varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಹೀಗೊಂದು ಆದರ್ಶ ನಿಕಾಹ್ ನಾಮಾ

ವಾರ್ತಾ ಭಾರತಿ : 31 Dec, 2019
ಹಾಜಿರಾ ಪುತ್ತಿಗೆ

ಮೌಲಾನಾ ಸೈಯದ್ ಮುಹಮ್ಮದ್ ಯೂಸುಫ್ ಅಲ್ ಬಗ್ದಾದಿ ಅಲ್ ಮದ್ರಾಸಿ 19ನೇ ಶತಮಾನದ ಕೊನೆಯ ಭಾಗದಲ್ಲಿ, ಸದ್ಯ ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳದಲ್ಲಿ ಸುಮಾರು 1880ರಲ್ಲಿ ಜನಿಸಿದವರು. ಅವರ ಮಾತೃ ಭಾಷೆ ಉರ್ದು. ಆಗ ಕರಾವಳಿ ಪ್ರದೇಶದ ಹೆಚ್ಚಿನ ಭಾಗವು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಮೈಸೂರು ಪ್ರಾಂತದ ಅಧೀನವಿತ್ತು. ಅವರ ಮುತ್ತಾತ ಮುಹಿಯ್ಯುದ್ದೀನ್ ಅಲ್ ಬಗ್ದಾದಿ ಇರಾಕ್ ಮೂಲದವರು.

ಬಾಲ್ಯದಲ್ಲೇ ಅಪಾರ ಜ್ಞಾನದಾಹಿಯಾಗಿದ್ದ ಮೌಲಾನಾ ಕೇವಲ 13ರ ಹರೆಯದವರಾಗಿದ್ದಾಗ, ತಮ್ಮ ಜ್ಞಾನದಾಹವನ್ನು ತಣಿಸಲು ಕಾರ್ಕಳದಿಂದ ಕಾಲ್ನಡಿಗೆಯಲ್ಲಿ ದಿಲ್ಲಿಯ ಕಡೆಗೆ ಪ್ರಯಾಣ ಹೊರಟ ಸಾಹಸಿ. ಹೆಚ್ಚಿನ ದಾರಿಯನ್ನು ಅವರು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು. ಹಲವು ದಿನಗಳ ದೀರ್ಘ ಪ್ರಯಾಣದ ಬಳಿಕ ದಿಲ್ಲಿಯ ಸಮೀಪದ ದೇವ್‌ಬಂದ್ ನಲ್ಲಿರುವ ಪ್ರಖ್ಯಾತ ದಾರುಲ್ ಉಲೂಮ್ ಮದ್ರಸವನ್ನು ಸೇರಿದ ಮೌಲಾನಾ ಅಲ್ಲಿ ಹಲವಾರು ವರ್ಷ ವಿದ್ಯಾರ್ಜನೆ ಮಾಡಿ ತಮ್ಮ ಅಸಾಮಾನ್ಯ ಪ್ರತಿಭೆಯನ್ನು ಮೆರೆದರು. ಅಲ್ಲಿ ಅವರು ಮುಹದ್ದಿಸ್ ಅಥವಾ ಶೈಖುಲ್ ಹದೀಸ್ ಎಂಬ ಉನ್ನತ ಪದವಿಯನ್ನು ಪಡೆದರು. ಮುಂದೆ ರಾಂಪುರ್‌ನಲ್ಲಿ ‘ಮದ್ರಸ ಅನ್ವಾರುಲ್ ಉಲೂಮ್’ನಲ್ಲಿ ಶಿಕ್ಷಕರಾಗಿ ಮಾತ್ರ ವಲ್ಲ ಆ ಸಂಸ್ಥೆಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು.

ಒಂಟಿಯಾಗಿ ವಿದ್ಯಾರ್ಜನೆಗೆ ಹೋಗಿದ್ದ ಮೌಲಾನಾ ಯೂಸುಫ್, ಬಹಳ ವರ್ಷಗಳ ಬಳಿಕ ಊರಿಗೆ ಮರಳುವಾಗ ಒಂಟಿಯಾಗಿರಲಿಲ್ಲ. ಉತ್ತರ ಪ್ರದೇಶದ ಒಂದು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದ ಹಬೀಬತುನ್ನಿಸಾ ಎಂಬಾಕೆಯನ್ನು ವಿವಾಹವಾಗಿ ಪತ್ನಿಯ ಜೊತೆ ಊರಿಗೆ ಬಂದರು. 1961ರಲ್ಲಿ ನಿಧನರಾದ ಮೌಲಾನಾರವರು ಹಲವು ವರ್ಷಗಳ ಕಾಲ ಮಂಗಳೂರಿನ ಬಂದರ್‌ನಲ್ಲಿರುವ ಕಚ್ಚಿ ಮೆಮನ್ ಮಸೀದಿಯಲ್ಲಿ ಇಮಾಮ್ ಹಾಗೂ ಖತೀಬರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ಪರಿಸರದಲ್ಲಿ ಧರ್ಮದ ಜ್ಞಾನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆ ಕಾಲದಲ್ಲಿ ಅವರು ಮಹತ್ತರ ಪಾತ್ರ ನಿರ್ವಹಿಸಿದ್ದರು. ಅವರ ನಂತರ ಅವರದೇ ಹೆಸರಿನ ಅವರ ಆಪ್ತ ಶಿಷ್ಯ ಹಾಗೂ ಖ್ಯಾತ ವಿದ್ವಾಂಸ ಮೂಡುಬಿದಿರೆಯ ಮರ್‌ಹೂಂ ಮೌಲಾನಾ ಸೈಯದ್ ಯೂಸುಫ್ ಸಾಹೇಬರು ಕಚ್ಚಿ ಮಸೀದಿಯ ಖತೀಬರಾದರು. ಅವರ ಇನ್ನೋರ್ವ ಆಪ್ತ ಶಿಷ್ಯ ಮೌಲಾನಾ ಮರ್‌ಹೂಂ ಶೇಖ್ ಅಬ್ದುಲ್ ಖಾದರ್ ಸಾಹೇಬ್, ಖ್ಯಾತ ವಾಗ್ಮಿಯಾಗಿದ್ದರು. ಅವರು ಮಂಗಳೂರಿನ ರಥಬೀದಿಯಲ್ಲಿರುವ ಶಾಹ್‌ಮೀರ್ ಮಸೀದಿಯಲ್ಲಿ ಹಲವು ದಶಕಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದರು. ಮೌಲಾನಾರ ಪುತ್ರರಾದ ಮೌಲಾನಾ ಸೈಯದ್ ಯೂನುಸ್, ಮೌಲಾನಾ ಸೈಯದ್ ಇಲ್ಯಾಸ್, ಮೌಲಾನಾ ಸೈಯದ್ ಅಯ್ಯೂಬ್, ಮೌಲಾನಾ ಸೈಯದ್ ಇದ್ರೀಸ್, ಮೌಲಾನಾ ಸೈಯದ್ ಯಾಕೂಬ್ ಇವರೆಲ್ಲರೂ ಅರಬಿ, ಫಾರ್ಸಿ ಮತ್ತು ಉರ್ದು ಭಾಷೆಯಲ್ಲಿ ಅಪಾರ ಪಾಂಡಿತ್ಯವಿದ್ದ ಧಾರ್ಮಿಕ ವಿದ್ವಾಂಸರಾಗಿದ್ದರು. 1911ರಲ್ಲಿ ನವೆಂಬರ್ 10 ರಂದು ರಾಂಪುರದಲ್ಲಿ ಜರುಗಿದ ಮೌಲಾನಾ ಯೂಸುಫ್ ಅವರ ವಿವಾಹದ ‘ನಿಕಾಹ್ ನಾಮಾ’ (ವೈವಾಹಿಕ ಕರಾರುಪತ್ರ), ಅವರ ಹಿರಿಯ ಮೊಮ್ಮಗ ಸೈಯದ್ ಅಬ್ದುಲ್ ಹಯ್ ಅವರ ಬಳಿ ಈಗಲೂ ಸುರಕ್ಷಿತವಿದೆ. ಅಬ್ದುಲ್ ಹಯ್ ಸಾಹೇಬರು ಕಳೆದ ಆರು ದಶಕಗಳಿಂದ ಕತರ್ ದೇಶದಲ್ಲಿ ಸಾಹಿತ್ಯ, ಸಮಾಜ ಸೇವೆ ಇತ್ಯಾದಿ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹಿರಿಯ ಅನಿವಾಸಿ ಭಾರತೀಯ ಉದ್ಯಮಿಯಾಗಿದ್ದಾರೆ. ಮೌಲಾನಾ ಅವರ ವಧು ಹಬೀಬತುನ್ನಿಸಾ, ಖ್ಯಾತ ವಿದ್ವಾಂಸ ಮೌಲಾನಾ ಲುತ್ ಫುಲ್ಲಾ ಅವರ ಏಕಮಾತ್ರ ಪುತ್ರಿ ಮತ್ತು ಪ್ರಖ್ಯಾತ ಸ್ವಾತಂತ್ರ ಹೋರಾಟಗಾರ, ಹಾಗೂ ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮೌಲಾನಾ ಮುಹಮ್ಮದ್ ಅಲಿ ಜೋಹರ್ ಅವರ ನಿಕಟ ಬಂಧುವಾಗಿದ್ದರು. ಪ್ರಸ್ತುತ ‘ನಿಕಾಹ್ ನಾಮಾ’ದಲ್ಲಿ ಹಲವು ಮಹತ್ವದ ಮಾಹಿತಿಗಳಿವೆ. ಅದರಲ್ಲಿ ನಮೂದಿಸಲಾಗಿರುವ, ವಿವಾಹಕ್ಕೆ ಸಂಬಂಧಿಸಿದ ಕೆಲವು ಷರತ್ತುಗಳು ಬಹಳ ಗಮನಾರ್ಹವಾಗಿವೆ:

1. ವರನು ವಧುವಿಗೆ ನೀಡಬೇಕಾದ ಮಹರ್ (ವಿವಾಹ ಶುಲ್ಕ ಅಥವಾ ವಧುದಕ್ಷಿಣೆ) - ರೂ.10,000. ಅದರಲ್ಲಿ ಶೇ.50 ಮೊತ್ತವನ್ನು ತಕ್ಷಣ, ಅಂದರೆ ನಿಕಾಹ್ (ವಿವಾಹ) ಜರುಗುತ್ತಿರುವಾಗಲೇ ಪಾವತಿಸಬೇಕು. ಉಳಿದ ಶೇ.50 ಮೊತ್ತವು ಮುಂದೆ ವಧುವು ಬಯಸಿದಾಗ ವರನು ಆಕೆಗೆ ಪಾವತಿಸಬೇಕಾದ ಕಡ್ಡಾಯ ಋಣವಾಗಿರುವುದು. 

2.ವರನು ಖರ್ಚು ವೆಚ್ಚಕ್ಕಾಗಿ ವಧುವಿಗೆ ಪಾವತಿಸಬೇಕಾದ ಮಾಸಿಕ ಜೀವನಾಂಶದ ಮೊತ್ತ ರೂ.10.

3.ವರನು ವಧುವಿಗೆ ಸೂಕ್ತ ವಸತಿ ಸೌಕರ್ಯವನ್ನು ಒದಗಿಸಬೇಕು ಮತ್ತು ಅದು ಆಕೆಯ ಮಾಲಕತ್ವದಲ್ಲಿ ಇರಬೇಕು.

4.ವಧುವಿನ ಹೆತ್ತವರು ಅಥವಾ ರಕ್ಷಕರ ಸಮ್ಮತಿ ಇಲ್ಲದೆ ವರನು ವಧುವನ್ನು ಯಾವುದೇ ದೀರ್ಘ ಪ್ರಯಾಣಕ್ಕೆ ಕೊಡೊಯ್ಯಬಾರದು.20ನೇ ಶತಮಾನದಲ್ಲಿ ಬಹುತೇಕ 1930ರ ತನಕ ಚಿನ್ನದ ಬೆಲೆ ಸ್ಥಿರವಾಗಿ 10 ಗ್ರಾಂಗೆ ಸುಮಾರು 18ರೂ. (ಒಂದು ಗ್ರಾಂಗೆ 180 ಪೈಸೆ)ಯ ಆಸುಪಾಸಿನಲ್ಲಿತ್ತು. ಆ ಪ್ರಕಾರ ಅಂದಿನ 10ರೂ. ಎಂಬುದು 5.5 ಗ್ರಾಂ ಚಿನ್ನದ ಬೆಲೆಯಾಗಿತ್ತು. ಇಂದು ಚಿನ್ನದ ಬೆಲೆ ಒಂದು ಗ್ರಾಂಗೆ ಸುಮಾರು 4 ಸಾವಿರ ರೂ.ನಷ್ಟಿದೆ. ಈ ದೃಷ್ಟಿಯಿಂದ ‘ನಿಕಾಹ್ ನಾಮಾ’ದಲ್ಲಿ ಉಲ್ಲೇಖಿಸಲಾಗಿರುವ ಕರಾರು ಪ್ರಕಾರ ಮೌಲಾನಾರವರು ತಮ್ಮ ಪತ್ನಿಗೆ ನೀಡಬೇಕಾಗಿದ್ದ 10ರೂ. ಮಾಸಿಕ ಜೀವನಾಂಶದ ಆಧುನಿಕ ಮೌಲ್ಯ ಸುಮಾರು 22 ಸಾವಿರ ರೂ.ಗಳಷ್ಟಾಗುತ್ತದೆ. ಹಾಗೆಯೇ ಪ್ರಸ್ತುತ ವಿವಾಹದಲ್ಲಿ ವರನು ವಧುವಿಗೆ ನೀಡಬೇಕೆಂದು ನಿಗದಿಪಡಿಸಲಾಗಿರುವ ‘ಮಹರ್’ನ ಮೊತ್ತದ ಆಧುನಿಕ ಮೌಲ್ಯ (ಅಂದು ಮತ್ತು ಇಂದಿನ ಚಿನ್ನದ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ) 2.20 ಕೋಟಿ ರೂಪಾಯಿಗಳಷ್ಟಾಗುತ್ತದೆ! ಜೊತೆಗೆ, ಪತ್ನಿಗೆ ಆಕೆಯ ಮಾಲಕತ್ವದಲ್ಲೇ ಇರುವಂತಹ ಸೂಕ್ತ ಮನೆಯನ್ನು ಒದಗಿಸಬೇಕೆಂಬ ನಿರ್ಬಂಧ ಬೇರೆ. 21ನೇ ಶತಮಾನದಲ್ಲೂ 10 ಸಾವಿರ ರೂ. ಮಹರ್ ನೀಡುತ್ತಿರುವವರು ಅದನ್ನು, 1911ರಲ್ಲಿ ಮೌಲಾನಾ ನೀಡಿದ ಮಹರ್‌ಗೆ ಹೋಲಿಸಿ, ತಾವು ನೀಡುತ್ತಿರುವ ಮಹರ್ ಅದೆಷ್ಟು ಜುಜುಬಿ ಎಂದು ಒಂದಷ್ಟು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಾಗೆಯೇ, ತಮ್ಮ ಸಾಮರ್ಥ್ಯಕ್ಕಿಂತ ತೀರಾ ಕಡಿಮೆ, ಜುಜುಬಿ ಮಹರ್ ಕೊಟ್ಟು, ಸಾಲದ್ದಕ್ಕೆ ಇಸ್ಲಾಮ್ ಧರ್ಮದ ಆದೇಶಗಳನ್ನು ಉಲ್ಲಂಘಿಸಿ ವಧುವಿನ ಕಡೆಯವರಿಂದಲೇ ಚಿನ್ನ, ಕಾರು, ಸೊತ್ತು, ನಗದು ಇತ್ಯಾದಿ ವಿವಿಧ ರೂಪಗಳಲ್ಲಿ ಲಕ್ಷಗಟ್ಟಲೆ ವರದಕ್ಷಿಣೆ ಪಡೆಯುವ ವರಮಹಾಶಯರೆಲ್ಲ ನಾಚಿ ತಲೆ ತಗ್ಗಿಸಬೇಕಾದ ಸನ್ನಿವೇಶ ಇದು. ಅಂತಹ ಪ್ರತಿಯೊಬ್ಬ ಲಜ್ಜೆಗೇಡಿ ವರಮಹಾಶಯರು, ತಾವು ಪಡೆದ ಅಕ್ರಮ ಸಂಪತ್ತನ್ನು ಪರಿಹಾರ ಸಮೇತ ತಮ್ಮ ಪತ್ನಿ ಮತ್ತು ಆಕೆಯ ಮನೆಯವರಿಗೆ ಮರಳಿಸಲು ಇದು ಪ್ರೇರಕವಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)