varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ನೀ ಮಾಹಿತಿಯೊಳಗೋ ನಿನ್ನೊಳು ಮಾಹಿತಿಯೋ...

ವಾರ್ತಾ ಭಾರತಿ : 2 Jan, 2020
ಎನ್.ಎ.ಎಂ. ಇಸ್ಮಾಯಿಲ್

ಖಾಸಗಿತನ ಎಂಬುದು ಒಂದು ಖರೀದಿಸಬಹುದಾದ ಸೇವೆಯಲ್ಲ. ಅದೊಂದು ಸಾಂವಿಧಾನಿಕ ಹಕ್ಕು ಎಂಬುದನ್ನು ಅರಿಯುವುದು ಇಂದಿನ ಅಗತ್ಯ. ಅತ್ಯಂತ ಸರಳವಾದ ಮಾತುಗಳಲ್ಲಿ ಹೇಳುವುದಾದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಅದೆಷ್ಟೇ ಅದ್ಭುತಗಳನ್ನು ಸೃಷ್ಟಿಸಲಿ ಅದು ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಮುಖ್ಯವಾಗಿ ಬೇಕಿರುವುದು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ.

 

     ಎನ್.ಎ.ಎಂ. ಇಸ್ಮಾಯಿಲ್

ಎನ್.ಎ.ಎಂ. ಇಸ್ಮಾಯಿಲ್ ಕಳೆದೆರಡು ದಶಕಗಳಲ್ಲಿ ಕನ್ನಡದ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ ಮಹತ್ವದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಕನ್ನಡದ ಆನ್‌ಲೈನ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಡಿಜಿಟಲ್ ಲೋಕದ ಆಧುನಿಕ ಆವಿಷ್ಕಾರಗಳು ಹಾಗೂ ವಿವಿಧ ಆಯಾಮಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಕನ್ನಡದ ಅತ್ಯಂತ ವಿರಳರಲ್ಲಿ ಇಸ್ಮಾಯಿಲ್ ಒಬ್ಬರು. ಸದ್ಯ ಕಲರ್ಸ್ ಟಿವಿ ವಾಹಿನಿಯ ಮಾತೃ ಸಂಸ್ಥೆ ‘ವಯಕಾಮ್ 18’ನ ಕ್ರಿಯೇಟಿವ್ ವಿಭಾಗದ ಸಹ ಉಪಾಧ್ಯಕ್ಷರಾಗಿದ್ದಾರೆ.

ಪ್ರಪಂಚದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ನಾರ್ವೆ ಕೂಡಾ ಒಂದು. ತನ್ನಲ್ಲಿರುವ ತೈಲ ಸಂಪತ್ತಿನಿಂದಾಗಿ ಅದರ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 437 ಬಿಲಿಯನ್ ಡಾಲರುಗಳಿಗಿಂತ ಹೆಚ್ಚು. ಪ್ರಪಂಚದ ನಾಲ್ಕು ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಆಲ್ಫಾಬೆಟ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗಳ ಒಟ್ಟು ಷೇರು ಮಾರುಕಟ್ಟೆ ಮೌಲ್ಯವೆಷ್ಟು ಗೊತ್ತೇ? 1748 ಬಿಲಿಯನ್ ಡಾಲರುಗಳಿಗಿಂತ ಅಧಿಕ. ಅಂದರೆ ಈ ಸಂಸ್ಥೆಗಳಲ್ಲಿ ಒಂದೊಂದರ ಒಟ್ಟು ಮೌಲ್ಯವೇ ನಾರ್ವೆಯ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚು. ಈ ಸಂಸ್ಥೆಗಳು ಈ ಪ್ರಮಾಣದಲ್ಲಿ ಹೇಗೆ ಬೆಳೆದವು. ಅಥವಾ ಯಾಕೆ ಬೆಳೆಯುತ್ತಿವೆ ಎಂಬುದಕ್ಕೆ ಇರುವ ಉತ್ತರ ಒಂದೇ. ನಾರ್ವೆ ತೈಲಸಂಗ್ರಹವನ್ನು ಹೊಂದಿದ್ದರೆ ಈ ನಾಲ್ಕೂ ಸಂಸ್ಥೆಗಳೂ ವರ್ತಮಾನದ ತೈಲವಾಗಿರುವ ‘ದತ್ತಾಂಶ’ ಸಂಗ್ರಹವನ್ನು ಹೊಂದಿವೆ. Data is new oil ಎಂಬುದನ್ನು ಈ ನಾಲ್ಕೂ ಸಂಸ್ಥೆಗಳೂ ಸಾಬೀತು ಮಾಡುತ್ತಿವೆ. ದತ್ತಾಂಶವೆಂಬ ಆಧುನಿಕ ತೈಲವನ್ನು ಸಂಗ್ರಹಿಸುತ್ತಲೇ ಬೆಳೆಯುತ್ತಿರುವ ಸಂಸ್ಥೆಗಳ ಪಟ್ಟಿಯಲ್ಲಿ ಇರುವುದು ಈ ನಾಲ್ಕು ಸಂಸ್ಥೆಗಳಷ್ಟೇ ಅಲ್ಲ. ಚೀನಾದ ಟೆನ್ಸೆಂಟ್, ಬೈಡೂ, ಅಲಿಬಾಬ, ಜೆಡಿ ಡಾಟ್ ಕಾಮ್‌ಗಳೂ ಇವೆ. ಟೆನ್ಸೆಂಟ್ ಚೀನಾದ ಫೇಸ್‌ಬುಕ್ ಆಗಿದ್ದರೆ ಬೈಡೂ ಚೀನೀ ಸರ್ಚ್ ಇಂಜಿನ್. ಅಲಿಬಾಬ ಮತ್ತು ಜೆಡಿ ಡಾಟ್‌ಕಾಮ್‌ಗಳು ಅಮೆಜಾನ್‌ನಂತೆ ಇ-ಕಾಮರ್ಸ್ ವ್ಯವಹಾರಗಳನ್ನು ನಡೆಸುತ್ತವೆ. ಈ ಎಲ್ಲಾ ಕಂಪೆನಿಗಳೂ ಒಂದರ್ಥದಲ್ಲಿ ಅಮೆರಿಕ ಮೂಲದ ನಾಲ್ವರು ದತ್ತಾಂಶ ದೈತ್ಯರಿಗೆ ಸ್ಪರ್ಧಿಗಳಾಗಿ ಬೆಳೆದು ನಿಂತಿವೆ.

ಪ್ರಪಂಚ ಈ ಬಗೆಯ ಬೃಹತ್ ಉದ್ಯಮಗಳ ಏಳು ಮತ್ತು ಬೀಳುಗಳೆರಡನ್ನೂ ಕಂಡಿದೆ. 1990ರ ದಶಕದ ಆರಂಭದಲ್ಲಿ ಕಂಡುಬಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ತೀವ್ರಗತಿಯ ಬೆಳವಣಿಗೆಯೂ ಇಂಥದ್ದೇ ಒಂದು. ಆದರೆ ಆಗ ಹುಟ್ಟಿದ ಕಂಪೆನಿಗಳು ಅಷ್ಟೇವೇಗದಲ್ಲಿ ಕಾಣೆಯಾದವು. ಡಾಟ್ ಕಾಮ್ ಗುಳ್ಳೆ ಒಡೆದು ಹೋಯಿತು ಎಂದು ಅರ್ಥಶಾಸ್ತ್ರಜ್ಞರು ಷರಾ ಬರೆದಿದ್ದರು. ತಂತ್ರಜ್ಞಾನ ದೈತ್ಯರ ಈ ಕಾಲದ ಬೆಳವಣಿಗೆಯ ಕುರಿತೂ ಹೆಚ್ಚು ಕಡಿಮೆ ಇಂಥದ್ದೇ ನಿಲುವನ್ನು ಈಗಲೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. 1990ರಿಂದ 2019ರ ನಡುವಣ ಹತ್ತೊಂಬತ್ತು ವರ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ದತ್ತಾಂಶ ದೈತ್ಯರ ಬೆಳವಣಿಗೆಯನ್ನು ಕೇವಲ ಮತ್ತೊಂದು ಗುಳ್ಳೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.

ದೇಶಗಳಿಗಿಂತ ದೊಡ್ಡದಾಗಿ ಬೆಳೆಯುವ ಕಂಪೆನಿಗಳು ಸಹಜವಾಗಿಯೇ ತಮ್ಮ ವ್ಯಾಪ್ತಿಯನ್ನು ಅವು ಹುಟ್ಟಿದ ದೇಶದಾಚೆಗೆ ಅರ್ಥಾತ್ ಇಡೀ ಪ್ರಪಂಚಕ್ಕೆ ವ್ಯಾಪಿಸಿ ಕೊಳ್ಳುತ್ತವೆ. ಅಷ್ಟೇ ಅಲ್ಲ ತಮ್ಮ ವ್ಯಾಪ್ತಿಯಲ್ಲಿ ಬರುವ ದೇಶಗಳ ರಾಜಕಾರಣ ಮತ್ತು ಆರ್ಥಿಕತೆಯನ್ನು ನಿಯಂತ್ರಿಸಲೂ ಹೊರಡುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಲು ವಸಾಹತೋತ್ತರ ಕಾಲಘಟ್ಟದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತೃತೀಯ ಜಗತ್ತಿನ ದೇಶಗಳ ಮಾರುಕಟ್ಟೆ ಮತ್ತು ತೈಲಸಂಪತ್ತಿನ ನಿಯಂತ್ರಣಕ್ಕೆ ನಡೆಸುತ್ತಾ ಬಂದಿರುವ ತಂತ್ರಗಳನ್ನು ಗಮನಿಸಿದರೆ ಸಾಕು. ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಶ್ಯದ ಹಲವು ರಾಷ್ಟ್ರಗಳು ನಿರಂತರವಾಗಿ ಸರ್ವಾಧಿಕಾರಿ ಸೇನಾಡಳಿತ ಇಲ್ಲವೇ ರಾಜಾಡಳಿತದಲ್ಲಿ ಬಳಲುತ್ತಿರುವುದಕ್ಕೆ ಮುಖ್ಯಕಾರಣವೇ ಆ ದೇಶಗಳಲ್ಲಿರುವ ಖನಿಜ ಸಂಪತ್ತು. ಈ ಸಂಪತ್ತಿನ ಮೇಲೆ ನಿಯಂತ್ರಣ ಬೇಕೆಂದು ಅಭಿವೃದ್ಧಿ ಹೊಂದಿದ ದೇಶಗಳು ಬಯಕೆಯೇ ಆ ದೇಶಗಳ ಕಷ್ಟಕ್ಕೆ ಕಾರಣವಾಗಿವೆ. ಇಲ್ಲೊಂದು ಸೂಕ್ಷ್ಮವಿದೆ. ಅಭಿವೃದ್ಧಿ ಹೊಂದಿದ ದೇಶಗಳು ತೃತೀಯ ಜಗತ್ತಿನ ಖನಿಜ/ತೈಲ ಸಂಪತ್ತಿನ ಮೇಲೆ ಏಕೆ ಒಡೆತನವನ್ನು ಬಯಸುತ್ತಿವೆ ಎಂಬ ಪ್ರಶ್ನೆಯನ್ನು ಅರ್ಥ ಮಾಡಿಕೊಂಡರೆ ಈ ಸೂಕ್ಷ್ಮವೇನೆಂದು ತಿಳಿಯುತ್ತದೆ. ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಶ್ಯ ಖಂಡ ತೈಲ ಸಂಗ್ರಹದ ಮೇಲಿನ ಒಡೆತನ ಬೇಕಿರುವುದು ಅಮೆರಿಕ ಸಂಯುಕ್ತ ಸಂಸ್ಥಾನಗಳೆಂದು ಕರೆಯುವ ದೇಶದ ರಾಜಕೀಯ ಪ್ರಭುತ್ವಕ್ಕೆ ಅಲ್ಲ. ಅದು ಬೇಕಿರುವುದು ಅಮೆರಿಕ ಮೂಲದ ಬಹುರಾಷ್ಟ್ರೀಯ ತೈಲ ಕಂಪೆನಿಗಳಿಗೆ. ಈ ಕಂಪೆನಿಗಳ ಹಿತವನ್ನು ಕಾಯುವುದು ಆ ದೇಶದ ರಾಜಕೀಯ ಪ್ರಭುತ್ವಕ್ಕೆ ಅನಿವಾರ್ಯವಾಗಿಬಿಟ್ಟಿರುವುದು. ಇಲ್ಲವಾದರೆ ಆಯಾ ದೇಶಗಳ ಆರ್ಥಿಕತೆಯೇ ಕುಸಿದುಬಿಡುತ್ತದೆ. ಇದು ಕೇವಲ ತೈಲೋದ್ಯಮಕ್ಕೆ ಸೀಮಿತವಾದ ವಿಚಾರವೂ ಅಲ್ಲ. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಂಪೆನಿಗಳಿರುವ ದೇಶಗಳಲ್ಲಿಯೂ ಇದು ಸಂಭವಿಸುತ್ತದೆ. ತೃತೀಯ ಜಗತ್ತಿನಲ್ಲಿ ಸತತ ಯುದ್ಧ ನಡೆಯಬೇಕಿರುವುದು ಯೂರೋಪ್‌ನ ಕೆಲವು ದೇಶಗಳು, ಅಮೆರಿಕ ಮತ್ತು ಇಸ್ರೇಲ್‌ನ ಅನಿವಾರ್ಯತೆಯಾಗಿರುವುದೂ ಇದೇ ಕಾರಣಕ್ಕೆ.

ಇದೇನು ಇಂದು ನಿನ್ನೆಯ ವಿಚಾರವಲ್ಲ. ವಸಾಹತು ಕಾಲದಿಂದಲೂ ಹೀಗೆಯೇ ಸಂಭವಿಸುತ್ತಿದೆ. ಈಸ್ಟ್ ಇಂಡಿಯಾ ಕಂಪೆನಿಯ ಷೇರುಗಳ ಮೌಲ್ಯ ನಿರಂತರವಾಗಿ ಹೆಚ್ಚುತ್ತಲೇ ಹೋಗುವುದಕ್ಕೆ ಅದು ವ್ಯಾಪಾರದ ಜೊತೆ ಜೊತೆಯಲ್ಲಿಯೇ ರಾಜತಂತ್ರವನ್ನೂ ರೂಢಿಸಿಕೊಂಡಿತು. ಒಂದು ಹಂತದಲ್ಲಿ ವಿಕ್ಟೋರಿಯಾ ಮಹಾರಾಣಿಯ ಸರಕಾರವೇ ಮಧ್ಯಪ್ರವೇಶಿಸಿ ರಾಜತಂತ್ರವನ್ನು ತನ್ನ ಕೈಗೆತ್ತಿಕೊಂಡಿತು. ಆದರೆ ವರ್ತಮಾನದ ವಸಾಹತೀಕರಣ ಈಸ್ಟ್ ಇಂಡಿಯಾ ಕಂಪೆನಿಯ ಮಾದರಿಯಲ್ಲಿಲ್ಲ. ಕಂಪೆನಿ ಮತ್ತು ಸರಕಾರಗಳಲ್ಲಿ ಯಾರು ಯಾರನ್ನು ಯಾವಾಗ ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇ ಆಗದಷ್ಟು ಸಂಕೀರ್ಣವಾದ ಸ್ಥಿತಿ ಇದು. ಹಾಗಾಗಿಯೇ ಯಾವ ದೇಶದ ಪ್ರಭುತ್ವ ಯಾವ ಕಂಪೆನಿಯ ಮೂಲಕ ಇನ್ನಾವ ದೇಶವನ್ನು ನಿಯಂತ್ರಿಸುತ್ತದೆ ಎಂಬುದನ್ನು ವಿವರಿಸುವುದೂ ಕಷ್ಟವಾಗುವ ಕಾಲ ನಮ್ಮದು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಬ್ರೆಕ್ಸಿಟ್ ಮತ್ತು ಅಮೆರಿಕ ಚುನಾವಣೆಗಳ ಮೇಲೆ ನಡೆದ ಮಾಹಿತಿ ತಂತ್ರಜ್ಞಾನ ಆಧಾರಿತ ದಾಳಿ. ಕೇಂಬ್ರಿಜ್ ಅನಲಿಟಿಕಾ ಎಂಬ ಒಂದು ಸಂಸ್ಥೆಯ ಮೂಲಕ ನಡೆದ ಈ ಕಾರ್ಯಾಚರಣೆಗಳನ್ನು ಹಳೆಯ ಪರಿಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಅಮೆರಿಕದ ರಾಜಕಾರಣಿಗಳು ಟ್ರಂಪ್ ಅಧಿಕಾರಕ್ಕೇರುವುದರ ಹಿಂದೆ ರಶ್ಯದ ಕೈವಾಡವನ್ನು ಆರೋಪಿಸುತ್ತಾರೆ. ಆದರೆ ಬ್ರೆಕ್ಸಿಟ್‌ನ ವಿಚಾರದಲ್ಲಿ ಈ ಬಗೆಯ ಸ್ಪಷ್ಟ ಉದ್ದೇಶವೊಂದನ್ನು ನಿರ್ದಿಷ್ಟ ರಾಷ್ಟ್ರೀಯ ಪ್ರಭುತ್ವಕ್ಕೆ ಆರೋಪಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕೇಂಬ್ರಿಜ್ ಅನಲಿಟಿಕಾ ಹಗರಣವೂ ‘ರಶ್ಯ ಕೈವಾಡ’ದಂಥ ವಿಚಾರಕ್ಕೆ ಸೀಮಿತವಾಗಿಯೂ ಉಳಿದಿಲ್ಲ. ಸರಳವಾಗಿ ಹೇಳುವುದಾದರೆ ಈ ತನಕ ಬಳಸುತ್ತಿದ್ದ ‘ಒಳಗಿನ ಶಕ್ತಿಗಳು’ ಮತ್ತು ‘ಹೊರಗಿನ ಶಕ್ತಿಗಳು’ ಎಂಬ ಪರಿಕಲ್ಪನೆಗಳಿಗೆ ಈಗ ಹೆಚ್ಚಿನ ಅರ್ಥ ಉಳಿದಿಲ್ಲ. ಈ ಹಿನ್ನೆಲೆಯಲ್ಲಿಯೇ ವರ್ತಮಾನದ ತೈಲವಾದ ‘ದತ್ತಾಂಶ’ದ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಮೇಲಾಟವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಮಾಹಿತಿ ಮಾರಿಕೊಂಡವರು!

ಮಾಹಿತಿ ತಂತ್ರಜ್ಞಾನದ ಆವಿಷ್ಕಾರಗಳೆಲ್ಲವನ್ನೂ ನಾವೊಂದು ಸುಂದರ ಕನಸಿನಂತೆ ಅನುಭವಿಸುತ್ತಿದ್ದೇವೆ. ಮಧ್ಯಮ ವರ್ಗದವರಿಗೆ ಒಂದು ದೂರವಾಣಿ ಕರೆಯನ್ನೂ ಮಾಡುವ ಅಗತ್ಯವಿಲ್ಲದೆ ಮನೆಯೆದುರೇ ಬಂದು ನಿಲ್ಲುವ ಉಬರ್ ಅಥವಾ ಓಲಾ ಟ್ಯಾಕ್ಸಿ. ಬ್ರೌಸರ್‌ನಲ್ಲಿ ಟೈಪಿಸಿದಾಕ್ಷಣ ಕಣ್ಣೆದುರು ಅನಾವರಣಗೊಳ್ಳುವ ಮಾಹಿತಿ ಕಣಜ. ಸುಂದರ್ ಪಿಚ್ಚೈಯಂಥ ಭಾರತೀಯ ಪ್ರತಿಭಾವಂತರು ಪಡೆಯುತ್ತಿರುವ ಬೃಹತ್ ಸಂಬಳ ಕಾಣಿಸುತ್ತದೆ. ಸ್ವಲ್ಪ ರಾಜಕೀಯ ಪ್ರಜ್ಞೆಯುಳ್ಳವವರಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿಯೇ ಸಾಧ್ಯವಾದ ಅರಬ್ ವಸಂತದಂಥ ಕ್ರಾಂತಿ ಗೋಚರಿಸುತ್ತದೆ. ಮತ್ತಷ್ಟು ಸೂಕ್ಷ್ಮವಾಗಿ ಚಿಂತಿಸುವವರಿಗೆ ಎಣೆಯಿಲ್ಲದೆ ಹರಿದಾಡುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಗೂಗಲ್ ಮತ್ತು ಫೇಸ್‌ಬುಕ್‌ಗಳು ರೂಪಿಸುತ್ತಿರುವ ಅಲ್ಗಾರಿದಂಗಳ ಜಾಣತನವೂ ಇನ್ನೂ ಹೆಚ್ಚು ಆಲೋಚಿಸುವವರಿಗೆ ವಿಕಿಲೀಕ್, ಪನಾಮ ಪೇಪರ್ಸ್‌ನಂಥ ಹ್ಯಾಕ್ಟಿವಿಸಂ ಮಾಹಿತಿ ತಂತ್ರಜ್ಞಾನದ ಸಾಧ್ಯತೆಯಂತೆ ಕಾಣಿಸುತ್ತದೆ.

ಮೇಲೆ ಹೇಳಿದ ಉದಾಹರಣೆಗಳಲ್ಲಿ ವಿಕಿಲೀಕ್ಸ್ ಪ್ರಕರಣವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ‘ದತ್ತಾಂಶ’ ಎಂಬ ಸಂಪತ್ತಿನ ಒಡೆತನಕ್ಕಾಗಿ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುತ್ತಿರುವ ಮೇಲಾಟದ ಫಲಿತಾಂಶಗಳಷ್ಟೇ. ತಂತ್ರಜ್ಞಾನದ ರಾಜಕೀಯ ಪರಿಣಾಮಗಳ ಸಂಶೋಧಕ ಯೆವ್ಗೆನಿ ಮೊರೊಜೊವ್ ಈ ಎಲ್ಲವನ್ನೂ ‘ಡೆಟಾ ಎಕ್ಸ್‌ಟ್ರ್ಯಾಕ್ಟಿವಿಸಂ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇದರ ಅರ್ಥ ಸರಳ. ದತ್ತಾಂಶ ಉತ್ಖನನ ಎಂದು ಇದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಈ ಉತ್ಖನನ ತೈಲಬಾವಿಗಳನ್ನು ಶೋಧಿಸುವ ಪ್ರಕ್ರಿಯೆಯಂತೆಯೇ ನಡೆಯುತ್ತದೆ. ಇಲ್ಲಿ ಬಳಕೆದಾರರೇ ದತ್ತಾಂಶದ ಮೂಲ. ಅವರಿಂದ ಅಗತ್ಯ ದತ್ತಾಂಶವನ್ನು ಪಡೆಯಲು ಬೇಕಾಗಿರುವ ಬುದ್ಧಿವಂತ ತಂತ್ರವೊಂದನ್ನು ರೂಪಿಸುವುದಷ್ಟೇ ತಂತ್ರಜ್ಞಾನ ಕಂಪೆನಿಗಳ ಕೆಲಸ. ಹೀಗೆ ಪಡೆದ ದತ್ತಾಂಶವನ್ನು ಈ ಕಂಪೆನಿಗಳು ಏನು ಮಾಡುತ್ತವೆ ಎಂಬ ಪ್ರಶ್ನೆ ಸಹಜ. ಗೂಗಲ್ ಎಂಬ ಸರ್ಚ್ ಇಂಜಿನ್ ಒಂದು ವ್ಯಾಪಾರವಾಗಿ ಯಶಸ್ವಿಯಾಗಬೇಕಾದರೆ ಅಂತರ್‌ಜಾಲದ ತುಂಬಾ ಇರುವ ಮಾಹಿತಿಗೆ ಜರಡಿ ಹಿಡಿದು ಬಳಕೆದಾರನ ಎದುರಿಟ್ಟರೆ ಸಾಕಾಗುವುದಿಲ್ಲ. ಇದಿಷ್ಟನ್ನೇ ಮಾಡಿದರೂ ಒಂದಷ್ಟು ಜಾಹೀರಾತುಗಳು ಅದಕ್ಕೆ ದೊರೆಯಬಹುದು. ಆದರೆ ಅದು ನೀಡುವ ಲಾಭಕ್ಕೊಂದು ಮಿತಿಯಿದೆ. ನಿರ್ದಿಷ್ಟ ಬಳಕೆದಾರನಿಗೆ ಅವನು ಬಯಸುತ್ತಿರುವ ಫಲಿತಾಂಶಗಳು ದೊರೆಯುವಂತೆ ಮಾಡಿದರೆ ಹೆಚ್ಚು ಲಾಭವಿದೆ. ಅದಕ್ಕಾಗಿ ಗೂಗಲ್ ಪ್ರತಿಯೊಬ್ಬ ಬಳಕೆದಾರನ ಆಸಕ್ತಿಯನ್ನೂ ಗುರುತಿಸಲು ಪ್ರಯತ್ನಿಸುತ್ತದೆ. ಮಾಹಿತಿಯನ್ನು ನಿರೀಕ್ಷಿಸುತ್ತಿರುವ ಬಳಕೆದಾರ ಯಾರೆಂದು ನಿಖರವಾಗಿ ಗುರುತಿಸುವಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಈ ಮಟ್ಟಕ್ಕೆ ಒಮ್ಮೆ ಮಾಹಿತಿ ಸಂಗ್ರಹವಾಗಿಬಿಟ್ಟರೆ ಗೂಗಲ್‌ನ ಜಾಹೀರಾತು ವಿತರಣೆಯ ಚಾಣಾಕ್ಷತೆಯೂ ವಿಸ್ತಾರಗೊಳ್ಳುತ್ತದೆ. ಯಾವ ಜಾಹೀರಾತು ಯಾರನ್ನು ತಲುಪಿದರೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಅರಿತೇ ಜಾಹೀರಾತಿನ ವಿತರಣೆ ನಡೆಯುತ್ತದೆ. ಆದರೆ ಅದು ಅಷ್ಟಕ್ಕೇ ಮುಗಿಯುವುದಿಲ್ಲ. ನಿರಂತರವಾಗಿ ಬಳಕೆದಾರನಿಗೆ ಜಾಹೀರಾತುಗಳು ತಲುಪಬೇಕು. ಜಾಹೀರಾತಿಗಾಗಿ ಹೆಚ್ಚು ಹೂಡಿಕೆ ಮಾಡುವ ಕ್ಷೇತ್ರಗಳ ಮಾಹಿತಿಯನ್ನು ಬಳಕೆದಾರ ಹುಡುಕುವಂತೆ ಮಾಡಬೇಕು. ‘ಇಡೀ ಪ್ರಪಂಚದ ಮಾಹಿತಿಯನ್ನು ಸರಿಯಾಗಿ ಜೋಡಿಸಿಡುವ’ ಜವಾಬ್ದಾರಿಯನ್ನು ತನ್ನ ಮೇಲೆ ಆರೋಪಿಸಿಕೊಂಡಿರುವ ಗೂಗಲ್ ಈಗ ಯಾವ ಮಾಹಿತಿಯನ್ನು ತೋರಿಸಬೇಕು ಎಂಬುದನ್ನೂ ನಿಯಂತ್ರಿಸುತ್ತದೆ. ಇಂಟರ್ನೆಟ್‌ನ ತುಂಬಾ ತೀವ್ರ ಬಲಪಂಥೀಯ ವಾದಗಳೇ ತುಂಬಿಕೊಂಡಿರುತ್ತವೆ ಎಂಬ ದೂರನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಈ ದೂರು ನಿಜ. ಆದರೆ ಇಂಟರ್ನೆಟ್‌ನಲ್ಲಿ ಅದು ತುಂಬಿಕೊಂಡಿರುವುದಕ್ಕಿಂತ ಹೆಚ್ಚಾಗಿ ಮಾಹಿತಿಯನ್ನು ಜೋಡಿಸಿಡುವವರು ಅದು ನಮ್ಮ ಕಣ್ಣ ಮುಂದೆ ಬರುವಂತೆ ಜೋಡಿಸಿಡುತ್ತಿದ್ದಾರೆ ಎಂಬ ಅಂಶವನ್ನು ನಾವು ಗಮನಿಸುತ್ತಲೇ ಇಲ್ಲ.

ಯಾವುದನ್ನು ಹೆಚ್ಚು ಕ್ಲಿಕ್ ಮಾಡಲಾಗುತ್ತದೆಯೋ ಅದು ಕಾಣಿಸಬೇಕು ಎಂಬ ತತ್ವದಲ್ಲಿ ಇದು ನಡೆಯಬೇಕಾಗಿರುವುದು ಗೂಗಲ್‌ನಂಥ ಸಂಸ್ಥೆಗಳ ವ್ಯಾಪಾರ ಮಾದರಿಯ ಅನಿವಾರ್ಯತೆ. ಇದು ಫೇಸ್‌ಬುಕ್, ಟ್ವಿಟರ್ ಮತ್ತು ಅಮೆಜಾನ್‌ನ ವಿಷಯದಲ್ಲಿಯೂ ನಿಜವೇ. ಇವೆಲ್ಲವೂ ಈ ಕಂಪೆನಿಗಳು ನಡೆಸುವ ದತ್ತಾಂಶ ಉತ್ಖನನದ ಪರಿಣಾಮವೂ ಹೌದು. ನಿರ್ದಿಷ್ಟ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳುವಂಥ ಮಾಹಿತಿಯನ್ನು ಮಾತ್ರ ಒದಗಿಸುತ್ತಾ ಹೋದರೆ ಅವರ ವ್ಯಾಪಾರ ಮಾದರಿ ಬಹುಬೇಗ ಕುಸಿಯುತ್ತದೆ. ಅದಕ್ಕೆ ಸತತವಾಗಿ ಗಮನವನ್ನು ಬೇರೆ ಬೇರೆಡೆಗೆ ಸೆಳೆಯುತ್ತಲೇ ನಮ್ಮನ್ನು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ನ ತೆರೆಗೆ ಅಂಟಿಕೊಂಡಿರುವಂತೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಈ ಕಂಪೆನಿಗಳು ನಮ್ಮ ಆಲೋಚನೆಗಳ ಕ್ರಮವನ್ನೂ ಅರ್ಥ ಮಾಡಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಲೂ ಇರುತ್ತವೆ. ಗೂಗಲ್ ಮ್ಯಾಪ್ ನಮಗೆ ನಿರ್ದಿಷ್ಟ ರೆಸ್ಟೋರೆಂಟ್‌ಗೆ ದಾರಿ ತೋರಿಸಿ ತನ್ನ ಕೆಲಸ ಮುಗಿಸುವುದಿಲ್ಲ. ಅಲ್ಲಿನ ಆಹಾರ ಹೇಗಿತ್ತೆಂದು ಕೇಳಿ ಉತ್ತರ ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ನೀವು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತೀರಾ ಎಂಬುದನ್ನೂ ಅರಿಯುತ್ತದೆ. ಇನ್ನೊಂದು ಊರಿಗೆ ಹೋದಾಗ ಅದೇ ರೆಸ್ಟೋರೆಂಟ್‌ನ ಮತ್ತೊಂದು ಶಾಖೆಯಿದ್ದರೆ ಅದನ್ನೂ ನೆನಪಿಸುತ್ತದೆ! ನಾವು ಸಂಚರಿಸಿದ ಹಾದಿ, ನಾವು ಖರೀದಿಸಿದ ಪುಸ್ತಕ, ನಾವು ಹುಡುಕಿದ ವಿಚಾರ, ನಮ್ಮ ಇ-ಮೇಲ್‌ನಲ್ಲಿ ಚರ್ಚಿಸಿದ ಸಂಗತಿ ಎಲ್ಲವುಗಳನ್ನೂ ಒಂದಕ್ಕೊಂದು ಜೋಡಿಸುತ್ತಾ ನಮ್ಮ ಭಾವಲೋಕದ ನೀಲನಕಾಶೆಯೊಂದನ್ನು ಅದು ರೂಪಿಸಿಕೊಳ್ಳುತ್ತಾ ಹೋಗುತ್ತದೆ. ಸರಳವಾಗಿ ಹೇಳುವುದಾದರೆ ನಮ್ಮ ಭಾವಲೋಕವನ್ನು ಕೊರೆದು ಕೊರೆದು ನಿರಂತರವಾಗಿ ದತ್ತಾಂಶವನ್ನು ಸೋಸುವ ಕೆಲಸ ಮಾಡುತ್ತಿರುತ್ತದೆ. ನಾವು ಈ ಮಾಹಿತಿ ತಂತ್ರಜ್ಞಾನ ಸಲಕರಣೆಗಳು ಉಚಿತವಾಗಿ ಕಲ್ಪಿಸಿಕೊಟ್ಟ ಸವಲತ್ತನ್ನು ಬಳಸಿಕೊಳ್ಳುತ್ತಲೇ ನಮ್ಮನ್ನೇ ನಾವು ಮಾರಿಕೊಳ್ಳುತ್ತಿರುತ್ತೇವೆ.

ರಾಜಕೀಯ ತಂತ್ರಜ್ಞಾನ

ಸುಳ್ಳು ಸುದ್ದಿಯ ಹರಡುವಿಕೆಗೂ ಸಾಮಾಜಿಕ ಜಾಲತಾಣಗಳಿಗೂ ಇರುವ ಸಂಬಂಧದ ಕುರಿತ ಚರ್ಚೆ ಈಗ ಹಳೆಯದು. ಇದೊಂದು ವಿಶ್ವವ್ಯಾಪಿಯಾದ ಸಮಸ್ಯೆ. ನಾಜಿಗಳು ನಡೆಸಿದ ಯಹೂದ್ಯರ ನರಮೇಧದ ನಿರಾಕರಣೆಯಿಂದ, ಜಾಗತಿಕ ತಾಪಮಾನ ಏರಿಕೆಯ ಅಲ್ಲಗಳೆಯುವಿಕೆಗಳಿಂದ ಆರಂಭಿಸಿ ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ತನಕ ಅನೇಕ ಸಮಸ್ಯೆಗಳ ಹಿಂದೆ ಈ ಸುಳ್ಳು ಸುದ್ದಿಗಳಿವೆ. ಆದರೆ ಈ ವಿಷಯವನ್ನು ಚರ್ಚಿಸುವಾಗಲೆಲ್ಲಾ ‘ಸುಳ್ಳು ಸುದ್ದಿ’ ಮುಖ್ಯವಾಗುತ್ತದೆಯೇ ಹೊರತು ಅದನ್ನು ಹರಡುತ್ತಿರುವ ತಂತ್ರಜ್ಞಾನದ ವಿಷಯ ಮುಖ್ಯವಾಗುವುದಿಲ್ಲ. ಇಡೀ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಒಂದು ತಟಸ್ಥ ಮಾಧ್ಯಮ ಎಂದು ಹೆಚ್ಚಿನವರು ಭಾವಿಸಿರು ವಂತೆ ಕಾಣಿಸುತ್ತದೆ. ಆದರೆ ವಾಸ್ತವ ಸಂಪೂರ್ಣ ಭಿನ್ನ.

2017ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ‘ಕಂಪ್ಯೂಟೇಶನಲ್ ಪ್ರೊಪಗ್ಯಾಂಡ ರೀಸರ್ಚ್’ ಯೋಜನೆ ತನ್ನ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತು. ಅಮೆರಿಕ, ಚೀನಾ, ರಶ್ಯ, ಪೊಲ್ಯಾಂಡ್, ಬ್ರೆಝಿಲ್, ಕೆನಡಾ, ಜರ್ಮನಿ, ಉಕ್ರೇನ್ ಮತ್ತು ಥೈವಾನ್ ದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಎರಡು ವರ್ಷಗಳು ನಡೆಸಿದ ಸಾಮಾಜಿಕ ಜಾಲತಾಣ ಅಧ್ಯಯನದ ವರದಿಯಿದು. ಏಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಲಕ್ಷಾಂತರ ಪೋಸ್ಟ್‌ಗಳನ್ನು ವಿಶ್ಲೇಷಿಸಿ ತಯಾರಾದ ಈ ವರದಿ ಸರಕಾರಗಳು ಹೇಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮಗೆ ಬೇಕಿರುವ ಚರ್ಚೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ವಿವರಿಸಿತ್ತು. ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಒಮ್ಮತದ ಉತ್ಪಾದನೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುವ ಸಂಶೋಧನೆಯಿದು.

ರಶ್ಯದಲ್ಲಿ ಪುಟಿನ್ ಆಡಳಿತದ ವಿರುದ್ಧ ಇರುವ ಅಲೆಯನ್ನು ಶಾಂತಗೊಳಿಸಲು ಕೆಲಸ ಮಾಡಿದ್ದು ರಾಜಕೀಯ ಕಾರ್ಯಕರ್ತರಲ್ಲ. ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಬಾಟ್’ ಎಂದು ಕರೆಯುವ ತಂತ್ರಾಂಶಗಳು. ನಿರಂತರವಾಗಿ ನಾಯಕನ ಪರವಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರಕ್ರಿಯೆ ಇಲ್ಲಿ ನಡೆಯಿತು. ಎಲ್ಲಿ ವಿರೋಧಿ ಧ್ವನಿಗಳು ಕೇಳಿಸುತ್ತವೆಯೋ ಅಲ್ಲೆಲ್ಲಾ ಈ ಪೋಸ್ಟ್‌ಗಳ ಪ್ರವಾಹವೇ ಹರಿಯುತ್ತಿತ್ತು. ಇದರ ಪರಿಣಾಮ ಹೇಗಿತ್ತೆಂದರೆ ವಿರೋಧಿಗಳ ಸಂಖ್ಯೆ ಅತ್ಯಲ್ಪ ಎಂಬ ಭ್ರಮೆಯನ್ನು ಹುಟ್ಟುಹಾಕಿತು. ಟ್ರಂಪ್ ವಿಷಯದಲ್ಲಿ ಸಂಭವಿಸಿದ್ದೂ ಇದುವೇ. ಕೇಂಬ್ರಿಜ್ ಅನಲಿಟಿಕಾ ಹಗರಣವೇ ಇದನ್ನು ಸ್ಪಷ್ಟವಾಗಿ ಹೇಳುತ್ತದೆ.

2014ರ ಚುನಾವಣೆಗೆ ಮುನ್ನ ಭಾರತದಲ್ಲಿಯೂ ಇದು ಸಂಭವಿಸಿತು. ಪರೊಂಜಯ್ ಗುಹಾ ಠಾಕೂರ್ತ ಮತ್ತು ಸಿರಿಲ್ ಸ್ಯಾಮ್ ಅವರು ಬರೆದಿರುವ ‘ರಿಯಲ್ ಫೇಸ್ ಆಫ್ ಫೇಸ್‌ಬುಕ್ ಇನ್ ಇಂಡಿಯಾ’ ಪುಸ್ತಕ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಿದೆ. ಫೇಸ್‌ಬುಕ್ ಹೇಗೆ ಬಿಜೆಪಿಯ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ತರಬೇತಿಗಳನ್ನು ಸಂಘಟಿಸಿತ್ತು ಎಂಬ ವಿವರಗಳು ಈ ಪುಸ್ತಕದಲ್ಲಿವೆ. ಫೇಸ್‌ಬುಕ್‌ನ ಬೆಳವಣಿಗೆ ಮತ್ತು ಬಿಜೆಪಿಯ ಬೆಳವಣಿಗೆಗಳೆರಡೂ ಒಂದಕ್ಕೊಂದು ಹೇಗೆ ಹೊಂದಿಕೊಂಡಿವೆ ಎಂಬುದನ್ನು ವಿವರಿಸುವ ಲೇಖಕ ದ್ವಯರು ಈ ಸಂಬಂಧಗಳ ಆಳವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. 2013ರಲ್ಲಿ ನರೇಂದ್ರ ಮೋದಿ ಆಪ್ತರಾಗಿದ್ದ ಹಿರೇನ್ ಜೋಷಿ ‘ಮೆರಾ ಭರೋಸ’ ಎಂಬ ವೆಬ್‌ಸೈಟ್ ರೂಪಿಸಿದ್ದರು. ಇದರ ಹಿಂದೆ ಕೆಲಸ ಮಾಡಿದ್ದು ಎನ್‌ಡಿಟಿವಿಯಲ್ಲಿ ಪತ್ರಕರ್ತರಾಗಿದ್ದ ಶಿವನಾಥ್ ತುಕ್ರಾಲ್. ಪುಸ್ತಕದಲ್ಲಿರುವ ಮಾಹಿತಿಯಂತೆ ಶಿವನಾಥ್ ತುಕ್ರಾಲ್ ಅವರು 2014ರ ಚುನಾವಣೆಗೆ ಮೊದಲು ನರೇಂದ್ರ ಮೋದಿ ಪರವಾಗಿ ನಡೆದ ಪ್ರಚಾರಾಂದೋಲನದಲ್ಲಿ ಸಕ್ರಿಯವಾಗಿದ್ದರು. ಚುನಾವಣೆಗಳ ಹೊತ್ತಿನಲ್ಲಿ ಕಾರ್ನೆಗಿ ಸಂಸ್ಥೆ ಸೇರಿದ್ದ ಇವರು 2017ರಲ್ಲಿ ಫೇಸ್‌ಬುಕ್‌ನ ಭಾರತೀಯ ನೀತಿ ನಿರೂಪಣಾ ನಿರ್ದೇಶಕರಾಗಿ ನೇಮಕಗೊಂಡರು. ಬಿಜೆಪಿಯ ಪ್ರಚಾರಾಂದೋಲವನ್ನು ರೂಪಿಸಿದ್ದ ವ್ಯಕ್ತಿಯೇ ಫೇಸ್‌ಬುಕ್‌ನ ನೀತಿ ನಿರೂಪಣಾ ನಿರ್ದೇಶಕನಾಗುವುದು ಕೇವಲ ಕಾಕತಾಳೀಯ ಎಂದು ಭಾವಿಸಲು ಸಾಧ್ಯವೇ? ಫೇಸ್‌ಬುಕ್‌ನ ವ್ಯಾಪಾರ ಮಾದರಿಯ ದೃಷ್ಟಿಯಿಂದ ನೋಡಿದರೆ ಈ ಎಲ್ಲಾ ಬೆಳವಣಿಗೆಗಳೂ ಅದರ ‘ಅಭಿವೃದ್ಧಿ’ಗೆ ಕಾರಣವಾಗಿವೆ. ಹೆಚ್ಚು ಹೆಚ್ಚು ಬಳಕೆದಾರರನ್ನು ಹೆಚ್ಚು ಹೊತ್ತು ಇರಿಸಿಕೊಳ್ಳುವುದಕ್ಕೆ ಬೇಕಿರುವ ತಂತ್ರವಾಗಿ ಇವೆಲ್ಲವೂ ಸರಿಯೇ?.

ನೀನನಗಿದ್ದರೆ ನಾನಿನಗೆ

ಸುಳ್ಳು ಸುದ್ದಿಯ ಹರಡುವಿಕೆಗೂ ಸಾಮಾಜಿಕ ಜಾಲತಾಣಗಳ ವ್ಯಾಪಾರ ಮಾದರಿಗೂ ಅವಿನಾಭಾವ ಸಂಬಂಧವಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಥರ್ಡ್ ರೈಕ್ ಎಂದು ಕರೆಯಲಾಗುವ ಹಿಟ್ಲರ್‌ನ ಆಡಳಿತಾವಧಿಯ ಬಹುಮುಖ್ಯ ಅಸ್ತ್ರಗಳಲ್ಲಿ ಒಂದು ಪ್ರೊಪಗ್ಯಾಂಡ. ಇದನ್ನು ಪ್ರಚಾರಾಂದೋಲನ ಎಂದು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದಾದರೂ ಅದು ಮೂಲದ ಅರ್ಥವನ್ನು ಪೂರ್ಣವಾಗಿ ಧ್ವನಿಸುವುದಿಲ್ಲ. ನಿರ್ದಿಷ್ಟ ವಿಷಯದ ಪರ ಅಥವಾ ವಿರುದ್ಧವಾದ ಅಭಿಪ್ರಾಯವನ್ನು ಉತ್ಪಾದಿಸುವ ಸಲುವಾಗಿ ಯೋಜನಾಬದ್ಧವಾಗಿ ನಡೆಸುವ ಪ್ರಚಾರವನ್ನು ಪ್ರೊಪಗ್ಯಾಂಡ ಎಂದು ಗುರುತಿಸಲಾಗುತ್ತದೆ. ಇದನ್ನೊಂದು ರಾಜಕೀಯ ತಂತ್ರವನ್ನಾಗಿ ಬಳಸಿ ಮೊದಲು ಯಶಸ್ವಿಯಾದದ್ದು ಹಿಟ್ಲರ್ ನೇತೃತ್ವದ ನಾಜಿ ಆಡಳಿತ. ಅವನು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹನ್ನೆರಡೂ ವರ್ಷಗಳ ಕಾಲವೂ ಮಿನಿಸ್ಟರ್ ಆಫ್ ಪ್ರೊಪಗ್ಯಾಂಡ ಎಂಬ ಹುದ್ದೆಯಿತ್ತು. ಅದನ್ನು ನಿರ್ವಹಿಸಿದ್ದು ಪಾಲ್ ಜೋಸೆಫ್ ಗೊಬೆಲ್ಸ್. ಹಿಟ್ಲರ್ ಆರಾಧನೆಯಿಂದ ತೊಡಗಿ ಆರ್ಯ ಶ್ರೇಷ್ಠತೆಯನ್ನು ಕಾಪಾಡಲು ಯಹೂದಿಗಳ ಹತ್ಯೆ ಅನಿವಾರ್ಯ ಎಂದು ಜರ್ಮನ್‌ರನ್ನು ನಂಬಿಸುವುದರಲ್ಲಿ ಗೊಬೆಲ್ಸ್ ಬಳಸಿದ ಪ್ರಚಾರ ತಂತ್ರಕ್ಕೆ ಬಹುದೊಡ್ಡ ಪಾತ್ರವಿದೆ.

ಮನುಷ್ಯತ್ವ ಇರುವ ಯಾರೂ ಒಪ್ಪಲಾಗದ ಕ್ರೌರ್ಯವನ್ನು ಬಹುಸಂಖ್ಯಾತ ಜರ್ಮನ್ನರು ಒಪ್ಪುವಂತಾಗಿದ್ದು ಹೇಗೆ ಎಂಬುದರ ಸುತ್ತ ಅನೇಕ ಸಂಶೋಧನೆಗಳು ನಡೆದಿವೆ. ಈ ವಿಷಯದಲ್ಲಿ ಅತಿ ವಿಶಿಷ್ಟವಾದ ಒಳನೋಟವನ್ನು ಕೊಟ್ಟಿರುವುದು ಬ್ರಿಟಿಷ್ ಮೂಲದ ಇತಿಹಾಸಕಾರ ಅರಿಸ್ಟಾಟಲ್ ಕ್ಯಾಲಿಸ್. ಯುದ್ಧಕಾಲೀನ ಜರ್ಮನಿ ಮತ್ತು ಇಟಲಿಯ ಫ್ಯಾಶಿಸಂನ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಅವರ ಪ್ರಕಾರ ಗೊಬೆಲ್ಸ್‌ನ ಪ್ರಚಾರ ತಂತ್ರದ ವೈಶಿಷ್ಟ್ಯವೆಂದರೆ ಅವನು ಅದಕ್ಕೆ ಬಳಸಿದ ವಿಧಾನ. ‘ಗೊಬೆಲ್ಸ್‌ನ ಪ್ರೊಪಗ್ಯಾಂಡವನ್ನು ಕೇವಲ ಸುಳ್ಳು ಮಾಹಿತಿಯ ಹರಡುವಿಕೆಯಾಗಿ ಗ್ರಹಿಸುವುದೇ ತಪ್ಪು. ಇಲ್ಲಿದ್ದದ್ದು ಪ್ರಭುತ್ವದ ದೃಷ್ಟಿಕೋನಕ್ಕೆ ಅನುಗುಣವಾಗಿ ಮಾರ್ಪಡಿಸಲಾಗಿದ್ದ ‘ಸತ್ಯ’. ಅಂದರೆ ಥರ್ಡ್ ರೈಕ್‌ನ ದೃಷ್ಟಿಯಲ್ಲಿ ಅವರು ಹೇಳುತ್ತಿದ್ದದ್ದು ಬ್ರಿಟಿಷರು ಮುಂದಿಡುತ್ತಿದ್ದ ‘ಸುಳ್ಳನ್ನು’ ಬಯಲು ಮಾಡುವ ‘ಸತ್ಯ’. ನಮ್ಮ ಕಾಲದ ರಾಜಕೀಯ ಪ್ರಚಾರಾಂದೋಲನಗಳೂ ಹೀಗೆಯೇ ನಡೆಯುತ್ತಿವೆ. ‘ಹಿಂದೂಗಳಿಗೆ ಅಪಾಯ ಬಂದೊಂದಗಿದೆ’ ಎಂಬ ಪ್ರಚಾರ ನಡೆಯುತ್ತಿರುವುದೂ ಹೀಗೆಯೇ. ಹಿಂದುತ್ವ ರಾಜಕಾರಣ ನಡೆಸುತ್ತಿರುವವರ ದೃಷ್ಟಿಕೋನದಲ್ಲಿ ಅವರು ಹೇಳುತ್ತಿರುವುದು ‘ಬುದ್ಧಿಜೀವಿಗಳು’ ಹೇಳುತ್ತಿರುವ ‘ಸುಳ್ಳನ್ನು’ ಬಯಲು ಮಾಡುವ ‘ಸತ್ಯ’.

ಪ್ರೊಪಗ್ಯಾಂಡದ ಯಶಸ್ಸಿಗೆ ಬೇಕಾಗಿರುವುದು ನಿರ್ದಿಷ್ಟ ‘ಸತ್ಯ’ದ ಪುನರಾವರ್ತನೆ. ನಾಜಿ ಜರ್ಮನಿಯಲ್ಲಿ ಇದಕ್ಕಾಗಿ ರೇಡಿಯೊ, ಕರಪತ್ರ, ಭಾಷಣಗಳು, ಸಭೆಗಳು ಇತ್ಯಾದಿಗಳೆಲ್ಲವೂ ಬಳಕೆಯಾಗಿದ್ದವು. ವರ್ತಮಾನದಲ್ಲಿ ಈ ಕೆಲಸವನ್ನು ಸಾಮಾಜಿಕ ಜಾಲತಾಣಗಳಿಗೆ ಹೊರಗುತ್ತಿಗೆ ಕೊಡಲಾಗಿದೆ. ಕಳೆದ ಆರೇಳು ವರ್ಷಗಳಿಂದ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಮತ್ತು ವಾಟ್ಸ್ ಆ್ಯಪ್‌ಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾಕಷ್ಟು ಚರ್ಚೆಯೇನೋ ನಡೆದಿದೆ. ಸರಕಾರೇತರ ಸಂಸ್ಥೆಗಳಿಂದ ಆರಂಭಿಸಿ ಸರಕಾರಗಳ ತನಕದ ಎಲ್ಲರೂ ಈ ಜಾಲತಾಣಗಳ ಮಾಲಕರನ್ನು ಹಲವರು ಬಾರಿ ಎಚ್ಚರಿಸಿದ್ದಾರೆ. ಆದರೆ ಈ ತನಕವೂ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಕೆಲಸಕ್ಕೆ ಮಾತ್ರ ಯಾವೊಂದು ಸಂಸ್ಥೆಯೂ ತೊಡಗಿಸಿಕೊಂಡಿಲ್ಲ. ಈ ತನಕ ಅವು ಘೋಷಿಸಿರುವ ಯೋಜನೆಗಳೂ ಕೇವಲ ಕಣ್ಣೊರೆಸುವ ತಂತ್ರ ಮಾತ್ರ.

ಇದೇಕೆ ಎಂಬುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ. ಮಾಹಿತಿ ಸುಳ್ಳಾದರೂ ನಿಜವಾದರೂ ಅದರ ಹರಡು ವಿಕೆಯ ಸಾಮರ್ಥ್ಯ ಮತ್ತು ಬಳಕೆದಾರನನ್ನು ಹೆಚ್ಚು ಹೊತ್ತು ಹಿಡಿದಿಡುವ ಸಾಮರ್ಥ್ಯ ಮಾತ್ರ ಈ ಕಂಪೆನಿಗಳಿಗೆ ಮುಖ್ಯ. ಬಳಕೆದಾರನ ಮಾಹಿತಿಯನ್ನು ಉತ್ಖನನ ಹೆಚ್ಚುತ್ತಾ ಹೋದಂತೆ ಇವನ್ನು ಓದುವವರಿಗೆ ಅದೇ ಬಗೆಯ ಸುದ್ದಿಗಳು ಸಿಗುತ್ತಾ ಹೋಗುತ್ತದೆ. ಅಂದರೆ ರಾಜಕೀಯ ಪ್ರೊಪಗ್ಯಾಂಡ ಮಾಡುವವರಿಗೆ ಬೇಕಿರುವ ಪುನರಾವರ್ತನೆಯ ಅನುಕೂಲ ಇಲ್ಲಿ ಸುಲಭದಲ್ಲಿ ದೊರೆಯುತ್ತವೆೆ. ಬಳಕೆದಾರ ಮಾಹಿತಿಯ ಮಹಾಸಮುದ್ರದಲ್ಲಿ ತೇಲುತ್ತಲೇ ಬಾವಿಯ ಕಪ್ಪೆಯಾಗುತ್ತಾನೆ. ಈ ಕಂಪೆನಿಗಳು ಹಣ ಸಂಪಾದಿಸುತ್ತಿರುವಾಗಲೇ ರಾಜಕಾರಣ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ. ಭಾರತದಲ್ಲಿ ಫೇಸ್‌ಬುಕ್‌ನ ಬಳಕೆದಾರರು ಹೆಚ್ಚಿದ್ದೇ ಇಂಥದ್ದೊಂದು ಪ್ರಕ್ರಿಯೆಯಲ್ಲಿ. ಬಲಪಂಥೀಯ ರಾಜಕಾರಣ ಪ್ರಬಲಗೊಳ್ಳುತ್ತಾ ಬರುವ ಕಾಲದಲ್ಲಿ ಅದು ಬಿಜೆಪಿಯ ಜೊತೆಗೆ ಕೈಜೋಡಿಸಿತು. ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೂ ತಾನು ತರಬೇತಿ ನೀಡಿದ್ದೇನೆಂದು ಫೇಸ್‌ಬುಕ್ ಹೇಳುತ್ತದೆಯಾದರೂ ಬಿಜೆಪಿಯ ಜೊತೆಗಿನ ಅದರ ಸಂಬಂಧ ಹೆಚ್ಚು ನಿಕಟ ಎಂಬುದು ಶಿವನಾಥ್ ತುಕ್ರಾಲ್ ಪ್ರಕರಣವೇ ಸ್ಪಷ್ಟಪಡಿಸುತ್ತದೆ!

ಈ ಸಂಬಂಧಗಳ ವಿಷಯದಲ್ಲಿ ಈ ಸಂಸ್ಥೆಗಳಿಗೆ ಅಂಥ ಕೀಳರಿಮೆಯೇನೂ ಇಲ್ಲ. ಅಮೆರಿಕದ ಕಾಂಗ್ರೆಸ್ ಇಂಥದ್ದನ್ನು ತನಿಖೆ ನಡೆಸುವಾಗ ಸದಸ್ಯರು ಕೇಳುವ ಪ್ರಶ್ನೆಗಳಿಗೆ ತಡವರಿಸುತ್ತಾ ಉತ್ತರಿಸುವ ಸುಂದರ್ ಪಿಚ್ಚೈ ಆಗಲಿ ಝಕರ್‌ಬರ್ಗ್ ಆಗಲಿ ಈ ಪ್ರಕ್ರಿಯೆಯನ್ನು ತಾವೇ ಮುಂದಾಗಿ ತಡೆಯಲೂ ಸಾಧ್ಯವಿಲ್ಲ. ಉತ್ಪಾದನೆ, ಮತ್ತಷ್ಟು ಉತ್ಪಾದನೆ ಹಾಗೂ ಇನ್ನಷ್ಟು ಉತ್ಪಾದನೆ ಎಂಬ ಬಂಡವಾಳವಾದದ ತತ್ವವೇ ಇಲ್ಲಿಯೂ ಇರುವುದು. ದತ್ತಾಂಶ ಮತ್ತು ಅದರ ಉಪ ಉತ್ಪನ್ನವಾಗಿ ದೊರೆಯುವ ದತ್ತಾಂಶ ಅದರಿಂದ ಸಿಗುವ ದತ್ತಾಂಶದಂಥ ಒಂದು ವರ್ತುಲದೊಳಗೆ ಈ ಉದ್ಯಮವೂ ಸಿಲುಕಿದೆ ಎಂಬುದೇ ವಾಸ್ತವ. ಇಲ್ಲಿ ಪ್ರೊಪಗ್ಯಾಂಡ ಎಂಬುದು ಕೂಡಾ ಒಂದು ಬಗೆಯಲ್ಲಿ ಈ ಕಂಪೆನಿಗಳ ಮಟ್ಟಿಗೆ ಒಂದು ತಟಸ್ಥ ಮೌಲ್ಯ ಅಥವಾ ಒಂದು ತಾಂತ್ರಿಕ ಪಾರಿಭಾಷಿಕ ಮಾತ್ರ. ಬಲ, ಎಡ ಅಥವಾ ಮಧ್ಯಮಪಂಥೀಯವಾದ ಯಾವ ಪ್ರೊಪಗ್ಯಾಂಡ ಹೆಚ್ಚು ದತ್ತಾಂಶವನ್ನು ಕೊಡುತ್ತದೆಯೋ ಅದರ ಮೇಲಷ್ಟೇ ಇವರ ಕಣ್ಣು.

ವಿಮೋಚನೆಯೆಂಬ ಬಂಧನ

ಈ ಬಲೆಯಿಂದ ಬಿಡಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಗಳು ನಡೆಯುತ್ತಲೇ ಇವೆ. ಮುಖ್ಯವಾಹಿನಿಯ ಪ್ರಯತ್ನಗಳ ದೊಡ್ಡ ಮಿತಿಯೆಂದರೆ ಇವೆಲ್ಲವೂ ಮತ್ತೆ ಇದೇ ಬೃಹತ್ ತಂತ್ರಜ್ಞಾನ ಕಂಪೆನಿಗಳು ರೂಪಿಸುವ ನಿಯಮದ ಅನ್ವಯವೇ ನಡೆಯುತ್ತದೆ. ಉದಾಹರಣೆಗೆ ಫೇಸ್‌ಬುಕ್ ತನ್ನ ಬಳಕೆದಾರರು ಖಾತೆಯನ್ನು ಡಿಲಿಟ್ ಮಾಡಿದರೆ ತಾನು ಸಂಗ್ರಹಿಸಿಟ್ಟುಕೊಂಡಿದ್ದ ಎಲ್ಲಾ ಮಾಹಿತಿಯನ್ನು ನಾಶ ಮಾಡುತ್ತೇನೆಂದು ಹೇಳುತ್ತದೆ. ಆದರೆ ಇಲ್ಲೊಂದು ಸೂಕ್ಷ್ಮವಿದೆ. ಇಲ್ಲಿಯ ತನಕ ನಿಮ್ಮ ದತ್ತಾಂಶವನ್ನು ಬಳಸಿಕೊಂಡು ಅದು ರೂಪಿಸಿದ ನಿಮ್ಮ ಆಸಕ್ತಿಗಳ ನೀಲನಕಾಶೆಯನ್ನು ನಾಶ ಮಾಡುತ್ತದೆಯೇ? ಈ ಪ್ರಶ್ನೆಗೆ ಅದು ಉತ್ತರಿಸುವುದೇ ಇಲ್ಲ! ಟ್ವಿಟರ್ ಮತ್ತು ಗೂಗಲ್‌ಗಳೂ ಹೀಗೆಯೇ ಅರ್ಧ ಸತ್ಯದಲ್ಲೇ ಬಾಳುತ್ತವೆ.

ಇನ್ನು ಉಚಿತವಾಗಿ ಸೇವೆ ಒದಗಿಸುವ ಭರವಸೆಯನ್ನು ನೋಡೋಣ. ಜಿಮೇಲ್ ಸೇವೆಗೆ ಗೂಗಲ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಗೂಗಲ್ ಅಸಿಸ್ಟೆಂಟ್ ನಿಮ್ಮೆಲ್ಲಾ ಇಮೇಲ್‌ಗಳನ್ನು ಓದಿ ನಿಮ್ಮ ಕಾರ್ಯಕ್ರಮದ ಪಟ್ಟಿಯನ್ನೇ ತಯಾರಿಸಿ ನೆನಪಿಸುವಷ್ಟು ಬುದ್ಧಿವಂತಿಕೆ ಹೊಂದಿದೆ. ಆದರೆ ಇದೆಲ್ಲಾ ಉಚಿತವಾಗಿ ಲಭ್ಯವಾಗುವುದು ನೀವು ನಿಮ್ಮೆಲ್ಲಾ ವಿವರಗಳನ್ನು ಬಳಸಿಕೊಳ್ಳಲು ಒಪ್ಪಿದ ಮೇಲೆ. ಇದು ಹೇಗಿದೆ ಎಂದರೆ ವಿಮೋಚನೆಗಾಗಿ ಸಂಪೂರ್ಣವಾಗಿ ಶರಣಾಗುವುದಕ್ಕೆ ಹೇಳಿದಂತಿದೆ. ಅಮೆರಿಕದಲ್ಲಿ ಗುಲಾಮಗಿರಿಯನ್ನು ನಿಷೇಧಿಸುವ ಹೊತ್ತಿನಲ್ಲಿಯೂ ಇದು ಸಂಭವಿಸಿತ್ತು. ಸಾವಿರಾರು ಗುಲಾಮರನ್ನು ಹೊಂದಿದ್ದ ಅನೇಕರು ಈ ವ್ಯವಸ್ಥೆ ಬಂಡವಾಳಶಾಹಿಗಿಂತ ಹೆಚ್ಚು ಮಾನವೀಯ ಎಂಬ ವಾದ ಮುಂದಿಟ್ಟಿದ್ದರು. ತಂತ್ರಜ್ಞಾನ ದೈತ್ಯರು ಪ್ರತಿಪಾದಿಸುವ ದತ್ತಾಂಶ ಸ್ವಾತಂತ್ರದ ಪರಿಕಲ್ಪನೆಗೂ ಇದೇ ಮಿತಿಗಳಿವೆ.

ಯುನೈಟೆಡ್ ಕಿಂಗ್‌ಡಂ ತಮ್ಮ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ದತ್ತಾಂಶವನ್ನು ವಿಶ್ಲೇಷಿಸುವುದಕ್ಕೆ ಗೂಗಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮೂತ್ರಪಿಂಡದ ಕಾಯಿಲೆಗಳ ಕುರಿತ ಒಳನೋಟಕ್ಕಾಗಿ ಈ ವ್ಯವಸ್ಥೆಯಂತೆ. ಗೂಗಲ್ ದತ್ತಾಂಶ ವಿಶ್ಲೇಷಿಸುತ್ತದೆ ಎಂಬುದೇನೋ ನಿಜ. ಆದರೆ ಆಮೇಲೆ ಅದನ್ನು ಬಳಸಿಕೊಂಡು ಏನೇನು ಮಾಡುತ್ತದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಆದರೆ ಈ ಪ್ರಕ್ರಿಯೆಯಲ್ಲಿ ಅಡಗಿರುವ ಸೂಕ್ಷ್ಮವನ್ನು ಗುರುತಿಸಬೇಕು. ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸರಕಾರ ಮಾಡಬೇಕಿರುವ ಎಲ್ಲಾ ಕೆಲಸಗಳನ್ನೂ ಬೃಹತ್ ತಂತ್ರಜ್ಞಾನ ಕಂಪೆನಿಗಳು ಮಾಡಲು ಹೊರಟಿವೆ. ಎಲ್ಲಾ ರೋಗಿಗಳ ಮಾಹಿತಿಯನ್ನು ವಿಶ್ಲೇಷಿಸುವ ಕೆಲಸವನ್ನು ಒಂದೋ ಸರಕಾರವೇ ಮಾಡಬೇಕು. ಇಲ್ಲವಾದರೆ ಅನಾಮಿಕತೆಯನ್ನು ಖಾತರಿ ಪಡಿಸಿಕೊಂಡು ಮುಕ್ತವಾಗಿ ಲಭ್ಯವಾಗುವಂತೆ ನೋಡಿಕೊಂಡು ಎಲ್ಲಾ ಸಂಶೋಧಕರಿಗೂ ದೊರೆಯುವಂತೆ ಮಾಡಬೇಕು. ಆದರೆ ಅವರೆಡನ್ನೂ ಮಾಡದೆ ನಿರ್ದಿಷ್ಟ ಕಂಪೆನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳುವುದು ತರ್ಕಹೀನ.

ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿರುವ ವೇಗ ಮತ್ತು ಅದು ಸೃಷ್ಟಿಸಿರುವ ಮಾಯಾಜಾಲಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಎಂದೋ ಬಲಿಯಾಗಿಬಿಟ್ಟಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದಲ್ಲಿ ಉತ್ತರವಿದೆ ಎಂಬಂಥ ಭಾವವಿದು. ಮತ್ತು ಅದು ಒದಗಿಸುವ ಕೇಂದ್ರೀಕೃತ ಮಾದರಿ ಎಲ್ಲಾ ಬಗೆಯ ಪ್ರಭುತ್ವಗಳಿಗೂ ಇಷ್ಟವಾಗುತ್ತದೆ. ಈ ದತ್ತಸಂಚಯಗಳನ್ನು ನಿರ್ಮಿಸುವ, ನಿರ್ವಹಿಸುವ ಮತ್ತು ವಿಶ್ಲೇಷಿಸುವವರು ಅದರಿಂದ ಏನು ಲಾಭ ಪಡೆಯುತ್ತಾರೆ ಎಂಬ ಪ್ರಶ್ನೆಯನ್ನೇ ನಮ್ಮ ರಾಜಕೀಯ ಪ್ರಭುತ್ವಗಳು ಕೇಳುತ್ತಿಲ್ಲ. ಟ್ವಿಟರ್ ಮತ್ತು ಫೇಸ್‌ಬುಕ್‌ಗಳಿಂದ ಅರಬ್ ವಸಂತ ಸಂಭವಿಸಿತು ಎಂದು ಸಂಭ್ರಮಿಸುವಾಗಲೇ ಮತ್ತೊಂದು ವಿಚಾರವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಈ ಎಲ್ಲಾ ಕಂಪೆನಿಗಳೂ ಈಗ ಆಯಾ ದೇಶಗಳ ಸರಕಾರದೊಂದಿಗೆ ತಮ್ಮ ಬಳಕೆದಾರರ ದತ್ತಾಂಶವನ್ನು ಹಂಚಿಕೊಳ್ಳಲು ಸಿದ್ಧವಾಗುತ್ತಿವೆ. ಅಷ್ಟೇಕೆ ಈ ಬಗೆಯ ಜಾಲತಾಣಗಳ ಮೇಲೆ ನಿಗಾವಹಿಸುವ ತಂತ್ರಜ್ಞಾನವನ್ನು ಚೀನಾ ಮತ್ತು ಅಮೆರಿಕದ ಕಂಪೆನಿಗಳೇ ತಯಾರಿಸಿ ಮಾರಾಟ ಮಾಡುತ್ತಿವೆ. ಅಂದರೆ ಒಂದೆಡೆ ಕ್ರಾಂತಿಗೆ ವೇದಿಕೆ ಸೃಷ್ಟಿಸಿ ಲಾಭ ಪಡೆಯುವುದು. ಅದೇ ವೇಳೆ ಮತ್ತೊಂದು ಕಡೆಯಿಂದ ಕ್ರಾಂತಿಯನ್ನು ವಿಫಲಗೊಳಿಸಲು ಸಹಾಯ ಮಾಡಿಯೂ ಲಾಭಗಳಿಸುವುದು!

ಖರೀದಿಸಲಾಗದ ಸ್ವಾತಂತ್ರ್ಯ

ಮಾಹಿತಿ ತಂತ್ರಜ್ಞಾನದ ತೊಂದರೆ ಅಥವಾ ಸಮಸ್ಯೆಗಳನ್ನು ಕಲ್ಪಿಸಿಕೊಳ್ಳುವವರೆಲ್ಲರೂ ಅದನ್ನು ಎರಡು ಬಗೆಯ ಸಮಸ್ಯೆಗಳಿಗೆ ಸೀಮಿತವಾಗಿಡುತ್ತಾರೆ. ಮೊದಲನೆಯದ್ದು ಸೈಬರ್ ಕನ್ನ ಮತ್ತು ದಾಳಿಯ ಸಮಸ್ಯೆ. ಎರಡನೆಯದ್ದು ಸಾಮಾಜಿಕ ಜಾಲತಾಣಗಳು ಹರಿಸುವ ಮಾಹಿತಿಯ ಮಹಾಪೂರದಿಂದಾಗಿ ಉಂಟಾಗಿರುವ ಗೊಂದಲ ಮತ್ತು ಸುಸ್ತಿನ ಸಮಸ್ಯೆ. ವಾಸ್ತವದಲ್ಲಿ ಇವೆರಡಕ್ಕೂ ಪರಿಹಾರವಿದೆ. ಮೊದಲನೆಯದ್ದು ಎಲ್ಲಾ ಬಗೆಯ ಸಂಪತ್ತಿದ್ದೂ ಎದುರಾಗುವ ಕಂಟಕ. ಎರಡನೆಯದ್ದು ನಮ್ಮ ವರ್ತನೆಯಲ್ಲಿ ಬದಲಾವಣೆಯಾದರೆ ಪರಿಹಾರವಾಗುತ್ತದೆ. ಮಾಹಿತಿ ತಂತ್ರಜ್ಞಾನದಿಂದ ಎದುರಾಗಿರುವ ನಿಜವಾದ ಸಮಸ್ಯೆಯೆಂದರೆ ಅದು ಎಲ್ಲವನ್ನೂ ವಾಣಿಜ್ಯೀಕರಿಸಿರುವುದು. ‘ಖಾಸಗಿತನ’ ಎಂದರೆ ಖರೀದಿಸಲು ಸಿಗುವ ಒಂದು ಸೇವೆ ಎಂಬ ಭ್ರಮೆಯಲ್ಲಿ ನಮ್ಮನ್ನು ಸಿಲುಕಿಸಿರುವುದು. ಕೆಲವು ನೂರು ರೂಪಾಯಿಗಳನ್ನು ಕೊಟ್ಟರೆ ಖಾಸಗಿತನವನ್ನು ಖಾತರಿ ಪಡಿಸಿಕೊಳ್ಳುವ  app ಸಿಗುತ್ತದೆ ಎಂಬ ಮಾದರಿಯಿಂದ ಹೊರಬಂದು ಖಾಸಗಿತನವನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಖಾತರಿಪಡಿಸಿಕೊಳ್ಳುವತ್ತ ಸಾಗಬೇಕಿದೆ. ಅಂದರೆ ಖಾಸಗಿತನ ಎಂಬುದು ಒಂದು ಖರೀದಿಸಬಹುದಾದ ಸೇವೆಯಲ್ಲ. ಅದೊಂದು ಸಾಂವಿಧಾನಿಕ ಹಕ್ಕು ಎಂಬುದನ್ನು ಅರಿಯುವುದು ಇಂದಿನ ಅಗತ್ಯ. ಅತ್ಯಂತ ಸರಳವಾದ ಮಾತುಗಳಲ್ಲಿ ಹೇಳುವುದಾದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಅದೆಷ್ಟೇ ಅದ್ಭುತಗಳನ್ನು ಸೃಷ್ಟಿಸಲಿ ಅದು ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಮುಖ್ಯವಾಗಿ ಬೇಕಿರುವುದು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)