varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಚರವಾಣಿಯ ಕಿರಿಕಿರಿ

ವಾರ್ತಾ ಭಾರತಿ : 31 Dec, 2019
ಮೌನೇಶ್ ಬಡಿಗೇರ್

ಚಪ್ಪಟೆ ಪರದೆಯ ಮೇಲೆ ನೆರಳು ಬೆಳಕಿನ ಸಂಯೋಜನೆಯಿಂದ ಕಾಣುವ ಮನುಷ್ಯರನ್ನು ನೋಡುತ್ತ ನೋಡುತ್ತ ಜಡ್ಡುಗಟ್ಟಿರುವ ನಮ್ಮ ಸಂವೇದನೆಯು ಜೀವಂತ ಸಂವಹನವಾದ ರಂಗಮಂದಿರದಲ್ಲೂ ಸಹ ಅದೇ ಬಗೆಯ ಸರಕನ್ನು ಅಪೇಕ್ಷಿಸುತ್ತಿದೆ. ಜೀವಂತ ಮನುಷ್ಯರೂ ಸಹ ಚಪ್ಪಟೆಯಾಗಿ ಕಾಣುತ್ತಿದ್ದಾರೆ.

ಸಾಹಿತ್, ಸಿನೆಮಾ, ರಂಗಭೂಮಿ- ಈ ಮೂರೂ ಕ್ಷೇತ್ರಗಳಲ್ಲಿ ತಮ್ಮ ಉಜ್ವಲ ಪ್ರತಿಭೆಯ ಗುರುತು ಮೂಡಿಸಿದವರು ಮೌನೇಶ್ ಬಡಿಗೇರ್. ಮನುಷ್ಯನ ಸಂಕಷ್ಟಗಳಿಗೆ ಸೃಜನಶೀಲವಾಗಿ ಮುಖಾಮುಖಿಯಾಗಿ, ಹೊಸಬಗೆಯ ಧ್ವನಿಶಕ್ತಿಯನ್ನು ಸಿದ್ಧಿಸಿಕೊಳ್ಳುವ ಹಂಬಲ ಇವರ ಕೃತಿಗಳ ಮೂಲದ್ರವ್ಯ. ಇವರ 'ಮಾಯಾ ಕೋಲಾಹಲ' ಕಥಾಸಂಕಲನಕ್ಕೆ 2015ರ ಕೇಂದ್ರ ಸಾಹಿತ್ಯ ಅಕಾಡಮಿಯ ಯುವಪುರಸ್ಕಾರ ಮನ್ನಣೆಯ ಜೊತೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸಿನೆಮಾ ಮನುಷ್ಯನನ್ನು ಅವನಿಗಿಂತ ದೊಡ್ಡ ದಾಗಿ ಕಾಣಿಸುತ್ತದೆ; ಕಿರುತೆರೆ ಅಥವಾ ಟಿವಿ ಅವನಿಗಿಂತ ಚಿಕ್ಕದಾಗಿ ಕಾಣಿಸುತ್ತದೆ; ಹಾಗೂ ರಂಗಭೂಮಿ ಅವನನ್ನು ಅವ ಇದ್ದಹಾಗೆಯೇ ಕಾಣಿಸುತ್ತದೆ ಎಂದು ಕನ್ನಡ ಹಾಗೂ ಭಾರತೀಯ ರಂಗಭೂಮಿಯ ಮೇರು ವ್ಯಕ್ತಿತ್ವವಾದ ಬಿ.ವಿ. ಕಾರಂತರು ಹೇಳುವ ಹೊತ್ತಿಗೆ ನಮ್ಮೆಲ್ಲರ ಕೈಗಳಲ್ಲಿ, ಕಿಸೆಗಳಲ್ಲಿ ಬಂದು ಕುಳಿತು ನಮ್ಮನ್ನೆಲ್ಲ ಕುಣಿಸುತ್ತಿರುವ ಹೊಸ ಸಾಧನವಾದ ಸ್ಮಾರ್ಟ್ ಫೋನ್ ಇನ್ನೂ ಬಂದಿರಲಿಲ್ಲ. ಬಹುಶಃ ಇದ್ದಿದ್ದರೆ ಅದನ್ನೂ ಅವರ ಮೇಲಿನ ಮಾತುಗಳಲ್ಲಿ ಖಂಡಿತಾ ಸೇರಿಸಿಕೊಳ್ಳುತ್ತಿದ್ದರು. ಹಾಗೆ ಸೇರಿಸಿಕೊಂಡಿದ್ದಿದ್ದರೆ ಕಾರಂತರು ಏನು ಹೇಳುತ್ತಿದ್ದರು? ಗೊತ್ತಿಲ್ಲ. ಆದರೆ ಇವತ್ತು ನಮ್ಮ ದೈನಂದಿನ ಬದುಕಿನ ಎಲ್ಲ ವ್ಯವಹಾರಗಳನ್ನು ಈ ಪುಟ್ಟ ಕೈಗನ್ನಡಿಯಿಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಮತ್ತೆ ಮೇಲಿನ ಕಾರಂತರ ಮಾತಿಗೇ ಮರಳುವುದಾದರೆ, ಈ ಮಾತನ್ನು ಎರಡು ಆಯಾಮಗಳಲ್ಲಿ ನೋಡಬಹುದು: ಒಂದು ಭೌತಿಕವಾದದ್ದು ಮತ್ತೊಂದು ತಾತ್ವಿಕವಾದದ್ದು. ಸಿನೆಮಾ ಮಾಧ್ಯಮವು ಪ್ರದರ್ಶನಗೊಳ್ಳುವ ರೀತಿಯನ್ನು ಗಮನಿಸಿದರೆ ಅದರ ಪರದೆಯು ಮನುಷ್ಯನ ಆಕಾರಕ್ಕಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಅಂಥ ದೊಡ್ಡ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ನಟರ ದೇಹಗಳೂ, ಚಲನವಲನಗಳೂ ಸಹ ದೊಡ್ಡದಾಗಿರುತ್ತದೆ. ಇನ್ನು ಕಿರುತೆರೆ ಅಥವಾ ಟಿವಿಯ ಪರದೆಯು ಮನುಷ್ಯನ ದೇಹಾಕಾರಕ್ಕಿಂತ ಚಿಕ್ಕದಾಗಿರುತ್ತದೆ, ಹಾಗಾಗಿ ಅದರಲ್ಲಿ ಪ್ರದರ್ಶಿತಗೊಳ್ಳುವ ನಟನಟಿಯರ ದೇಹ ಹಾಗೂ ಚಲನವಲನಗಳೂ ಸಹ ಚಿಕ್ಕದಾಗಿರುತ್ತವೆ. ಆದರೆ ನಾಟಕ ನೋಡಲು ರಂಗಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ನಟರ ದೇಹ ಹಾಗೂ ಅವರ ಚಲನವಲನಗಳು ಹೇಗಿದ್ದಾರೋ ಅದೇ ಅಳತೆ ಯಲ್ಲಿ ಕಾಣಿಸುತ್ತದೆ. ಇದು ಮೇಲಿನ ಮಾತಿನ ಬಾಹ್ಯ ಸ್ವರೂಪ. ಆದರೆ ಇದರ ಅಂತಃಸ್ವರೂಪವನ್ನು ನೋಡುವುದಾದರೆ, ಸಿನೆಮಾ ಎಂಬ ಮಾಧ್ಯಮವೇ ಜನಸಾಮಾನ್ಯರ ದಿನದಿನದ ಬದುಕಿಗಿಂತಲೂ ತೀರಾ ದೊಡ್ಡದು; ಹೀಗೆ ದೊಡ್ಡದೊಡ್ಡದಾಗಿ ಕಾಣಿಸಿಕೊಳ್ಳುತ್ತ ಅದರಲ್ಲಿನ ನಟನಟಿಯರೂ ಸಹ ನೋಡುಗರ ಮನಸ್ಸಿನಲ್ಲಿ ದೊಡ್ಡದೊಡ್ಡ ಪ್ರತಿಮೆಗಳಾಗಿ ಬೆಳೆಯತೊಡಗುತ್ತಾರೆ. ಅವರನ್ನು ಆರಾಧಿಸುವ ಅಭಿಮಾನಿ ವರ್ಗವು ಹುಟ್ಟುತ್ತದೆ. ಅಂಥ ಅಭಿಮಾನಿ ವರ್ಗಕ್ಕೆ ಇಂಥ ದೊಡ್ಡ ಪರದೆಯಲ್ಲಿ ಕಾಣಿಸುವ ನಟ ನಟಿಯರು ತಮ್ಮ ದಿನದಿನದ ಬದುಕಿಗಿಂತ ದೊಡ್ಡವರು. ಅದೇ ಟಿವಿಯಲ್ಲಿ ಕಾಣಿಸುವ ನಟರು, ಅವರನ್ನು ಕಾಣಲು ನೋಡುಗರು ಹೊರಗೆಲ್ಲೋ ಹೋಗಬೇಕಿಲ್ಲ. ಅವರ ಮನೆಯ ಟಿವಿ ಎಂಬ ಪೆಟ್ಟಿಗೆಯಲ್ಲಿಯೇ ದಿನವೂ ಬರುತ್ತಾರೆ. ಬೇಕೋ ಬೇಡವೋ ಅವರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ನೋಡುಗರಿಗೆ ಬಹಳ ಆಯ್ಕೆಗಳಿವೆ. ಅಲ್ಲಿ ಬರುವ ನಟರನ್ನು ಅವರು ನೋಡಬಹುದು, ಅಥವಾ ನಿರ್ಲಕ್ಷಿಸಬಹುದು, ನೋಡದೆ ಚಾನಲ್ ಬದಲಿಸಲೂಬಹುದು. ಹಾಗಾಗಿ ನೋಡುಗರ ಮನಸ್ಸಿನಲ್ಲಿ ದೊಡ್ಡ ಪರದೆಯಲ್ಲಿ ತಾವಾಗಿಯೇ ದುಡ್ಡು ತೆತ್ತು, ತಮ್ಮ ಸಮಯ ಹಾಗೂ ಅಭಿರುಚಿಯನ್ನು ವ್ಯಯಿಸಿ ನೋಡುವಂಥ ದರ್ದು ಟಿವಿಯಲ್ಲಿ ಇಲ್ಲದೆ ಇರುವುದರಿಂದ ನೋಡುಗರ ದೃಷ್ಟಿಯಲ್ಲಿ ಟಿವಿಯಲ್ಲಿ ಬರುವ ನಟನಟಿಯರು ದೊಡ್ಡ ಪರದೆಗೆ ಹೋಲಿಸಿಕೊಂಡರೆ ದೊಡ್ಡ ವರಲ್ಲ. ಇನ್ನು ರಂಗಭೂಮಿಯ ವಿಷಯಕ್ಕೆ ಬರುವುದಾದರೆ, ಟಿವಿ ಹಾಗೂ ಸಿನೆಮಾ ತಂತ್ರಜ್ಞಾನದಲ್ಲಿದ್ದಂತೆ ನಟನಟಿಯರ ಆಯ್ದ ಭಾವನೆಗಳನ್ನೂ, ಚಲನವಲನಗಳನ್ನೂ ಸೂಕ್ಷ್ಮ ವಾಗಿ ಅಥವಾ ಹತ್ತಿರದಿಂದ ತೋರಿಸುವ ಅವಕಾಶ ವಾಗಲೀ, ಅದರ ವೇಗವನ್ನು ವರ್ಧಿಸುವ ಅಥವಾ ಮರ್ಧಿಸುವ ಅವಕಾಶ ರಂಗಭೂಮಿಯಲ್ಲಿ ಇಲ್ಲದೇ ಇರುವುದರಿಂದ ರಂಗಮಂದಿರಲ್ಲಿ ನಟನಟಿಯರು ನೇರವಾಗಿ ಪ್ರೇಕ್ಷಕರ ಸಮ್ಮುಖದಲ್ಲೇ, ಅವರದೇ ಕಾಲ ದೇಶದಲ್ಲಿ ಅಭಿನಯಿಸುತ್ತಿರುವುದರಿಂದ ಅಲ್ಲಿ ಭಾವಸಂವಾದ ಆ ಕ್ಷಣದಲ್ಲಿ ದ್ವಿಮುಖವಾಗಿ ಹಾಗೂ ಯಥಾವತ್ತಾಗಿ ನಡೆಯುತ್ತಿರುತ್ತದೆ. ಸಿನೆಮಾ ಅಥವಾ ಟಿವಿ ಮಾಧ್ಯಮದಲ್ಲಾದರೆ ಕ್ಯಾಮರಾದ ಸಹಾಯದಿಂದ ನಟನಟಿಯರು ಎಂದೋ ಮಾಡಿದ ಅಭಿನಯವನ್ನು ಸೆರೆಹಿಡಿದು ಮತ್ತೆಂದೋ ಪ್ರೇಕ್ಷಕರು ನೋಡುತ್ತಾರೆ. ಆದರೆ ರಂಗಭೂಮಿಗೆಯಲ್ಲಿ ನಟನಟಿ ಅಭಿನಯಿಸುತ್ತಿರುವ ಅದೇ ಕ್ಷಣದಲ್ಲಿ ಪ್ರೇಕ್ಷಕನು ಅದನ್ನು ವೀಕ್ಷಿಸುತ್ತ, ಅನುಭವಿಸುತ್ತಿ ರುತ್ತಾನೆ. ಹಾಗಾಗಿ ಕಾಲ ದೇಶ ಹಾಗೂ ಕ್ರಿಯೆಯ ದೃಷ್ಟಿ ಯಿಂದ ರಂಗಭೂಮಿ ಹೆಚ್ಚು ಸತ್ಯವಾದದ್ದು ಎನ್ನಬಹುದು.

ಈಗ ಈ ಮಾಧ್ಯಮಗಳಿಗೆ ಹೊಸ ಸೇರ್ಪಡೆ ಸ್ಮಾರ್ಟ್‌ಫೋನುಗಳು. ಇದು ಟಿವಿ ಮಾಧ್ಯಮಕ್ಕಿಂತ ಕಿರಿದು. ಅಂಗೈಯಗಲದ ಮಾಯಾಗನ್ನಡಿ! ಆದರೆ ಈ ಅಂಗೈಯಗಲದ ಕನ್ನಡಿ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ನೋಡುಗರು ಇಂದು ಸಿನೆಮಾ ನೋಡಲು ಚಿತ್ರಮಂದಿರಗಳಿಗೂ ಹೋಗದೆ, ಟಿವಿ ನೋಡಲು ಮನೆಯಲ್ಲಿ ಟಿವಿ ಮುಂದೆಯೂ ಕೂರದೆ, ನಾಟಕ ಮೊದಲಾದ ಜೀವಂತ ಕಲಾಪ್ರಕಾರಗಳನ್ನು ನೋಡಲು ರಂಗಮಂದಿರಗಳಿಗೂ ಹೋಗದೆ ಇವೆಲ್ಲವನ್ನೂ ತಮ್ಮ ಖಾಸಗೀ ಕೋಣೆಯಲ್ಲಿಯೇ, ತಮ್ಮ ಕಡುಖಾಸಗೀ ಸಮಯದಲ್ಲೇ ಈ ಕಿರುಗನ್ನಡಿಯಲ್ಲಿ ನೋಡುತ್ತಿದ್ದಾರೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರು ತೆರಳುವುದು ಹಾಗೂ ಇಂಥ ಚಿತ್ರಮಂದಿರಗಳ ನಿರ್ಮಾಣವಾಗಿರುವುದು ಸಹ ಕೇವಲ ಸಿನೆಮಾಗಳ ವೀಕ್ಷಣೆಗಾಗಿ ಮಾತ್ರ. ಹೀಗೆ ಅದನ್ನು ಆಸ್ವಾದಿಸಲು ಬರುವ ಪ್ರೇಕ್ಷಕನು ತನ್ನ ಸಮಯ, ಹಣ ಹಾಗೂ ಆಸಕ್ತಿಯನ್ನು ವ್ಯಯಿಸಿ ಅದರ ಅನುಭವವನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿಯೇ ಒಂದು ಜವಾಬ್ದಾರಿಯು ಪ್ರೇಕ್ಷಕನಲ್ಲಿ ಹುಟ್ಟುವುದರಿಂದ ಅದರ ಅನುಭವವೂ ಸಹ ಹೆಚ್ಚು ಗಾಢವಾದದ್ದಾಗಿರುತ್ತದೆ. ಇದೇ ರೀತಿ ನಾಟಕಗಳನ್ನು ನೋಡಲು ಪ್ರೇಕ್ಷಕರು ತಾವೇ ತಮ್ಮ ಹಣ, ಸಮಯ ಹಾಗೂ ಅಭಿರುಚಿಯನ್ನು ವ್ಯಯಿಸಿ ಬರುವುದರಿಂದ, ಜೊತೆಗೆ ಇಲ್ಲಿ ಸಿನೆಮಾ ಮಾಧ್ಯಮಕ್ಕೆ ಇರುವ ತಾಂತ್ರಿಕ ಸೌಲಭ್ಯಗಳು ಇಲ್ಲದೆಯಿರುವುದರಿಂದ, ಇದರ ಅನುಭವವನ್ನು ಪಡೆಯಲು ಬರುವ ಪ್ರೇಕ್ಷಕ ಸಿನೆಮಾ ನೋಡಲು ಬರುವ ಪ್ರೇಕ್ಷಕನಿಗಿಂತ ಹೆಚ್ಚು ಜವಾಬ್ದಾರನೂ, ಪ್ರಾಜ್ಞನೂ ಆಗಿರುತ್ತಾನೆ. ಸಿನೆಮಾ ಮಂದಿರಕ್ಕೆ ಬಂದು ನಾಟಕ ನೋಡಲು ಸಾಧ್ಯವಿಲ್ಲ; ಹಾಗೆಯೇ ರಂಗಮಂದಿರಕ್ಕೆ ಬಂದು ಸಿನೆಮಾ ನೋಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಈ ಎರಡೂ ಮಾಧ್ಯಮ ಗಳೂ ಹೆಚ್ಚು ಅನುಭವಸಾಂದ್ರವಾಗಿವೆ ಎನ್ನಬಹುದು.

ಆದರೆ ಇವೆರಡಕ್ಕಿಂತ ಸ್ವರೂಪದಲ್ಲಿ ಹಾಗೂ ಬಳಕೆಯಲ್ಲಿ ಭಿನ್ನವಾದ ಟಿವಿ ಎಂಬ ಮಾಧ್ಯಮವು ಬರಿ ಮಾಧ್ಯಮ ಮಾತ್ರವಾಗಿರದೆ ಅದೊಂದು ವಸ್ತುವೂ ಆಗಿರುವುದು ವಿಶೇಷ. ಪ್ರೇಕ್ಷಕರು ಸಿನೆಮಾ ಮಂದಿರಕ್ಕೆ ಹೋಗಿ ದುಡ್ಡುಕೊಟ್ಟು ಸಿನೆಮಾ ನೋಡಿ ಬರಬಹುದು, ಹಾಗೆ ದುಡ್ಡು ಕೊಟ್ಟು ನಾಟಕ ನೋಡಿ ಬರಬಹುದು; ಆದರೆ ಅದನ್ನೇ ಕೊಂಡುಕೊಂಡು ಖಾಸಗಿ ವಸ್ತುವನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಟಿವಿ ಎಂಬ ಪೆಟ್ಟಿಗೆಯನ್ನು ಯಾರು ಬೇಕಾದರೂ ಕೊಂಡುಕೊಂಡು ತಮ್ಮ ಖಾಸಗಿ ಜಾಗದಲ್ಲಿ ಇಟ್ಟುಕೊಂಡು ಅದರಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ದೊಡ್ಡಪರದೆಯಲ್ಲಿ ಹಿಂದೊಮ್ಮೆ ಮೂಡಿಬಂದ ಸಿನೆಮಾಗಳೇ ಈ ಟಿವಿ ಪೆಟ್ಟಿಗೆಯ ಮನರಂಜನೆಯ ಬಂಡವಾಳದ ಒಂದು ಮೂಲವಾದರೆ, ಕ್ಷಣಕ್ಷಣದ ವಾರ್ತೆಗಳನ್ನು ಜನರಿಗೆ ತಲುಪಿಸಲು ಇರುವ ನೂರಾರು ನ್ಯೂಸ್ ಚಾನಲ್‌ಗಳು, ದೈನಂದಿನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತಷ್ಟು ಬಂಡವಾಳ. ಅಂದರೆ ಯಾವುದೋ ಒಂದೇ ಒಂದು ಕಾರ್ಯಕ್ರಮಕ್ಕೆ ಪ್ರೇಕ್ಷಕ ತನ್ನ ಸಮಯ, ಹಣ ಹಾಗೂ ಆಸಕ್ತಿಯನ್ನು ವ್ಯಯಿಸಿ ತನ್ನ ಖಾಸಗಿ ಜಾಗದಿಂದ ಹೊರಟು ಚಿತ್ರಮಂದಿರ, ರಂಗಮಂದಿರಗಳಿಗೆ ತೆರಳುವ ಕಷ್ಟವನ್ನು ಈ ಟಿವಿ ಎಂಬ ಖಾಸಗಿ ಪೆಟ್ಟಿಗೆ ತಪ್ಪಿಸಿತು. ಒಂದು ಮಾಧ್ಯಮ ಆದರೆ ಅನುಭವಗಳು ನೂರಾರು; ಅಷ್ಟೇ ಅಲ್ಲ ಎಂದೂ ಬತ್ತಲಾರದ್ದು! ಮತ್ತೊಂದು ಮುಖ್ಯ ಅಂಶ ಈ ಖಾಸಗಿ ಪೆಟ್ಟಿಗೆಯಲ್ಲಿ ನೋಡುಗನಿಗೆ ದೊರೆಯುವ ಅಸಂಖ್ಯ ಆಯ್ಕೆಗಳು! ಅದು ಚಿತ್ರಮಂದಿರ ಅಥವಾ ರಂಗಮಂದಿರದಲ್ಲಿ ಸಾಧ್ಯವಿಲ್ಲ.

ಈಗ ಟಿವಿ ಎಂಬ ವಸ್ತು ಹಾಗೂ ಮನರಂಜನೆಯ ಆಗರವನ್ನು ನೋಡುವುದಾದರೆ, ಟಿವಿ ಎಂಬ ಖಾಸಗಿ ಮಾಧ್ಯಮವನ್ನು ಖರೀದಿಸಿ ನಮ್ಮ ಖಾಸಗಿ ಜಾಗದಲ್ಲಿ ಇಟ್ಟುಕೊಳ್ಳಬಹುದೇ ಹೊರತು ಅದನ್ನು ನಾವು ಹೋದಕಡೆಯಲ್ಲೆಲ್ಲಾ ಹೊತ್ತೊಯ್ಯಲು ಸಾಧ್ಯವಿಲ್ಲ. ಆದರೆ ಸ್ಮಾರ್ಟ್ ಫೋನುಗಳು ಬಂದ ನಂತರ ಮಾಹಿತಿ, ಮನರಂಜನೆ, ಸ್ನೇಹ, ವಿಶ್ವಾಸ, ಪ್ರೀತಿ, ವ್ಯವಹಾರ ಎಲ್ಲವೂ ಸಹ ಅಂಗೈಯಗಲದ ಮಾಯಾಗನ್ನಡಿಯಲ್ಲಿ ವೀಕ್ಷಿಸುತ್ತ, ನಾವು ಹೋದಕಡೆಯಲ್ಲೆಲ್ಲಾ ಕಿಸೆಯಲ್ಲಿಟ್ಟುಕೊಂಡು ಒಯ್ಯಲು ಸಾಧ್ಯವಾಯಿತು. ಮೇಲಿನ ಮೂರೂ ಮಾಧ್ಯಮದ ಎಲ್ಲ ಸರಕುಗಳೂ ಈಗ ಈ ಕನ್ನಡಿಯಲ್ಲಿ ಸುಲಭವಾಗಿ ಎಲ್ಲೆಂದರಲ್ಲಿ ನೋಡಲು ಸಿಗುತ್ತದೆ. ಇದರಲ್ಲಿ ಮಾಹಿತಿ, ಸಿನೆಮಾ, ಧಾರಾವಾಹಿ, ನ್ಯೂಸ್‌ಗಳು, ನಾಟಕ, ಸಂಗೀತ, ನೃತ್ಯ ಹೀಗೆ ಎಲ್ಲವನ್ನೂ ನೋಡಬಹುದು. ಎಷ್ಟು ನೋಡಿದರೂ ಮುಗಿಯದ ಮಾಯಾಕಣಜ ಈ ಕೈಗನ್ನಡಿ!

ಈಗ ನೋಡುಗ ಅಥವಾ ವೀಕ್ಷಕ ಅಥವಾ ಪ್ರೇಕ್ಷಕ ಅಥವಾ ಸಾಮಾಜಿಕನೊಬ್ಬ ಒಂದು ಕಲಾಕೃತಿಯ ವೀಕ್ಷಣೆಯಿಂದ ಪಡೆಯುವ ರಸಾಸ್ವಾದ, ಅಥವಾ ಆನಂದ ಅಥವಾ ಹೃದಯಸಂವಾದದ ಕುರಿತು ಯೋಚಿಸುವುದಾದರೆ - ಈ ರಸ, ಭಾವ, ಆಸ್ವಾದ, ಆನಂದ ಮೊದಲಾದವುಗಳ ಬಗ್ಗೆ ಮೊಟ್ಟಮೊದಲು ಬರೆದವನು ಭರತಮುನಿ; ತನ್ನ ನಾಟ್ಯಶಾಸ್ತ್ರ ಎಂಬ ಗ್ರಂಥದಲ್ಲಿ. ಸಾವಿರಾರು ವರ್ಷಗಳ ಹಿಂದಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭರತ ಈ ಗ್ರಂಥ ಬರೆದಿರಲಿಕ್ಕೆ ಸಾಕು. ಆಗ ಈಗಿದ್ದಂತೆ ಸಿನೆಮಾ, ಟಿವಿ ಮೊದಲಾದ ಮಾಧ್ಯಮಗಳಿರಲಿಲ್ಲ. ಇದ್ದದ್ದು ಬರಿದೇ ರಂಗಮಂದಿರ ಹಾಗೂ ಅಲ್ಲಿ ಪ್ರದರ್ಶಿತವಾಗುವ ನಾಟಕಗಳು. ಆಗಿನ ಸಾಮಾಜಿಕರಿಗೆ ಇವೇ ಹೆಚ್ಚು ಮತ್ತು ಹೊಸದು! ಇದನ್ನು ಹೇಗೆ ನೋಡಬೇಕು, ಹೇಗೆ ಪರಿಭಾವಿಸಬೇಕು, ಅನುಭವಿಸಬೇಕು, ನಟನಟಿಯರು ಈ ಕಲಾಪ್ರಕಾರಗಳನ್ನು ಹೇಗೆ ಪ್ರದರ್ಶಿಸಬೇಕು ಮೊದಲಾದ ಎಲ್ಲ ವಿವರಗಳನ್ನೂ ಭರತ ತನ್ನ ಗ್ರಂಥದಲ್ಲಿ ಬರೆದ. ಏನೂ ಇಲ್ಲದ್ದಾಗ ಇದ್ದ ಮನರಂಜನೆ ಹಾಗೂ ಭಾವಸಂವಾದದ ಮಾಧ್ಯಮ ರಂಗಭೂಮಿ-ನಾಟಕಗಳು. ಹಾಗಾಗಿ ಸಾಮಾಜಿಕರು ಅದನ್ನು ಅನುಭವಿಸುವ ಕುರಿತು ಹೆಚ್ಚು ವಿದ್ಯಾವಂತರಾಗಿದ್ದರು, ಪ್ರಾಜ್ಞರಾಗಿದ್ದರು. ಯಾಕೆಂದರೆ ಅಲ್ಲಿ ನಡೆಯುವ ಸಂವಾದ ದ್ವಿಮುಖವಾದದ್ದು. ನಟಿಸುವವನೂ ಹಾಗೂ ನೋಡುವವನು ಇಬ್ಬರೂ ಜೀವಂತ, ಭಾವ, ವಿಭಾವಗಳನ್ನು ಹೊಂದಿರುವ ಮನುಷ್ಯರಾಗಿದ್ದರು. ಹಾಗಾಗಿ ರಸದ ಅನುಭವದಲ್ಲಿಯೂ ಸಹ ಹೆಚ್ಚು ಸಾವಯವದ ಅನುಭವವು ಸಾಮಾಜಿಕರಿಗೆ ದಕ್ಕುತ್ತಿತ್ತು.

ಯಾವಾಗ ಸಿನೆಮಾ ಮಾಧ್ಯಮ ಬಂತೋ, ಆಗ ಈ ಬಗೆಯ ರಸದ ಅನುಭವದಲ್ಲಿ ಸೂಕ್ಷ್ಮವಾದ ಬದಲಾವಣೆಯಾಯಿತು. ನಾಟಕಗಳಲ್ಲಾದರೆ ದ್ವಿಮುಖ ಸಂವಾದ ನಡೆಯುತ್ತಿದ್ದರೆ ಸಿನೆಮಾಗಳಲ್ಲಿ ಏಕ ಮುಖ ಸಂವಾದ ನಡೆಯುತ್ತಿತ್ತು. ಸಿನೆಮಾ ನೋಡುವ ಪ್ರೇಕ್ಷಕ ಹೇಗೇ ಇದ್ದರೂ, ಏನೇ ಮಾಡಿದರೂ ಅದು ತೆರೆಯ ಮೇಲೆ ಮೂಡುವ ಸಿನೆಮಾದ ಪ್ರದರ್ಶನದ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಪ್ರದರ್ಶಿತವಾಗುತ್ತಿರುವುದು ನಿಜಸಮಯದಲ್ಲಿ, ನಿಜನಟನಟಿಯರ ಅಭಿನಯವಲ್ಲ. ಬದಲಿಗೆ ಕ್ಯಾಮರಾದ ಮೂಲಕ ಎಂದೋ ಚಿತ್ರಿಸಿಕೊಂಡ ಚಿತ್ರಿಕೆಗಳು. ಹಾಗಾಗಿ ಹಿಂದೆ ನಾಟಕಗಳಲ್ಲಿ ಜೀವಂತ ನಟನಟಿಯರು ಮಾಡುವ ಅಭಿನಯವನ್ನು ಬಹಳ ಜಾಗರೂಕತೆಯಿಂದ, ಪ್ರಜ್ಞೆಯಿಂದ, ಹಾಗೂ ಸೂಕ್ಷ್ಮತೆಯಿಂದ ವೀಕ್ಷಿಸಬೇಕೆಂಬ ಒತ್ತಡದಿಂದ ಬಿಡುಗಡೆ ಹೊಂದಿದ ಪ್ರೇಕ್ಷಕ ರಸಾನುಭವ ವನ್ನು ಪಡೆಯುವ ತನ್ನ ಜವಾಬ್ದಾರಿಯಿಂದ ತುಸು ಹಿಂದೆ ಸರಿದ; ಬದಲಿಗೆ ಆ ಸಿನೆಮಾ ತನ್ನಿಂತಾನೇ ತನ್ನನ್ನು ವಶಪಡಿಸಿಕೊಂಡು ಅನುಭವವನ್ನು ಮೂಡಿಸಲಿ ಎಂಬ ನಿಲುವಿಗೆ ಬಂದ. ಇದರಿಂದ ಸಿನೆಮಾ ಕ್ಷೇತ್ರದಲ್ಲೂ ಸಹ ಬಣ್ಣ, ಧ್ವನಿ, ಸಂಗೀತ, ನೃತ್ಯ, ಎಲ್ಲವೂ ಹೆಚ್ಚು ಹೆಚ್ಚು ಅಬ್ಬರದಿಂದ ಕೂಡುತ್ತ ಹೆಚ್ಚು ಹೆಚ್ಚು ವಿಮುಖನಾದ ಪ್ರೇಕ್ಷಕನನ್ನು ಕತ್ತಲ ಕೋಣೆಯಲ್ಲಿ ತನ್ನೆಡೆಗೆ ಸೆಳೆದುಕೊಂಡು ಅವನಿಗೆ ಒಂದು ವಿಶೇಷವಾದ ಅನುಭವವನ್ನು ಕೊಡುವ ಪ್ರಯತ್ನದಲ್ಲಿ ತೊಡಗಿತು. ಆ ಪ್ರಯತ್ನ ಇಂದು ತ್ರೀಡಿ ತಂತ್ರಜ್ಞಾನ, ಬಹುರಾಷ್ಟ್ರಗಳಲ್ಲಿ ಚಿತ್ರಿತಗೊಂಡ, ಬಹುಕೋಟಿ ವೆಚ್ಚದ ಸಿನೆಮಾಗಳಾಗಿ ಮುಂದುವರಿಯುತ್ತಿವೆ.

ಇನ್ನು ಟಿವಿ ವಿಷಯಕ್ಕೆ ಬಂದರೆ, ಮೊದಲೇ ಹೇಳಿದಂತೆ ಅದೊಂದು ಪ್ರೇಕ್ಷಕನ ಖಾಸಗಿ ಸ್ವತ್ತಾಗಿಯೂ ಇರುವುದರಿಂದ, ಪ್ರದರ್ಶನಗಳನ್ನು ನೋಡಲು ತನ್ನ ಖಾಸಗಿ ಜಾಗದಿಂದ ಬೇರೆಲ್ಲೂ ಹೋಗದೆ ತನ್ನ ಮನೆಯಲ್ಲಿಯೇ ಕುಳಿತು ನೋಡುವ ವಿಶೇಷ ಸೌಲಭ್ಯದಿಂದಲೇ ರಸಾನುಭವದಲ್ಲಿ ಒಂದಂಶ ಕಡಿತ ವಾಯಿತು. ಇನ್ನು ಬೆರಳು ತುದಿಯಲ್ಲೇ ನೂರಾರು ಚಾನಲ್‌ಗಳ ಪ್ರವಾಹವೇ ಹರಿಯುತ್ತಿರುವುದರಿಂದ ನೋಡುಗನ ಮನಸ್ಸು ಕ್ಷಣಕ್ಷಣಕ್ಕೂ ಒಂದರಿಂದ ಮತ್ತೊಂದು ಚಾನಲ್‌ಗೆ ಚಲಿಸುತ್ತಾ ನಿಜಕ್ಕೂ ತನಗೇನು ಬೇಕು ಎಂದೇ ಅರಿಯದ ವಿಚಿತ್ರ ಸ್ಥಿತಿಯಲ್ಲಿ ಸಿಲುಕುವಂತಾಯಿತು. ನೋಡುಗನ ಮನಸ್ಸು ಚದುರಿದಷ್ಟೂ ಚಾನಲ್‌ಗಳ ಕಾರ್ಯಕ್ರಮ ಗಳೂ ಸಹ ಚದುರತೊಡಗಿದವು. ಒಂದೇ ನ್ಯೂಸ್‌ಚಾನಲ್‌ನಲ್ಲಿ ಏಕಕಾಲದಲ್ಲಿ ಮೂರು ನ್ಯೂಸ್‌ಗಳನ್ನು ನೋಡುವ, ಗ್ರಹಿಸುವ ಸಾಮರ್ಥ್ಯಕ್ಕೆ ನೋಡುಗನನ್ನು ತಯಾರು ಮಾಡಲಾಯಿತು. ಹಾಗಾಗಿ ಅವನ ಭಾವ ಕೇಂದ್ರಿತ ಸಂವೇದನೆಗಳನ್ನು ಮಾಹಿತಿಕೇಂದ್ರಿತ ಸಂವೇದನೆಗಳಾಗಿ ಕ್ರಮೇಣ ಪರಿವರ್ತಿತವಾದವು. ಇಂಥ ಮಾಹಿತಿಕೇಂದ್ರಿತ, ಜಡ್ಡುಹಿಡಿದ, ಕ್ಷಣಕ್ಷಣಕ್ಕೂ ಚದುರಿಹೋಗುವ ನೋಡುಗನನ್ನು ಸೆಳೆಯಲು ಟಿವಿ ಉದ್ಯಮವು ರಿಯಾಲಿಟಿ ಶೋಗಳೆಂಬ ವಿಶಿಷ್ಟ ಪ್ರಕಾರದ ಕಾರ್ಯಕ್ರಮಗಳನ್ನು ರೂಪಿಸಿತು. ಇದರಲ್ಲಿ ನೋಡುಗನಿಗೆ ರಸಾನುಭವಕ್ಕಿಂತ ಹೆಚ್ಚಾಗಿ ಅವನಿಗೆ ಶಾಕ್ ನೀಡುವ, ಅವನ ಒಳಗಿನ ಮೂಲಭೂತ ಗುಣಗಳಾದ ಕ್ರೋಧ, ಕಾಮ, ಭಯ, ಮೊದಲಾದವುಗಳನ್ನು ಪೋಷಿಸುವ ಕೆಲಸ ಶುರುವಾಯಿತು. ಇನ್ನೊಂದೆಡೆ ಎಂದೂ ಮುಗಿಯದ ಧಾರಾವಾಹಿಗಳ ಮಹಾಪ್ರವಾಹದ ಮೂಲಕ ಎಂದೂ ಮುಗಿಯದ ಹಳಹಳಿಕೆಯ ಅನುಭವವನ್ನು ಕೊಡಲು ಶುರುಮಾಡಿತು.

ಟಿವಿ ಮಾಧ್ಯಮ ಇವನ್ನೆಲ್ಲ ಮಾಡುವ ಹೊತ್ತಿನಲ್ಲೇ ಸ್ಮಾರ್ಟ್‌ಫೋನ್ ಎಂಬ ಮಾಯಾಗನ್ನಡಿ ಈ ಎಲ್ಲಾ ಮಾಧ್ಯಮಗಳನ್ನೂ ತನ್ನ ಪುಟ್ಟ ಕನ್ನಡಿಯಲ್ಲೇ ತರುವುದರ ಜೊತೆಗೆ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ವೀಡಿಯೊ ಗೇಮ್, ಹೀಗೆ ಅಸಂಖ್ಯ ಸಾಮಾಜಿಕ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಬರಿದೆ ಮಾತುಗಳ ಸಂವಹನಕ್ಕಾಗಿ ಹುಟ್ಟಿದ ಫೋನ್ ಎಂಬ ಮಾಧ್ಯಮದ ಎಲ್ಲಾ ಆಯಾಮಗಳನ್ನೂ ಆವಿಷ್ಕರಿಸಿಕೊಂಡು ಇನ್ನೂ ವಿಸ್ತರಿಸುತ್ತಾ ಸಾಗುತ್ತಿದೆ. ದೊಡ್ಡಪರದೆಯ ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಯಾದ ದೊಡ್ಡದೊಡ್ಡ ಸಿನೆಮಾಗಳೆಲ್ಲವೂ ಕೆಲವೇ ದಿನಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಮೊದಲಾದ ವೇದಿಕೆಗಳಲ್ಲಿ ವೀಕ್ಷಕರಿಗೆ ನೋಡಲು ಸಿಗುತ್ತಿವೆ. ಈ ಎಲ್ಲವೂ ಸ್ಮಾರ್ಟ್ ಫೋನ್ ಎಂಬ ಕನ್ನಡಿಯಲ್ಲಿಯೇ ನೋಡಲು ಸಾಧ್ಯವಾಗಿದೆ. ಹಾಗಾಗಿ ಇಂಥ ಫೋನನ್ನು ಸದಾ ಕೈಯಲ್ಲಿ ಹಿಡಿದು ನೋಡುವುದು ಕಷ್ಟ ಎಂದು ಅರಿತು ಅದನ್ನು ಕುತ್ತಿಗೆಗೇ ನೇತುಹಾಕಿಕೊಳ್ಳುವ, ಅದನ್ನು ಮೇಜಿನ ಮೇಲಿಟ್ಟು ನೋಡಬಹುದಾದ ಹತ್ತು ಹಲವು ಸಲಕರಣೆಗಳನ್ನು ಉತ್ಪಾದಿಸುತ್ತಿದೆ. ಇವೆಲ್ಲವೂ ಇಂಟರ್ನೆಟ್‌ಎಂಬ ಮಾಯಾಜಾಲದಿಂದ ಸಾಧ್ಯವಾಗುತ್ತಿದೆ ಎಂದು ಬೇರೆ ಹೇಳಬೇಕಿಲ್ಲವಲ್ಲ.

ಇಂದು ನಾವು ಈ ಪುಟ್ಟ ಕೈಗನ್ನಡಿಯ ಜೊತೆಗೆ ಬದುಕುತ್ತಿದ್ದೇವೆ. ಆದರೆ ನಮ್ಮಲ್ಲಿ ಇನ್ನೂ ಮೇಲಿನ ಎಲ್ಲ ಕಲಾಪ್ರಕಾರಗಳೂ, ಹಾಗೂ ಅದು ಪ್ರದರ್ಶನಗೊಳ್ಳುವ ಪ್ರತ್ಯೇಕ ವೇದಿಕೆಗಳೂ ಸಕ್ರಿಯವಾಗಿವೆ. ಆದರೆ ಒಂದೇ ವ್ಯತ್ಯಾಸವೆಂದರೆ ಹಿಂದಿದ್ದ ನಮ್ಮ ಮನಸ್ಸು ಇಂದು ಅಂಥ ಆಸ್ವಾದನೆಯನ್ನು ಸ್ವೀಕರಿಸಲು ಇಲ್ಲವಾಗಿರುವುದು. ಭರತನ ನಾಟ್ಯಶಾಸ್ತ್ರವನ್ನು, ರಸಸಿದ್ಧಾಂತವನ್ನು ಹೆಚ್ಚು ಅರ್ಥವಾಗುವಂತೆ ವಿವರಿಸಿದ ಮಹಾ ಪಂಡಿತ ಅಭಿನವ ಗುಪ್ತ. ಅವನು ರಸಾನುಭವ ಉಂಟಾಗಲು ಇರುವ ಏಳು ಪ್ರಮುಖ ಅಡಚಣೆಗಳನ್ನು ವಿವರಿಸುತ್ತಾ, (1) ಸಂಭಾವನಾ ವಿರಹ (2) ದೇಶಕಾಲವಿಶೇಷಾವೇಶ (3) ನಿಜಸುಖಾದಿವಿವಶೀಭಾವ, (4) ಪ್ರತೀತ್ಯುಪಾಯ ವೈಕಲ್ಯ (5) ಸ್ಫುಟತ್ವಾ ಭಾವ (6) ಅಪ್ರಧಾನ್ಯತಾ (7)ಸಂಶಯ ಯೋಗ ಎಂದು ಅವುಗಳನ್ನು ಹೆಸರಿಸುತ್ತಾನೆ. ಇದರಲ್ಲಿ ಕೆಲವು ಪ್ರದರ್ಶನ ಮಾಡುವ ನಟನಟಿಯರ ಕುರಿತಾದ್ದು, ಮತ್ತೆ ಕೆಲವು ಪ್ರದರ್ಶನವನ್ನು ವೀಕ್ಷಿಸಲು ಬರುವ ಪ್ರೇಕ್ಷಕರ ಕುರಿತಾದ್ದು. ಇವುಗಳಲ್ಲಿ ದೇಶಕಾಲ ವಿಶೇಷಾವೇಶ ಎಂಬ ಅಡಚಣೆಯು ಪ್ರೇಕ್ಷಕನೊಬ್ಬ ಪ್ರದರ್ಶನ ನೋಡಲು ಬರುವಾಗ ಅಲ್ಲಿ ನಡೆಯುವ ಯಾವುದೇ ಪ್ರದರ್ಶನವು ನಿರ್ದಿಷ್ಟವಾದ ದೇಶ ಕಾಲದ ಪರಿಮಿತಿಯಲ್ಲಿ ಬಂಧಿತವಾಗಿರುತ್ತದೆ; ಅದನ್ನು ಹಾಗೆಯೇ ನೋಡಬೇಕಾದ್ದು ಪ್ರೇಕ್ಷಕನ ಕೆಲಸ. ಅದನ್ನು ತನ್ನ ನಿಜಬದುಕಿಗೆ ಅನ್ವಯಿಸಿಕೊಂಡು ನೋಡುತ್ತಾ ಹೋದರೆ ರಸಾನುಭವ ಸಾಧ್ಯವಿಲ್ಲ ಎಂದು ಈ ಅಡಚಣೆಯು ಸೂಚಿಸುತ್ತದೆ. ಇದೇ ಬಗೆಯ ಮತ್ತೊಂದು ಅಡಚಣೆ ನಿಜಸುಖಾದಿವಿವಶೀಭಾವ. ಅಂದರೆ ರಂಗಮಂದಿರಕ್ಕೆ ಬರುವ ಪ್ರೇಕ್ಷಕ ತನ್ನ ವಯಕ್ತಿಕ ಬದುಕಿನ ಜಂಜಡಗಳನ್ನು ಅಲ್ಲಿಯೇ ಬಿಟ್ಟು, ಅಥವಾ ತಾತ್ಕಾಲಿಕವಾಗಿಯಾದರೂ ಮರೆತು ಬರಬೇಕು. ಅವೆಲ್ಲವನ್ನೂ ಹೊತ್ತುಕೊಂಡು ಬಂದು ಕುಳಿತರೆ ಎದುರಿರುವ ನಟನಟಿಯರು ಎಷ್ಟೇ ಸರ್ಕಸ್ಸು ಮಾಡಿದರೂ ಅವನ ಮನಸ್ಸು ಹೊರಗೆ ಬಿಟ್ಟುಬಂದ ತನ್ನ ವ್ಯವಹಾರಗಳ ಕುರಿತೇ ಆಲೋಚಿಸುತ್ತಿರುತ್ತದೆಯೇ ಹೊರತು ಆಗಬೇಕಾದ ರಸಾನುಭವ ಆಗುವುದಿಲ್ಲ ಎಂದು ಹೇಳುತ್ತದೆ.

ಬಹುಶಃ ಇವತ್ತು ನಾವು ಅಭಿನವಗುಪ್ತನ ಈ ಏಳು ಅಡಚಣೆಗಳ ಜೊತೆಗೆ ಚರವಾಣಿಯ ಕಿರಿಕಿರಿ ಎಂಬ ಎಂಟನೆಯ ಅಡಚಣೆಯನ್ನು ರಾಜಾರೋಷವಾಗಿ ಸೇರಿಸಬಹುದು ಎಂದೆನಿಸುತ್ತದೆ. ಯಾಕೆಂದರೆ ಈ ಕೈಗನ್ನಡಿಯನ್ನು ನಾವು ಒಯ್ಯದ ಜಾಗವೇ ಇಲ್ಲ. ಸದಾಕಾಲ ನಮ್ಮ ಅವಿಭಾಜ್ಯ ಅಂಗದ ರೀತಿಯಲ್ಲಿಯೇ ಅದು ಹಾಸುಹೊಕ್ಕಾಗಿ ಉಸಿರಾಡುವಂತಾಗಿದೆ. ಒಂದು ಗಂಟೆ ಅದರಿಂದ ದೂರವಾದರೆ ನಮ್ಮ ಲೋಕವೇ ನಮ್ಮಿಂದ ದೂರವಾದಂತೆ ಭಾಸವಾಗುವಷ್ಟು ಪ್ರಭಾವಶಾಲಿಯಾಗಿ ಬೆಳೆದುನಿಂತಿದೆ. ಇಂಥ ಹೊತ್ತಲ್ಲಿ ಈ ಚರವಾಣಿಯ ಕಿರಿಕಿರಿ ಎಂಬ ಬಹುದೊಡ್ಡ ಅಡಚಣೆಯನ್ನು ಹೊತ್ತುಕೊಂಡೇ ನಾವು ಹೇಗೆ ಚಿತ್ರಮಂದಿರದಲ್ಲೋ ಅಥವಾ ರಂಗಮಂದಿರ ದಲ್ಲೇ ಸಿನೆಮಾ, ನಾಟಕವನ್ನು ನೋಡಿ ರಸಾಸ್ವಾದನೆಯನ್ನು ಮಾಡಲು ಸಾಧ್ಯ? ಎಂಬುದು ನಮ್ಮ ಮುಂದಿರುವ ದೊಡ್ಡ ಸವಾಲು. ಚಿತ್ರಮಂದಿಗಳಲ್ಲಾದರೂ ಅದು ಏಕಮುಖ ಸಂವಹನವಾದ್ದರಿಂದ ಸ್ವಲ್ಪ ರಿಯಾಯಿತಿ ಸಿಗಬಹುದು. ಆದರೆ ನಾಟಕಗಳು ಜರುಗುವ ರಂಗ ಮಂದಿರಗಳಲ್ಲಿ ಎರಡೂ ಕಡೆಗಳಿಂದಲೂ ಸಂವಹನ ನಡೆಯುವ ಹೊತ್ತಿನಲ್ಲಿ ಈ ಚರವಾಣಿಯ ಕಿರಿಕಿರಿಯು ಅದನ್ನು ಬಳಸುವವರಿಗೂ, ಅಕ್ಕಪಕ್ಕ, ಹಿಂದೆಮುಂದೆ ಕುಳಿತ ಪ್ರೇಕ್ಷಕರಿಗೂ ಹಾಗೂ ಮುಖ್ಯವಾಗಿ ಎದುರು ಜೀವಂತವಾಗಿ ಅಭಿನಯಿಸುತ್ತಿರುವ ನಟನಟಿಯರಿಗೂ ಮಾಡುವ ಅಡಚಣೆ ಅಷ್ಟಿಷ್ಟಲ್ಲ.

ಜೀವಂತ ನಟನಟಿಯರು ಅಭಿನಯಿಸುವ ನಾಟಕಗಳಿಂದ ಜೀವಂತ ಸಂವಾದವನ್ನು ಮಾಡಲು ಆಗಮಿಸುವ ಜೀವಂತ ಪ್ರೇಕ್ಷಕರು ಎರಡುಗಂಟೆಗಳ ಕಾಲ ಈ ಚರವಾಣಿಯನ್ನು ನಿಷ್ಕ್ರಿಯಗೊಳಿಸಿ ಇಡಲಾರದಷ್ಟು ಅದರ ಮೇಲೆ ಅವಲಂಬಿತರಾಗಿರುವುದು ನಿಜಕ್ಕೂ ದುರಂತ. ಎಷ್ಟೋ ಜನ ವಿದ್ಯಾವಂತರು, ಪ್ರಾಜ್ಞರು ಎನಿಸಿಕೊಂಡವರೂ ಸಹ ಎದುರು ಜರುಗುತ್ತಿರುವ ಜೀವಂತ ನಟನಟಿಯರ ನಾಟ್ಯ ನಮಗೆ ನಮ್ಮ ಚರವಾಣಿಯನ್ನು ನೆನಪಿಸದಂತೆ ಮಾಡಬೇಕು ಆಗ ಯಾರು ತಾನೆ ಅದನ್ನು ಬಳಸುತ್ತಾರೆ ಎಂಬ ದಾರ್ಷ್ಟದ, ಹಾರಿಕೆಯ ಸಬೂಬುಗಳನ್ನು ಕೊಡುತ್ತಾರೆ. ಇಂದು ದೇವರು ಪ್ರತ್ಯಕ್ಷವಾದರೂ ಮೊದಲು ಅವನೊಂದಿಗೆ ಒಂದು ಸ್ವಂತೀ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ನಂತರವಷ್ಟೇ ದೇವರ ಮುಂದೆ ಮಾತನಾಡುವ ಹಂತಕ್ಕೆ ತಲುಪಿರುವಾಗ ರಂಗಮಂದಿರದಲ್ಲಿ ನಡೆಯುವ ನಾಟಕ, ನಟನಟಿಯರು ತನ್ನನ್ನು ವಿಮುಖವಾಗದಂತೆ ಸೆಳೆದುಕೊಳ್ಳಬೇಕು, ಮತ್ತು ಅದರ ಜವಾಬ್ದಾರಿ ಬರೀ ನಟನಟಿಯರದ್ದು ಮಾತ್ರವೇ ಎನ್ನುವ ಅಸೂಕ್ಷ್ಮತೆ ಹಾಗೂ ಭೋಗಮನೋಭಾವ ಹುಟ್ಟಲು ಕೂಡ ಈ ಚರವಾಣಿಯೆಂಬ ಮಾಯಾಕೈಗನ್ನಡಿಯೇ ಕಾರಣ. ಚಪ್ಪಟೆ ಪರದೆಯ ಮೇಲೆ ನೆರಳು ಬೆಳಕಿನ ಸಂಯೋಜನೆಯಿಂದ ಕಾಣುವ ಮನುಷ್ಯರನ್ನು ನೋಡುತ್ತ ನೋಡುತ್ತ ಜಡ್ಡುಗಟ್ಟಿರುವ ನಮ್ಮ ಸಂವೇದನೆಯು ಜೀವಂತ ಸಂವಹನವಾದ ರಂಗಮಂದಿರದಲ್ಲೂ ಸಹ ಅದೇ ಬಗೆಯ ಸರಕನ್ನು ಅಪೇಕ್ಷಿಸುತ್ತಿದೆ. ಜೀವಂತ ಮನುಷ್ಯರೂ ಸಹ ಚಪ್ಪಟೆಯಾಗಿ ಕಾಣುತ್ತಿದ್ದಾರೆ.

ಮೇಲಿನ ಕಾರಂತರ ಮಾತಿಗೇ ಮತ್ತೆ ಮರಳುವು ದಾದರೆ, ಸಿನೆಮಾ ಮನುಷ್ಯನನ್ನು ದೊಡ್ಡದಾಗಿಯೂ, ಟಿವಿ ಚಿಕ್ಕದಾಗಿಯೂ, ರಂಗಭೂಮಿ ಅವನು ಅವ ಇರುವಂತೆಯೇ ಕಾಣಿಸುತ್ತದೆ.

ಹಾಗಾದರೆ ಸ್ಮಾರ್ಟ್‌ಫೋನುಗಳು ಅಥವಾ ಚರವಾಣಿಗಳು ಮನುಷ್ಯನನ್ನು ಹೇಗೆ ಕಾಣಿಸುತ್ತಿವೆ? ಚಪ್ಪಟೆಯಾಗಿ? ಕ್ಷುದ್ರವಾಗಿ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)