varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಓದುಗರು ಬೆಂಬಲಿಸಿದಾಗ ಮಾಧ್ಯಮ ಜನಪರವಾಗುತ್ತದೆ: ಮಧು ಟ್ರೆಹಾನ್

ವಾರ್ತಾ ಭಾರತಿ : 31 Dec, 2019
► ಸಂದರ್ಶನ : ಹುಸ್ನ ಖದೀಜ

ಮಧು ಟ್ರೆಹಾನ್

1975ರಲ್ಲಿ ತನ್ನ ತಂದೆ ಪ್ರಾರಂಭಿಸಿದ ‘ಇಂಡಿಯಾ ಟುಡೇ’ ಮ್ಯಾಗಝಿನ್‌ನ ಸ್ಥಾಪಕ ಸಂಪಾದಕಿ ಮಧು ಟ್ರೆಹಾನ್ ದೇಶದ ಅತ್ಯಂತ ಖ್ಯಾತ ಪತ್ರಕರ್ತರಲ್ಲೊಬ್ಬರು. ಹಾಗೆ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳ ದಾಖಲೆ ಬರೆದ ದಿಟ್ಟ ಪತ್ರಕರ್ತೆ. 80ರ ದಶಕದಲ್ಲೇ ನ್ಯೂಸ್ ಟ್ರ್ಯಾಕ್ ಎಂಬ ಭಾರತದ ಪ್ರಪ್ರಥಮ ವೀಡಿಯೊ ನ್ಯೂಸ್ ಮ್ಯಾಗಝಿನ್ ಪ್ರಾರಂಭಿಸಿ ಹೊಸ ಪೀಳಿಗೆಗೆ ತನಿಖಾ ಪತ್ರಿಕೋದ್ಯಮದ ದಾರಿ ತೋರಿಸಿದವರು. ದೇಶ ವಿದೇಶಗಳ ಪತ್ರಿಕೆಗಳು, ನಿಯತಕಾಲಿಕಗಳಿಗೆ ಬರೆಯುವ ಮಧು 2012ರಲ್ಲಿ ಇತರ ಮೂವರು ಸಹೋದ್ಯೋಗಿ ಮಿತ್ರರ ಜೊತೆಗೂಡಿ newslaundry.com ಎಂಬ ವಿಭಿನ್ನ ವೆಬ್‌ಸೈಟ್ ಒಂದನ್ನು ಪ್ರಾರಂಭಿಸಿ ಭಾರತೀಯ ಮಾಧ್ಯಮಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅವರು ‘ವಾರ್ತಾಭಾರತಿ’ ಜೊತೆ ಸದ್ಯದ ಭಾರತೀಯ ಮಾಧ್ಯಮಗಳ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ.

►ನೀವು 1975ರಲ್ಲೇ ಇಂಡಿಯಾ ಟುಡೇ ಯಂತಹ ಆಂಗ್ಲ ಮ್ಯಾಗಝಿನ್ ಪ್ರಾರಂಭಿಸಿ ಅದರಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿ ಯಶಸ್ಸು ಪಡೆದವರು. ಈಗ ನಮ್ಮ ದೇಶದ ಮಾಧ್ಯಮಗಳ ಹುಳುಕು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪ್ರಕಾರ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಭಾರತೀಯ ಮಾಧ್ಯಮಗಳಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇನು?

 -90ರ ದಶಕದಲ್ಲಿ ಉದಾರೀಕರಣ ಬಂದ ಮೇಲೆ ಖಾಸಗಿ ಟಿವಿ ಚಾನಲ್‌ಗಳ ಪ್ರಸಾರಕ್ಕೆ ಮುಕ್ತ ಅವಕಾಶ ಸಿಕ್ಕಿದ್ದು ಬಹುದೊಡ್ಡ ಬದಲಾವಣೆ. ಅದಕ್ಕಿಂತ ಮೊದಲು ಕೇವಲ ದೂರದರ್ಶನ ಮಾತ್ರ ಇತ್ತು. 90ರ ದಶಕದ ಬಳಿಕ ಭಾರತೀಯ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಕಾಲವಾಗಿತ್ತು. ಆಗ ಬಹಳ ಒಳ್ಳೆಯ ವರದಿಗಳು ಬಂದವು, ವಸ್ತುನಿಷ್ಠ ಪತ್ರಿಕೋದ್ಯಮ ನೋಡಲು ಸಿಕ್ಕಿತ್ತು. ಆದರೆ ಕಳೆದೊಂದು ದಶಕ ಭಾರತೀಯ ಮಾಧ್ಯಮಗಳ ಪಾಲಿಗೆ ಬಹಳ ಸಂಕಷ್ಟದ ಸಮಯ. ಮಾಧ್ಯಮ ಸಂಸ್ಥೆಗಳು ಹಾಗೂ ಟಿವಿ ಚಾನಲ್‌ಗಳು ಯಾವುದೇ ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ರಾಜಕೀಯ ನಿಲುವು ಪ್ರದರ್ಶಿಸುತ್ತಿರುವುದರಿಂದ ಈ ಹಿಂದೆಂದೂ ಕಂಡು ಕೇಳರಿಯದಂತೆ ಭಾರತೀಯ ಪತ್ರಿಕೋದ್ಯಮ ಧ್ರುವೀಕರಣಗೊಂಡಿದೆ.

 ►  ಈಗಿನ ಸ್ಥಿತಿ ನೋಡಿದರೆ ಮುಂದಿನ ಒಂದೆರಡು ದಶಕಗಳಲ್ಲಿ ಭಾರತೀಯ ಮಾಧ್ಯಮಗಳು ಎಲ್ಲಿಗೆ ತಲುಪಬಹುದು? ಅದು ಒಟ್ಟಾರೆ ದೇಶದ ಪಾಲಿಗೆ ಯಾವ ರೀತಿಯ ಪರಿಣಾಮ   ಬೀರಬಹುದು?

 -ನಾನು ಆಶಾವಾದಿ. ಹಾಗಾಗಿ ಜನರು ಈ ಮಾಧ್ಯಮಗಳ ಬೊಬ್ಬೆ ಹಾಗೂ ಒಣ ಭಾಷಣಗಳಿಂದ ರೋಸಿ ಹೋಗಲಿದ್ದಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ. ಈಗಿರುವ ಪರಿಸ್ಥಿತಿ ಒಂದು ಬಾರಿ ಪೂರ್ಣಗೊಂಡು ಮತ್ತೆ ಪುನಃ ಮೊದಲಿನಂತೆ ಉತ್ತಮ, ಜನಪರ ಪತ್ರಿಕೋದ್ಯಮ ಕಾಣಲು ಸಿಗಲಿದೆ ಎಂದೇ ಭಾವಿಸಿದ್ದೇನೆ. ಜನರು ಜಾಣರಾಗುತ್ತಾರೆ, ಸುಮ್ಮನೆ ಗುಂಪಿನ ಹಿಂದೆ ಹೋಗದೆ ಸರಿಯಾದ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನ್ನ ನಿರೀಕ್ಷೆ.

►ಯೂಟ್ಯೂಬ್ ಹಾಗೂ ಇತರ ಆನ್‌ಲೈನ್ ಮಾಧ್ಯಮ ಗಳು ಈಗ ಪ್ರಾಬಲ್ಯ ಮೆರೆಯುತ್ತಿರುವ ಹಿಂದಿ ಮತ್ತು ಇಂಗ್ಲೀಷ್ ಟಿವಿ ಚಾನಲ್‌ಗಳನ್ನು ಹಿಂದಿಕ್ಕುವ ಸಾಧ್ಯತೆ ಇದೆಯೇ?

-ಯಾವ ಮಾಧ್ಯಮಗಳೂ ಯಾವುದನ್ನೂ ಹಿಂದಿಕ್ಕುವು ದಿಲ್ಲ. ಮುದ್ರಣ, ಆನ್‌ಲೈನ್, ಟಿವಿ ಎಲ್ಲ ಮಾಧ್ಯಮ ಗಳೂ ಹೀಗೆ ಮುಂದುವರಿಯುತ್ತವೆ.

►ನೀವು ಒಂದು ಓದುಗ ಬೆಂಬಲಿತ ವೆಬ್‌ಸೈಟ್  newslaundry.com ಪ್ರಾರಂಭಿಸಿದಿರಿ. ಆಗಾಗ ನಿಮ್ಮ ವೆಬ್‌ಸೈಟ್‌ನಲ್ಲಿ ಓದುಗರು ಸುದ್ದಿಗೆ ಹಣ ಪಾವತಿಸಬೇಕು ಎಂಬ ಮನವಿ ಬರುತ್ತಿರುತ್ತದೆ. ನಿಮಗೆ ಓದುಗರಿಂದ ಸಿಕ್ಕಿರುವ ಪ್ರತಿಕ್ರಿಯೆ ಹೇಗಿದೆ? ಇಂತಹ ಓದುಗ ಬೆಂಬಲಿತ ಪತ್ರಿಕೋದ್ಯಮಕ್ಕೆ ಭಾರತದಲ್ಲಿ ಭವಿಷ್ಯವಿದೆಯೇ?

  -ನಮಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನನ್ನ ಪ್ರಕಾರ ಓದುಗ ಬೆಂಬಲಿತ ಮಾಧ್ಯಮಗಳೇ ನಮ್ಮ ಭವಿಷ್ಯ. ನೀವು ಕೊಡುವ ವಿಷಯ ಅಥವಾ ವಸ್ತುವಿನಲ್ಲಿ ಜನರ ಭಾಗೀದಾರಿಕೆ ಇದೆ ಎಂದಾದರೆ ನಿಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ಅದು ಇನ್ನಷ್ಟು ಜನಪರವಾಗುತ್ತದೆ.

►ಈಗ ಪ್ರಬಲ ಟಿವಿ ಚಾನಲ್‌ಗಳು ಹಾಗೂ ಪತ್ರಿಕೆಗಳು ಆಳುವವರ ವೈಫಲ್ಯ ಎತ್ತಿ ತೋರಿಸಲು ಹಿಂಜರಿಯುತ್ತಿವೆ. ಈ ಸಂದರ್ಭದಲ್ಲಿ ಕೆಲವು ಆನ್‌ಲೈನ್ ಮಾಧ್ಯಮಗಳು ಮಾತ್ರ ಮಾಡುತ್ತಿರುವ ಮಹತ್ವದ ವರದಿಗಳು ಜನರ ಮೇಲೆ ಪರಿಣಾಮ ಬೀರುತ್ತಿವೆ ಎಂದು ನಿಮಗೆ ಅನಿಸತ್ತದೆಯೇ?

-ಕೆಲವು ಆನ್‌ಲೈನ್ ವರದಿಗಳು ಬಹಳ ದೊಡ್ಡ ಪರಿಣಾಮ ಬೀರಿವೆ. ಈ ಆನ್‌ಲೈನ್ ವರದಿಗಳು ಜಾಗತಿಕವಾಗಿ ಜನರನ್ನು ತಲುಪುತ್ತಿವೆ. ಆದರೆ ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ರಾಜಕಾರಣಿಗಳೇ ಇಲ್ಲ. ಈಗ ಮಾಡಿದ ತಪ್ಪನ್ನು ಹಿಂಜರಿಕೆ ಇಲ್ಲದೆ ಸಮರ್ಥಿಸಿಕೊಳ್ಳುವ ಕಾಲ. ಈ ಹಿಂದಿನಂತೆ ಪರೀಕ್ಷೆಗಳ ವರದಿಗಳನ್ನು ನೋಡಿ ಹೊಣೆ ಹೊತ್ತು ರಾಜೀನಾಮೆ ನೀಡುವ ಕಾಲ ಈಗಿಲ್ಲ.

►ನೀವು ಜನಪರ ಪತ್ರಿಕೋದ್ಯಮ ಮಾಡಿ, ಸರಕಾರಗಳ ವಿರುದ್ಧ ಬರೆದಿದ್ದಕ್ಕೆ ತೆತ್ತ ಬೆಲೆ ಏನು?

 -ಅದೆಷ್ಟೋ ಜನರು ಇದ್ದದ್ದನ್ನು ಇದ್ದ ಹಾಗೆ ಬರೆದಿದ್ದಕ್ಕೆ ಕೆಲಸ ಕಳಕೊಂಡಿದ್ದಾರೆ. ಆದರೆ ಇದರಲ್ಲಿ ನಮ್ಮ ಗಮನಕ್ಕೆ ಬರುವುದು ದೊಡ್ಡ ಹುದ್ದೆಯಲ್ಲಿರುವ ಪ್ರಮುಖ ಪತ್ರಕರ್ತರ ಹೆಸರುಗಳು ಮಾತ್ರ. ಆದರೆ ಅದೆಷ್ಟೋ ಜನರು ಸತ್ಯ ಬರೆದಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಈ ಹಿಂದಿನ ಸರಕಾರಗಳೂ ಸೇರಿದಂತೆ ವಸ್ತುನಿಷ್ಠ ಪತ್ರಕರ್ತರ ವಿರುದ್ಧ ಎಲ್ಲ ಸರಕಾರಗಳೂ ಸೇಡಿನ ಭಾವನೆ ತೋರಿಸುತ್ತವೆ.

 ►ಭಾರತೀಯ ಮಾಧ್ಯಮಗಳಲ್ಲಿ ನಮ್ಮ ಸಮಾಜದ ಎಲ್ಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವೇ ಸಿಗುತ್ತಿಲ್ಲ ಎಂಬ ದೂರಿದೆ. ಇದನ್ನು ಸರಿಪಡಿಸುವುದು ಹೇಗೆ?

 -ಎಲ್ಲ ವರ್ಗಗಳ ಪತ್ರಕರ್ತರನ್ನು ಮಾಧ್ಯಮಗಳು ನೇಮಿಸಿಕೊಳ್ಳುವುದೇ ಪರಿಹಾರ. ಈಗ ನಮ್ಮ ಸುದ್ದಿಮನೆಗಳು ಬಹಳ ಬದಲಾಗಿವೆ. ಆದರೂ ಇನ್ನಷ್ಟು ಬದಲಾವಣೆ ಅಗತ್ಯವಿದೆ.

►ಮಾಧ್ಯಮಗಳೇ ಸುಳ್ಳು ಹೇಳುವುದನ್ನು ನೋಡಿ ಓದುಗರು, ವೀಕ್ಷಕರು ಏನು ಮಾಡಬೇಕು? ಅವರಿಗಿರುವ ಆಯ್ಕೆಗಳೇನು?

 -ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಬಹಳ ಉಪಯುಕ್ತ. ಅದನ್ನು ಬಹಳಷ್ಟು ಮಂದಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ ಕೂಡ.  

►2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಮಾಧ್ಯಮಗಳು ನಿಷ್ಪಕ್ಷವಾಗಿ ವರ್ತಿಸಿವೆಯೇ?

 -ಖಂಡಿತ ಇಲ್ಲ. ಯಾವುದೇ ಹಿಂಜರಿಕೆ ಇಲ್ಲದೆ ಅಪಪ್ರಚಾರ ಹಾಗೂ ಸುಳ್ಳು ಮಾಹಿತಿಗಳನ್ನು ಹರಡಲಾಗಿತ್ತು.

► ‘ವಾರ್ತಾಭಾರತಿ’ ಒಂದು ಓದುಗ ಬೆಂಬಲಿತ, ಜನಪರ ದಿನಪತ್ರಿಕೆ. ಅದರ ಯುವತಂಡಕ್ಕೆ ನಿಮ್ಮ ಸಂದೇಶವೇನು?

 -ಜನಪರ ಪತ್ರಿಕೋದ್ಯಮ ನಡೆಸುತ್ತಿರುವ ನಿಮ್ಮ ತಂಡಕ್ಕೆ ನನ್ನ ಅಭಿನಂದನೆಗಳು. ಬದಲಾವಣೆಯ ಹೊಸ ಗಾಳಿ ಇಂತಹ ಮಾಧ್ಯಮಗಳಿಂದಲೇ ಬರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)