varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಆತ್ಮಗೌರವದ ಪ್ರತೀಕ ವಿಶ್ವ ಚಾಂಪಿಯನ್ ಖಬೀಬ್

ವಾರ್ತಾ ಭಾರತಿ : 30 Dec, 2019
ಹವ್ವಾ ಶಾಹಿದಾ, ಬೋಳಾರ್

ನನ್ನ ತಂದೆ ನನಗೆ ಎಲ್ಲರನ್ನೂ ಪ್ರೀತಿಸಬೇಕು, ಎಲ್ಲರನ್ನೂ ಗೌರವಿಸಬೇಕು ಎಂದು ಕಲಿಸಿದ್ದಾರೆ. ಎಲ್ಲ ಸನ್ನಿವೇಶಗಳಲ್ಲೂ ಸಂಯಮ ಪಾಲಿಸಬೇಕೆಂದು ಕಲಿಸಿದ್ದಾರೆ. ನನಗೆ ಬದುಕಿನಲ್ಲಿ ಅವರೇ ಮಾದರಿ. 2010ರಲ್ಲಿ ನಾನು ವಿಶ್ವ ಚಾಂಪಿಯನ್ ಆಗುವವರೆಗೂ ಬೀದಿ ಬದಿಯ ಹೊಡೆದಾಟಗಳಲ್ಲಿ ತೊಡಗಿದ್ದೆ. ಅದಕ್ಕಾಗಿ ಹಲವಾರು ಬಾರಿ ನನ್ನ ತಂದೆ ನನ್ನನ್ನು ದಂಡಿಸಿದ್ದರು. ಅವರೊಬ್ಬ ವೃತ್ತಿಪರ ಕೋಚ್. ಅವರು ಶಿಸ್ತು, ಸಮಯ ಪಾಲನೆ ಮತ್ತು ಕಠಿಣ ವ್ಯಾಯಾಮಕ್ಕೆ ಅಪಾರ ಮಹತ್ವ ನೀಡುತ್ತಿದ್ದರು.

ಆತನಿಗೆ ಸೋಲುವ ಅನುಭವ ತೀರಾ ಕಡಿಮೆ. ಹಲವು ಘಟಾನು ಘಟಿಗಳ ವಿರುದ್ಧ ಪದೇ ಪದೇ ಗೆದ್ದಿರುವುದೇ ಅವನ ಇತ್ತೀಚಿನ ಅನುಭವ. ಇಷ್ಟಿದ್ದೂ ಅವನು ಎಲ್ಲೂ ಅಹಂಕಾರದ ಮಾತುಗಳನ್ನಾಡಿಲ್ಲ. ಪ್ರತಿ ಸಲ ಗೆದ್ದಾಗಲೂ, ಆಕಾಶದೆಡೆಗೆ ಬೆರಳು ತೋರುತ್ತಾ, ಪ್ರಶಂಸೆ ನನಗಲ್ಲ ಆ ದೇವರಿಗೆ ಸಲ್ಲಲಿ, ಎನ್ನುತ್ತಾ ತನ್ನ ಗೆಲುವಿಗಾಗಿ ದೇವರನ್ನು ಸ್ಮರಿಸುತ್ತ, ದೇವರನ್ನು ಸ್ತುತಿಸುತ್ತಾ ವಿನಯ ಮೆರೆದಿದ್ದಾನೆ. ಪ್ರತಿಸಲವೂ ಪಂದ್ಯ ಗೆದ್ದು, ರೆಫ್ರೀಗಳು ವಿಜಯ ಘೋಷಿಸುವ ಮುನ್ನವೇ, ರಿಂಗ್‌ನೊಳಗೆ ಅಲ್ ಹಮ್ದುಲಿಲ್ಲಾಹ್ (ಪ್ರಶಂಸೆ ಎಲ್ಲವೂ ಅಲ್ಲಾಹನಿಗೆ) ಎಂದು ಘೋಷಿಸುತ್ತಾ, ಸಾಷ್ಟಾಂಗವೆರಗಿ ದೇವರಿಗೆ ಕೃತಜ್ಞತೆ ತೋರುತ್ತಾನೆ. 

ಸದ್ಯ ‘ಖಬೀಬ್’ ಎಂದೇ ಜಗತ್ತಿನೆಲ್ಲೆಡೆ ಜನಪ್ರಿಯನಾಗಿರುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ರಂಗದ ವಿವಾದಾತೀತ ವಿಶ್ವ ಚಾಂಪಿಯನ್ ಖಬೀಬ್, ಮೂಲತಃ ರಶ್ಯದ ಸ್ವಾಯತ್ತ ಪ್ರಾಂತ ದಾಗಿಸ್ತಾನ್‌ಗೆ ಸೇರಿದವನು. ದಾಗಿಸ್ತಾನ್‌ನ ರಾಜಧಾನಿ ಮಖಾಚ್ಕಾಲದಲ್ಲಿ ಬೆಳೆದವನು. ಖಬೀಬ್‌ನ ಅಧಿಕೃತ ಹೆಸರು - ಖಬೀಬ್ ಅಬ್ದುಲ್ ಮನಾಪೋವಿಚ್ ನೂರ್ ಮೊಗಮದೊವ್. ಅದೆಂತಹ ಹೆಸರು? ಎಂದು ಅಚ್ಚರಿಪಡಬೇಡಿ. ಅರಬಿ ಭಾಷೆಯ ಹೆಸರುಗಳು ರಶ್ಯನ್ ಭಾಷೆಗೆ ಬರುವಾಗ ಹಲವು ಬಗೆಯಲ್ಲಿ ರೂಪಾಂತ ರಗೊಳ್ಳುತ್ತವೆ. ಖಬೀಬ್ ಅಬ್ದುಲ್ ಮುನಾಫ್ ನೂರ್ ಮುಹಮ್ಮದ್ - ಇದು ಖಬೀಬ್‌ನ ಹೆಸರಿನ ಮೂಲ ಅರಬಿ ರೂಪ.ಆತನ ಅಭಿಮಾನಿಗಳು ಆತನನ್ನು ಈಗಲ್ (ಹದ್ದು) ಎಂದು ಕರೆಯುತ್ತಾರೆ.

31ರ ಹರೆಯದ ಖಬೀಬ್ ದೊಡ್ಡ ದಢೂತಿ ವ್ಯಕ್ತಿ ಯೇನೂ ಅಲ್ಲ. ಮೇಲುನೋಟಕ್ಕೆ ತೀರಾ ಸಾಮಾನ್ಯನಾಗಿ, ಸಣಕಲನಾಗಿ ಕಾಣಿಸುತ್ತಾನೆ. 5’9’’ ಎತ್ತರದ ಖಬೀಬ್‌ನ ದೇಹತೂಕ ಕೇವಲ 70ಕಿಲೋ. ಆದರೆ ಅವನು MMA ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ರೆಸ್ಲಿಂಗ್, ಸಾಂಬೋ, ಜೂಡೊ, ಕಿಕ್ ಬಾಕ್ಸಿಂಗ್, ಫ್ರೀ ಸ್ಟೈಲ್ ರೆಸ್ಲಿಂಗ್ ಹೀಗೆ ಹಲವು ಬಗೆಯ ಮಾರ್ಷಲ್ ಆರ್ಟ್‌ಗಳಲ್ಲಿ ಅಸಾಮಾನ್ಯ ಪರಿಣತಿ ಪಡೆದವನು. ಜೂಡೊದಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಸಾಂಬೋ ವಿಭಾಗದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದಾನೆ. (ಮಿಕ್ಸೆಡ್ ಮಾರ್ಷಲ್ ಆಟ್ಸ್‌ರ್ ) ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ 28 ಪಂದ್ಯಗಳಲ್ಲಿ ಪಾಲ್ಗೊಂಡು ಒಂದರಲ್ಲೂ ಸೋಲದೆ ಎಲ್ಲ ಪಂದ್ಯಗಳಲ್ಲೂ ವಿಜಯಿಯಾಗಿರುವುದು ಖಬೀಬ್‌ನ ಅನನ್ಯ ಸಾಧನೆ. ಅಮೆರಿಕದ ಪ್ರತಿಷ್ಠಿತ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ (UFC) ಸಂಸ್ಥೆಯು ಆಯೋಜಿಸುವ MMA ಲೈಟ್ ವೇಯ್ಟ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಪದಕ ಗಳಿಸಿ ಅದನ್ನು ಆ ಕ್ಷೇತ್ರದ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ಉಳಿಸಿಕೊಂಡವನೆಂಬ ದಾಖಲೆ ಕೂಡಾ ಖಬೀಬ್ ಹೆಸರಲ್ಲಿದೆ.

ಖಬೀಬ್ ತನ್ನ ವೃತ್ತಿಪರ ನೈಪುಣ್ಯದ ಜೊತೆ ಬೇರೆ ಅನೇಕ ಕಾರಣಗಳಿಗಾಗಿಯೂ ಜಗತ್ತಿನ ಗಮನ ಸೆಳೆದಿದ್ದಾನೆ. ಆತ ಎಂದೆಂದೂ ಹೆಂಡ ಮುಟ್ಟದವನು. ನೈಟ್ ಕ್ಲಬ್‌ಗಳ ಹತ್ತಿರ ಕೂಡ ಸುಳಿಯದವನು. ತನ್ನ ಎದುರಾಳಿಗಳು ಎಷ್ಟು ಅಬ್ಬರದ ಬೊಗಳೆ ಮಾತುಗಳನ್ನಾಡಿದರೂ ಅದನ್ನೆಲ್ಲಾ ಕಡೆಗಣಿಸಿ, ಅವರು ಹಾಗೆಲ್ಲ ಬೊಗಳೆ ಬಿಡುವ ಬದಲು ರಿಂಗ್‌ನೊಳಗೆ ಬಂದು ನನ್ನನ್ನು ಎದುರಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿ, ಅವರಿಗೆ ಕೊಡಬೇಕಾದ ಎಲ್ಲ ಉತ್ತರಗಳನ್ನು ನಾನು ರಿಂಗ್‌ನೊಳಗೆ ಕೊಟ್ಟು ಬಿಡುತ್ತೇನೆ ಎಂದು ಸವಾಲು ಹಾಕುವವನು.

ಒಂದು ಅಳಿಸಲಾಗದ ಕಳಂಕ

ಕಳೆದ ವರ್ಷ ಅಕ್ಟೊಬರ್ 6ರಂದು ಅಮೆರಿಕದ ಲಾಸ್ ವೇಗಸ್‌ನಲ್ಲಿ ಜರುಗಿದ ಕೊನರ್ ಮ್ಯಾಕ್ ಗ್ರೆಗೊರ್ ಮತ್ತು ಖಬೀಬ್ ನಡುವಣ ಚಾಂಪಿಯನ್ ಶಿಪ್ ಪಂದ್ಯವು UAF ಇತಿಹಾಸದಲ್ಲೇ ಅತ್ಯಧಿಕ ಚರ್ಚೆಗೊಳಗಾದ, ಅತ್ಯಧಿಕ ವೀಕ್ಷಕರನ್ನು ಆಕರ್ಷಿಸಿದ ಮತ್ತು ಅತ್ಯಧಿಕ ಹಣವನ್ನು ಒಳಗೊಂಡ ಪಂದ್ಯವಾಗಿತ್ತು. ಪಂದ್ಯದ ಫಲಿತಾಂಶದ ಕುರಿತಂತೆ ಜಗತ್ತಿನೆಲ್ಲೆಡೆ ಕ್ರೀಡಾಭಿಮಾನಿಗಳು ಕುತೂಹಲ ತಾಳಿದ್ದರು. ಐರ್‌ಲ್ಯಾಂಡ್‌ನಲ್ಲಿ ಲಕ್ಷಾಂತರ ಭಾವುಕ ಅಭಿಮಾನಿಗಳ ಕಣ್ಮಣಿ ಮ್ಯಾಕ್ ಗ್ರೆಗೊರ್ ಪಂದ್ಯಕ್ಕಿಂತ ಮುಂಚೆ ನಡೆಸಿದ ಕೆಲವು ನಾಟಕೀಯ ಚಟುವಟಿಕೆಗಳು ಮತ್ತು ಆತನು ನೀಡಿದ ಕೆಲವು ವಿವಾದಾಸ್ಪದ ಹೇಳಿಕೆಗಳು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು.ತನ್ನ ಭಾರೀ ಕುಡುಕತನ, ಬೊಗಳೆಕೋರ ಮಾತುಗಳು, ತುಂಬಾ ಒರಟು ಸ್ವಭಾವ ಮತ್ತು ತನ್ನ ತೀವ್ರ ಹರಿತ ನಾಲಿಗೆಗಾಗಿ ಗುರುತಿಸಲ್ಪಡುವ ಮ್ಯಾಕ್ ಗ್ರೆಗೊರ್ ಕೆಲವು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಖಬೀಬ್‌ನನ್ನು ಪ್ರಚೋದಿಸಲು ಗರಿಷ್ಠ ಪ್ರಯತ್ನಿಸಿದ್ದ. ಪಂದ್ಯಕ್ಕೆ ಕೆಲವು ತಿಂಗಳ ಮುನ್ನ ಮ್ಯಾಕ್ ಗ್ರೆಗೊರ್ ಮತ್ತವನ ತಂಡದವರು ಅಮೆರಿಕದ ಬ್ರೂಕ್ಲಿನ್‌ನಲ್ಲಿ ಖಬೀಬ್ ಮತ್ತವನ ತಂಡದವರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಆಕ್ರಮಣ ನಡೆಸಿ ಅದರ ಗಾಜುಗಳನ್ನು ಒಡೆದಿದ್ದರು. ಘಟನೆಯಲ್ಲಿ ಬಸ್‌ನೊಳಗಿದ್ದ ಕೆಲವರು ಗಾಯಗೊಂಡಿದ್ದರು. ಆ ಸಂಬಂಧ ಮ್ಯಾಕ್ ಗ್ರೆಗೊರ್ ನನ್ನ ಬಂಧಿಸಲಾಗಿತ್ತು ಮತ್ತು ಮೊಕದ್ದಮೆ ಈಗಲೂ ಮುಂದುವರಿದಿದೆ. ಪಂದ್ಯಕ್ಕೆ ಮುನ್ನ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲೂ ಆತ ಖಬೀಬ್‌ನನ್ನು ಅಪಮಾನಿಸುವ ಮಾತುಗಳನ್ನಾಡಿದ್ದ. ಎಲ್ಲರ ಮುಂದೆ ‘ಪ್ರಾಪರ್ ವ್ಹಿಸ್ಕಿ’ ಎಂಬ ತನ್ನದೇ ಖಾಸಗಿ ಬ್ರಾಂಡ್‌ನ ವ್ಹಿಸ್ಕಿ ಸೇವಿಸುವಂತೆ ಮ್ಯಾಕ್ ಗ್ರೋವರ್, ಖಬೀಬ್‌ನನ್ನು ಒತ್ತಾಯಿಸಿದ್ದ. ಖಬೀಬ್ ತಾನು ಮದ್ಯ ಸೇವಿಸುವುದಿಲ್ಲ ಎಂದಾಗ ನೀನು ಹಿಂದುಳಿದ ಹುಚ್ಚ ಎಂದು ನಿಂದಿಸಿದ್ದ ಮ್ಯಾಕ್ ಗ್ರೆಗೊರ್ ಹಲವು ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನೂ ಬಳಸಿದ್ದನು. ಸಾಲದಕ್ಕೆ ಅವನು ನಾನು ಅವನ ತಲೆ ಉರುಳಿಸಲಿದ್ದೇನೆ. ಖಬೀಬ್‌ಗೆ ನನ್ನನ್ನು ಎದುರಿಸುವ ಯಾವ ಅರ್ಹತೆಯೂ ಇಲ್ಲ, ಆತ ತೀರಾ ಕಳಪೆ ಮಟ್ಟದ ಸಣ್ಣ ಫೈಟರ್, ಆತನ ಪದಕಗಳೆಲ್ಲಾ ನಕಲಿ, ಆತ ಒಂದು ನಿಮಿಷದ ಮಟ್ಟಿಗೂ ರಿಂಗ್ ನಲ್ಲಿ ನನ್ನ ಮುಂದೆ ನಿಲ್ಲಲಾರ ಎಂದೆಲ್ಲಾ ಆತ ಟ್ವೀಟ್ ಮಾಡಿದ್ದ. ಆದರೆ ಖಬೀಬ್ ಮಾತ್ರ ಯಾವುದಕ್ಕೂ ಬಗ್ಗಿರಲಿಲ್ಲ. ಆತ ಎಲ್ಲ ಸವಾಲು,ಅಪಮಾನಗಳನ್ನು ಮೌನವಾಗಿ, ಮುಗುಳುನಗುತ್ತಾ ಸ್ವಾಗತಿಸಿದ್ದ. ಪಂದ್ಯದ ದಿನ ಸಮೀಪಿಸುತ್ತಿದ್ದಂತೆ ಮ್ಯಾಕ್ ಗ್ರೆಗೊರ್ ಮತ್ತಾತನ ತಂಡದವರ ಪ್ರಚೋದನೆಗಳು ತಾರಕಕ್ಕೆ ಏರುತ್ತಾ ಹೋದವು. ಖಬೀಬ್ ನನ್ನು ಭಯೋತ್ಪಾದಕ ಎಂದು ಕರೆದು ಆತನ ತಂದೆಯನ್ನು ಅಪಮಾನಿಸುವ ಮಾತುಗಳನ್ನೂ ಮ್ಯಾಕ್ ಗ್ರೋವರ್ ಆಡಿದ್ದ. ಅಕ್ಟೊಬರ್ 6 ರಂದು ಪಂದ್ಯ ಆರಂಭವಾದಾಗಲೂ ಮ್ಯಾಕ್ ಗ್ರೆಗೊರ್, ಆತನ ತಂಡದವರು ಮತ್ತು ಅಭಿಮಾನಿ ಬಳಗದವರು ಖಬೀಬ್ ಮತ್ತವನ ತಂಡವನ್ನು ಛೇಡಿಸುವ ಹಲವು ಘೋಷಣೆಗಳನ್ನು ಕೂಗಿದರು.

ಕೊನೆಗೆ ಪಂದ್ಯ ನಡೆಯಿತು. ಕ್ರೀಡಾಂಗಣದಲ್ಲಿ ಹಾಜರಿದ್ದ ವೀಕ್ಷಕರಲ್ಲಿ ಹೆಚ್ಚಿನವರು ಮ್ಯಾಕ್ ಗ್ರೆಗೊರ್ ನ ಅಭಿಮಾನಿಗಳಾಗಿದ್ದರು. ಆದರೆ ಖಬೀಬ್ ಪ್ರದರ್ಶಿಸಿದ ನಿರ್ವಹಣೆಯು ಎಲ್ಲ ಅಪಮಾನಗಳಿಗೆ ಸೂಕ್ತ ಉತ್ತರವೆಂಬಂತಿತ್ತು. ಪಂದ್ಯದುದ್ದಕ್ಕೂ ತನ್ನ ಮೇಲ್ಮೆ ಮೆರೆದ ಖಬೀಬ್, ನಾಲ್ಕನೇ ಸುತ್ತಿನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆೆದು ಮ್ಯಾಕ್ ಗ್ರೆಗೊರ್ ಕೊರಳನ್ನು ಬಿಗಿ ಹಿಡಿದು ಉಸಿರುಗಟ್ಟಿಸುವ ಮೂಲಕ ಹೀನಾಯ ಸೋಲುಣಿಸಿ ವೀರೋಚಿತ ವಿಜಯ ಸಾಧಿಸಿದ. ಆದರೆ ಈ ಹಿಂದಿನ ಎಲ್ಲ ಪಂದ್ಯಗಳಲ್ಲಿ ಸಂಯಮ ಮತ್ತು ಸಭ್ಯತೆಯ ಮಾದರಿಯಾಗಿದ್ದ ಖಬೀಬ್ ಈ ಬಾರಿ ಆ ರಂಗಗಳಲ್ಲಿ ಸೋತು ಹೋದ. ಮ್ಯಾಕ್ ಗ್ರೆಗೊರ್ ಉಸಿರುಗಟ್ಟಿ ಶರಣಾದೊಡನೆ ತನ್ನ ಎಂದಿನ ವಿನಯ ಮತ್ತು ಸಭ್ಯತೆ ಮೆರೆಯಬೇಕಾಗಿದ್ದ ಖಬೀಬ್ ಅಂದು ರಿಂಗ್ ನ ಹೊರಗೆ ನಿಂತು ತನ್ನನ್ನು ಛೇಡಿಸುತ್ತಿದ್ದ ಮ್ಯಾಕ್ ಗ್ರೆಗೊರ್ ತಂಡದವರ ವಿರುದ್ಧ ಆಕ್ರಮಣಕ್ಕಿಳಿದು ಬಿಟ್ಟ. ಜಗತ್ತೆಲ್ಲಾ ವೀಕ್ಷಿಸುತ್ತಿದ್ದಂತೆ, ಗೂಡಿನಂತಿರುವ ರಿಂಗ್‌ನ ಎತ್ತರದ ಬೇಲಿಯ ಮೇಲಿಂದ ಹಾರಿ ವೀಕ್ಷಕರ ಗ್ಯಾಲರಿಗೆ ಧುಮುಕಿದ ಆಕ್ರೋಶಿತ ಖಬೀಬ್, ಮ್ಯಾಕ್ ಗ್ರೆಗೊರ್ ತಂಡದ ಕೋಚ್ ಮೇಲೆ ಆಕ್ರಮಣ ನಡೆಸಿದ. ಆತನ ತಂಡದ ಇಬ್ಬರು ರಿಂಗ್‌ನೊಳಗೆ ನುಗ್ಗಿ ಮ್ಯಾಕ್ ಗ್ರೆಗೊರ್ ಮೇಲೆ ಹಲ್ಲೆ ನಡೆಸಿದರು. ಈ ನಡೆಯನ್ನು ಎಲ್ಲರೂ ಖಂಡಿಸಿದರು. ಖಬೀಬ್ ತನ್ನ ಎಂದಿನ ಸ್ವಭಾವಕ್ಕೆ ತಕ್ಕಂತೆ, ಸೋತು ಮೂಲೆಯಲ್ಲಿ ಕುಸಿದು ಬಿದ್ದಿದ್ದ ಮ್ಯಾಕ್ ಗ್ರೆಗೊರ್ ನ ಕೈಹಿಡಿದು ಆತನನ್ನು ಮೇಲೆತ್ತಿ ಅಪ್ಪಿ ಹಿಡಿದು ಸಾಂತ್ವನ ಹೇಳಿದ್ದರೆ ಅದು ಕ್ರೀಡೆಯ ಸ್ಫೂರ್ತಿ ಮತ್ತು ಸದ್ಪರಂಪರೆಗೆ ಅನುಗುಣವಾಗಿರುತ್ತಿತ್ತು ಮತ್ತು ಅದರಿಂದ ಖಬೀಬ್ ನ ಗೌರವ ಹಾಗೂ ಜನಪ್ರಿಯತೆ ಕೂಡ ನೂರು ಪಾಲು ಹೆಚ್ಚುತ್ತಿತ್ತು. ಆದರೆ ರೋಷ ಎಂತಹ ಬಲಿಷ್ಠ ಕಲಿಗಳನ್ನೂ ಸೋಲಿಸಿ ಬಿಡುತ್ತದೆ. ಹಲವು ವೀರರ ಮುಂದೆ ಗೆಲುವು ಸಾಧಿಸಿದ್ದ ಖಬೀಬ್ ತನ್ನದೇ ರೋಷದೆದುರು ಸೋತು ಬಿಟ್ಟ. ಪ್ರಸ್ತುತ ರೋಷ ಪ್ರದರ್ಶನಕ್ಕಾಗಿ ಮುಂದಿನ 9 ತಿಂಗಳ ಕಾಲ ಯಾವ ಪಂದ್ಯವನ್ನೂ ಆಡದಂತೆ ಖಬೀಬ್ ಮೇಲೆ ನಿರ್ಬಂಧ ಹೇರಲಾಯಿತು ಮತ್ತು 5 ಲಕ್ಷ ಡಾಲರ್ ದಂಡವನ್ನೂ ವಿಧಿಸಲಾಯಿತು. ಘಟನೆ ನಡೆದ ಮರುದಿನ ತನ್ನ ವರ್ತನೆಗಾಗಿ ಕ್ಷಮೆ ಕೇಳಿದ ಖಬೀಬ್, ನಾನೊಬ್ಬ ಮನುಷ್ಯ. ಮ್ಯಾಕ್ ಗ್ರೆಗೊರ್ ಮತ್ತವನ ತಂಡದವರು ಕೇವಲ ನನ್ನನ್ನು ಅಪಮಾನಿಸಿದ್ದರೆ ನಾನು ಕ್ಷಮಿಸುತ್ತಿದ್ದೆ. ಆದರೆ ಅವರು ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ಹೋದರು. ಅವರು ನನ್ನ ದೇಶ, ನನ್ನ ಧರ್ಮ, ನನ್ನ ಟ್ರೈನರ್, ನನ್ನ ಹೆತ್ತವರು ಮತ್ತು ನನ್ನ ಜನಾಂಗವನ್ನು ಲೇವಡಿ ಮಾಡಿದ್ದು ನನಗೆ ಸಹ್ಯವಾಗಲಿಲ್ಲ. ಆದರೂ ನನ್ನಿಂದ ತಪ್ಪಾಯಿತು ಎಂದು ಒಪ್ಪಿಕೊಳ್ಳುತ್ತಿದ್ದೇನೆ. ನನ್ನ ತಂದೆ ನನಗೆ ಶಿಸ್ತು ಮತ್ತು ಸಂಯಮ ಕಲಿಸಿದ್ದಾರೆ. ಕೋಪವನ್ನು ಸದಾ ನಿಯಂತ್ರಣದಲ್ಲಿಡಬೇಕು ಎಂದು ಅವರು ನನಗೆ ಪದೇ ಪದೇ ಉಪದೇಶಿಸಿದ್ದಾರೆ. ಇದೀಗ ಅವರ ಮುಂದೆ ಹೋಗಲು ನನಗೆ ನಾಚಿಕೆಯಾಗುತ್ತಿದೆ. ಅವರು ನನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ. ಎಂದು ಹೇಳಿದ್ದ. ಒಟ್ಟಿನಲ್ಲಿ ಪ್ರಸ್ತುತ ಘಟನೆಯು ಖಬೀಬ್‌ನ ವೃತ್ತಿ ಜೀವನದ ಚರಿತ್ರೆಯಲ್ಲಿ ಒಂದು ಕಪ್ಪು ಕಳಂಕವಾಗಿ ಸದಾ ಉಳಿಯಲಿದೆ.

9 ತಿಂಗಳ ನಿಷೇಧದ ಅವಧಿ ಮುಗಿದ ಬೆನ್ನಿಗೆ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಖಬೀಬ್ ಮತ್ತು ಅಮೆರಿಕದ ಯುವ ಸಮರ ಕಲೆಯ ಪಟು ಡಸ್ಟಿನ್ ಪೋಲೇಲಮ್ ಮಾಡಿರಿಯರ್ ಮಧ್ಯೆ ನಡೆದ ಪಂದ್ಯದಲ್ಲಿ ಖಬೀಬ್ ಮೂರನೇ ಸುತ್ತಿನಲ್ಲೇ ವಿಜಯ ಸಾಧಿಸಿದ. ಈ ಬಾರಿ ಆತ ಪಂದ್ಯ ಮುಗಿದೊಡನೆ ತನ್ನ ಟೀ ಶರ್ಟ್ ಅನ್ನು ಹರಾಜು ಹಾಕಿ ಅದರಿಂದ ಬಂದ ಒಂದು ಲಕ್ಷ ಡಾಲರ್ ಮೊತ್ತವನ್ನು ತನ್ನ ಪ್ರತಿಸ್ಪರ್ಧಿ ಪೋರಿಯರ್‌ನ ಸೇವಾ ಸಂಸ್ಥೆಗೆ ದಾನವಾಗಿ ಕೊಡುವ ಮೂಲಕ ಮಾನವೀಯತೆ ಹಾಗೂ ಕ್ರೀಡಾ ಸ್ಫೂರ್ತಿಯನ್ನು ಮೆರೆದ.

ಒಬ್ಬ ಕ್ರೀಡಾಳುವಾಗಿ ತನ್ನ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮತ್ತು ತನ್ನ ಶಕ್ತಿ, ಸಾಮರ್ಥ್ಯ, ವೇಗಗಳನ್ನು ಅತ್ಯುತ್ತಮ ಮಟ್ಟದಲ್ಲಿ ಉಳಿಸಿಕೊಳ್ಳಲು ಖಬೀಬ್ ನಿತ್ಯ ಶ್ರಮಿಸುತ್ತಾನೆ. ಸಕಾಲದಲ್ಲಿ ಭೋಜನ, ಸಕಾಲದಲ್ಲಿ ನಿದ್ದೆ ಮತ್ತು ಸಾಕಷ್ಟು ಅಭ್ಯಾಸ ಹಾಗೂ ವ್ಯಾಯಾಮ ಇದು ಆತನ ಸರಳ ಸೂತ್ರ. ಆತ ತನ್ನ ವ್ಯಾಯಾಮಕ್ಕೆ ತುಂಬಾ ಸಂಕೀರ್ಣವಾದ ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಬದಲು ಸರಳವಾದ ಸಾಂಪ್ರದಾಯಿಕ ಉಪಕರಣಗಳನ್ನು ಹಾಗೂ ತಾನಿರುವಲ್ಲಿ ಸುಲಭದಲ್ಲಿ ಲಭ್ಯವಾಗುವ ಸವಲತ್ತುಗಳನ್ನೇ ಬಳಸಿಕೊಳ್ಳುತ್ತಾನೆ. ತನ್ನ ದೇಹ ತೂಕದ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ. ತೂಕ ಸ್ವಲ್ಪ ಹೆಚ್ಚಿದರೂ ಅದನ್ನು ಕಡಿತ ಗೊಳಿಸಲು ಕಠಿಣ ಶ್ರಮ ನಡೆಸುತ್ತಾನೆ.

ಧಾರಾಳ ನೀರು ಕುಡಿಯಬೇಕು, ಆಹಾರದ ವಿಷಯ ದಲ್ಲಿ ತುಂಬಾ ಎಚ್ಚರ ವಹಿಸಬೇಕು, ಕೃತಕ ಆಹಾರಗಳನ್ನು ದೂರವಿಡಬೇಕು. ಹಣ್ಣು ಹಂಪಲು, ಸೊಪ್ಪು ತರಕಾರಿಗಳೇ ಕ್ರೀಡಾಳುಗಳ ಪಾಲಿಗೆ ಅತ್ಯುತ್ತಮ. ಸಕ್ಕರೆ ಮತ್ತು ಉಪ್ಪು ಇವೆರಡರಿಂದಲೂ ದೂರ ಉಳಿಯುತ್ತೇನೆ. ಮಾಂಸವನ್ನು ಅಪರೂಪಕ್ಕೆ ಮಾತ್ರ ಬಳಸುತ್ತೇನೆ - ಇದು ಯುವ ಕ್ರೀಡಾಳುಗಳಿಗೆ ಖಬೀಬ್ ಸೂಚನೆ.

MMA ಪಂದ್ಯಗಳ ಸುತ್ತ ಎದ್ದು ಕಾಣುವ, ದುಡ್ಡೇ ಪ್ರಧಾನ ಎಂಬ ಧೋರಣೆ, ಹಾಗೆಯೇ, ಕೇವಲ ಪ್ರಚಾರಕ್ಕಾಗಿ ಎದುರಾಳಿಗಳನ್ನು ನಿಂದಿಸುವ, ಗೇಲಿ ಮಾಡುವ ಹಾಗೂ ಅವರ ಕುರಿತು ಅಶ್ಲೀಲವಾಗಿ ಮಾತನಾಡುವ ಸಂಸ್ಕೃತಿಯ ಬಗ್ಗೆ ಖಬೀಬ್‌ಗೆ ಜಿಗುಪ್ಸೆ ಇದೆ. ಆತನ ಕೆಲವು ಮಾತುಗಳನ್ನು ಕೇಳಿ:

ನಾನು ದಾಗಿಸ್ತಾನ್ ಪ್ರಾಂತದವನು. ನಮ್ಮಲ್ಲಿ ಜನರು ಗುಡ್ಡಗಾಡುಗಳಲ್ಲಿ ಕೃಷಿ, ತೋಟಗಾರಿಕೆ ಮಾಡಿಕೊಂಡು ಬದುಕುವ ಕಠಿಣ ಶ್ರಮಜೀವಿಗಳು. ಅವರು ತಮ್ಮ ಅಸ್ತಿತ್ವಕ್ಕಾಗಿ ಮಾತ್ರ ಸಂಪಾದಿಸುತ್ತಾರೆ. ಅಲ್ಲಿ ಯಾರೂ ವಿಲಾಸಿ ಜೀವನಕ್ಕಾಗಿ ಸಂಪಾದಿಸುವುದಿಲ್ಲ.

ನನ್ನ ತಂದೆ ನನಗೆ ಎಲ್ಲರನ್ನೂ ಪ್ರೀತಿಸಬೇಕು, ಎಲ್ಲರನ್ನೂ ಗೌರವಿಸಬೇಕು ಎಂದು ಕಲಿಸಿದ್ದಾರೆ. ಎಲ್ಲ ಸನ್ನಿವೇಶ ಗಳಲ್ಲೂ ಸಂಯಮ ಪಾಲಿಸಬೇಕೆಂದು ಕಲಿಸಿದ್ದಾರೆ. ನನಗೆ ಬದುಕಿನಲ್ಲಿ ಅವರೇ ಮಾದರಿ. 2010ರಲ್ಲಿ ನಾನು ವಿಶ್ವ ಚಾಂಪಿಯನ್ ಆಗುವವರೆಗೂ ಬೀದಿ ಬದಿಯ ಹೊಡೆದಾಟಗಳಲ್ಲಿ ತೊಡಗಿದ್ದೆ. ಅದಕ್ಕಾಗಿ ಹಲವಾರು ಬಾರಿ ನನ್ನ ತಂದೆ ನನ್ನನ್ನು ದಂಡಿಸಿದ್ದರು. ಅವರೊಬ್ಬ ವೃತ್ತಿಪರ ಕೋಚ್. ಅವರು ಶಿಸ್ತು, ಸಮಯ ಪಾಲನೆ ಮತ್ತು ಕಠಿಣ ವ್ಯಾಯಾಮಕ್ಕೆ ಅಪಾರ ಮಹತ್ವ ನೀಡುತ್ತಿದ್ದರು. ನನಗೆ ಎಲ್ಲ ವಿಷಯಗಳಲ್ಲೂ ನನ್ನ ತಂದೆಯೇ ಮಾರ್ಗದರ್ಶಿ. ನನ್ನ ಪಾಲಿಗೆ ಅವರ ಮಾತೇ ಮುಖ್ಯ. ಅವರ ಮಾತೇ ಅಂತಿಮ. ಅವರು ನನಗೆ ನಿವೃತ್ತನಾಗಲು ಹೇಳಿದರೆ ಈ ಕ್ಷಣವೇ ನಿವೃತ್ತನಾಗುತ್ತೇನೆ. ಆದರೆ ಸದ್ಯ ಅವರು ಆ ಕುರಿತು ಆಲೋಚಿಸಿಲ್ಲ. ನನ್ನ ಕುಟುಂಬವೇ ಕ್ರೀಡಾಳುಗಳ ಕುಟುಂಬ. ಅಲ್ಲಾಹನ ಅನುಗ್ರಹ ಮತ್ತು ಹೆತ್ತವರ ಆಶೀರ್ವಾದ ವಿಲ್ಲದೆ ಯಾವ ರಂಗದಲ್ಲೂ ಯಶಸ್ಸು ಗಳಿಸಲು ಸಾಧ್ಯವಿಲ್ಲ.

 ಕ್ರೀಡಾಳುವಿನ ಬದುಕು ಸುಲಭದ ಬದುಕೇನೂ ಅಲ್ಲ. ನಾನು ವ್ಯಾಯಾಮ ಮಾಡುತ್ತಿರುವಾಗಲೂ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವಾಗಲೂ ಹಲವಾರು ಬಾರಿ ಗಂಭೀರ ಗಾಯಗೊಡಿದ್ದೆ, ಮೂಳೆ ಮುರಿತದಂತಹ ಆಘಾತಗಳನ್ನೂ ಎದುರಿಸಿದ್ದೆ. ಕೆಲವೊಮ್ಮೆ ಗಾಯಗಳಿಂದ ಚೇತರಿಸಿಕೊಳ್ಳಲು ಐದಾರು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತಿತ್ತು. ಆದರೆ ಯಾವ ಹಂತದಲ್ಲೂ ನಾನು ಬಿಟ್ಟುಕೊಡಲಿಲ್ಲ. ಛಲವಿಲ್ಲದಿದ್ದರೆ ಮತ್ತು ಸೋಮಾರಿತನ ತೋರಿದರೆ ನೀವು ಬದುಕಿನಲ್ಲಿ ಏನನ್ನೂ ಸಾಧಿಸುವಂತಿಲ್ಲ. ನನ್ನ ವೇಳಾಪಟ್ಟಿ ಹೇಗಿತ್ತೆಂದರೆ ಮುಂಜಾನೆ ವ್ಯಾಯಾಮ, ಆ ಬಳಿಕ ಶಾಲೆ, ಶಾಲೆಯಿಂದ ಮನೆಗೆ ಬಂದರೆ ಹೋಮ್ ವರ್ಕ್, ಹೋಮ್ ವರ್ಕ್ ಮುಗಿದೊಡನೆ ಮತ್ತೆ ವ್ಯಾಯಾಮ. ಹೀಗೆ ಕಠಿಣ ಶ್ರಮ ಅನಿವಾರ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)