varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಸುದ್ದಿ, ಸಿನೆಮಾ ಮಾಧ್ಯಮಗಳಲ್ಲಿ ಹೆಣ್ಣು ಮತ್ತು ನೋಟ

ವಾರ್ತಾ ಭಾರತಿ : 31 Dec, 2019
ಸಂಜ್ಯೋತಿ ವಿ.ಕೆ.

ಬೆಂಗಳೂರಿನ ಸಂಜ್ಯೋತಿ ವಿ.ಕೆ., ಎಂಬಿಎ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ 'ನಕ್ಷತ್ರದ ಧೂಳು' ಏಕವ್ಯಕ್ತಿ ನಾಟಕ ರಾಜ್ಯದ ಹಲವೆಡೆ ಪ್ರದರ್ಶನ ಕಂಡಿದೆ. ಕೆಲಕಾಲ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಸಿನೆಮಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ 'ಅನಲ' ಕಿರುಚಿತ್ರವು ರಾಜ್ಯ ಸರಕಾರ ನೀಡುವ 2016ನೇ ಸಾಲಿನ 'ಅತ್ಯುತ್ತಮ ಕಿರುಚಿತ್ರ ರಾಜ್ಯಪ್ರಶಸ್ತಿ' ಪಡೆದಿದೆ.

          ಸಂಜ್ಯೋತಿ ವಿ.ಕೆ.

ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲು ಶಿಕ್ಷಣ, ಕಾನೂನು, ರಾಜಕೀಯ ಪ್ರಾತಿನಿಧ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂಬುದು ನಿಜವೇ. ಆದರೆ ಇಂತಹ ಬದಲಾವಣೆಗೆ ಸಮಾಜವನ್ನು ತಯಾರು ಮಾಡುವ ದೊಡ್ಡ ಸಾಧ್ಯತೆ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹಾಗಾಗಿ ಇದು ಮಾಧ್ಯಮದ ಗುರುತರವಾದ ಜವಾಬ್ದಾರಿ ಸಹ ಆಗಿದೆ. ಇದನ್ನರಿತು ಮಾಧ್ಯಮಗಳು ತುರ್ತಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

ಇಡೀ ಸಮಾಜದ ಜನಮಾನಸದ ದಿಕ್ಕನ್ನು ಮಾಧ್ಯಮಗಳು ಪ್ರಭಾವಿಸುತ್ತವೆ. ನಮ್ಮ ಜೀವನದೃಷ್ಟಿಯನ್ನು, ಯಾವುದು ಒಪ್ಪಿತ, ಯಾವುದು ಒಪ್ಪಿತವಲ್ಲ ಎಂಬ ಮೌಲ್ಯೀಕರಣವನ್ನು ಸಾಮೂಹಿಕ ಹಾಗೂ ವೈಯಕ್ತಿಕ ನೆಲೆಗಳೆರಡರಲ್ಲೂ ಮಾಧ್ಯಮವು ಪ್ರಭಾವವಿಸುತ್ತದೆ. ಅದರಲ್ಲೂ ಮಕ್ಕಳು ಹಾಗೂ ಹದಿಹರೆಯದವರ ಚಿಂತನಾಕ್ರಮವನ್ನು ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹು ದೊಡ್ಡದು. ನಮ್ಮ ಸಹಜೀವಿಗಳೊಡನೆ ಹೇಗೆ ನಡೆದುಕೊಳ್ಳುತ್ತೇವೆಂಬ ಅತ್ಯಂತ ಖಾಸಗಿ ನಡೆಗಳಿಂದ ಹಿಡಿದು, ನಾವು ಏನನ್ನು ಕೊಳ್ಳುತ್ತೇವೆ, ಯಾರನ್ನು ಒಪ್ಪುತ್ತೇವೆ, ಯಾರನ್ನು ನಿರಾಕರಿಸುತ್ತೇವೆ ಎಂಬಂತ ನಿತ್ಯಜೀವನ ವ್ಯಾಪಾರಗಳಿಂದ ಹಿಡಿದು, ನಮ್ಮ ಬದುಕನ್ನು ಪ್ರಭಾವಿಸುವ ಕಾನೂನು, ರಾಜಕೀಯ, ಸಾಮಾಜಿಕ ಆಗುಹೋಗುಗಳೆಲ್ಲದರಲ್ಲೂ ಮಾಧ್ಯಮದ ಪ್ರಭಾವ ಇದ್ದೇ ಇರುತ್ತದೆ. ಹೀಗಿರುವ ಮಾಧ್ಯಮದಲ್ಲಿ ಜಗತ್ತಿನ ಅರ್ಧದಷ್ಟು ಜನರು ಅಂದರೆ ಮಹಿಳೆಯರ ಪಾತ್ರವನ್ನು ಅರಿಯುವುದು ಅತ್ಯಗತ್ಯವಾಗಿದೆ. ಮಾಧ್ಯಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, ಹೆಣ್ಣನ್ನು ಮಾಧ್ಯಮಗಳಲ್ಲಿ ಪ್ರಸ್ತುತಪಡಿಸುತ್ತಿರುವ ರೀತಿ, ಇವುಗಳಿಂದ ಆಕೆಯ ಸಮಾಜೋರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಮತ್ತು ಆಕೆಯ ನಿತ್ಯ ಬದುಕಿನ ಮೇಲಿನ ಪರಿಣಾಮ ಹಾಗೂ ಅಷ್ಟೇ ಮುಖ್ಯವಾಗಿ ಇಡೀ ಸಮಾಜದ ಮೇಲೆ ಇವುಗಳೆಲ್ಲದರ ಒಟ್ಟೂ ಪರಿಣಾಮಗಳು ಈ ಎಲ್ಲ ಆಯಾಮಗಳನ್ನು ಅಗತ್ಯವಾಗಿ ಚರ್ಚಿಸಬೇಕಿದೆ.

ಇತರ ಎಲ್ಲ ರಂಗಗಳಂತೆಯೇ ಇಲ್ಲೂ ಎದ್ದು ಕಾಣುವುದು ಮಹಿಳೆಯರಿಗೆ ಸಮಾನ ಪ್ರತಿನಿಧೀಕರಣ ಇಲ್ಲದಿರುವುದು. ಜಾತಿಯ ವಿಚಾರದಲ್ಲಿ ವಾಸ್ತವದ ಅರಿವಿಲ್ಲದೆ ಇಂದಿನ ಜಾಗತಿಕ ಯುಗದಲ್ಲಿ ಜಾತಿ ಅನ್ನೋದು ಎಲ್ಲಿದೆ? ಎಂದು ಮಾತಾಡುವಷ್ಟೇ ಸಲೀಸಾಗಿ ಹೆಣ್ಣಿನ ವಿಚಾರದಲ್ಲೂ ಆಗುತ್ತದೆ. ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದಿದ್ದಾರೆ ಎನ್ನುವಂತಹ ಕುರುಡು ನಂಬಿಕೆಯಿಂದ ಹಿಡಿದು, ಗಂಡಸರು ನಿರುದ್ಯೋಗಿಗಳಾಗ್ತಿರೋದು ಯಾಕೆ ಅಂತೀರಿ? ಅನ್ನುವಂತಹ ವ್ಯಂಗ್ಯೋಕ್ತಿಗಳನ್ನೂ ಪಕ್ಕಕ್ಕಿಟ್ಟು ಕೆಲವು ಅಂಕಿ ಅಂಶಗಳನ್ನು ಗಮನಿಸಿದರೆ ವಸ್ತುಸ್ಥಿತಿಯ ಅರಿವಾಗುತ್ತದೆ.

ಮಾಧ್ಯಮವನ್ನು ಕಾಲ್ಪನಿಕ ಮತ್ತು ಸುದ್ದಿ ಮಾಧ್ಯಮಗಳು ಎಂದು ಸ್ಥೂಲವಾಗಿ ವಿಂಗಡಿಸಿಕೊಳ್ಳಬಹುದು.

ಮೊದಲಿಗೆ ಸುದ್ದಿ ಮಾಧ್ಯಮಗಳತ್ತ ಗಮನ ಹರಿಸುವುದಾದರೆ, ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಒಟ್ಟಾರೆ ವಿದ್ಯುನ್ಮಾನ (ಟೆಲಿವಿಷನ್ ಮತ್ತು ರೇಡಿಯೊ) ಹಾಗೂ ಮುದ್ರಣ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಕ್ಷೇತ್ರ ಪರಿಣಿತರಲ್ಲಿ ಕೇವಲ ಶೇ.19ರಷ್ಟು ಮಾತ್ರವೇ ಮಹಿಳೆಯರಾಗಿದ್ದಾರೆ. ಜಗತ್ತಿನ ವಿದ್ಯಮಾನಗಳ ಕಥೆಗಳನ್ನು ಹೇಳುತ್ತಿರುವ ವರದಿಗಾರರಲ್ಲಿ ಸ್ತ್ರೀಯರು ಕೇವಲ ಶೇ.37 ಮಾತ್ರವೇ. ಲಿಂಗಾಧಾರಿತ ದೌರ್ಜನ್ಯಗಳ ವರದಿಗಾರಿಕೆಯಲ್ಲಿಯೂ ಮಹಿಳೆಯರಿಗಿಂತ ಅತಿ ಹೆಚ್ಚು ಪ್ರಸಾರ ಸಮಯ(ಏರ್‌ಟೈಮ್) ಮತ್ತು ಮುದ್ರಣ ಸ್ಥಳ (ಪ್ರಿಂಟ್ ಸ್ಪೇಸ್) ಪುರುಷರಿಗೇ ಸಿಗುತ್ತಿದೆ! ರಾಜಕೀಯ ಸುದ್ದಿಗಳಲ್ಲಿ ಶೇ.19 ಮಾತ್ರವೇ ಮಹಿಳಾ ಮೂಲಗಳದ್ದಾಗಿವೆ. ಆರ್ಥಿಕತೆ ಅಥವಾ ರಾಜಕೀಯದಂತಹ ಮುಖ್ಯ ಕ್ಷೇತ್ರಗಳ ವರದಿಗಾರಿಕೆಯಲ್ಲಿ ಸ್ತ್ರೀಯರಿಗೆ ಅವಕಾಶಗಳು ಬಹಳ ಕಡಿಮೆ. ಫ್ಯಾಷನ್, ಜೀವನಶೈಲಿಯ ಸುದ್ದಿಗಳಿಗೆ ಅವರನ್ನು ಮೀಸಲಿಡುವ ಪ್ರವೃತ್ತಿ ಜಗತ್ತಿನೆಲ್ಲೆಡೆ ಕಾಣುತ್ತೇವೆ. ಮಾಧ್ಯದ ರಂಗದ ಶೇ.73ರಷ್ಟು ಉನ್ನತ ಹುದ್ದೆಗಳಲ್ಲಿ ಪುರುಷರೇ ಇದ್ದಾರೆ ಎಂಬುದು ಮೇಲಿನ ಎಲ್ಲ ಅಂಕಿಅಂಶಗಳ ಹಿಂದಿರುವ ವಾಸ್ತವ. ಯಾವುದು ಸುದ್ದಿ, ಯಾವುದು ಸುದ್ದಿಯಲ್ಲ, ಯಾವುದು ಮುಖ್ಯ ಸುದ್ದಿ ಎಂದು ನಿರ್ಧರಿಸುವ ಆಯ್ಕೆ ಪುರಷರ ಕೈಯಲ್ಲಿರುವಾಗ ಸಹಜವಾಗಿಯೇ ಜಗತ್ತಿನ ಒಟ್ಟು ಸುದ್ದಿಗಳಲ್ಲಿ ಶೇ.24 ಸುದ್ದಿಗಳು ಮಾತ್ರವೇ ಮಹಿಳಾ ಕೇಂದ್ರಿತ ಸುದ್ದಿಗಳಾಗಿವೆ.

ಭಾರತದ ಸುದ್ದಿ ಮಾಧ್ಯಮಗಳ ಸ್ಥಿತಿ ಇದಕ್ಕಿಂತಲೂ ಶೋಚನೀಯವಾಗಿದೆ. 2019 ಮಾರ್ಚ್‌ನಲ್ಲಿ ಹೊರ ಬಂದ ಅಂಕಿಅಂಶಗಳನ್ನೇ ಗಮನಿಸುವುದಾದರೆ, 6 ರಾಷ್ಟ್ರೀಯ ಆಂಗ್ಲ ಪತ್ರಿಕೆಗಳು ಮತ್ತು 7 ರಾಷ್ಟ್ರೀಯ ಹಿಂದಿ ಪತ್ರಿಕೆಗಳ ಉನ್ನತ ಹುದ್ದೆಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ! ಟಿವಿ ಮತ್ತು ಇತರ ಡಿಜಿಟಲ್ ಪೋರ್ಟಲ್‌ಗಳಲ್ಲಿ ಶೇ.13.6 ಮುಖ್ಯ ಸಂಪಾದಕರು, ಶೇ.20.9 ವ್ಯವಸ್ಥಾಪಕ ಸಂಪಾದಕರು ಮತ್ತು ಶೇ.26.3 ಕಾರ್ಯನಿರ್ವಾಹಕ ಸಂಪಾದಕರು ಮಾತ್ರವೇ ಮಹಿಳೆಯರಾಗಿದ್ದಾರೆ. ಆಂಗ್ಲ ದಿನಪತ್ರಿಕೆಗಳ ಸುಮಾರು 3,000 ಬರಹಗಾರರಲ್ಲಿ ಕಾಲು ಭಾಗದಷ್ಟು ಮಾತ್ರವೇ ಮಹಿಳೆಯರು ಮತ್ತು ಒಟ್ಟು ಪ್ರಕಟಿತ ಬರಹಗಳಲ್ಲಿ ಶೇ.20ರಷ್ಟು ಮಾತ್ರವೇ ಮಹಿಳಾ ಬರಹಗಾರ್ತಿಯರ ಬರಹಗಳು. ಕಳೆದ ವರ್ಷದ ಅತೀ ಹೆಚ್ಚು ಮಹಿಳಾ ಬೈಲೈನ್ಸ್ ಇದ್ದದ್ದು ಇಕನಾಮಿಕ್ಸ್ ಟೈಮ್ಸ್ ನಲ್ಲಿ, ಮತ್ತದು ಕೇವಲ ಶೇ.28.2 ಆಗಿತ್ತು! ಮುಖ್ಯ ಕ್ಷೇತ್ರಗಳ ವರದಿಗಾರಿಕೆಯಲ್ಲಿ ಪುರುಷ ಮೀಸಲಾತಿಯ ಅಲಿಖಿತ ನಿಯಮ ಭಾರತದಲ್ಲಿಯೂ ಯಶಸ್ವಿಯಾಗಿ ಜಾರಿಯಲ್ಲಿದೆ. ಆರ್ಥಿಕತೆ ಅಥವಾ ರಾಜಕೀಯ ಕ್ಷೇತ್ರಗಳ ಕುರಿತಂತೆ ಆಂಗ್ಲ ರಾಷ್ಟ್ರೀಯ ಪತ್ರಿಕೆಗಳ ಶೇ.94.1 ಮತ್ತು ಹಿಂದಿ ರಾಷ್ಟ್ರೀಯ ಪತ್ರಿಕೆಗಳ ಶೇ.90.2 ಲೇಖನಗಳು ಪುರುಷರು ಬರೆದದ್ದಾಗಿತ್ತು. ಅಪರಾಧ, ಅಪಘಾತ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಂಡ ಮಹಿಳೆಯರ ಬರಹಗಳು ಕೇವಲ ಶೇ.5. ಆಂಗ್ಲ ಟಿವಿ ಚಾನೆಲ್‌ಗಳ ಚರ್ಚೆಗಳಲ್ಲಿ ಸ್ತ್ರೀಯರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕೇವಲ ಶೇ.15.7 ಮತ್ತು ಹಿಂದಿ ಚಾನೆಲ್‌ಗಳಲ್ಲಿ ಶೇ.12. ಈ ಎಲ್ಲಾ ಚಾನೆಲ್‌ಗಳ ಶೇ.75ರಷ್ಟು ಚರ್ಚೆಗಳ ಪ್ಯಾನೆಲ್‌ಗಳು ಸಂಪೂರ್ಣ ಪುರುಷರ ಪ್ಯಾನೆಲ್‌ಗಳಾಗಿದ್ದವು. ಡಿಜಿಟಲ್ ನ್ಯೂಸ್ ರೂಮ್‌ಗಳಲ್ಲಿ ನ್ಯೂಸ್ ಮಿನಿಟ್ (ಶೇ.55) ಮತ್ತು ಸ್ಕ್ರೋಲ್.ಇನ್ (ಶೇ.50.6) ಹೊರತುಪಡಿಸಿ ಉಳಿದೆಲ್ಲ ನ್ಯೂಸ್ ರೂಮ್‌ಗಳಲ್ಲೂ ಶೇ.79-89 ಪುರುಷರೇ ಇದ್ದಾರೆ. (ಸ್ಥಳೀಯ ಮಾಧ್ಯಮಗಳ ಕುರಿತಂತೆ ಇಂತಹ ಅಧ್ಯಯನಗಳೂ ನಡೆದಂತಿಲ್ಲ ಮತ್ತು ಈ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ!)

ಸಹಜವಾಗಿಯೇ ರಾಷ್ಟ್ರೀಯ ಪತ್ರಿಕೆಗಳ ಒಟ್ಟು ಪ್ರಕಟಿತ ಲೇಖನಗಳಲ್ಲಿ ಶೇ.3 ಮಾತ್ರವೇ ಲಿಂಗ ಸಂಬಂಧಿ ಲೇಖನಗಳಾಗಿದ್ದವು ಮತ್ತು ಡಿಜಿಟಲ್ ಪೋರ್ಟಲ್‌ಗಳಲ್ಲಿ ಅದು ಶೇ.3.7 ಮಾತ್ರವೇ ಆಗಿತ್ತು. ಲಿಂಗ ಅಸಮಾನತೆ ವ್ಯಾಪಕವಾಗಿರುವ ನಮ್ಮ ದೇಶದಲ್ಲಿ ಈ ವಿಚಾರವು ಮಾಧ್ಯಮದಲ್ಲಿ ಇಷ್ಟು ಕಡಿಮೆ ಸ್ಥಾನ ಪಡೆದುಕೊಳ್ಳುವುದಕ್ಕೂ ಮತ್ತು ಮಾಧ್ಯಮ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಹಾಗೂ ವರದಿಗಾರಿಕೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯದ ಕೊರತೆ ಇರುವುದಕ್ಕೂ ನೇರ ಸಂಬಂಧವಿರುವುದನ್ನು ಕಂಡುಕೊಳ್ಳಲು ಇಷ್ಟು ಸಾಕ್ಷಿ ಸಾಕೆನಿಸುತ್ತದೆ.

ಮಾಧ್ಯಮ ಕ್ಷೇತ್ರದಲ್ಲಿ ಪಾರಮ್ಯ ಮೆರೆದ ಮಹಿಳೆಯರು

ಜಗತ್ತಿನ ಅರ್ಧಭಾಗದ ಜನರ ಬದುಕು-ಬವಣೆಗಳು ಮಾಧ್ಯಮಗಳಿಗೆ ಗಮನಿಸಬೇಕಾದ ಸಂಗತಿಗಳೂ ಅಲ್ಲದಿರು ವುದು ಒಂದು ಕಡೆಗಾದರೆ ಈ ಕುರಿತಂತೆ ಸುದ್ದಿಗಳಾಗುವ ವಿಷಯಗಳಾದರೂ ಹೇಗೆ ಮತ್ತು ಯಾಕೆ ಸುದ್ದಿಗಳಾಗುತ್ತಿವೆ ಎಂಬುದಕ್ಕೆ ಮತ್ತೊಂದು ಆಯಾಮವೇ ಇದೆ.

ಮೂರು ಉದಾಹರಣೆಗಳು; ಮೊದಲನೆಯದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಜೇಮ್ಸ್ ಮೆಕೆನ್ಲಿ ಎಂಬ ಪತ್ರಕರ್ತ ಅಮೆರಿಕದ ಟೆಕ್ಸಾಸ್ ಪಟ್ಟಣದಲ್ಲಿ 11 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವರದಿ ಮಾಡುತ್ತಾನೆ. ಆ ವರದಿಯಲ್ಲಿ ಆ ಬಾಲಕರು ಇದಕ್ಕೆ ಹೇಗೆ ಸೆಳೆಯಲ್ಪಟ್ಟಿರಬಹುದು? ಎಂದು ಆತಂಕ ವ್ಯಕ್ತಪಡಿಸುವ ಆತ ಸ್ಥಳೀಯರೊಬ್ಬರು ನೀಡುವ ಈ ಹುಡುಗರು ತಮ್ಮ ಮುಂದಿನ ಇಡೀ ಬದುಕು ಈ ಭಾರವನ್ನು ಹೊತ್ತೇ ಕಳೆಯಬೇಕು ಎಂಬ ಹೇಳಿಕೆಯನ್ನು ಸಹಾ ಆಸ್ಥೆಯಿಂದ ದಾಖಲಿಸುತ್ತಾನೆ. ಆದರೆ ಆ ವರದಿಯಲ್ಲಿ ಆ ಬಾಲಕಿ ತೊಟ್ಟಿದ್ದ ಬಟ್ಟೆಗಳು ಸ್ವಲ್ಪ ಹಳೆಯದಾಗಿದ್ದವು ಮತ್ತು ಆಕೆ ಮೇಕಪ್ ಮಾಡಿಕೊಂಡಿದ್ದಳು ಎಂಬುದರ ಹೊರತಾಗಿ ಆಕೆಯ ಬಗ್ಗೆ ಹೆಚ್ಚೇನೂ ಇರುವುದಿಲ್ಲ. ಮೂರು ವಾರಗಳ ನಂತರ ಅದೇ ಪತ್ರಿಕೆಯ ಎರಿಕಾ ಗೂಡೆ ಎಂಬ ಪತ್ರಕರ್ತೆ ಮತ್ತೆ ಈ ಸುದ್ದಿಯ ಬೆನ್ನತ್ತಿ ಹೋದಾಗ ಹೊರಬಂದ ಸತ್ಯಗಳು ಬೆಚ್ಚಿಬೀಳಿಸುವಂತಿದ್ದವು. ಆ ಬಾಲಕಿಯ ಕುಟುಂಬ ತೀವ್ರ ಬಡತನಕ್ಕೆ ಸಿಲುಕಿತ್ತು ಮತ್ತು ಆ ಬಾಲಕಿ ಹಲವಾರು ಬಾರಿ ಅನೇಕ ಪುರುಷರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು!

    ಎರಡನೆಯ ಉದಾಹರಣೆ; ನಮ್ಮ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ನ್ನು ಕುರಿತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಪ್ರಕರಣದಲ್ಲಿ, ಸೆಕ್ಷನ್ 497ನ್ನು ರದ್ದುಪಡಿಸಿ ತೀರ್ಪು ನೀಡಿತು. (ಸ್ಥೂಲವಾಗಿ; ಪುರುಷ ನೊಬ್ಬನು ವಿವಾಹಿತ ಸ್ತ್ರೀಯೊಂದಿಗೆ ಆಕೆಯ ಪತಿಯ ಅನುಮತಿ ಇಲ್ಲದೆ ದೈಹಿಕ ಸಂಬಂಧ ಹೊಂದಿದರೆ ಪತಿಯ ದೂರಿನ ಅನ್ವಯ ಅದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಆತನಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದೆಂದು ಈ ಸೆಕ್ಷನ್ ಹೇಳುತ್ತಿತ್ತು. ಆದರೆ ಹಾಗೆಯೇ ಪತಿ ಇತರ ಮಹಿಳೆಯೊಡನೆ ದೈಹಿಕ ಸಂಬಂಧ ಹೊಂದಿದರೆ ಆತನ ಪತ್ನಿ ಅದನ್ನು ಸಾಬೀತುಪಡಿಸಿ ವಿಚ್ಛೇದನ ಪಡೆಯಬಹುದೇ ಹೊರತು, ಅದು ಕ್ರಿಮಿನಲ್ ಅಪರಾಧವೆಂದು ದೂರು ನೀಡಲು ಅವಕಾಶವಿಲ್ಲ. ಭಾರತ ಸರಕಾರವು ವಿವಾಹದ ಪವಿತ್ರ ಬಂಧನವನ್ನು ಕಾಪಾಡಲು ಈ ಸೆಕ್ಷನ್ ಅಗತ್ಯವೆಂದೂ ಇದನ್ನು ಉಳಿಸಿಕೊಳ್ಳಬೇಕೆಂದೂ ವಾದಿಸಿತ್ತು. ನ್ಯಾಯಾಲಯವು ಇಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗುರುತಿಸಿದೆ. 1)ಈ ಸೆಕ್ಷನ್ ವಿವಾಹಿತ ಮಹಿಳೆಯನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಪರಿಗಣಿಸದೆ ಪತಿಯ ಸ್ವತ್ತು ಎಂಬಂತೆ ನೋಡುತ್ತದೆ. ಆದರೆ ಪತಿಯು ಪತ್ನಿಯ ಲೈಂಗಿಕತೆಯ ಮಾಲಕನಲ್ಲ. 2)ವಿವಾಹಬಾಹಿರ ಸಂಬಂಧವೇ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿಸಬೇಕೆಂದಿಲ್ಲ, ವೈವಾಹಿಕ ಸಂಬಂಧದಲ್ಲಿನ ಬಿರುಕು ಸಹಾ ವಿವಾಹೇತರ ಸಂಬಂಧಕ್ಕೆ ಕಾರಣವಾಗಬಹುದು. 3) ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಿತ ಸಂಬಂಧವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದು ಆ ವ್ಯಕ್ತಿಗಳ ಮೂಲಭೂತ ಹಕ್ಕಿನ ಚ್ಯುತಿಯಾಗುತ್ತದೆ. ಪತ್ನಿಯ ವಿವಾಹಬಾಹಿರ ಸಂಬಂಧ ಪತಿಗೆ ವಿಚ್ಛೇದನದ ಹಕ್ಕನ್ನು ನೀಡಬಹುದೇ ಹೊರತು ಅದನ್ನು ಕ್ರಿಮಿನಲ್ ಅಪರಾಧವಾಗಿಸುವುದು ಸಾಧ್ಯವಿಲ್ಲ. ಈ ಸುದ್ದಿಯನ್ನು ವರದಿ ಮಾಡುವಾಗ ಮಾಧ್ಯಮಗಳು ನೀಡಿದ ಕೆಲವು ಶೀರ್ಷಿಕೆಗಳು ಇಂತಿವೆ; ಅ)ಅಕ್ರಮ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು! - ಸುವರ್ಣನ್ಯೂಸ್ (ಕ್ರಮ/ಅಕ್ರಮ?)

    ಆ)ಅನೈತಿಕ ಸಂಬಂಧ ಅಪರಾಧವಲ್ಲ: ಸುಪ್ರೀಂ ಕೋರ್ಟ್ - ಕನ್ನಡಪ್ರಭ (ನೈತಿಕ/ಅನೈತಿಕ?)

    ಇ)ವಾಟ್ ಈಸ್ ಅಡಲ್ಟ್ರಿ ಲಾ? ಹೌ ಐಪಿಸಿ ಸೆಕ್ಷನ್ 497 ಈಸ್ ಯಾಂಟಿ ವುಮನ್? - ಇಂಡಿಯಾ ಟುಡೇ

    ಈ)ಹಸ್ಬೆಂಡ್ ನಾಟ್ ದಿ ಮಾಸ್ಟರ್. ಎಸ್.ಸಿ. ಡೀಕ್ರಿಮಿನಲೈಸಸ್ ಅಡಲ್ಟ್ರಿ -ದಿ ಕ್ವಿಂಟ್

ಈ ಶೀರ್ಷಿಕೆಗಳೇ ಸ್ತ್ರೀಪರ/ವಿರೋಧಿ ನಿಲುವುಗಳನ್ನು, ಅದರಂತೆ ಅಭಿಪ್ರಾಯ ರೂಪಿಸುವ ಹುನ್ನಾರಗಳನ್ನೂ, ತಟಸ್ಥತೆ/ಒಳಗಿನ ಪೂರ್ವಗ್ರಹಗಳನ್ನು, ಢಾಳಾಗಿ ತೆರೆದಿಡುತ್ತವೆ.

ಮೂರನೆಯ ಉದಾಹರಣೆ: 1994ರಲ್ಲಿ ಡಲ್ಲಾಸ್ ಮಾರ್ನಿಂಗ್ ನ್ಯೂಸ್ ಪತ್ರಿಕೆ ಜಗತ್ತಿನ ವಿವಿಧ ಭಾಗದ ಸ್ತ್ರೀಯರನ್ನು ಕುರಿತು ಮಾಡಿದ ಸರಣಿಗೆ ಪುಲಿಟ್ಜರ್ ಪ್ರಶಸ್ತಿ ಪಡೆಯಿತು. ಮಹಿಳಾ ಸಹಾಯಕ ವರದಿಗಾರ್ತಿ ಯರಿಲ್ಲದಿದ್ದರೆ ಇದು ನಮ್ಮಿಂದ ಸಾಧ್ಯವೇ ಆಗುತ್ತಿರಲಿಲ್ಲ. ಸ್ತ್ರೀಯರ ಕೆಲವು ಕಥನಗಳು ಮಹಿಳಾ ವರದಿಗಾರ್ತಿ ಯರಿಲ್ಲದಿದ್ದರೆ ನಮಗೆ ಎಂದಿಗೂ ಸಿಗುತ್ತಿ ರಲಿಲ್ಲ. ವಿಶೇಷವಾಗಿ ಸ್ತ್ರೀ ಜನನಾಂಗ ಛೇದದಂತಹ ಕಥನಗಳು... ಎಂದು ಡಲ್ಲಾಸ್‌ನ ವರದಿಗಾರರು ಹೇಳಿದ್ದಾರೆ.

ನಾಯಕತ್ವದ ಸ್ಥಾನಗಳಲ್ಲಿ ಹಾಗೂ ವರದಿಗಾರಿಕೆಯಲ್ಲಿ ಸ್ತ್ರೀಯರ ಪ್ರತಿನಿಧಿತ್ವದ ಕೊರತೆ, ಸ್ತ್ರೀಯರ ಕುರಿತಾದ ಸಮಾಜದಲ್ಲಿನ ಪೂರ್ವಗ್ರಹಗಳು, ಸಿದ್ಧ ಮಾದರಿಗಳೇ ವರದಿಗಳ ಹಿನ್ನೆಲೆಯಲ್ಲಿ ಕೆಲಸ ಮಾಡುವುದು ಇವುಗಳೆಲ್ಲದರ ಫಲವಾಗಿಯೇ, ಹೆಣ್ಣಿನ ಮೇಲೆ ದೌರ್ಜನ್ಯ ನಡೆದಾಗ ಅದಕ್ಕೆ ಆಕೆಯನ್ನೇ ದೂರುವಂತಹ ಮನಸ್ಥಿತಿಯನ್ನು ಉತ್ತೇಜಿಸುವ ಭಾಷೆಯಲ್ಲಿ ವರದಿ ಮಾಡುವುದು (ನಡು ರಾತ್ರಿಯಲ್ಲಿ ಪಾರ್ಟಿ ಮುಗಿಸಿ ಮನೆಗೆ ಒಬ್ಬಳೇ ಹಿಂದಿರುಗುತ್ತಿದ್ದ ಹೆಣ್ಣಿನ ಮೇಲೆ ಅತ್ಯಾಚಾರ...), ಅಂತಹ ಹೇಳಿಕೆಗಳನ್ನು ಉಲ್ಲೇಖಿಸುವುದು (ಶೀಲ ಶಂಕಿಸಿ ಪತ್ನಿಯ ಕೊಲೆ- ಆಕೆಗೆ ಅನೈತಿಕ ಸಂಬಂಧವಿತ್ತೆಂದು ಸ್ಥಳೀಯರು ತಿಳಿಸಿದರು.), ಮರ್ಯಾದಾ ಹತ್ಯೆ ಇಂತಹ ವರದಿಗಾರಿಕೆಗಳು ನಡೆಯುತ್ತದೆ. ಇವು ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಾಮಾನ್ಯೀಕರಿಸುತ್ತವೆ ಮತ್ತು ಅದಕ್ಕೆ ಸಮರ್ಥನೆ ಒದಗಿಸುತ್ತಾ ಒಪ್ಪಿತವಾಗಿಸಲು ಪ್ರಯತ್ನಿಸುವಂತಿರುತ್ತದೆ. ಈ ಕುರಿತ ವರದಿಗಳು ಇಂತಹ ದೌರ್ಜನ್ಯಗಳು ಸರ್ವಥಾ ಅಪರಾಧಗಳು ಮತ್ತು ಯಾವ ಕಾರಣಕ್ಕೂ ಸಮರ್ಥನೀಯವಲ್ಲ ಎಂಬ ಸಂದೇಶವನ್ನು ನೀಡುವಂತಿರಬೇಕೇ ಹೊರತು, ಅವುಗಳನ್ನು ಸಾಮಾನ್ಯೀಕರಿಸಿ, ಒಪ್ಪಿತವಾಗಿಸಿ, ಉತ್ತೇಜಿಸುವಂತಿರಬಾರದು.

ಶೋಷಿತ ಹೆಣ್ಣಿನ ಬಗ್ಗೆ ವರದಿ ಮಾಡುವಾಗ ನಿರ್ಲಕ್ಷವನ್ನು ತೋರದೆ ಸಾಕಷ್ಟು ಗಮನ ನೀಡಬೇ ಕಾದುದು ಅಗತ್ಯವಾಗಿರುವಂತೆಯೇ, ಅಂತಹ ವರದಿಗಳನ್ನು ಅತಿರೇಕಕ್ಕೊಯ್ದು ಆ ಹೆಣ್ಣಿನ ಖಾಸಗಿತನವನ್ನು ಹರಾಜಿಗಿಡದಂತೆ ಎಚ್ಚರವಹಿಸುವ ಸೂಕ್ಷ್ಮತೆಯನ್ನೂ ತೋರುವುದು ಸಹ ಅಗತ್ಯವಾಗಿದೆ. ಅದು ಸಾಧ್ಯವಾಗುವುದು ಹೆಣ್ಣನ್ನು ವ್ಯಕ್ತಿಯಾಗಿ ಗೌರವಿಸು ವಂತಹ ಮನಸ್ಥಿತಿಯಿಂದ ಮಾತ್ರ. ಆದರೆ ಸಮಾಜದಲ್ಲಿಯೇ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ, ಪುರುಷನಿಗೆ ಅಡಿಯಾಳಾಗಿ, ಕೇವಲ ದೇಹವಾಗಿ ಪರಿಭಾವಿಸುವ ಪ್ರವೃತ್ತಿ ಇದ್ದಾಗ, ಮಾಧ್ಯಮಗಳು ಅದನ್ನು ಒಡೆದು ಸಮಾಜದ ದೃಷ್ಟಿಕೋನವನ್ನು ಬದಲಿಸುವಂತಹ ಕೆಲಸ ಮಾಡಬೇಕೇ ಹೊರತು, ಸಮಾಜದ ದೋಷಪೂರಿತ ದೃಷ್ಟಿಕೋನವನ್ನೇ ಪುಷ್ಟೀಕರಿಸುವಂತೆ ನಡೆದುಕೊಳ್ಳಬಾರದು. ಹೆಣ್ಣಿನ ಮೇಲೆ ನಡೆಯುವ ದೈಹಿಕ ಹಲ್ಲೆ, ಲೈಂಗಿಕ ಶೋಷಣೆ, ಅತ್ಯಾಚಾರ ದೌರ್ಜನ್ಯಗಳನ್ನು ಸಮಸ್ಯೆ ಆಧಾರಿತ ವಿಧಾನದಿಂದ ನೋಡಬೇಕೇ ಹೊರತು, ಘಟನೆ ಆಧಾರಿತ ವಿಧಾನದಿಂದ ಅಲ್ಲ ಎಂಬ ಅರಿವು ಅಗತ್ಯವಾಗಿ ಮೂಡಬೇಕಿದೆ. ಇಂತಹದನ್ನು ಒಟ್ಟಾರೆ ಸಾಮಾಜಿಕ ಸ್ವಾಸ್ತ್ಯಕ್ಕೆ ಒದಗಿದ ಅಪಾಯವಾಗಿ ಗ್ರಹಿಸಬೇಕಿದೆ. ಮಹಿಳಾ ವರದಿಗಾರ್ತಿಯರ ಸುದ್ದಿಗಳು ಪುರುಷರಿಗಿಂತ ಸ್ಪಷ್ಟವಾಗಿ ಸಿದ್ಧ ಮಾದರಿಗಳನ್ನು ಒಡೆಯುವ ಸಾಧ್ಯತೆಗಳು ಹೆಚ್ಚು ಎಂದು ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ಸ್‌ನ ಸಂಶೋಧನಾ ವರದಿಯು ಗುರುತಿಸುತ್ತದೆ. ಸುದ್ದಿ ಮಾಧ್ಯಮಗಳಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸುವುದರ ಜೊತೆಗೇ ಈ ಹೆಣ್ಣು ನೋಟವನ್ನು ಸಹಾ ಪುರುಷ ವರದಿಗಾರರು ಬೆಳೆಸಿಕೊಳ್ಳಬೇಕಿದೆ. ಎಲ್ಲವೂ ಸರಿಯಾಗಿದೆ ಎಂದು ಭಾವಿಸುವವರು, ವಾದಿಸುವವರು ಇಂತಹ ಅಂಕಿಅಂಶಗಳು ಎದುರಾದಾಗ ಸಮಸ್ಯೆಯನ್ನು ಸರಿಪಡಿಸದಿರಲು ಒಡ್ಡುವ ಸಾಮಾನ್ಯ ಸಬೂಬುಗಳೆಂದರೆ ಮಹಿಳಾ ಸಮಾನ ಪ್ರಾತಿನಿಧ್ಯ ಅಗತ್ಯ ವಿಷಯವಾದರೂ ಪ್ರಾಯೋಗಿಕವಾಗಿ ಅದನ್ನು ಸಾಧಿಸಲು ಸಾಧ್ಯವಿಲ್ಲ. ವಿಷಯ ತಜ್ಞರ ಸಂಖ್ಯೆ ಸಾಕಷ್ಟು ಇಲ್ಲ. ಇಂತಹ ಪ್ರಯೋಗಗಳಿಂದ ಗುಣಮಟ್ಟ ಕುಸಿಯುವ ಅಪಾಯವಿದೆ. ಇದನ್ನು ಕಾರ್ಯ ರೂಪಕ್ಕೆ ತರಲು ಸಾಕಷ್ಟು ಸಮಯ, ಶ್ರಮ ತಗಲುತ್ತದೆ, ಆದರೆ ನಿತ್ಯ ಕೆಲಸದ ಗುರಿ ಮುಟ್ಟಬೇಕಾದ ಒತ್ತಡದಲ್ಲಿ ಇವೆಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ... ಇತ್ಯಾದಿ. (ಇಂತಹದ್ದೇ ಸಬೂಬುಗಳು ಜಾತಿ ಮೀಸಲಾತಿ ಸಮಯ ದಲ್ಲೂ ಕೇಳಿಬರುತ್ತದಲ್ಲವೇ? ಆಗ ಇದನ್ನು ಉಗ್ರವಾಗಿ ವಿರೋಧಿ ಸುವ ಕೆಲವು ಪ್ರಗತಿಪರ ಗೆಳೆಯರು ಅದೇ ಹೆಣ್ಣಿನ ವಿಚಾರಕ್ಕೆ ಬಂದಾಗ, ಯಾವುದೇ ಅಳುಕಿಲ್ಲದೇ ಇಂತಹದ್ದೇ ವಾದ ಹೂಡುವುದು ಅಚ್ಚರಿ ಮೂಡಿಸುತ್ತದೆ.)

ಆದರೆ ಇವಕ್ಕೂ ಉತ್ತರವನ್ನು ಅಂಕಿ ಅಂಶಗಳ ಮೂಲಕವೇ ಕೊಡಬಹುದೆನಿಸುತ್ತದೆ. ಬಿಬಿಸಿ ಚಾನೆಲ್‌ನಲ್ಲಿ ಔಟ್‌ಸೋರ್ಸ್ ಎಂಬ ಪ್ರೈಮ್ ಟೈಮ್ ಕಾರ್ಯಕ್ರಮದ ರೂವಾರಿ ರೋಸ್ ಅಟ್ಕಿನ್ಸ್ 2017ರಲ್ಲಿ ಪ್ರತಿ ತಿಂಗಳೂ ಕ್ಯಾಮರಾ ಮುಂದೆ 50:50 ಪ್ರಾತಿನಿಧ್ಯದ ಗುರಿ ಎಂಬ ಒಂದು ಪ್ರಯೋಗ ಶುರು ಮಾಡಿದ. ಕೇವಲ ನಾಲ್ಕು ತಿಂಗಳಲ್ಲಿ ಆತನ ಕಾರ್ಯಕ್ರಮದಲ್ಲಿ ಶೇ.39ರಷ್ಟಿದ್ದ ಮಹಿಳೆಯರ ಪ್ರಾತಿನಿಧ್ಯ ಶೇ.50 ಆಯಿತು. ಇಂದು ಬಿಬಿಸಿಯ 20ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಮಾಧ್ಯಮ ಪಾಲುದಾರರ 500 ಶೋಗಳು ಈ 50:50 ಸವಾಲನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿವೆ. ಔಟ್‌ಸೋರ್ಸ್ ಬಳಸಿದ ಸರಳವಾದ ವಿಧಾನದಲ್ಲೇ ಎಕ್ಸೆಲ್ ಸ್ಪ್ರೆಡ್‌ಶೀಟ್‌ನಲ್ಲಿ ಪ್ರತಿದಿನದ ಪ್ರತಿನಿಧಿತ್ವದ ದತ್ತಾಂಶವನ್ನು ನಮೂದಿಸುತ್ತಾ, ಗಮನಿಸಿಕೊಳ್ಳುತ್ತಾ ಕೊರತೆ ಸರಿಪಡಿಸಿಕೊಳ್ಳುತ್ತಿವೆ. ಅತ್ಯುತ್ತಮರಾದವರನ್ನೇ ಆಯ್ಕೆ ಮಾಡುವುದು ಎಂಬ ಸುವರ್ಣ ನಿಯಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆಯೇ ಅವರು 50:50 ಗುರಿ ತಲುಪಲು ಸಾಧ್ಯವಾಗುತ್ತಿದೆ! (ಆಡಳಿತ ವರ್ಗದಿಂದ ಯಾವುದೇ ದೊಡ್ಡಮಟ್ಟದ ಹಣಕಾಸಿನ ನೆರವು ಇಲ್ಲದೆಯೇ!) ಇನ್ನು ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ಕಾಲ್ಪನಿಕ, ಸೃಜನಾತ್ಮಕ ಮಾಧ್ಯಮವನ್ನು (ಸಿನೆಮಾ, ಟಿವಿ ಕಾರ್ಯಕ್ರಮ ಇತ್ಯಾದಿ) ಗಮನಿಸುವುದಾದರೆ, ಇಲ್ಲಿಯೂ ಪರಿಸ್ಥಿತಿ ನಿರಾಶಾದಾಯಕವಾಗಿಯೇ ಇದೆ. ಜಾಗತಿಕವಾಗಿ ನಡೆಸಿದ ಅಧ್ಯಯನಗಳ ಪ್ರಕಾರ ಇಡೀ ಜಗತ್ತಿನ ಮುಖ್ಯ ವಾಹಿನಿಯ ಸಿನೆಮಾಗಳ ಮಾತನಾಡುವ ಪಾತ್ರಗಳ ಪೈಕಿ 1/3ರಷ್ಟು ಮಾತ್ರವೇ ಸ್ತ್ರೀಪಾತ್ರಗಳಾಗಿವೆ. ಸಾಮಾನ್ಯವಾಗಿ ಹೆಚ್ಚು ಆಸಕ್ತಿದಾಯಕವಲ್ಲದ, ಕಡಿಮೆ ಪ್ರಾಮುಖ್ಯತೆಯ ಕೆಲಸಗಳನ್ನೇ ನಿರ್ವಹಿಸುವಂತೆ ಈ ಪಾತ್ರಗಳನ್ನು ಹೆಣೆಯ ಲಾಗುತ್ತದೆ (ಜಡ್ಜ್ ಅಥವಾ ಡಾಕ್ಟರ್‌ಗೆ ಬದಲು ಗುಮಾಸ್ತೆ ಅಥವಾ ದಾದಿ). ಹೆಣ್ಣು ಗಂಡಿಗಿಂತಲೂ ದುಪ್ಪಟ್ಟು ಸಿನೆಮಾಗಳಲ್ಲಿ ಬೆತ್ತಲಾಗಿ ಇಲ್ಲವೇ ಸೆಕ್ಷುಯಲೈಸ್ಡ್ ಆಗಿ ತೋರಿಸಲ್ಪಡುತ್ತಾಳೆ ಮತ್ತೂ ಆಘಾತಕಾರಿ ವಿಷಯ ವೆಂದರೆ 1946ರಿಂದಲೂ ಸಿನೆಮಾ ಜಗತ್ತಿನ ಈ ಚಿತ್ರಣ ಹೆಚ್ಚೇನೂ ಬದಲಾಗದೆ ಹಾಗೆಯೇ ಇದೆ!

ಜಾಹೀರಾತು ಮತ್ತು ನಿಯತ ಕಾಲಿಕಗಳಲ್ಲಿ ನೋಡಿದರೆ, ಶೇ.78 ಜಾಹೀರಾತುಗಳಲ್ಲಿ ಕಾಣಿಸುವ ಸ್ತ್ರೀಯರು ಶೇ. 30ಕ್ಕಿಂತ ಕಡಿಮೆ ವಯಸ್ಸಿನವರೇ ಆಗಿರುತ್ತಾರೆ. ಅದರಲ್ಲಿ ಶೇ.90ರಷ್ಟು ಸಪೂರ ದೇಹಿಗಳೂ ಮತ್ತು ಶೇ.10 ಮಧ್ಯಮ ಗಾತ್ರದವರೂ ಆಗಿದ್ದಾರೆ. ಶೇ.6ಕ್ಕಿಂತ ಕಡಿಮೆ ಸ್ತ್ರೀಯರು ಜಾಹೀರಾತುಗಳಲ್ಲಿ ವೃತ್ತಿನಿರತ ಜಾಗಗಳಲ್ಲಿ ಕಾಣಿಸುತ್ತಾರೆ. ಸಾರಾಂಶದಲ್ಲಿ, ಗಂಡು ನಿಯಮಿಸಿರುವ ಮಾನದಂಡಗಳಿಗೊಪ್ಪಿತವಾಗಿ ಸದಾ ಆತನನ್ನು ಸೆಳೆದು ಇಟ್ಟುಕೊಳ್ಳುವುದು ಹೆಣ್ಣಿನ ಪರಮ ಆದ್ಯತೆಯಾಗಿರಬೇಕಿದೆ ಎಂಬುದನ್ನು ಇವೆಲ್ಲದರ ಮೂಲಕ ಒಪ್ಪಿಸುವ ಕೆಲಸ ನಡೆಯುತ್ತಿರುತ್ತದೆ.

ಇನ್ನು ಟಿವಿ ಚಾನೆಲ್‌ಗಳ ಒಟ್ಟು ಸಿಬ್ಬಂದಿಯಲ್ಲಿ ಜಾಗತಿಕವಾಗಿ ಸ್ತ್ರೀಯರ ಸಂಖ್ಯೆಗೇ ಶೇ.25ಕ್ಕಿಂತ ಕಡಿಮೆ. ಮಹಿಳೆಯರದೇ ಷೋಗಳಲ್ಲಿ ಸಹ ಶೇ.70ರಷ್ಟು ಸಿಬ್ಬಂದಿ ಪುರುಷರೇ ಆಗಿರುತ್ತಾರೆ. ನಿರ್ದೇಶನ, ಸಂಕಲನ, ಕ್ಯಾಮರ, ನಿರ್ಮಾಣ, ಶಬ್ದಗ್ರಹಣ ಇತ್ಯಾದಿ ವಿಭಾಗಗಳಲ್ಲಿ ಪುರುಷರದ್ದೇ ಪಾರುಪತ್ಯ. ಉಳಿದ ಶೇ.30 ಮಹಿಳಾ ಸಿಬ್ಬಂದಿ ಸಾಮಾನ್ಯವಾಗಿ ಮೇಕಪ್, ವಸ್ತ್ರ ವಿನ್ಯಾಸ ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ಶೇ.81 ನಿರೂಪಕರು ಪುರುಷರಾಗಿದ್ದಾರೆ. ಒಟ್ಟೂ ಸ್ತ್ರೀಪಾತ್ರಧಾರಿಗಳಲ್ಲಿ ಶೇ.81 ರಷ್ಟು ಪಾತ್ರಗಳಿಗೆ ಮಾತೇ ಇರುವುದಿಲ್ಲ. ಸಮಾಜದ ಇಂತಹ ಅಸಮತೋಲಿತ ಚಿತ್ರಣವು ಅಪಾಯಕಾರಿ ಸಿದ್ಧಮಾದರಿಗಳನ್ನೇ ಬಲಪಡಿಸುತ್ತಾ ಹೋಗುತ್ತವೆ. ಇವೆಲ್ಲದರ ಒಟ್ಟು ಪರಿಣಾಮವೇ ಹೆಣ್ಣು ಇಲ್ಲಿ ಬಿಂಬಿತವಾಗುತ್ತಿರುವ ರೀತಿ. ಸಾಮಾನ್ಯವಾಗಿ ಹೆಣ್ಣು ಇಲ್ಲಿ ಎರಡು ಸಿದ್ಧ ಮಾದರಿಗಳಲ್ಲಿ ಬಿಂಬಿತವಾಗುತ್ತಾಳೆ. ಅ)ಭೋಗದ, ಲೈಂಗಿಕತೆಯ ವಸ್ತು (ಆಬ್ಜೆಕ್ಟ್ ಆಫ್ ಪ್ಲೆಷರ್). ಆ)ಪೂಜನೀಯ ವಸ್ತು (ಆಬ್ಜೆಕ್ಟ್ ಆಫ್ ವರ್ಷಿಪ್) -ಆದರ್ಶ ತಾಯಿ, ಪರಿಪೂರ್ಣ ಗೃಹಿಣಿ ಮಾದರಿಗಳಲ್ಲಿ. ಹೆಣ್ಣು ಈ ಆದರ್ಶದ ಚೌಕಟ್ಟಿಗೆ ಸರಿಹೊಂದಬೇಕು. ಹಾಗಿಲ್ಲವಾದರೆ ಆಕೆ ಗಂಡಿನ ಭೋಗದ ವಸ್ತುವಾಗಲು ಲಾಯಕ್ಕಾದವಳು ಎಂಬಂತ ಅಲಿಖಿತ ನಿಯಮವನ್ನು ಹರಿಯಬಿಡಲಾಗಿದೆ. ಹಾಗಾಗಿ ಗಂಡಿನ ಕಣ್ಣೋಟದ ಈ ಆದರ್ಶ, ಹೆಣ್ಣಿನ ಮೇಲೆ ಅಯಾಚಿತವಾಗಿ ಹೇರಲ್ಪಡುತ್ತದೆ. ಅಂದರೆ ಗಂಡು ಹೆಣ್ಣನ್ನು ಹೇಗೆ ನೋಡಲು ಬಯಸುತ್ತಾನೆಯೋ ಹಾಗೆಯೇ ಇಲ್ಲಿ ಬಿಂಬಿಸಲ್ಪಡುತ್ತಿದ್ದಾಳೆ. ಇವತ್ತಿನ ಮಾಧ್ಯಮಗಳಲ್ಲಿ ಹೆಣ್ಣನ್ನು ನೋಡುತ್ತಾ ಬೆಳೆಯುವ ಬಾಲಕರು ಆಕೆಯನ್ನು ಭೋಗದ ವಸ್ತುವಾಗಿ ಭಾವಿಸುವಂತೆಯೇ ಬಾಲಕಿಯರು ತಮ್ಮನ್ನು ತಾವು ಹೆಚ್ಚು ಸೂಕ್ಷ್ಮ ಮತ್ತು ಅಬಲೆಯರಾಗಿ ಗುರುತಿಸಿಕೊಳ್ಳುವಂತಿದೆ. ಸುಮ್ಮನೆ ಯೋಚಿಸಿ ನೋಡಿ, ಎಲ್ಲ ಸಿನೆಮಾಗಳೂ, ಕಾರ್ಯಕ್ರಮಗಳೂ ಬೋರ್ಡ್ ರೂಮಿನಲ್ಲಿ, ವಿಧಾನಸಭೆಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ಹೆಚ್ಚು ಹೆಚ್ಚು ಸಬಲರಾದ ಮಹಿಳೆಯರನ್ನು ತೋರಿಸುತ್ತಾ ಹೋದರೆ, ಅದನ್ನು ನೋಡುತ್ತಾ ಬೆಳೆಯುವ ಮಕ್ಕಳು ಹೆಣ್ಣನ್ನು ಹೇಗೆ ಪರಿಭಾವಿಸಬಹುದು?

ಮಾಧ್ಯಮಗಳು ಸಮಾಜವನ್ನೇ ಪ್ರತಿಬಿಂಬಿಸುತ್ತವೆ ಮತ್ತು ಅದು ಹಾಗೆಯೇ ಇರಬೇಕಲ್ಲವೇ ಎಂದು ವಾದಿಸುವವರಿದ್ದಾರೆ. ಇಲ್ಲಿ ಒಂದು ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಮಾಜದಲ್ಲಿನ ಒಂದು ಅನಿಷ್ಠ ಪದ್ಧತಿಯನ್ನೋ ಸಿದ್ಧಮಾದರಿಯನ್ನೋ ಅದು ಇರುವಂತೆಯೇ ಬಿಂಬಿಸುತ್ತಲೇ ನೋಡುಗರಲ್ಲಿ ಅದರ ಬಗ್ಗೆ ವಿಷಾಧವನ್ನು, ತಪ್ಪಿತಸ್ಥ ಭಾವವನ್ನು ಮೂಡಿಸಲೂ ಸಾಧ್ಯವಿದೆ (ಕನ್ನಡದ ಫಣಿಯಮ್ಮ, ಘಟಶ್ರಾದ್ಧ, ಹಿಂದಿಯ ಫೈರ್‌ನಂತಹ ಸಿನೆಮಾಗಳು). ಹಾಗೆಯೇ ಇರುವುದನ್ನು ಇರುವಂತೆಯೇ ಹೇಳುತ್ತಿದ್ದೇನೆ ಎನ್ನುತ್ತಲೇ ಸತಿ ಪದ್ಧತಿಯನ್ನು ವೈಭವೀಕರಿಸುವ ಪದ್ಮಾವತ್‌ನಂತಹ ಚಿತ್ರಗಳು. ಇಲ್ಲಿ ಚಿತ್ರದ ಮುಖ್ಯಪಾತ್ರಧಾರಿ ರಾಣಿ ಪದ್ಮಾವತಿ ತನ್ನ ಶೀಲ(?)ವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಗುನಗುತ್ತಾ ಧೈರ್ಯವಾಗಿ ಸತಿ ಹೋಗುವುದು ಆಕೆಯ ಧೈರ್ಯದ ಮತ್ತು ಪಾವಿತ್ರತೆ(?)ಯ ಸಂಕೇತವೆಂಬಂತೆ ತೋರಿಸಲಾಗಿದೆ. ಅವಳ ಜೊತೆ ಜೊತೆಗೇ ಒಬ್ಬ ಪೂರ್ಣ ಗರ್ಭಿಣಿಯೂ ಸೇರಿದಂತೆ, ವಯಸ್ಸಾದ ಮಹಿಳೆಯರು, ಕೊನೆಗೆ ಏಳೆಂಟು ವಯಸ್ಸಿನ ಪುಟ್ಟ ಬಾಲಕಿಯೂ ಅದೇ ವೀರಾವೇಶದಿಂದ ಬೆಂಕಿಗೆ ಬೀಳಲು ಹೋಗುವುದು, ಆ ದೃಶ್ಯಗಳ ಬಣ್ಣದ ಆಯ್ಕೆ, ಫ್ರೇಮಿಂಗ್, ಹಿನ್ನೆಲೆ ಸಂಗೀತ ಪ್ರತಿಯೊಂದೂ ಅದನ್ನು ವೈಭವೀಕರಿಸುತ್ತವೆ. ನಿರ್ದೇಶಕನ ಈ ಎಲ್ಲಾ ಪ್ರಜ್ಞಾಪೂರ್ವಕ ಆಯ್ಕೆಗಳೂ ಆತನ ಅಸೂಕ್ಷ್ಮ ಗಂಡು ಮನಸ್ಥಿತಿ ಮತ್ತು ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇತ್ತೀಚಿನ ಕಬೀರ್‌ಸಿಂಗ್ ಚಿತ್ರದಲ್ಲಿನ ಮುಖ್ಯ ಪಾತ್ರ ಪ್ರೀತಿಯ ಹೆಸರಿನಲ್ಲಿ ತೋರುವ ಹೆಣ್ಣಿನ ಮೇಲಿನ ಕ್ರೌರ್ಯವನ್ನು ಬಿಂಬಿಸಿರುವ ರೀತಿ, ಅದಕ್ಕೆ ನೋಡುಗರ ಪ್ರತಿಕ್ರಿಯೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಸ್ವೀಕೃತಿ ಮತ್ತು ಅನುಮೋದನೆಗಳು ನಮ್ಮಲ್ಲಿ ಅಗತ್ಯ ಎಚ್ಚರವನ್ನು ಮೂಡಿಸಬೇಕಿದೆ.

ಹೆಣ್ಣನ್ನು ಹೀಗೆ ಎರಡನೇ ದರ್ಜೆಯ ಮನುಷ್ಯಳಾಗಿ, ಅಬಲೆಯಾಗಿ, ಅಡಿಯಾಳಾಗಿ ತೋರಿಸುವ ಮಾಧ್ಯಮ ಗಳು ಲಿಂಗ ಸಂವೇದನೆಯ ವಿಚಾರದಲ್ಲಿ ಸಮಾಜವನ್ನು ತಿದ್ದುವುದಿರಲಿ, ಬದಲಿಗೆ ತಾನೇ ಹೆಣ್ಣಿನ ಬಗೆಗೆ ಅಸೂಕ್ಷ್ಮತೆಯನ್ನೂ, ಅಪಾಯಕಾರೀ ಧೋರಣೆಯನ್ನೂ ಬೆಳೆಸುತ್ತಾ ಹೋಗುತ್ತದೆ. ದಿನಂಪ್ರತಿ ವರದಿಯಾಗುವ (ಮತ್ತು ವರದಿಯಾಗದೇ ಹೋಗುವ) ಹತ್ತಾರು ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಇದೆಲ್ಲದರ ಪಾಲೂ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸದೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂಬ ಕೂಗು ಎಷ್ಟೇ ಪ್ರಾಮಾಣಿಕ ಆಕ್ರೋಶದಿಂದ ಮೂಡಿದರೂ, ಅದು ಸಮಸ್ಯೆಯನ್ನು ಬೇರಿನಿಂದ ಕಿತ್ತೊಗೆಯಲಾರದು. ಗಮನಿಸಲೇಬೇಕಾದ ಇನ್ನೊಂದು ಬಹುಮುಖ್ಯ ಆಯಾಮ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತವಾಗುವಾಗಲೂ ಆಯ್ಕೆಯಲ್ಲಿ ಕಾಣುವ ಜಾಣಗುರಡುತನ. ಒಂದು ನಿರ್ಭಯಾ ಪ್ರಕರಣಕ್ಕೆ, ಒಂದು ಪ್ರಿಯಾಂಕಾ ರೆಡ್ಡಿ ಪ್ರಕರಣಕ್ಕೆ ಸಕಾಲಿಕ, ಸಕಾರಣವಾಗಿಯೇ ಹುಟ್ಟುವ ಆಕ್ರೋಶ, ಅಷ್ಟೇ ವ್ಯಾಪಕ ವಾಗಿ ಒಂದು ಖೈರ್ಲಾಂಜಿ ಪ್ರಕರಣಕ್ಕೆ ಹುಟ್ಟದಿರುವಲ್ಲಿ ಇರುವ ಕಾರಣಗಳೇನು? ಒಬ್ಬ ಸುಶಿಕ್ಷಿತ ಹೆಣ್ಣಿನ ಮೇಲಿನ ಅತ್ಯಾಚಾರವು ಸಮಾಜದ ಮನಸ್ಸನ್ನು ಕಲಕುವಷ್ಟು ಒಬ್ಬ ಬಡ, ಕೆಳಜಾತಿಯ ಹೆಣ್ಣಿನ ಮೇಲಿನ ಅತ್ಯಾಚಾರವು ಕಲಕುವುದಿಲ್ಲವೆಂದರೆ ಸಮಾಜದ ಅಂತಃಕರಣದ ದೋಷವು ನಮ್ಮನ್ನು ಕಾಡಬೇಕಿದೆ. ಇದರಲ್ಲಿ ಮತ್ತೆ ಅದೇ ಮಾಧ್ಯಮಗಳ ಪಾತ್ರ, ದಲಿತ, ದಮನಿತರ, ದಲಿತ ಹೆಣ್ಣುಮಕ್ಕಳ ಪ್ರಾತಿನಿಧ್ಯದ ಪ್ರಶ್ನೆ ಬರುತ್ತದೆನ್ನುವುದನ್ನು ಅರಿಯಬೇಕಿದೆ. ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲು ಶಿಕ್ಷಣ, ಕಾನೂನು, ರಾಜಕೀಯ ಪ್ರಾತಿನಿಧ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂಬುದು ನಿಜವೇ. ಆದರೆ ಇಂತಹ ಬದಲಾವಣೆಗೆ ಸಮಾಜವನ್ನು ತಯಾರು ಮಾಡುವ ದೊಡ್ಡ ಸಾಧ್ಯತೆ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹಾಗಾಗಿ ಇದು ಮಾಧ್ಯಮದ ಗುರುತರವಾದ ಜವಾಬ್ದಾರಿ ಸಹ ಆಗಿದೆ. ಇದನ್ನರಿತು ಮಾಧ್ಯಮಗಳು ತುರ್ತಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)