನದಲ್ಲಿ ನಾರಾಯಣ ಗುರುಗಳು ಕಲ್ಲಿನ ಮೂರ್ತಿಗಳಾಗಿದ್ದಾರೆ.

ಕೇರಳದಲ್ಲಿ ನಾರಾಯಣ ಗುರು ಚಳವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸ ಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು. ಎಲ್ಲಕ್ಕಿಂತಲೂ ಮುಖ್ಯವಾಗಿ ಬಾಬರಿ ಮಸೀದಿ ಧ್ವಂಸದ ನಂತರ ಇಡೀ ದೇಶ ಕೋಮುದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿದರೂ ಶೇ.25ರಷ್ಟು ಮುಸ್ಲಿಮ್ ಜನಸಂಖ್ಯೆ ಇರುವ ಕೇರಳ ಶಾಂತವಾಗಿತ್ತು. ಇಂದಿಗೂ ಕೇರಳ ರಾಜ್ಯಕ್ಕೆ ಕೋಮುಶಕ್ತಿಗಳು ಪ್ರವೇಶಿಸಿದಂತೆ ತಡೆದು ನಿಲ್ಲಿಸಿದ್ದು ನಾರಾಯಾಣ ಗುರುಗಳ ಚಿಂತನೆ.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗ ದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಮಂಗಳೂರಿನ ಬೀದಿಯಲ್ಲಿ ನಿಂತು ಕಟ್ಟಡಗಳಿಗೆ ದೃಷ್ಟಿ ಹಾಯಿಸಿದರೆ ಶೆಟ್ಟಿ, ರೈ, ಹೆಗ್ಡೆ, ಶೆಣೈ, ರಾವ್ ಹೆಸರಿನ ವಕೀಲರು, ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳ ನಾಮಫಲಕಗಳು ರಾರಾಜಿಸುತ್ತಿವೆ. ಜಿಲ್ಲೆಯ ಮೂರನೇ ಒಂದರಷ್ಟು ಜನ ಸಂಖ್ಯೆ ಇರುವ ಬಿಲ್ಲವರ ನಾಮಫಲಕಗಳು ನೂರರಲ್ಲಿ ಒಂದೂ ಕಾಣುವುದಿಲ್ಲ. ಬಿಲ್ಲವರಲ್ಲಿ ಎಷ್ಟು ಮಂದಿ ನಟ-ನಟಿಯರು, ಪತ್ರಕರ್ತರು, ಪ್ರಾಧ್ಯಾಪಕರು, ಸರಕಾರಿ ನೌಕರರು ಇದ್ದಾರೆ?

ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.

ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಅಡ್ವೊಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರು ಮಾಡುತ್ತಿದ್ದಾರೆ.

ಈ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ಪ್ರತ್ಯೇಕ ಜಿಲ್ಲೆಯಾದ ದಕ್ಷಿಣ ಕನ್ನಡ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕೀಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು, ಸಾವಿರಾರು ಎಕರೆ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ, ಮಸಿ-ಬೂದಿಯ ಧೂಳು ಹಾರಾಡುತ್ತಿದೆ. ಮುಂಬೈ-ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ, ಈ ನೆಲದಲ್ಲಿಯೇ ಹುಟ್ಟಿಕೊಂಡ ಬ್ಯಾಂಕುಗಳಲ್ಲಿಯೂ ಉದ್ಯೋಗಗಳು ಖೋತಾ ಆಗುತ್ತಿದೆ, ಇರುವ ಉದ್ಯೋಗಕ್ಕೂ ಹೊರ ರಾಜ್ಯಗಳ ಜನ ಲಗ್ಗೆ ಇಟ್ಟಿದ್ದಾರೆ. ಪ್ರತಿಮನೆಯಲ್ಲಿಯೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.

ಹೀಗೆ ಯಾಕಾಯಿತು ಎಂದು ಇನ್ನಷ್ಟು ಬಿಡಿಸಿ ಹೇಳಿದರೆ ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ-ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು? ಬಲಿಪಶುಗಳು ಯಾರು? ಎನ್ನುವುದನ್ನು ಯೋಚಿಸಿ ತೀರ್ಮಾನಕ್ಕೆ ಬರದಿದ್ದರೆ ಸರ್ವನಾಶ ಖಂಡಿತ.

ಕೂಡಿ ಕಟ್ಟಿದ್ದನ್ನು ಒಡೆದು ಮುರಿಯಲಾಗಿದೆ, ಅದನ್ನು ಮರಳಿ ಕಟ್ಟುವ ಪ್ರಯತ್ನ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)