varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಆರ್ಥಿಕ ಗಾಯದ ಮೇಲೆ ಧರ್ಮದ ಬರೆ

ವಾರ್ತಾ ಭಾರತಿ : 2 Jan, 2020
ಕೆ.ಸಿ. ರಘು

 ಇಂದು ಆರ್ಥಿಕ ಮುಗ್ಗಟ್ಟಿನಲ್ಲಿರುವ ಭಾರತಕ್ಕೆ ಜನಾಂಗೀಯ ದ್ವೇಷ ಧರ್ಮ ಧರ್ಮಗಳ ನಡುವೆ ಕಂದರ ಉಂಟು ಮಾಡುವುದರಿಂದ ಈಗಿನ ಪೀಳಿಗೆಯೂ ಸಹ ಏಳಿಗೆಯನ್ನು ಕಾಣದೇ ತಟಸ್ಥವಾಗಿರುವ ಪರಿಸ್ಥಿತಿ ಉಂಟಾಗಬಹುದು. ಭಾರತವನ್ನು ಇನ್ನೂ ಕಟ್ಟಬೇಕಾದ ದೇಶ ಎನ್ನುವುದನ್ನು ನಾವು ಮರೆಯುವಂತಿಲ್ಲ. ಆರ್ಥಿಕ ಅಭಿವೃದ್ಧಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳ ಕೊಡುಗೆ ಅಪಾರವಾಗಿರುತ್ತದೆ. ಕೆಲವರ ಪ್ರಕಾರ ಒಂದು ದೇಶದ ಜನರ ನಡುವೆ ಇರುವ ವಿಶ್ವಾಸ, ನಂಬಿಕೆ ವಿವಿಧ ಆರ್ಥಿಕ ವಿಷಯಗಳಾದ ಬಂಡವಾಳ, ತಂತ್ರಜ್ಞಾನ, ಕಾನೂನು-ಕಟ್ಟಳೆಗಳಿಗಿಂತ ಮೀರಿ ಅಭಿವೃದ್ಧಿಗೆ ಕೆಲಸ ಮಾಡುತ್ತದೆ.

 

                ಕೆ.ಸಿ. ರಘು

ಆಹಾರ ತಜ್ಞರಾಗಿರುವ ಕೆ.ಸಿ. ರಘು ಪತ್ರಕರ್ತ, ಅಂಕಣಕಾರ, ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು. ಮನುಷ್ಯನನ್ನು ರೂಪಿಸುವ ಬೌದ್ಧಿಕ ಆಹಾರದ ಕುರಿತಂತೆಯೂ ಅಪಾರ ಕಾಳಜಿಯುಳ್ಳ ರಘು, ವರ್ತಮಾನದ ರಾಜಕೀಯ ಬೆಳವಣಿಗೆಗಳಿಗೆ ಸ್ಪಂದಿಸಿ ಹಲವು ಬರಹಗಳನ್ನು ಬರೆದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾಣತನದಿಂದ ವಿಶ್ಲೇಷಿಸಿ ಚಾಪೆಯೊಳಗೆ ತೂರಿಡುವ ಪ್ರಯತ್ನ ನಡೆಯುತ್ತಿದೆ. ಯಾರೋ ಎನೋ ಹೇಳಿದ್ರು ಅಂತ, ನಾಲ್ಕು ಇಂತಹ ಧರ್ಮಕ್ಕೆ ಒಳಪಟ್ಟ ವಿಶ್ವ ವಿದ್ಯಾಲಯಗಳಷ್ಟೇ ದೊಂಬಿ ಎಬ್ಬಿಸುತ್ತಿದ್ದಾರೆ. ಅವರ ಬಟ್ಟೆ ನೋಡಿ ಹೇಳಬಹುದು ಅವರು ಯಾರೆಂದು. ಹೀಗೆ ವಾದ ಮುಂದುವರಿಯುತ್ತದೆ. ಇದು ನಮ್ಮ ಜಾತ್ಯತೀತ ಬಹುತ್ವದ ಸಂವಿಧಾನಕ್ಕೆ ಬರುವ ಧಕ್ಕೆ, ಎಲ್ಲರನ್ನು ಒಳಗೊಳ್ಳುವ ವಸುಧೈವ ಕುಟುಂಬ ಎನ್ನುವ ಭದ್ರ ಬುನಾದಿಯ ಸಂಸ್ಕೃತಿಗೆ ಕೊಡಲಿ ಏಟು ಎನ್ನುವುದನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು, ಮಾಧ್ಯಮಗಳು, ಅಲ್ಲಲ್ಲಿ ನ್ಯಾಯಾಲಯಗಳು ಸಹ ಕೈ ಜೋಡಿಸಿ ಬಹು ಸಂಖ್ಯಾತರ ಓಲೈಕೆಗೆ ಬಹುತ್ವವನ್ನು ನಾಶಮಾಡುವುದಾಗಿದೆ.

ನಮ್ಮ ಸರಕಾರ ಜಾಣ್ಮೆಯಿಂದ ಇದರಲ್ಲೇನಿದೆ ದೋಷ, ಮೂರು ಮುಸ್ಲಿಮ್ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದೇ ಹೊರತು ಯಾರ ವಿರುದ್ಧವೂ ಈ ಕಾನೂನು ಮಾಡಿರುವುದು ಅಲ್ಲ ಎನ್ನುತ್ತದೆ. ಆದರೆ ಇದೇ ಹಿಂದೂಗಳನ್ನು ಬೌದ್ಧ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಭೂತಾನ್‌ನಲ್ಲಿ ಲಕ್ಷ ಲಕ್ಷ ಜನರನ್ನು ಚಿತ್ರ ಹಿಂಸೆ ಒಳಪಡಿಸಿ ಹೊರ ದಬ್ಬಲಾಗಿದೆ. ಇದರ ಬಗ್ಗೆ ಸೊಲ್ಲಿಲ್ಲ. ಅದಾಗ್ಯೂ 31,313 ಜನರು ಅನೇಕ ವರ್ಷಗಳಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವವರು ಪೌರತ್ವಕ್ಕಾಗಿ ಇನ್ನೂ ಕಾಯುತ್ತಿರುವುದನ್ನು ಸರಿಪಡಿಸಬೇಕಾಗಿರುವುದು ಸರಿಯಾದ ಕ್ರಮವೇ ಆಗಿದ್ದರೂ ಅದರಲ್ಲಿ ಇಬ್ಬರು ಬೌದ್ಧ ಧರ್ಮದವರು, ಐವತ್ತೈದು ಕ್ರಿಶ್ಚಿಯನ್ನರು, ಇಬ್ಬರು ಪಾರ್ಸಿಗಳು ಇದ್ದಾರೆ. ಇದರಲ್ಲಿ ಮುಸ್ಲಿಮರು ಇಲ್ಲ. ಇವರಿಗೋಸ್ಕರವೇ ಕಾನೂನನ್ನು ಮಾಡಿಕೊಂಡಿದ್ದಾರೆ ಎನ್ನುವುದಾದರೇ ಇಲ್ಲದಿರುವ ಮುಸ್ಲಿಮರನ್ನು ಹೊರಹಾಕುವ ಪ್ರಸ್ತಾಪಕ್ಕೆ ಕಾರಣವೇನು. ಮುಖ್ಯವಾಗಿ ಇದೇ ಕಾನೂನಿನ ಮೂಲಕ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೊರಗುಳಿದಿರುವ 12 ಲಕ್ಷ ಹಿಂದೂಗಳನ್ನು ಒಳಗೊಳ್ಳುವ ಉದ್ದೇಶವಿದೆ. ಅಲ್ಲಿಯೇ ಅದೇ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಲ್ಲಿ 7 ಲಕ್ಷ ಮುಸ್ಲಿಮರು ಹೊರಗುಳಿದಿದ್ದಾರೆ, ಅವರನ್ನು ಕೈ ಬಿಡುವ ಉದ್ದೇಶ ಈ ಕಾನೂನಿನಲ್ಲಿದೆ. ಆದರೇ ಅಸ್ಸಾಮಿಗರಿಗೆ ಶತ್ರುಗಳು ಬಂಗಾಳಿಗಳು, ಅವರು ಹಿಂದೂಗಳೇ ಇರಬಹುದು ಅಥವಾ ಮುಸ್ಲಿಮರೇ ಇರಬಹುದು ಅದು ಅವರಿಗೆ ಮುಖ್ಯವಲ್ಲ. ಸ್ಥಳೀಯ ಅಸ್ಮಿತೆ ಅನ್ನುವುದು ಕೇವಲ ಮಾಡುವುದೇ ಹೀಗೆ ಮ್ಯಾಂಗಳೂರು ಎನ್ನುವುದನ್ನು ಮಂಗಳೂರು ಎಂದು ಹೆಸರು ಬದಲಿಸಿದಾಗ ಸ್ಥಳೀಯರೊಬ್ಬರು ನಮಗೆ ಬೇಕಾಗಿರುವುದು ಕುಡ್ಲ ಎಂದಿದ್ರು.

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋದಂಣಿ (ಎನ್‌ಆರ್‌ಸಿ) ಮಾಡಿ ಮುಸ್ಲಿಮರನ್ನು ಗುರುತಿಸಿ ದೈತ್ಯ ಬಂಧನ ಕೇಂದ್ರಗಳನ್ನು ಕಟ್ಟಿ ಅಲ್ಲಿಡುವ ಉದ್ದೇಶವಾಗಿದೆ. ಈಗಾಗಲೇ ಇಂತಹ ದೈತ್ಯ ಬಂಧನ ಕೇಂದ್ರಗಳನ್ನು ಅಸ್ಸಾಂ ನಲ್ಲಿ ಮತ್ತು ಇತರೇ ರಾಜ್ಯಗಳಲ್ಲಿ ಕಟ್ಟಲಾಗುತ್ತಿದೆ. ಒಂದು ಪಕ್ಷ ಈ ಮುಸ್ಲಿಮ್ ರಾಷ್ಟ್ರದಿಂದ ಬಂದವರೆಂದೂ ಗುರುತಿಸಲ್ಪಟ್ಟರೂ ಯಾರು ಅವರನ್ನು ಹಿಂಪಡೆಯುವ ಸಾಧ್ಯತೆ ಅತ್ಯಂತ ವಿರಳ. ಈ ಎನ್‌ಆರ್‌ಸಿಗಾಗಿ ಸುಮಾರು 50 ಸಾವಿರ ಕೋಟಿ ರೂ. ಬೇಕಾಗಬಹುದೆಂದು ಅಂದಾಜು ಮಾಡಲಾಗಿದೆ. ಬಾಂಗ್ಲಾದೇಶದಿಂದ 1971ರ ಯುದ್ಧ ಸಮಯದಲ್ಲಿ ಬಹಳಷ್ಟು ಜನ ಹಿಂದೂಗಳು ಮತ್ತು ಮುಸಲ್ಮಾನರು ಭಾರತಕ್ಕೆ ಬಂದಿರುವುದು ನಿಜ. ಅಲ್ಲಿದ್ದ ಸುಮಾರು ಶೇ.18 ಹಿಂದೂಗಳು ಶೇ.10ಕ್ಕೆ ಇಳಿದಿರುವುದು ಗಮನಾರ್ಹ. ಇಲ್ಲಿ ಬಂದವರಲ್ಲಿ ಹೆಚ್ಚಿನವರು ಹಿಂದೂಗಳೇ ಆಗಿದ್ದಾರೆ ಎನ್ನುವುದಕ್ಕೆ ಅಸ್ಸಾಂನಲ್ಲಿ ನಡೆಸಿದ ಎನ್‌ಆರ್‌ಸಿನೇ ಸಾಕ್ಷಿ. ಈಗ ಹೊರಗಿನವರೆಂದು ಗುರುತಿಸಿರುವುದರಲ್ಲಿ ಶೇ.65ರಷ್ಟು ಹಿಂದೂಗಳೇ ಆಗಿರುವುದು ಕಂಡು ಬರುತ್ತದೆ. ಬಾಂಗ್ಲಾ ದೇಶದ ಯುದ್ಧಕ್ಕೆ ಮುಖ್ಯ ಕಾರಣ ಪಶ್ಚಿಮ ಪಾಕಿಸ್ತಾನವೂ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ದ ಮೇಲೆ ಉರ್ದು ಭಾಷೆ ಹೇರಿಕೆ ಮತ್ತು ಸಾಂಸ್ಕೃತಿಕ ದಬ್ಬಾಳಿತನವೇ ಕಾರಣವಾಯಿತು. ಬಾಂಗ್ಲಾ ಭಾಷೆ ಧರ್ಮವನ್ನು ಮೀರಿ ನಿಂತಿತು. ಇಂದು ಬಾಂಗ್ಲಾದೇಶ ಎಲ್ಲಾ ಮಾನವ ಅಭಿವೃದ್ಧಿ ಮಾಪನಗಳಲ್ಲಿ ಭಾರತಕ್ಕಿಂತ ಮುಂದಿದೆ. ಮೊನ್ನೆ ತಾನೆ ಪ್ರಕಟಗೊಂಡ ಲಿಂಗ ತಾರತಮ್ಯ ಮಾಪನದಲ್ಲಿ ಭಾರತ 112ನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶ 50ನೇ ಸ್ಥಾನದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 88, ಶ್ರೀಲಂಕಾ 86, ಪಾಕಿಸ್ತಾನ 94ನೇ ಸ್ಥಾನದಲ್ಲಿದೆ. ಹಸಿವಿನಲ್ಲಿ ನಾವು ಪಾಕಿಸ್ತಾನಕ್ಕಿಂತ ಕೆಟ್ಟ ಪರಿಸ್ಥಿತಿ ಇರುವುದನ್ನು ಗಮನಹರಿಸಬೇಕಾಗಿದೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇದು ನಮ್ಮ ದೇಶದ ಅಪಮಾನ (ನ್ಯಾಶನಲ್ ಶೇಮ್) ಎಂದಿದ್ದರು. ಶಿಶು ಮರಣ ಭಾರತದಲ್ಲಿ ಸುಮಾರು 39 ಇದ್ದರೆ, ಬಾಂಗ್ಲಾ ದೇಶದಲ್ಲಿ 25 ಆಗಿರುತ್ತದೆ. ನಮ್ಮ ಆರ್ಥಿಕ ಅಭಿವೃದ್ಧಿ ಶೇ.4.5 ಇದ್ದರೆ, ಬಾಂಗ್ಲಾದೇಶ ಶೇ.8ರಷ್ಟಿದೆ.

ಆರ್ಥಿಕ ಅಭಿವೃದ್ಧಿ, ಮಾನವ ಅಭಿವೃದ್ಧಿ ಇಲ್ಲಿ ಮುಂಚೂಣಿಯಲ್ಲಿರುವಾಗ ಯಾರು ದೇಶ ಬಿಟ್ಟು ಹೋಗುವುದಿಲ್ಲ. ಹೋದರು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳತ್ತ ಹೋಗುತ್ತಾರೆ. ಭಾರತೀಯರು ವಿದ್ಯಾವಂತರಾದ ಮೇಲೆ ಕನಸು ಕಾಣುವುದು ಅಮೆರಿಕಕ್ಕೆ ಹೋಗುವುದು. ಚೆನ್ನೈ ನಗರದಲ್ಲಿ ವೀಸಾ ಅಮ್ಮನ ದೇವಸ್ಥಾನವಿದೆ. ಅಲ್ಲಿ ಸಾವಿರಾರು ಮಂದಿ ಪ್ರಾರ್ಥನೆ ಮಾಡುವುದು ಅಮೆರಿಕ ದೇಶಕ್ಕೊಂದು ವೀಸಾ ಸಿಕ್ಕಲಿ ಎಂದು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಡವರನನ್ನು ಬೇರೆ ದೇಶಗಳಿಗೆ ಅದರಲ್ಲೂ ಮುಸ್ಲಿಮ್ ರಾಷ್ಟ್ರಗಳಿಗೆ ರಫ್ತು ಮಾಡಿರುವ ದೇಶ ಭಾರತ. ಸುಮಾರು 2 ಕೋಟಿ ಕಡು ಬಡವ ಭಾರತೀಯರು ಇಂದು ಹೆಚ್ಚಾಗಿ ಮುಸ್ಲಿಮ್ ರಾಷ್ಟ್ರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ, ಅಲ್ಲಿ ದುಡಿದ ತಮ್ಮ ಬೆವರಿನ 6 ಲಕ್ಷ ಕೋಟಿ ರೂ. ವನ್ನು ಭಾರತಕ್ಕೆ ವರ್ಗಾಯಿಸುತ್ತಾರೆ. ಈ ಹಣದಿಂದಲೇ ನಮ್ಮ ಆಮದು ರಫ್ತುವಿನಲ್ಲಿರುವ ಭಾರೀ ಕಂದರ ಕೋತಾವನ್ನು ಮುಚ್ಚುವುದಾಗಿದೆ. ನಾವು ಆಮದು ಮಾಡಿಕೊಳ್ಳುವುದು 7 ಲಕ್ಷ ಕೋಟಿ ರೂ. ರಫ್ತುಗಿಂತಲೂ ಹೆಚ್ಚು. ಇದರಿಂದ ಉಂಟಾಗುವ ವಿದೇಶಿ ವಿನಿಮಯ ಕೋತಾವನ್ನು ಈ ಹಣ ಸರಿದೂಗಿಸುತ್ತದೆ. ಇನ್ನೊಂದು ಸುಳ್ಳು ಮಾಹಿತಿ ನಮ್ಮ ಲೋಕಸಭೆಯಲ್ಲಿ ಪ್ರಚಾರ ಮಾಡಲಾಯಿತು, ಅದೇನೆಂದರೆ, ಪಾಕಿಸ್ತಾನದಲ್ಲಿದ್ದ ಶೇ.22ರಷ್ಟು ಭಾರತೀಯರು ಇಂದು ಶೇ.1.5 ಆಗಿದ್ದಾರೆಂದು. ಪಾಕಿಸ್ತಾನದಲ್ಲಿ 1951ರಲ್ಲಿ ನಡೆದ ಜನಸಂಖ್ಯಾ ಗಣತಿ ಪ್ರಕಾರ ಅಲ್ಲಿ ಶೇ.1.3 ಹಿಂದೂಗಳಿದ್ದರು. ದೇಶ ವಿಭಜನೆ ಯಾಗುವ ಮುನ್ನ ಅಲ್ಲಿ ಸುಮಾರು ಶೇ.15 ಹಿಂದೂಗಳಿದ್ದರು. ವಿಭಜನೆ ನಂತರ ಲಕ್ಷಾಂತರ ಜನರು ಅತ್ತಿಂದಿತ್ತ ಬಂದಿರುವುದು ಸತ್ಯ. ಹಾಗೆಯೇ ಭಾರತದ ಪಂಜಾಬ್‌ನಲ್ಲಿದ್ದ ಶೇ 50ರಷ್ಟು ಮುಸ್ಲಿಮರು ವಿಭಜನೆ ನಂತರ ಶೇ.1ಕ್ಕೆ ಇಳಿದಿದ್ದಿರುವುದು ಸತ್ಯವೇ. ಪೌರತ್ವದ ವಿಷಯಕ್ಕೆ ಬರುವುದಾದರೇ, ದೇಶದಿಂದ ದೇಶಕ್ಕೆ ಜನ ವಲಸೆ ಹೋಗುವುದಕ್ಕೆ ಹೆಚ್ಚಿನ ಕಾರಣ ಕಡು ಬಡತನವೇ. ಹೊಟ್ಟೆ ಪಾಡಿಗಾಗಿ ದೇಶ, ಗಡಿ ಬಿಟ್ಟು ಹೋಗುವುದಾಗಿದೆ. ಅಂತಹ ಜನರನ್ನು ಕರುಣೆಯಿಂದ ಕಾಣಬೇಕಾಗಿದೆ ವಿನಃ ನುಸುಳುಕೋರರೆಂದು ಪರಿಗಣಿಸುವುದು ಸರಿಯಲ್ಲ. ಶ್ರೀಮಂತರಿಗೆ ಈ ಸಮಸ್ಯೆಯೇ ಇಲ್ಲ, ಕಾರಣ ಇಂದು ಮುಂದುವರಿದ ರಾಷ್ಟ್ರಗಳೆಲ್ಲವೂ ಪೌರತ್ವವನ್ನು ಹಣಕ್ಕಾಗಿ ಹರಾಜು ಹಾಕುತ್ತಾರೆ. 10 ಮಿಲಿಯನ್ ಡಾಲರ್ ಹಣ ಹಾಕಿದರೆ, ಅಮೆರಿಕ ಎಂದು ಪೌರತ್ವ ಕೊಡುತ್ತದೆ. ಯುರೋಪ್ ರಾಷ್ಟ್ರಗಳು ಇಷ್ಟು ದುಡ್ಡು ಹಾಕಿ ಪೌರತ್ವ ಪಡೆಯಿರಿ ಎಂದು ಜಾರಾತು ಹಾಕುತ್ತದೆ. ಹೀಗೆಲ್ಲ ನೋಡಿದಾಗ ರಾಷ್ಟ್ರೀಯತೆ, ದೇಶಭಕ್ತಿ ಪಾಠ ಬಡವರಿಗೆ ಹೇಳಬೇಕೆ ವಿನಃ ಶ್ರೀಮಂತರಿಗಲ್ಲ ಎನಿಸುತ್ತದೆ. ಲಂಡನ್‌ನ ಮುಖ್ಯ ವಾಸ ಪ್ರದೇಶಗಳಲ್ಲಿರುವ ಮನೆಗಳೆಲ್ಲವೂ ಸ್ಥಳೀಯರಿಂದ ವಿದೇಶೀಯ ಶ್ರೀಮಂತರು ಕೊಂಡುಕೊಂಡಿದ್ದಾರೆ. ಆದರೇ ಅವರು ಅಲ್ಲಿ ವಾಸ ಮಾಡುವುದಿಲ್ಲ. ಸ್ಥಳೀಯರು ಇದರ ಬಗ್ಗೆ ಗೊಣಗುವುದುಂಟು.

ಇಂದು ಆರ್ಥಿಕ ಮುಗ್ಗಟ್ಟಿನಲ್ಲಿರುವ ಭಾರತಕ್ಕೆ ಜನಾಂಗೀಯ ದ್ವೇಷ ಧರ್ಮ ಧರ್ಮಗಳ ನಡುವೆ ಕಂದರ ಉಂಟು ಮಾಡುವುದರಿಂದ ಈಗಿನ ಪೀಳಿಗೆಯೂ ಸಹ ಏಳಿಗೆಯನ್ನು ಕಾಣದೇ ತಟಸ್ಥವಾಗಿರುವ ಪರಿಸ್ಥಿತಿ ಉಂಟಾಗಬಹುದು. ಭಾರತವನ್ನು ಇನ್ನೂ ಕಟ್ಟಬೇಕಾದ ದೇಶ ಎನ್ನುವುದನ್ನು ನಾವು ಮರೆಯುವಂತಿಲ್ಲ. ಆರ್ಥಿಕ ಅಭಿವೃದ್ಧಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳ ಕೊಡುಗೆ ಅಪಾರವಾಗಿರುತ್ತದೆ. ಕೆಲವರ ಪ್ರಕಾರ ಒಂದು ದೇಶದ ಜನರ ನಡುವೆ ಇರುವ ವಿಶ್ವಾಸ, ನಂಬಿಕೆ ವಿವಿಧ ಆರ್ಥಿಕ ವಿಷಯಗಳಾದ ಬಂಡವಾಳ, ತಂತ್ರಜ್ಞಾನ, ಕಾನೂನು-ಕಟ್ಟಳೆಗಳಿಗಿಂತ ಮೀರಿ ಅಭಿವೃದ್ಧಿಗೆ ಕೆಲಸ ಮಾಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)