ಮಾತುಕತೆ ನಿಲ್ಲದಿರಲಿ
ಇದು 20 ವರ್ಷ ಹಿಂದಿನ ಕಥೆ. 1999ರಲ್ಲಿ ಅಂದಿನ ನಮ್ಮ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಒಂದು ನಿಯೋಗ ಲಾಹೋರ್‌ಗೆ ಹೋಗಿತ್ತು. ಖ್ಯಾತ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರಿಗೆ, ಲಾಹೋರ್‌ಗೆ ಬಂದು ನಿಯೋಗವನ್ನು ಸೇರಿಕೊಳ್ಳಬೇಕೆಂಬ ಆಮಂತ್ರಣ ಬಂದಿತ್ತು. ಆದರೆ ಅನಾರೋಗ್ಯದ ನಿಮಿತ್ತ ಅವರಿಗೆ ಹೋಗಲಾಗಲಿಲ್ಲ. ಅವರು ‘ಸರ್ಹದ್’ ಎಂಬ ತನ್ನ ಕವನ ಸಂಕಲನದ 10 ಕ್ಯಾಸೆಟ್‌ಗಳನ್ನೂ ವಾಜಪೇಯಿಯವರಿಗೆ ಕಳಿಸಿಕೊಟ್ಟರು. ಅದರಲ್ಲಿದ್ದ ‘ಗುಫ್ತಗೂ ಬಂದ್ ನಹೋ’ ಎಂಬ ಒಂದು ಗಮನಾರ್ಹ ಉರ್ದು ಕವನದ ಅನುವಾದ ಇಲ್ಲಿದೆ.
ಮಾತುಕತೆ ನಿಲ್ಲದಿರಲಿ
ಮಾತಿಂದ ಮಾತು ಬೆಳೆಯುತಿರಲಿ
ಮಿಲನದ ಸಂಜೆ, ಬೆಳಗಿನವರೆಗೂ ಬೆಳೆಯಲಿ,
ನಮ್ಮಮೇಲೆ ನಗುವ, ತಾರೆಗಳು ತುಂಬಿದ ಈ ಇರುಳು ಬೆಳೆಯಲಿ.
ಪದಗಳ ಕೈಯಲ್ಲಿ ನಿಂದನೆಯ ಕಲ್ಲುಗಳಿದ್ದರೆ ಇರಲಿ,
ವಿಷದ ಲೋಟೆಯಿಂದ ವ್ಯಂಗ್ಯ ಚೆಲ್ಲುವವರು ಚೆಲ್ಲುತಿರಲಿ.
ದೃಷ್ಟಿಗಳು ವಕ್ರವಾಗಿದ್ದರೆ, ಹುಬ್ಬು ಗಂಟಿಕ್ಕಿಕೊಂಡಿದ್ದರೆ, ಹಾಗೆಯೇ ಇರಲಿ,
ಪರಿಸ್ಥಿತಿ ಏನೇ ಇರಲಿ, ಎದೆಯೊಳಗಿನ ಮನ ಮಾತ್ರ ಜೀವಂತವಿರಲಿ.
ಅಕ್ಷರಕ್ಕೆ ಸರಪಣಿ ಕಟ್ಟಲು ಅಸಹಾಯಕತೆಗೆ ಸಾಧ್ಯವಾಗದು,
ಎಂತಹ ಕಟುಕನಿಗೂ ಧ್ವನಿಯನ್ನು ಅಡಗಿಸಲು ಸಾಧ್ಯವಾಗದು.
ಬೆಳಗಾಗುವ ಮುನ್ನ ಅಕ್ಷರವೊಂದು ಮೈತ್ರಿಯ ರೂಪ ತಾಳಿ ಬರಲಿದೆ
ಹೆಜ್ಜೆಗಳೆಷ್ಟು ಓಲಾಡಿದರೂ ಪ್ರೀತಿಯು ಖಂಡಿತ ನಡೆದು ಬರಲಿದೆ
ದೃಷ್ಟಿಗಳು ತಗ್ಗಲಿವೆ, ಹೃದಯಗಳು ಮಿಡಿಯಲಿವೆ, ತುಟಿಗಳು ಕಂಪಿಸಲಿವೆ
ಮೌನವು ತುಟಿಗಳ ಚುಂಬನವಾಗಿ ಕಂಪನ್ನು ಹರಡಲಿದೆ.
ಹೂವಿನ ಗೊಂಚಲುಗಳ ತಿಕ್ಕಾಟದ ಧ್ವನಿ ಮಾತ್ರ ಮೊಳಗಲಿದೆ
ಪದಗಳ, ರಾಗಗಳ ಅಗತ್ಯವೇ ಅಳಿಯಲಿದೆ
ಕಣ್ಣು, ಹುಬ್ಬುಗಳ ಸೂಚನೆಗಳ ಮೂಲಕವೇ ಪ್ರೀತಿಯು ಅರಳಲಿದೆ
ದ್ವೇಷ ಅಳಿಯಲಿದೆ, ವಿಶ್ವಾಸ ಮೆರೆಯಲಿದೆ
ಕೈಯಲ್ಲಿ ಕೈ ಹಿಡಿದು ಜಗವನ್ನೆಲ್ಲ ಜೊತೆಗೂಡಿಸಿಕೊಂಡು
ಸಹತಾಪದ ಉಡುಗೊರೆ ಹೊತ್ತು ಪ್ರೀತಿಯ ಕಾಣಿಕೆಗಳ ಜೊತೆ
ಹಗೆತನದ ಮುಳ್ಳಿನ ಹಾದಿಯನ್ನು ದಾಟಿ ಹೋಗುವೆವು ನಾವು
ನೆತ್ತರ ನದಿಗಳನ್ನು ದಾಟಿ ದಡವನ್ನು ಸೇರುವೆವು ನಾವು.
ಮಾತುಕತೆ ನಿಲ್ಲದಿರಲಿ
ಮಾತಿಂದ ಮಾತು ಬೆಳೆಯಲಿ
ಮಿಲನದ ಸಂಜೆ ಬೆಳಗಿನವರೆಗೂ ಬೆಳೆಯಲಿ
ನಮ್ಮನ್ನು ಕಂಡು ನಗುವ ಈ ತಾರೆಗಳು ತುಂಬಿದ ರಾತ್ರಿ ಬೆಳೆಯಲಿ
ಉರ್ದು ಮೂಲ: ಅಲೀ ಸರ್ದಾರ್ ಜಾಫ್ರಿ
ಕನ್ನಡಕ್ಕೆ: ಡಾ. ಕೌಸರ್ ನಿಸಾಫ್