varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಬಹುಮುಖಿ ರಾಷ್ಟ್ರವಾದ ವೇದನೆ ಮತ್ತು ಭರವಸೆಗಳ ಆಧುನಿಕ ರೂಪಕ

ವಾರ್ತಾ ಭಾರತಿ : 2 Jan, 2020
ಡಾ. ವೆಂಕಟೇಶ್ ನೆಲ್ಲುಕುಂಟೆ

ಗಾಂಧೀಜಿ, ಟಾಗೂರರು ಬಳಸುವ ರೂಪಕಗಳನ್ನು ಮತ್ತು ಸಾವರ್ಕರರು ಬಳಸುವ ಪುರಾಣ-ಇತಿಹಾಸದ ವ್ಯಕ್ತಿ ವಿಷಯಗಳನ್ನು ಬಳಸಿದರೂ ಇಬ್ಬರಿಗಿಂತ ಭಿನ್ನವಾದ ರಾಷ್ಟ್ರವಾದ ವನ್ನು ಮಂಡಿಸುತ್ತಾರೆ. ಇಲ್ಲಿ ಟಾಗೂರರ ವಿಶ್ವಾತ್ಮಕವಾದ ಪ್ರಶ್ನೆಗೊಳಗಾಗುವುದಿಲ್ಲ. ಅದಕ್ಕೆ ಬೇರುಗಳು ಬೇಕಲ್ಲ, ಚೌಕಟ್ಟು ಬೇಕಲ್ಲ. ಅಂಥದೊಂದು ವಿಶಿಷ್ಟತೆ ಇಲ್ಲದಿದ್ದರೆ ಹೇಗೆ? ಅದನ್ನು ಮೂರ್ತೀಕರಿಸುವುದು ಹೇಗೆ? ಇದು ಆ್ಯಕ್ಟಿವಿಸ್ಟ್ ಒಬ್ಬನ ಕಷ್ಟದ ಪ್ರಶ್ನೆ. ಮೂರ್ತರೂಪಕ್ಕೆ ದಕ್ಕದಿದ್ದರೆ ಜನರಿಗೆ ದಾಟಿಸಲಾಗದು. ಹಾಗಾಗಿ ಗಾಂಧೀಜಿ ಕ್ರಿಯೆಗಳ ಮೂಲಕ ಅರ್ಥಮಾಡಿಸಲು ಯತ್ನಿಸುತ್ತಾರೆ.

ವಿಮರ್ಶೆಯೆನ್ನುವುದು ಬೌದ್ಧಿಕ ಕಸರತ್ತು ಎನ್ನಿಸಿಕೊಳ್ಳುವ ಕಾಲದಲ್ಲಿ, ಅದಕ್ಕೆ ಸಮಕಾಲೀನತೆಯನ್ನು, ಹೃದಯವಂತಿಕೆಯನ್ನು ಕೊಟ್ಟವರು ನೆಲ್ಲುಕುಂಟೆ ವೆಂಕಟೇಶ್. ವರ್ತಮಾನದ ತಲ್ಲಣಗಳನ್ನು ಗ್ರಹಿಸಿ ಬರೆಯಬಲ್ಲವರು. ವೀಣೆಯ ತಂತಿಯಂತೆ ಮೀಟ ಬಲ್ಲವರು. ಇವರ ರಾಜಕೀಯ ಲೇಖನಗಳೂ ಹೃದ್ಯವಾಗುವುದು ಈ ಕಾರಣಕ್ಕಾಗಿ. ಕಾವ್ಯ, ಕತೆ ಮೊದಲಾದ ಸೃಜನಶೀಲ ಬರಹಗಳಲ್ಲೂ ಗುರುತಿಸಿ ಕೊಂಡಿರುವ ನೆಲ್ಲುಕುಂಟೆ ಪ್ರೀತಿ ಮತ್ತು ಸ್ನೇಹದ ಒಂದು ಮೂಟೆ.

ಡಾ. ವೆಂಕಟೇಶ್ ನೆಲ್ಲುಕುಂಟೆ

ಎರಡು ಶತಮಾನಗಳಿಂದ ಜಗತ್ತನ್ನು ಆಳವಾಗಿ ಪ್ರಭಾವಿಸಿರುವ, ಒಂದರ್ಥದಲ್ಲಿ ದಿಕ್ಕೆಡಿಸಿರುವ ರಾಷ್ಟ್ರವಾದ ಅತ್ಯಂತ ಪ್ರಮುಖವಾದ ಆಧುನಿಕ ಸಿದ್ಧಾಂತ. ಬುಡಕಟ್ಟುಗಳ, ರಾಜಪ್ರಭುತ್ವಗಳ ಆಳ್ವಿಕೆಯಲ್ಲಿದ್ದ ಜನ ಸಮುದಾಯಗಳಿಗೆ ಈ ಸಿದ್ಧಾಂತವು ಹೊಸ ದಾರಿಗಳನ್ನು ತೆರೆದಿದ್ದು ಸಹ ಸತ್ಯ. ನಿರಂತರ ಯುದ್ಧ, ಬದಲಾಗುತ್ತಲೇ ಇದ್ದ ಗಡಿಗಳು, ಆಡಳಿತಗಳು, ಕಂದಾಯ ವ್ಯವಸ್ಥೆಗಳ ಗೊಂದಲ ಮತ್ತು ಹಿಂಸೆಗೆ ಹೋಲಿಸಿದರೆ ಈ ಹೊಸ ಆಡಳಿತ ಸಿದ್ಧಾಂತವು ಸಮುದಾಯಗಳಿಗೆ ಬದುಕಿನ ಅಗಾಧ ಸಾಧ್ಯತೆಗಳನ್ನು ತೆರೆದಿಟ್ಟಿತು. ಈ ಸಿದ್ಧಾಂತವು ಯುದ್ಧ ಮತ್ತು ಶಾಂತಿ, ಯುದ್ಧ ಮತ್ತು ಕಲ್ಯಾಣಗಳನ್ನು ಒಳಗೊಂಡೇ ಹುಟ್ಟಿತು. ಹಿಂಸೆ, ಸರ್ವಾಧಿಕಾರ, ದುರಾಸೆ, ಅಭಿವೃದ್ಧಿ, ವಿನಾಶ, ಕಲ್ಯಾಣ, ನ್ಯಾಯದಾನ, ಭದ್ರತೆ, ದಮನ,ಅಣ್ವಸ್ತ್ರ ಮುಂತಾದವುಗಳನ್ನು ಒಟ್ಟಿಗೆ ಹೆತ್ತು ಹುಟ್ಟಿದ ಈ ಹೊಸ ಆಡಳಿತ ಪ್ರಮೇಯದ ಕುರಿತು ಜಗತ್ತಿನ ಚಿಂತಕರ ಚಿಂತನೆಗಳು ಸಹ ಒಮ್ಮುಖವಾಗಿಲ್ಲ. ರಾಷ್ಟ್ರವಾದ ಕುರಿತಂತೆ ಪ್ರಧಾನವಾಗಿ ಮೂರು ಚಿಂತನಾಧಾರೆಗಳು ನಮ್ಮಲ್ಲಿ ಕ್ರಿಯಾಶೀಲವಾಗಿವೆ.

 1.ಟಾಗೂರರ ಸಂಪೂರ್ಣ ನಿರಾಕರಣೆಯ ಮಾದರಿ

 2.ವಿನಾಯಕ ದಾಮೋದರ ಸಾವರ್ಕರ್ ಮುಂತಾದವರ ಸಮರ್ಥನೆಯ ಮಾದರಿ

 3.ಗಾಂಧೀಜಿ, ಕುವೆಂಪು, ಹರಾರಿ ಮುಂತಾದವರ ಸಮನ್ವಯದ ಮಾದರಿ

ಈ ಮೂರೂ ಧಾರೆಗಳು ಜಗತ್ತಿನಾದ್ಯಂತ ಏಕ ಕಾಲದಲ್ಲಿ ಕ್ರಿಯಾಶೀಲವಾಗಿವೆ. ಪಶ್ಚಿಮದ ಉದಾರ ವಾದಿಗಳು ನಿರಾಕರಣೆಯ ಧಾರೆಯೊಟ್ಟಿಗೆ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಸರಿಯಾಗಿ ಒಂದು ಶತಮಾನದ ಹಿಂದೆ ಗುರುದೇವ ಕವಿ ರವೀಂದ್ರರು ಬರೆದ ಮೂರು ಪ್ರಬಂಧಗಳು ಜಪಾನಿನಲ್ಲಿ ರಾಷ್ಟ್ರವಾದ, ಪಶ್ಚಿಮದಲ್ಲಿ ರಾಷ್ಟ್ರವಾದ, ಭಾರತದಲ್ಲಿ ರಾಷ್ಟ್ರವಾದದ ನಿರಾಕರಣೆಯ ಮಾದರಿಗೆ ಅತ್ಯುತ್ತಮ ಉದಾಹರಣೆಗಳು. ರಾಷ್ಟ್ರವಾದ ಕುರಿತಂತೆ ಅವರು ಬಳಸಿರುವ ವ್ಯಾಖ್ಯಾನಗಳಿವು; ಅದೊಂದು ಕಾಯಿಲೆ, ನರಭಕ್ಷಕ ಸ್ವರೂಪಿ, ಮನುಷ್ಯ ವಿರೋಧಿ, ಯುದ್ಧೋನ್ಮಾದಿ, ಭ್ರಷ್ಟತೆಯ ಗುರು, ಇದರ ಮೂಲ ಉದ್ದೇಶ ವ್ಯಾಪಾರ ಮತ್ತು ರಾಜಕೀಯ. ಈ ಉದ್ದೇಶಕ್ಕಾಗಿ ಮನುಷ್ಯತ್ವವನ್ನು ಅಚ್ಚುಕಟ್ಟಾಗಿ ಮೂಟೆ ಕಟ್ಟಿ ಮೂಲೆಗೆಸೆದು ಉಕ್ಕಿನ ಸರಪಳಿಗಳಿಂದ ಬಿಗಿದಿಡುತ್ತದೆ ಎಂದು ಬರೆಯುತ್ತಾರೆ.

1919ರ ಹೊತ್ತಿಗೆ ಟಾಗೂರರು ರಾಷ್ಟ್ರವಾದದ ಭವಿಷ್ಯ ಕುರಿತಂತೆ, ರಾಷ್ಟ್ರವಾದವು ನೆರೆ ಹೊರೆಯ ಸಮಾಜಗಳಲ್ಲಿ ಸಂಪತ್ತಿನ ಬಗ್ಗೆ ದುರಾಸೆಯನ್ನು, ನಿರಂತರ ಅಸೂಯೆಯನ್ನು, ಮತ್ತೊಬ್ಬರು ತನಗಿಂತ ಬಲಾಢ್ಯರಾಗುತ್ತಾರೆಂಬ ಭಯವನ್ನು ಪ್ರತಿ ಗಳಿಗೆಯೂ ಹೊಂದಿರುತ್ತದೆ. ಸಾವು ಬದುಕಿನ ಈ ಹೋರಾಟದಲ್ಲಿ ನಾವು ಉಳಿಯಬೇಕಾದರೆ ಸ್ಪರ್ಧೆಯಲ್ಲಿ ತೀವ್ರವಾಗಿ ತೊಡಗಬೇಕು, ತನ್ನ ಸಂಸ್ಥೆಗಳನ್ನು ವಿಸ್ತರಿಸಬೇಕೆಂದು ಆಶಿಸುತ್ತದೆ. ಅನ್ಯ ರಾಷ್ಟ್ರಗಳ ಕುರಿತಾದ ಭಯ, ಗುಮಾನಿ ಮತ್ತು ದ್ವೇಷದೊಂದಿಗೆ ತನ್ನ ಸದಸ್ಯರಲ್ಲಿ ಶ್ರೇಷ್ಠತೆಯ ಭಾವವನ್ನು ಹುಟ್ಟಿಸುತ್ತವೆ. ಹೀಗೆ ಮಾಡುತ್ತಲೇ ರಾಕ್ಷಸರೂಪಿಯಾದ ಆಡಳಿತವನ್ನು ರೂಪಿಸಲು ನಿರಂತರ ಪ್ರಯತ್ನಿಸುತ್ತದೆ. (ಪುಟ-60, 61) ನ್ಯಾಶನಲಿಸಂ ಎನ್ನುತ್ತಾರೆ. ಯುರೋಪಿನ ರಾಷ್ಟ್ರಗಳ, ಸ್ವಾರ್ಥ, ಶ್ರೇಷ್ಠತೆ ಅಹಮ್ಮಿನಿಂದಾಗಿ ನಡೆದ ಮಹಾಯುದ್ಧದಿಂದ ಅಪಾರ ಸಾವು ನೋವುಗಳು ಸಂಭವಿಸಿ ಮನುಕುಲವನ್ನು ಕಂಗೆಡಿಸಿತ್ತು.ಎರಡು ರಾಷ್ಟ್ರಗಳ ನಡುವೆ ಹುಟ್ಟಿದ ಕಿಡಿ ಸಮಸ್ತ ಮನುಕುಲವನ್ನು ಬೇಯಿಸಿತ್ತು. ಜಗತ್ತಿನೆಲ್ಲ ಆಗು ಹೋಗುಗಳ ಕುರಿತು ಕುತೂಹಲದೊಂದಿಗೆ ಗಮನಿಸುತ್ತಿದ್ದ ಟಾಗೂರರಿಗೆ ಇದು ಗಾಬರಿ ಹುಟ್ಟುವಂತೆ ಮಾಡಿರಬೇಕು. ಕವಿಯೂ ಮಾನವತಾವಾದಿಯೂ ಆಗಿದ್ದ ಟಾಗೂರರಿಗೆ ಐರಿಷ್ ಮೂಲದ ಪ್ರಸಿದ್ಧ ಕವಿ ಡಬ್ಲೂಬಿ ಯೇಟ್ಸ್‌ನ ನಿಕಟ ಸಂಪರ್ಕವೂ ಇತ್ತು. ಐರ್ಲೆಂಡ್ ಸಹ ಇದೇ ಹೊತ್ತಿನಲ್ಲಿ ಬ್ರಿಟಿಷ್ ವಸಾಹತುವಾದದ ವಿರುದ್ಧ ರಾಷ್ಟ್ರೀಯವಾದಿ ಹೋರಾಟ ನಡೆಸುತಿತ್ತು. ಈ ಹೋರಾಟದ ಪರ ಸಹಾನುಭೂತಿಯಿದ್ದರೂ ಯೇಟ್ಸ್ ಹೋರಾಟಗಾರರ ಕುರಿತು ಈ ಉಗ್ರ ಹೋರಾಟವಿದೆಯೆಲ್ಲ ಅದು; ಆಳುವವನು ಬಾರು ಕೋಲಿಡಿದು ಕುದುರೆ ಮೇಲೆ ಕೂತಿದ್ದಾನೆ, ಅವನಿಗೆ ನೆಲದ ಮೇಲೆ ನಿಂತವರ ಕಂಡರೆ ಬಾರಿಸಬೇಕೆನ್ನಿಸುತ್ತದೆ, ಬಾರಿಸುತ್ತಾನೆ. ನೆಲದ ಮೇಲೆ ಓಡುತ್ತಾ ಒದೆ ತಿನ್ನುವವರಿಗೂ ಕುದುರೆ ಮೇಲೆ ಕೂರುವ ಅವಕಾಶ ಬರುತ್ತದೆ. ಆಗ ಅವನ ಕೈಯಲ್ಲೂ ಬಾರುಗೋಲಿರುತ್ತದೆ.ಎಂದು ವ್ಯಂಗ್ಯವಾಡುತ್ತಾನೆ.

ಹೀಗೆಂದು ಹೇಳಿದ ಮಾತ್ರಕ್ಕೆ ಟಾಗೂರರಾಗಲಿ, ಯೇಟ್ಸನಾಗಲಿ ಅರಾಜಕತಾವಾದಿಗಳಲ್ಲ. ಪರ್ಯಾಯಗಳ ಕುರಿತು ಅವರಿಗೆ ಖಚಿತ ನಿಲುವಿದೆ. ಟಾಗೂರರು ದೇಶಗಳ ವಿಕಾಸವನ್ನು ನಾಗರಿಕತೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತಾರೆ. ಯುರೋಪ್ ರಾಜಕೀಯ ನಾಗರಿಕತೆ ಯಾದರೆ, ಭಾರತ, ಚೀನ, ಜಪಾನ್ ಮುಂತಾದ ಏಷ್ಯದ ನಾಗರಿಕತೆಗಳ ಮೂಲ ಆಧ್ಯಾತ್ಮರೂಪಿಯಾದುದು.

ವಸಾಹತುವಾದದಿಂದಾಗಿ ಜಗತ್ತಿನಾದ್ಯಂತ ರಾಜಕೀಯ ನಾಗರಿಕತೆ ಮೇಲುಗೈಯಾಗಿ ಉಳಿದ ನಾಗರಿಕತೆಗಳು ಒತ್ತಡ ಅನುಭವಿಸುತ್ತಿವೆ.ಸದ್ಯಕ್ಕೆ ಜಪಾನೊಂದೇ ತುಸು ಭರವಸೆ ಹುಟ್ಟಿಸುತ್ತದೆ. ಅದು ಪಶ್ಚಿಮದ ವೈಜ್ಞಾನಿಕ ಸವಲತ್ತುಗಳನ್ನು ಪಡೆದೂ ತನ್ನ ಮೂಲ ಪ್ರತಿಭೆಯಾದ ಆಧ್ಯಾತ್ಮಿಕತೆಯನ್ನು ಆಡಳಿತಕ್ಕೆ ಬೆರೆಸಿ ಎಲ್ಲರನ್ನೂ ಒಳಗೊಳ್ಳುವ ಮಾನವೀಯವಾದ ನಾಗರಿಕತೆ ಸೃಜಿಸುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ. ಭಾರತದ ನಾಗರಿಕತೆ ಸಹ ದ್ವೇಷ ಮತ್ತು ಹೊರಗಿಡುವ ರಾಜಕೀಯ ತತ್ವದಿಂದ ಪ್ರೇರಿತವಾದುದಲ್ಲ.ಅದರ ಶಕ್ತಿಯಿರುವುದು ಸಮನ್ವಯದಲ್ಲೇ ಹೊತು ಸಂಘರ್ಷದಲ್ಲಲ್ಲ. ಮೊಘಲರು ಮತ್ತು ಪಠಾಣರ ಭಾರತದ ಮೇಲಿನ ದಾಳಿ ನಮಗೆಲ್ಲ ತಿಳಿದಿರುವಂತೆ ಅದು ರಾಷ್ಟ್ರವಾದಿ ದಾಳಿಯಲ್ಲ. ಅವರ ಧರ್ಮ, ಪದ್ಧತಿ, ಬೇಕು ಬೇಡಗಳೊಂದಿಗೆ ಇಲ್ಲಿ ಬಾಳಿದರು (ಪು.59) ಅದೇ ಯುರೋಪಿನಂತೆ ನಮ್ಮ ಉತ್ಪಾದನಾ ತಂತ್ರಗಳನ್ನು, ವಿತರಣೆಯ ವಿಧಾನಗಳನ್ನು ತುಂಡರಿಸಿ, ಸಮುದಾಯಗಳೊಳಗೆ ಅಪನಂಬಿಕೆ ಹುಟ್ಟಿಸಿ ಕೆಲವರನ್ನು ಒಳಗೊಂಡು, ಕೆಲವರನ್ನು ಹೊರಗಿಟ್ಟು ಶಾಶ್ವತ ಭಿನ್ನತೆಗಳನ್ನು ಸೃಷ್ಟಿಸಿರಲಿಲ್ಲ. ಭಾರತದ ಆತ್ಮದಲ್ಲಿ ಓರೆ ಕೋರೆಗಳಿರುವುದು ನಿಜ. ಆದರೆ ಅದೆಂದೂ ಯಾಂತ್ರಿಕವಾಗಿರಲಿಲ್ಲ. ಅದು ನಿರಂತರ ಶ್ರಮಿಸಿರುವುದು ಇತರ ನಾಗರಿಕತೆ ಮತ್ತು ಜನಾಂಗಗಳೊಡನೆ ಹೊಂದಿಕೊಂಡು ಹೇಗೆ ಬಾಳುವೆ ಮಾಡಬೇಕೆಂಬುದೆ ಆಗಿತ್ತು.ಮೂಲತಃ ನಮ್ಮದು ಸಂಕರರೂಪಿ ದೇಶವೆ ಆಗಿದೆ. ಅಲ್ಲದೆ ಇದು ಕೇವಲ ಆರ್ಥಿಕ, ರಾಜಕೀಯ ಉದ್ದೇಶಗಳಿಗಾಗಿ ಒಟ್ಟುಗೂಡಿದ್ದಲ್ಲ.ಎಲ್ಲರೊಂದಿಗೆ ಹೊಂದಿಕೊಂಡು ಬಾಳುವೆ ಮಾಡುವುದನ್ನು ಕಲಿತಿರುವ ಈ ದೇಶವು ವಿಶ್ವಕ್ಕೆ ಮಾರ್ಗದರ್ಶನ ಮಾಡಬಲ್ಲುದಾಗಿದೆ. ಇಡೀ ವಿಶ್ವವೇ ಒಂದು ದೇಶವಾಗುವುದನ್ನು ಬಯಸುತ್ತದೆ. ನಮಗೆ ಇರುವುದು ಒಂದು ಇತಿಹಾಸ ಅದು ಮಾನವ ಕುಲದ ಇತಿಹಾಸ. ಎಲ್ಲ ದೇಶಗಳ ಇತಿಹಾಸಗಳು ಬೃಹತ್ ಗ್ರಂಥವೊಂದರ ಅಧ್ಯಾಯಗಳಷ್ಟೆ (ಪು. 107), ಅದೇ ಪು.107 ಎಂದು ವಿವರಿಸುತ್ತಾರೆ. ಈ ಮೂಲಕ ಎಲ್ಲ ನಾಗರಿಕರು ಸೇರಿ ವಿಶ್ವದ ಆರೋಗ್ಯಕರ ಆಡಳಿತ ಮಾದರಿ ರೂಪಿಸಬೇಕೆಂದು ಪ್ರತಿಪಾದಿಸುತ್ತಾರೆ. ಭೂಮಿಯ ಯಾವುದೊ ಭಾಗದಲ್ಲಿ ಹುಟ್ಟಿದ ಮನುಷ್ಯನೊಬ್ಬನಿಗೆ ಯಾವುದೇ ಭೀತಿಯಿಲ್ಲದೆ, ಅಡ್ಡಿಯಿಲ್ಲದೆ ಎಲ್ಲಿಗೆ ಬೇಕಾದರೂ ಹೋಗಿ ದುಡಿಯುವ, ಬದುಕುವ ಹಕ್ಕಿಯಂಥ ಚಲನೆ ಇರಬೇಕು. ಹಾಗಾದಾಗ ಮಾತ್ರ ಸಂಘರ್ಷಗಳು ತಪ್ಪಲು, ಮಾನವ ಸಂಕುಲ ವಿನಾಶ ವಾಗದಂತೆ ತಡೆಯಲು ಸಾಧ್ಯ ಎನ್ನುವುದು ಟಾಗೂರರ ನಿಲುವು. ಅವರು ಸ್ವಂತ ಬದುಕಿನಲ್ಲೂ ಇಂಥ ಚಲನೆ ಯನ್ನು ಮೈಗೂಡಿಸಿಕೊಂಡಿದ್ದರು. ಜಗತ್ತಿನ ಬಹುಪಾಲು ದೇಶಗಳನ್ನು ಸುತ್ತಿದ್ದ ಟಾಗೂರರು ತನ್ನ 70ನೇ ವಯಸ್ಸಿನಲ್ಲಿ ಸಂಗೀತದ ಕುರಿತು ತಿಳಿದುಕೊಳ್ಳಲು ಇರಾನಿಗೆ ಹೋಗಿದ್ದರು.

ಟಾಗೂರರ ರಾಷ್ಟ್ರವಾದ ಕುರಿತ ನಿಲುವು ನೆರೂಡನಂಥ ವಿಶ್ವ ಕವಿಯಾದಿಯಾಗಿ ಅನೇಕ ಮಾನವತಾವಾದಿಗಳನ್ನು ಆಕರ್ಷಿಸಿತ್ತು.ಇದು ಕಮ್ಯುನಿಸ್ಟರ ಅಂತರ್‌ರಾಷ್ಟ್ರೀಯ ವಾದಂತೆ ಮೇಲ್ನೋಟಕ್ಕೆ ಕಂಡರೂ, ಆರ್ಥಿಕ, ರಾಜಕೀಯ ಉದ್ದೇಶಗಳನ್ನು ಟಾಗೂರರ ಪ್ರಮೇಯ ಗುಮಾನಿಯಿಂದ ನೋಡುತ್ತದೆ.

ಸಂಪೂರ್ಣ ಸಮರ್ಥನೆಯ ಮಾದರಿ

ಟಾಗೂರರು ಯಾವ ಚಾರಿತ್ರಿಕ ನೆನಪುಗಳನ್ನು ಬಳಸಿಕೊಂಡು ರಾಷ್ಟ್ರವೆಂಬ ಚೌಕಟ್ಟನ್ನು ನಿರಾಕರಿಸಲು ಪ್ರಯತ್ನಿಸಿದರೊ, ಅದೇ ನೆನಪುಗಳನ್ನು ಮತ್ತು ಪೌರಾಣಿಕ ಟಾಗೂರರಿಗೆ ಪೌರಾಣಿಕ ಸಂಗತಿಗಳ ಕುರಿತು ಅಷ್ಟೊಂದು ಆಸಕ್ತಿ ಇಲ್ಲ. ಅದರ ಉಲ್ಲೇಖಗಳನ್ನು ಸಹ ಬಳಸುವುದಿಲ್ಲ ಸಂಗತಿಗಳನ್ನು ಆಧರಿಸಿ ವಿನಾಯಕ ದಾಮೋದರ ಸಾವರ್ಕರರು ರಾಷ್ಟ್ರದ ಚೌಕಟ್ಟನ್ನು ಸಮರ್ಥಿಸಲು ಉಪಯೋಗಿಸುತ್ತಾರೆ. ಟಾಗೂರರು ದೇಶದ ಇತಿಹಾಸದ ನೆನಪುಗಳಿಂದ ಜನಾಂಗಗಳು ಹೇಗೆ ಸಮನ್ವಯ ಸಾಧಿಸಲು ಪ್ರಯತ್ನಿಸಿದವು ಎಂಬ ಅಂಶವನ್ನು ಮುಂದು ಮಾಡುತ್ತಾರೆ. ಈ ಸಮನ್ವಯ ಜಗತ್ತಿಗೆ ಮಾದರಿಯಾದುದು ಎಂದು ಪ್ರತಿಪಾದಿಸುತ್ತಾರೆ. ಸಾವರ್ಕರರ ಚಿಂತನೆ ಟಾಗೂರರಿಗಿಂತ ಸಂಪೂರ್ಣ ಭಿನ್ನವಾದುದು. ಸಾವರ್ಕರರು ಯುರೋಪಿನ ಮಾದರಿಯ ರಾಷ್ಟ್ರವಾದವನ್ನು ಮುಂದು ಮಾಡುತ್ತಾರೆ. ಅದಕ್ಕಾಗಿ ಅವರು ಬಳಸುವ ಪ್ರಮೇಯದಲ್ಲಿ 1. ಭೌಗೋಳಿಕ ಐಕ್ಯತೆ 2. ಜನಾಂಗಿಕ ಸಾಮಾನ್ಯ ಲಕ್ಷಣಗಳು 3.ಸಾಮಾನ್ಯ ಸಂಸ್ಕೃತಿ 4.ಸಾಮಾನ್ಯ ಭಾಷೆ ಎಂಬ ವಿಷಯಗಳ ಮೂಲಕ ರಾಷ್ಟ್ರದ ವ್ಯಾಖ್ಯಾನವನ್ನು ರೂಪಿಸುತ್ತಾರೆ. ಸಪ್ತ ಸಿಂಧೂ ತೀರಕ್ಕೆ ಬಂದ ಪವಿತ್ರ ಆರ್ಯ ಜನ ಸೃಜಿಸಿದ ಸಂಸ್ಕೃತಿ ಹಿಮಾಲಯ, ಟಿಬೆಟ್, ಬರ್ಮಾ, ಬಾಂಗ್ಲಾ, ಸಿಲೋನ್‌ಗಳನ್ನು ಒಳಗೊಂಡ ಸಾಗರಗಳ ಮಧ್ಯದ ಪಿತೃ ಭೂಮಿಯೇ ಹಿಂದೂ ರಾಷ್ಟ್ರ. ಈ ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿರುವ ಜನರದು ಸಾಮಾನ್ಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ಆಧರಿಸಿಯೇ ಹಿಂದುತ್ವವನ್ನು ವ್ಯಾಖ್ಯಾನಿಸಬಹುದಾಗಿದೆ. ಅವರ ಜನಾಂಗಿಕ ಲಕ್ಷಣಗಳಿಂದ ಹಿಂದೂ ಜನಾಂಗವನ್ನು ನಿರ್ಣಯಿಸಬಹುದಾಗಿದೆ. ಇದು ಬರೀ ದೇಹದಲ್ಲಷ್ಟೇ ಅಲ್ಲ ಅವರ ರಕ್ತದಲ್ಲೂ ವ್ಯಕ್ತವಾಗುತ್ತದೆ ಎನ್ನುತ್ತಾರೆ.

ಮನುಷ್ಯರು ಒಳಬರದಂತೆ ಗೋಡೆ ಕಟ್ಟುವ ಹುನ್ನಾರದಲ್ಲಿರುವ ರಾಷ್ಟ್ರಗಳು, ಅಣುಬಾಂಬುಗಳಿಗೆ, ಜಾಗತಿಕ ಪರಿಸರದ ಸಮಸ್ಯೆಗಳಿಗೆ ಹೇಗೆ ಗೋಡೆ ಕಟ್ಟುತ್ತವೆ? ಸಿಲಿಕಾನ್ ನದಿಗಳಿಗೆ ಪ್ರವಾಹ ಬಂದಿದೆಯಲ್ಲ ಅದಕ್ಕೆ ಅಣೆಕಟ್ಟು ಕಟ್ಟಲು ಸಾಧ್ಯವೆ? ಎಂಬುದನ್ನು ಪ್ರಜ್ಞೆ ಇರುವವರು ಕೇಳಿಕೊಂಡರೆ ಸಾಕು. ಗ್ರೆಟಾ ಥನ್ಬರ್ಗ್‌ ಇದನ್ನೇ ಪ್ರಶ್ನಿಸುತ್ತಿರುವುದು ನಮ್ಮ ಭವಿಷ್ಯ ಕಿತ್ತುಕೊಳ್ಳಲು ನೀವ್ಯಾರು? ಹಾಗೆ ಮಾಡುವುದಕ್ಕೆ ನಿಮಗೆಷ್ಟು ಧೈರ್ಯ? ಎಂದು.

ರಾಷ್ಟ್ರವೊಂದಕ್ಕೆ ಅದರದ್ದೇ ಆದ ಒಂದು ಭಾಷೆ ಇರಬೇಕು.ಸಂಸ್ಕೃತ ಆ ರೀತಿಯ ಭಾಷೆ. ಸಂಸ್ಕೃತವೇ ಭಾರತದ ಎಲ್ಲ ಪ್ರಾಕೃತ ಭಾಷೆಗಳ (ಕನ್ನಡ, ತಮಿಳಿನಂತ ಭಾಷೆಗಳನ್ನು ಪ್ರಾಕೃತ ಎಂಬರ್ಥದಲ್ಲಿ ಬಳಸಿದ್ದಾರೆ) ತಾಯಿ. ಸಂಸ್ಕೃತೇತರ ಭಾಷೆಗಳನ್ನು ಪ್ರಾಕೃತ ಭಾಷೆ ಗಳೆಂದು ಗುರುತಿಸುತ್ತಾರೆ. ಹಿಂದಿ ಸಂಸ್ಕೃತಕ್ಕೆ ಹತ್ತಿರದ ಭಾಷೆಯಾದ ಕಾರಣ ರಾಷ್ಟ್ರಭಾಷೆಯಾಗಬೇಕು. ಒಟ್ಟಾರೆ ಹಿಂದಿ-ಹಿಂದೂ-ಹಿಂದುತ್ವಗಳು ಆರ್ಯಾವರ್ತವೆಂಬ ಪುರಾತನ ರಾಷ್ಟ್ರದ ಆಧಾರಗಳು ಮತ್ತು ಮೂಲ ಲಕ್ಷಣಗಳು ಎಂದು ವಿವರಿಸುತ್ತಾರೆ.

ಸ್ವತಃ ನಾಸ್ತಿಕರಾಗಿದ್ದ, ಇಂಗ್ಲಿಷ್, ಯುರೋಪ್ ಗೊತ್ತಿದ್ದ ಸಾವರ್ಕರ್ 1923ರಲ್ಲಿ ಬರೆದ ಹಿಂದುತ್ವ; ಹಿಂದೂ ಎಂದರೆ ಯಾರು? ಕೃತಿ ಜನಾಂಗಿಕ, ಸಾಂಸ್ಕೃತಿಕ ರಾಷ್ಟ್ರವಾದಿಗಳ ಪವಿತ್ರ ಕೃತಿಯೂ ಹೌದು. ರಾಷ್ಟ್ರವಾದಿ ಚಿಂತಕರು ರಾಷ್ಟ್ರಗಳ ಇತಿಹಾಸವನ್ನು ಕುರಿತು ವ್ಯಾಖ್ಯಾನಿಸುವಾಗ, ರಾಷ್ಟ್ರಗಳ ಸಂರಚನೆ ಪ್ರಾರಂಭವಾದದ್ದೇ 18ನೇ ಶತಮಾನದಿಂದ ಎಂದರೆ, ಸಾವರ್ಕರರು ಋಗ್ವೇದದ ಕಾಲದಿಂದಲೇ ಈ ರಾಷ್ಟ್ರ ಅಸ್ತಿತ್ವದಲ್ಲಿತ್ತು ಎನ್ನುತ್ತಾರೆ. ತನ್ನ ವಾದಕ್ಕೆ ಸಮರ್ಥನೆಗಳನ್ನು ಹುಡುಕಿ ಕಟ್ಟುತ್ತಾರೆ.

ಸಾವರ್ಕರ್ ತಮ್ಮ ಈ ಕೃತಿಯಲ್ಲಿ ವಿಶಿಷ್ಟವಾದ ಪ್ರಮೇಯವನ್ನು ಮಂಡಿಸುತ್ತಾರೆ. ಅದು ಸಾಂಸ್ಕೃತಿಕ, ಜನಾಂಗಿಕ ಭಾರತದ ರಾಷ್ಟ್ರವಾದಿಗಳಿಗೆ ಇಂದಿಗೂ ಆಪ್ಯಾಯಮಾನವಾದ ಪ್ರಮೇಯವಾಗಿದೆ. ಮಾತೃಭೂಮಿ ಎಂಬ ಗಾಂಧಿವಾದಿ ವ್ಯಾಖ್ಯಾನಕ್ಕೆ ಬದಲಾಗಿ ಪಿತೃಭೂಮಿ ಎಂದೂ, ಕರ್ಮಭೂಮಿ ಎಂಬುದಕ್ಕೆ ಪುಣ್ಯಭೂಮಿ ಎಂದೂ ವ್ಯಾಖ್ಯಾನಿಸುತ್ತಾರೆ. ಗಾಂಧೀಜಿ, ಭಗತ್‌ಸಿಂಗ್ ಮುಂತಾದವರು ಈ ನೆಲಕ್ಕೆ ಪುಣ್ಯಭೂಮಿ ಎಂದು ಕರೆದರೂ ಸಹ ಸಾವರ್ಕರರ ಪುಣ್ಯಭೂಮಿಯಲ್ಲಿ ಕೆಲವರಿಗೆ ಅವಕಾಶವಿಲ್ಲ. ಹಿಂದೂಸ್ಥಾನದಲ್ಲಿ ಹುಟ್ಟಿ ಬದುಕಿದವರೆಲ್ಲರಿಗೂ ಇದು ಪಿತೃಭೂಮಿ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ಇದು ಪುಣ್ಯಭೂಮಿಯಾಗಲಾರದು. ಮುಹಮ್ಮದೀಯರ, ಕ್ರೈಸ್ತರ, ಪಾರ್ಸಿಗಳ ಶ್ರದ್ಧಾ ಕೇಂದ್ರಗಳು ಈ ನೆಲದಲ್ಲಿಲ್ಲ. ಅರೇಬಿಯಾ, ಫೆಲೆಸ್ತೀನ್‌ಗಳಲ್ಲಿ ಶ್ರದ್ಧಾಕೇಂದ್ರಗಳಿರುವುದರಿಂದ ಅವು ಅವರ ಪುಣ್ಯಭೂಮಿಗಳಾಗುತ್ತವೆಯೇ ಹೊರತು ಹಿಂದೂಸ್ಥಾನವಲ್ಲ ಎನ್ನುತ್ತಾರೆ. ಯಾವುದೋ ಕಾರಣಗಳಿಂದ ಹಿಂದೆ ಮತಾಂತರಗೊಂಡವರು ಮರಳಿ ಹಿಂದೂ ಧರ್ಮಕ್ಕೆ ಬಂದ ನಂತರವೇ ಹಿಂದೂಸ್ಥಾನ ಅವರ ಪುಣ್ಯಭೂಮಿಯಾಗಲು ಸಾಧ್ಯ. ಪಾಣಿಪತ್ ಕದನದಲ್ಲಿ ಹಿಂದೂಗಳು ಸೋತಿರಬಹುದು, ದೀರ್ಘ ದೃಷ್ಟಿಯಿಂದ ನೋಡಿದರೆ ಅವರು ಆ ಯುದ್ಧವನ್ನು ಗೆದ್ದಿದ್ದರು. ಈ ಯುದ್ಧವು ಮತ್ಯಾವ ಅಫ್ಘಾನನ್ನೂ ದಿಲ್ಲಿಗೆ ನುಗ್ಗುವ ಮನಸ್ಸು ಮಡದಂತೆ ಮಾಡಿತು ಎನ್ನುತ್ತಾರೆೆ. ಆಶ್ಚರ್ಯವೆಂದರೆ ಬಂಕಿಮರ ಆನಂದಮಠ ವಂದೇ ಮಾತರಂ ಹಾಡು ಇದೇ ಕಾದಂಬರಿಯ ಭಾಗವಾಗಿದೆ. ಕಾದಂಬರಿಯ ಪಾತ್ರವೊಂದು ಒಂದು ಕಡೆ ಇಂಗ್ಲಿಷರನ್ನು ದೇವರೇ ಕಳಿಸಿದ್ದಾನೆ ಎಂದು ನುಡಿಯುತ್ತದೆ. ಸಾವರ್ಕರರಿಗೆ ಈ ಕೃತಿ ಬರೆವ ಹೊತ್ತಿಗೆ ಬ್ರಿಟಿಷರ ಆರ್ಥಿಕ ಲೂಟಿ, ಸೈನಿಕ ದಬ್ಬಾಳಿಕೆ, ಸಾಮಾಜಿಕ ಸಂರಚನೆ ಗಳು ಅಷ್ಟೊಂದು ಆತಂಕಕಾರಿ ಎನ್ನಿಸುವುದಿಲ್ಲ. ಮೊದಲ ಹಂತದ ಸಾವರ್ಕರರಲ್ಲಿ ಬ್ರಿಟಿಷ್ ವಿರೋಧದ ತೀವ್ರ ನಿಲುವುಗಳಿವೆ ಹಾಗೂ ಹಿಂದೂ ಮುಸ್ಲಿಮರು ಸೇರಿಯೇ ಈ ರಾಷ್ಟ್ರ ಕಟ್ಟಬೇಕೆಂದು ಪ್ರತಿಪಾದಿಸುವುದೂ ನಿಜ. ಆದರೆ 1920ರ ನಂತರದ ಸಾವರ್ಕರ್ ಹಿಂದೂ ರಾಷ್ಟ್ರದ ಪ್ರಬಲ ಪ್ರತಿಪಾದಕರಾಗುತ್ತಾರೆ ಮತ್ತು ಪಶ್ಚಿಮದ ರಾಷ್ಟ್ರವಾದಿ ಸಂರಚನಾ ಪ್ರಮೇಯವನ್ನು ಸಂಪೂರ್ಣ ಅಳವಡಿಸಿಕೊಳ್ಳುತ್ತಾರೆ.

ಟಾಗೂರರು ರಾಷ್ಟ್ರವಾದ ಕುರಿತು ಪ್ರಬಂಧಗಳನ್ನು ಮಂಡಿಸುವಾಗ ರಾಷ್ಟ್ರವಾದದಲ್ಲಿ ಎಕ್ಸ್ ಕ್ಲೂಸಿವ್ನೆಸ್ ಎಂಬ ದ್ವೇಷಕಾರಿ ತತ್ವ ಅಡಕಗೊಂಡಿರುತ್ತದೆ ಎಂದು ಆತಂಕಗೊಂಡಿದ್ದರು. ಅದು ಸಾವರ್ಕರರ ರಾಷ್ಟ್ರವಾದಿ ನಿಲುವುಗಳ ರೂಪದಲ್ಲಿ, ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ಭಾರತದಲ್ಲೂ ಮೊಟ್ಟೆ ಇಡಲಾರಂಭಿಸಿತು.

 ಹಿಂದೂ ಎಂದರೆ ಜಾತಿ, ಅದೊಂದು ರಾಷ್ಟ್ರ ಮತ್ತು ನಾಗರಿಕತೆ ಎಂದು ವ್ಯಾಖ್ಯಾನಿಸುವ ಸಾವರ್ಕರರು, ಹುಟ್ಟಿನ ಆಧಾರದ ಮೇಲಿನ ಭಿನ್ನತೆಗಳನ್ನು ನಿರ್ವಹಿಸಲು ಸಹ ಹಿಂದುತ್ವವನ್ನು ಒಂದು ತಂತ್ರವಾಗಿ ಬಳಸಿಕೊಳ್ಳುತ್ತಾರೆ. 1941ರ ಹೊತ್ತಿಗೆ ಎಲ್ಲ ಹಿಂದೂಗಳು ಸಮರಶೀಲರಾಗಲಿ, ಎಲ್ಲ ರಾಜಕೀಯ ತತ್ವಗಳು ಹಿಂದೂಕರಣವಾಗಲಿ ಎಂದು ಕರೆ ಕೊಡುತ್ತಾರೆ. ಜಿನ್ನಾನ ದ್ವಿರಾಷ್ಟ್ರ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಇಟಲಿಯ ಗ್ಯಾರಿಬಾಲ್ಡಿಯ ರಾಷ್ಟ್ರವಾದಿ ತತ್ವದಿಂದ ಪ್ರಭಾವಿತರಾಗುವ ಸಾವರ್ಕರರು, ಹಿಟ್ಲರ್ ಮೈನ್‌ಕೆಂಪ್ ಎಂಬ ಪ್ರಣಾಳಿಕಾ ರೂಪದ ಪುಸ್ತಕ ಬರೆಯುವ ಎರಡು ವರ್ಷಗಳ ಮೊದಲೇ ಹಿಂದುತ್ವ; ಹಿಂದೂ ಅಂದರೆ ಯಾರು? ಕೃತಿಯನ್ನು ಬರೆದರು. ಸಾವರ್ಕರರು ಹಿಂದೂವಾದಿ ಪ್ರಮೇಯವನ್ನು ಮಂಡಿಸುವ ಸಮಯದಲ್ಲೇ ಜಿನ್ನಾ ಮುಂತಾದವರು ಮುಸ್ಲಿಮ್ ರಾಷ್ಟ್ರದ ಕನವರಿಕೆಯನ್ನು ಸಹ ಆರಂಭಿಸಿದ್ದರು. ದುರಂತವೆಂದರೆ ಜಿನ್ನಾ ಕನಸಿದ ಎಕ್ಸ್ ಕ್ಲೂಸಿವ್ ತತ್ವಾಧಾರಿತ ರಾಷ್ಟ್ರ ನಿರ್ಮಾಣವಾಗಿ ಬಹಳ ಬೇಗ ಅಪಾರ ಬೆಲೆ ತೆತ್ತಿತು. ತನ್ನ ಅಣುಬಾಂಬು, ಧಾರ್ಮಿಕ ಗುಮಾಸ್ತಗಿರಿಯ ಪ್ರಾಬಲ್ಯದಿಂದಾಗಿ 20ನೇ ಶತಮಾನದ ಮಧ್ಯಭಾಗದ ಯುರೋಪಿನ ದೇಶಗಳಂತಾಯಿತು. ಸಾವರ್ಕರರು ಕಂಡಿದ್ದ ಹಿಂದೂ ರಾಷ್ಟ್ರದ ಕಲ್ಪನೆ 90ರ ನಂತರ ಇಲ್ಲಿ ಚಿಗುರಲಾರಂಭಿಸಿತು.

ಸಾವರ್ಕರ್, ಜಿನ್ನಾ ಮುಂತಾದ ರಾಷ್ಟ್ರವಾದಿ ಚಿಂತಕರಿಗೆ ರಾಷ್ಟ್ರವಾದದ ಸಂರಚನೆಗಳ ಕುರಿತು ಆತಂಕಗಳಿಲ್ಲ. ಟಾಗೂರ್ ಈ ಸಂರಚನೆಯನ್ನು ಕಾಯಿಲೆ ಎಂದರೆ, ಸಾವರ್ಕರರು ಕಾಯಿಲೆಗೆ ಸಂಜೀವಿನಿ ಎಂದು ಭಾವಿಸುತ್ತಾರೆ. ಇದು ಕಾಯಿಲೆಯೋ ಸಂಜೀವಿನಿಯೋ ಎಂಬುದನ್ನು ಹರಾರಿ ಮುಂತಾದ ಚಿಂತಕರ ನಿಲುವುಗಳನ್ನು ಮುಂದೆ ನೋಡಬಹುದು.

ನೆಹರೂ, ವಲ್ಲಭ ಬಾಯಿ ಪಟೇಲ್ ಮುಂತಾದವರು ಸಹ ರಾಷ್ಟ್ರವಾದಿ ಸಂರಚನೆಗಳನ್ನು ಒಪ್ಪಿಕೊಂಡವರೇ, ಆದರೆ ಇವರ ನಿಲುವುಗಳು ಮೇಲಿನ ಇಬ್ಬರಿಗಿಂತ ಭಿನ್ನ.

ಸವುನ್ವಯದ ಧಾರೆ

ಆಧುನಿಕ ಭಾರತವನ್ನು ಟಾಗೂರ್, ಅಂಬೇಡ್ಕರ್, ಗಾಂಧಿ, ನೆಹರೂರನ್ನು ಬಿಟ್ಟು ಕಲ್ಪಿಸಿಕೊಳ್ಳಲಾಗದು. ನಾಲ್ಕೂ ಜನರಿಗೂ ಭಾರತದ ಕುರಿತಂತೆ ಭಿನ್ನವಾದ ಚಾರಿತ್ರಿಕ ನೆನಪುಗಳಿವೆ. ರಾಷ್ಟ್ರವಾದದ ಮೂಲ ಪ್ರಮೇಯಗಳಲ್ಲಿ ನೆನಪುಗಳು ಇರಲೇಬೇಕಲ್ಲ. ನಾಲ್ವರೂ ಪಶ್ಚಿಮದಲ್ಲಿ ಕಲಿತವರು. ಪಶ್ಚಿಮದ ಸಂಸ್ಕೃತಿಗಳ ಕುರಿತು ಅರಿವಿರುವವರು. ಆದರೆ ನಾಲ್ಕೂ ಜನರು ಕಲ್ಪಿಸಿಕೊಂಡ ಭಾರತ ಮಾತ್ರ ಭಿನ್ನ ಮಾದರಿಗಳದು. ಉದಾರವಾದಿ ಮಾನವತಾವಾದ ಬುನಾದಿಯಾಗಿದ್ದ ಸಿದ್ಧಾಂತವನ್ನು ಇವರಲ್ಲಿ ಕಾಣಬಹುದು. ಟಾಗೂರರಿಗೆ ದೇಶವೆಂದರೆ ನಾಗರಿಕತೆಯ ವಿಸ್ತರಿಸಿದ ಆಧ್ಯಾತ್ಮಿಕ ಆವೃತ್ತಿ. ಗಾಂಧೀಜಿಗೆ ಎಲ್ಲರೂ ಒಳಗೊಂಡು ಬದುಕಿದ್ದ ಧರ್ಮೋ-ರಾಜಕೀಯ ನೆನಪು. ಅಂಬೇಡ್ಕರರಿಗೆ ಪರಂಪರೆಯ ಪ್ರಬಲ ಆವೃತ್ತಿ ಗಳಲ್ಲಿ ಹಿಂಸೆ-ಶೋಷಣೆ, ತಾರತಮ್ಯಗಳಿವೆ. ನೆಹರೂಗೆ ಮೇಲಿನ ಮೂವರ ನೆನಪುಗಳನ್ನು ನಿರಾಕರಿಸದ ಭಾವವಿದೆ. ಈ ಮಾದರಿಗಳು ಭಾರತವನ್ನು ಆಳವಾಗಿ ಪ್ರಭಾವಿಸಿವೆ.ಈಗ ಸಾವರ್ಕರರ ಮಾದರಿ ವಿಜೃಂಭಿಸುತ್ತಿದೆ ಇದಕ್ಕೆ ಕಾರಣಗಳು ಹಲವು.

ಗಾಂಧೀಜಿ, ಟಾಗೂರರು ಬಳಸುವ ರೂಪಕ ಗಳನ್ನು ಮತ್ತು ಸಾವರ್ಕರರು ಬಳಸುವ ಪುರಾಣ-ಇತಿಹಾಸದ ವ್ಯಕ್ತಿ ವಿಷಯಗಳನ್ನು ಬಳಸಿದರೂ ಇಬ್ಬರಿಗಿಂತ ಭಿನ್ನವಾದ ರಾಷ್ಟ್ರವಾದವನ್ನು ಮಂಡಿಸುತ್ತಾರೆ.ಇಲ್ಲಿ ಟಾಗೂರರ ವಿಶ್ವಾತ್ಮಕವಾದ ಪ್ರಶ್ನೆಗೊಳಗಾಗುವುದಿಲ್ಲ. ಅದಕ್ಕೆ ಬೇರುಗಳು ಬೇಕಲ್ಲ, ಚೌಕಟ್ಟು ಬೇಕಲ್ಲ. ಅಂಥದೊಂದು ವಿಶಿಷ್ಟತೆ ಇಲ್ಲದಿದ್ದರೆ ಹೇಗೆ? ಅದನ್ನು ಮೂರ್ತೀಕರಿಸುವುದು ಹೇಗೆ? ಇದು ಆ್ಯಕ್ಟಿವಿಸ್ಟ್ ಒಬ್ಬನ ಕಷ್ಟದ ಪ್ರಶ್ನೆ. ಮೂರ್ತರೂಪಕ್ಕೆ ದಕ್ಕದಿದ್ದರೆ ಜನರಿಗೆ ದಾಟಿಸಲಾಗದು. ಹಾಗಾಗಿ ಗಾಂಧೀಜಿ ಕ್ರಿಯೆಗಳ ಮೂಲಕ ಅರ್ಥಮಾಡಿಸಲು ಯತ್ನಿಸುತ್ತಾರೆ. ಸರ್ವ ರೊಂದಿಗೆ ಸರ್ವರ ವಿಕಾಸವಾಗಬೇಕಾದರೆ ಮತ್ತು ಬಾಳುವೆ ಮಾಡಬೇಕಾದರೆ ಅದಕ್ಕೊಂದು ಮೂರ್ತ ರೂಪದ ಚೌಕಟ್ಟು ಬೇಕು. ಅದರಲ್ಲಿ ದ್ವೇಷ ಅಸೂಯೆಗಳಿರದ ಎದೆಯ ದನಿಯನ್ನು ಆಧರಿಸಿದ ರಾಷ್ಟ್ರವನ್ನು ನಿರ್ಮಿಸ ಬೇಕೆಂದು ಆಶಿಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ. ಟಾಗೂರರ ದೇಶದ ಕಲ್ಪನೆ ಗಾಂಧೀಜಿಗೆ ಅನುಷ್ಠಾನ ಯೋಗ್ಯವಲ್ಲ. ಹಾಗೆಯೇ ಗಾಂಧಿಯವರ ಸಂಪ್ರದಾಯಸ್ಥ ಮಾನವೀಯ ಧಾರ್ಮಿಕನೊಬ್ಬನ ಕನವರಿಕೆಯಂತೆ ಕಾಣುವ ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಸಮಾಜಶಾಸ್ತ್ರಗಳು ನೆಹರೂರಂಥವರಿಗೆ ಅಪಥ್ಯವೆನ್ನಿಸುತ್ತಿದ್ದವು. ಅವು ಸಾವರ್ಕರಿಗೆ ಹೇಡಿತನದ ಆವೃತ್ತಿಯಂತೆ ಕಂಡಿದ್ದರೆ ಆಶ್ಚರ್ಯವಿಲ್ಲ.

ಗಾಂಧೀಜಿಯವರದು ಸಮನ್ವಯದ ಮಾರ್ಗ. ಈ ಮಾರ್ಗದಲ್ಲಿ ಯಾರನ್ನೂ ನೋಯಿಸದ ನೈಜ ಧಾರ್ಮಿಕ ನೊಬ್ಬನ ಒಳಗೊಂಡು ಬಾಳುವ ಆಶಯವಿದೆ. ಹಾಗಾಗಿ ಇದು ಸಾವರ್ಕರರ ಇವನಾರವ ಎನ್ನುವ ರಾಷ್ಟ್ರವಾದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಈ ಕುರಿತು ತಮ್ಮ ಹಿಂದ್ ಸ್ವರಾಜ್ ಕೃತಿಯಲ್ಲಿ, ಬೇರೆ ಬೇರೆ ಧರ್ಮದ ಜನರು ಇದ್ದರೆ ಹಿಂದೂಸ್ಥಾನ ಒಂದು ರಾಷ್ಟ್ರವಾಗದೇ ಹೋದೀತೆ? ಬೇರೆ ದೇಶಗಳಿಂದ ಹೊಸಬರು ಬಂದರೆ ರಾಷ್ಟ್ರೀಯತೆ ನಷ್ಟವಾಗದು; ಬಂದವರು ಇವರಲ್ಲಿ ಬೆರೆತು ಹೋಗುತ್ತಾರೆ. ಆ ಸ್ಥಿತಿ ಬಂದಾಗಲೇ ಒಂದು ದೇಶ ರಾಷ್ಟ್ರವಾಗುತ್ತದೆ. ಆ ದೇಶಕ್ಕೆ ಹೊರಗಿನದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬೇಕು. ಹಿಂದೂಸ್ಥಾನ ಯಾವಾಗಲೂ ಹೀಗೆಯೇ ಇದೆ. ನಿಜವಾಗಿ, ಎಷ್ಟು ಮನುಷ್ಯರೋ ಅಷ್ಟು ಧರ್ಮ.ಆದರೆ ರಾಷ್ಟ್ರೀಯತೆಯ ಭಾವನೆಯುಳ್ಳವರು ಪರಸ್ಪರರ ಧರ್ಮದಲ್ಲಿ ಕೈ ಹಾಕರು. ಹಿಂದೂಸ್ಥಾನದಲ್ಲಿ ಬರೀ ಹಿಂದೂಗಳೇ ಇರಬೇಕು ಎಂದು ಹಿಂದೂಗಳು ಕನಸು ಕಾಣುತ್ತಿದ್ದಾರೆ. ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ, ಈಸಾಯಿ ಎಲ್ಲರೂ ದೇಶ ಭ್ರಾತೃಗಳು. ತಮ್ಮ ಹಿತಕ್ಕಾಗಿಯಾದರೂ ಅವರು ಐಕ್ಯಮತದಿಂದ ಬಾಳಬೇಕು. ಒಂದೇ ಥರವಿದ್ದರೇನೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ. ಹಿಂದೂಸ್ಥಾನದಲ್ಲಿಯಂತೂ ಎಂದೂ ಹಾಗೆ ತಿಳಿದಿಲ್ಲ...... ಹಿಂದೂ ಮುಸಲ್ಮಾನರ ಜನ್ಮವೈರ ಎಂಬ ಶಬ್ದವನ್ನು ಹುಟ್ಟಿಸಿದವರು ನಮ್ಮ ಶತ್ರುಗಳು ಬ್ರಿಟಿಷರು. (ಪು.38), ಹಿಂದ್ ಸ್ವರಾಜ್ಯ, 1938 ರ ಪರಿಷ್ಕೃತ ಆವೃತ್ತಿ ಎಂದು ಬರೆಯುತ್ತಾರೆ. ದೇಶವಾಗಿದ್ದಾಗಿನ ಐಕ್ಯಮತವು ರಾಷ್ಟ್ರವಾದಾಗಲೂ ಮುಂದುವರಿಯಬೇಕೆನ್ನುವುದು ಗಾಂಧೀಜಿಯ ಹಂಬಲ. ಹಿಂದ್ ಸ್ವರಾಜ್ ಕೃತಿ 1909 ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಗೆ ಬರುವಾಗ ಹತ್ತು ದಿನಗಳಲ್ಲಿ ರಚನೆಯಾದ ಕೃತಿ. ಸತ್ಯದ ಹುಡುಕಾಟದಲ್ಲಿ ಇದು ನಿರಂತರ ಪರಿಷ್ಕರಣೆಯಾದ ಕೃತಿಯೂ ಹೌದು. ಮೊದಲ ಆವೃತ್ತಿ ಬರೆವ ಹೊತ್ತಿಗೆ ಅಸ್ಪಶ್ಯತೆಯಂಥ ವಿಚಾರಗಳು ಗಾಂಧೀಜಿಗೆ ಮುಖ್ಯವಲ್ಲ. ಆದರೆ ಕರಾಚಿ ಕಾಂಗ್ರೆಸ್ ಸಮ್ಮೇಳನದ 1931 ಹೊತ್ತಿಗೆ ಅಸ್ಪಶ್ಯತೆಯನ್ನು ಹಿಂದೂ ಧರ್ಮದ ಪಿಡುಗು, ಮಾನವತೆಗೆ ಶಾಪ ಎಂದು ವ್ಯಾಖ್ಯಾನಿಸುತ್ತಾರೆ. ಕೋರ್ಟ್, ಹೊಸ ಕಾನೂನುಗಳು, ಭೂಕಂದಾಯ ವ್ಯವಸ್ಥೆ, ಆಡಳಿತ ಮಾದರಿ, ಹೊಸ ಸೈನಿಕ ವ್ಯವಸ್ಥೆ, ನವೀನ ರೀತಿಯ ಯಾಂತ್ರಿಕ ಉತ್ಪಾದನೆ, ವಿತರಣೆಗಳ ಕುರಿತು ಗಾಂಧೀಜಿಗೆ ತೀವ್ರ ಆಕ್ಷೇಪವಿದೆ. ವಿಕೇಂದೀಕೃತ ಆರ್ಥಿಕ ವ್ಯವಸ್ಥೆ, ಗ್ರಾಮ ಕೇಂದ್ರಿತ ಆಡಳಿತ ಮಾದರಿಗಳನ್ನು ಉಳಿಸಿಕೊಂಡೇ ಹೊಸ ರಾಷ್ಟ್ರದ ಚೌಕಟ್ಟನ್ನು ನಿರ್ಮಿಸ ಬೇಕೆಂದು ಬಯಸುತ್ತಾರೆ. ಇದರಲ್ಲಿ ಜಾತಿ, ಧರ್ಮಗಳಂಥ ವಿಚಾರಗಳು ಮುಂದಾಗಬಾರದೆನ್ನುವುದು ಇದರ ಮೂಲ ಆಶಯ.

ರಾಷ್ಟ್ರವಾದದಂಥ ಮೂಲತಃ ಹಿಂಸಾತ್ಮಕವಾದ ಸಂರಚನೆಗೆ ಅಹಿಂಸೆಯನ್ನು ಅಳವಡಿಸಲು ಪ್ರಯತ್ನಿಸಿ ದರು. ಅದು ತನ್ನ ಕಣ್ಣ ಮುಂದೆಯೆ ದೇಶ ಇಬ್ಭಾಗದ ಸಂದರ್ಭದಲ್ಲಿ ಕುಸಿದು ಬಿದ್ದುದನ್ನು ನೋಡಿ ಎದೆ ಬಿರಿದಿರ ಬೇಕು. ಟಾಗೂರರಿಗೆ ತನ್ನ ಅಂದಾಜು ನಿಜವಾದುದನ್ನು ಕಂಡು ಗಾಬರಿಯಾಗಿರಬೇಕು.

ತನ್ನ ಹೋರಾಟಕ್ಕೆ ಇನ್ನಷ್ಟು ಖಚಿತತೆ ನೀಡುವ ಸಲು ವಾಗಿ ಗಾಂಧೀಜಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಹೊತ್ತಿಗೆ ಭಾಷಾವಾರು ರಾಜ್ಯಗಳ ಅಗತ್ಯತೆಯನ್ನು ಸಮರ್ಥಿಸುತ್ತಾರೆ. ಪ್ರಾಂತ್ಯವಾರು ಇದ್ದ ಕಾಂಗ್ರೆಸನ್ನು ರಾಜ್ಯವಾರಾಗಿ ರಚಿಸುತ್ತಾರೆ. ಹಿಂದೂ ಮುಸ್ಲಿಮ್ ಮುಂತಾದ ಸಮುದಾಯಗಳ ನಡುವೆ ಭ್ರಾತೃತ್ವ, ಅಸ್ಪಶ್ಯತಾ ನಿವಾರಣೆ, ಭಾಷಿಕ-ಜನಾಂಗಿಕ ಬಹುತ್ವ, ವಿಕೇಂದ್ರಿಕೃತಗೊಂಡ ಗ್ರಾಮೀಣ ಆರ್ಥಿಕತೆ ಇವು ಗಾಂಧೀಜಿಯವರ ರಾಷ್ಟ್ರವಾದದ ಮುಖ್ಯ ಆದ್ಯತೆಗಳು.

 ಆದರೆ ಅಂಬೇಡ್ಕರರ ಸಾಮಾಜಿಕ ನ್ಯಾಯ, ನೆಹರೂ ರವರ ವೈಜ್ಞಾನಿಕತೆಯ ಹಂಬಲ, ಗಾಂಧಿಯವರ ಸರ್ವೋದಯ ತತ್ವ, ಆರ್ಥಿಕತೆ ಕುರಿತ ನಿಲುವು, ಟಾಗೂರರ ವಿಶ್ವಾತ್ಮಕತೆಯ ಹಂಬಲಗಳು ಒಟ್ಟುಗೂಡಿದ ಒಂದು ರಾಷ್ಟ್ರ ರೂಪುಗೊಳ್ಳುವುದಾದರೆ ಮನುಕುಲದ ಜೀವಿತದ ಭರವಸೆಯನ್ನು ಹೆಚ್ಚಿಸಿಕೊಳ್ಳಬಹುದು.

ಆಶ್ಚರ್ಯವೆಂದರೆ ಮೇಲಿನ ಎಲ್ಲ ಆಶಯಗಳು ಕನ್ನಡದ ಪ್ರತಿಭೆಯಾದ ಕುವೆಂಪುರಲ್ಲಿ ಮೇಳವಿಸಿ ಜನಿಸುತ್ತವೆ. ಗಾಂಧೀಜಿಯಯವರ ಸರ್ವೋದಯ ತತ್ವ, ಅಂಬೇಡ್ಕರರ ದಮನಿತ ಲೋಕದ ಧ್ವನಿ, ಟಾಗೂರರ ವಿಶ್ವಮಾನವತೆ, ನೆಹರೂರವರ ಆಧುನಿಕ ಸೆಕ್ಯುಲರ್ ಭಾರತ ಈ ನಾಲ್ಕೂ ತತ್ವಗಳು ಮುಪ್ಪರಿಗೊಂಡ ಅಭಿವ್ಯಕ್ತಿ ವಿಧಾನ ರೂಪುಗೊಂಡಂತಿದೆ. ಕಾಣುತ್ತಿದೆ. ಪ್ರಧಾನ ಸಂಸ್ಕೃತಿ ಯಾವುದು? ಯಾರದು? ಎಂಬುದರ ಮರುವ್ಯಾಖ್ಯಾನವನ್ನು ಕುವೆಂಪು ಮಾಡುತ್ತಾರೆ. ಕಲ್ಕಿ, ಧನ್ವಂತರಿ ಚಿಕಿತ್ಸೆ, ಬೆರಳ್ಗೆ ಕೊರಳ್ ಮುಂತಾದವು ಪ್ರತಿ ಸಂಸ್ಕೃತಿಯನ್ನು ಪ್ರತಿಪಾದಿಸುವ ಕೃತಿಗಳಂತೆಯೇ ಸಾಮಾಜಿಕ ನ್ಯಾಯವನ್ನು ವರ್ತಮಾನದ ಕಣ್ಣುಗಳಿಂದ ವಿಶ್ಲೇಷಿಸುವ ಕ್ರಮವನ್ನು ಶೋಧಿಸುತ್ತದೆ. ಹೌದು. ದಮನಿತ, ರೈತ, ಆದಿವಾಸಿ, ಮಹಿಳೆ, ಮಕ್ಕಳಿಗೆ, ಆಧುನಿಕ ರಾಷ್ಟ್ರದಲ್ಲಿ ನ್ಯಾಯ ಮತ್ತು ನೆಮ್ಮದಿ ಸಿಗದಿದ್ದರೆ ಆ ರಾಷ್ಟ್ರ ವಾದಕ್ಕೆ ಅರ್ಥವಿಲ್ಲ. ಪ್ರಕೃತಿಯ ನವಿರು ಚಲನೆಗಳಿಗೆ ಅಡ್ಡಿಯಾಗುವ ರಾಕ್ಷಸರೂಪಿ ರಾಷ್ಟ್ರವಾದಕ್ಕೂ ಕುವೆಂಪುರಲ್ಲಿ ಅವಕಾಶವಿಲ್ಲ.

 ಕರ್ನಾಟಕ ರಾಷ್ಟ್ರಗೀತೆ ಹೆಸರಿನಲ್ಲಿ ಬರೆದ ಭಾರತ ಜನನಿಯ ತನುಜಾತೆ ಪದ್ಯವನ್ನು ರಾಜ್ಯವು ನಾಡಗೀತೆ ಯನ್ನಾಗಿಸಿ ಸ್ಮರಿಸುತ್ತಿದೆ. ಕುವೆಂಪು ರಾಷ್ಟ್ರ ಕುರಿತ ಪರಿಕಲ್ಪನೆಯ ಪ್ರಾತಿನಿಧಿಕ ಪದ್ಯಗಳಲ್ಲಿ ಇದೂ ಒಂದು. ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನರುದ್ಯಾನ..... ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ಕವಿಗೆ ನೆನಪೂ ಹೌದು. ಕನಸೂ ಹೌದು. ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರಾ, ಎನ್ನುವಾಗ ಹೊಸ ಸೆಕ್ಯುಲರ್ ದೇವರ ಕಲ್ಪನೆಯನ್ನು ಪ್ರತಿಪಾದಿಸುತ್ತಾರೆ. ಹೊಸ ರಾಷ್ಟ್ರಕ್ಕೆ ಹೊಸ ದೇವರು ಅಗತ್ಯ. ಅಲ್ಲಿ ಎಲ್ಲರೊಡಗೂಡಿ ಎಲ್ಲರಿಗಾಗಿ ನವ ಭಾರತವನ್ನು ನಿರ್ಮಿಸಬೇಕೆನ್ನುವುದು ಕುವೆಂಪು ಆಶಯ.

ಗುಡಿ, ಚರ್ಚ್, ಮಸೀದಿಗಳ ಬಿಟ್ಟು ಹೊರಬನ್ನಿ ಎನ್ನುವಾಗ ಗಾಂಧೀಜಿಗಿಂತ ಭಿನ್ನವಾದ ನೆಹರೂ ಮಾದರಿಯ ವೈಚಾರಿಕ ರಾಷ್ಟ್ರವಾದವನ್ನು ಪ್ರತಿಪಾದಿಸು ತ್ತಾರೆ. ಭಾರತ ಮತ್ತು ಕರ್ನಾಟಕವನ್ನು ತಾಯಿ ಮಗಳಾಗಿಸಿ ತೊಡಕು ಬಿಡಿಸುತ್ತಾರೆ. ಹಿಂದಿ, ಸಂಸ್ಕೃತದ ಹೇರಿಕೆಯ ವಿರುದ್ಧ ಕದನಕ್ಕಿಳಿಯುತ್ತಾರೆ. ಸರ್ವರನ್ನೊಳಗೊಂಡು ಸರ್ವೋದಯವಾಗಬೇಕು. ಅಲ್ಲಿ ಯಾರೂ ಮೇಲಲ್ಲ. ನೀರೆಲ್ಲವೂ ತೀರ್ಥ ಎನ್ನುವ ಕುವೆಂಪು ತನ್ನ ಬೇರುಗಳನ್ನು ಭದ್ರಗೊಳಿಸಿಕೊಂಡು ಭಾರತವನ್ನು ಕಟ್ಟಬೇಕು, ವಿಜ್ಞಾನ ಮತ್ತು ವೈಚಾರಿಕತೆಗಳ ಮೂಲಕ ವಿಶ್ವ ಪ್ರಜೆಯಾಗಬೇಕು ಎಂಬ ಧ್ವನಿ ಅವರ ಬರಹಗಳುದ್ದಕ್ಕೂ ಮಾರ್ದನಿಸುತ್ತದೆ. ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬ ತತ್ವವೇ ಡೆಮಾಕ್ರಸಿಯ ತಳಹದಿ. ಇದು ಹರಾರಿ ಹೇಳುವ ವಿಶಿಷ್ಟವೆಂದು ರಾಷ್ಟ್ರದ ಪಾತ್ರಗಳು ಪರಿಭಾವಿಸಬೇಕಾದ ತತ್ವ. ಇಲ್ಲಿ ಮನುಷ್ಯರಷ್ಟೇ ಅಲ್ಲ ಹುಲ್ಲಿನ ಬೇರೊಂದು ದುರ್ಬಲಗೊಂಡರೂ ರಾಷ್ಟ್ರದ ಆರೋಗ್ಯದಲ್ಲಿ ಏರಪೇರಾ ಗಬೇಕು. ಕುವೆಂಪು ಅವರ ರಾಮ, ಕಲ್ಕಿ, ಹೂವಯ್ಯ, ಗುತ್ತಿ, ಹುಲಿಯ, ಏಕಲವ್ಯ, ದ್ರೌಪದಿ ಮುಂತಾದವರೆಲ್ಲ ಹಾಗೆ ವಿಶ್ವಸ್ಥಗೊಂಡ ಪಾತ್ರಗಳು. ತನ್ನ ನೆಲದಿಂದ ಹೊರ ಹೋದ ರಾಷ್ಟ್ರಿಕರು ಅನ್ಯ ನೆಲದಲ್ಲಿ ಅವರಿಗೆ ಮಗ್ಗುಲ ಮುಳ್ಳಾಗದೆ ಅಲ್ಲಿನ ಸಂಸ್ಕೃತಿಗಳೊಡನೆ ಬೆರೆತು ಬದುಕಬೇಕು. ಎಲ್ಲಿದ್ದರೂ ಕನ್ನಡತನವನ್ನು ಬಲಿ ಕೊಡದೆ ಅನನ್ಯತೆಯನ್ನು ಉಳಿಸಿ ಕೊಳ್ಳಬೇಕು ಎನ್ನುತ್ತಾರೆ. ಇಲ್ಲಿಗೆ ಬಂದು ನೆಲೆಸಿದ ಇತರ ಭಾಷಿಕರೂ ಹಾಗೆ ಬದುಕಬೇಕು ಎನ್ನುವ ಸ್ಪಷ್ಟತೆ ಕುವೆಂಪು ಅವರದು.

ಹರಾರಿ ಆಶಿಸುವ ರಾಷ್ಟ್ರವಾದದ ಪ್ರಮೇಯಗಳನ್ನು ಕುವೆಂಪು ತಮ್ಮ ಸೃಜನಶೀಲ, ವೈಚಾರಿಕ ಬರವಣಿಗೆಗಳ ಮೂಲಕ ವಿಶ್ವಕ್ಕೆ ಬೆಳಕು ಕಾಣಿಸಿದ್ದಾರೆ. ಇಲ್ಲಿ ಕುವೆಂಪು ಅವರಿಗೆ ಯಾವ ಗೊಂದಲಗಳೂ ಇಲ್ಲ. ರಾಷ್ಟ್ರವು ರಾಕ್ಷಸರೂಪಿಯಾದ ಆರ್ಥಿಕ, ರಾಜಕೀಯ ವ್ಯವಸ್ಥೆ ಎನ್ನುವ ಟಾಗೂರರ ಕಲ್ಪನೆಯನ್ನು ಕುವೆಂಪು ಸಂಪೂರ್ಣ ಒಪ್ಪುವುದಾಗಲಿ, ತಿರಸ್ಕರಿಸುವುದನ್ನಾಗಲಿ ಮಾಡುವುದಿಲ್ಲ. ಸಾವರ್ಕರರ ಕೆಲವರನ್ನು ಹೊರಗಿಡುವ ಸಮರಶೀಲ ರಾಷ್ಟ್ರವನ್ನೂ ನೆೆಹರೂರವರ ಬೃಹತ್ ಆಧುನಿಕ ರಾಷ್ಟ್ರವಾದವನ್ನೂ ಸಂಪೂರ್ಣ ಸಮರ್ಥಿಸುವುದಿಲ್ಲ. ಹಾಗೆಯೆ ಗಾಂಧೀಜಿಯವರ ಆಧುನಿಕ ನಾಗರಿಕತೆಯ ವಿರೋಧದ ಪರಿಕಲ್ಪನೆಯನ್ನೂ ಒಪ್ಪುವುದಿಲ್ಲ. ಬದಲಾಗಿ ವಿಶಿಷ್ಟ, ವಿಶ್ವಾತ್ಮಕ, ವೈಚಾರಿಕ, ವೈಜ್ಞಾನಿಕ, ಹೃದಯವಂಥ, ಸಹನೆ, ಕರುಣೆಗಳ ರಾಷ್ಟ್ರವೊಂದನ್ನು ಕುವೆಂಪು ಕಲ್ಪಿಸುತ್ತಾರೆ.ಇಲ್ಲಿ, ಗಿಳಿ, ಕೋಗಿಲೆ, ಹುಲಿಯ, ಜೀರುಂಡೆಗಳಿಗೆ ಹಾನಿಯಾದರೂ ಆ ರಾಷ್ಟ್ರಕ್ಕೆ ಅರ್ಥವಿಲ್ಲ. ಆಧುನಿಕ ರಾಷ್ಟ್ರವಾದಿ ಸಂರಚನೆಗಿಂತ ಉತ್ತಮವಾದ ವ್ಯವಸ್ಥೆ ಬೇರೆ ಇಲ್ಲದ ಕಾರಣಕ್ಕೆ ಇದನ್ನು ನಿರಾಕರಿಸುವ ಅಗತ್ಯವಿಲ್ಲ, ಬದಲಾಗಿ ಈ ಸಂರಚನೆಯನ್ನು ಉತ್ತಮಪಡಿಸುವ ಮಾದರಿಯೊಂದನ್ನು ಕುವೆಂಪು ಮಂಡಿಸುತ್ತಾರೆ. ಇದನ್ನು ಇಸ್ರೇಲಿನ ಹರಾರಿ ಜಾಗತಿಕ ರಾಜಕೀಯ ತತ್ವವನ್ನಾಗಿಸುತ್ತಿದ್ದಾನೆ.

ರಾಷ್ಟ್ರವಾದದ ಹೊಸ ಆತಂಕಗಳು ಮತ್ತು ಹೊರ ದಾರಿಗಳು

ರಾಷ್ಟ್ರಪ್ರಭುತ್ವಗಳು ನೂರು ವರ್ಷಗಳಲ್ಲಿ ನಡೆಸಿದ ದಮನಗಳನ್ನು ನೋಡಿದ ಮಾನವತಾವಾದಿಗಳು ವಿಶ್ವದುದ್ದಕ್ಕೂ ಬಹುಮಟ್ಟಿಗೆ ಟಾಗೂರರ ನಿಲುವುಗಳನ್ನೆ ಪುನರುಚ್ಚರಿಸಿದ್ದಾರೆ. ಆಂಟನಿ ಗಿಡ್ಡೆನ್ಸ್‌ನಂಥ ಸಮಾಜ ವಿಜ್ಞಾನಿ, ಸ್ಟೀಪನ್ ಹಾಕಿಂಗ್ ರೀತಿಯ ಖಭೌತ ವಿಜ್ಞಾನಿ, ನವೋಮಿ ಕ್ಲೇನ್‌ಳಂತ ಪರಿಸರ ವಿಜ್ಞಾನಿ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನಿ ಸೇರಿದಂತೆ ಅನೇಕ ರಾಜಕಾರಣಿಗಳು, ಗ್ರೆಟಾ ಥನ್ಬರ್ಗ್‌ ರೀತಿಯ ಹೊಸ ತಲೆಮಾರಿನ ಪರಿಸರ ಹೋರಾಟಗಾರ್ತಿ ಮತ್ತಿತರ ವಲಯಗಳ ಅನೇಕರು ರಾಷ್ಟ್ರಗಳ ರಾಕ್ಷಸ ಜಿದ್ದಿನಿಂದಾಗಿ ಮನುಕುಲ ನಾಶವಾಗುವಂಥ ಸ್ಥಿತಿಗೆ ತರಲಾಗಿದೆ ಎಂದು ಆತಂಕಿಸುತ್ತಾರೆ. ಇದಕ್ಕೂ ಮೊದಲು ಬಲಾಢ್ಯರಾಷ್ಟ್ರಗಳು ಮನುಷ್ಯನನ್ನು ಪರಕೀಯನನ್ನಾಗಿಸಿ ದಮನ ಮಾಡುವುದರ ವಿರುದ್ಧ ಫ್ರಾನ್ಸಿನ ಚಿಂತಕರು, ಕಲಾವಿದರು, ಬರಹಗಾರರು ಅಸ್ತಿತ್ವವಾದವೆಂಬ ಹೊಸ ಚಳುವಳಿಯನ್ನೇ ಹುಟ್ಟು ಹಾಕಿದ್ದರು. ಇವರೆಲ್ಲರ ಮಧ್ಯೆ ನನ್ನ ತಲೆಮಾರಿನ ಅತ್ಯಂತ ಪ್ರತಿಭಾವಂತ ಚಿಂತಕ, ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ವಿಶ್ವ ಇತಿಹಾಸವನ್ನು ಬೋಧಿಸುತ್ತಿರುವ ಅಧ್ಯಾಪಕ ಯುವಲ್ ಹರಾರಿ ಕಳೆದ ಐದಾರು ವರ್ಷಗಳಿಂದ ಗಮನ ಸೆಳೆಯುತ್ತಿದ್ದಾನೆ.

 ಹರಾರಿ ಬಹುಶಃ ಟಾಗೂರರನ್ನು ಓದಿಕೊಂಡಿರಬೇಕು, ಆದರೆ ಎಲ್ಲೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ರಾಷ್ಟ್ರವಾದ ಕುರಿತ ಇವರ ಮುಕ್ಕಾಲು ಪಾಲು ಚಿಂತನೆಗಳು ಟಾಗೂರರ ಚಿಂತನೆಗಳನ್ನೆ ನೆನಪಿಸುತ್ತವೆ. ಕವಿಯ ರೂಪಕಾತ್ಮಕ ಭಾಷೆಯನ್ನು ಸಮಾಜ ವಿಜ್ಞಾನದ ಚೌಕಟ್ಟಿಗೆ ಕೂರಿಸಿ ಹರಾರಿ ವಿವರಿಸುತ್ತಾನೆ.ಅವನ 21ನೇ ಶತಮಾನಕ್ಕೆ 21 ಅಧ್ಯಾಯಗಳು ಎಂಬ ಬಹು ಚರ್ಚಿತ ಕೃತಿಯಲ್ಲಿ ರಾಷ್ಟ್ರವಾದವನ್ನು ಕುರಿತು ಹೀಗೆ ವಿವರಿಸುತ್ತಾನೆ. ರಾಷ್ಟ್ರವಾದವು ಮನುಷ್ಯನ ಶಾಶ್ವತವೂ, ಸಹಜವೂ ಆದ ಅನ್ವೇಷಣೆಯೇನಲ್ಲ. ಅದು ಅವನ ಮಾನಸದಾಳದ ಬೇರುಗಳಿಂದ ಹುಟ್ಟಿದ ಜೈವಿಕ ವಿಕಾಸವೂ ಅಲ್ಲ ಬದಲಿಗೆ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಸಾಮಾಜಿಕ ರಚನೆ ಅಷ್ಟೆ (ಪುಟ; 110), 21ನೇ ಶತಮಾನಕ್ಕೆ 21 ಅಧ್ಯಾಯಗಳು. ರಕ್ಷಣೆ, ಆರೋಗ್ಯ, ಸಾಮಾಜಿಕ ಕಲ್ಯಾಣದ ದೃಷ್ಟಿಯಿಂದ ಈ ಆಧುನಿಕ ರಾಷ್ಟ್ರವಾದವೆಂಬ ಕಥನವು ಆಕರ್ಷಕವಾದುದು. ತನ್ನ ರಾಷ್ಟ್ರದ ಲಕ್ಷಾಂತರ, ಕೋಟ್ಯಂತರ ಜನರನ್ನು ಒಮ್ಮೆಯೂ ನೋಡಿ ಮಾತನಾಡಿಸದಿದ್ದರೂ ನಮ್ಮವರು ಎಂಬ ಭಾವನೆಯನ್ನು ಹುಟ್ಟಿಸಲು, ಆ ರಾಷ್ಟ್ರದ ಬಹುಪಾಲು ಭೂಭಾಗದ ಪರಿಚಯವೇ ಇಲ್ಲದಿದ್ದರೂ ಇದು ನನ್ನ ರಾಷ್ಟ್ರ ಎಂದನ್ನಿಸುವಂತೆ ಮಾಡಲು ಈ ಕಥನವು ಯಶಸ್ವಿಯಾಗಿದೆ.ಆಂಡರ್ ಸನ್ ಈ ರೀತಿಯ ಚಲನೆಯನ್ನು ಕಲ್ಪಿತ ಕುಲ ಎನ್ನುತ್ತಾನೆ.ಇದು ಬುಡಕಟ್ಟು ನಡವಳಿಕೆಗೆ ಸಂಪೂರ್ಣ ವಿರುದ್ಧ. ಬುಡಕಟ್ಟು ಸಮಾಜಗಳಲ್ಲಿ ರಕ್ತ ಸಂಬಂಧಿಯಲ್ಲದವನು ತಮ್ಮವನಾಗಲಾರ. ತಾನು ಗುರುತಿಸಿಕೊಂಡ ಭೂಭಾಗದ ಪ್ರತಿ ಕಣ ಕಣವೂ ಅವನೊಂದಿಗೆ ಸಂವಾದಿಸುತ್ತದೆ.

 ಎಷ್ಟೆಲ್ಲ ಕಲ್ಯಾಣ ಗುಣಗಳಿದ್ದರೂ ಆಧುನಿಕ ರಾಷ್ಟ್ರವಾದಿ ಕಥನವು ಮನುಷ್ಯನ, ಭೂಮಿಯ ಬುಡಕ್ಕೆ ಕುದಿ ನೀರಾಗಿ ಪರಿಣಮಿಸುತ್ತಿದೆ.ಮೊದಲ ಮಹಾಯುದ್ಧದ ಹೊತ್ತಿಗೆ ಅದು ತನ್ನ ಕೋರೆದಾಡೆಗಳನ್ನು ಪ್ರದರಿರ್ಶಿಸಿತ್ತು. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಮೇಲೆ ಅಣುಬಾಂಬುಗಳನ್ನು ಸುರಿಯುವ ಮೂಲಕ ಸಾಮೂಹಿಕ ವಿನಾಶಕ್ಕೆ ಮುನ್ನುಡಿ ಬರೆಯಿತು. ಅತಿ ಯಾಂತ್ರಿಕ ಉತ್ಪಾದನಾ ವಿಧಾನದಿಂದ ಹೆಚ್ಚುವರಿ ಉತ್ಪಾದನೆ ಮಾಡಿದ ಯುರೋಪಿನ ಮತ್ತು ಅಮೆರಿಕದ ರಾಷ್ಟ್ರಗಳು ಮಾರುಕಟ್ಟೆಗಾಗಿ ನಡೆಸಿದ ಸಂಘರ್ಷದ ಪ್ರತಿಫಲ ಈ ಯುದ್ಧವಾಗಿತ್ತು. ಜೊತೆಗೆ ಹಿಟ್ಲರನ ಜನಾಂಗೀಯ, ಆರ್ಯ ಶ್ರೇಷ್ಠ, ಶುದ್ಧ ರಕ್ತದ ಜರ್ಮನ್ ರಾಷ್ಟ್ರವಾದ ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯಿತು. ಮಾನವತಾವಾದಿಗಳ, ಜನರ ಪಾಲಿಗೆ ಇದು ಕರಾಳ ನೆನಪು. ರಾಷ್ಟ್ರದ ಬೀಜಗಳಲ್ಲಿ ಇಂಥಹದ್ದೊಂದು ಕ್ರೌರ್ಯ ಇರಬಲ್ಲುದು ಎಂಬುದೂ ಅರಿವಿಗೆ ಬಂತು. ಹಿಟ್ಲರ್ 5 ಮಿಲಿಯನ್ ಯಹೂದಿಗಳನ್ನು, ಭಾರತದ ವಿಭಜನೆಯ ಸಂದರ್ಭದಲ್ಲಿ 1 ಮಿಲಿಯನ್ ಜನ ಜನಾಂಗೀಯ ಹತ್ಯೆಗೊಳಗಾದರು.ಹರಾರಿಯ ಪೂರ್ವಜರೂ ಇದೇ ವಾದಕ್ಕೆ ಸಿಲುಕಿ ಸಾಮೂಹಿಕವಾಗಿ ಹತ್ಯೆಗೊಳಗಾಗಿದ್ದರು. ಇವೆಲ್ಲ ರಾಷ್ಟ್ರದ ಹೆಸರಲ್ಲಿ ನಡೆದ ಜನಾಂಗೀಯ ಕೊಲೆಗಳು.

ನನ್ನದು ಶ್ರೇಷ್ಠ ರಾಷ್ಟ್ರ ಮತ್ತು ನನ್ನ ದೇಶ ಮೊದಲು ಎಂಬ ಯುದ್ಧೋನ್ಮಾದ ಜಗತ್ತಿನ ಬಹುಪಾಲು ರಾಷ್ಟ್ರಗಳದ್ದಾಗಿದೆ.ರಾಷ್ಟ್ರಗಳೆಂದರೆ ಜನರೇ ತಾನೆ. ಟ್ರಂಪ್ ಹೋದ ಬಂದಲ್ಲೆಲ್ಲ ಅಮೆರಿಕ ಮೊದಲು ಎಂಬ ಘೋಷಣೆ ಕೂಗಿಯೆ ಮಾತು ಪ್ರಾರಂಭಿಸುತ್ತಾರೆ. ಈ ಧಾಟಿಯನ್ನು ಉಳಿದವರು ಅನುಸರಿಸುತ್ತಿದ್ದಾರೆ. ಈ ಮೇಲಾಟವು ಮನುಕುಲದ ನಾಶಕ್ಕೆ ಬರೆಯಲಾರಂಬಿಸಿದೆ. ಹರಾರಿ ಗುರುತಿಸುವಂತೆ ರಾಷ್ಟ್ರವಾದದಲ್ಲಿ ವಿನಾಶಕಾರಿಯಾದ ಜಾಗತಿಕ ಸಮಸ್ಯೆಗಳಿವೆ.ಅವುಗಳಲ್ಲಿ, 1.ಅಣ್ವಸ್ತ್ರಗಳ ಸವಾಲು 2. ಪರಿಸರದ ಬಿಕ್ಕಟ್ಟುಗಳು ಮತ್ತು 3.ವಿಚ್ಛಿದ್ರಕಾರಿ ತಂತ್ರಜ್ಞಾನದ ಸವಾಲುಗಳು; ಕೃತಕ ಬುದ್ಧಿಮತ್ತೆಯ ಕೊಲೆಗಡುಕ ರೊಬೋಟುಗಳು ಇನ್ನಿತ್ಯಾದಿಗಳೆಲ್ಲ ಇದರ ಭಾಗಗಳು.

 ಸಣ್ಣ ಸಣ್ಣ ದೇಶಗಳು ಸಹ ತಾನು ಯಾರಿಗೂ ಕಡಿಮೆ ಯಲ್ಲ ಎಂಬ ಹುಂಬ ಉತ್ಸಾಹದಲ್ಲಿ ಅಣುಬಾಂಬುಗಳನ್ನು ಶೇಖರಿಸಿಡುತ್ತಿವೆ.ಟಾಗೂರರು ಹೇಳಿದ ಭಯ, ಅಸೂಯೆ, ಕೀಳರಿಮೆ, ದುರಾಸೆಯ ಗುಣಗಳೆಲ್ಲ ಮೈಗೂಡಿಸಿಕೊಂಡು ಮೈತಳೆದ ರಾಷ್ಟ್ರಗಳು ಸ್ವ ರಕ್ಷಣೆಯ ನೆಪದಲ್ಲಿ ಎಲ್ಲರ ನಾಶಕ್ಕೂ ಕಾರಣವಾಗುವಂಥ ಅಣ್ವಸ್ತ್ರಗಳನ್ನು ಗುಡ್ಡೆ ಹಾಕಿಕೊಂಡು ಕೂತಿವೆ.

ಕಲ್ಲಿದ್ದಲು, ಪಳೆಯುಳಿಕೆ ಇಂಧನ, ಅನಿಲಗಳ ಅತಿ ಬಳಕೆಯು ಹಸಿರು ಮನೆ ಪರಿಣಾಮಕ್ಕೆ ಕಾರಣವಾಗಿ ಭೂಮಿಯ ತಾಪ ಏರಿಸಲಾಗುತ್ತಿದೆ. ಬೇಸಾಯದಲ್ಲಿ ಬಳಕೆಯಾಗುತ್ತಿರುವ ಗಂಧಕ, ರಂಜಕ ಸೇರಿದಂತೆ ಅನೇಕ ವಿಷಕಾರಿ ರಾಸಾಯನಿಕಗಳು ಜೈವಿಕ ಸರಪಳಿಯನ್ನೇ ಕೊಂದು ಹಾಕುತ್ತಿವೆ. ಮಾನವನ ಇತಿಹಾಸದಲ್ಲಿ ಇನ್ನೆಂದೂ ಕಾಣದಂತೆ ಹೋಮೋ ಸೇಪಿಯನ್ ಗುಂಪಿಗೆ ಸೇರಿದ ಮನುಷ್ಯ ಪರಿಸರದ ಸರಣಿ ಹಂತಕ ನಾಗಿ ಬದಲಾಗುತ್ತಿದ್ದಾನೆ.ಕುಡಿಯಲು ನೀರಿಲ್ಲದ, ಆಹಾರವಿಲ್ಲದ, ಭೀಕರ ಬರ ಮತ್ತು ನೆರೆಗೆ ತುತ್ತಾಗಿ ನಾಶವಾಗುವ ದಿನಗಳು ದೂರವಿಲ್ಲ ಎಂಬುದು ಹರಾರಿಯ ಆತಂಕ. ಶ್ರೇಷ್ಟ ರಾಷ್ಟ್ರ ಕಟ್ಟುವ ಭೀಕರ ಉನ್ಮಾದದಲ್ಲಿ ಸಿಕ್ಕಿದ್ದೆಲ್ಲವನ್ನು ದೋಚಿ ಉರಿಸಿಹಾಕಲಾಗುತ್ತಿದೆ. ಎಲ್ಲವನ್ನು ಬರಿದು ಮಾಡಿ ದೇಶವನ್ನು ನಂ ಒನ್ ಮಾಡಬೇಕು ಎಂಬ ಮೂರ್ಖ ಹಂಬಲದಿಂದ ಟ್ರಂಪ್ ಜಾಗತಿಕ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುತ್ತಾರೆ. ಆತ ಒಂಥರಾ ಯಯಾತಿಯ ಹಾಗೆ. ನಾನಿರುವವರೆಗೆ ಮಾತ್ರ ಈ ಜಗತ್ತಿದ್ದರೆ ಸಾಕು. ಆಮೇಲೆ ಇದ್ದರೇನು ಬಿಟ್ಟರೇನು? ಈತನಂತೆ ಅನೇಕ ನೇತಾರರಿದ್ದಾರೆ. ಬಹುಪಾಲು ಮಧ್ಯಮ ವರ್ಗದ್ದ್ದು ಇದೇ ಕತೆ ಇರುವಂತಿದೆ. ಇಲ್ಲದಿದ್ದರೆ ಇಂತವರೆಲ್ಲ ನೇತಾರರಾಗಲು ಸಾಧ್ಯವೆ? ಹಾಗಾಗಿ ನೀರು, ಕಾಡು ಯಾವುದನ್ನೂ ಬಿಡುತ್ತಿಲ್ಲ. ಇವುಗಳನ್ನೂ ಹಣ ಕೊಟ್ಟು ಖರೀದಿಸಬಹುದೆಂಬ ಅಹಂ ಬೆಳೆಯುತ್ತಿದೆ.ಕಾಡು, ನೀರು, ಗಾಳಿಯೆಲ್ಲ ಸ್ಥಳೀಯ, ಆಂತರಿಕ ಆಡಳಿತದ ವಿಚಾರಗಳು ಎಂದು ಬ್ರೆಝಿಲ್ ಅಧ್ಯಕ್ಷರಾದಿಯಾಗಿ ಅನೇಕರು ತಿಳಿದಿದ್ದಾರೆ.

 ಜಗತ್ತಿನ ರಾಷ್ಟ್ರಗಳಲ್ಲಿರುವ ಯುದ್ಧೋನ್ಮಾದವು ತಂತ್ರ ಜ್ಞಾನದ ಹೊಸ ಸಾಧ್ಯತೆಯಾದ ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊಲೆಗಡುಕ ರೊಬೋಟುಗಳನ್ನು ಸೃಷ್ಟಿಸುತ್ತಿದೆ. ಜೊತೆಗೆ ಉತ್ಪಾದನಾ ರಂಗದಲ್ಲು ರೊಬೋಟುಗಳ ಬಳಕೆ ಪ್ರಾರಂಭವಾಗಿದೆ. ಇದರಿಂದಾಗಿ ಉತ್ಪಾದನೆ ತೀವ್ರಗೊಳ್ಳತ್ತದೆ. ಜನ ನಿರುದ್ಯೋಗಿಗಳಾಗುತ್ತಾರೆ. ಉತ್ಪಾದಿಸಿದ್ದನ್ನು ಮಾರಬೇಕಲ್ಲ ಅದಕ್ಕಾಗಿ ವಿವಿಧ ಕುತಂತ್ರಗಳನ್ನು ಬಳಸಿ ತನ್ನನ್ನು ಬಿಟ್ಟು ಉಳಿದವರಾರು ಉತ್ಪಾದನೆ ಮಾಡದಂತೆ ತಡೆಯುವ, ಒಂದರ್ಥದಲ್ಲಿ ನಿಶ್ಯಸ್ತ್ರೀಕರಿಸುವ ಕೆಲಸ ಮಾಡಲು ಯತ್ನಿಸುತ್ತಿವೆ. ಇದರಿಂದ ತೀವ್ರ ರೀತಿಯ ಸಂಘರ್ಷಗಳು ಏರ್ಪಡುತ್ತವೆ.

ಮನುಷ್ಯರು ಒಳಬರದಂತೆ ಗೋಡೆ ಕಟ್ಟುವ ಹುನ್ನಾರ ದಲ್ಲಿರುವ ರಾಷ್ಟ್ರಗಳು, ಅಣುಬಾಂಬುಗಳಿಗೆ, ಜಾಗತಿಕ ಪರಿಸರದ ಸಮಸ್ಯೆಗಳಿಗೆ ಹೇಗೆ ಗೋಡೆ ಕಟ್ಟುತ್ತವೆ? ಸಿಲಿಕಾನ್ ನದಿಗಳಿಗೆ ಪ್ರವಾಹ ಬಂದಿದೆಯಲ್ಲ ಅದಕ್ಕೆ ಅಣೆಕಟ್ಟು ಕಟ್ಟಲು ಸಾಧ್ಯವೇ? ಎಂಬುದನ್ನು ಪ್ರಜ್ಞೆ ಇರುವವರು ಕೇಳಿಕೊಂಡರೆ ಸಾಕು. ಗ್ರೆಟಾ ಥನ್ಬರ್ಗ್‌ ಇದನ್ನೇ ಪ್ರಶ್ನಿಸುತ್ತಿರುವುದು ನಮ್ಮ ಭವಿಷ್ಯ ಕಿತ್ತುಕೊಳ್ಳಲು ನೀವ್ಯಾರು? ಹಾಗೆ ಮಾಡುವುದಕ್ಕೆ ನಿಮಗೆಷ್ಟು ಧೈರ್ಯ? ಎಂದು. ಸ್ಟೀಫನ್ ಹಾಕಿಂಗ್ ತಾನು ಮರಣ ಹೊಂದುವ ಮೊದಲು ಇದನ್ನೆ ಹೇಳಿದ್ದು, ಸಾಮಾಜಿಕ ಅಸಹನೆ, ನಾಯಕರ ಸರ್ವಾಧಿಕಾರಿ ಧೋರಣೆ, ಪರಿಸರದ ಬಿಕ್ಕಟ್ಟುಗಳಿಂದಾಗಿ ಮನುಷ್ಯ ಭೂಮಿಯ ಮೇಲೆ ಹೆಚ್ಚೆಂದರೆ 50-100 ವರ್ಷಗಳಷ್ಟೆ ಬದುಕಲು ಸಾಧ್ಯ ಎಂದು. ಥನ್ಬರ್ಗ್‌, ಹರಾರಿ, ಕ್ಲೇನ್ ಮುಂತಾದವರು ಜಗತ್ತಿನ ಜನರನ್ನು ಕೇಳಿಕೊಳ್ಳುತ್ತಿರುವುದು ಇಷ್ಟನ್ನೆ; ಕಾಲ ಮಿಂಚಿ ಹೋಗುತ್ತಿದೆ, ಈಗಲಾದರೂ ಎಚ್ಚೆತ್ತುಕೊಳ್ಳಿ. ಎಂಬುದಷ್ಟೆ.

ಹಾಗಿದ್ದರೆ ದಾರಿಗಳೇನು?

ಟಾಗೂರರೇನೊ ನೂರು ವರ್ಷಗಳ ಹಿಂದೆ ವಿಶ್ವದ ನಾಗರಿಕತೆಗಳೆಂಬ ಧಾರೆಗಳು ಸೇರಿ ರಾಜಕೀಯವಲ್ಲದ ವಿಶ್ವಪ್ರಜ್ಞೆಯ ಆಡಳಿತವನ್ನು ಸೃಷ್ಟಿಸಬೇಕು ಎಂದಿದ್ದರು. ಇದು ಮೇಲ್ನೋಟಕ್ಕೆ ಅಮೂರ್ಥವಾಗಿ ಕಾಣುತ್ತದೆ. ಉದ್ದೇಶ, ಆಶಯಗಳು ಸರಿಯಾಗಿವೆ. ಈ ತತ್ವವನ್ನು ಮುಂದುವರಿಸುವ ಹರಾರಿ ಮುಂತಾದವರು ಸಾಧ್ಯವಾಗಬಹುದಾದ ದಾರಿಗಳ ಕುರಿತು ಈಗ ಯೋಚಿಸುತ್ತಿದ್ದಾರೆ.ರಾಷ್ಟ್ರಗಳ ಜನರಿಗೆ ವಿಶ್ವ ಪ್ರಜ್ಞೆ ಮೂಡಿಸಬೇಕು. ನಾವು ಶ್ರೇಷ್ಠ, ನಮ್ಮ ಧರ್ಮ, ಜಾತಿ, ರಾಷ್ಟ್ರ ಶ್ರೇಷ್ಠವೆಂಬ ವಿನಾಶಕಾರಿ ನಿಲುವುಗಳಿಂದ ಹೊರಬರುವಂತೆ ಅರಿವು ನೀಡುವ ಉದಾರವಾದಿ ನಾಯಕರು ರಾಷ್ಟ್ರಗಳ ನೇತೃತ್ವ ವಹಿಸಬೇಕು. ನನ್ನ ರಾಷ್ಟ್ರ ವಿಶಿಷ್ಟ, ನನ್ನ ರಾಷ್ಟ್ರದ ಕುರಿತು ನನಗೆ ವಿಶಿಷ್ಟ ಕಟ್ಟುಪಾಡುಗಳಿವೆ ಎಂಬಂತಿರಬೇಕು. ಯಾವ ಕಾರಣಕ್ಕೂ ನನ್ನ ರಾಷ್ಟ್ರ ಶ್ರೇಷ್ಠ, ನನ್ನ ರಾಷ್ಟ್ರದ ಕುರಿತು ನನಗೆ ಶ್ರೇಷ್ಠತೆಯ ನಿಲುವುಗಳಿವೆ ಎಂಬ ಭಾವ ನುಸುಳದಂತೆ ನೋಡಿಕೊಳ್ಳಬೇಕು ಎಂದು ಹರಾರಿ ಪ್ರಮೇಯ ಮಂಡಿಸುತ್ತಾನೆ. ಇದನ್ನೆ ಹನ್ನೆರಡನೆ ಶತಮಾನದ ಬಸವಣ್ಣ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಎಂದಿದ್ದು.ಇದು ವ್ಯಕ್ತಿ ವಿಚಾರದಲ್ಲು, ರಾಷ್ಟ್ರದ ವಿಚಾರದಲ್ಲು ನಿಜ. ಕೀಳರಿಮೆ ಅಥವಾ ಮೇಲರಿಮೆಗಳಿಂದ ಹುಟ್ಟುವ ಶ್ರೇಷ್ಠವಾದಿ ತತ್ವ ಮನುಕುಲಕ್ಕೆ ಮಾರಕ ಎಂದು ಹಿಟ್ಲರ್, ಮುಸಲೋನಿಗಳ ವಿಚಾರದಲ್ಲಿ ಜಗತ್ತು ಅರಿತುಕೊಂಡಿದೆ, ಅನುಭವಿಸಿದೆ. ಆದರೂ ಮತ್ತೆ ಮತ್ತೆ ಅದೇ ತತ್ವವನ್ನು ಪುನರ್ ಸ್ಥಾಪಿಸಲು ಹೊರಟರೆ, ಇಲ್ಲಿ ಬದುಕಿ ಉಳಿಯುವ ದಾರಿಗಳುಂಟೆ? ತೇಜಸ್ವಿ ಇದನ್ನೆ ಕೊಂದು ಉಳಿಸಿಕೊಳ್ಳುವ ಧರ್ಮ ಇರಬೇಕೆ ಎಂದಿದ್ದರು. ಬದಲಾಗಿ ಜಾತಿ,ಧರ್ಮ, ವರ್ಗ, ವರ್ಣ, ಭಾಷೆ ಮೀರಿದ ಎಲ್ಲರನ್ನೂ ಒಳಗೊಂಡು ಬದುಕುವ ವಿಶ್ವ ನಾಗರಿಕತೆ ಕಟ್ಟಿದರೆ ಮಾತ್ರ ಮನುಷ್ಯ ಇನ್ನಷ್ಟು ದಿನ ಬಾಳಲು ಸಾಧ್ಯ. ಸ್ವೀಡನ್, ಜಪಾನ್, ಸ್ವಿಟ್ಜರ್‌ಲ್ಯಾಂಡ್ ಮುಂತಾದ ರಾಷ್ಟ್ರಗಳ ಪ್ರಜೆಗಳು ಇತರರಿಗೆ ಮಾದರಿಯಾಗುವಂತಿದ್ದಾರೆ. ಇವರು ಅತ್ಯುತ್ತಮ ರಾಷ್ಟ್ರವಾದಿಗಳೂ ಹೌದು. ಅತ್ಯುತ್ತಮ ವಿಶ್ವ ಪ್ರಜೆಗಳೂ ಹೌದು. ಸಭ್ಯ ರಾಷ್ಟ್ರವಾದಿಯೊಬ್ಬ ಸಭ್ಯ ವಿಶ್ವಾತ್ಮಕ ವ್ಯಕ್ತಿಯಾಗಬಲ್ಲ. ಯುದ್ಧೋನ್ಮಾದಿ ಜಿಂಗೋಯಿಸ್ಟಿಕ್ ರಾಷ್ಟ್ರವಾದಿಯೊಬ್ಬ ಜಾಗತಿಕ ಶಾಪವಾಗಬಲ್ಲ. ಟ್ರಂಪ್, ಕಿವ್, ಪುಟಿನ್, ನೆತನ್ಯಾಹು... ಮುಂತಾದವರನ್ನು ಜಾಗತಿಕ ಶಾಪವೆನ್ನದೆ ಬೇರೆ ದಾರಿ ಇದೆಯೇ? ಇಂಥವರು ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲವೆಂಬುದೂ ನಿಜ. ಒಡಕಿನ, ದ್ವೇಷದ ತತ್ವಗಳನ್ನು ಅಳಿಸಿ, ನಿಸರ್ಗದ ಚಲನೆಗಳನ್ನು ತುಂಡರಿಸದೆ ಬದುಕುವ ಸಾಧ್ಯತೆಗಳನ್ನು ಹುಡುಕಬೇಕು. ಜಾಗತಿಕ ಸಂಘಟನೆಗಳುಳ್ಳ ಪಕ್ಷಗಳು ಈ ಕುರಿತು ಕ್ರಿಯಾಶೀಲವಾಗಬೇಕೆನ್ನುವುದು ಹರಾರಿಯ ನಿಲುವು.

ಗ್ರೆಟಾ ಥನ್ಬರ್ಗ್‌ ಎಂಬ ಪುಟ್ಟ ಹುಡುಗಿ ವಿಮಾನಗಳಲ್ಲಿ ಓಡಾಡಬೇಡಿ ಅವು ಮಾಲಿನ್ಯಕಾರಕ ಎಂದು ಕರೆ ಕೊಟ್ಟರೆ ಅದಕ್ಕೆ ಸ್ವೀಡನ್ ತೀವ್ರವಾಗಿ ಸ್ಪಂದಿಸುತ್ತದೆ. ಇದು ನಾಗರಿಕತೆಯ ಭವ್ಯತೆಯಲ್ಲವೇ? ಸಿರಿಯಾದ ಕುಟುಂಬವೊಂದು ತಪ್ಪಿಸಿಕೊಂಡು ಪಲಾಯನ ಮಾಡುವಾಗ ದೋಣಿ ಸಮುದ್ರದಲ್ಲಿ ಮುಳುಗಿ ಹಸುಗೂಸು ಆಯ್ಲನ್ ಕುರ್ದಿ ಸಮುದ್ರದ ಪಾಲಾಗುತ್ತಾನೆ.ಆತನ ದೇಹ ಸಮುದ್ರ ತೀರದಲ್ಲಿ ಹೂವಿನಂತೆ ಮುದುಡಿ ಮಲಗಿರುವುದನ್ನು ಪತ್ರಿಕೆಗಳಲ್ಲಿ ನೋಡಿದ ಜರ್ಮನಿಯ ಏಂಜೆಲಾ ಮರ್ಕೆಲ್ ಕಣ್ಣೀರಿಟ್ಟು ತನ್ನ ದೇಶದ ಜನರನ್ನು ಒಪ್ಪಿಸಿ ವಲಸಿಗರಿಗೆ ಗಡಿಗಳನ್ನು ತೆರೆದಿಡುತ್ತಾಳೆ. ಇದು ಮಾನವೀಯತೆಯ ಔನ್ನತ್ಯವಲ್ಲವೇ? ಇಂಥವು ಎಷ್ಟೊಂದು ಉದಾಹರಣೆಗಳಿಲ್ಲ! ಇದರ ಬದಲಾಗಿ, ಹಿಂದೂ, ಇಸ್ಲಾಮ್, ಕ್ರೈಸ್ತ, ಬೌದ್ಧ, ಯಹೂದಿ ಮುಂತಾದ ಧರ್ಮಗಳಲ್ಲಿನ ನಕಾರಾತ್ಮಕ ಧೋರಣೆಯ ಮೂಲಭೂತವಾದಿಗಳು ತಮ್ಮ ಧರ್ಮವನ್ನು ವಿಶ್ವ ಧರ್ಮವನ್ನಾಗಿಸುತ್ತೇವೆಂದು ಬಂದೂಕು, ಬಾಂಬುಗಳನ್ನು ಹಿಡಿದು ಹೊರಟಿದ್ದಾರೆ. ಇಂಥವರಿಂದ ಮನುಕುಲ ಉಳಿಯಲು ಸಾಧ್ಯವೇ? ಇಂಥ ಜನಾಂಗೀಯ ಶ್ರೇಷ್ಠವಾದಿಗಳಲ್ಲಿ ಎಂದಾದರೂ ದೈವತ್ವ ಇರಲು ಸಾಧ್ಯವೆ? ದುಷ್ಟ, ರಕ್ತಪಾತದ, ಒಡಕಿನ ತತ್ವದ ಬೀಜಗಳು ರಾಷ್ಟ್ರವಾದದ ಹೆಸರಲ್ಲಿ ನಮ್ಮಾಳಗೂ ಹುದುಗಿ ಕೂತಿರಬಹುದು, ಇಲ್ಲದಿದ್ದರೆ ದ್ವೇಷದ ಬೆಳೆ ಯಾಕೆ ಇಷ್ಟೊಂದು ಹುಲುಸಾಗಿ ಬೆಳೆಯುತ್ತಿದೆ? ಇವೆಲ್ಲ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಮತ, ಪಂಥಗಳೆಲ್ಲ ವೈಯುಕ್ತಿಕ, ಸಾರ್ವಜನಿಕ ಪ್ರದರ್ಶನದ ಸಂಗತಿಗಳಲ್ಲ. ಕಡು ಧಾರ್ಮಿಕನೊಬ್ಬ ಸಾರ್ವಜನಿಕವಾಗಿ ಮಾನವತಾವಾದಿಯಾಗಿರಬಹುದು ಎಂಬ ವಿವೇಕ ನಮ್ಮಿಳಗೂ ಹುಟ್ಟಬೇಕು. ಸಂಸ್ಕೃತಿ, ಪರಂಪರೆಯೆಂಬುದು ಒಡವೆಯಿದ್ದ ಹಾಗೆ. ಅವುಗಳನ್ನು ಕಾಲಕ್ಕೆ ತಕ್ಕ ಹಾಗೆ ಮುರಿದು ಕಟ್ಟಿಕೊಳ್ಳಬೇಕು ಎಂದು ಕುವೆಂಪು ಹೇಳಿದ ಮಾತು ರಾಷ್ಟ್ರದ ವಿಚಾರದಲ್ಲೂ ನಿಜವಾಗಬೇಕು. ಬದಲಾಗಿ ಅವು ಪವಿತ್ರ ಎಂದು ಹೊರಟವರು ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಲು ಯತ್ನಿಸುತ್ತಾರೆ. ಅವನ್ನು ಸಂಪೂರ್ಣ ನಿರ್ಲಕ್ಷಿಸುವವರು ಜನರಿಂದ ದೂರವಾಗುತ್ತಾರೆ. ಸರಳವಾಗಿ, ನಿಸರ್ಗ ದೊಂದಿಗೆ ಹೊಂದಿಕೊಂಡು ಬದುಕುತ್ತಿರುವ ಬುಡಕಟ್ಟು ಸಂಸ್ಕೃತಿಗಳಿಗೆ, ಜಗತ್ತಿಗೆ ಮಾರ್ಗದರ್ಶನ ಮಾಡುವ ಅನಿವಾರ್ಯತೆ ಮುಂದೊಂದು ದಿನ ಬರಬಹುದು ಯಾರಿಗೆ ಗೊತ್ತು? ತುದಿ ಮೊದಲಿಲ್ಲದೆ ಸಾಗುತ್ತಿರುವ ವಿಶ್ವ ವಿಕಾಸದಲ್ಲಿ ಮನುಷ್ಯನಿಗೆ ಇದೊಂದು ನಿರ್ಣಾ ಯಕ ಘಟ್ಟ. ಈ ಘಟ್ಟದ ಪ್ರಮುಖ ಸಂರಚನೆಯಾದ ರಾಷ್ಟ್ರ ವಾದವು ಇಂದು ಕೇವಲ ರಾಜಕೀಯ, ಧರ್ಮ, ಸಂಸ್ಕೃತಿ, ಭಾಷೆಗಳ ವಿಚಾರವಲ್ಲ. ಅದು ಮನುಷ್ಯನ ಅಳಿವು ಉಳಿವನ್ನು ನಿರ್ಧರಿಸುವ ಸಂಗತಿಯಾಗಿ ಪರಿಣಮಿಸುತ್ತಿದೆ.ಮೋಹಿನಿಯ ಬಲೆಗೆ ಬಿದ್ದು ಭಸ್ಮಾಸುರನಂತಾಗುತ್ತಿರುವ ರಾಷ್ಟ್ರಗಳಿಗೆ, ಉರಿಯ ಕೈಗಳನ್ನು ನೆತ್ತಿಯ ಮೇಲಕ್ಕೆ ಕೊಂಡೊಯ್ಯದಂತೆ ತಡೆವ ಹಂಬಲವಿರುವವರು ಕೂಡಲೆ ಎಚ್ಚರಾದರೆ ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)