varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಕರ್ನಾಟಕದ ಪ್ರಜಾತಂತ್ರ: ರಾಜ್‌ಕುಮಾರ್‌ರವರ ಸಾಂಕ್ಕೃತಿಕ ಕೊಡುಗೆ

ವಾರ್ತಾ ಭಾರತಿ : 31 Dec, 2019
ಮಂಜುನಾಥ ಅದ್ದೆ

ರಾಜ್‌ಕುಮಾರ್ ವೈವಿಧ್ಯಮಯ ವಸ್ತುಗಳಿದ್ದ ಸಿನೆಮಾಗಳಲ್ಲಿ ನಟಿಸಿದ್ದ ಮಾತ್ರಕ್ಕೆ ದೊಡ್ಡ ನಟರಾದವರಲ್ಲ. ಆ ವಸ್ತು ವೈವಿಧ್ಯದಲ್ಲಿ ಇವರ ಅಭಿವ್ಯಕ್ತಿ, ಸಂಭಾಷಣೆ, ನಟನೆ ಹೇಗಿತ್ತು ಎಂಬುದರ ಹೊರಣದಿಂದ ಜನರ ಮನ್ನಣೆಯನ್ನು ಪಡೆದವರು. ಇಪ್ಪತ್ತನೆಯ ಶತಮಾನದ ಉದ್ದಕ್ಕೆ ಬಂಡವಾಳಿಗರು ಮತ್ತು ದುಡಿಯುವ ವರ್ಗದ ಜನರ ನಡುವಿನ ಸಂಘರ್ಷವನ್ನು ನಾವು ಕಂಡಿದ್ದೇವೆ; ಈ ಶತಮಾನದಲ್ಲೂ ಕಾಣುತ್ತಿದ್ದೇವೆ. ಈ ಸಂಘರ್ಷಕ್ಕೆ ತಮ್ಮ ನಟನಾವೃತ್ತಿಯ ಉದ್ದಕ್ಕೆ ರಾಜ್‌ಕುಮಾರ್ ಮುಖಾಮುಖಿಯಾಗಿದ್ದಾರೆ. ಇದನ್ನು ಅವರ ಬಹಳಷ್ಟು ಚಿತ್ರಗಳಲ್ಲಿ ನಾವು ಕಾಣಬಹುದಾಗಿದೆ.

ಅಗ್ನಿ ಪತ್ರಿಕೆ ಎಂದಾಗ ಮೊದಲು ನೆನಪಾಗುವುದೇ ಮಂಜುನಾಥ ಅದ್ದೆ. ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯ ಈ ಮೂರು ಕ್ಷೇತ್ರಗಳ ಕುರಿತಂತೆ ಆಳವಾಗಿ ಬರೆಯಬಲ್ಲ, ವಿಶ್ಲೇಷಣೆ ಮಾಡಬಲ್ಲ ಲೇಖಕ ಅದ್ದೆ. ಅಂಕಣಕಾರರಾಗಿಯೂ ಅಗ್ನಿ ಪತ್ರಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಾಟಕ, ಸಿನೆಮಾ ಕ್ಷೇತ್ರಗಳಲ್ಲೂ ಇವರು ದುಡಿಯುತ್ತಿರುವವರು.

ಮಂಜುನಾಥ ಅದ್ದೆ

ಕಳೆದ ಶತಮಾನದ ಪೂರ್ವಾರ್ಧ ಭಾಗವು ಕರ್ನಾಟಕ ವಷ್ಟೇ ಏಕೆ? ಇಡೀ ಭಾರತದಲ್ಲೆ ಹೊಸ ಬಗೆಯ ಕನಸಿನ ಬೀಜಗಳು ಮೊಳಕೆಯೊಡೆದಂತಹ ಕಾಲಘಟ್ಟವಾಗಿದೆ. ಈ ದಿನಮಾನಗಳಲ್ಲೇ ಭಾರತದ ಚರಿತ್ರೆಯ ಯಾವ ತಿರುವುಗಳಲ್ಲೂ ಮೂಡದ ಧ್ವನಿಯೊಂದು ಜೀವ ಪಡೆದದ್ದು ನಡೆಯಿತು. ಇಡೀ ಇಂಡಿಯಾದಲ್ಲಿ ಸಮಗ್ರ ಮತ್ತು ಸಮಷ್ಠಿ ಮಾನಸಿಕತೆಯೂ, ಕ್ರಿಯಾತ್ಮಕತೆಯೂ ಒಡಮೂಡಿದ ಕಾಲ ಅದಾಗಿತ್ತು.

ಇಂಥದ್ದೊಂದು ಸಾಮುದಾಯಿಕ ಹುರುಪು ಹೆಪ್ಪುಗಟ್ಟಲು ಕಾರಣವಾದದ್ದು ವಸಾಹತುಶಾಹಿಯ ವಿರುದ್ಧದ ಹೋರಾಟದ ಭಾಗವಾಗಿ. ಮೂರು ಶತಮಾನ ಗಳ ಕಾಲದ ಬ್ರಿಟಿಷ್ ಸಾಮ್ರಾಜ್ಯದ ದಾಸ್ಯವನ್ನು ಕಿತ್ತೊಗೆಯುವ ಸ್ವಾಭಿಮಾನ ಮತ್ತು ಛಲದೊಂದಿಗೆ ರೂಪ ಪಡೆದದ್ದು ಇಂಥದ್ದೊಂದು ಸಾಮೂಹಿಕ ಮನಸ್ಥಿತಿ. ಇಂಥಾ ಪಬ್ಲಿಕ್ ಡೋಮೆನ್‌ನ ಪ್ರಮುಖ ಅಂಶಗಳಾಗಿ ಅಂದು ಮುನ್ನೆಲೆಗೆ ಬಂದಂತ ಅಂಶಗಳು ಹಲವಾರು. ಇವುಗಳಲ್ಲಿ ದೇಶಾಭಿಮಾನ ಮತ್ತು ಪ್ರಾದೇಶಿಕ ಅನನ್ಯತೆ, ಸಾಂಸ್ಕೃತಿಕ ನೆಲೆಗಳ ಹುಡುಕಾಟ, ಹೊಸ ಬಗೆಯ ಉತ್ಪಾದನಾ ಚಟುವಟಿಕೆಯ ಕನಸು, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಭಿನ್ನತೆಗಳನ್ನು ಬದಿಗೆ ಸರಿಸಿ ಹೊಸ ನೆಲೆಯೊಂದರ ಹುಡುಕಾಟ, ಎಂದೂ ಕಂಡರಿಯದ-ಕೇಳರಿಯದ ರಾಜಕೀಯ ಮಾದರಿಯೊಂದರ ಹಂಬಲ.... ಹೀಗೆ ಹಲವು ಹತ್ತು ಬಗೆಯಲ್ಲಿ ಭಾರತದ ಜನಮಾನಸವು ಒಂದು ರೀತಿಯ ಜಾಗೃತಿ ಮತ್ತು ಹುಡುಕಾಟಕ್ಕೆ ಒಟ್ಟೊಟ್ಟಿಗೆ ತೆರೆದುಕೊಂಡ ಕಾಲವಾಗಿತ್ತು ಇಪ್ಪತ್ತನೇ ಶತಮಾನದ ಮೊದಲಾರ್ಧ.

ಭಾರತದ ಮಟ್ಟಿನ ಈ ಹೊಸ ಬಗೆಯ ಬೃಹತ್ ವಿನ್ಯಾಸವು ಆನಾವರಣ ಪಡೆಯಲು ಸಹಕಾರಿಯಾದ ಅಂಶಗಳು ಕೂಡಾ ವಿಪುಲವಾದವು. ಇದೇ ವೇಳೆಗೆ ಅಕ್ಷರಗಳಿಂದ ವಂಚಿತಗೊಂಡಿದ್ದ ಶ್ರಮಿಕ ಸಮುದಾಯಗಳ ದೊಡ್ಡ ಸಂಖ್ಯೆಯ ಸಮೂಹವು ಕಲಿಯುವ, ಓದುವ, ಜ್ಞಾನ ಮತ್ತು ವಿವೇಕವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಪಡೆಯಲಾರಂಭಿಸಿತ್ತು. ಇದರ ಫಲಶೃತಿಯಿಂದಾಗಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಶ್ರೇಣೀಕೃತ ತಾರತಮ್ಯವು ತನ್ನ ಪ್ರಶ್ನಾತೀತ ನೆಲೆಯನ್ನು ಕಳೆದುಕೊಂಡು ಜಾಳುಜಾಳಾದ ಕ್ರಮದಲ್ಲಾದರೂ ಬದಲಾವಣೆಗೆ ಒಡ್ಡಿಕೊಳ್ಳಲಾರಂಭಿಸಿತ್ತು. ಈ ಬಗೆಯ ಕಲಿಕೆಯ ವಿವೇಕ ವಿಸ್ತಾರ ಕಂಡಂತೆಲ್ಲಾ ಸ್ವಾತಂತ್ರ ಚಳವಳಿಯ ಹೊಸ ನಡಿಗಟ್ಟು ಕನಸು ಮತ್ತು ಕಲ್ಪನೆಗೆ ಬಲವು ವೃದ್ಧಿಗೊಳ್ಳಲಾರಂಭಿಸಿತ್ತು.

ಇದು ಯಾರ ಭಾರತ? ಇದು ಯಾರ ಕರ್ನಾಟಕ? ಎಂದು ಹುಟ್ಟುವ ಪ್ರಶ್ನೆಗಳಿಗೆ ಹತ್ತೊಂಬತ್ತನೆಯ ಶತಮಾನ ಕೊಡುತ್ತಿದ್ದ ಉತ್ತರವೇ ಬೇರೆ ಇತ್ತು. ಇದು ರಾಜರ, ಧರ್ಮಗುರುಗಳ, ಪಾಳೇಗಾರರ, ದಂಡನಾಯಕರ ಭಾರತ. ಕೊನೆಗೆ ಇವರನ್ನೆಲ್ಲಾ ಮಣಿಸಿ ತನ್ನ ತೆಕ್ಕೆಗೆ ತೆಗೆದು ಕೊಂಡು ಅಂಕೆಗೆ ತಕ್ಕಂತೆ ಕುಣಿಸುವ ಬಿಳಿಯ ದೊರೆಗಳ ಭಾರತ ಎಂಬುದು ಹತ್ತೊಂಭತ್ತನೆಯ ಶತಮಾನ ಕೊಡುತ್ತಿದ್ದ ಉತ್ತರವಾಗಿತ್ತು. ಆದರೆ 20ನೆಯ ಶತಮಾನದ ಮೊದಲಾರ್ಧದ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಅನೇಕ ಬಗೆಯ ಚಾರಿತ್ರಿಕ ಒತ್ತಡಗಳ ಕಾರಣಕ್ಕೆ ಭಾರತೀಯ ಮನಸ್ಥಿತಿಯ ಸಮಗ್ರತೆಗೆ ಹೊಸಾ ಆಯಾಮಗಳೇ ದಕ್ಕುವಂತೆ ಆಗಿತ್ತು.

ಇಂಥಾ ಹೊಸ ದಕ್ಕುವಿಕೆಯನ್ನು ರೂಪಿಸುವಲ್ಲಿ ಕೆಲಸ ಮಾಡಿದ ನೂರಾರು ಅಂಶಗಳಲ್ಲಿ ಅಕ್ಷರ ಕಲಿಕೆಯದ್ದು ದೊಡ್ಡ ಪಾತ್ರ. ಇದರಿಂದ ರೂಪುಗೊಂಡ ಕಲೆ, ಸಾಹಿತ್ಯ, ಸಂಗ್ರಹಿತ ಜನಪದ, ರಂಗಭೂಮಿ, ಸಂಗೀತಗಳಂತಹ ಸಂವಹನಗಳದ್ದು ಕೂಡಾ ಅಷ್ಟೇ ದೊಡ್ಡ ಪಾತ್ರವಿದೆ. ಇವುಗಳೆಲ್ಲಾ ವಿದ್ಯುತ್ ಸಂಚಾರಕ್ಕೆ ಏರ್ಪಡುವ ಜಾಲಗಳಂತೆ ವಿಚಾರ, ಕನಸು, ಕ್ರಿಯೆ ಮತ್ತು ಪ್ರತಿರೋಧಗಳ ವಿಸ್ತರಣೆ, ಪಸರಣೆಗೆ ಮುಖ್ಯವಾದ ಕೊಡುಗೆಯನ್ನು ಕೊಟ್ಟಂತವು. ಈ ಬಗೆಯ ವಿಚಾರಾತ್ಮಕ ವಿದ್ಯುತ್ ಸಂಚಾರ ಭಾರತದಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಯೋಗ ರೂಪ ಪಡೆದದ್ದು ಈಗ ಇತಿಹಾಸ ವಾಗಿದೆ. ಇವುಗಳ ನಂತರ ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಸಂವಹನ ಮತ್ತು ಅಭಿವ್ಯಕ್ತಿಯ ನೆಲೆಯಾಗಿ ಹೊಸ ಪ್ರವೇಶಿಕೆ ಪಡೆದದ್ದು ಸಿನೆಮಾ.

ಸಿನೆಮಾ ಮತ್ತು ಸಮಾಜ

ಬೆಳ್ಳಿಪರದೆ ಅರ್ಥಾತ್ ಮಾಯಾಪರದೆಯ ಪರಿಣಾಮಗಳ ವಿಚಾರವಂತೂ ಹಲವಾರು ಆಯಾಮಗಳಲ್ಲಿ ಅಧ್ಯಯನಕ್ಕೆ ಯೋಗ್ಯವಾದ ವಿಷಯ ಆಗಿದೆ. ಇದು ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ; ಅಲ್ಲಿಯ ವ್ಯಾಪ್ತಿಗೆ ತಕ್ಕಂತೆ ವಿಸ್ತೃತವಾದ ರೀತಿಯಲ್ಲಿ ಅಧ್ಯಯನಿಸುವ ಅಗತ್ಯವಿದೆ. ಪ್ರದರ್ಶನ ಕಲೆಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಪರಿಣಾಮಗಳು ಬಹುಮಟ್ಟಿಗೆ ಅಗೋಚರವಾದಂತವು. ಇಂಥಾ ಅತಿ ಸೂಕ್ಷ್ಮ ಹಾಗೂ ಮನಃ ಪಲ್ಲಟದ ಪರಿಣಾಮಗಳನ್ನು ವ್ಯಾಪಕವಾಗಿ ಒಳಗೊಂಡ ಪ್ರದರ್ಶನ ಕಲೆಗಳಲ್ಲಿ ಸಿನೆಮಾ ಅತಿ ಕಡಿಮೆ ಅವಧಿಯಲ್ಲೇ ಪ್ರಮುಖವಾದ ಸ್ಥಾನಕ್ಕೆ ಬಂದು ನಿಂತದ್ದು ಕೂಡಾ ಈಗ ಇತಿಹಾಸ.

1950ರ ಹೊತ್ತಿಗೆ ಸಿನೆಮಾ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರಯೋಗಗೊಂಡು; ಪ್ರದರ್ಶನ ಕಂಡು ಜನಮಾನಸವನ್ನು ತಲುಪಿದ್ದು ಉಂಟು. ಇದರಿಂದಾಗಿ ಮುಂದೆ ಭಾರತದ ಎಲ್ಲಾ ಭಾಗಗಳಲ್ಲೂ ಪ್ರಮುಖ ಮಾಧ್ಯಮದ ಸ್ಥಾನ ಪಡೆದ ಸಿನೆಮಾ ಜನಪ್ರಿಯವಾದ ಪರ್ಯಾಯ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಅಭಿವ್ಯಕ್ತಿಯ ಮಾಧ್ಯಮದಂತೆ ಬೆಳೆದು ನಿಂತದ್ದು ವಾಸ್ತವ. ಮೊದಮೊದಲು ಇದು ರಂಗಭೂಮಿಯ ವಿಸ್ತರಣಾ ರೂಪದಂತೆ ಕಂಡರೂ ತನ್ನ ಸಾಧ್ಯತೆಗಳನ್ನು ಮುಗಿಲೆತ್ತರಕ್ಕೆ ವಿಸ್ತರಿಸಿಕೊಂಡು ವಿರಾಟ ರೂಪವನ್ನು ಪಡೆದದ್ದು ಕೂಡಾ ಆಗಿದೆ.

ಇಂದು ಕುಟುಂಬ, ವೈಧ್ಯಕೀಯ, ಜಾತಿ, ದುಡಿಯುವ ಜನರು, ಎಲೈಟ್ ಕ್ಲಾಸ್, ಪ್ರೀತಿ, ಬಡ ಜನರು, ಕಾರ್ಮಿಕರು, ಆರ್ಥಿಕ ವಿಚಾರಗಳು, ಚರಿತ್ರೆ, ಪುರಾಣ.... ಹೀಗೆ ಸಿನೆಮಾ ಮಾಧ್ಯಮಕ್ಕೆ ಎಟುಕದ ವಸ್ತುಗಳೇ ಇಲ್ಲ. ಯಾವುದೇ ಸಿನೆಮಾವಾಗಲಿ; ಅದು ಏಕಕಾಲಕ್ಕೆ ಸಂಘಟಿತ ವ್ಯಾಪಾರವೂ-ಸಂಘಟಿತ ಕಲೆಯೂ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಷ್ಟಾದರೂ ಸಿನೆಮಾದ ಸಾಂಸ್ಕೃತಿಕ ಮಹತ್ವಕ್ಕೆ ಕುಂದಿಲ್ಲದಂತೆ ಅದು ಜನಮಾನಸವನ್ನು ಆವರಿಸಿರುವುದು ಅಷ್ಟೇ ವಾಸ್ತವ. ಸ್ವಾತಂತ್ರ ಚಳವಳಿಯ ಉತ್ಕರ್ಷದ ವೇಳೆಗೆ ಆರಂಭ ಪಡೆದ ಸಿನೆಮಾ ರಂಗವು ಸ್ವಾತಂತ್ರದ ನಂತರ ತನ್ನ ಪ್ರವರ್ಧತೆಯನ್ನು, ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತು.

ಈ ವ್ಯಾಪ್ತಿಯ ವಿಸ್ತಾರಕ್ಕೆ ಸಹಕಾರಿಯಾದದ್ದು ವೈವಿಧ್ಯಮಯ ಹಾಗೂ ಬಹುರೂಪಿ ಭಾರತದಲ್ಲಿನ ಬಗೆದಷ್ಟು ಮುಗಿಯದ ಕಥಾ ಸರಕು. ಇದರ ಒಟ್ಟಿಗೆ ಸ್ವಾತಂತ್ರ ಚಳವಳಿ ಇಡೀ ದೇಶದಲ್ಲಿ ಕಟ್ಟಿಕೊಟ್ಟಿದ್ದ ಮೌಲ್ಯಗಳು, ಜವಾಬ್ದಾರಿ, ಏರ್ಪಟ್ಟಿದ್ದ ಹೊಸ ಬಗೆಯ ನೈತಿಕತೆ, ಸಮಾಜವನ್ನು ಕುರಿತಾಗಿ ಉಂಟಾಗಿದ್ದ ನವೀನ ನಿರ್ವಚನಗಳು, ಸಂವಿಧಾನದ ಆಶಯಗಳೆಲ್ಲವೂ ಒಟ್ಟುಗೂಡಿ ಸಿನೆಮಾ ತಯಾರಿಕೆಯ ಅರ್ಥಾತ್ ನಿರ್ಮಾಣದ ಕ್ಯಾನ್ವಾಸ್ ಅನ್ನು ವಿಸ್ತರಿಸಿದ್ದವು. ಈ ವಿಸ್ತಾರ ಭಾರತದ ಮಣ್ಣಿನಷ್ಟು ಅಗಲ, ಆಕಾಶದಷ್ಟು ಉದ್ದ ಎಂಬಷ್ಟು ದೊಡ್ಡದಿತ್ತು.

ಭಾರತದ ಪಾರಂಪರಿಕ ವರ್ತುಲಗಳಲ್ಲಿನ ಹೆಮ್ಮೆಯ ಸಂಗತಿಗಳು ತೆರೆಯ ಮೇಲೆ ಮೂಡಿ ಸಾಂಸ್ಕೃತಿಕ ಅನನ್ಯತೆಗೆ ಸಹಕಾರಿಯಾದವು. ಇಲ್ಲಿ ಗತಚರಿತ್ರೆಯ ಆಪ್ತ ಸಂಗತಿಗಳು ಕಥೆಯಾಗಿ, ಸಂಭಾಷಣೆಯಾಗಿ, ದೃಶ್ಯಗಳಾಗಿ ಬಿಂಬಿತಗೊಂಡವು. ಹಾಗೆಯೇ ಅದೇ ಪರಂಪೆಯಲ್ಲಿನ ವೌಢ್ಯಗಳು, ಜಾತಿ ತಾರತಮ್ಯ, ಶೋಷಣೆ, ಲಿಂಗ ಅಸಮಾನತೆ.... ಮುಂತಾದವು ಬೆಳ್ಳಿ ಪರದೆಯ ಮೇಲೆ ಪ್ರಶ್ನೆಗೆ ಒಳಗಾದವು. ದೇಶದ ಜನತೆಯ ಸಾಮಾಜಿಕ ಮನಸ್ಥಿತಿಯು ಹೊಸದೊಂದು ಬಗೆಯ ಸಮೀಕರಣಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಅನಿವಾರ್ಯವಾಗಿತ್ತು. ಐವತ್ತು-ಅರವತ್ತರ ದಶಕದಲ್ಲಿ ಒಂದು ಬಗೆಯ ಸಮಾಜಿಕ ಶಿಕ್ಷಣದಂತೆ, ನೈತಿಕ ಜವಾಬ್ದಾರಿಯಂತೆ, ನಿರ್ಲಕ್ಷಿತ ಸಂಗತಿಗಳನ್ನು ಅಪ್ಪುವ ಹೊಣೆಗಾರಿಕೆಯಂತೆ, ವೈಯಕ್ತಿಕ ಮನೋಗೊಂದಲಗಳು ಸ್ಪಷ್ಟತೆಯ ಕಡೆಗೆ ನಡೆಯುವಂತೆ.... ಇಂತಹ ಹಲವು ಬಗೆಯ ಪರಿಣಾಮಗಳ ಮೊತ್ತವಾಗಿ ಸಿನೆಮಾ ರಂಗ ವಿಸ್ತರಿಸಿಕೊಂಡದ್ದು ಖಚಿತ. ಇದರೊಟ್ಟಿಗೆ ಮನರಂಜನೆಯ ಮೊತ್ತದಿಂದ ಉಂಟಾದ ಜನತೆಯ ಮಾನಸಿಕ ಪ್ರಪುಲ್ಲತೆಯು ಅಳತೆಗೆ ಸಿಗದಷ್ಟು ದೊಡ್ಡ ಪರಿಣಾಮಗಳನ್ನು ತಂದದ್ದು ಕೂಡಾ ಸುಳ್ಳಲ್ಲ.

ಇದು ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆದ ವಿದ್ಯಮಾನವೇ ಆಗಿತ್ತು. ಮೇಲ್ಕಂಡ ವಿಚಾರಗಳಿಗೆ ತಕ್ಕಂತೆ ಕನ್ನಡ, ತಮಿಳು, ಮಲೆಯಾಳಂ, ತೆಲುಗು, ಬಂಗಾಳಿ, ಮರಾಠಿ, ಹಿಂದಿ.... ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿ ದೊಡ್ಡ ಬಗೆಯ ಪ್ರಯೋಗಗಳೇ ನಡೆದವು. ಈ ಪ್ರಯೋಗಗಳಿಗೆ ಪ್ರೇಕ್ಷಕ ವರ್ಗದಿಂದ ದೊಡ್ಡ ಮಟ್ಟದ ಮನ್ನಣೆಯೂ ಸಿಗುವಂತಾಗಿತ್ತು. ಪ್ರತಿ ಪ್ರಾದೇಶಿಕತೆಯ ಚರಿತ್ರೆ, ಪುರಾಣ, ಹಿರಿಮೆ, ವಂಚನೆ, ತಾರತಮ್ಯಗಳಂಥಾ ಸಂಗತಿಗಳು ಬೆಳ್ಳಿಪರದೆಯ ವಸ್ತುಗಳಾಗಿ ಅವುಗಳಲ್ಲಿ ನಾಯಕ ನಟರಾದವರೊಂದಿಗೆ ಪ್ರೇಕ್ಷಕ ತನ್ನದೇ ಆದ ಬಗೆಯಲ್ಲಿ ವಿಶಿಷ್ಟ ಸಂಬಂಧವನ್ನು, ಬೆಸುಗೆಯ ಸಮೀಕರಣವನ್ನು ಹೊಂದುವಂತಾದದ್ದು ಕಣ್ಣ ಮುಂದಿರುವ ಸಂಗತಿ.

ಸಿನೆಮಾ ನಾಯಕ ನಟರ ಜನಪ್ರಿಯತೆ ಮತ್ತು ಸಮುದಾಯದ ಜನರೊಂದಿಗಿನ ಸಮೀಕರಣ ಸಂಬಂಧ ಭಾರತೀಯ ಪರಂಪರೆಯಲ್ಲಿ ಪರ್ಯಾಯ ಸಾಂಸ್ಕೃತಿಕ ಪ್ರತೀಕದಂತೆ ಹೊಸ ಬೆಳವಣಿಗೆಯಾಗಿತ್ತು. ಅರವತ್ತು -ಎಪ್ಪತ್ತರ ದಶಕದ ಹೊತ್ತಿಗೆ ಭಾರತದ ಪ್ರತೀ ಪ್ರಾದೇಶಿಕ ಭಾಷೆಗಳಲ್ಲಿ ಸಿನಿ ನಾಯಕನಟರೊಬ್ಬರ ಸಾಂಸ್ಕೃತಿಕ ನಾಯಕತ್ವ ಪ್ರತಿಷ್ಠಾಪಿತವಾಗಿತ್ತು. ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ತಮಿಳಿನಲ್ಲಿ ಎಂ.ಜಿ.ಆರ್. ತೆಲುಗಿನಲ್ಲಿ ಎನ್. ಟಿ. ರಾಮರಾವ್, ಕನ್ನಡದಲ್ಲಿ ಡಾ. ರಾಜ್‌ಕುಮಾರ್.... ಹೀಗೆ ಎಲ್ಲಾ ಭಾಷೆಗಳಲ್ಲೂ ಇದು ಏರ್ಪಟ್ಟಿತ್ತು.

ಡಾ. ರಾಜ್ ಮತ್ತು ನಟನೆಯ ಪಯಣ

ಡಾ. ರಾಜ್‌ಕುಮಾರ್‌ರವರು ರಂಗಭೂಮಿ ಮತ್ತು ಸಿನೆಮಾ ಎರಡೂ ಪ್ರಕಾರಗಳಲ್ಲಿ ಅಭಿನಯಿಸಿರುವ ನಟರು. ಮುವತ್ತರ ದಶಕದ ಕೊನೆಯ ಹೊತ್ತಿಗಾಗಲೇ ಮುಖಕ್ಕೆ ಬಣ್ಣ ಹಚ್ಚಿ ಬಾಲನಟರಾಗಿ ನಾಟಕಗಳಲ್ಲಿ ಅಭಿನಯಿಸಲಾರಂಭಿಸಿದ್ದರು. ರಾಜ್‌ರವರ ಕೌಟುಂಬಿಕ ಹಿನ್ನೆಲೆಯೂ ಇದಕ್ಕೆ ಕಾರಣವಾಗಿತ್ತು. ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಸ್ವತಃ ಪ್ರಖ್ಯಾತಿ ಪಡೆದ ರಂಗ ಕಲಾವಿದರಾಗಿ ಕಂಪೆನಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 24 ಏಪ್ರಿಲ್ 1929ರಲ್ಲಿ ರಾಜ್‌ಕುಮಾರ್ ಹುಟ್ಟಿದಾಗ ಇವರ ತಂದೆ ಪುಟ್ಟಸ್ವಾಮಯ್ಯನವರು ವೃತ್ತಿ ರಂಗಭೂಮಿಯ ಕಂಪೆನಿಗಳಲ್ಲಿ ನಟಿಸುತ್ತಾ ಊರೂರ ಮೇಲೆ ಸುತ್ತುತ್ತಿದ್ದರು.

ರಾಜ್‌ಕುವಾರ್ ಚಾಮರಾಜನಗರದಿಂದ ತಮಿಳುನಾಡಿನ ಬದಿಗೆ ಅಂಟಿಕೊಂಡ ಸಿಂಗಾನಲ್ಲೂರು- ಗಾಜನೂರಿನಲ್ಲೇ ಜನಿಸಿದರಾದರೂ; ನಡೆದಾಡುವ ಹೊತ್ತಿಗೆಲ್ಲಾ ಸಂಸಾರ ಊರೂರು ತಿರುಗುತ್ತಿದ್ದ ಪುಟ್ಟಸ್ವಾಮಯ್ಯನವರನ್ನು ಕೂಡಿಕೊಂಡಿತ್ತು. ಇದರ ಅರ್ಥ ರಾಜ್‌ರವರು ತಮ್ಮ ಪ್ರಜ್ಞೆ ಅರಳಿದ ಕ್ಷಣದಿಂದಲೂ ರಂಗಭೂಮಿಯ, ನಟನೆಯ ಚಟುವಟಿಕೆಗಳನ್ನು ಕಣ್ಣಿಗೆ ತುಂಬಿಕೊಂಡೇ ಬೆಳೆದವರಾಗಿದ್ದರು. ಸತ್ಯ ಹರಿಶ್ಚಂದ್ರನ ಪಾತ್ರ ನಿರ್ವಹಿಸುತ್ತಿದ್ದ ತನ್ನ ತಂದೆಯ ಜೊತೆಗೆ ಮಗು ಲೋಹಿತಾಶ್ವನಾಗಿ ತಮ್ಮ ಎಂಟನೆಯ ವಯಸ್ಸಿಗೇ ರಾಜ್ ನಟಿಸಿದ್ದರು. ಇವರೊಂದಿಗೆ ಇವರ ಸಹೋದರಿ ಶಾರದಮ್ಮ ಕೂಡಾ ನಟಿಸುತ್ತಿದ್ದರು. ಅಂದರೆ ಇವರ ಇಡೀ ಕುಟುಂಬವೇ ರಂಗ ಪರಿಸರದಲ್ಲಿ ಒಡನಾಡಿ ಮಿಂದು ಬೆಳೆದದ್ದಾಗಿತ್ತು.

ಇಂತಹ ರಾಜ್‌ರವರು 1954ರಲ್ಲಿ ಮೊಟ್ಟಮೊದಲಿಗೆ ನಟಿಸಿದ್ದು ಬೇಡರ ಕಣ್ಣಪ್ಪ ಎಂಬ ಕನ್ನಡ ಬದುಕಿನ ನೆಲ ಮೂಲದ ಕಾಣ್ಕೆಯಂತಿದ್ದ ಚಿತ್ರದಲ್ಲಿ. ಸ್ವತಃ ರಾಜ್‌ರವರೇ ಹೇಳಿಕೊಂಡಂತೆ ನಮ್ಮದು ಕಡು ಕಷ್ಟದ ಕುಟುಂಬ. ಹೆಚ್ಚು ಜನರಿದ್ದ ಕುಟುಂಬ. ಒಂದೊತ್ತಿನ ಊಟಕ್ಕೂ ತತ್ವಾರ ಪಡುತ್ತಿದ್ದೆವು. ಹುಟ್ಟಿನಿಂದ ನಟನೆಯಲ್ಲೇ ಬೆಳೆದದ್ದರಿಂದ ಬೇರೆ ಕಸುಬು ಗೊತ್ತಿರಲಿಲ್ಲ. ಹಾಗಾಗಿ ನಾನು ಹೊಟ್ಟೆ ಪಾಡಿಗಾಗಿ ಪಾರ್ಟ್‌ಗಳನ್ನು ಹಾಕಲೇ ಬೇಕಿತ್ತು. ಅಭಿನಯ ನನ್ನ ಹಾಗೂ ಕುಟುಂಬದ ಹೊಟ್ಟೆಪಾಡಾಗಿತ್ತು ಇದು ರಾಜ್‌ರವರ ಅಂದಿನ ಸ್ಥಿತಿ. ಮುಂದೆ ಹೊಟ್ಟೆಪಾಡಿಗೆ ನಟನಾ ವೃತ್ತಿ ಮಾಡಿದ ರಾಜ್, ಕರ್ನಾಟಕದ ಇತಿಹಾಸ ಪುರುಷ ಆದದ್ದು ಒಂದು ಪ್ರಕ್ರಿಯೆ ಅರ್ಥಾತ್ ದೀರ್ಘ ಪಯಣದ ಮೂಲಕ.

1954 ರಿಂದ 1961ರ ತನಕ ಏಳು ವರ್ಷಗಳಲ್ಲಿ ಹದಿನೇಳು ಸಿನೆಮಾಗಳಲ್ಲಿ ಮಾತ್ರ ಅವಕಾಶ ಪಡೆದು ಕೊಂಡಿದ್ದರು ಮುತ್ತುರಾಜ್ ಸಿಂಗಾನಲ್ಲೂರು. 1961 ರಿಂದ 70ರ ಹೊತ್ತಿಗೆ ಇವರು ಕೇವಲ ಒಂಬತ್ತು ವರ್ಷಗಳಲ್ಲಿ ನೂರಾ ಇಪ್ಪತ್ತೊಂದು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಇದು ಮೇರು ನಟನ ಪ್ರತಿಭೆಯ ಪಯಣ ಎಂಥದ್ದು ಎಂಬುದನ್ನು ನಮಗೆಲ್ಲಾ ತೋರಿಸು ತ್ತದೆ. ಸುದೀರ್ಘ ಕಾಲ ಅಭಿನಯ ಮಾತ್ರ ದಿಂದಲೇ ಜನಪ್ರಿಯತೆಯನ್ನು ರಾಜ್‌ಕುಮಾರ್‌ರವರಂತೆ ಕಾಪಾಡಿ ಕೊಂಡ ಮತ್ತೊಬ್ಬ ನಟ ನಮಗೆ ಕರ್ನಾಟಕದಲ್ಲೇ ಮಾತ್ರ ವಲ್ಲ; ಭಾರತದ ಉದ್ದಗಲಕ್ಕೂ ಕಾಣಸಿಗುವುದಿಲ್ಲ. ಒಟ್ಟು 210 ಸಿನೆಮಾಗಳಲ್ಲಿ ತಮ್ಮ ಚಾಪನ್ನು ಒತ್ತಿರುವ ರಾಜ್‌ರನ್ನು ಕನ್ನಡದ ಪ್ರೇಕ್ಷಕರು ಇಷ್ಟಪಡಲು ಇದ್ದ ಚಾರಿತ್ರಿಕ ಅಂಶಗಳು ಯಾವುವು? ಇದಕ್ಕೆ ರಾಜ್‌ರವರು ಸಲ್ಲಿಸಿದ ನ್ಯಾಯ ಎಂಥದ್ದು? ಸಮಗ್ರ ಕರ್ನಾಟಕದ ಸಾಂಸ್ಕೃತಿಕ ವ್ಯಕ್ತಿತ್ವವೊಂದು ರಾಜ್‌ರವರಿಗೆ ದಕ್ಕಿದ್ದಾದರು ಹೇಗೆ? ಇವೆಲ್ಲಾ ದೀರ್ಘ ಮತ್ತು ಸೂಕ್ಷ್ಮ ಅಧ್ಯಯನಕ್ಕೆ ಯೋಗ್ಯವಾದ ಸಂಗತಿಗಳಾಗಿವೆ.

ಸಾಮಾಜಿಕ ತಾರತಮ್ಯಕ್ಕೆ ಮುಖಾಮುಖಿ

ರಾಜ್‌ಕುಮಾರ್‌ರವರು ನಟಿಸಿರುವ 210 ಚಿತ್ರಗಳ ವಸ್ತು ವೈವಿಧ್ಯಮಯ ಹಾಗೂ ಅವುಗಳಲ್ಲಿ ಇವರು ತೋರಿಸಿರುವ ನಟನಾ ಸಾಮರ್ಥ್ಯವು ಅವರ ಪ್ರತಿಭೆಗೆ ತಕ್ಕಂತೆ ನಮ್ಮೆ ದುರು ಇದೆ. ಸಾಮಾಜಿಕ, ಭಕ್ತಿಪ್ರಧಾನ, ಐತಿಹಾಸಿಕ, ನಾಡಾಭಿಮಾನ, ರಾಜಕೀಯ ಸುಲಿಗೆಕೋರರ ವಿರುದ್ಧದ ಬಂಡಾಯ, ಕೌಟುಂಬಿಕ.... ಹೀಗೆ ತರಹೇವಾರಿ ವಿಷಯ ಗಳುಳ್ಳ ಸಿನೆಮಾಗಳಲ್ಲಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿ ಕೊಂಡವರು ರಾಜ್‌ಕುಮಾರ್. ಇವರ ಬಹುತೇಕ ಸಿನೆಮಾಗಳು ಸಿದ್ಧ ವ್ಯವಸ್ಥೆಯ ಲೋಪಗಳ ವಿರುದ್ಧದ ಬಂಡೆದ್ದು ಸಮಾಜಕ್ಕೆ ಹೊಸ ಸಂದೇಶವನ್ನು ಕೊಟ್ಟಂತಹವೇ ಆಗಿವೆ.

ರಾಜ್‌ಕುಮಾರ್‌ರವರ ಭಕ್ತಿ ಪ್ರಧಾನ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಈ ಸಿನೆಮಾಗಳಲ್ಲಿ ಬರುವ ಸಂತರು, ಸಾಧಕರು ಮತ್ತು ಮಹಾಮಹಿಮರು ವ್ಯವಸ್ಥೆಯಲ್ಲಿನ ಲೋಪ ದೋಷಗಳ ವಿರುದ್ಧ ಬದುಕಿನ ಉದ್ದಕ್ಕೂ ಸೆಣೆಸಾಡಿದವರೇ ಆಗಿದ್ದಾರೆ. ಇವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಈ ಮಾತುಗಳಿಗೆ ಸಾಕ್ಷಿಯಂತೆ ಈ ಘಳಿಗೆಗೂ ಇದೆ. ಧಾರ್ಮಿಕ ಕಟ್ಟೆಳೆಗಳನ್ನು ಮೀರುವ ಮಾನವಾತಾವಾದಿ ಸಂದೇಶ ಈ ಸಿನೆಮಾದ ವಸ್ತು. ತನ್ನದಲ್ಲದ ಹುಟ್ಟಿನ ತಪ್ಪಿಗೆ ಧಾರ್ಮಿಕ ಆಚರಣೆಗಳ ಕಾರಣಕ್ಕಾಗಿ ಬಹುಷ್ಕೃತಗೊಳ್ಳುವ ಕಣ್ಣಪ್ಪ ತನ್ನ ವಿರುದ್ಧದ ಶೋಷಣೆಯನ್ನು ಮೀರುವುದು ಒಂದು ದೊಡ್ಡ ಧ್ಯೋತಕ ದಂತೆ ನಮ್ಮ ಕಣ್ಣೆದುರು ಇದೆ. ಹಾಗೆಯೇ ಭಕ್ತ ಕನಕದಾಸ ಚಿತ್ರದಲ್ಲಿ ಕನಕದಾಸರು ಜಾತಿ ಶ್ರೇಣೀಕರಣದ ವಿರುದ್ಧ ತಮ್ಮದೇ ಆದ ಸಾತ್ವಿಕ ಮಾರ್ಗದಲ್ಲಿ ಹೋರಾಡುವ ಚಿತ್ರಣ ವನ್ನು ಕಾಣಬಹುದು. ರಾಜ್ ಅಭಿನಯದ ಜಗಜ್ಯೋತಿ ಬಸವೇಶ್ವರ, ಭಕ್ತ ವಿಜಯ, ಭಕ್ತಚೇತ ಇವೆಲ್ಲವೂ ಇಂಥದ್ದೇ ಸಾಮಾಜಿಕ ಶ್ರೇಣೀಕರಣ ಮತ್ತು ತಾರತಮ್ಯದ ವಿರುದ್ಧವಾಗಿ ಮೂಡಿಬಂದ ಭಕ್ತಿ ಪಂಥದ ಕುರಿತಾದ ಸಿನೆಮಾಗಳಾಗಿವೆ.

ಇದರಾಚೆಗೆ ಸಾಮಾಜಿಕ ಚಿತ್ರಕಥೆಯುಳ್ಳ ಸಿನೆಮಾಗಳಲ್ಲಿ ಕೂಡಾ ಡಾ. ರಾಜ್‌ಕುಮಾರ್ ಎಲ್ಲಾ ಬಗೆಯ ತಾರತಮ್ಯಗಳ ವಿರುದ್ಧ ಧ್ವನಿ ಎತ್ತಿದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರ ಸತಿಶಕ್ತಿ ಮತ್ತು ತೇಜಸ್ವಿನಿ ಸಿನೆಮಾಗಳು ಲಿಂಗ ಸಮಾನತೆಯ ಪ್ರಾಮುಖ್ಯತೆಯನ್ನು ಅನಾವರಣಗೊಳಿಸುತ್ತವೆ. ಕೌಟುಂಬಿಕ ಯಾನದಲ್ಲಿ ಮಹಿಳೆ ವಾಸ್ತವವಾಗಿ ಪ್ರಧಾನ ಪಾತ್ರ ವಹಿಸುವುದು ಭಾರತದ ನೆಲದಲ್ಲಿ ಕಣ್ಣಿಗೆ ಕಟ್ಟಿದ ಚಿತ್ರವಾಗಿದೆ. ಆದರೆ ಸಾಮಾಜಿಕ ಮಹತ್ವ ಮತ್ತು ಮನ್ನಣೆಯ ವಿಚಾರಗಳಲ್ಲಿ ಶತಮಾನಗಳಿಂದಲೂ ಮಹಿಳೆ ಎರಡನೇ ದರ್ಜೆಯ ನಾಗರಿಕಳಂತೆ ಬಿಂಬಿತವಾಗುವುದು ಎಲ್ಲರಿಗೂ ತಿಳಿದಿದೆ. ಇದನ್ನು ಪ್ರತಿರೋಧಿಸುವ ಹಾಗೂ ಮಹಿಳೆಯ ಮಹತ್ವ ವನ್ನು ಎತ್ತಿ ಹಿಡಿಯುವ ಪಾತ್ರಗಳಲ್ಲಿ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಹಾಗೆಯೇ ಕಳೆದ ಶತಮಾನದ ಮಧ್ಯಭಾಗದಲ್ಲಿ ಭಾರತವು ನಾಗರೀಕರಣಕ್ಕೆ ಒಳಗಾಗುತ್ತಿದ್ದ ದಿನಗಳು. ಈ ಸಮಯದಲ್ಲಿ ಕಲಿತವರು-ಕಲಿಯದವರು, ನಗರಿಕರು-ಹಳ್ಳಿಗರು ಎಂಬ ತಾರತಮ್ಯ ಭಾವನೆಯು ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಲವೂ ಅದಾಗಿತ್ತು. ಇಂತಹ ನವ ಬಗೆಯ ತಾರತಮ್ಯಗಳನ್ನು ರಾಜ್‌ಕುಮಾರ್ ಸಿನೆಮಾಗಳು ಬಿಂಬಿಸಿವೆ. ಹಾಗಾಯೇ ನೆಲದ ವಿವೇಕ ಉಳ್ಳವರು ಕೀಳಲ್ಲ, ಶಾಸ್ತ್ರ-ಪುರಾಣ ಕಲಿತವರ ವಿವೇಕ ದೊಡ್ಡದಲ್ಲ. ಮನುಷ್ಯರಾಗಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಇವರ ಬಹಳಷ್ಟು ಸಿನೆಮಾಗಳು ಬಿತ್ತರಿಸಿವೆ.

ದುಡಿಯುವ ಜನರ ಧ್ವನಿ

ರಾಜ್‌ಕುಮಾರ್ ವೈವಿದ್ಯಮಯ ವಸ್ತುಗಳಿದ್ದ ಸಿನೆಮಾಗಳಲ್ಲಿ ನಟಿಸಿದ್ದ ಮಾತ್ರಕ್ಕೆ ದೊಡ್ಡ ನಟರಾದವರಲ್ಲ. ಆ ವಸ್ತು ವೈವಿಧ್ಯದಲ್ಲಿ ಇವರ ಅಭಿವ್ಯಕ್ತಿ, ಸಂಭಾಷಣೆ, ನಟನೆ ಹೇಗಿತ್ತು ಎಂಬುದರ ಹೊರಣದಿಂದ ಜನರ ಮನ್ನಣೆಯನ್ನು ಪಡೆದವರು. ಇಪ್ಪತ್ತನೆಯ ಶತಮಾನದ ಉದ್ದಕ್ಕೆ ಬಂಡವಾಳಿಗರು ಮತ್ತು ದುಡಿಯುವ ವರ್ಗದ ಜನರ ನಡುವಿನ ಸಂಘರ್ಷವನ್ನು ನಾವು ಕಂಡಿದ್ದೇವೆ; ಈ ಶತಮಾನದಲ್ಲೂ ಕಾಣುತ್ತಿದ್ದೇವೆ. ಈ ಸಂಘರ್ಷಕ್ಕೆ ತಮ್ಮ ನಟನಾವೃತ್ತಿಯ ಉದ್ದಕ್ಕೆ ರಾಜ್‌ಕುಮಾರ್‌ರವರು ಮುಖಾಮುಖಿಯಾಗಿದ್ದಾರೆ. ಇದನ್ನು ಅವರ ಬಹಳಷ್ಟು ಚಿತ್ರಗಳಲ್ಲಿ ನಾವು ಕಾಣಬಹುದಾಗಿದೆ.

ಬಂಗಾರದ ಮನುಷ್ಯ ಮತ್ತು ಮಣ್ಣಿನ ಮಗ ಚಿತ್ರಗಳಲ್ಲಿ ತೀರಾ ಉಪೇಕ್ಷೇಗೆ ಒಳಗಾದ ರೈತರ ಬದುಕನ್ನು ತೆರೆಗೆ ತಂದಿರುವ ಪ್ರಯತ್ನಗಳು ನಡೆದಿವೆ. ವೃತ್ತಿ ಘನತೆ ಏನು ಎಂಬುದನ್ನು ಈ ಚಿತ್ರಗಳು ಬಿಂಬಿಸುತ್ತವೆ. ಅನ್ನವನ್ನು ದುಡಿಯುವ ರೈತ ಇತರರಿಗಿಂತ ಕೀಳಲ್ಲ, ಬೆವರಿನ ಗಮಲಿನಲ್ಲಿ ಎಲ್ಲರ ಬದುಕು ಅಡಗಿದೆ ಎಂಬುದನ್ನು ಈ ಚಿತ್ರಗಳು ಎತ್ತಿ ಹಿಡಿಯುತ್ತವೆ. ಕಾಲಮಾನದ ತಾಪದಲ್ಲಿ ಕೀಳೆಂದು ಗಣಿಸಲ್ಪಟ್ಟಿದ್ದ ರೈತ ಆದರ್ಶಪ್ರಾಯ ಎಂಬಂತೆ ಕಾಣಲು ಕಾರಣವಾಗಿದ್ದು ಇಂತಹ ಸಿನೆಮಾಗಳಲ್ಲಿನ ರಾಜ್‌ಕುಮಾರ್‌ರವರ ಅಭೂತಪೂರ್ವವಾದ ಅಭಿವ್ಯಕ್ತಿ ಯಿಂದಾಗಿ. ಇದರಂತೆಯೇ ಕುರಿ ಕಾಯುವ ವ್ಯಕ್ತಿಯ ವೃತ್ತಿ ಘನತೆಯು ನಗರದ ಶ್ರೀಮಂತನಿಗಿಂತ ಕೀಳಾದುದಲ್ಲ ಎಂಬುದನ್ನು ಇವರ ಬಂಗಾರದ ಪಂಜರ ಸಿನೆಮಾವು ಬಿಂಬಿಸುತ್ತದೆ. ಈ ನೆಲದಲ್ಲಿ ಇರುವ ಉತ್ಪಾದನಾ ಚಟುವಟಿಕೆಗಳಿಗೆ ಪೂರಕವಾದ ಯಾವುದೇ ಕಸುಬು ಕೂಡ ಕೀಳಲ್ಲ ಎಂಬುದನ್ನು ರಾಜ್‌ರವರ ಬಹಳಷ್ಟು ಸಿನೆಮಾಗಳು ಅಭಿವ್ಯಕ್ತಿಸಿವೆ. ಕಂಬಾರಿಕೆಯ ದೂರದಬೆಟ್ಟ ಸಿನೆಮಾವು ನಾಗರಿಕತೆಗಳು ಅರಳಲು ಕಾರಣವಾದ ಕುಲುಮೆ ಮತ್ತು ಕಬ್ಬಿಣದ ಕೆಲಸ ಮಾಡುವುದರ ಮಹತ್ವವನ್ನು ಎತ್ತಿ ಹಿಡಿಯುತ್ತವೆ. ಹಾಗೆಯೇ ಶುಭ ಕಾರ್ಯಗಳಿಗೆ ಸನಾದಿಯನ್ನು ನುಡಿಸುವ ಸವಿತಾ ಸಮಾಜದ ವ್ಯಕ್ತಿಗಳ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಸನಾದಿ ಅಪ್ಪಣ್ಣ ಸಿನೆಮಾವು ಮುನ್ನೆಲೆಗೆ ತಂದಿದೆ. ಜಾತಿ ಶ್ರೇಣಿಯ ಪ್ರಶ್ನೆಯನ್ನು ಕೂಡ ಈ ಸಿನೆಮಾ ಎತ್ತುತ್ತದೆ.

ಕನ್ನಡತನ ಮತ್ತು ರಾಜ್‌ಕುಮಾರ್

ಭಾರತದಲ್ಲಿ ಪ್ರದೇಶಾವಾರು ಅರ್ಥಾತ್ ಭಾಷಾವಾರು ರಾಜ್ಯಗಳ ವಿಂಗಡಣೆಯ ವಿಚಾರ ಸ್ವಾತಂತ್ರ ನಂತರದ ಬಹಳ ದೊಡ್ಡ ಬಿಕ್ಕಟ್ಟಿನ ಅಂಶವಾಗಿತ್ತು. ಭಾಷಾವಾರು ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಕೂಡ ಇದೇ ಕಾಲಮಾನ ದಲ್ಲಿ ಚಿಗುರೆಡೆದದ್ದು. ಕರ್ನಾಟಕ ರಾಷ್ಟ್ರೀಯತೆ ಎಂಬುದನ್ನು ನಿರೂಪಿಸುವ ಕ್ರಮದಲ್ಲಿ ಚಿತ್ರರಂಗದ ಕೊಡುಗೆ ಅಪಾರವಾದದ್ದು. ಅದರಲ್ಲೂ ರಾಜ್‌ಕುಮಾರ್‌ರವರ ಕೊಡುಗೆಯಂತೂ ಅಭೂತಪೂರ್ವವಾದದ್ದು. ಸಮಗ್ರ ಕರ್ನಾಟಕ ಎಂಬ ಭಾವನೆಗೆ ರಾಜ್‌ರವರ ಚಿತ್ರಗಳು ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ.

ಕರ್ನಾಟಕದ ಹೆಮ್ಮೆಯನ್ನು ಎತ್ತಿ ಹಿಡಿಯುವ ಚಾರಿತ್ರಿಕ ಸಿನೆಮಾಗಳನ್ನು ರಾಜ್‌ರವರ ಅಭಿನಯದಲ್ಲಿ ಕಂಡ ಇಲ್ಲಿಯ ಪ್ರೇಕ್ಷಕರು ತಮ್ಮ ಭಾವಕೋಶದಲ್ಲಿ ಕರ್ನಾಟಕ ವನ್ನು ಕಟ್ಟಿಕೊಳ್ಳಲು, ವಿಸ್ತರಿಸಿಕೊಳ್ಳಲು, ಚಿಂತಿಸಲು ಶುರುವಿಟ್ಟರು. ನಾಡಿನ ಬಗೆಗೆ ಶ್ರೀ ಸಾಮಾನ್ಯರು ಕಟ್ಟಿಕೊಳ್ಳುವ ಹಿರಿಮೆಯ ರೂಪವನ್ನು ತಮ್ಮ ಭಾವಪೂರ್ಣ ನಟನೆ ಮತ್ತು ಸಂಭಾಷಣೆಯಲ್ಲಿ ಬಳಸಿದ ಪಕ್ವ ಹಾಗೂ ಶುದ್ಧ ಭಾಷೆಯ ಮೂಲಕ ರಾಜ್ ಕಾಣಿಕೆಯಾಗಿ ಇತ್ತರು. ಸಮಗ್ರ ಕರ್ನಾಟಕದ ಉದ್ದಗಲಕ್ಕೆ ಇದ್ದಂತಹ ಚಾರಿತ್ರಿಕ ವ್ಯಕ್ತಿಗಳ ಪಾತ್ರಗಳನ್ನು ಅಭಿನಯಿಸುವುದರ ಮೂಲಕ ರಾಜ್‌ಕುಮಾರ್ ನಾವೆಲ್ಲಾ ಒಂದು-ನಾವಾಡುವ ನುಡಿ ಕನ್ನಡ, ನಾವು ಮೆಟ್ಟುವ ನೆಲ ಕರ್ನಾಟಕ ಎಂಬಂತೆ ಮನೋ ಚಿತ್ರಣವನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿದರು.

ಶ್ರೀಕೃಷ್ಣದೇವರಾಯ, ಮಯೂರ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ರಾಣಿ ಹೊನ್ನಮ್ಮ ಮುಂತಾದ ಇತಿಹಾಸದ ವಸ್ತುಗಳುಳ್ಳ ಸಿನೆಮಾಗಳಲ್ಲಿ ರಾಜ್‌ಕುಮಾರ್‌ರವರು ಅಭಿನಯಿಸಿದ ಬಗೆಯು ಕನ್ನಡತನದ ಸಮಷ್ಠಿ ಮಾನಸಿಕತೆಯನ್ನು ರೂಪಿಸುವಲ್ಲಿ ನೆರವಾಗಿದೆ. ಇತಿಹಾಸ ಕೇವಲ ಹಳೆಯ ನೆನಪುಗಳಲ್ಲ; ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮಾಹಿತಿ ಮಾತ್ರವಲ್ಲ, ಯಾವುದೇ ಪ್ರದೇಶದ ಸಮಕಾಲೀನ ಪರಿಸ್ಥಿತಿಗೆ ಆ ಪ್ರದೇಶದ ಇತಿಹಾಸ ನೀರು, ಆಹಾರವನ್ನು ಮರಕ್ಕೆ ಒದಗಿಸುವ ಬೇರು ಇದ್ದಂತೆ. ನಮ್ಮ ಗತದ ಹಿರಿಮೆ-ಗರಿಮೆಗಳು ಸಮಕಾಲಿನದ ನಡಿಗೆಯನ್ನು ಸದಾಕಾಲ ನಿರ್ದೇಶಿಸುತ್ತವೆ. ಇದು ಅಗೋಚರವಾದ ವಿಷಯಾತ್ಮಕ ಅಂಶವಾಗಿ ಜನಮನದಲ್ಲಿ ಜೀವಿಸುತ್ತದೆ. ಇದನ್ನು ಸಮಾಜ ಒಂದರ ಪ್ರಾಣವಾಯು ಎಂದು ಕೂಡ ಕರೆಯಬಹುದಾಗಿದೆ. ಕನ್ನಡತನದ ಪ್ರಾಣವಾಯುವನ್ನು ಕಳೆದ ಅರ್ಧ ಶತಮಾನದ ಉದ್ದಕ್ಕೂ ಯಶಸ್ವಿಯಾಗಿ ಮುನ್ನಡೆಸಿದವರು ರಾಜ್‌ಕುಮಾರ್.

ಇದು ರಾಜ್‌ರವರ ಪಾಲಿಗೆ ಕೇವಲ ಅಭಿನಯದ ಸಂಗತಿಯಾಗಿ ಮಾತ್ರ ಉಳಿದಿರಲಿಲ್ಲ. ಸ್ವತಃ ಕ್ರಿಯೆಗಿಳಿದು ಹೋರಾಡುವ ಮನಸ್ಥಿತಿಯು ಅವರದ್ದಾಗಿತ್ತು. ಕರ್ನಾಟಕದ ಜನರು ಹಾಗೂ ಕನ್ನಡ ಭಾಷೆ ಅಪಾಯಕ್ಕೆ ತುತ್ತಾದಾಗಲೆಲ್ಲಾ ರಾಜ್‌ರವರು ಬೀದಿಗಿಳಿದು ಹೋರಾಟಗಳನ್ನು ಮುನ್ನಡೆಸಿದ್ದೂ ಇದೆ. ಕನ್ನಡಿಗರ ಹಿತಾಸಕ್ತಿಗೆ, ಉದ್ಯೋಗಕ್ಕೆ, ಪ್ರಾಧಾನ್ಯತೆಗೆ ಧಕ್ಕೆಯಾದಾಗ ಗೋಕಾಕ್ ವರದಿಯನ್ನು ಜಾರಿ ಮಾಡುವಂತೆ ಸರಕಾರವನ್ನು ಒತ್ತಾಯಿಸಿ 1982ರಲ್ಲಿ ಕಾರವಾರದಿಂದ ರಾಯಚೂರಿನ ತನಕ, ಬೆಳಗಾವಿಯಿಂದ ಚಾಮರಾಜನಗರದವರೆಗೂ ಸಂಚರಿಸಿ ಬೃಹತ್ ಚಳವಳಿಯನ್ನು ಸಂಘಟಿಸಿದವರು ರಾಜ್‌ಕುಮಾರ್. ಈ ನಿಟ್ಟಿನಲ್ಲಿ ವಿಸ್ತೃತವಾದ ಅಧ್ಯಯನ ನಡೆಯಬೇಕಾದ ಅಗತ್ಯವಿದೆ.

ಸಾಂಸ್ಕೃತಿಕ

ನಾಯಕ ರಾಜ್ ಕರ್ನಾಟಕದ ಸಾಮಾನ್ಯ ಜನರ ಆಲೋಚನೆಯ ಲಹರಿಯನ್ನು ಅಕ್ಷರ ಜಗತ್ತಿನ ಮೂಲಕ ವಿಸ್ತರಿಸಿದ ಬಹಳಷ್ಟು ಜನ ಸಾಧಕರು ಇದ್ದಾರೆ. ಕುವೆಂಪು, ಶಿವರಾಮ ಕಾರಂತ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೀಗೆ ಸಾಲುಸಾಲು ಜನರನ್ನು ಇಲ್ಲಿ ಹೆಸರಿಸಬಹುದು. ಆದರೆ ಬೆಳ್ಳಿ ಪರದೆಯ ಮೂಲಕ ಶ್ರೀಸಾಮಾನ್ಯರ ಆಲೋಚನೆಗಳನ್ನು ವಿಸ್ತರಿಸಿ ಜನರ ಮನಸ್ಸಿನಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಸಾಂಸ್ಕೃತಿಕ ವ್ಯಕ್ತಿ ಡಾ. ರಾಜ್‌ಕುಮಾರ್ ಎಂಬುದರಲ್ಲಿ ಯಾವ ಅನುಮಾನವು ಇಲ್ಲ. ಕೂಲಿಕಾರ, ಕಸುಬುದಾರ, ರೈತ, ಕಾರ್ಮಿಕ, ಬಂಡಾಯಗಾರ, ಶೋಷಣೆಗಳ ವಿರುದ್ಧದ ಹೋರಾಟಗಾರ.... ಹೀಗೆ ಬಹುಜನರನ್ನು ಒಳಗೊಂಡ ಪಾತ್ರಗಳನ್ನು ನಿರ್ವಹಿಸಿದವರು ಇವರು. ಇವರ ಅಭಿನಯ ಕೇವಲ ಮನರಂಜನೆಗಷ್ಟೇ ಸೀಮಿತಗೊಳ್ಳದೇ ಸಾಮಾನ್ಯ ಪ್ರೇಕ್ಷಕರ ಚಿಂತನೆಯ ಮಟ್ಟವನ್ನು ಕೂಡ ವಿಸ್ತರಿಸಿದ್ದು ಇದೆ.

ರಾಜ್‌ಕುಮಾರ್‌ರವರ ಸಿನೆಮಾಗಳು ಕರ್ನಾಟಕದ ಉದ್ದಗಲಕ್ಕೆ ಅಕ್ಷರ ಕಲಿಯದ ಜನರ ತಿಳುವಳಿಕೆಯನ್ನು ಕಟ್ಟಿಕೊಟ್ಟ ಬಗೆ ತೀರಾ ವಿಶಿಷ್ಟವಾದದ್ದು. ಪುಸ್ತಕಗಳನ್ನು ಓದಿ ಕಲಿಯಲಾಗದ ಸ್ಥಿತಿಯಲ್ಲಿದ್ದಂತಹ ಜನರು ತಮ್ಮ ನೆಚ್ಚಿನ ನಾಯಕನ ಸಿನೆಮಾಗಳನ್ನು ನೋಡಿ ಕಲಿತದ್ದು ಬಹಳಷ್ಟಿದೆ. ಸತಿಶಕ್ತಿ ಸಿನೆಮಾವನ್ನು ನೋಡಿದ ಹಳ್ಳಿಗರು, ಹೆಂಗಸರ ಬಗೆಗಿನ ತಮ್ಮ ಪಾರಂಪರಿಕ ತಿಳುವಳಿಕೆಯನ್ನು ಬದಿಗಿಟ್ಟು ತಮ್ಮ ಸತಿಯರನ್ನು ಗೌರವಿಸಿದ ಉದಾಹರಣೆಗಳು ಬಹಳಷ್ಟಿವೆ. ಇನ್ನು ಬಂಗಾರದ ಮನುಷ್ಯ ಸಿನೆಮಾವನ್ನು ನೋಡಿದ ಬಹಳಷ್ಟು ಜನ ಕಲಿತವರು ಕೂಡ ಅದರಿಂದ ಪ್ರೇರಣೆಗೊಂಡು ಹಳ್ಳಿಗಳಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ಉದಾಹರಣೆಗಳಿವೆ. ತಮ್ಮ ಅಭಿನಯ ವೃತ್ತಿಯ ಉದ್ದಕ್ಕೂ ಕನ್ನಡದ ಮನಸುಗಳ ಮೇಲೆ ನೈತಿಕ ಎಚ್ಚರವನ್ನು ಬಿತ್ತರಿಸಿದ ಮೇರು ವ್ಯಕ್ತಿತ್ವ ರಾಜ್‌ಕುಮಾರ್‌ರವರದ್ದು.

ಗ್ರಾಮೀಣ ಸಮಾಜದ ಗುಣಲಕ್ಷಣಗಳಲ್ಲಿ ಫ್ಯೂಡಲ್ ಮೌಲ್ಯದ್ದು ಪ್ರಧಾನ ಪಾತ್ರ. ಎಲ್ಲಿ ಊಳಿಗಮಾನ್ಯದ ಅಂಶಗಳು ಜೀವಿಸುತ್ತವಯೋ ಅಲ್ಲಿ ತಾರತಮ್ಯ ಮನೋಭಾವ ಇದ್ದೇ ಇರುತ್ತದೆ. ಸ್ವಾತಂತ್ರ ನಂತರದಲ್ಲಿ ಸಂವಿಧಾನ ಕೊಟ್ಟಂತ ಹೊಸಬೆಳಕು ರಾಜ್ ಚಿತ್ರಗಳಲ್ಲಿ ಪ್ರತಿ ಫಲನಗೊಂಡದ್ದು ಇದೆ. ನಾಡಿನ ಎಲ್ಲಾ ವರ್ಗದ, ಎಲ್ಲಾ ಶ್ರೇಣಿಯ ಜನರು ರಾಜ್ ಚಿತ್ರಗಳ ಪ್ರೇಕ್ಷಕರಾಗಿದ್ದರಿಂದ ತಮ್ಮ ನೆಚ್ಚಿನ ನಾಯಕನ ಉವಾಚಗಳನ್ನು ಅಪ್ರಜ್ಞಪೂರ್ವಕವಾಗಿ ಆದರೂ ಅನುಸರಿಸುವ ಇರಾದೆಗೆ ಒಳಗಾಗಿದ್ದು ಉಂಟು. ದೌರ್ಜನ್ಯದ ವಿರುದ್ಧ ವಾದ ನಿಲುವಿನ ರಾಜ್ ಚಿತ್ರಗಳು ಪ್ರೇಕ್ಷಕರಲ್ಲಿ ಜಾತಿ, ವರ್ಗದ ಸಂಗತಿಗಳು ಎದುರಾದಾಗ ಸಣ್ಣ ಮಟ್ಟದ ಬದಲಾವಣೆಯನ್ನಂತೂ ತಂದದ್ದನ್ನು ಯಾರೂ ಅಲ್ಲಗೆಳೆಯುವಂತಿಲ್ಲ.

ಹೊಣೆಗಾರಿಕೆ ಅರಿತ ಮಗ, ಜವಾಬ್ದಾರಿ ಮೆರೆಯುವ ಸಹೋದರ, ಪ್ರಾಣ ಲೆಕ್ಕಿಸದೆ ಹೋರಾಡುವ ವೀರ ಸೇನಾನಿ, ಬೆವರರಿಸಿ ದುಡಿಯುವ ಶ್ರಮಿಕ, ಎಲ್ಲರ ಪ್ರೀತಿ ಯನ್ನು ಗಳಿಸಲು ಎಣಗುವ ಬಂಧು.... ಹೀಗೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಜನರ ನಡತೆಯನ್ನು ತಿದ್ದುವಲ್ಲಿ ರಾಜ್‌ರವರು ಯಶಸ್ವಿಯಾಗಿದ್ದಾರೆ. ಈ ಬಗೆಯಲ್ಲಿ ಮನೆ, ಮನವನ್ನು ಆವರಿಸಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ರಾಜ್‌ಕುಮಾರ್ ಪಡೆದಿದ್ದಾರೆ.

ಪ್ರತಿಭೆಯ ಧ್ರುವತಾರೆ :

ರಾಜ್‌ಕುಮಾರ್‌ರವರ ಅಭಿನಯ ವಿಶಿಷ್ಟ ಅನುಭೂತಿ ಯಿಂದ ಕೂಡಿದಂತದ್ದು. ಇಡೀ ಭಾರತ ದೇಶದ ಎಲ್ಲಾ ಭಾಷೆಯ ಸಿನೆಮಾಗಳ ನಾಯಕ ನಟರಲ್ಲಿ ಬಹಳ ಭಿನ್ನ ವಾಗಿ ನಿಲ್ಲುವ ಅಭಿನಯ ತಾರೆ ರಾಜ್. ಇವರ ನಟನಾ ಕೌಶಲ್ಯವನ್ನು ಕೆಲವರು ಸಿನೆಮಾಗಳಲ್ಲಿ ಯತಾವತ್ತು ನಕಲು ಮಾಡಲು ಕೂಡ ಯಣಗಾಡಿದ್ದಾರೆ. ಎನ್.ಟಿ. ರಾಮರಾವ್, ಅಮಿತಾಭ್ ಬಚ್ಚನ್‌ರಂತ ನಟರುಗಳೇ ಪ್ರಯತ್ನಿಸಿ ಸೋತದ್ದನ್ನು ಹಲವಾರು ಸಂದರ್ಭಗಳಲ್ಲಿ ತಾವೇ ಹೇಳಿಕೊಂಡಿದ್ದಾರೆ. ರಾಜ್ ಅಭಿನಯದ 210 ಚಿತ್ರಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳ ಅಭಿನಯ ಮತ್ತು ಒಳತಿರುಳು ಅಧ್ಯಯನಕ್ಕೆ ಸೂಕ್ತವಾಗಿವೆ ಎಂಬುದು ಅತಿಶ ಯದ ಸಂಗತಿಯಲ್ಲ. ಹುಟ್ಟಿನೊಂದಿಗೆ ನಟನೆಯನ್ನು ಕಣ್ತುಂಬಿಕೊಂಡ, ಉಸಿರಾಡಿದ ಅಭಿಜಾತ ಕಲಾವಿದ ಇವರು.

ಭಾರತದ ಸಿನೆಮಾ ಪರಂಪರೆಯನ್ನು ಬಲ್ಲ ಎಲ್ಲರಿಗೂ ವೇಧ್ಯವಾಗುವ ಸಂಗತಿಯೆಂದರೆ ರಾಜ್ ಬಹು ಮುಖ ಪ್ರತಿಭೆ ಎಂಬುದು. ಕೇವಲ ಬೆಳ್ಳಿ ಪರದೆಗಷ್ಟೆ ಸೀಮಿತರಾಗದ ಇವರು ರಂಗಭೂಮಿಯಲ್ಲೂ ಅಪಾರ ಕೀರ್ತಿಯನ್ನು ಗಳಿಸಿದ್ದವರು. ಈ ಬಗೆಯ ಎರಡು ಪ್ರಕಾರಗಳಲ್ಲಿ ನುರಿತ ನಾಯಕನಟರು ಭಾರತದಲ್ಲಿ ಸಿಗುವುದು ವಿರಳ ಸಂಖ್ಯೆಯಲ್ಲಿ. ಇದರೊಂದಿಗೆ ರಾಜ್‌ಕುಮಾರ್ ಕೇವಲ ನಟನೆಗಷ್ಟೆ ಸೀಮಿತರಾಗದೇ ಅದ್ಭುತವಾದ ಕಂಠ ಶಾರೀರ್ಯವುಳ್ಳ ಗಾಯಕರು ಕೂಡ ಎಂಬುದು ವಿಶೇಷ. ಕನ್ನಡವನ್ನು ಇವರು ಸಂಭಾಷಣೆಗಾಗಿ ಆಗಲಿ ಅಥವಾ ದೈನಂದಿನ ಬದುಕಿನಲ್ಲಾಗಲಿ ಬಳಸಿದ, ಎಚ್ಚರಿಸಿದ, ಉವಾಚಿಸಿದ ಬಗೆ ಎಲ್ಲರನ್ನು ಬೆರಗು ಗೊಳಿಸುವಂತೆ ಇದ್ದದ್ದು ವಿಶೇಷ. ಪ್ರಾಥಮಿಕ ಶಿಕ್ಷಣವನ್ನು ಕೂಡ ಪೂರೈಸದ ರಾಜ್‌ಕುಮಾರ್‌ರ ಈ ಸಾಮರ್ಥ್ಯ ಅವರ ಪ್ರತಿಭೆಗೆ ಧ್ಯೋತಕ ಅಲ್ಲದೆ ಬೇರೇನು ಆಗಿರಲಿಕ್ಕೆ ಸಾಧ್ಯವಿಲ್ಲ.

ರಾಜ್‌ಕುಮಾರ್ ಕನ್ನಡದ ಜನ ಮಾನಸಕ್ಕೆ ಕೇವಲ ಮನರಂಜನೆಯನ್ನು ನೀಡುವ ನಟರು ಮಾತ್ರವಾಗಿರಲಿಲ್ಲ. ಇವರು ಅನುಕರಣೀಯ ನೈತಿಕ ನಡೆ, ನುಡಿ, ಸಮಾಜಿಕ ಜವಾಬ್ದಾರಿಗಳನ್ನು ಹೊಂದಿದವರಾಗಿದ್ದರು. ಭಾರತದ; ಅದರಲ್ಲೂ ದಕ್ಷಿಣ ಭಾರತದ ಅನೇಕ ನಾಯಕ ನಟ ಮತ್ತು ನಟಿಯರು ತಮ್ಮ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಲಾಭವನ್ನು ಪಡೆದದ್ದು ಎಲ್ಲ್ಲರಿಗೂ ತಿಳಿದಿರುವ ಸಂಗತಿ. ಈ ವಿಚಾರವಾಗಿ ರಾಜ್‌ಕುಮಾರ್ ಕೂಡಾ ರಾಜಕೀಯವನ್ನು ಪ್ರವೇಶಿಸಿ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿ ಆಡಳಿತವನ್ನು ಕೊಡ ಬೇಕೆಂದು ಬಹಳಷ್ಟು ಜನರು ಆಶಿಸಿದ್ದು, ಒತ್ತಾಯಿಸಿದ್ದು, ಹಂಬಲಿಸಿದ್ದು ಉಂಟು. ಆದರೆ ನಾನೊಬ್ಬ ನಟ, ಅಭಿಮಾನಿಗಳು ನನ್ನ ದೇವರುಗಳು. ರಾಜಕೀಯ ನಾವೆಣಿಸಿದಂತೆ ಸಾದಾ-ಸೀದಾ ಇರುವ ಅಂಶವಲ್ಲ. ನಾನು ಕಟ್ಟಿಕೊಂಡ ವ್ಯಕ್ತಿತ್ವವನ್ನು, ನಟನೆಯ ಹಂಬಲವನ್ನು, ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾನು ಅಧಿಕಾರದ ಆಸೆಗಾಗಿ ಬಲಿಕೊಡಲಾರೆ ಎಂದು ಕಟ್ಟು ನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡವರು ಇವರು.

ತಮ್ಮೆಲ್ಲಾ ಪರಿಶ್ರಮವನ್ನು ನಟನೆ, ಹಾಡುಗಾರಿಕೆ, ಆದರ್ಶಮಯ ಬದುಕು, ಅನುಕರಣೀಯ ನಡತೆಗಳಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಮೀಸಲಿಟ್ಟ ಪ್ರತಿಭಾಪೂರ್ಣ ಧ್ರುವ ತಾರೆ ರಾಜ್‌ಕುಮಾರ್. ವಿಶ್ವ ವಿಖ್ಯಾತ ನಟ ಚಾರ್ಲಿ ಚಾಪ್ಲಿನ್‌ರ ಬದುಕು, ನಟನೆ ಕುರಿತಾಗಿ ಈ ತನಕ ಮೂರು ಸಾವಿರಕ್ಕೂ ಅಧಿಕ ಸಂಶೋಧನಾ ಮಹಾ ಪ್ರಬಂಧಗಳು ಜಗತ್ತಿನ ಉದ್ದಗಲಕ್ಕೆ ನಡೆದಿವೆ. ನಟ, ನಾಟಕಕಾರ ಶೇಕ್ಸ್ ಪಿಯರ್‌ನ ಬರಹ, ಬದುಕಿನ ಕುರಿತಾದ ಎಂಟು ಸಾವಿರಕ್ಕೂ ಅಧಿಕ ಸಂಶೋದನಾ ಮಹಾ ಪ್ರಬಂಧಗಳು ಮಂಡನೆಯಾಗಿವೆ. ಕರ್ನಾಟಕದ ಮಟ್ಟಿಗೆ ಹಾಗೂ ಭಾರತೀಯ ಸಿನಿ ರಂಗದ ವ್ಯಾಪ್ತಿಯಲ್ಲಿ ಡಾ. ರಾಜ್‌ಕುಮಾರ್ ಇಂತಹದ್ದೆ ತೀವ್ರ ಬಗೆಯ ಅಧ್ಯಯನಕ್ಕೆ ಅರ್ಹರು ಎಂಬುದರಲ್ಲಿ ಅತಿಶಯವಿಲ್ಲ.

ಪ್ರಜಾತಂತ್ರ ಮತ್ತು ರಾಜ್‌ಕುಮಾರ್

ಭಾರತದ ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಆಧಾರ ಗ್ರಂಥ. ಇಲ್ಲಿರುವ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಈ ನೆಲದ ಕಾನೂನುಗಳಾಗಿ ಘೋಷಿಸಲ್ಪಟ್ಟಿವೆ. ಇಡೀ ದೇಶದ ಗಣಕೂಟದಲ್ಲಿ ಆಡಳಿತ ಹೇಗೆ ನಡೆಯಬೇಕು ಎಂಬ ನಿರ್ದೇಶನ ತತ್ವಗಳು ಸಂವಿಧಾನದಲ್ಲಿ ಇವೆ. ಇವುಗಳಿಗೆ ತಕ್ಕಂತೆ ಸರ್ವರಿಗೂ ಸಮಪಾಲು, ಹಾಗೆಯೇ ಒಬ್ಬ ಪ್ರಜೆ ಒಂದು ಓಟು, ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಧರ್ಮ, ಜಾತಿ, ಲಿಂಗ, ಪ್ರದೇಶದ ಆಧಾರದಲ್ಲಿ ಯಾರೂ-ಮೇಲಲ್ಲ, ಯಾರೂ-ಕೀಳಲ್ಲ. ಇದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಆಡಳಿತ ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ.

ಸಂವಿಧಾನದ ಘೋಷಣೆಯ ತನಕ ಭಾರತದ ಜನತೆ ಆಡಳಿತ ವೈಖರಿಯನ್ನು ಕಂಡದ್ದು ರಾಜಪ್ರಭುತ್ವ ಹಾಗೂ ಪಾಳೇಗಾರಿಕೆಯ ಪದ್ಧತಿಯನ್ನು. ಜನರ ಮಾನಸಿಕತೆ (ಮೈಂಡ್ ಸೆಟ್) ಕೂಡಾ ಇದನ್ನೇ ಅನಿವಾರ್ಯವಾಗಿ ಒಪ್ಪಿಕೊಂಡಿತ್ತು. ಧಾರ್ಮಿಕ ನಿರ್ದೇಶನ, ಸಾಮ್ರಾಜ್ಯಾಧಿಪತಿಗಳ ಸ್ವಇಚ್ಛೆಯ ಆಡಳಿತಕ್ಕೆ ಎಲ್ಲರೂ ಬದ್ಧರಾಗಿದ್ದರು. ಈ ಬಗೆಯ ಆಡಳಿತದಲ್ಲಿ ಎಂದೂ ಪಾಲು ಪಡೆಯದ ಜನರು ಎಲ್ಲವೂ ವಿಧಿ ನಿಯಮದಂತೆ ನಡೆಯುತ್ತದೆ ಎಂದು ನಂಬಿದ್ದರು. ಪ್ರಶ್ನೆ ಮಾಡುವುದೇ ಅಪರಾಧ ಎಂಬ ವಾತಾವರಣವಿತ್ತು. ಜಾತಿ, ಲಿಂಗ ಅಸಮಾನತೆ ಸಹಜ ಎನ್ನುವಂತ ವಾತಾವರಣ ರಾಜಪ್ರಭುತ್ವದ ಆಡಳಿತದಲ್ಲಿ ಇತ್ತು. ಹೀಗಾಗಿ ಜನತೆಯು ಧರ್ಮ, ಪರಂಪರೆ, ನಂಬಿಕೆಗಳ ಹೆಸರಿನಲ್ಲಿ ಯಾವುದೇ ಬಗೆಯ ಅಭಿಪ್ರಾಯವನ್ನು ಹೊಂದಲಾಗದೆ ಊಳಿಗಮಾನ್ಯ ವ್ಯವಸ್ಥೆಯ ರಕ್ಷಕರಾಗಿದ್ದರು.

ಇಂತಹ ಮಾನಸಿಕತೆ ಮತ್ತು ವಾತಾವರಣದಲ್ಲಿ ಇದ್ದಂತ ಜನರ ಮೈಂಡ್ ಸೆಟ್ ಇದ್ದಕ್ಕಿದ್ದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಒಂದು ಕಡೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಪ್ಪಲೂ ಆಗದ, ಇನ್ನೊಂದು ಕಡೆಗೆ ಹಳೆಯ ಪಾರಂಪರಿಕ ಮೌಲ್ಯಗಳನ್ನು ಆಚರಿಸಲೂ ಆಗದ ಸಂದಿಗ್ಧ ವಾತಾವರಣದಲ್ಲಿ ಇಡೀ ದೇಶದ ಜನತೆ ಬಳಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗ ಹೊಸ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಲು ಶ್ರಮಿಸಿದ್ದು ಸಾಹಿತ್ಯ, ಕಲೆ, ನಾಟಕ, ಸಿನೆಮಾಗಳು. ಅನೇಕ ಅಂಶಗಳ ಜೊತೆಗೆ ಈ ನಾಲ್ಕು ಪ್ರಕಾರಗಳು ಕೊಟ್ಟ ಕೊಡುಗೆಯನ್ನು ಯಾರು ಅಲ್ಲಗಳೆಯುವಂತಿಲ್ಲ.

ಈ ನಿಟ್ಟಿನಲ್ಲಿ ರಾಜ್‌ಕುಮಾರ್‌ರವರ ಸಿನೆಮಾಗಳು ಕರ್ನಾಟಕದ ವಾತಾವರಣದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಜನತೆಯ ಮನಸ್ಸಿಗೆ ನಾಟುವಂತೆ ಮಾಡುವಲ್ಲಿ ಅಪಾರವಾದ ಕೊಡುಗೆಯನ್ನು ನೀಡಿವೆ. ಆ ತನಕ ಕೀಳು ಎಂದು ಪರಿಗಣಿಸಲ್ಪಟ್ಟಿದ್ದ ಚಮ್ಮಾರ, ಕುಂಬಾರ, ಕುರುಬ, ರೈತ, ಬೇಟೆಗಾರ, ಸನಾದಿ, ಬೆಸ್ತ.... ಹೀಗೆ ಸಕಲ ಕಸುಬಿನವರು ಕೂಡ ಎಲ್ಲರಿಗೂ ಸಮಾನರು. ಇಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ ಎಂಬ ಸಂದೇಶವನ್ನು ಈ ಬಗೆಯ ಚಿತ್ರಗಳು ಸಮಾಜಕ್ಕೆ ರವಾನಿಸುವ ಮೂಲಕ ಪ್ರಜಾಸತ್ತೆಯ ಆಶಯ ಗಳನ್ನು ಬೆಂಬಲಿಸಿವೆ. ಸಂಪತ್ತಿನ ಲೂಟಿಕೋರರನ್ನು ಪ್ರಶ್ನಿಸ ಬಹುದು ಎಂಬ ಅಂಶವು ಇವರ ಗಂಧದಗುಡಿ, ಸಂಪತ್ತಿಗೆ ಸವಾಲ್ ಮುಂತಾದ ಸಿನೆಮಾಗಳಲ್ಲಿ ವ್ಯಕ್ತವಾಗಿದೆ. ಜಾತಿ, ಮತಗಳನ್ನು ಮೀರಿ ಪ್ರೀತಿಸಿ ಮಾನವೀಯತೆಯನ್ನು ಎತ್ತಿ ಹಿಡಿದು ಮದುವೆಗಳನ್ನು ಮಾಡಿಕೊಳ್ಳಬಹುದು ಎಂಬುದು ಇವರ ಮನಮೆಚ್ಚಿದ ಮಡದಿ, ಆಶಾಸುಂದರಿ, ಅಬ್ಬಾ ಆ ಹುಡುಗಿ ಮುಂತಾದ ಸಿನೆಮಾಗಳಲ್ಲಿ ವ್ಯಕ್ತ ವಾಗಿದೆ. ಹಾಗೆಯೇ ಸಾಮಾನ್ಯ ಮನುಷ್ಯ ಕೂಡ ಬಲಿತ ರಾಜಕಾರಣಿಗಳ ವಂಚನೆ, ಮೋಸವನ್ನು ಪ್ರಶ್ನಿಸಿ ತಾನೇ ಅಧಿಕಾರವನ್ನು ಕೂಡ ಹಿಡಿಯಬಹುದು ಎಂಬುದಕ್ಕೆ ಇವರ ಮೇಯರ್ ಮುತ್ತಣ್ಣ ಅಂತಹ ಸಿನೆಮಾ ಸಾಕ್ಷಿಕರಿಸಿದೆ.

ರಾಜ್‌ಕುಮಾರ್ ಸಿನೆಮಾಗಳ ವೀಕ್ಷಕರು ಬಹುತೇಕ ಹಳ್ಳಿಗರು, ಬಡವರು, ತಳಸ್ತರದವರು, ದುಡಿಮೆಕಾರರು, ಕುಶಲಕರ್ಮಿಗಳು, ಗೃಹಿಣಿಯರು ಹೀಗೆ ವಿವಿಧ ಶ್ರೇಣಿಗಳಿಗೆ ಸೇರಿದವರಾಗಿದ್ದರು. ಜಾತಿ ಮೀರುವ, ಪ್ರೀತಿ ಗಳಿಸುವ, ಸಾಹಸಿಗಳಾಗುವ, ಪ್ರಶ್ನಿಸುವ, ಅನ್ಯಾಯಗಳ ವಿರುದ್ಧ ಬಂಡೇಳುವ, ಪ್ರತಿಭಟಿಸುವ ಅಂಶಗಳನ್ನು ನಾಡಿನ ಜನತೆಗೆ ತಮ್ಮ ಚಿತ್ರಗಳ ಮೂಲಕ ಕಲಿಸಿಕೊಟ್ಟವರು ರಾಜ್‌ಕುಮಾರ್. ಇವೆಲ್ಲವೂ ಪ್ರಜಾ ಸತ್ತಗೆ ಪೂರಕವಾದ ಅಂಶಗಳಾಗಿವೆ. ಕರ್ನಾಟಕದಲ್ಲಿ ಪ್ರಜಾತಂತ್ರ ಪ್ರಕ್ರಿಯೆ ಮುನ್ನಡೆಯಲು, ದೃಢಗೊಳ್ಳಲು ಪೂರಕವಾದ ಕೆಲಸವನ್ನು ಇವರ ಚಿತ್ರಗಳು ಮಾಡಿವೆ. ಈ ಕುರಿತಾಗಿ ಸಮಗ್ರವಾದ ಅಧ್ಯಯನವೊಂದರ ಅಗತ್ಯ ಇದ್ದೇ ಇದೆ.

ಕಲ್ಯಾಣ ರಾಜ್ಯದ ಕನಸುಗಾರ

ರಾಜ್‌ಕುಮಾರ್‌ರವರ ಬದುಕಿನ ನಡೆಯೇ ಒಂದು ಬಗೆಯಲ್ಲಿ ಅನುಕರಣೀಯ. ಇವರು ನುಡಿ ಮತ್ತು ವರ್ತನೆ ಹೇಗಿತ್ತೆಂದರೆ; ಯಾವುದರಲ್ಲೂ ಯಾರನ್ನೂ ನೋಯಿಸದ ನಡೆಯನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿದ್ದವರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಉಂಟಾಗಬಹುದಾಗಿದ್ದ ಹಿಂಸೆ-ಪ್ರತಿಹಿಂಸೆ ಗಳನ್ನು ತೀರಾ ಪ್ರಯತ್ನ ಪೂರ್ವಕವಾಗಿ ತಡೆದು ಅಹಿಂಸೆಯ ತತ್ವವನ್ನು ಎತ್ತಿ ಹಿಡಿದವರು ರಾಜ್. ನೆಲ, ಜಲ, ನಾಡಿನ ಸಂಪತ್ತು, ಭಾಷೆ ಇಂತಹ ವಿಚಾರಗಳಿಗೆ ಕುತ್ತು ಬಂದಾಗ, ಬಿಕ್ಕಟ್ಟು ಸೃಷ್ಟಿಯಾದಾಗ ರಾಜ್‌ಕುಮಾರ್ ಯಾವುದೇ ಹಿಂಸೆಗೆ ಎಡೆ ಇಲ್ಲದಂತೆ ಬೀದಿಗಿಳಿದು ನಾಡಿನ ಜನರ ಹಿತಾಸಕ್ತಿಯನ್ನು ರಕ್ಷಿಸಿದವರಾಗಿದ್ದಾರೆ.

ರಾಜ್‌ಕುಮಾರ್‌ರವರ ಒಳತುಡಿತದಲ್ಲಿ ಇಡೀ ನಾಡಿನ ಜನರ ಸಾಂಸಾರಿಕ ಜೀವನ ಸುಖಮಯವಾಗಿ ಇರಬೇಕು ಎಂಬುದಿತ್ತು. ಇದೇ ಕಾರಣಕ್ಕಾಗಿ ತಮ್ಮ ಚಿತ್ರಗಳ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸದಾಭಿರುಚಿಯ ಚಿತ್ರಗಳನ್ನು ಮಾಡಿ. ಸಮಾಜಕ್ಕೆ ಒಳ್ಳೆಯ ಸಂದೇಶಗಳು ಸಿಗುವಂತೆ ನೋಡಿಕೊಳ್ಳಿ ಎಂದು ಹೇಳುತ್ತಿದ್ದದ್ದು ಉಂಟು. ಬಹಳಷ್ಟು ನಟರು ತಮಗೆ ಬರಬೇಕಾದ ಸಂಭಾವನೆ ಬಂದರೆ ಸಾಕು; ಚಿತ್ರ ಯಾವುದಾದರೇನು ಎಂಬ ಮನಸ್ಥಿತಿಯಲ್ಲಿದ್ದಾಗ ರಾಜ್ ತಾವು ಅಭಿನಯಿಸುವ ಚಿತ್ರದ ಕಥೆ, ಸಂಭಾಷಣೆ, ದೃಶ್ಯಗಳು ಹೇಗಿರಬೇಕು ಎಂಬುದನ್ನು ಸ್ವತಃ ಅಧ್ಯಯಮಾಡಿ ಕೇಳಿ-ತಿಳಿದು ಮುಂದಡಿ ಇಡುವ ಸದಾಶಯವನ್ನು ಹೊಂದಿದ್ದರು.

ಕರ್ನಾಟಕದ ಮುಖ್ಯಮಂತ್ರಿಯಾಗುವ ಒತ್ತಡ ರಾಜ್‌ರವರ ಮೇಲೆ ಬಹಳಷ್ಟು ಇತ್ತು. ರಾಜಕೀಯ ಪ್ರವೇಶ ನಿರಾಕರಿಸಿ ರಾಜ್ ಕನ್ನಡ ನಾಡಿನ ಕಲ್ಯಾಣದ ಕನಸು ಗಾರ ನಾನು. ಸ್ವತಃ ನಾನೇ ರಾಜಕಾರಣಕ್ಕೆ ಇಳಿದರೆ ಆ ಕನಸುಗಳು ಮಿತಿಗಳ ಮಧ್ಯೆ ಭಗ್ನವಾಗಬಹುದು. ನಾನು ಕಲ್ಯಾಣ ರಾಜ್ಯದ ಕನಸುಗಾರನೇ ಹೊರತು ಭಗ್ನ ಕನಸುಗಳ ಸರದಾರನಾಗಲು ಇಚ್ಛಿಸುವುದಿಲ್ಲ ಎಂದು ಅವರೇ ಹೇಳಿಕೊಂಡಿದ್ದು ಇದೆ. ಜಗತ್ತಿನ ಯಾವ ನಟನೂ ತನ್ನ ಪ್ರೇಕ್ಷಕರಿಗೆ ಕೊಡದಂತಹ ಗೌರವವನ್ನು ರಾಜ್ ಕೊಟ್ಟಿದ್ದಾರೆ. ಮೇರು ನಟನೊಬ್ಬ ಇಟ್ಟುಕೊಳ್ಳಬಹುದಾಗಿದ್ದ ಸಾಮಾನ್ಯ ಅಹಂಕಾರವನ್ನು ಕೂಡ ಇಟ್ಟುಕೊಳ್ಳದ, ಯಾವೊಂದು ಜೀವಿಗೂ ನೋಯಿಸದ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು ಅಸಾಮಾನ್ಯವಾದದ್ದು. ತಮ್ಮ ಚಿತ್ರಗಳ ಮೂಲಕ ನಾಡು-ನುಡಿಯ ಅನನ್ಯತೆಯನ್ನು ಕಟ್ಟಿಕೊಟ್ಟ ರಾಜ್ ತಮ್ಮ ನಡೆಯ ಮೂಲಕ ಪ್ರೇಕ್ಷಕರ ವರ್ತನೆಯನ್ನು ತಿದ್ದಲು ಶ್ರಮಿಸಿದವರು.

ಇಂತಹ ಮೇರು ನಟನ ಸಾಮಾಜಿಕ ಸಂದೇಶಗಳನ್ನು ಸೂಕ್ತವಾಗಿ ಅಧ್ಯಯನಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ಶೇಕ್ಸ್ ಪಿಯರ್, ಚಾರ್ಲಿ ಚಾಪ್ಲಿನ್ ಮುಂತಾದ ನಟರುಗಳ ಈ ಬಗೆಯ ಅಧ್ಯಯನ ಈಗಾಗಲೇ ನಡೆದಿದೆ. ಇದು ರಾಜ್‌ಕುಮಾರ್‌ರವರ ವಿಚಾರದಲ್ಲೂ ನಡೆಯ ಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದೂ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)