‘‘ಮುಸ್ಲಿಮರೇ ಪಾಕಿಸ್ತಾನಕ್ಕೆ ಹೋಗಿ’’ ಎಂದಿದ್ದರೇ ಅಂಬೇಡ್ಕರ್?
ಇಂದು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಎರಡೂ ಕಡೆಯಿಂದಲೂ ಪರ ವಿರೋಧದ ಚರ್ಚೆಗಳು ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿ ಸ್ಲೋಗನ್ಗಳು, ತ್ರಿವರ್ಣ ಧ್ವಜ, ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಜತೆಗೆ ಬೃಹತ್ ಪ್ರಮಾಣದಲ್ಲಿ ಸಂವಿಧಾನದ ಪ್ರತಿಗಳು, ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು, ವಿವಿಧ ಜಾತಿ ಧರ್ಮದ ಜನರು ಹೊಸ ರೀತಿಯಲ್ಲಿ ಬೀದಿಗಿಳಿದಿದ್ದಾರೆ. ಭಾಷಣಗಳಿಗಂತೂ ಎರಡು ಕಡೆಯವರಿಗೂ ಅಂಬೇಡ್ಕರ್ ಆಹಾರದ ವಸ್ತು. ಒಂದು ಟ್ರೆಂಡ್ ಶುರುವಾಗಿದೆ. ಅಂಬೇಡ್ಕರ್ರೇ ಮುಸ್ಲಿಮರನ್ನು ‘‘ಪಾಕಿಸ್ತಾನಕ್ಕೆ ಹೋಗಿ’’ ಎಂದಿದ್ದರು ಎಂದು. ಇಂದು ಸಾಮಾಜಿಕ ಜಾಲತಾಣದಲ್ಲಿ ಇದು ಬಹಳ ಚರ್ಚೆಯ ವಿಚಾರ. ಇದಕ್ಕಾಗಿ ಅಂಬೇಡ್ಕರ್ರವರೇ ಬರೆದ ‘ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ ಕೃತಿ ಓದುವ ಅನಿವಾರ್ಯತೆ ಬಂತು. ಓದಿಮುಗಿಸುವಷ್ಟರಲ್ಲಿ ಇಂದು ಉರಿಯುತ್ತಿರುವ ಭಾರತಕ್ಕೆ ಇಲ್ಲಿದೆ ಉತ್ತರ ಎನಿಸಿ ಅಂಬೇಡ್ಕರ್ ಹೇಳಿದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು.
ದೇಶ ವಿಭಜನೆ ಒಂದು ದೊಡ್ಡ ಶವಯಾತ್ರೆ.
ಹಿಂದೂ-ಮುಸ್ಲಿಮರ ಮಾರಣ ಹೋಮ.
ಭಾರತದಲ್ಲಿದ್ದು ಪಾಕಿಸ್ತಾನವನ್ನು ಪ್ರೀತಿಸುವ, ಪಾಕಿಸ್ತಾನದಲ್ಲಿದ್ದು ಭಾರತವನ್ನು ಪ್ರೀತಿಸುವ, ಪರಸ್ಪರ ತಮ್ಮನ್ನು ತಾವು ದ್ವೇಷಿಸಿಕೊಳ್ಳುವ ಪ್ರತಿಯೊಬ್ಬ ಭಾರತೀಯ..ಹಿಂದೂ ಮುಸ್ಲಿಮ್, ಪ್ರತಿಯೊಬ್ಬ ಪಾಕಿಸ್ತಾನಿ ಮುಸ್ಲಿಮ್, ಹಿಂದೂ ಈ ಕೃತಿಯನ್ನು ಓದಿದ್ದರೆ.. ಇವತ್ತಿನ ಸಾವು ನೋವು ಹಿಂಸಾಚಾರಗಳು ನಡೆಯುತ್ತಿರಲಿಲ್ಲ.
ನಿಮ್ಮ ರಾಷ್ಟ್ರಕ್ಕೆ ನೀವು ಬಯಸುವ ಅತ್ಯುನ್ನತ ಭಾಗ್ಯ ಯಾವುದು? ಎಂದು ಒಮ್ಮೆ ಭಾರತೀಯನನ್ನು ಕೇಳಿದರೆ ಅವನ ಉತ್ತರ ಏನಿರಬಹುದು? ‘ಒಂದು ಸಮಗ್ರ ಸ್ವ್ವತಂತ್ರ ಭಾರತವೇ ಭಾರತದ ಭಾಗ್ಯ ಕುರಿತ ನನ್ನ ಆದರ್ಶ’ ಎನ್ನುವುದಿರುತ್ತದೆ. ಹಿಂದೂಗಳು ಮತ್ತು ಮುಸ್ಲಿಮರು ಎಲ್ಲಿಯವರೆಗೆ ಈ ಆದರ್ಶವನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಆದರ್ಶ ಒಂದು ಪವಿತ್ರ ಇಚ್ಛೆಯಾಗಿಯೇ ಉಳಿಯುವುದೇ ಹೊರತು, ಒಂದು ನಿಶ್ಚಿತ ರೂಪ ತಾಳುವುದಿಲ್ಲ. ಇದೇನು ಕೇವಲ ಒಂದು ಪವಿತ್ರ ಇಚ್ಛೆಯೋ ಅಥವಾ ಎಲ್ಲರೂ ಕೂಡಿ ಸಾಧಿಸಬೇಕಾಗಿರುವ ಗುರಿಯೋ..
ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಗೆ ಸಂದರ್ಶನವನ್ನು ನೀಡುತ್ತಾ ಡಾ. ಅಂಬೇಡ್ಕರ್ರವರು: ‘‘ಪಾಕಿಸ್ತಾನದ ಪ್ರಕರಣವನ್ನು ಇಂದು ಪ್ರಾಥಮಿಕ ವಿಷಯವೆಂದು ಪರಿಗಣಿಸಬೇಕು. ಈ ಸಮಸ್ಯೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪರಿಹರಿಸುವವರೆಗೂ ಸಂವಿಧಾನವನ್ನು ರಚಿಸುವ ಕಾರ್ಯವನ್ನು ಪ್ರಾರಂಭಿಸಬಾರದು. ಇದಕ್ಕೆ ಒಂದು ಪರಿಹಾರವನ್ನು ಕಂಡುಹಿಡಿಯಲು ಇದುವರೆಗೆ ಗಾಂಧಿ ಹಾಗೂ ಜಿನ್ನಾ ಅವರನ್ನು ಅವಲಂಬಿಸಿದ್ದೆವು. ಆದರೆ ಅವರು ವಿಫಲರಾದರು. ಜನತೆಯೇ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಪಾಕಿಸ್ತಾನದ ಸಮಸ್ಯೆಯು ಬ್ರಿಟಿಷರು ಪರಿಹರಿಸುವಂಥದ್ದಲ್ಲ. ಅದನ್ನು ನಾವು ಅವರಲ್ಲಿ ಕೇಳುವುದೂ ಕೂಡ ಸರಿಯಲ್ಲ. ಇದು ನಾವೇ ಆಂತರಿಕವಾಗಿ ತೀರ್ಮಾನಿಸಬೇಕಾದ ವಿಷಯ ಮತ್ತು ಇದರಿಂದ ಪೀಡಿತರಾಗಿರುವ ಜನರೇ ಇದನ್ನು ತೀರ್ಮಾನಿಸಬೇಕು.’’ ಎಂದು ಹೇಳುತ್ತಾ ಪರಿಹಾರವನ್ನು ಸೂಚಿಸಿದರು.
‘‘ಒಂದು: ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ ಅವರು ಭಾರತದ ಭಾಗದಿಂದ ಪ್ರತ್ಯೇಕವಾಗಿರಲು ಬಯಸುತ್ತಾರೆಯೇ..? ಎಂಬುದನ್ನು ತಿಳಿದುಕೊಳ್ಳಲು ಪ್ರತ್ಯೇಕವಾಗಿ ಮುಸ್ಲಿಮ್ ಜನಮತ ಗಣತಿಯನ್ನು ನಡೆಸಬೇಕು.
ಎರಡು: ಪಾಕಿಸ್ತಾನದ ಪ್ರದೇಶದಲ್ಲಿರುವ ಮುಸ್ಲಿಮೇತರ ಜನತೆಯೂ ಪಾಕಿಸ್ತಾನದಲ್ಲಿಯೇ ಇರಬೇಕೆಂದು ಬಯಸುತ್ತಾರೆಯೋ ಅಥವಾ ಹಿಂದೂಸ್ಥಾನಕ್ಕೆ ಬರಲು ಬಯಸುತ್ತಾರೆಯೋ ಎಂಬುದನ್ನು ತಿಳಿದುಕೊಳ್ಳಲು ಮತ್ತೊಂದು ಪ್ರತ್ಯೇಕವಾದ ಮುಸ್ಲಿಮೇತರ ಜನಮತ ಗಣತಿಯನ್ನು ನಡೆಸಬೇಕು.
ಮೂರು: ರಾಜಗೋಪಾಲಾಚಾರಿಯವರ ಸೂತ್ರವನ್ನು ಸ್ವಾಗತಿಸಿ. ಪಾಕಿಸ್ತಾನವನ್ನು ಹತ್ತು ವರ್ಷಗಳವರೆಗೆ ಪ್ರಾಯೋಗಿಕವಾಗಿ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿ, ಹತ್ತು ವರ್ಷಗಳ ಅಂತ್ಯದಲ್ಲಿ ಪಾಕಿಸ್ತಾನದ ಮುಸ್ಲಿಮರು ಭಾರತದೊಂದಿಗೆ ಮತ್ತೆ ಒಂದಾಗಬೇಕು ಎಂದು ಬಯಸಿದರೆ ಹಾಗೆ ಮಾಡಲು ಅವರಿಗೆ ಸ್ವಾತಂತ್ರ ನೀಡುವುದು ಮತ್ತು ತಾವು ರೂಪಿಸಿದ ಸೀಮಾ ನಿರ್ಣಯ ಸಮಿತಿಯನ್ನು ಸ್ಥಾಪಿಸಲು ಹಾಗೂ ಮುಸ್ಲಿಮರು ದೇಶದ ವಿಭಜನೆಯನ್ನು ಬಯಸುತ್ತಾರೆಯೇ? ಇಲ್ಲವೇ? ಎಂಬುದನ್ನು ತಿಳಿಯಲು ಮತ್ತು ಮುಸ್ಲಿಮೇತರರು ಪಾಕಿಸ್ತಾನದಲ್ಲಿಯೇ ಉಳಿಯ ಬಯಸುವರೋ ಅಥವಾ ಇಲ್ಲವೋ ಎಂಬುದನ್ನು ಅರಿಯಲು ಎರಡು ಜನಮತ ಗಣತಿಯನ್ನು ನಡೆಸಲು ಬ್ರಿಟಿಷ್ ಸಂಸತ್ತು ಒಂದು ಅಧಿನಿಯಮವನ್ನು ಅಂಗೀಕರಿಸಬೇಕು. ಮುಸ್ಲಿಮೇತರರು ಪಾಕಿಸ್ತಾನದಲ್ಲಿಯೇ ಉಳಿಯ ಬಯಸಿದರೆ ಈಗಿರುವ ಪ್ರಾಂತೀಯ ಗಡಿ ರೇಖೆಗಳೇ ಪಾಕಿಸ್ತಾನದ ಗಡಿರೇಖೆಗಳು. ಆದರೆ ಮುಸ್ಲಿಮೇತರರು ಪಾಕಿಸ್ತಾನದಲ್ಲಿರುವುದನ್ನು ವಿರೋಧಿಸಿದರೆ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನು ಹಾಗೂ ಮುಸ್ಲಿಮೇತರರು ಅಧಿಕವಾಗಿರುವ ಜಿಲ್ಲೆಗಳನ್ನು ಪ್ರತ್ಯೇಕಿಸಿ ಅವುಗಳ ನಡುವೆ ಗಡಿ ರೇಖೆಯನ್ನು ನಿರ್ದಿಷ್ಟಗೊಳಿಸಲು ಸೀಮಾ ಸಮಿತಿಯೊಂದನ್ನು ರಚಿಸಬೇಕಾಗುತ್ತದೆ...’’ ಎಂಬ ಪರಿಹಾರ ಮಾರ್ಗಗಳನ್ನು ನೀಡಿದರು ಆದರೆ ಆದದ್ದೇ ಬೇರೆ. ಅದರ ಪರಿಣಾಮವೇ ನಾವಿಂದು ಅನುಭವಿಸುತ್ತಿರುವುದು. ಇದರಿಂದ ಮನನೊಂದು ಅಂಬೇಡ್ಕರ್ರವರು 1944 ಅಕ್ಟೋಬರ್ 4ರಂದು ಪತ್ರಿಕೆಗೆ ಮಾತನಾಡುತ್ತಾ ‘‘ಜಿನ್ನಾ ಮತ್ತು ಗಾಂಧಿಯವರ ಮಾತುಕತೆಯಿಂದ ವೈಫಲ್ಯವಲ್ಲದೆ ಬೇರೇನನ್ನು ಆಶಿಸಲಾಗಿದೆ’’ ಎಂದರು.
ಮುಕ್ತ ಮನಸ್ಸಿನಿಂದ ಅವರು ಪರಸ್ಪರ ಮಾತುಕತೆಯನ್ನೂ ನಡೆಸಲಿಲ್ಲ ಎಂಬುದು ನಿಜ ಡಾ. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ ಈ ವೈಫಲ್ಯಕ್ಕೆ ಗಾಂಧಿಯವರು ಮತ್ತು ಜಿನ್ನಾ ಅವರ ಹಠಮಾರಿತನ ಹಾಗೂ ರಾಜಗೋಪಾಲಾಚಾರಿ ಅವರ ಸೂತ್ರದಲ್ಲಿದ್ದ ಯೋಜನೆಯ ಮೂಲಭೂತ ದೋಷಗಳು ಮುಖ್ಯ ಕಾರಣಗಳು. ನಾಯಕರ ಹಠಮಾರಿತನ ಕೋಮು ಸಮಸ್ಯೆಯನ್ನು ರಾಜಕೀಯ ಸಮಸ್ಯೆಗೆ ಗಂಟುಹಾಕಿತ್ತು. ಈ ಸೂತ್ರವು ಜಿನ್ನಾ ಅವರನ್ನು ಒಪ್ಪಂದವೊಂದಕ್ಕೆ ಬರುವಂತೆ ಆಹ್ವಾನಿಸಿತು. ಅದು ‘‘ನೀವು ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ನಮಗೆ ಸಹಾಯ ಮಾಡಿದರೆ ನಾವು ನಿಮ್ಮ ಪಾಕಿಸ್ತಾನದ ಪ್ರಸ್ತಾಪವನ್ನು ಪರಿಶೀಲಿಸುತ್ತೇವೆ’’ ಎಂಬಂತಹ ಕೇವಲ ಕೊಡುಕೊಳ್ಳುವ ವ್ಯಾಪಾರವಾಯಿತು. ಪರಿಶಿಷ್ಟ ವರ್ಗಗಳವರ ಒಪ್ಪಿಗೆ ಇಲ್ಲದೆ ಭಾರತದ ಯಾವುದೇ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಮರೆತರು. ಪರಿಶಿಷ್ಟ ವರ್ಗಗಳ ಪರವಾಗಿ ಗಾಂಧಿಯವರಾಗಲಿ ಅಥವಾ ಜಿನ್ನಾ ಅವರಾಗಲಿ ಮಾತನಾಡುವ ಹಕ್ಕುನ್ನು ಕಳೆದುಕೊಂಡಿದ್ದರು.
ಪಾಕಿಸ್ತಾನದ ಪ್ರಶ್ನೆ ಕೇವಲ ಭೌತಿಕವಾದುದಲ್ಲ. ಬದಲಿಗೆ ಅದರ ಮೇಲೆ ಮರು ಚರ್ಚೆಯಾಗಬೇಕು ಎಂದು ಹೇಳಿದ ಅಂಬೇಡ್ಕರ್, ಗಾಂಧಿ ಮತ್ತು ಜಿನ್ನಾರ ನಡುವೆ ವ್ಯವಹರಿಸಲ್ಪಟ್ಟಿರುವ ಪತ್ರಗಳು ಪಾಕಿಸ್ತಾನದ ವಿಷಯದ ಒಪ್ಪಂದದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಎರಡು ಪಕ್ಷಗಳಾಗಿರಬೇಕು ಎಂದು ಅವರಿಬ್ಬರು ಅಭಿಪ್ರಾಯ ಪಟ್ಟಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಅಷ್ಟೇ ಅಲ್ಲದೇ ಈಗಿರುವ ಬಂಗಾಳ ಮತ್ತು ಪಂಜಾಬ್ ಪ್ರಾಂತಗಳ ಗಡಿಗಳೇ ಪಾಕಿಸ್ತಾನದ ಗಡಿಗಳಾಗಿರಲಿ ಎಂದು ಹೇಳುವ ಜಿನ್ನಾ ಅವರು ಪಾಕಿಸ್ತಾನದಲ್ಲಿನ ಮುಸ್ಲಿಮರಲ್ಲದ ಜನತೆಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಈ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಗಾಂಧಿ ಹಾಗೂ ಜಿನ್ನಾ ಇಬ್ಬರು ಗಂಭೀರವಾದ ತಪ್ಪುಗಳನ್ನೇ ಎಸಗುತ್ತಿದ್ದಾರೆ ಎಂದು ಅಂಬೇಡ್ಕರ್ ಹೇಳುತ್ತಿದ್ದರು.
ಹಿಂದೂಗಳು ಮತ್ತು ಮುಸ್ಲಿಮರಲ್ಲದೆ ಪರಿಶಿಷ್ಟ ಜನಾಂಗದವರು ಇದಕ್ಕೆ ಮೂರನೇ ಪಕ್ಷದವರಾಗುತ್ತಾರೆ ಅವರು ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುವಲ್ಲಿ ಅತ್ಯಗತ್ಯವಾಗಿ ಇರಲೇಬೇಕಾದ ಪಕ್ಷದವರಾಗಿದ್ದಾರೆ. ಅವರ ಪರವಾಗಿ ಮಾತನಾಡಲು ಗಾಂಧಿಯವರಾಗಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ಹಿಂದೂ ಮಹಾಸಭಾಕ್ಕಾಗಲಿ ಯಾವ ಹಕ್ಕೂ ಇಲ್ಲ. ಅಷ್ಟೊಂದು ಪ್ರಮಾಣದ ಪರಿಶಿಷ್ಟ ಜಾತಿಗಳವರನ್ನು ಅವರ ಸಮ್ಮತಿಯೇ ಇಲ್ಲದೆ ಪಾಕಿಸ್ತಾನದ ಪ್ರಜೆಗಳನ್ನಾಗಿಸುವುದು ತಮಗೆ ಸಾಧ್ಯವಿಲ್ಲ ಎಂಬುದನ್ನು ಜಿನ್ನಾ ಅವರು ತಿಳಿದುಕೊಳ್ಳಬೇಕಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳವರನ್ನು ಅವರ ಸಂಪೂರ್ಣ ಸಮ್ಮತಿಯೇ ಇಲ್ಲದೆ ಪೂರ್ವ ಅಥವಾ ಪಶ್ಚಿಮ ಪಾಕಿಸ್ತಾನದಲ್ಲಿ ಸೇರಿಸಬಾರದೆಂದು ಅಂಬೇಡ್ಕರ್ ಹೇಳುತ್ತಿದ್ದರು. ಹಾಗೆ ಅವರು ನೀಡಬಹುದಾದ ಸಮ್ಮತಿಯೂ ಸ್ವತಂತ್ರ ಜನಾಭಿಪ್ರಾಯಗಳ ಮೂಲಕ ನಿಸ್ಸಂದಿಗ್ಧವಾಗಿ ವ್ಯಕ್ತಪಡಿಸಲ್ಪಡಬೇಕು. ಇಲ್ಲದಿದ್ದರೆ ಇವರೆಲ್ಲ ಮುಂದೊಮ್ಮೆ ಅಲ್ಪಸಂಖ್ಯಾತರಾಗಿ ಆಯಾ ರಾಷ್ಟ್ರದಲ್ಲಿ ಹಿಂಸೆ ಅನುಭವಿಸ ಬೇಕಾಗುತ್ತದೆ. ಮತ್ತೆ ಇವರೇ ನಾಳೆ ನಿರಾಶ್ರಿತರಾಗಿ ಈ ದೇಶಕ್ಕೆ ನುಸುಳುತ್ತ ಹೊಸ ದೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಇದರಿಂದ ರಾಷ್ಟ್ರಕ್ಕೆ ಗಂಡಾತರ ಎಂಬುದು ಅಂಬೇಡ್ಕರ್ರಿಗೆ ಗೊತ್ತಿತ್ತು.
1930 ಲಕ್ನೋದಲ್ಲಿ ನಡೆದ ಮುಸ್ಲಿಮ್ ಲೀಗ್ನ ವಾರ್ಷಿಕ ಅಧಿವೇಶನದಲ್ಲಿ ಸರ್ ಮುಹಮ್ಮದ್ ಇಕ್ಬಾಲ್ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಮುಂಡಿಸಲಾದ ಒಂದು ಯೋಜನೆಯನ್ನೇ, ಮಿಸ್ಟರ್ ರಹಮತ್ ಅಲಿ ಎಂಬವರು 1933ರಲ್ಲಿ ಕೈಗೆತ್ತಿಕೊಂಡು ಅದಕ್ಕೆ ಪಾಕಿಸ್ತಾನವೆಂಬ ಹೆಸರಿಟ್ಟು ಮುಂದೆ ಅದೇ ಹೆಸರಿನಿಂದ ಅದು ಕರೆಯಲ್ಪಟ್ಟಿತ್ತು. ರಹಮತ್ ಅವರು ಭಾರತವನ್ನು ಪಾಕಿಸ್ತಾನ ಮತ್ತು ಹಿಂದೂಸ್ಥಾನ ಎಂಬುದಾಗಿ ವಿಭಜಿಸಿದರು. ಅವರು ಕಲ್ಪಿಸಿದ ಪಾಕಿಸ್ತಾನವನ್ನು ಪಡೆಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಅಖಂಡ ಭಾರತದ ರಾಷ್ಟ್ರೀಯತೆ ಭಾವ ಇದಕ್ಕೆ ಬಹುದೊಡ್ಡ ಅಡ್ಡಿಯಾಗಿತ್ತು.
ಪಾಕಿಸ್ತಾನ ಪ್ರಶ್ನೆಗೆ ಎರಡು ಮುಖಗಳಿದ್ದವು. ಒಂದು ಹಿಂದೂ ಮುಖ. ಮತ್ತೊಂದು ಮುಸ್ಲಿಮ್ ಮುಖ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ದೌರ್ಭಾಗ್ಯವೆಂದರೆ ಇಬ್ಬರ ಮನೋಧರ್ಮವೂ ವೈಚಾರಿಕತೆಯಿಂದ ದೂರ. ಇಬ್ಬರೂ ಭಾವನೆಯಲ್ಲಿ ಹೂತುಹೋಗಿದ್ದರು.
ಡಾ. ಅಂಬೇಡ್ಕರ್ ಅವರ ಪ್ರಕಾರ ರಾಷ್ಟ್ರೀಯತೆಯು ಒಂದು ಸಾಮಾಜಿಕ ಭಾವನೆ. ಅದು ಸಾಮುದಾಯಿಕ ಏಕತಾ ಭಾವನೆ. ಅಂತಹ ಭಾವನೆಯ ಪ್ರಭಾವಕ್ಕೆ ಒಳಗಾದ ಜನರು ತಾವೆಲ್ಲ ಕುಲಬಾಂಧವರು ಎಂದು ಭಾವಿಸುತ್ತಾರೆ. ರಾಷ್ಟ್ರೀಯ ಭಾವನೆಯು ಎರಡು ರೀತಿಯ ಭಾವನೆ. ಏಕಕಾಲದಲ್ಲಿ ಅದು ತಮ್ಮ ಕುಲಬಾಂಧವರ ಬಗ್ಗೆ ಸ್ನೇಹ ಭಾವನೆಯನ್ನು ಮತ್ತು ತಮ್ಮ ಕುಲಬಾಂಧವರಲ್ಲದವರ ಬಗ್ಗೆ ಅಸಹನೆ ಭಾವನೆಯನ್ನು ಬೆಳೆಸುತ್ತದೆ. ಅದು ಒಂದು ರೀತಿಯ ಕುಲಪ್ರಜ್ಞೆ. ಅದು ಆ ಭಾವನೆ ಇರುವವರನ್ನು ಒಟ್ಟಾಗಿ ಬಂಧಿಸುತ್ತದೆ. ಆ ಬಂಧನ ಎಷ್ಟು ಫಲವತ್ತಾಗಿರುತ್ತದೆ ಎಂದರೆ, ಒಂದು ಕಡೆ ಆರ್ಥಿಕ ಘರ್ಷಣೆಗಳು ಅಥವಾ ಸಾಮಾಜಿಕ ಅಂತಸ್ತುಗಳಿಂದ ಉಂಟಾಗುವಂತಹ ಎಲ್ಲ ಭೇದಭಾವಗಳನ್ನು ಮೀರಿ ನಿಲ್ಲುತ್ತದೆ. ಮತ್ತೊಂದು ಕಡೆ ತಮ್ಮ ಕುಲ ಬಾಂಧವರಲ್ಲದವರಿಂದ ತಮ್ಮ ಸಂಬಂಧವನ್ನು ಕಡಿದುಕೊಳ್ಳುವಂತೆ ಮಾಡುತ್ತದೆ. ರಾಷ್ಟ್ರೀಯ ಭಾವನೆ ಎಂದು ಯಾವುದಕ್ಕೆ ಹೇಳುತ್ತೇವೆಯೋ ಅದರ ಸಾರವಿದು.
ಎಲ್ಲರಿಗೂ ಭಾರತ ಎರಡು ರೂಪದಲ್ಲಿ ಕಂಡರೆ, ಅಂಬೇಡ್ಕರ್ ಅವರಿಗೆ ಮೂರು ರೂಪದಲ್ಲಿ ಕಂಡಿತು. ಹಿಂದೂ- ಮುಸ್ಲಿಮರಷ್ಟನ್ನೇ ಪರಿಗಣಿಸದೆ ಬಹುದೊಡ್ಡ ಶೋಷಿತ ವರ್ಗವನ್ನು ಆಡಳಿತದ ಭಾಗವಾಗಿ ಮಾಡಿದರು. ಹಿಂದೂ-ಮುಸ್ಲಿಮ್ ಸಮುದಾಯಗಳನ್ನು ಏಕರೀತಿ ಯಲ್ಲಿ ವಿಮರ್ಶಿಸಿ ಯಾರೊಬ್ಬರ ಪಕ್ಷಪಾತಿಯಾ ಗದೆ ಭಾರತದ ಅಖಂಡತೆಯನ್ನು ಬಯಸಿದ್ದರು. ದೇಶವಿಭಜನೆಯ ನಂತರ ಹೈದರಾಬಾದ್ ನಿಜಾಮನ ಪ್ರತ್ಯೇಕತೆಯನ್ನು ಕಠೋರವಾಗಿ ಟೀಕಿಸಿ, ಪಟೇಲರಿಗೆ ಬೆನ್ನೆಲುಬಾಗಿನಿಂತ ಅವಿಸ್ಮರಣೀಯತೆಯನ್ನು ನಾವು ಸ್ಮರಿಸಬೇಕು. ಭಾರತೀಯ ಹಿಂದೂ-ಮುಸ್ಲಿಮ್-ಕ್ರೈಸ್ತರನ್ನು ಧರ್ಮಾಧಾರಿತವಾಗಿ ನೋಡದೆ ಭಾರತೀಯರಾಗಿ ನೋಡಿದ ಅಂಬೇಡ್ಕರ್ ಅವರ ಮಾತೃತ್ವವನ್ನು ನಾವು ತಿಳಿಯಬೇಕಿದೆ.
ಭಾರತೀಯರು ಸಾಮಾನ್ಯವಾಗಿ ಜಗಳವಾಡುತ್ತಾರೆ. ಅವರು ಜಗಳವನ್ನು ಯಾವಾಗ ನಿಲ್ಲಿಸುತ್ತಾರೆ ಎಂದು ಯಾರೂ ಭವಿಷ್ಯವನ್ನು ಹೇಳಲಾರರು. ಆದರೆ ಈ ಜಗಳ ಭಾರತದ ಐಕ್ಯತೆಯನ್ನು ನಾಶ ಮಾಡಲಾರದು. ಅದರ ಐಕ್ಯತೆ ಪ್ರಕೃತಿಯಷ್ಟೇ ಪ್ರಾಚೀನ. ಈ ಐಕ್ಯತೆ ಒಳಗೆ ಅಖಂಡವಾಗಿ ವ್ಯಾಪಿಸಿಕೊಂಡ ಸಾಂಸ್ಕೃತಿಕ ಬದುಕು ಅನಾದಿ ಕಾಲದಿಂದಲೂ ಇದೆ. ಈ ಸಂಸ್ಕೃತಿ, ಈ ಸಾಂಸ್ಕೃತಿಕ ಐಕ್ಯತೆ, ರಾಜಕೀಯ ಮತ್ತು ಜನಾಂಗೀಯ ಪ್ರತಿಭಟನೆ ನೂರಾರು ವರ್ಷಗಳಿಂದಲೂ ಹೀಗೆಯೇ. ಎಲ್ಲ ಸಾಂಸ್ಕೃತಿಕ ರಾಜಕೀಯ, ಆರ್ಥಿಕ, ಕಾನೂನು, ಆಡಳಿತ, ಒಂದೇ ಏಕರೂಪದ ಚೈತನ್ಯದ ಮೇಲೆ ಕೆಲಸ ಮಾಡುತ್ತಾ ಬಂದಿವೆ. ಭಾರತದ ಇತಿಹಾಸವೆಂದರೆ ಕೋಮು ಸಂಘರ್ಷಣೆಯ ಸುದೀರ್ಘ ಕಥೆ. ಅದರಲ್ಲಿ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಅತಿ ನಾಚಿಕೆಗೇಡಿನ ಮಟ್ಟ ಮುಟ್ಟಿತ್ತು. ಆದಾಗ್ಯೂ ಈ ಸುದೀರ್ಘ ಕಥೆ; ಹಿಂದೂಗಳು ಮತ್ತು ಮುಸ್ಲಿಮರು ಒಂದೇ ದೇಶದೊಳಗೆ ಮತ್ತೆ ಒಂದೇ ಸಂವಿಧಾನದ ಕೆಳಗೆ ಬದುಕಲು ಮನಸ್ಸು ಮಾಡಿರುವುದನ್ನು ಯಾರೂ ತಡೆಯಲಾಗಿಲ್ಲ. ಆದರೂ ಈಗ ಕೋಮು ದ್ವೇಷವನ್ನು ಇಷ್ಟೊಂದು ದೊಡ್ಡದು ಮಾಡುತ್ತಿದ್ದಾರೇಕೆ...?