ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ
ಕನ್ನಡ, ಸಂಸ್ಕೃತ, ಶಾಸ್ತ್ರೀಯತೆ ಮತ್ತು ಶೆಲ್ಡನ್ ಪೊಲಾಕ್

ಶೆಲ್ಡನ್ ಪೊಲಾಕ್
ಸಂಸ್ಕೃತ ಭಾಷೆ ಬೆಂಗಾಳಿ ಭಾಷೆಯೊಂದಿಗೆ ಹೆಚ್ಚು ಗೆಳೆತನ ಹೊಂದಿದೆ, ಹಾಗೆಯೇ ಮಲೆಯಾಳಂ ಜೊತೆಗೂ ಕೂಡ. ಕೆಲವು ಭಾಷೆಗಳ ಜೊತೆ ಕಡಿಮೆ ಗೆಳೆತನ ಹೊಂದಿದೆ. ಇದನ್ನು ಗೆಳೆತನದ ಸಂಬಂಧವಾಗಿ ನೋಡಬೇಕೆ ಹೊರತು ಪರಸ್ಪರ ದ್ವೇಷದ ಸಂಬಂಧವಾಗಿ ಅಲ್ಲ.
ವಿಕ್ರಮ ವಿಸಾಜಿ
ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಸ್ನಾತಕೊಕಲಬರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಅದು ಜನವರಿಯ ಚುರುಗುಟ್ಟುವ ಚಳಿ. ಜೈಪುರ ಸಾಹಿತ್ಯೋತ್ಸವದ ಇಂಥ ಚಳಿಯಲ್ಲಿ ಶೆಲ್ಡನ್ ಪೊಲಾಕ್ ತಮ್ಮ ಕಾಫಿ ಪ್ಲಾಸ್ಕ್ ಹಿಡಿದುಕೊಂಡು ನಿಂತಿದ್ದರು. ತಮ್ಮ ಒಡನಾಡಿಗಳ ಜೊತೆ ಮಾತಾಡುತ್ತ, ನಡುನಡುವೆ ಕಾಫಿ ಗುಟುಕರಿಸುತ್ತ ಹರಟುತ್ತಿದ್ದರು. ಬಹುಶ: ತಮಗೆ ಎದುರಾದ ಹಿಂದಿ ಪ್ರಾಧ್ಯಾಪಕರನ್ನು ಕಂಡು ಓ ರಸಿಕಾ ಕೈಸೆ ಹೈಂ ಆಪ್ ಎಂದು ಕೈ ಕುಲುಕಿ ರಸ ಎಲ್ಲಿ ಅಂತ ಕಣ್ಣು ಮಿಟುಕಿಸಿದರು. ದಟ್ಟ ಗಡ್ಡ, ಕೆದರಿದ ಕೂದಲು, ದೊಗಳೆ ಕೋಟು, ಬಗಲ ಚೀಲ ಜೊತೆಗೆ ದೊಡ್ಡ ನಗು ಅವರನ್ನು ಥೇಟ್ ಕಿಂದರಜೋಗಿಯಂತೆ ಮಾಡಿತ್ತು. ಅಷ್ಟರಲ್ಲಿ ಗಿರೀಶ್ ಕಾರ್ನಾಡ್ ಬಂದು ಹಾಯ್ ಶೆಲ್ಲಿ ಎಂದು ತಬ್ಬಿಕೊಂಡರು. ಪೊಲಾಕ್ ಅಂತ ಕರೆಯುವುದು ನನಗೆ ಕಷ್ಟ ಅದಕ್ಕೆ ಶೆಲ್ಲಿ ಎನ್ನುವೆ ಅಂತ ಪಕ್ಕದಲ್ಲಿದ್ದವರಿಗೆ ಹೇಳುತ್ತಿದ್ದರು. ನಾನು ಮತ್ತು ಗೆಳೆಯ ಮಹೇಂದ್ರ ಇಬ್ಬರೂ ಶೆಲ್ಡನ್ ಪೊಲಾಕ್‌ರನ್ನು ಮಾತಾಡಿಸಬೇಕೆಂದು ಹೋದವರು ಆ ಗದ್ದಲದಲ್ಲಿ ಮಾತಾಡಲಾಗದೆ ವಾಪಾಸು ಬಂದು ಕುಳಿತೆವು. ಅಷ್ಟರಲ್ಲಿ ಶೆಲ್ಡನ್ ಪೊಲಾಕ್, ಆರ್ಷಿಯಾ ಸತ್ತಾರ್, ಗಿರೀಶ್ ಕಾರ್ನಾಡರ ಗೋಷ್ಠಿ ಶುರುವಿಟ್ಟಿತು. ಅದು ಮೂರ್ತಿ ಕ್ಲಾಸಿಕಲ್ ಲೈಬ್ರರಿಯ ಪ್ರಕಟಣೆಗಳ ಕುರಿತಾಗಿತ್ತು. ಭಾರತದ ಪ್ರಾಚೀನ ಪಠ್ಯಗಳನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದೊಂದಿಗೆ ಕೂಡಿಕೊಂಡು ಪ್ರಕಟಿಸುವ ಯೋಜನೆ. ಈ ಮಾಲಿಕೆಯಲ್ಲಿ ಬಂದ ಐದು ಕೃತಿಗಳು ಅಲ್ಲಿದ್ದವು. ಒಂದು ಗಂಟೆಯ ಗೋಷ್ಠಿಯಲ್ಲಿ ಶೆಲ್ಡನ್ ಪೊಲಾಕ್ ನಿರುಮ್ಮಳವಾಗಿ ಸಂಸ್ಕೃತದ ಕೆಲ ಶ್ಲೋಕಗಳನ್ನು ಉದ್ಧರಿಸುತ್ತ, ಕವಿರಾಜಮಾರ್ಗವನ್ನು ನೆನಪಿಸಿಕೊಂಡು, ಒಳನೋಟಗಳಿಂದ ಕೂಡಿದ ವಿಚಾರಗಳನ್ನು ಸಭೆಯ ಎದುರಿಗಿಟ್ಟರು. ಅವರ ನೆನಪಿನ ಶಕ್ತಿ, ಲವಲವಿಕೆಯ ಉತ್ತರಗಳಿಗೆ ಸಭೆ ಹಿತವಾಗಿ ಸ್ಪಂದಿಸುತಿತ್ತು. ಸಭೆ ಶೆಲ್ಡನ್ ಪೊಲಾಕ್‌ರತ್ತ ವಾಲುತ್ತಿರುವುದು ಹಾಗೂ ತನ್ನ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸುತ್ತಿರುವುದನ್ನು ಕಂಡ ಕಾರ್ನಾಡರು ಕೊನೆಯಲ್ಲೊಂದು ಇಕ್ಕಟ್ಟಿನ ಪ್ರಶ್ನೆ ಎಸೆದರು; ನಿಮ್ಮ ಒಟ್ಟು ಕಲ್ಪನೆ ಭಾರತದ ಒಂದು ವರ್ಗದ ಗತಕಾಲದ ಯೋಜನೆಗಳಿಗೆ ಪೂರಕವಾಗಿದೆಯಲ್ಲವೇ? ಗತವನ್ನು ವೈಭವೀಕರಿಸುವ ಕಲ್ಪನೆಗೆ ನಿಮ್ಮ ಯೋಜನೆ ಹತ್ತಿರವಾಗಿರುವಂತಿದೆ? ಎಂದು ಹುಬ್ಬೇರಿಸಿ ಪೊಲಾಕ್‌ರ ಕಡೆ ನೋಡಿದರು. ವೆಲ್ ಎಂದು ನಿಟ್ಟುಸಿರು ಬಿಟ್ಟ ಶೆಲ್ಡನ್ ಪೊಲಾಕ್ ನಾನು ಮತ್ತು ನನ್ನ ಸಂಗಾತಿಗಳು ಹುಡುಕುತ್ತಿರುವುದು ಒಂದು ಬೌದ್ಧಿಕ ಚಿಂತನೆಯ ಚರಿತ್ರೆ. ನಾನು ಬರೀ ಸಂಸ್ಕೃತದ ಬಗೆಗೆ ಮಾತ್ರ ಆಸಕ್ತನಾಗಿಲ್ಲ. ಪ್ರಾಕೃತ, ಕನ್ನಡ, ತಮಿಳು, ಹಿಂದಿ, ಉರ್ದು ಹೀಗೆ ಯಾವ ಭಾಷೆಯ ಶಾಸ್ತ್ರೀಯ ಕೃತಿಯಾದರೂ ಸರಿ ಅದು ನಮ್ಮ ಪ್ರಕಟಣೆಯಲ್ಲಿ ಸೇರುತ್ತದೆ. ನೋಡಿ ತೇರಿಗಾಥಾ ಪ್ರಕಟಿಸಿದ್ದೇವೆ. ಮಹಿಳೆಯರೆ ಬರೆದ ಪದ್ಯಗಳವು. ಅವು ಎಂಥ ಪದ್ಯಗಳೆಂಬುದು ನಿಮಗೆ ಗೊತ್ತೇ ಇದೆ. ಪರಸ್ಪರ ವಾಗ್ವಾದಗಳು, ತಾತ್ವಿಕ ಜಗಳಗಳು ಪ್ರಾಚೀನ ಪಠ್ಯಗಳಲ್ಲಿ ಸೇರಿಕೊಂಡಿವೆ. ಭಾರತದ ಬೌದ್ಧಿಕ ಚರಿತ್ರೆ ಮುಖ್ಯವಾದದ್ದು. ಇಲ್ಲಿ ಒಮ್ಮುಖತೆ ಇಲ್ಲ. ಯಾರಾದರೂ ಇದನ್ನು ವೈಭವೀಕರಿಸ ಹೊರಟರೆ ಪಕ್ಕದ ಪಠ್ಯವೊಂದು ಈ ವೈಭವೀಕರಣದ ನಶ್ವರತೆಯನ್ನು ಸೂಚಿಸುತ್ತಿರುತ್ತದೆ ಎಂದು ಹುಬ್ಬೇರಿಸಿ ತಿರುಗಿ ಕಾರ್ನಾಡರತ್ತ ನೋಡಿದರು. ಸಭೆೆ ಮತ್ತೆ ದೊಡ್ಡ ಚಪ್ಪಾಳೆಯೊಂದಿಗೆ ಅವರ ಉತ್ತರವನ್ನು ಸ್ವಾಗತಿಸಿತ್ತು.
ಶೆಲ್ಡನ್ ಪೊಲಾಕ್ ಗೋಷ್ಠಿ ಮುಗಿಸಿ ಕೆಳಗೆ ಬಂದಾಗ ಎದುರಿಗೆ ಎಸ್ತರ್ ಅನಂತಮೂರ್ತಿ ನಿಂತಿದ್ದರು. ಅವರನ್ನು ಸಂತೈಸಿ ಅನಂತಮೂರ್ತಿಯವರ ಸಾವಿಗೆ ತಮ್ಮ ದುಃಖ ಸೂಚಿಸಿದರು. ಅವರು ಒಬ್ಬರೇ ಪುಸ್ತಕದಂಗಡಿಗೆ ಹೊರಡುತ್ತಿರುವಾಗ ನಾನು ಮತ್ತು ಮಹೇಂದ್ರ ಹಿಂಬಾಲಿಸಿ ಅವರ ಕ್ರೈಸಿಸ್ ಇನ್ ದಿ ಕ್ಲಾಸಿಕ್ಸ್ ಲೇಖನ ಓದಿರುವುದಾಗಿಯೂ ಅದು ಮುಖ್ಯ ಒಳನೋಟಗಳಿಂದ ಕೂಡಿದೆ ಎಂದೆವು. ನಮ್ಮ ಮೆಚ್ಚುಗೆಯಲ್ಲಿ ಅವರನ್ನು ಮಾತಿಗೆಳೆಯುವ ಉಮೇದೂ ಇತ್ತು. ಡಿ.ಆರ್.ನಾಗರಾಜರಿಂದ ಹಿಡಿದು ಪೃಥ್ವಿದತ್ತ ಚಂದ್ರಶೋಭಿವರೆಗೆ ಅವರಿಗೆ ಗೊತ್ತಿರುವ ಎಲ್ಲರ ಹೆಸರು ಹೇಳಿ ಒಂದು ಆತ್ಮೀಯತೆ ಕುದುರುವುದೆ ಅಂತ ಕಣ್ಣುಬಿಟ್ಟು ನಿಂತೆವು. ಆದರೆ ಆಸಾಮಿ ಜಪ್ಪೆನ್ನಲಿಲ್ಲ. ಕಾಫಿಪ್ಲಾಸ್ಕಿನ ಮೇಲೆಯೇ ಅವರ ಆಸಕ್ತಿ ಹೆಚ್ಚಿದ್ದಂತೆ ಕಾಣುತಿತ್ತು. ಒಮ್ಮೆ ನೇರವಾಗಿ ಕೇಳಿಯೇ ಬಿಡೋಣವೆಂದು ಸರ್ ನಿಮಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಾಗಿದೆ? ನಿಮ್ಮ ಕೂಡ ಒಂದು ಚರ್ಚೆ ಸಾಧ್ಯವೇ? ಎಂದೆವು. ಓಹೊ ಅದಕ್ಕೇನಂತೆ ಬನ್ನಿ ಅಂತ ಪತ್ರಕರ್ತರ ಗ್ಯಾಲರಿಗೆ ಕರೆದುಕೊಂಡು ಹೋದರು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ನಮ್ಮ ನಡೆ ನಮಗೇ ನಾಚಿಕೆ ತರಿಸಿತ್ತು. ನಡುದಾರಿಯಲ್ಲಿ ಕನ್ನಡ, ಕರ್ನಾಟಕ, ಅಲ್ಲಿನ ಹೊಸ ಯೋಜನೆಗಳು ಇತ್ಯಾದಿಗಳ ಬಗ್ಗೆ ಚುಟುಕಾಗಿ ವಿಚಾರಿಸಿದರು. ಆ ಜನಜಂಗುಳಿಯಲ್ಲಿ ಅವರು ಚಿಕ್ಕ ಹುಡುಗನಂತೆ ದಾರಿ ಮಾಡಿಕೊಳ್ಳುತ್ತ ಪತ್ರಕರ್ತರ ಗ್ಯಾಲರಿಗೆ ಕರೆದುಕೊಂಡು ಬಂದರು.
ಭಾರತೀಯ ಕ್ಲಾಸಿಕಲ್ ಪಠ್ಯಗಳ ಕುರಿತು ಶೆಲ್ಡನ್ ಪೊಲಾಕ್‌ರಿಗಿರುವ ಪ್ರೀತಿ, ಅಧ್ಯಯನ ಎಲ್ಲರಿಗೂ ಗೊತ್ತಿರುವಂಥದ್ದೆ. ಈ ಕುರಿತು ಅವರ ಅಭಿಪ್ರಾಯ ಕೇಳಬಯಸಿದೆ. ಭಾರತೀಯ ಕಾವ್ಯಮೀಮಾಂಸೆ, ಭರತನ ನಾಟ್ಯಶಾಸ್ತ್ರ ಇವುಗಳ ಕುರಿತು ನೀವು ನಿಮ್ಮ ಬರಹಗಳಲ್ಲಿ ಸೂಕ್ಷ್ಮ ಟಿಪ್ಪಣಿಗಳನ್ನು ಮಂಡಿಸಿರುವಿರಿ. ಈಗ ಭಾರತದ ಹಲವು ಭಾಷೆಗಳು ತಮ್ಮದೇ ಕಾವ್ಯಮೀಮಾಂಸೆಯ ಹುಡುಕಾಟದಲ್ಲಿ ತೊಡಗಿವೆ? ಎಂದೆ.
ಹಾಗಾಗಿದ್ದು ಒಳ್ಳೆಯದೆ. ಇದು ಆಗಲೇಬೇಕಾದ ಕ್ರಮ. ನಾನು ಅಧ್ಯಯನ ಆರಂಭಿಸಿದಾಗ ಭಾರತೀಯ ಕಾವ್ಯಮೀಮಾಂಸೆಯ ಈ ರಸದ ಪರಿಕಲ್ಪನೆ ನನ್ನ ಆಸಕ್ತಿಯ ಕ್ಷೇತ್ರಗಳಲ್ಲೊಂದಾಗಿತ್ತು. ಹಲವರಂತೆ ನನಗೂ ಕೂಡ ಭಾರತೀಯ ಸೌಂದರ್ಯಶಾಸ್ತ್ರದ ಬೌದ್ಧಿಕ ಚರಿತ್ರೆಯನ್ನು ಮರುಕಟ್ಟುವ ಹಂಬಲವಿತ್ತು. ವಾಲ್ಮೀಕಿ ಎರಡು ಪಕ್ಷಿಗಳ ಹೃದಯವಿದ್ರಾವಕ ದುರಂತವನ್ನು ಮೊದಲ ಬಾರಿಗೆ ಅಭಿವ್ಯಕ್ತಿಸಿದ. ದು:ಖದ ಅಭಿವ್ಯಕ್ತಿಗಾಗಿ ಭಾಷೆಯನ್ನು ಉತ್ಕೃಷ್ಟ ಮಟ್ಟದಲ್ಲಿ ಹದಗೊಳಿಸಿದ. ಭಾಷೆಯ ಹೊಸ ಪರಿಕ್ರಮವೊಂದನ್ನು ಸ್ಥಾಪಿಸಿದ. ಮುಂದೆ ಶೋಕ ಕಾವ್ಯಾಭಿವ್ಯಕ್ತಿಯ ಒಂದು ಮೂಲ ಸ್ರೋತವಾಗಿ ಬಿಟ್ಟಿತು. ವಾಲ್ಮೀಕಿ ಒಂದು ರಸ ಸಾಧ್ಯತೆಯನ್ನಿಲ್ಲಿ ಕಾಣಿಸಿದ್ದಾನೆ. ಶೋಕದ ಅಭಿವ್ಯಕ್ತಿ ರೂಪಕ ಪ್ರತಿಮೆಗಳಲ್ಲಿ ಉದ್ದಕ್ಕೂ ಮೈಚಾಚಿಕೊಂಡು ನಿಂತಿದೆ. ನೋಡುಗನಲ್ಲಿ ರಸಗಳಿರುತ್ತವೆ. ಪಠ್ಯದ ರಸಗಳು ಅವನಲ್ಲಿಯ ರಸಗಳನ್ನು ಉದ್ದೀಪಿಸುತ್ತವೆ. ಪಾತ್ರದ ರಸ, ನಟನರಸವಾಗಿ ಕೊನೆಗೆ ನೋಡುಗನ ರಸವಾಗಿ ಪರಿವರ್ತಿತವಾಗುತ್ತದೆ. ಇದಕ್ಕಾಗಿ ಪಠ್ಯಗಳು ಮಾಡುವ ಸಾಹಸಗಳನ್ನು ಓದಿಯೇ ಅನುಭವಿಸಬೇಕು. ಚೈತನ್ಯ ಸಂಪ್ರದಾಯದಲ್ಲಿ ಕೃಷ್ಣಭಕ್ತಿ ರಸವಾಗಿ ಹರಿದಾಡುತ್ತಿರುತ್ತದೆ. ರಸದ ಕುರಿತಾದ ಶ್ರೇಷ್ಠ ಮಟ್ಟದ ಬೌದ್ಧಿಕ ಚರ್ಚೆಗಳನ್ನು ಜಗತ್ತಿಗೆ ಭಾರತ ಕೊಟ್ಟಿದೆ. ರಸದ ಪರಿಕಲ್ಪನೆಗಳಾಚೆಯ ಚರ್ಚೆಗೂ ನಾನು ಹೊರಳಿಕೊಂಡೆ. ಎಂದರು. ಮುಂದುವರಿದು ಪ್ರಾಚೀನ ಪಠ್ಯಗಳ ಕಾವ್ಯ ಭಾಷೆ ಅಲಂಕಾರ ವಕ್ರೋಕ್ತಿಗಳನ್ನು ಹೆಚ್ಚು ನಂಬಿದೆ. ಪ್ರೇಮದಲ್ಲಿ ಕಾವ್ಯ ಬೆಳದಿಂಗಳಾಗಿ, ಹಂಸೆಗಳಾಗಿ, ನದಿ, ಕಾಡು, ಮರ, ಹೂಗಳಾಗಿ ತೆರೆದುಕೊಳ್ಳುತ್ತದೆ. ಒಟ್ಟು ಲೆಕ್ಕ ಹಾಕಿದರೂ ಪ್ರೇಮದ ರೂಪಕಗಳನ್ನು ನಾಲ್ಕೈದು ಮೂಲ ರೂಪಕಗಳಿಗೆ ತಂದು ನಿಲ್ಲಿಸಬಹುದು. ಈ ನಾಲ್ಕೈದು ರೂಪಕಗಳಿಂದ ಹಲವಾರು ರೂಪಕಗಳು ಬೆಳೆದಿವೆ. ಶೃಂಗಾರವು ಒಂದು ದೈಹಿಕಕ್ರಿಯೆಯಾಗಿ, ಮಾನಸಿಕಕ್ರಿಯೆಯಾಗಿ ವಿಕಸಿತಗೊಳ್ಳುವ ರೀತಿಯನ್ನು ಗಮನಿಸಬೇಕು. ವರ್ಣನೆ ಭಾರತೀಯ ಕವಿಗಳಿಗೆ ಬಹುಪ್ರಿಯವಾದ ಸಂಗತಿ. ಎಂಬುದು ಅವರ ಮತವಾಗಿತ್ತು.
ಇನ್ನು ಭರತನ ಕುರಿತು ಹೇಳತೊಡಗಿದರು. ಭರತನ ನಾಟ್ಯಶಾಸ್ತ್ರ ಮಹತ್ವದ ಕೃತಿ. ಅವನು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ. ಜನ ಬಾವನಾತ್ಮಕವಾಗಿ ನಾಟಕಗಳಿಗೆ ಸ್ಪಂದಿಸುವಂತೆ ಮಾಡುವುದು ಹೇಗೆ? ಅವರು ದಿನನಿತ್ಯದ ಗೊಂದಲಗಳಲ್ಲಿ ಮುಳುಗಿರುತ್ತಾರೆ. ಇದನ್ನು ಬಿಡಿಸಿಕೊಂಡು ಅವರು ನಾಟಕದಲ್ಲಿ ತಲ್ಲೀನರಾಗುವಂತೆ ಮಾಡಬೇಕು. ಅಭಿನಯ, ಆಂಗಿಕ ಚಲನೆ, ಅಳು, ನಗು ಇವುಗಳ ನಟನೆ ಹೇಗೆ? ಪಾತ್ರದ ಭಾವ ಪ್ರೇಕ್ಷಕ ಭಾವವಾಗುವ ಬಗೆ ಹೇಗೆ? ಕಲೆಯ ಮೂಲಭೂತ ಪ್ರಶ್ನೆಗಳಿಗೆ ಬೌದ್ಧಿಕ ಉತ್ತರಗಳನ್ನಾತ ಅರಸುತ್ತಿದ್ದ. ಅವನದು ಶ್ರೇಷ್ಠ ದರ್ಜೆಯ ಸ್ಕಾಲರ್‌ಶಿಪ್.
ಶಾಸ್ತ್ರೀಯ ಪಠ್ಯಗಳ ಪ್ರಕಟಣೆಯ ಐಡಿಯಾ ಬಂದದ್ದು ಹೇಗೆ? ಮತ್ತು ಯಾಕೆ? ಅಂದೆ. ಒಟ್ಟಿನಲ್ಲಿ ನನಗೆ ಪ್ರಶ್ನೆ ಕೇಳುವ ಆತುರ. ಎರಡೂ ತುಟಿಗಳನ್ನು ಅದುಮಿ ಸಡಿಲಿಸಿ ಮಾತಿಗಿಳಿದರು ಶೆಲ್ಡನ್ ಪೊಲಾಕ್. ಈ ಮೊದಲು ಕ್ಲೇ ಸಂಸ್ಕೃತ ಲೈಬ್ರರಿಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದೆವು. ಆದರೆ ಅವು ಭಾರತೀಯರಿಗೆ ಸಿಗುವುದು ಕಷ್ಟ ಅಲ್ಲದೆ ದುಬಾರಿ ಬೆಲೆ ಕೂಡ. ನಡುವೆ ಅದಕ್ಕೆ ಹಣಕಾಸಿನ ಸಹಾಯ ನಿಂತುಹೋಯಿತು. ಈಗ ಅಂಥದ್ದೆ ಮತ್ತೊಂದು ಸಿರೀಸ್ ಶುರು ಮಾಡಿದ್ದೇವೆ. ಬೆಲೆ ಕೂಡ ತುಂಬಾ ಕಮ್ಮಿ. ಜಗತ್ತಿನೆಲ್ಲೆಡೆ ಸುಲಭ ಲಭ್ಯ ಕೂಡ. ಜನರಿಗೆ ತಮ್ಮ ಶ್ರೇಷ್ಠ ಸಾಹಿತ್ಯ ಪರಂಪರೆ ಗೊತ್ತಾಗಬೇಕು. ಜಗತ್ತಿಗೆ ಎಲ್ಲಾ ಭಾಷೆಯ ಶ್ರೇಷ್ಠ ಸಾಹಿತ್ಯ ಪರಂಪರೆ ದಕ್ಕಬೇಕು. ಅಂಥದ್ದೊಂದು ಪ್ರೇರಣೆಯ ಹಿನ್ನೆಲೆಯಲ್ಲಿ ಇದನ್ನು ಆಗುಮಾಡಲಾಗಿದೆ ಎಂದರು. ಅವರ ಇಂಥ ಕೆಲಸಕ್ಕೆ ಇನ್ನಷ್ಟು ಗಂಭೀರ ಉದ್ದೇಶಗಳಿದ್ದದ್ದು ಸ್ಪಷ್ಟವಾಗತೊಡಗಿತು. ತಲೆ ಕೆದರಿಕೊಳ್ಳುತ್ತ ಮತ್ತೆ ನೆನಪು ಮಾಡಿಕೊಳ್ಳತೊಡಗಿದರು. ಗ್ರೀಸಿಗೆ ಭೌಗೋಳಿಕ ಸೀಮೆಗಳಿರಬಹುದು, ಚೈನಾಕ್ಕೆ ಭೌಗೋಳಿಕ ಸೀಮೆಗಳಿರಬಹುದು, ಭಾರತಕ್ಕೂ ಭೌಗೋಳಿಕ ಸೀಮೆಗಳಿರಬಹುದು. ಆದರೆ ಅವುಗಳ ಸಾಂಸ್ಕೃತಿಕ ಸೀಮೆಗಳೆಲ್ಲಿವೆ? ಅವುಗಳ ಶ್ರೇಷ್ಠ ಪಠ್ಯಗಳಿಗೆ ಸೀಮೆಗಳೆಲ್ಲಿವೆ? ಭೌಗೋಳಿಕ ಸರಹದ್ದುಗಳ ಚರ್ಚೆ ರಾಜಕಾರಣಿಗಳಿಗಿರಲಿ, ನಾವು ಸಾಂಸ್ಕೃತಿಕ ಸರಹದ್ದುಗಳನ್ನು ಚಲನಶೀಲವಾಗಿಸೋಣ. ಹಲವು ಜಗತ್ತುಗಳನ್ನು ಅರ್ಥಮಾಡಿಕೊಳ್ಳುವ ದಾರಿಯಿದು ಅಂತ ಒಂದು ಕ್ಷಣ ಸುಮ್ಮನಾದರು. ಭಾಷೆಯೊಳಗಿನ ಚಿಂತನೆಗಳ ದೋಷವನ್ನು ಟೀಕಿಸುವ ಮಾದರಿ ಒಪ್ಪುತ್ತಿದ್ದ ಶೆಲ್ಡನ್ ಪೊಲಾಕ್ ಯಾವುದೇ ಭಾಷೆಯ ಸಾರಾಸಗಟಾದ ತಿರಸ್ಕಾರವನ್ನು ಒಪ್ಪುತ್ತಿರಲಿಲ್ಲ. ಯಾವುದೇ ಭಾಷೆಯನ್ನು ದ್ವೇಷಿಸುವುದರ ಅಪಾಯವನ್ನವರು ಅರಿತಿದ್ದರು. ಭಾಷೆಯನ್ನು ಅದರ ಜನಪ್ರಿಯ ನಿಲುವುಗಳಾಚೆ ನೋಡುವ ಕ್ರಮಗಳನ್ನು ಅವರು ಹುಡುಕುತ್ತಿದ್ದರೆನಿಸುತ್ತದೆ. ಇದು ಅವರ ಮಾತಿನಲ್ಲಿ ಪದೇ ಪದೇ ವ್ಯಕ್ತವಾಗುತಿತ್ತು.
ಯಾವುದೇ ಶಾಸ್ತ್ರೀಯ ಪಠ್ಯಗಳ ಅಧ್ಯಯನಕ್ಕೆ ಶಿಸ್ತು, ಶ್ರದ್ಧೆ, ತಾಳ್ಮೆ ಬೇಕು. ನಾನು ಪಂಡಿತ ಪದ್ಮನಾಭಶಾಸ್ತ್ರಿಗಳಿಂದ ಸಂಸ್ಕೃತ ಕಲಿತಿರುವೆ. ಪ್ರೊ.ವೆಂಕಟಾಚಲಶಾಸ್ತ್ರಿಗಳಿಂದ ಕನ್ನಡ ಪಠ್ಯಗಳನ್ನು ಅಧ್ಯಯನ ಮಾಡಿರುವೆ. ಎ.ಕೆ.ರಾಮಾನುಜನ್, ಡಿ.ಆರ್.ನಾಗರಾಜ ಅವರಿಂದ ಸಾಕಷ್ಟು ಕಲಿತಿರುವೆ. ದೇವನೂರ ಮಹಾದೇವರ ಕುಸುಮಬಾಲೆ ಶ್ರೇಷ್ಠ ಪಠ್ಯ. ಅದರ ಭಾಷೆಯ ಸಾಧ್ಯತೆಗಳಿಂದಲೂ ನಾನು ಕನ್ನಡದ ಕುರಿತು ಕಲ್ಪಿಸಿಕೊಳ್ಳಬಲ್ಲೆ. ಡಾ.ಬಿ.ಆರ್.ಅಂಬೇಡ್ಕರ್ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ತಮ್ಮ ಥೀಸಿಸ್‌ನಲ್ಲಿ ಮೊದಲಿಗೆ ಸಂಸ್ಕೃತದ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ. ಸಂಸ್ಕೃತ ಭಾಷೆಯಲ್ಲಿನ ಚಿಂತನೆಗಳ ಕಟು ಟೀಕಾಕಾರರಾಗಿದ್ದ ಅವರು ಸಂಸ್ಕೃತವನ್ನು ಚೆನ್ನಾಗಿ ಓದಿಕೊಂಡಿದ್ದರು. ನೋಡಿ ಹೆಚ್ಚೆಚ್ಚು ದಲಿತರು ವಿದೇಶಕ್ಕೆ ಬಂದು ಅಧ್ಯಯನ ಮಾಡಬೇಕು. ಮಧ್ಯಪ್ರದೇಶದಿಂದ ಒಬ್ಬ ದಲಿತ ವಿದ್ಯಾರ್ಥಿ ಬಂದಿದ್ದ. ನಮಗೆಲ್ಲ ಖುಶಿಯಾಗಿತ್ತು. ಆದರೆ ಆತ ಅರ್ಧಕ್ಕೆ ವಾಪಾಸು ಹೋದ. ನನಗೆ ತುಂಬಾ ನಿರಾಸೆಯಾಯಿತು. ಸಂಸ್ಕೃತದಲ್ಲಿ ಎಂಎ, ಎಂಫಿಲ್, ಪಿಎಚ್.ಡಿ ಮಾಡಿದ ಹುಡುಗಿಯೊಬ್ಬಳು ನನ್ನಲ್ಲಿಗೆ ಬಂದಳು. ಆದರೆ ಅವಳಿಗೆ ಸಂಸ್ಕೃತ ಸರಿಯಾಗಿ ಓದಲು ಬರುವುದಿಲ್ಲ. ಏನು ಮಾಡಬೇಕು ಹೇಳಿ? ಅವಳಿಗೆ ಮೂರು ವರ್ಷ ಟ್ರೇನಿಂಗ್ ಕೊಟ್ಟು ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಗಂಭೀರ ಚರ್ಚೆ ಮಾಡುವಂತೆ ಮಾಡಿದೆವು. ಹಲ್ಲುಕಚ್ಚಿ ನೆಲಹಿಡಿದು ಕೂತು ಓದುವ ಬರೆಯುವ ಶಿಸ್ತಿಗೆ ಎಲ್ಲರೂ ಒಳಗಾಗಬೇಕು. ಪರಿಶ್ರಮವಿಲ್ಲದ ಪರಿಸರ ಎಲ್ಲಡೆಗೆ ಹಬ್ಬುತ್ತಿರುವ ಕುರಿತ ಅವರ ಆತಂಕ ನಿಚ್ಚಳವಾಗಿತ್ತು. ತಾವು ಕೆಲಸ ಮಾಡುತ್ತಿರುವ ಕ್ಷೇತ್ರದ ಕುರಿತು ನಂಬಿಕೆಯಿಲ್ಲದ, ಶ್ರಮವಿಲ್ಲದ, ಬೋಳೆತನದ ಸ್ಕಾಲರ್‌ಶಿಪ್ ಏತಕ್ಕಾಗಿ ಎಂಬ ಪ್ರಶ್ನೆ ಅವರ ಮಾತುಗಳಲ್ಲಿ ಸುಳಿಯುತ್ತಿತ್ತು.
ನಾನು ಇನ್ನೊಂದು ಪ್ರಶ್ನೆಗೆ ಹೊರಳಿದೆೆ. ಕನ್ನಡದಲ್ಲಿ ಕ್ಲಾಸಿಕಲ್ ಪದದ ಬಗೆಗೆ ಗೊಂದಲವಿದೆ. ಅಲ್ಲಿ ಗುರುತಿಸುತ್ತಿರುವ ಪಠ್ಯಗಳ ಬಗೆಗೂ ಪ್ರಶ್ನೆಗಳಿವೆ. ಅದನ್ನು ಆಧುನಿಕ ಪಠ್ಯಗಳಿಗೂ ವಿಸ್ತರಿಸಬೇಕು ಎಂಬ ವಾದವಿದೆ. ಅಲ್ಲಿ ಜನಪದ ಮಹಾಕಾವ್ಯಗಳಿಗೆ ಸ್ಥಾನವೇಕಿಲ್ಲ ಎಂಬ ಅಸಮಾಧಾನವಿದೆ? ಎಂದೆ. ಓ ಹೌದೆ? ಅಂತ ಅಚ್ಚರಿಗೊಂಡ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ; ಕ್ಲಾಸಿಕಲ್ ಪದದ ಬಗೆಗೆ ಗೊಂದಲ ಬೇಡ. ಸದ್ಯಕ್ಕೆ ಅದನ್ನು ಕ್ರಿ.ಶ. 1800 ರ ಒಳಗಿನ ಪಠ್ಯಗಳೆಂದು ಭಾವಿಸೋಣ. ನನಗೆ ಗೊತ್ತು ಅನೇಕರಿಗೆ ಈ ತರಹದ ವ್ಯಾಖ್ಯಾನ ಹಿಡಿಸುವುದಿಲ್ಲವೆಂದು. ನನ್ನ ಅಭಿಪ್ರಾಯ ಕೂಡ ಕಾಲಾನಂತರದಲ್ಲಿ ಬದಲಾಗಬಹುದು. ಕ್ಲಾಸಿಕಲ್ ಎಂದರೆ ಆ ಪಠ್ಯಗಳು ಮನುಷ್ಯನ ಅಸ್ತಿತ್ವದ ಚರಿತ್ರೆಗಳನ್ನು ಹೇಳುತ್ತಿವೆ. ಚಿಂತನೆಯ ಚರಿತ್ರೆ ಹೇಳುತ್ತಿವೆ. ಮನುಷ್ಯ ಪ್ರಜ್ಞೆಯ ವಿಭಿನ್ನ ಸ್ತರಗಳನ್ನು ದಟ್ಟವಾಗಿ ಕಾಣಿಸುತ್ತಿವೆ. ಕ್ಲಾಸಿಕಲ್ ಪದವನ್ನು ನಾವು ಬಳಕೆಯಿಂದ ಬಿಡಬಾರದು. ನಮ್ಮ ಶ್ರೇಷ್ಠ ಪರಂಪರೆಯೊಂದು ಈ ಪದದ ಆವರಣದಲ್ಲಿದೆ. ಆವರಣ ಒಡೆದು ನಮ್ಮ ಕಾಲಕ್ಕೆ ಚರ್ಚೆಯನ್ನು ತೆಗೆದುಕೊಂಡು ಹೋಗಬೇಕಲ್ಲವೆ? ಗ್ರೀಕ್, ಲ್ಯಾಟಿನ್‌ನಲ್ಲಿ ಎಷ್ಟು ಅದ್ಭುತವಾದ ಕೆಲಸವಾಗಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ಇಂಥ ಹಲವಾರು ಯೋಜನೆಗಳಲ್ಲಿ ಕೃತಿಗಳನ್ನು ಪ್ರಕಟಿಸಿದೆ. ಮಿಡಿವಲ್ ಲೈಬ್ರರಿ ಎನ್ನುವ ಸಿರೀಸ್ ಇದೆ. ಓಲ್ಡ್ ಲೈಬ್ರರಿ ಸಿರೀಸ್ ಇದೆ. ಲೋ ಕ್ಲಾಸಿಕಲ್ ಸಿರೀಸ್ ಕೂಡ ಇದೆ. ಯುರೋಪು ಇದನ್ನು ತನ್ನದೇ ನೆಲೆಯಲ್ಲಿ ವಿವರಿಸಿದೆ. ಅನೇಕ ಸಲ ಶಬ್ದಗಳ ಜಾಲದಲ್ಲಿ ಸಿಲುಕಿ ಅಲ್ಲೇ ಉಳಿಯುವಂತಾಗಬಾರದು. ಅದರಿಂದ ಹೊಸದೊಂದು ಚರ್ಚೆಗೆ ಅವಕಾಶವಾಗುವಂತಿದ್ದರೆ ಕ್ರಿಯಾಶೀಲರಾಗಬೇಕು. ಜಾಗತಿಕ ಬೌದ್ಧಿಕ ಚರ್ಚೆಗಳ ಜೊತೆಯಲ್ಲಿ ಕನ್ನಡದ ಚರ್ಚೆಗಳನ್ನು ಎಳೆದು ತರಬೇಕು. ಒಟ್ಟಿನಲ್ಲಿ ಭಾರತದ ಶ್ರೇಷ್ಠ ಪಠ್ಯಗಳು ಜಗತ್ತಿಗೆ ತಲುಪುವಂತಾಗಬೇಕು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಚಂದ್ರಶೇಖರ ಕಂಬಾರರು ಮತ್ತವರ ಸಂಗಾತಿಗಳು ರೂಪಿಸಿದ ಯೋಜನೆಗಳು ಒಂದು ಕ್ಷಣ ಮನಸ್ಸಿನಲ್ಲಿ ಸುಳಿದು ಹೋದವು.
ಈಗ ನೀವು ಆಯ್ಕೆ ಮಾಡಿಕೊಂಡ ಪಠ್ಯಗಳು ಎಂಥವು? ನಿಮ್ಮ ಅನುವಾದದಿಂದ ಮೂಲ ಭಾಷೆಯ ಬೆಳವಣಿಗೆಯನ್ನು ಹೇಗೆ ವಿವರಿಸುವಿರಿ. ಇಂಗ್ಲಿಷ್ ಭಾಷೆಗೆ ದಕ್ಕುವ ಹೊಸ ತಿಳುವಳಿಕೆಯಿಂದ ಮೂಲ ಭಾಷೆಗೆ ಆಗುವ ಅನುಕೂಲಗಳೇನು? ಎಂದೆ. ಈ ಪ್ರಶ್ನೆಯ ಕುರಿತು ನನಗೇ ಗೊಂದಲವಿತ್ತು. ಇದನ್ನವರು ಗುರುತಿಸಿದರೊ ಏನೊ. ತಮ್ಮ ಕಣ್ಣುಗಳೆರಡನ್ನೂ ಕಿರಿದುಗೊಳಿಸುತ್ತ ಹೇಳಿದರು ರವಿಕೀರ್ತಿಯ ಐಹೊಳೆ ಶಾಸನವಿದೆ. ಈತ ಅಂಥ ದೊಡ್ಡ ಕವಿಯಲ್ಲ. ಆದರೆ ಕಾಳಿದಾಸ ಬಾರವಿಯನ್ನು ನೆನಪಿಸಿಕೊಂಡು ಶಾಸನ ಬರೆದಿದ್ದಾನೆ. ಎಲ್ಲಿಯ ಐಹೊಳೆ ಎಲ್ಲಿಯ ಕಾಳಿದಾಸ? ಅಂದರೆ ಇವರ ವಿದ್ವತ್ತು ಅಲ್ಲಿಂದಿಲ್ಲಿಗೆ ಹರಿದಾಡಿದೆ. ತೇರಿಗಾಥಾ ಭಾರತದಿಂದ ಮರೆಯಾಗಿತ್ತು. ಇದರ ಪ್ರತಿ ಶ್ರೀಲಂಕಾದಲ್ಲಿ ಸಂರಕ್ಷಿಸಲಾಗಿದೆ. ಇದು ಯಾವುದೇ ಕವಿಪ್ರಶಂಸೆಯ ಕೃತಿಯಲ್ಲ. ಇದು ಹೆಣ್ಣಿನ ಹಂಬಲಗಳ ಕೃತಿ. ಮೊದಲ ಸಲ ಇದನ್ನು ಸಂಪೂರ್ಣವಾಗಿ ಇಂಗ್ಲಿಷಿನಲ್ಲಿ ತಂದಿದ್ದೇವೆ. ಇಂಥದ್ದೊಂದು ಕೃತಿ ಕೇವಲ ರಸಿಕರಿಗಾಗಿ ನಿರ್ಮಾಣಗೊಂಡಿದ್ದಲ್ಲ ಎಂಬುದನ್ನು ನೆನಪಿಡಬೇಕು. ಅಲ್ಲದೆ ಜನ ತಮ್ಮ ಸಾಹಿತ್ಯ ಪರಂಪರೆಯನ್ನು ಮರುಶೋಧಿಸುವಂತಾಗಬೇಕು. ಅಲ್ಲಿನ ದೃಷ್ಟಿಕೋನಗಳಿಂದ ಕಲಿಯಬೇಕು. ನಮಗೆ ಕ್ಲಾಸಿಕಲ್ ಪಠ್ಯಗಳು, ಕ್ಲಾಸಿಕಲ್ ಮಾಸ್ಟರ್ಸ್, ಕ್ಲಾಸಿಕಲ್ ಸಂಪಾದನೆಗಳು ಬೇಕು. ಅದನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನೇಕ ವಿದ್ವಾಂಸರು ಮಾಡಿದ್ದಾರೆ. ಆದರೆ ಇಂಗ್ಲಿಷ್ ಜಗತ್ತಿಗೂ ಇವು ಬರಬೇಕು. ಇದು ವಿದ್ವತ್ ಪರಂಪರೆಯ ಮುಂದುವರಿಕೆ. ಚೇತನ್ ಭಗತ್‌ರನ್ನು ಓದುವ ರೀತಿಯದಲ್ಲವಿದು. ನಮ್ಮ ಜನ ನೈಜ ಪಠ್ಯಗಳ ಕಡೆ ಚಲಿಸಬೇಕು. ಸದ್ಯ ಇಂಗ್ಲಿಷ್ ಅನುವಾದದಲ್ಲಿ ತರುತ್ತಿದ್ದೇವೆ. ಮುಂದೆ ಹಿಂದಿಯಲ್ಲೂ ಬರಬಹುದು. ಜಗತ್ತಿನ ಬೇರೆ ಬೇರೆ ಭಾಷೆಗೂ ಬರಬಹುದು. ಹಾಗೆಯೇ ಇದನ್ನೆಲ್ಲ ಓದುತ್ತಾ ಓದುತ್ತಾ ಜನ ಮೂಲಭಾಷೆಗಳ ಕಡೆ ಹೋಗುವಂತಾಗಬೇಕೆಂಬುದೇ ನಮ್ಮ ಆಶಯ ಎಂದರು. ಬರೀ ಸಾಹಿತ್ಯ ಲೋಕದ ಜನರನ್ನಷ್ಟೇ ಅಲ್ಲ ವಿವಿಧ ಜ್ಞಾನಶಿಸ್ತುಗಳ ಪ್ರತಿಭಾವಂತರನ್ನೂ ಈ ಯೋಜನೆಗೆ ತರುವ ಹಂಬಲದಲ್ಲಿದ್ದವರು. ಈಗ ಅನೇಕ ವಿದ್ವಾಂಸರು ಈ ಕೆಲಸದಲ್ಲಿ ತೊಡಗಿದ್ದಾರೆ. ನಾವೊಂದು ಒಳ್ಳೆಯ ಸಂಪಾದಕ ಮಂಡಳಿ ಹೊಂದಿದ್ದೇವೆ. ಮತ್ತೆ ಮತ್ತೆ ಸೇರಿ ಈ ಕೃತಿಗಳು ಹೇಗಿರಬೇಕೆಂದು ಚರ್ಚಿಸುತ್ತೇವೆ. ಅನುವಾದಗೊಂಡ ಕೃತಿಯನ್ನು ಹಲವಾರು ಬಾರಿ ಪರಿಶೀಲಿಸುತ್ತೇವೆ. ಹನ್ನೆರಡು ಭಾಷೆಗಳ ಕೃತಿಗಳನ್ನೀಗ ಆಯ್ದುಕೊಂಡಿದ್ದೇವೆ. ಬೀಜಗಣಿತದ ಕೃತಿಯೂ ಅನುವಾದಗೊಳ್ಳಬೇಕೆಂಬುದು ನಮ್ಮ ಆಶಯ. ಸಂಸ್ಕೃತವನ್ನು ಬಲ್ಲ ಹಾಗೂ ಶ್ರೇಷ್ಠ ಗಣಿತಜ್ಞ ಮಂಜುಲ್ ಭಾರ್ಗವ್ ಇದನ್ನು ಅನುವಾದಿಸಿಕೊಟ್ಟರೆ ಸಂತೋಷ. ಅಮೀರ್ ಖುಸ್ರೊ ಅವರ ಕೃತಿ ಕೂಡ ಇಲ್ಲಿ ಸೇರಿದೆ. ಕನ್ನಡದ ವಚನಕಾರರನ್ನು ತರುವ ಉದ್ದೇಶ ಕೂಡ ಹೊಂದಿದ್ದೇವೆ. ಶ್ರೇಷ್ಠ ವಿದ್ವಾಂಸ ಎಸ್.ಎ.ಫಾರೂಕಿ ಅವರಿಂದ ಉರ್ದುವಿನ ಕೆಲ ಪಠ್ಯಗಳನ್ನು ಅನುವಾದಿಸುವ ಉದ್ದೇಶವಿದೆ. ಹೆಚ್ಚು ಅಡಿಟಿಪ್ಪಣಿಗಳಿಲ್ಲದೆ ಕೃತಿ ಸಂಪಾದಿಸುತ್ತಿದ್ದೇವೆ. ಅರ್ಧ ಭಾಗ ಅಡಿಟಿಪ್ಪಣಿ ಅರ್ಧಭಾಗ ಪಠ್ಯವಿರುವುದು ಅಷ್ಟು ಸರಿಯಾದ ಕ್ರಮವಲ್ಲ. ಒಂದು ಕಡೆ ಅಕ್ಷರಶಃ ಇಂಗ್ಲಿಷ್ ಅನುವಾದ ಇನ್ನೊಂದೆಡೆ ಭಾವಾನುವಾದ ಇರುತ್ತದೆ ಎಂದು ವಿವರಿಸಿದರು. ಅಷ್ಟರಲ್ಲಿ ಯಾರೊ ಒಂದಿಬ್ಬರು ಬಂದು ಪಕ್ಕದ ಖುರ್ಚಿಗಳಲ್ಲಿ ಕುಳಿತುಕೊಂಡರು. ನಂತರ ಗೊತ್ತಾಯಿತು ಅವರು ಪತ್ರಕರ್ತರೆಂದು. ಅವರು ಕೂಡ ಮತ್ತೆ ಮಾತನಾಡುವದಾಗಿ ತಿಳಿಸಿ ಆಮೇಲೆ ಬರಲು ತಿಳಿಸಿದರು.
ನಮ್ಮಂದಿಗೆ ಶೆಲ್ಡನ್ ಪೊಲಾಕ್‌ರ ಮಾತು ಮುಂದುವರಿದಿತ್ತು ಸಂಸ್ಕೃತ ಭಾಷೆ ಬೆಂಗಾಳಿ ಭಾಷೆಯೊಂದಿಗೆ ಹೆಚ್ಚು ಗೆಳೆತನ ಹೊಂದಿದೆ, ಹಾಗೆಯೇ ಮಲೆಯಾಳಂ ಜೊತೆಗೂ ಕೂಡ. ಕೆಲವು ಭಾಷೆಗಳ ಜೊತೆ ಕಡಿಮೆ ಗೆಳೆತನ ಹೊಂದಿದೆ. ಇದನ್ನು ಗೆಳೆತನದ ಸಂಬಂಧವಾಗಿ ನೋಡಬೇಕೆ ಹೊರತು ಪರಸ್ಪರ ದ್ವೇಷದ ಸಂಬಂಧವಾಗಿ ಅಲ್ಲ. ನಾನು ಎಲ್ಲದಕ್ಕೂ ಮುಕ್ತವಾಗಿದ್ದೇನೆ. ಆದರೆ ಗುಣಾತ್ಮಕವಾಗಿ ಎಲ್ಲೂ ಯಾರಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಯಾರಾದರೂ ಜನಪದ ಪಠ್ಯಗಳನ್ನು ಅನುವಾದ ಮಾಡಿಕೊಡುವುದಾದರೆ ಅವರಿಗೂ ಸ್ವಾಗತ. ಯಾಕೆಂದರೆ ಭಾರತದ ಪ್ರಾಚೀನ ಪಠ್ಯಗಳಲ್ಲಿ ಅಪಾರ ಪ್ರಮಾಣದ ಹ್ಯೂಮನ್ ಬೀಯಿಂಗ್ ಇದೆ. ಭಾಷೆಯ ಚಿಂತನಾಕ್ರಮದಲ್ಲಿ ದೋಷಗಳು ನುಸುಳಿದರೆ ಅದು ಆ ವ್ಯಕ್ತಿಯ ತಪ್ಪೇ ಹೊರತು ಭಾಷೆಯ ತಪ್ಪಲ್ಲ ಎಂದರವರು. ಜಗತ್ತಿನ ಭಾಷಿಕ ಸಂಘರ್ಷಗಳು ಮನುಷ್ಯ ವಿರೋಧಿಯಾಗುವ ಕೊನೆಗೆ ಹಿಂಸೆಗೆ ಕಾರಣವಾಗುವ ಚರಿತ್ರೆ ನಮ್ಮ ಕಣ್ಣ ಮುಂದೆಯೇ ಇತ್ತು. ಇದನ್ನೆಲ್ಲ ಅಳೆದು ತೂಗಿ ನೋಡುವ ಮಾನವೀಯ ನೋಟ ಮತ್ತು ವಿದ್ವತ್ತು ಅವರಲ್ಲಿ ಸೇರಿಕೊಂಡಿದೆ ಎನಿಸಿತು.
ಭಾರತ ತನ್ನ ನೆನಪುಗಳನ್ನು ಕಳೆದುಕೊಳ್ಳುತ್ತಿದೆಯೇ? ಡಿ.ಆರ್.ಇದನ್ನು ವಿಸ್ಮತಿ ಎಂದು ಕರೆದಿದ್ದರು. ನೀವು ಕೂಡ ಇಂಥ ನೆನಪುಗಳ ಕುರಿತು ಮಾತಾಡಿದಿರಿ. ಶಾಸ್ತ್ರೀಯ ಪಠ್ಯಗಳಲ್ಲಿರುವ ಇಂಥ ನೆನಪುಗಳನ್ನು ಮರುರೂಪಿಸಿಕೊಳ್ಳುವುದು ಹೇಗೆ? ಯಾಕೆಂದರೆ ಹಿಂದಿನದನ್ನು ನೋಡುವಾಗ ತುಂಬಾ ಎಚ್ಚರದಿಂದಲೂ ಇರಬೇಕು ಅನ್ನಿಸುತ್ತದೆ. ಕಾರಣ ಈ ಪಠ್ಯಗಳಲ್ಲಿ ನಾಗರಿಕತೆಯ ನೆನಪುಗಳ ಜೊತೆಗೆ ದಮನಕಾರಿ ನೀತಿಗಳೂ ಇವೆ. ಸಾಮಾಜಿಕ ಅಸಮಾನತೆ, ಅಮಾನವೀಯ ಘಟನೆಗಳೂ ಇವೆ. ಇದೆಲ್ಲ ಇದೆಯೆಂದು ಎಲ್ಲರಿಗೂ ಗೊತ್ತು. ಈಗ ಮುಂದಿನ ಪ್ರಶ್ನೆ ಇದೆಲ್ಲದರಿಂದ ಬಿಡುಗಡೆಗೊಂಡು ಆ ಪಠ್ಯಗಳನ್ನು ಮರುರಚಿಸಿಕೊಳ್ಳುವ ವಿಧಾನಗಳು- ಇದನ್ನೆ ನೀವೂ ಹೇಳುತ್ತಿರುವುದೆಂದುಕೊಂಡಿರುವೆ ಅಂದೆ. ಅವರ ಕಣ್ಣುಗುಡ್ಡೆಗಳು ಅತ್ತಿತ್ತ ಹೊರಳಾಡಿ ಮತ್ತೆ ನಡುಗಡ್ಡೆಗೆ ಬಂದವು. ಅವರ ಮನಸ್ಸಿನಲ್ಲಿ ಏನೇನೊ ವಿಚಾರಗಳ ಒಮ್ಮೆಗೆ ಬರುತ್ತಿದ್ದವೆನಿಸುತ್ತದೆ. ಹೇಳಹೊರಟರು. ಅಪಾಯಕಾರಿ ಸಿದ್ಧಾಂತಗಳನ್ನು ನಿಷ್ಠುರವಾಗಿ ವಿಶ್ಲೇಷಿಸಬೇಕು. ಆದರೆ ಆಳವಾದ ಅಧ್ಯಯನದಿಂದಲೇ ಅದನ್ನು ಎದುರಿಸಬೇಕು. ಒಣಮಾತುಗಳಿಂದ ದೂರ ತಳ್ಳುತ್ತಾ ಕುಳಿತರೆ ಎಲ್ಲವೂ ಬರಿದಾಗುವ ಸಂಭಾವ್ಯ ಇರುತ್ತದೆ. ಸಾಹಿತ್ಯಿಕ ನೆಲೆಯಲ್ಲಿ ಹಲವಾರು ಹೊಸ ಮಾರ್ಗಗಳನ್ನು ತೆರೆಯುತ್ತಾ ನಾವು ಇದನ್ನು ಆಗು ಮಾಡಬೇಕಾಗಿದೆ ಎನ್ನುವುದು ಅವರ ಉತ್ತರವಾಗಿತ್ತು.
ಶೆಲ್ಡನ್ ಪೊಲಾಕ್‌ರು ಸಂಸ್ಕೃತ ಭಾಷೆ, ಪಠ್ಯಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದವರು. ಸಂಸ್ಕೃತದ ಸಾಹಿತ್ಯೇತರ ಸ್ಥಿತಿಗತಿಯೂ ಅವರಿಗೆ ಗೊತ್ತಿರುವಂತಿತ್ತು; ಸಂಸ್ಕೃತದ ಅಧ್ಯಯನವನ್ನು ಭಾರತದಲ್ಲಿ ಅದೆಷ್ಟು ರಾಜಕೀಯಗೊಳಿಸಲಾಗಿದೆ ಎಂಬುದನ್ನು ನೆನಪಿಸಿಕೊಂಡರೆ ದಿಗಿಲಾಗುತ್ತದೆ. ಅದನ್ನು ಜಡವಾಗಿ ಗ್ರಹಿಸುವವರ ಗುಂಪು ಒಂದೆಡೆಯಾದರೆ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸುವ ಗುಂಪು ಇನ್ನೊಂದೆಡೆ. ಈ ಎರಡರ ಅಡಕತ್ತರಿಯಲ್ಲಿ ಸಂಸ್ಕೃತದ ಅಧ್ಯಯನ ಮತ್ತು ಬಹುತೇಕ ಭಾರತೀಯ ಭಾಷೆಗಳ ಅಧ್ಯಯನ ಸಿಲುಕಿಕೊಂಡಿದೆ
ಅಪರೂಪದ ಪ್ರಾಚೀನ ಪಠ್ಯದ ಸಾಧ್ಯತೆಗಳನ್ನು ಮರುಗಳಿಸಿಕೊಳ್ಳಬೇಕಾಗಿದೆ ಎಂದು ಹೇಳುತ್ತಿದ್ದ ಶೆಲ್ಡನ್ ಪೊಲಾಕ್‌ರಿಗೆ ಓರಿಯಂಟಲ್ ವಿರೋಧಿ ಕ್ರಮಗಳು ಇನ್ನಷ್ಟು ಮಾಗಬೇಕಿತ್ತೇನೊ, ವಸಾಹತೋತ್ತರ ಕ್ರಮಗಳು ಕ್ಲಾಸಿಕಲ್ ಪಠ್ಯಗಳ ಅಧ್ಯಯನಕ್ಕೆ ಅಷ್ಟು ಉಪಯುಕ್ತವಲ್ಲವೇನೊ ಅಂತಲೂ ಅನಿಸಿರಬೇಕು. ಯಾಕೆಂದರೆ ಅಷ್ಟು ಆಳವಲ್ಲದ ಓರಿಯಂಟಲಿಸಂ ವಿರೋಧಿ ಕ್ರಮಗಳಿಂದಾಗಲಿ ಅಥವಾ ವಸಾಹತೋತ್ತರ ಕ್ರಮಗಳಿಂದಾಗಲಿ ಶಾಸ್ತ್ರೀಯ ಪಠ್ಯಗಳ ಸರಿಯಾದ ಓದು ಸಾಧ್ಯವೇ ಎಂಬ ಅನುಮಾನ ನನಗಿದೆ ಎಂದರು. ಮುಂದುವರಿದು ಮೂಲಭೂತವಾದಿಗಳು ಸೂಚಿಸುತ್ತಿರುವ ಅಧ್ಯಯನ ಕ್ರಮಗಳು ಕೂಡ ನಿರುಪಯುಕ್ತ. ಪ್ರಾಚೀನ ಪಠ್ಯಗಳ ಭಾಷೆ, ಚರಿತ್ರೆ, ಸಂಸ್ಕೃತಿಯನ್ನು ಕಾಣಲು ಹೊಸದಾದ, ಘನವಾದ ಪರಿಕರಗಳನ್ನು ರೂಪಿಸಿಕೊಳ್ಳಲು ಯತ್ನಿಸಬೇಕು. ಇಂಥ ಪಠ್ಯಗಳಲ್ಲಿರುವ ಚಿಂತನಾಕ್ರಮಗಳ ವಂಶಾವಳಿ ಯನ್ನು ಮರುಕಟ್ಟಿಕೊಳ್ಳಬೇಕು. ಹೊಸ ಕಾಲದ ಹೊಳಪಿನಲ್ಲಿಟ್ಟು ಓದಬೇಕು. ಒಂದು ವೇಳೆ ನಮ್ಮ ಪ್ರಾಚೀನ ಪಠ್ಯಗಳಿಂದ ಕಲಿಯುವ ಸಾಮರ್ಥ್ಯ ನಾವು ಕಳೆದುಕೊಂಡರೆ ಅರ್ಥಪೂರ್ಣ ಚಿಂತನಾಕ್ರಮಗಳನ್ನು ಕಳೆದುಕೊಳ್ಳುತ್ತೇವಷ್ಟೇ ಅಲ್ಲದೆ, ಇಂಥದ್ದೊಂದು ಚಿಂತನಾ ಕ್ರಮಗಳು ಜಗತ್ತಿನ ಬೇರೆಲ್ಲೆಡೆಯೂ ಸಿಗುವುದಿಲ್ಲ. ಕಥನಕ್ರಮ, ಜೀವನದೃಷ್ಟಿ, ಅಭಿವ್ಯಕ್ತಿ ಮಾದರಿ, ಸೈದ್ಧಾಂತಿಕ ಸಂಘರ್ಷ-ಸಂವಾದ, ಮುನ್ನೋಟ ಈ ಶಾಸ್ತ್ರೀಯ ಪಠ್ಯಗಳಲ್ಲಿ ಮಿಳಿತಗೊಂಡಿವೆ ಎನ್ನುವಾಗ ಶಾಸ್ತ್ರೀಯ ಪಠ್ಯಗಳ ಕುರಿತ ಅವರ ಬದ್ಧತೆ, ತೀವ್ರವಾದ ಪ್ರೀತಿ ಮತ್ತೆ ಮತ್ತೆ ಸಾಬೀತುಗೊಳ್ಳುತ್ತಿತ್ತು. ನೀವು ಸಂಸ್ಕೃತ ಪಠ್ಯಗಳ ಜೊತೆಗೆ ಕೆಲ ಕನ್ನಡದ ಪ್ರಾಚೀನ ಪಠ್ಯಗಳ ಕುರಿತೂ ವಿದ್ವತ್ಪೂರ್ಣ ಬರಹಗಳನ್ನು ಬರೆದಿದ್ದೀರಿ. ಕನ್ನಡದಲ್ಲಿ ಯಾರ ಚರ್ಚೆಗಳಿಂದ ನಿಮಗೆ ಅನುಕೂಲವಾಯಿತು? ಇಲ್ಲಿನ ವಿದ್ವತ್ತಿನಿಂದ ನೀವು ಪಡೆದ ತಿಳುವಳಿಕೆ ಯಾವ ತರಹದ್ದು? ಕವಿರಾಜಮಾರ್ಗದ ಕುರಿತ ನಿಮ್ಮ ಬರಹ ಕರ್ನಾಟಕದ ಜೊತೆ ಇತರ ದೇಶಭಾಷೆಗಳ ಕೃತಿಗಳ ಕಡೆಗೂ ಚಲಿಸುವಂತೆ ಮಾಡಿತೆ? ಅಂದೆ. ಕನ್ನಡ ಕರ್ನಾಟಕವೆಂದರೆ ಕೊಂಚ ಗೆಲುವಾದಂತೆ ಕಂಡುಬಂದ ಶೆಲ್ಡನ್ ಪೊಲಾಕ್‌ರು ಮೊದಲಿಗೆ ನೆನಪಿಸಿಕೊಂಡದ್ದು ಡಿ.ಆರ್.ನಾಗರಾಜರನ್ನು. ಅವರ ಮಾತಿನ ವರಸೆ ಹೀಗಿತ್ತು ಡಿ.ಎಲ್.ಎನ್, ತೀನಂಶ್ರೀ, ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ, ಎ.ಎನ್.ಉಪಾಧ್ಯಾ, ಬಿಎಂಶ್ರೀ ಎಲ್ಲರೂ ಶ್ರೇಷ್ಠ ದರ್ಜೆಯ ಚಿಂತಕರೆ. ಟಿ.ವಿ. ವೆಂಕಟಾಚಲಶಾಸ್ತ್ರಿ, ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ, ಷ.ಶೆಟ್ಟರ್ ಮಹತ್ವದ ಬರವಣಿಗೆಯನ್ನೇ ಮಾಡಿದ್ದಾರೆ. ಷಟ್ಟರ್ ಅವರು ಬ್ರಿಲಿಯೆಂಟ್ ಆರ್ಕಿಯಾಲಜಿಸ್ಟ್. ಸಾಹಿತ್ಯ ಪಠ್ಯಗಳ ಓದಿನ ಸಂದರ್ಭದಲ್ಲೂ ಅವರ ಈ ಆರ್ಕಿಯಾಲಜಿಸ್ಟ್‌ತನವೇ ಮುನ್ನೆಲೆಗೆ ಬರುತ್ತದೆ. ಆದರೂ ಕನ್ನಡ ಚಿಂತನೆ ಭ್ರಾಮಿನಿಕಲ್ ಚೌಕಟ್ಟಿನಿಂದ, ಧಾರ್ಮಿಕ ಚೌಕಟ್ಟಿನಿಂದ, ಪ್ರಾದೇಶಿಕ ಚೌಕಟ್ಟಿನಿಂದ ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ. ಕನ್ನಡ ಚಿಂತಕರು ಬೌದ್ಧಿಕ ಮಹತ್ವಾಕಾಂಕ್ಷಿಗಳಾಗಬೇಕು. ಈಗಾಗಲೇ ಅಂಥದ್ದನ್ನು ಕೆಲವರು ಮಾಡುತ್ತಿದ್ದಾರೆಂದು ಕೇಳಿರುವೆ. ಕನ್ನಡದ ನನ್ನ ಓದು ಈ ದೃಷ್ಟಿಯಿಂದ ಸೀಮಿತ ಎಂದರು ಶೆಲ್ಡನ್ ಪೊಲಾಕ್. ಕನ್ನಡದಲ್ಲಿ ಪ್ರಾಚೀನ ಪಠ್ಯಗಳ ಬಗ್ಗೆ ಬರುತ್ತಿರುವ ಹೊಸ ಬರವಣಿಗೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇರುವ ಅಸಹಾಯಕತೆ ಅವರಲ್ಲಿ ಕಂಡುಬರುತಿತ್ತು.
ಯು.ಆರ್.ಅನಂತಮೂರ್ತಿ
ಮತ್ತೆ ಕನ್ನಡದ ಜೊತೆಗಿನ ತಮ್ಮ ಒಡನಾಟ ನೆನಪಿಸಿಕೊಳ್ಳತೊಡಗಿದರು ಯು.ಆರ್.ಅನಂತಮೂರ್ತಿ ನನಗೆ ನಲವತ್ತು ವರ್ಷಗಳಿಂದ ಗೆಳೆಯರಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಇಂಗ್ಲಿಷಿನಲ್ಲೇ ಬರೆದು ಲೇಖಕರಾಗಿರಬಹುದಿತ್ತು. ಆದರೆ ಅವರು ಕನ್ನಡದಲ್ಲಿ ಬರೆಯಲು ನಿರ್ಧರಿಸಿದ್ದು ಉತ್ತಮ ನಿಲುವು. ತುಳು, ಕೊಂಕಣಿ, ಕೊಡವ ಭಾಷೆಯವರು ತಮ್ಮ ಓದುಗರ ಸಂಖ್ಯೆ ಕಡಿಮೆಯೆಂದು ಅನ್ಯ ಭಾಷೆಯಲ್ಲಿ ಬರೆಯಲು ತೊಡಗಬಾರದು. ತಮ್ಮ ಭಾಷೆಯಲ್ಲೆ ಬರೆಯಬೇಕು. ಅದು ಶ್ರೇಷ್ಠವಾಗಿದ್ದರೆ ಒಂದಿಲ್ಲ ಒಂದು ದಿನ ಜಗತ್ತಿಗೆ ಚಾಚಿಕೊಳ್ಳುತ್ತದೆ. ಸಾಹಿತ್ಯದಲ್ಲಿ ಮುಕ್ತತೆ ಅಗತ್ಯ. ವಿಭಜನೆಯ, ಸಣ್ಣಮನಸ್ಸಿನ, ಬಹುಮತದ ಆಧಾರದ ಮೇಲೆಯೇ ಎಲ್ಲವನ್ನೂ ನೋಡುವ ಮನಸ್ಥಿತಿ ಬದಲಾಗಬೇಕು ಎಂದರು. ಅವರ ಈ ಯೋಚನಾ ಕ್ರಮ ನನ್ನಲ್ಲಿ ಕುತೂಹಲವನ್ನೂ, ಸಂತೋಷವನ್ನೂ ಉಂಟು ಮಾಡಿತು. ಅದರಲ್ಲೂ ಸಣ್ಣ ಸಣ್ಣ ಭಾಷೆಗಳು ತಮ್ಮ ಸಂಖ್ಯೆಯ ಕೊರತೆಯಿಂದಾಗಿ ಅವಕಾಶವಂಚಿತರಾಗಬಾರದೆಂಬ ನಿಲುವು ಮುಖ್ಯವಾದದ್ದು. ಎಲೀಟಿಸ್ಟ್ ನೋಟಗಳಿಗೆ ಶೆಲ್ಡನ್ ಪೊಲಾಕ್‌ರ ಚಿಂತನೆ ಹೊರತಾಗಿತ್ತು.
ಬೆಳಗ್ಗೆಯೂ ನಾನು ಗೋಷ್ಠಿ ಕೇಳಿಸಿಕೊಂಡೆ. ನಿಮ್ಮ ಮಾತಿನಲ್ಲಿ ಶಾಸ್ತ್ರೀಯ ಪಠ್ಯಗಳ ಭವಿಷ್ಯದ ಕುರಿತು ಆತಂಕವಿತ್ತು. ನಿಮ್ಮ ಕೆಲ ಲೇಖನಗಳಲ್ಲೂ ಈ ಆತಂಕ ಇದೆ. ಈ ಆತಂಕ ಇಷ್ಟು ದಟ್ಟವಾಗಲು ಕಾರಣ? ನನ್ನ ಪ್ರಶ್ನೆ ಉದ್ದೇಶಪೂರ್ವಕವಾಗಿತ್ತು. ಅವರಿಂದ ಬರುವ ಒಳನೋಟಗಳಿಗಾಗಿ ನಾನು ಕಾದಿದ್ದೆ. ಕೆಲವು ದಶಕಗಳ ತರುವಾಯ ಪ್ರಾಚೀನ ಪಠ್ಯಗಳನ್ನು ವಿದ್ವತ್‌ಪೂರ್ಣವಾಗಿ ಹೇಳುವವರೆ ಇರುವುದಿಲ್ಲವೇನೊ ಎಂಬ ಆತಂಕ ಎಲ್ಲೆಡೆ ಇದೆಯಲವೇ? ಬರೀ ಸಂಸ್ಕೃತ ಕನ್ನಡದಲ್ಲಿ ಎಂ.ಎ. ಮಾಡಿದ ಮಾತ್ರಕ್ಕೆ ವಿದ್ವತ್ತು ಪಾಂಡಿತ್ಯ ದಕ್ಕುವುದಿಲ್ಲ. ಅದಕ್ಕಾಗಿ ವ್ಯಕ್ತಿತ್ವವನ್ನು ಪೂರ್ಣವಾಗಿ ತೊಡಗಿಸಬೇಕಾಗುತ್ತದೆ. ನೈಜ ವಿದ್ವಾಂಸರನ್ನು ಸಂಸ್ಥೆಗಳು ವಿಶ್ವವಿದ್ಯಾನಿಲಯಗಳು ರೂಪಿಸಬೇಕಾಗುತ್ತದೆ ಶೆಲ್ಡನ್ ಪೊಲಾಕ್‌ರ ಮಾತಿನ ವೇಗದಲ್ಲಿ ತುಸು ಕಾಠಿಣ್ಯವಿತ್ತು.
ಇದು ಎಲ್ಲೆಡೆಯೂ ಕಂಡುಬರುತ್ತಿರುವ ಸ್ಥಿತಿಯೇ? ಅಥವಾ ಬರೀ ಭಾರತದ ವಿದ್ಯಮಾನವೇ? ಎಂದೆ.
ಶಾಸ್ತ್ರೀಯ ಅಧ್ಯಯನದ ಹಿನ್ನಡೆ ಈಗ ಒಂದು ಜಾಗತಿಕ ವಿದ್ಯಮಾನವಾಗಿದೆ ಎಂದರು. ನೀರಿನಂತೆ ಅವರ ಮಾತು ಹರಡಿಕೊಳ್ಳತೊಡಗಿತು. ನೋಡಿ ಕ್ಲಾಸಿಕಲ್ ಐರೋಪ್ಯ ಪಠ್ಯಗಳು, ಇಸ್ಲಾಮಿಕ್ ಪಠ್ಯಗಳು, ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಕ್ಲಾಸಿಕಲ್ ಪಠ್ಯಗಳು, ಚೈನೀಸ್ ಪಠ್ಯಗಳು ಇತ್ಯಾದಿ. ಹೊಸ ಚರ್ಚೆಯಿಂದ, ಸೈದ್ಧಾಂತಿಕ ತಿಳಿವಳಿಕೆಯಿಂದ ವಂಚಿತವಾಗುತ್ತಿವೆ. ಭಾರತದಿಂದ ಬರುವ ಯಾರಿಗಾದರೂ ಏನನ್ನು ಸಂಶೋಧನೆ ಮಾಡುವಿರಿ? ಎಂದರೆ ಆಧುನಿಕ ಸಾಹಿತ್ಯ ಎನ್ನುತ್ತಾರೆ. ಇಂಥದ್ದೊಂದು ಪ್ರಾಚೀನ ಪಠ್ಯ ನಿಮ್ಮ ಭಾಷೆಯಲ್ಲಿದೆ ಅದರ ಕುರಿತು ಅಧ್ಯಯನ ಮಾಡುವಿರಾ ಎಂದರೆ ಅಯ್ಯಾ ಎಂದು ಹಿಂಜರಿಯುವರು. ಕ್ಲಾಸಿಕಲ್ ಪಠ್ಯಗಳ ಅಧ್ಯಯನವೆಂದರೆ ಅದೇನೊ ಉಪಯುಕ್ತವಲ್ಲದ್ದು, ಹಳೆಕಾಲದ ಕೆಲಸ ಎಂಬ ನಿರಾಸಕ್ತಿ ಬೆಳೆದಿದೆ. ಇನ್ನು ಕೆಲವರು ಅದನ್ನು ವಿಪರೀತಗೊಳಿಸಿ ಅರ್ಥವಿಲ್ಲದ್ದೆಲ್ಲ ಅಗೆಯತೊಡಗುತ್ತಾರೆ. ಅದನ್ನು ಬಾರದ ಸಂಗತಿಯಾಗಿಸುವುದೇ ಹೆಚ್ಚು. ಇಂಥ ನಿರಾಸಕ್ತಿ ಮತ್ತು ಅತೀ ಮಾಡುವ ವಾತಾವರಣ ವಿಶ್ವವಿದ್ಯಾನಿಲಯಗಳಲ್ಲೆ ಇದೆ. ಇದಕ್ಕೆ ಯಾರು ಕಾರಣ? ನಮ್ಮ ಪಠ್ಯಗಳ ಹೊಸ ಚರ್ಚೆ ನಮಗೇ ಬೇಡವಾಯಿತೇ? ಎರಡನೇ ಅಥವಾ ಮೂರನೇ ದರ್ಜೆಯ ಲೇಖಕರ ಕೃತಿಗಳನ್ನಿಟ್ಟುಕೊಂಡು ಸಂಶೋಧನೆಗೆ ತೊಡಗುತ್ತಾರೆ. ಪಾಶ್ಚಾತ್ಯರ ಮೂರನೇ ದರ್ಜೆಯ ಲೇಖಕರೂ ಕೂಡ ಇವರ ಸಂಶೋಧನೆಗೆ ಒಳಗಾಗುತ್ತಾರೆ. ನಾವು ವಿದೇಶಿ ಬರಹಗಾರನೊಬ್ಬನ ಮೇಲೆ ಸಂಶೋಧನೆ ಮಾಡಿದೆವೆಂಬ ಒಣ ಹೆಮ್ಮೆಯಲ್ಲಿ ಕಾಲ ಕಳೆಯುತ್ತಾರೆ. ಇದನ್ನು ಮೀರಬೇಕಾದದ್ದೇ ಭಾರತದ ಹೊಸ ಸಂಶೋಧಕರ ಮುಂದಿರುವ ಸವಾಲು. ಅವರ ಮಾತಿಗೆ ತಕ್ಕಂತೆ ಅನೇಕ ಪಿ.ಎಚ್.ಡಿಗಳು ನನಗೆ ನೆನಪಾಗತೊಡಗಿದವು. ಈಗ ಕನ್ನಡ ಅಧ್ಯಯನ ಮಾಡಿದವರು ಕ್ಲಾಸಿಕಲ್ ಪಠ್ಯಗಳ ಜೊತೆ ಇಟ್ಟುಕೊಳ್ಳುವ ಸಂಬಂಧ ಕೂಡ ಅಷ್ಟಕಷ್ಟೆ ಎನಿಸಿತು. ಇಂಗ್ಲಿಷ್ ಅಧ್ಯಯನ ಮಾಡಿದ ಬಹುತೇಕರು ಭಾರತದ ಕ್ಲಾಸಿಕಲ್ ಪಠ್ಯಗಳ ಜೊತೆಗೆ ಸಂವಾದ ಬೇಕಾಗಿಲ್ಲವೆಂದು ತಿಳಿದಂತಿದೆ. ಇವರ ನಡುವೆ ಎಂ.ಎಂ.ಕಲಬುರ್ಗಿ, ಹಂಪನಾ, ಷ.ಷಟ್ಟರ್, ಡಿ.ಆರ್.ನಾಗರಾಜ್, ಜಿ.ಎನ್.ದೇವಿ, ಬಾಲಚಂದ್ರ ನೇಮಾಡೆ ಅವರ ಕೆಲಸಗಳ ಮಹತ್ವವೂ ನೆನಪಾಯಿತು. ಡಿ.ಆರ್.ನಾಗರಾಜ್ ಅಕ್ಷರ ಚಿಂತನ ಮಾಲೆಯಲ್ಲಿ ಭತೃಹರಿಯನ್ನೂ, ಬಾಬಾ ಶೇಕ್ ಫರೀದನನ್ನೂ, ತಮಿಳು ಕಾವ್ಯಮೀಮಾಂಸೆಯನ್ನೂ, ಸಿದ್ದಲಿಂಗಯ್ಯ ಅವರ ಊರುಕೇರಿಯನ್ನೂ ಒಟ್ಟಿಗೆ ಕಲೆಹಾಕಿದ್ದರು. ಅವರ ದೂರದೃಷ್ಟಿ ಅಪರೂಪದ್ದು.
ಸ್ವಾತಂತ್ರ್ಯೋತ್ತರ ಕಾಲಘಟ್ಟದೊಳಗೆ ಭಾರತದಲ್ಲಿ ಪ್ರಾಚೀನ ಪಠ್ಯಗಳ ಅಧ್ಯಯನ ಕುಸಿಯುತ್ತಿರುವುದಕ್ಕೆ ನಿಮ್ಮ ಪ್ರಕಾರ ಯಾವ ಕಾರಣಗಳನ್ನು ಗುರುತಿಸಿದ್ದೀರಿ ಎಂದು ಕೇಳಿದೆ. ಅವರ ಉತ್ತರ ಸಿದ್ಧವಾಗಿಯೇ ಇತ್ತು. ಶಾಸ್ತ್ರೀಯ ಅಧ್ಯಯನ ಕ್ರಮಗಳನ್ನು ಆಳವಾಗಿ ಯೋಚಿಸದೆ ಅದನ್ನು ಶಿಕ್ಷಣದ ಒಂದು ಸಾಮಾನ್ಯ ಭಾಗವಾಗಿ ಮಾತ್ರ ಇಡಲಾಯಿತು. ಹತ್ತು ಪತ್ರಿಕೆಗಳಲ್ಲಿ ಇದು ಕೂಡ ಒಂದು ಪತ್ರಿಕೆಯಾಗಿಬಿಟ್ಟಿತ್ತ್ತು. ಹೀಗೆ ಸುಮ್ಮನೆ ಯಾವ ಸಿದ್ಧತೆಯಿಲ್ಲದೆ ಕಲಿಸ ಹೊರಟರೆ ಇದರ ವಿದ್ವತ್ತು ದಕ್ಕುವುದಿಲ್ಲವೆಂಬ ಸಣ್ಣ ಊಹೆಯನ್ನೂ ಕೂಡ ಮಾಡಲಿಲ್ಲ. ಶಾಸ್ತ್ರೀಯ ಸಾಹಿತ್ಯಾಧ್ಯಯನದ ಪ್ರತ್ಯೇಕ ಕ್ರಮಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಇಲ್ಲವಾದರೆ ಹತ್ತರಲ್ಲಿ ಹನ್ನೊಂದಾಗಿ ನಿಧಾನವಾಗಿ ವಿದ್ಯಾರ್ಥಿಗಳ ಪ್ರಜ್ಞೆಯಿಂದ ದೂರ ಸರಿಯುತ್ತಲೇ ಹೋಗುತ್ತದೆ ಎಂದರು. ಶಾಸ್ತ್ರೀಯ ಅಧ್ಯಯನಕ್ಕೆ ಬೇಕಾದ ಸಿದ್ಧತೆಯನ್ನು ಭಾರತದಂಥ ದೇಶ ನಿರ್ವಹಿಸಿದ ಕುರಿತು ಅವರಿಗೆ ಸಮಾಧಾನವಿರಲಿಲ್ಲ. ಅವರ ಮಾತು ಮುಂದುವರಿದಿತ್ತು ಭಾರತದಲ್ಲಿ ಶಾಸ್ತ್ರೀಯ ಅಧ್ಯಯನದ ತರಬೇತಿ ನೀಡಲು ಯಾವ ಸಂಸ್ಥೆಗಳೂ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಇವುಗಳ ಕಲಿಕೆ ಬರೀ ಪರೀಕ್ಷೆಗಷ್ಟೆ ಸೀಮಿತಗೊಂಡಿದೆ. ಭಾರತದಲ್ಲಿ ಸಾಮಾಜಿಕ ವಿಜ್ಞಾನಗಳ ಅಧ್ಯಯನಕ್ಕೆ ಮಹತ್ವದ ಸಂಸ್ಥೆಗಳಿವೆ. ವಿಜ್ಞಾನ ತಂತ್ರಜ್ಞಾನಗಳ ಅಧ್ಯಯನಕ್ಕೆ ಪ್ರತ್ಯೇಕ ಸಂಸ್ಥೆಗಳಿವೆ. ಆದರೆ ಶಾಸ್ತ್ರೀಯ ಸಾಹಿತ್ಯಾಧ್ಯಯನಕ್ಕೆ ಇಂಥ ಪ್ರತ್ಯೇಕ ಸಂಸ್ಥೆಗಳಿಲ್ಲ. ಶಾಸ್ತ್ರೀಯ ಪಠ್ಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಬರುತಿದ್ದ ಜರ್ನಲ್‌ಗಳಲ್ಲಿ ಮೊದಲಿನ ಗುಣಮಟ್ಟ ಉಳಿದಿಲ್ಲ. ಶಾಸ್ತ್ರೀಯ ಅಧ್ಯಯನಕ್ಕೆ ಒಂದಾದರೂ ಅಂತರ್‌ರಾಷ್ಟ್ರೀಯ ಜರ್ನಲ್ ತರಲು ಯಾರೂ ಸಿದ್ಧತೆ ನಡೆಸಿದಂತಿಲ್ಲ. ಎಷ್ಟೆಲ್ಲ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಸಂಸ್ಥೆಗಳಿವೆ. ಭಾರತದ ವಿದ್ವಾಂಸರು, ಬೇರೆ ದೇಶದ ವಿದ್ವಾಂಸರು ಇದರಲ್ಲಿ ಬರೆಯುವಂತಾಗಬೇಕು. ಒಂದು ಮುಖ್ಯವಾದ ಜರ್ನಲ್ ರೂಪಿಸುವುದು, ಅವುಗಳನ್ನು ಶಿಸ್ತಿನಿಂದ ಮುನ್ನಡೆಸುವುದು ಒಂದು ಬೌದ್ಧಿಕ ಜವಾಬ್ದಾರಿ ತಾನೇ? ಅಲ್ಲದೆ ಭಾರತೀಯ ವಿದ್ವಾಂಸರು ವಿದೇಶಿ ಜರ್ನಲ್‌ಗಳಿಗೆ ತಮ್ಮ ಲೇಖನಗಳನ್ನು ಕಳಿಸುವುದು ಕೂಡ ಅಪರೂಪ. ಇದೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಕಳೆದ ನಲವತ್ತು ವರ್ಷಗಳಲ್ಲಿ ಶಾಸ್ತ್ರೀಯ ಪಠ್ಯಗಳ ಅಧ್ಯಯನ ಭಾರತದೊಳಗೆ ತೀವ್ರಗತಿಯಲ್ಲಿ ಕುಸಿದಿದೆ ಎಂದು ಮೌನವಾದರು.
ಅವರು ಸ್ವಲ್ಪ ನಾಸ್ಟಾಲ್ಜಿಕ್ ಆದಂತಿತ್ತು. 1947ರ ಆಸುಪಾಸಿನಲ್ಲಿ ಭಾರತ ಘನ ವಿದ್ವಾಂಸರ ತಾಣವಾಗಿತ್ತು. ಶಾಸ್ತ್ರೀಯ ಸಾಹಿತ್ಯ ಚರಿತ್ರೆ, ಪಠ್ಯ ಇವುಗಳ ಅಧ್ಯಯನದಲ್ಲಿ ಅವರನ್ನು ಮೀರಿಸಿದವರು ವಿರಳ. ಜಗತ್ತಿನ ಯಾವುದೇ ವಿದ್ವಾಂಸರಿಗೆ ಸರಿಸಮಾನರಾಗಿ ನಿಲ್ಲಬಲ್ಲವರಾಗಿದ್ದರು. ಬಹುಸಾಂಸ್ಕೃತಿಕ ಸಾಹಿತ್ಯ ಚರಿತ್ರೆ ನಿರಂತರವಾಗಿ ಇಂಡಿಯಾದಲ್ಲಿ ಬೆಳೆಯುತ್ತಾ ಬಂತು. ಎರಡು ಮೂರು ತಲೆಮಾರುಗಳು ಬಂದ ನಂತರವೂ ಅವರ ಬರಹಗಳ ಪ್ರಾಮುಖ್ಯತೆ ಒಂಚೂರು ಕಡಿಮೆಯಾಗಲಿಲ್ಲ. ಅದನ್ನು ಮೀರಿಸುವ ಬರಹ ಬಂದದ್ದೂ ಕಡಿಮೆ. ಯಾಕೆಂದರೆ ಅವುಗಳ ಮಟ್ಟ ಹಾಗಿತ್ತು. ಈಗ ಅಲ್ಲಲ್ಲಿ ಪ್ರತಿಭಾವಂತರ ಪಡೆ ಇದೆಯಾದರೂ ಹಿಂದಿನವರಷ್ಟು ಆಳವಾಗಲಿ, ವಿಸ್ತಾರವಾಗಲಿ ಇಲ್ಲ. ಈಗ ಇರುವ ವಿದ್ವಾಂಸರಲ್ಲು ಬಹುತೇಕರು ಎಪ್ಪತ್ತರ ಆಸುಪಾಸಿನಲ್ಲಿದ್ದಾರೆ. ಇದು ನನ್ನನ್ನು ಚಿಂತೆಗೀಡು ಮಾಡಿದೆ. ಭಾರತೀಯ ವಿಶ್ವವಿದ್ಯಾನಿಲಯಗಳ ಶಿಕ್ಷಣ ಮತ್ತು ಪರಿಸರ ಯಾಕೆ ಅಂಥ ವಿದ್ವಾಂಸರನ್ನು ನಿರ್ಮಿಸುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಶಾಸ್ತ್ರೀಯ ಪಠ್ಯಗಳ ಅಧ್ಯಯನ ಭಾರತದಲ್ಲಿ ಒಂದು ದೊಡ್ಡ ಖಾಲಿತನವನ್ನು ಉಂಟುಮಾಡಲಿದೆ. ಇದೇನೂ ಅಂಥ ಸಂತೋಷದಾಯಕವಾದ ಸಂಗತಿಯಲ್ಲ, ಭಾರತೀಯರ ಮಟ್ಟಿಗೂ, ಭಾರತವನ್ನು ಪ್ರೀತಿಸುವವರ ಮಟ್ಟಿಗೂ. ದೇಶವೊಂದನ್ನು ಪ್ರೀತಿಸಲು ಶೆಲ್ಡನ್ ಪೊಲಾಕ್‌ರಿಗೆ ತಮ್ಮದೇ ಕಾರಣಗಳಿದ್ದವು. ಅವು ಹುಸಿ ರಾಷ್ಟ್ರೀಯತೆಯಿಂದ ಪ್ರೇರಿತಗೊಂಡಿರಲಿಲ್ಲ. ಮೊನ್ನೆ ತಾನೆ ಅವರನ್ನು ಮೂರ್ತಿ ಕ್ಲಾಸಿಕಲ್ ಲೈಬ್ರರಿ ಸೀರೀಸ್‌ನಿಂದ ತೆಗೆಯಬೇಕೆಂದು ಕೂಗಾಡುತ್ತಿರುವವರ ಸಣ್ಣತನ ನೆನಪಿಸಿಕೊಂಡು ಮರುಕಪಡುವಂತಾಯಿತು.
ಶೆಲ್ಡನ್ ಪೊಲಾಕ್‌ರ ಓದಿನ ಹರುಹು ಕೂಡ ದೊಡ್ಡದೆ. ಡಿ.ಡಿ.ಕೋಸಾಂಬಿಯವರ ಬರಹಗಳನ್ನೋದಿ ನಾನು ಕಲಿತಿರುವೆ. ಅವರ ಶಾಸ್ತ್ರೀಯ ಅಧ್ಯಯನ ಕ್ರಮಗಳು, ಚರಿತ್ರೆ ಓದುವ ವಿಧಾನಗಳು, ಹಳೆಯ ಪಠ್ಯಗಳೊಂದಿಗಿನ ಸಂವಾದದ ಬಗೆಗಳು ಶ್ರೇಷ್ಠ ಮಟ್ಟದ್ದು. ನೋಡಿ ಸ್ವಾತಂತ್ರಪೂರ್ವದ ಸಂಸ್ಕೃತ ವಿದ್ವಾಂಸರ ಉತ್ತರಾಧಿಕಾರಿಗಳೆಂದು ಈಗ ಯಾರನ್ನಾದರೂ ಹೆಸರಿಸಲು ತುಂಬಾ ಕಷ್ಟವಾಗುತ್ತದೆ. ಎಸ್.ಎನ್.ದಾಸಗುಪ್ತ, ಎಸ್.ಕೆ.ಡೇ, ಮೈಸೂರು ಹಿರಿಯಣ್ಣ, ಪಿ.ವಿ.ಕಾಣೆ, ಎಸ್.ರಾಧಾಕೃಷ್ಣನ್, ವೆಂಕಟ್ ರಾಘವನ್, ವಿ.ಎಸ್.ಸುಂಕ್ತಂಕರ್ ಭಾರತದ ಹಲವು ಪ್ರದೇಶಗಳಿಂದ ಸಂಸ್ಕೃತ ವಿದ್ವಾಂಸರು ಮೂಡಿಬಂದಿದ್ದರು. ಸಂಸ್ಕೃತ ಸಾಹಿತ್ಯ ಕುರಿತು ಹಾಕಿಕೊಂಡ ಯೋಜನೆಗಳೆಲ್ಲ ಮೂವತ್ತು ನಲವತ್ತು ವರ್ಷಗಳ ಹಿಂದಿನದ್ದು. ಪ್ರಾಕೃತ ಹಾಗೂ ಅಪಭ್ರಂಶಗಳ ಅಧ್ಯಯನವಂತೂ ಸಂಪೂರ್ಣ ಸ್ಥಗಿತಗೊಂಡಿದೆ. ಎ.ಎನ್.ಉಪಾಧ್ಯಾಯರು ಮಾಡಿದ ಕೆಲಸಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಗೆ ಮಾತ್ರವಲ್ಲ ಭಾರತದ ಉಳಿದ ಭಾಷೆಗಳ ಮಟ್ಟಿಗೂ ಈ ಮಾತು ನಿಜ ಎಂದರು. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ವಾತಾವರಣ ಕೊಂಚಮಟ್ಟಿಗೆ ಆಶಾದಾಯಕವಾಗಿರಬಹುದೇನೊ ಎಂತಲೂ ಮಾತು ಸೇರಿಸಿದರು. ಆದರೆ ಅವರು ಇದನ್ನಾಡುವಾಗ ಅಷ್ಟೇನೂ ಆತ್ಮವಿಶ್ವಾಸವಿಲ್ಲದೆ ಆಡುತ್ತಿರುವ ಮಾತಾಗಿ ಕಾಣುತಿತ್ತು.
ನನ್ನ ಈ ಪ್ರಶ್ನೆಯನ್ನು ಶೆಲ್ಡನ್ ಪೊಲಾಕ್ ನಿರೀಕ್ಷಿಸಿದ್ದರೆನಿಸುತ್ತದೆ ಶಾಸ್ತ್ರೀಯ ಅಧ್ಯಯನಕ್ಕೆ ಬೇಕಾದ ವಾತಾವರಣ ರೂಪುಗೊಳ್ಳುವಿಕೆಗೆ ನಿಮ್ಮದೇ ವಿಚಾರಗಳಿರುವುದಾಗಿ ಹೇಳಿರುವಿರಿ ಏನದು? ಈಗ ತತ್ಕಾಲದ ಯೋಜನೆಗಳಿಂದ ಅಷ್ಟು ಪ್ರಯೋಜನ ವಿಲ್ಲವೇನೋ? ದೀರ್ಘಕಾಲದ ಯೋಜನೆಗಳೆ ಬೇಕಾಗಬಹುದಲ್ಲವೇ? ಯಾಕೆಂದರೆ ಇದು ಅಭಿರುಚಿ ಮತ್ತು ಪರಿಶ್ರಮದಿಂದ ರೂಪುಗೊಳ್ಳಬೇಕಾದ ವಿದ್ವತ್ತು ಎಂದೆ. ನೀವಿದನ್ನು ಕೇಳುತ್ತೀರೆಂದು ಗೊತ್ತಿತ್ತು ಎನ್ನವಂತೆ ತಲೆ ಆಡಿಸುತ್ತ ಶೆಲ್ಡನ್ ಪೊಲಾಕ್ ವಿವರಿಸಲು ಮುಂದಾದರು. ಪರಿಸ್ಥಿತಿ ಹೀಗೆ ಒಡೆದು ಹೋಗಿರುವಾಗ ಏನಾದರೂ ಮಾಡಬೇಕಲ್ಲವೇ? ಸಮಸ್ಯೆಯೊಂದು ಹುಟ್ಟಿದಾಗ ಅದರ ನಿವಾರಣೆಯ ಮಾರ್ಗಗಳೂ ಇರುತ್ತವೆ. ಅದನ್ನು ಕಂಡುಕೊಳ್ಳಬೇಕಷ್ಟೆ. ಮಾನವಿಕ ಮತ್ತು ಶಾಸ್ತ್ರೀಯ ಭಾಷೆಗಳ ಅಧ್ಯಯನದಲ್ಲಿ ಹುಟ್ಟಿಕೊಂಡ ತೊಡಕುಗಳನ್ನು ನಿವಾರಿಸಬೇಕಾಗಿದೆ. ಅದಕ್ಕಾಗಿ ನಾವು ಕೆಲವರು ಕೆಲ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಮೂರ್ತಿ ಕ್ಲಾಸಿಕಲ್ ಲೈಬ್ರರಿಯ ಅನುವಾದ ಮತ್ತು ಪ್ರಕಟಣಾ ಯೋಜನೆ ಕೂಡ ಅದರಲ್ಲೊಂದು. ಇದು ಯಾರೋ ಒಬ್ಬರಿಂದ ಇಬ್ಬರಿಂದ ಸಾಧ್ಯವಾಗುವಂಥದ್ದಲ್ಲ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಒಟ್ಟಿಗೆ ಸೇರಿ ಕೆಲ ಕೃತಿಗಳನ್ನು ಹೊರತರುತ್ತಿದ್ದೇವೆ. ಬೇರೆಯವರೂ ಭಿನ್ನವಾದ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಒಟ್ಟಾರೆ ಶಾಸ್ತ್ರೀಯ ಪಠ್ಯಗಳ ಅಧ್ಯಯನದ ಹೊಸ ಸಾಧ್ಯತೆ ಗಳಿಗೆ ಕಾರಣವಾಗಬೇಕಷ್ಟೆ. ಇಲ್ಲವಾದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ದುಃಖ, ದುಃಖದ ಕಾರಣಗಳು, ದುಃಖದ ನಿವಾರಣೆ ಈ ದಾರಿಯಲ್ಲಿ ನಾನು ನಂಬಿಕೆಯಿಟ್ಟವನು ಎಂದರು. ಅವರಲ್ಲಿ ಈ ಕುರಿತು ಇನ್ನಷ್ಟು ಚಿಂತನೆಗಳಿದ್ದವು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ಸ್ಟಡೀಸ್ ಸಂಸ್ಥೆಯನ್ನು ಸ್ಥಾಪಿಸಿ ಭಾರತದ ಬೇರೆ ಬೇರೆ ಭಾಷೆಗಳ ಶಾಸ್ತ್ರೀಯ ಪಠ್ಯಗಳ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸೆಸ್ ತರಹ ಈ ಸಂಸ್ಥೆ ಕೆಲಸ ಮಾಡಬೇಕು. ಫಿಲಾಲಜಿಯ ವಿಭಾಗವನ್ನು ಕೆಲವಾದರೂ ವಿಶ್ವವಿದ್ಯಾಲಯಗಳಲ್ಲಿ ತೆರೆಯಬೇಕು. ಐಐಟಿಗಳಲ್ಲಿರುವ ಮಾನವಿಕಗಳನ್ನು ಇನ್ನಷ್ಟು ವೈವಿಧ್ಯಮಯಗೊಳಿಸಬೇಕು. ಮಾರುಕಟ್ಟೆಗೆ ತಕ್ಕುದಾದ ವಿಭಾಗಗಳಾಚೆಗೆ ಜ್ಞಾನಕೇಂದ್ರಿತ, ಚಿಂತನಾ ಕೇಂದ್ರಿತ ವಿಭಾಗಗಳ ಬೆಳವಣಿಗೆಗೂ ಪ್ರಾಶಸ್ತ್ಯ ಕೊಡಬೇಕು. ಶಾಸ್ತ್ರೀಯ ಸಾಹಿತ್ಯದ ಮೇಲೆ ಪ್ರಶಸ್ತಿಗಳನ್ನು ಸ್ಥಾಪಿಸುವುದು ಸುಲಭ. ಕೆಲ ವರ್ಷಗಳ ತರುವಾಯ ಈ ಪ್ರಶಸ್ತಿಗಳನ್ನು ಯಾರಿಗೆ ಕೊಡುವಿರಿ? ಎಂದು ಪ್ರಶ್ನಾರ್ಥಕವಾಗಿ ದಿಟ್ಟಿಸಿದರು. ಹೊಸ ಪೀಳಿಗೆಯ ನಿರ್ಮಾಣಕ್ಕೆ ಬೇಕಾದ ರೂಪುರೇಷೆಯನ್ನು ಸಿದ್ಧಪಡಿಸದೆ ಬೇರೆ ದಾರಿಯಿಲ್ಲ ಎನ್ನುವಂತಿತ್ತು ಅವರ ಮಾತಿನ ವೈಖರಿ.
ನೀವು ಫಿಲಾಲಜಿ ವಿಭಾಗದ ಕುರಿತು ಹೇಳಿದಿರಿ. ಏನಿದು ಫಿಲಾಲಜಿ ವಿಭಾಗ? ಇದರ ಸ್ವರೂಪ ಹೇಗಿರುತ್ತದೆ? ತೀರಾ ಪ್ರಾಥಮಿಕ ಪ್ರಶ್ನೆ ಎನಿಸಿದರೂ ನನಗೆ ತಿಳಿದುಕೊಳ್ಳಬೇಕಾಗಿತ್ತು. ಅದಕ್ಕವರು ನಾನು ಫಿಲಾಲಜಿಯ ಪ್ರಾಧ್ಯಾಪಕ. ಸಾಹಿತ್ಯ ಭಾಷೆಯ ಚರಿತ್ರೆಯನ್ನು ಅಧ್ಯಯನ ಮಾಡುವ ಒಂದು ಶಿಸ್ತು ಇದು. ಸಾಹಿತ್ಯ ವಿಮರ್ಶೆ, ಚರಿತ್ರೆ, ಭಾಷಾಶಾಸ್ತ್ರ ಮೂರರ ಮಿಶ್ರಣ ಇಲ್ಲಿದೆ. ಪ್ರಾಚೀನ ಸಾಹಿತ್ಯ ಪಠ್ಯಗಳನ್ನು ಮತ್ತು ಬರಹದ ದಾಖಲೆಗಳನ್ನು ಬಳಸಿ ಶಬ್ದಗಳ ಅರ್ಥ ಚರಿತ್ರೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ಈಗ ಅಮೆರಿಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಅದು ಒಂದು ವಿಷಯವಾಗಿ ಅಧ್ಯಯನಕ್ಕೊಳಪಟ್ಟಿಲ್ಲ. ಇದು ಬಹಳ ಮುಖ್ಯವಾದ ವಿಭಾಗ. ಜಗತ್ತಿನ ಬೇರೆ ದೇಶಗಳಲ್ಲೂ ಪರಿಸ್ಥಿತಿ ಹಾಗೆಯೇ ಇದೆ. ಭಾರತದಲ್ಲೂ ಕೂಡ. ಮಾನವಿಕ ವಿದ್ಯಾರ್ಥಿಗಳು ತಲಸ್ಪರ್ಶಿಯಾದ ಜ್ಞಾನವನ್ನು ಪಡೆಯಬೇಕಾದರೆ ಇಂಥದ್ದೊಂದು ವಿಭಾಗದ ಅಗತ್ಯವನ್ನು ಮನಗಾಣಬೇಕು. ಜಾಗತಿಕ ಸಾಹಿತ್ಯ, ಅದರ ಭಾಷೆ, ಚರಿತ್ರೆಯನ್ನು ಹೊಸ ನೆಲೆಯಲ್ಲಿ ಗ್ರಹಿಸುವಂತಾಗಬೇಕು. ಗಣಿತ ಹೇಗೆ ಜಗತ್ತಿನೆಲ್ಲೆಡೆ ಹರಡಿಕೊಂಡಿದೆಯೊ ಹಾಗೆ ಫಿಲಾಲಜಿ ಹರಡಿಕೊಳ್ಳಬೇಕು. ಜಾಗತಿಕ ಶಾಸ್ತ್ರೀಯ ಪಠ್ಯಗಳನ್ನು ಸಿಲೆಬಸ್‌ನಲ್ಲಿಡಬೇಕು. ಅಮೆರಿಕದಲ್ಲಿ ನಾವು ಈ ಕುರಿತು ಚರ್ಚೆ ಮಾಡಿದ್ದೇವೆ. ಈ ವಿಭಾಗಕ್ಕೆ ಸೇರುವ ವಿದ್ಯಾರ್ಥಿ ಒಂದೆರಡು ವರ್ಷವಾದರೂ ಪಶ್ಚಿಮೇತರ ಭಾಷೆ ಸಾಹಿತ್ಯ ಕಲಿಯುವಂತಾಗಬೇಕು. ಹೊಸ ಸೈದ್ಧಾಂತಿಕ ಅನ್ವೇಷಣೆಯಲ್ಲಿ ತೊಡಗಬೇಕು. ಭಾಷೆಗಳ ಆಳವಾದ ಜ್ಞಾನ ಹೊಂದಿರುವ ಪ್ರತಿಭಾವಂತ ಪ್ರಾಧ್ಯಾಪಕರ ನೇಮಕವಾಗಬೇಕು. ವಿವಿಧ ದೇಶಗಳ, ವಿಶ್ವವಿದ್ಯಾನಿಲಯಗಳ ಸಂಯೋಜಕತ್ವದಲ್ಲಿ ಯೋಜನೆಗಳು ರೂಪುಗೊಳ್ಳಬೇಕು. ಜ್ಞಾನದ, ವಿಚಾರದ ಹಂಚಿಕೆಯಾದರೆ ಒಳ್ಳೆಯದಲ್ಲವೆ? ಆ್ಯಂಟನಿಯೊ ಗ್ರಾಮ್‌ಶಿ ಕೂಡ ಪ್ರಸಿದ್ಧ ಫಿಲಾಲಜಿಸ್ಟ್ ಆಗಿದ್ದ. ನಂತರದಲ್ಲಿ ಅಧಿಕಾರ ಜ್ಞಾನ ಸಂಬಂಧಿತ ಸಿದ್ಧಾಂತಗಳನ್ನು ಮಂಡಿಸಿದ. ಶೆಲ್ಡನ್ ಪೊಲಾಕ್‌ರ ಉದ್ದೇಶ ಇಂಥ ವಿಬಾಗದ ಅಗತ್ಯವನ್ನು ಶಾಸ್ತ್ರೀಯ ಪಠ್ಯಗಳ ಸಮೃದ್ಧ ಪರಿಸರ ಹೊಂದಿರುವ ದೇಶಗಳೆಲ್ಲ ಕಂಡುಕೊಳ್ಳಬೇಕೆಂಬುದೇ ಆಗಿತ್ತು.
ಜಗತ್ತಿನೆಲ್ಲಡೆ ವಿಜ್ಞಾನ ತಂತ್ರಜ್ಞಾನಕ್ಕೆ ಹರಿದು ಬರುವ ಹಣ, ಸರಕಾರಗಳು ಕೊಡುವ ಪ್ರಾಮುಖ್ಯತೆಯಿಂದಾಗಿ ಮಾನವಿಕ ಶಾಸ್ತ್ರಗಳು ಮಂಕಾಗಿದ್ದವು. ಇಂಥ ಇಕ್ಕಟ್ಟುಗಳನ್ನು ದಾಟಿ ಇವತ್ತು ಮಾನವಿಕ ಶಾಸ್ತ್ರಗಳು ಜಗತ್ತನ್ನು ತಿಳಿಯುವ ದಾರಿಗಳನ್ನು ತೆರೆದಿವೆ. ಎಲ್ಲಾ ಸೀಮೆಗಳು ವಿಸ್ತಾರಗೊಂಡಿವೆ. ಮಾನವಿಕಗಳು ಒಂದರೊಳಗೊಂದು ಬೆರೆತು ಹೊಸ ಅಧ್ಯಯನದ ಮಾದರಿಗಳನ್ನು ರೂಪಿಸಿವೆ. ಆದರೂ ಮಾನವಿಕಗಳ ಅಧ್ಯಯನಗಳಲ್ಲಿ ತೀವ್ರ ತರಹದ ಬದಲಾವಣೆಗಳನ್ನು ತರಬೇಕಾಗಿದೆ.
ಭಾರತ ಕಂಡುಕೊಂಡ ಅಭಿವೃದ್ಧಿ ಮಾದರಿಗಳು, ಶೈಕ್ಷಣಿಕ ಮಾದರಿಗಳು ಹಾಗೂ ಜಾಗತಿಕ ಮಾರುಕಟ್ಟೆ ಪ್ರೇರಿತ ವಿಭಾಗಗಳ ಭರಾಟೆಯಲ್ಲಿ ಇಂಥ ಅಧ್ಯಯನಗಳಿಗೆ ಪ್ರಾಮುಖ್ಯತೆ ತಪ್ಪಿತೆ? ಅಥವಾ ಇದು ಬರೀ ಸೌಲಭ್ಯಗಳ ಪ್ರಶ್ನೆ ಮಾತ್ರವಲ್ಲದೆ ಅಧ್ಯಯನಗಳ ಅಭಿರುಚಿ ನಾಶದ ಪ್ರಶ್ನೆಯೂ ಆಗಿದೆಯಲ್ಲವೆ? ಎಂದೆ. ಅದಕ್ಕವರು ನಿಜ, ಎಲ್ಲೆಡೆಗೆ ಸರಸ್ವತಿಯ ಸ್ಥಾನವನ್ನು ಲಕ್ಷ್ಮೀ ಆಕ್ರಮಿಸಿದ್ದಾಳೆ. ಹೀಗಾಗಿ ವಿಜ್ಞಾನ ತಂತ್ರಜ್ಞಾನದ ಅಧ್ಯಯನಗಳನ್ನು ಮಾತ್ರ ಲಾಭದಾಯಕವೆಂದು ಪರಿಗಣಿಸಲಾಗಿದೆ. ಉದ್ಯೋಗಾವಕಾಶಗಳೆ ವಿಷಯಗಳ ಆಯ್ಕೆಗೆ ಕಾರಣವಾದವು. ಪ್ರತಿಬಾವಂತರು ಶಾಸ್ತ್ರೀಯ ಪಠ್ಯಗಳ ಅಧ್ಯಯನಕ್ಕೂ ತಮ್ಮ ಭವಿಷ್ಯಕ್ಕೂ ತಾಳೆ ಹಾಕತೊಡಗಿದರು. ಹಾಗೆ ಮಾಡಿದಾಗ ಬಹುತೇಕವಾಗಿ ನಿರಾಸೆಯ ಉತ್ತರಗಳೇೆ ಲಭಿಸತೊಡಗಿದವು. ಅಲ್ಲದೆ ಸಂಸ್ಕೃತ ಭಾಷೆಯ ಬಗೆಗೆ ಬೆಳೆಸಿಕೊಂಡ ದ್ವೇಷ ಕೂಡ ಒಂದು ಮಟ್ಟಿಗೆ ಸಾಂಕ್ರಾಮಿಕ ರೋಗವಾಗಿ ಎಲ್ಲ ಭಾಷೆಯ ಪ್ರಾಚೀನ ಪಠ್ಯಗಳೆಡೆಗೆ ಹಬ್ಬತೊಡಗಿತು. ಹೀಗಾಗಿ ಶಾಸ್ತ್ರೀಯ ಪಠ್ಯಗಳಿಗೂ ಹೊಸಬರ ತಿಳಿವಳಿಕೆಗೂ ನಡುವೆ ಕಂದರ ಏರ್ಪಟ್ಟಿತು. ಈಗ ಅಳಿದುಳಿದ ಶಾಲೆಗಳಲ್ಲಿಯ ಸಂಸ್ಕೃತ ಕಲಿಕೆಯಂತೂ ಹಾಸ್ಯಾಸ್ಪದವಾಗಿದೆ. ಯಾವ ಮಕ್ಕಳಿಗೂ ಅದರ ಮೇಲೆ ಕನಿಷ್ಠ ಮಟ್ಟದ ಕೌಶಲ್ಯವೂ ದಕ್ಕುವುದಿಲ್ಲ ಎಂದರು, ಸಿಟ್ಟಿಗಿಂತ ಅವರ ಮಾತಿನಲ್ಲಿ ಹತಾಶೆಯಿತ್ತು.
ಸಂಸ್ಕೃತವಾಗಲಿ, ಕನ್ನಡವಾಗಲಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಗಳಾಗಲಿ ಅವುಗಳನ್ನು ಈಗ ಶಾಲೆ ಕಾಲೇಜುಗಳಲ್ಲಿ ಹೇಗೆ ಕಲಿಸಲಾಗುತ್ತಿದೆ? ಮಕ್ಕಳು ಇಂಥ ಭಾಷೆಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡು ಇವುಗಳಲ್ಲಿ ಏನಾದರೂ ಬರೆಯುವ ಚಿಂತಿಸುವ ಕುಶಲತೆ ಬೆಳೆಸಿ ಕೊಳ್ಳುತಿದ್ದಾರೆಯೆ? ಉತ್ತರ ನಿರಾಶಾದಾಯಕವಾಗಿದೆ ಯಲ್ಲವೇ? ಎಂದು ನಮ್ಮನ್ನೆ ಪಾಟಿಸವಾಲಿಗೆ ಒಡ್ಡಿದರು.
ಸಂಸ್ಕೃತದ ಕಲಿಕೆಯಂತೂ ನಾನಿರುವ ಪ್ರದೇಶದಲ್ಲಿ ಶೂನ್ಯ ಎಂದೆ. ಕರ್ನಾಟಕದ ಉಳಿದೆಡೆಗೂ ಅದು ಅಂಥ ಮಾನ್ಯತೆಯೇನೋ ಪಡೆದಿರಲಿಕ್ಕಿಲ್ಲ. ಅನೇಕ ವಿಶ್ವ ವಿದ್ಯಾನಿಲಯಗಳ ಸಂಸ್ಕೃತ ವಿಭಾಗಗಳು ಮುಚ್ಚುವ ಸ್ಥಿತಿಗೆ ಬಂದಿವೆ. ನನ್ನ ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ನಾನು ನೋಡಿದಾಗಿನಿಂದ ಒಬ್ಬರೋ ಇಬ್ಬರೋ ವಿದ್ಯಾರ್ಥಿ ಗಳಷ್ಟೆ ಇದ್ದರು. ಈಗ ಅದೂ ಇಲ್ಲವೆನಿಸುತ್ತದೆ ಅಂತ ಹೇಳಿದೆೆ.
ಶೆಲ್ಡನ್ ಪೊಲಾಕ್‌ರು ಸಂಸ್ಕೃತ ಭಾಷೆ, ಪಠ್ಯಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದವರು. ಸಂಸ್ಕೃತದ ಸಾಹಿತ್ಯೇತರ ಸ್ಥಿತಿಗತಿಯೂ ಅವರಿಗೆ ಗೊತ್ತಿರುವಂತಿತ್ತು; ಸಂಸ್ಕೃತದ ಅಧ್ಯಯನವನ್ನು ಭಾರತದಲ್ಲಿ ಅದೆಷ್ಟು ರಾಜಕೀಯಗೊಳಿಸಲಾಗಿದೆ ಎಂಬುದನ್ನು ನೆನಪಿಸಿಕೊಂಡರೆ ದಿಗಿಲಾಗುತ್ತದೆ. ಅದನ್ನು ಜಡವಾಗಿ ಗ್ರಹಿಸುವವರ ಗುಂಪು ಒಂದೆಡೆಯಾದರೆ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸುವ ಗುಂಪು ಇನ್ನೊಂದೆಡೆ. ಈ ಎರಡರ ಅಡಕತ್ತರಿಯಲ್ಲಿ ಸಂಸ್ಕೃತದ ಅಧ್ಯಯನ ಮತ್ತು ಬಹುತೇಕ ಭಾರತೀಯ ಭಾಷೆಗಳ ಅಧ್ಯಯನ ಸಿಲುಕಿಕೊಂಡಿದೆ ಅಂತ ನೊಂದು ನುಡಿದರು. ಭಾರತದಲ್ಲಿ ಸಂಸ್ಕೃತದ ಅಧ್ಯಯನ ಈಗ ಅಷ್ಟು ಆಸಕ್ತಿಯ ಕ್ಷೇತ್ರವಾಗಿ ಉಳಿದಿಲ್ಲ. ಹೈಸ್ಕೂಲಿನಿಂದಲೂ ಅದು ಪೂರ್ಣವಾಗಿ ಮಾಯವಾಗುತ್ತಿದೆ ಅಂತ ಕೇಳಿದ್ದೇನೆ. ಪ್ರಾದೇಶಿಕ ಭಾಷೆಗಳ ಸ್ಥಿತಿಯೂ ಇದೆ ದಾರಿಯಲ್ಲಿದೆಯೆಂದು ಕೇಳಲ್ಪಟ್ಟಿರುವೆ ಎಂದು, ಇರಲಿ ಈ ಚರ್ಚೆಯಿಂದೇನೂ ಅಷ್ಟು ಉಪಯೋಗವಿಲ್ಲ ಎನ್ನುವಂತೆ ಮಾತು ಬದಲಿಸಿದರು.
ಅವರ ಮುಖಭಾವ ಗಮನಿಸಿದ ನಾನು ಭಾರತದ ಹಲವು ವಿದ್ವಾಂಸರು ನಿಮಗೆ ಶಾಸ್ತ್ರೀಯ ಅಧ್ಯಯನಗಳ ಪ್ರಕಟಣಾ ಯೋಜನೆಯಲ್ಲಿ ನೆರವಾಗುತ್ತಿದ್ದಾರಲ್ಲವೆ? ಸಾಮಾನ್ಯವಾಗಿ ಅವರೆಲ್ಲ ಇಂಗ್ಲಿಷ್ ಅಧ್ಯಾಪಕರೆ ಎನಿಸುತ್ತದೆ ಎಂದೆ. ಅದಕ್ಕವರು ಯಾರಾದರೂ ಸರಿ ಆದರೆ ಅವರಿಗೆ ಪ್ರಾಚೀನ ಕನ್ನಡ ಸಾಹಿತ್ಯವೂ ಗೊತ್ತಿರಬೇಕು, ಇಂಗ್ಲಿಷೂ ಗೊತ್ತಿರಬೇಕು ಎಂದರು. ಆದರೂ ಹೆಚ್ಚೆಚ್ಚು ವಿದ್ವಾಂಸರನ್ನು ಕಂಡುಕೊಳ್ಳುವುದು ಕಷ್ಟವಾಗುತ್ತಿದೆ ಎಂಬುದನ್ನು ಹೇಳಲು ಮರೆಯಲಿಲ್ಲ. ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‌ತಮ್ಮದೊಂದು ಸೆಮಿನಾರಿಗಾಗಿ ಕ್ರಿ.ಶ.1800ರ ಪೂರ್ವದ ಸಾಹಿತ್ಯವನ್ನು ಅಧ್ಯಯನ ಮಾಡಿದ ಮುಖ್ಯ ವಿದ್ವಾಂಸರನ್ನು ಆಹ್ವಾನಿಸಲು ಯೋಚಿಸಿತ್ತಂತೆ. ಆದರೆ ಒಂದೆರಡು ಭಾಷೆಗಳನ್ನು ಬಿಟ್ಟರೆ ಉಳಿದ ಭಾಷೆಗಳಲ್ಲಿ ಹುಡುಕಾಟ ಕಷ್ಟವಾಯಿತೆಂದರು.
ಸಾಹಿತ್ಯ ಭಾಷೆಯ ಚರಿತ್ರೆಯನ್ನು ಅಧ್ಯಯನ ಮಾಡುವ ಒಂದು ಶಿಸ್ತು ಫಿಲಾಲಜಿ. ಸಾಹಿತ್ಯ ವಿಮರ್ಶೆ, ಚರಿತ್ರೆ, ಭಾಷಾಶಾಸ್ತ್ರ ಮೂರರ ಮಿಶ್ರಣ ಇಲ್ಲಿದೆ. ಪ್ರಾಚೀನ ಸಾಹಿತ್ಯ ಪಠ್ಯಗಳನ್ನು ಮತ್ತು ಬರಹದ ದಾಖಲೆಗಳನ್ನು ಬಳಸಿ ಶಬ್ದಗಳ ಅರ್ಥ ಚರಿತ್ರೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ಈಗ ಅಮೆರಿಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಅದು ಒಂದು ವಿಷಯವಾಗಿ ಅಧ್ಯಯನಕ್ಕೊಳಪಟ್ಟಿಲ್ಲ. ಇದು ಬಹಳ ಮುಖ್ಯವಾದ ವಿಭಾಗ. ಜಗತ್ತಿನ ಬೇರೆ ದೇಶಗಳಲ್ಲೂ ಪರಿಸ್ಥಿತಿ ಹಾಗೆಯೇ ಇದೆ. ಭಾರತದಲ್ಲೂ ಕೂಡ.
ಅವರ ಹತ್ತಿರ ಇಂಥ ಅನುಭವಗಳು ಹಲವಾರಿದ್ದ ವೆಂದು ತೋರುತ್ತದೆ. ಕೆಲವೊಮ್ಮೆ ಭಾರತೀಯ ಭಾಷೆಗಳ ಪ್ರಾಚೀನ ಪಠ್ಯಗಳ ಬಗ್ಗೆ ಇಂಗ್ಲಿಷಿನಲ್ಲಿ ದೀರ್ಘ ಲೇಖನಗಳನ್ನು ಬರೆಸೋಣವೆಂದರೆ ಒದ್ದಾಡಿ ಹೋಗುವೆ. ಹೋಗಲಿ ಹೊಸಬರ ಲೇಖನಗಳನ್ನು ಅನುವಾದಿಸೋಣ ವೆಂದರೆ ಆ ಮಟ್ಟದ ಲೇಖನಗಳು ಸಿಗುವುದಿಲ್ಲ. ಕೆಲವೊಮ್ಮೆ ಇದ್ದರೂ ಕೂಡ ಒಂದು ಶಿಸ್ತು ಕಾಣುವುದಿಲ್ಲ. ಸರಿಯಾದ ಅಡಿಟಿಪ್ಪಣಿಗಳು, ಪದಸೂಚಿಗಳು, ಸಂದರ್ಭಗಳ ಉಲ್ಲೇಖಗಳು, ಹಿಂದಿನವರ ವಾದಗಳು, ಚಿಂತನೆಯೊಂದರ ಕ್ರಮಬದ್ಧ ಬೆಳವಣಿಗೆಗಳು ಇರುವುದಿಲ್ಲ. ಸೂಕ್ಷ್ಮವಾಗಿದ್ದರೂ ಅಡ್ಡಾದಿಡ್ಡಿ ಹರಿದಾಡಿ ರುತ್ತವೆ. ಆ ಭಾಷೆಯ ಓದುಗರಿಗೆ ಅವುಗಳ ಪ್ರವೇಶ ಸಾಧ್ಯವೇನೊ ಆದರೆ ಬೇರೆ ಭಾಷೆಯ ಓದುಗರಿಗೆ ಇದೆಲ್ಲ ತುಂಬಾ ತೊಡಕು ಉಂಟುಮಾಡುತ್ತದೆ ಎಂದು ಮುಖ ಸಪ್ಪಗೆಮಾಡಿದರು. ನಾನು ನನ್ನ ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಲು ಯೋಚಿಸಿದೆ. ಶಾಸ್ತ್ರೀಯ ಪಠ್ಯಗಳ ಪ್ರಶ್ನೆಗಳಿಂದ ಅವರು ಏಕತಾನತೆ ಅನುಭವಿಸುತಿದ್ದಾರೇನೊ ಅನಿಸಿತ್ತು. ನನ್ನ ಪ್ರಶ್ನೆ ಹೀಗಿತ್ತು ಶಾಸ್ತ್ರೀಯ ಪಠ್ಯಗಳ ಅಧ್ಯಯನ ಕ್ರಮಗಳಲ್ಲಿ ಬದಲಾವಣೆ ಆಗಬೇಕಾಗಿದೆ ಎಂಬುದು ನಿಜ. ಈಗ ಮಾನವಿಕವು (ಹ್ಯುಮ್ಯಾನಿಟೀಸ್) ಬೇರೆ ಬೇರೆ ಬಗೆಯಲ್ಲಿ ವಿಸ್ತಾರಗೊಂಡಿದೆ. ಮಹಿಳಾ ಅಧ್ಯಯನ, ಲಿಂಗಾಧಾರಿತ ಅಧ್ಯಯನ, ವಲಸೆ ಅಧ್ಯಯನ, ಬುಡಕಟ್ಟು ಅಧ್ಯಯನ ಇತ್ಯಾದಿ. ಮುಂಬರುವ ದಿನಗಳಲ್ಲಿ ಇದು ಇನ್ನೂ ಹಲವು ಧಾರೆಗಳಿಂದ ಕೂಡಿಕೊಳ್ಳಲಿದೆ. ಆಯಾ ದೇಶಗಳ ಅಗತ್ಯಗಳಿಗನುಗುಣವಾಗಿ ಇದರ ಸ್ವರೂಪ ನಿರ್ಧಾರವಾಗಲಿದೆಯೇನೊ. ನನ್ನ ಪ್ರಶ್ನೆ ಏನೆಂದರೆ ಶಾಸ್ತ್ರೀಯ ಅಧ್ಯಯನಗಳಲ್ಲಾದ ಕುಸಿತ ಮಾನವಿಕದ ಹಲವು ಶಾಸ್ತ್ರಗಳಲ್ಲೂ ಆಗುತ್ತಿದೆಯೆ? ಮುಖ್ಯವಾಗಿ ಅಮೆರಿಕದಲ್ಲಿ? ಅಥವಾ ಮಾನವಿಕ ಅಧ್ಯಯನವು ತನ್ನ ಬೆಳವಣಿಗೆಯ ದಾರಿಯನ್ನು ಹೇಗೆ ಕಂಡುಕೊಂಡಿದೆ?. ಶೆಲ್ಡನ್ ಪೊಲಾಕ್ ಇಂಥದ್ದೊಂದು ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲವೇನೊ. ಆದರೆ ಮಾನವಿಕಶಾಸ್ತ್ರಗಳ ಕುರಿತು ಅವರು ಗಂಭೀರ ಚಿಂತನೆ ಬಹು ಹಿಂದಿನಿಂದಲೇ ಮಾಡಿದ್ದಿರಬಹುದು. ಅವರ ಪ್ರತಿಕ್ರಿಯ ಕುತೂಹಲ ಕಾರಿಯಾಗಿತ್ತು ಮಾತ್ರವಲ್ಲ ಆಳವಾದದ್ದಾಗಿತ್ತು. ಇದು ತುಂಬಾ ದೊಡ್ಡ ಪ್ರಶ್ನೆ ಎಂದರು. ನಿಮಗೆ ಇಷ್ಟವಿಲ್ಲದಿದ್ದರೆ ಅಭಿಪ್ರಾಯ ಹೇಳದಿದ್ದರೂ ಪರವಾಗಿಲ್ಲ ಎಂದೆ. ಆದರೆ ಅವರು ಮಾತು ಮುಂದುವರಿಸಿದರು. ಕಳೆದ ಐವತ್ತು ವರ್ಷಗಳಲ್ಲಿ ಬಹಳ ಬದಲಾವಣೆಯಾಗಿದೆ. ಅದರಲ್ಲೂ 1975ರ ಸಂದರ್ಭದಲ್ಲಿ ಅಮೆರಿಕ ಅಥವಾ ಯುರೋಪಿನ ಮಾನವಿಕ ವಿಭಾಗಗಳು ಬಹಳ ಕ್ರಿಯಾಶೀಲವಾಗಿದ್ದವು. ಪ್ರತಿ ಆರು ತಿಂಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಮುಖ್ಯ ಕೃತಿಗಳು, ಸಿದ್ಧಾಂತಗಳು ಆಯಾ ಕ್ಷೇತ್ರದ ಅಧ್ಯಯನಕಾರರನ್ನು ತುದಿಗಾಲಮೇಲೆ ನಿಲ್ಲಿಸುತಿದ್ದವು. ಈಗ ಅಲ್ಲಿಯೂ ಮಾನವಿಕಗಳಲ್ಲಿ ಮೊದಲಿನ ತುರುಸಿನ ಸ್ಪರ್ಧೆ ಉಳಿದಿಲ್ಲ. ಬೌದ್ಧಿಕವಾದ ತೊಡಗಿಸಿಕೊಳ್ಳುವಿಕೆ ಮತ್ತು ಗುಣಾತ್ಮಕತೆ ಅಲ್ಲಿಯೂ ಇಳಿಮುಖವಾಗಿದೆ ಎಂದರು.
ಮಾನವಿಕ ಶಾಸ್ತ್ರಗಳ ಬೆಳವಣಿಗೆ ಜಗತ್ತಿನೆಲ್ಲೆಡೆ ಹೇಗಿದೆ ಅಂತ ನಾನಿನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ನಾವೆಲ್ಲ ಆಧುನಿಕ ತಂತ್ರಜ್ಞಾನವನ್ನು ಮಾನವಿಕಗಳ ಬೆಳವಣಿಗೆಗೆ ದುಡಿಸಿಕೊಳ್ಳಬೇಕು. ಸಂಶೋಧನೆ, ಸಂಪರ್ಕ, ಪ್ರಸಾರ ಸರಿಯಾದ ದಿಕ್ಕಿನಲ್ಲಿ ನಡೆಯಬೇಕು. ಹಲವಾರು ತೊಡಕುಗಳನ್ನೆದುರಿಸಿ ಮಾನವಿಕ ಶಾಸ್ತ್ರಗಳು ಮುಂದಡಿ ಇಟ್ಟಿವೆ. ದಕ್ಷಿಣ ಆಫ್ರಿಕದಲ್ಲಿ ಹಿಂದೊಮ್ಮೆ ಮಾನವಿಕಶಾಸ್ತ್ರಗಳನ್ನು (ಹ್ಯುಮ್ಯಾನಿಟೀಸ್) ವಿಶ್ವವಿದ್ಯಾನಿಲಯಗಳಲ್ಲಿ ಮುನ್ನಡೆಸಬೇಕೆ ಬೇಡವೆ ಅನ್ನೊ ಚರ್ಚೆ ನಡೆದಿತ್ತು. ಜಗತ್ತಿನೆಲ್ಲಡೆ ವಿಜ್ಞಾನ ತಂತ್ರಜ್ಞಾನಕ್ಕೆ ಹರಿದು ಬರುವ ಹಣ, ಸರಕಾರಗಳು ಕೊಡುವ ಪ್ರಾಮುಖ್ಯತೆಯಿಂದಾಗಿ ಮಾನವಿಕ ಶಾಸ್ತ್ರಗಳು ಮಂಕಾಗಿದ್ದವು. ಇಂಥ ಇಕ್ಕಟ್ಟುಗಳನ್ನು ದಾಟಿ ಇವತ್ತು ಮಾನವಿಕ ಶಾಸ್ತ್ರಗಳು ಜಗತ್ತನ್ನು ತಿಳಿಯುವ ದಾರಿಗಳನ್ನು ತೆರೆದಿವೆ. ಎಲ್ಲಾ ಸೀಮೆಗಳು ವಿಸ್ತಾರಗೊಂಡಿವೆ. ಮಾನವಿಕಗಳು ಒಂದರೊಳಗೊಂದು ಬೆರೆತು ಹೊಸ ಅಧ್ಯಯನದ ಮಾದರಿಗಳನ್ನು ರೂಪಿಸಿವೆ. ಆದರೂ ಮಾನವಿಕಗಳ ಅಧ್ಯಯನಗಳಲ್ಲಿ ತೀವ್ರ ತರಹದ ಬದಲಾವಣೆಗಳನ್ನು ತರಬೇಕಾಗಿದೆ. ನನಗೆ ಗೊತ್ತು ಅನೇಕ ಕಡೆ ಇವುಗಳಲ್ಲಿ ಹೊಸ ಸಂಶೋಧನೆಗಳೇನೂ ನಡೆದಿಲ್ಲ. ಇದು ಮಾನವಿಕಗಳ ದೌರ್ಬಲ್ಯವಲ್ಲ. ಅವುಗಳನ್ನು ನಿರ್ವಹಿಸುತ್ತಿರುವವರ ದೌರ್ಬಲ್ಯ ಎಂದರು. ಹಲವು ಶಾಸ್ತ್ರಗಳಲ್ಲಾಗುತ್ತಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸುತಿದ್ದರೆನಿಸುತ್ತದೆ.
ಸಮಾಜಶಾಸ್ತ್ರ ಈಗ ಸಮಗ್ರ ಸಮಾಜವನ್ನು ಅಧ್ಯಯನ ಮಾಡುವ ಸ್ಥಿತಿಯಲ್ಲಿ ಇಲ್ಲ. ಅದರಲ್ಲಿ ಹೊಸ ಸಿದ್ಧಾಂತಗಳು, ನೋಟಗಳು ರೂಪುಗೊಳ್ಳುತ್ತಿವೆ. ಹೋಲಿಸ್ಟಿಕ್ ಆಗಿದ್ದ ಈ ಶಾಸ್ತ್ರ ಈಗ ಒಡೆದು ಹಲವು ಭಾಗಗಳಲ್ಲಿ ಹಂಚಿಹೋಗಿದೆ. ಅರ್ಥಶಾಸ್ತ್ರ ಮತ್ತು ಚರಿತ್ರೆಗಳು ತೀವ್ರವಾದ ಹೊಸ ಹುಡುಕಾಟಗಳಲ್ಲಿ ತೊಡಗಿಕೊಂಡಿವೆ. ಚರಿತ್ರೆಯ ಶಾಸ್ತ್ರಜ್ಞರು ಮತ್ತು ಅರ್ಥಶಾಸ್ತ್ರಜ್ಞರು ಹೊಸ ಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ರೂಪಿಸುತಿದ್ದಾರೆ. ಸಾಹಿತ್ಯ ಸಿದ್ಧಾಂತಗಳು ಈಗ ಸಾಹಿತ್ಯಾಧ್ಯಯನದಿಂದ ರೂಪುಗೊಳ್ಳುತ್ತಿಲ್ಲ. ಬೇರೆ ಶಾಸ್ತ್ರಗಳ ಸಿದ್ಧಾಂತಗಳನ್ನು ಸಾಹಿತ್ಯಕ್ಕೆ ಮಣಿಸಿಕೊಳ್ಳಲಾಗುತ್ತಿದೆ. ರಾಜ್ಯಶಾಸ್ತ್ರವೂ ಈಗ ಅಂಥ ಉತ್ಸಾಹದ ಸಿದ್ಧಾಂತಗಳನ್ನು ಕಟ್ಟುತ್ತಿಲ್ಲ. ಅನೇಕ ದೇಶಗಳಲ್ಲಿ ತತ್ವಶಾಸ್ತ್ರದ ವಿಬಾಗಗಳು ಹೊಸದನ್ನು ಸೃಷ್ಟಿಸದೆ ಹಳೆಯದನ್ನೆ ಮರು ಮಂಡಿಸುತ್ತಿವೆ. ಥಿಯಾಲಜಿ ಒಂದು ಕಾಲಕ್ಕೆ ದೊಡ್ಡ ಶಾಸ್ತ್ರವಾಗಿತ್ತು. ಈಗ ಇದು ಕೂಡ ಹಿನ್ನಡೆ ಅನುಭವಿಸಿದೆ. ಅಮೆರಿಕದಲ್ಲಿ ಏಶ್ಯ ಜೊತೆಗಿನ ಸಂವಾದ ಈಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ದಕ್ಷಿಣ ಏಶ್ಯ ಮತ್ತು ಮಧ್ಯ ಏಶ್ಯ ಕುರಿತಾದ ಅಧ್ಯಯನಗಳು ಮಾನವಿಕಗಳಲ್ಲಿ ಮುನ್ನೆಲೆಗೆ ಬರುತ್ತಿವೆ ಎಂದಾಗ ಇಂಥ ತೀವ್ರತರದ ಬದಲಾವಣೆಗಳು ಸ್ವತಃ ಅವರಿಗೂ ಅಚ್ಚರಿ ಉಂಟುಮಾಡಿದಂತೆ ತೋರಿತು.
ಅವರು ತಮ್ಮೆರಡೂ ಭುಜಗಳನ್ನು ಇಳಿಬಿಟ್ಟು ನಮ್ಮಡೆಗೆ ನೋಡಿದ ರೀತಿಯಲ್ಲಿ ಪ್ರಶ್ನೆಗಳು ಮುಗಿದವೆ? ಎನ್ನುವ ಭಾವವೂ ಇತ್ತು. ನಾನು ಎದ್ದು ಅವರ ಕೆಲ ಫೋಟೊ ತೆಗೆಯಲು ಅನುವಾದೆ. ಕೊನೆಗೂ ಇವರಿಬ್ಬರಿಂದ ಬಿಡುಗಡೆ ಸಿಕ್ಕಿತಲ್ಲ ಎಂಬ ಖುಷಿಯಲ್ಲೇನೊ ಎಂಬಂತೆ ಬೇರೆ ಬೇರೆ ಭಂಗಿಗಳಲ್ಲಿ ಕೂತು ಫೋಟೊ ತೆಗೆಸಿಕೊಂಡರು. ನಾನು ಮತ್ತು ಮಹೇಂದ್ರ ಧನ್ಯವಾದ ಹೇಳಿ ಹೊರಡುವಷ್ಟರಲ್ಲಿ ಅವರು ನಮಗಿಂತ ಮುಂಚೆಯೆ ಮೆಟ್ಟಿಲಿಳಿದು ಜನಜಂಗುಳಿಯಲ್ಲಿ ಮಾಯವಾದರು.
ಶೆಲ್ಡನ್ ಪೊಲಾಕ್ ಜೊತೆ ಲೇಖಕ ವಿಕ್ರಮ ವಿಸಾಜಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ