varthabharthi


ಭೀಮ ಚಿಂತನೆ

ಜನರ ಕಣ್ಣಿಗೆ ಮಣ್ಣೆರಚಬೇಡಿ

ವಾರ್ತಾ ಭಾರತಿ : 2 Jan, 2020

ದಿನಾಂಕ 13, ಆಗಸ್ಟ್ 1937ರಂದು ವಿಧಿಮಂಡಲದ ಸಭೆಯ ಮೊದಲ ಮಾಮೂಲಿ ಕಾರ್ಯಕಲಾಪದ ಬಳಿಕ ಮುಖ್ಯ ಪ್ರಧಾನ ಬಾಳಾಸಾಹೇಬ ಖೇರ್ (ಮಂತ್ರಿ) ಅವರು ದಿವಾಣರ ಸಂಬಳದ ಸಂಬಂಧ ಬಿಲ್, ಮೊದಲ ಸರಕಾರಿ ಬಿಲ್ ಮುಂತಾದವುಗಳನ್ನು ಸಾದರಪಡಿಸಿದರು. ಈ ಬಿಲ್‌ನಂತೆ ಪ್ರತಿ ದಿವಾಣರಿಗೆ ತಿಂಗಳಿಗೆ ರೂ. 500 ರೂಪಾಯಿ ಸಂಬಳ, ರೂ. 100 ಬಾಡಿಗೆ ಮತ್ತು ರೂ. 150 ಮೋಟಾರ್ ಅಲೌನ್ಸ್ ನೀಡಲಾಗಿತ್ತು. ಈ ಬಿಲ್‌ನ್ನು ಅಸೆಂಬ್ಲಿಯಲ್ಲಿಟ್ಟಾಗ ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾಷಣ ಮಾಡಿದರು. ಮಂಡಿಸಿದ ಈ ಬಿಲ್‌ನ ವಿರುದ್ಧ ಅಂಬೇಡ್ಕರರು ತುಂಬಾ ಪ್ರಭಾವಶಾಲಿ ಮತ್ತು ವಸ್ತುನಿಷ್ಠ ಭಾಷೆಯಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿದರು.

ಅವರು ಹೇಳಿದರು: ಈಗ ನಾನು ಭಾಷಣ ಮಾಡಲು ನಿಂತಿದ್ದೇನೆ. ಭಾಷಣ ಎಂದು ಯಾಕೆ ಹೇಳಿದೆನೆಂದರೆ, ಈ ವಿಷಯದ ಮೇಲೆ ಸಭಾಗ್ರಹದಲ್ಲಿ ಮತವಿಭಜನೆ ನೋಂದಣಿ ಮಾಡಿಕೊಳ್ಳುವ ಇಚ್ಛೆಯಂತೂ ನನಗೆ ಮೂಲತಃ ಇಲ್ಲ. ಪ್ರಸ್ತುತ ಬಿಲ್‌ನ ಸಂದರ್ಭದಲ್ಲಿ ನನ್ನ ಮೊದಲ ಆಕ್ಷೇಪ ಹೀಗೆ, ಸರಕಾರದ ಪರವಾಗಿ ನಾವೇ ಬಿಲ್ ಮಂಡಿಸುವುದಕ್ಕಿಂತ ಸರ್ವಪಕ್ಷ ಸಮ್ಮತಿಯಿಂದ ಮಂಡಿಸಬೇಕಿತ್ತು. ಎರಡನೆಯ ವಿಚಾರವೆಂದರೆ ಇದು ನಿರ್ಧರಿಸಿದ ಸಂಬಳ ಯೋಗ್ಯವಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ಬೇರೆ ವಸಾಹತುಗಳ ಮಂತ್ರಿಗಳ ಸಂಬಳದತ್ತ ಒಂದು ಕ್ಷಣ ಕಣ್ಣಾಡಿಸಿದರೆ ಅಲ್ಲಿಯ ಮಂತ್ರಿಗಳ ಸಂಬಳ ಸಾಧಾರಣ ಪ್ರತಿ ತಿಂಗಳಿಗೆ ರೂ.2000ದ ಹತ್ತಿರದಷ್ಟಿದ್ದದ್ದು ಕಂಡುಬರುತ್ತದೆ. ಹಂಗಾಮಿ ಮಂತ್ರಿ ಮಂಡಲದ ಕಾಲದಲ್ಲಿ ಆ ಮಂತ್ರಿಗಳಿಗೆ ಹಿಂದೂಸ್ಥಾನದ ಭಿನ್ನ ಭಿನ್ನ ಪ್ರಾಂತಗಳಲ್ಲಿ ಕೊಡಲ್ಪಡುವ ಸಂಬಳವು ಒರಿಯಾ ಪ್ರಾಂತ ಹೊರತುಪಡಿಸಿ ರೂ.2000ಕ್ಕಿಂತ ಹೆಚ್ಚಿತ್ತು. ಆದರೆ ಈಗ ಹೊಸದೊಂದು ಪದ್ಧತಿಯಂತೆ ಇನ್ನು ಮುಂದೆ ಮಂತ್ರಿಗಳಿಗೆ ಪ್ರತಿ ತಿಂಗಳು ರೂ. 500 ಸಂಬಳ ದೊರೆಯಬೇಕೆಂದು ಸೂಚಿಸಲಾಗಿದೆ. ಇವೆರಡೂ ರಖಂನ ವ್ಯತ್ಯಾಸಗಳು ಕೇವಲ ಸಂಖ್ಯೆಗಳಿಗೆ ಅಲ್ಲ, ಒಂದು ತಾತ್ವಿಕ ವ್ಯತ್ಯಾಸವಿದೆ.

ಯಾವುದೇ ಸ್ಥಾನದ ಸಂಬಳ ನಿರ್ಧರಿಸುವಾಗ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. 1) ಮಂತ್ರಿಗಳ ಸಾಮಾಜಿಕ ಸ್ಥಾನ 2) ಕಾರ್ಯಕ್ಷಮತೆ 3) ಪ್ರಜಾಪ್ರಭುತ್ವ 4) ರಾಜ್ಯ ಕಾರ್ಯಭಾರದ ಪಾವಿತ್ರ್ಯ ಇವೇ ಆ ನಾಲ್ಕು ಯೋಚನೆಗಳು. ಪ್ರಾಂತದ ಮಂತ್ರಿಗಳು ಆ ಪ್ರಾಂತದ ಮೊದಲ ನಾಗರಿಕರಾಗಿರುವುದರಿಂದ ಅವರ ಬದುಕು ಹಸನಾಗಿರಬೇಕು, ಸುಸಂಸ್ಕೃತವಾಗಿರಬೇಕಾಗಿರುವುದು ಯೋಗ್ಯವೇ ಸರಿ. ಅದರ ಬಗ್ಗೆ ಅವರ ಮೇಲಂತೂ ಒತ್ತಾಯ ಮಾಡಲಾಗುವುದಿಲ್ಲ. ಅದಕ್ಕೆ ಮಂತ್ರಿಗಳ ಸಂಬಳದ ಕುರಿತು ಯೋಚಿಸುವಾಗ ಕೊನೆಯ ಮೂರು ವಿಚಾರಗಳನ್ನು ಬಿಡುವುದಕ್ಕಾಗುವುದಿಲ್ಲ. ಖುದ್ದಾಗಿ ಮಂತ್ರಿಗಳಿಗೆ ಏನನ್ನಿಸುತ್ತದೆಯೋ ನನಗೆ ಗೊತ್ತಿಲ್ಲ, ಆದರೂ ಸಹ ಧ್ವಜಕ್ಕೆ ವಂದಿಸುವುದು ಅಥವಾ ಸ್ವಯಂಸೇವಕ ಗೌರವ ವಂದನೆ ಸ್ವೀಕರಿಸುವುದು-ಇದಿಷ್ಟೇ ಮಂತ್ರಿ ಸ್ಥಾನದ ಕಲ್ಪನೆಯಲ್ಲ ಅಂತ ನಾನು ತಿಳಿದಿದ್ದೇನೆ. ರಾಜ್ಯ ಕಾರ್ಯಭಾರದ ಮೂರು ಪ್ರಮುಖ ಅಂಗಗಳಲ್ಲಿ ಕಾರ್ಯಕಾರಿ ಮಂಡಳಿಯು ಅತ್ಯಂತ ಮಹತ್ವದ್ದಾಗಿದೆ

 ಪ್ರಾಂತದ ಪ್ರಧಾನ ಮಂಡಲವು ಆ ಪ್ರಾಂತದ ಬೌದ್ಧಿಕತೆಯ ಅಲೌಕಿಕ ಸಂಚಯವಾಗಿರಬೇಕು. ಈ ಬಿಲ್‌ನಲ್ಲಿ ನಮೂದಿಸಿದ ಸಂಬಳದಿಂದ ರಾಜ್ಯ ಕಾರ್ಯಭಾರದಲ್ಲಿ ಹುಟ್ಟುವ ಕಠಿಣ ಸಮಸ್ಯೆಗಳಿಗೆ ಉತ್ತರ ಶೋಧಿಸುವ ಜನರು ಮುಂದೆ ಬರಬಹುದು, ಬರದಿರಬಹುದೆಂಬುದರ ಕುರಿತು ಅನುಮಾನವಿದೆ. ಕಾರಣ ಬೇರೆ ಅಧಿಕ ಆಮಿಷಗಳು ಇತರ ಸ್ಥಾನಗಳಲ್ಲಿ ಕಾಣಬಹುದಾಗಿದೆ. ಎರಡನೆಯ ಮಾತು, ನಮ್ಮಲ್ಲಿ ಸುಶಿಕ್ಷಿತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಮ್ಮಲ್ಲಿಯ ಸಾಮಾಜಿಕ ವ್ಯವಸ್ಥೆಯಿಂದ ಶಿಕ್ಷಣದ ಲಾಭವು ಕೇವಲ ಒಂದೇ ಸಣ್ಣ ವರ್ಗಕ್ಕೆ ದೊರೆಯುತ್ತಾ ಹೋಗಿದೆ. ಈ ಸಮಾಜ ವ್ಯವಸ್ಥೆಯು ಎಷ್ಟು ಬಲಿಷ್ಠವಾಗಿದೆ ಎಂದರೆ ಬ್ರಿಟಿಷ್ ಸರಕಾರಕ್ಕೂ ಸಂಪ್ರದಾಯ ಮುರಿಯಲಾಗಲಿಲ್ಲ. ಚಾತುರ್ವರ್ಣದೊಳಗೂ ಶಿಕ್ಷಣವನ್ನು ಒಂದು ವರ್ಗಕ್ಕೇ ದಾನ ಮಾಡಲಾಗಿದೆ. ಈಗ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಇದರ ಪರಿಣಾಮ ಏನಾಗುತ್ತದೆ ಅದನ್ನೊಮ್ಮೆ ನೋಡಿರಿ. ಯಾರ ಬಳಿ ಹಣವಿದೆಯೋ ಅವರು ತಮ್ಮ ಖಾಸಗಿ ಇಲ್ಲವೇ ಬೇರೆ ಹೇತುಗಳ ಪುರಸ್ಕಾರಾರ್ಥವಾಗಿ ರಾಜಕೀಯ ಸತ್ತೆಯನ್ನು ತನ್ನದಾಗಿಸಿಕೊಳ್ಳಬಹುದು ಅಥವಾ ಅಲ್ಲಿ ಏನೊಂದೂ ಸಿಗದಿರುವ ಮಂದಿ ಮಂತ್ರಿಗಳಾಗಬಹುದು. ನನ್ನ ಅನಿಸಿಕೆ ಎಂದರೆ ಮಂತ್ರಿಗಳ ಸಂಬಳ ಅವರನ್ನು ಮೋಹದಿಂದ ದೂರವಿಡುವಷ್ಟು ಅಗತ್ಯವಾಗಿರಲಿ.

ಯಾವಾಗ ಮಂತ್ರಿಗಳ ಸಂಬಳ ರೂ. 4,000 ಮತ್ತು 3,000 ಇತ್ತೋ ಆಗಲೂ ನಮ್ಮ ಪ್ರಾಂತಗಳಲ್ಲಿ ಅನೇಕ ವಿಚಾರಗಳಲ್ಲಿ ಅಪಕೀರ್ತಿ ಇತ್ತು. ಹಾಗಾದರೆ ಈಗ ಅವರ ಸಂಬಳ 500 ರೂ. ಆದಾಗ ಅವರ ಸಂಖ್ಯೆ ಹೆಚ್ಚಾದೀತು ಎಂದರೆ ಏನು ಬಿಗಡಾಯಿಸುತ್ತದೆ? ನಿಜವಾದ ಸಮಸ್ಯೆ ಅಂದರೆ ಸಂಬಳದ ಮಟ್ಟ ಹೀಗಿಟ್ಟರೆ ಸುರಕ್ಷಿತ ರಾಜ್ಯಾಡಳಿತ ಸಾಧ್ಯವೇ? ಕಾಂಟ್ರಾಕ್ಟ್ ನೀಡುವಾಗಲೂ ನಾವು ಅದನ್ನು ಎಲ್ಲರಿಗೂ ಕಮ್ಮಿ ರಖಂನ ಟೆಂಡರ್‌ಗೆ ನೀಡುವುದಿಲ್ಲ. ಕಡಿಮೆ ಸಂಬಳ ಸ್ವೀಕರಿಸಲು ಸಿದ್ಧರಾಗಿರುವುದೂ ಸಂಬಳ ಕಡಿಮೆಯಾಗಿಡಲು ಇರುವ ಯೋಗ್ಯ ಕಾರಣವಲ್ಲ. ಉಳಿತಾಯ ಮಾಡುವುದು ಕೂಡ ಯೋಗ್ಯ ಆಲೋಚನೆಯಿಂದ ಮಾಡಬೇಕು. ಎರಡನೇ ಸಂಗತಿಯೆಂದರೆ, ಈ ಸಂಬಳ ಕಡಿಮೆ ಎಂಬುದರ ಅರ್ಥ ರಾಷ್ಟ್ರೀಯ ಬದುಕಿನ ಮಟ್ಟ ಒಟ್ಟಿಗೆ ಸುಸಂಗತಗೊಂಡಿರಬೇಕು. ‘ಹರಿಜನ’ದಲ್ಲಿ ಬೇರೆ ಬೇರೆ ದೇಶದ ರಹವಾಸಿಗಳ ಸಾಮಾನ್ಯ ಉತ್ಪನ್ನದ ಯಾವ ಅಂಕಿಗಳನ್ನು ಕೊಟ್ಟಿದ್ದರೂ ಅದರಲ್ಲಿ ಹಿಂದಿ ವ್ಯಕ್ತಿಯ ಸಾಮಾನ್ಯ ಉತ್ಪನ್ನ ನಾಲ್ಕು ಪೌಂಡ್ ಇರುವಾಗ ಈ ಸಂಬಳವು ಅದರಲ್ಲಿ ಹೇಳಿದಂತೆ ಪ್ರತಿ ತಿಂಗಳಿಗೆ 25 ರೂಪಾಯಿ ಇರಬೇಕಾದದುದು ಉಚಿತವಾಗಿದೆ. ಈ ದೃಷ್ಟಿಯಿಂದ 500 ರೂಪಾಯಿ ಸಂಬಳವು ದೊಡ್ಡದಾದ ಮಿತಿಮೀರಿದ ವೆಚ್ಚ ಆಗಬಹುದು. ಹಾಗಿದ್ದರೆ ಪ್ರಾಮಾಣಿಕವಾದ 25 ರೂಪಾಯಿ ಸಂಬಳವನ್ನು ಯಾಕೆ ತೆಗೆದುಕೊಳ್ಳುವುದಿಲ್ಲ? ನನಗೆ ಹೇಳುವುದಿದೆ, ಈ ರೀತಿಯಾಗಿ ನಿಮ್ಮ ಬಗ್ಗೆ ಜನತೆಯ ಮನದಲ್ಲಿ ಭರವಸೆ ಉಂಟಾಗುವುದಿಲ್ಲ.

ಇಂಥ ಮೋಸ ಯಾಕೆ? ಬೆತ್ತಲಾಗಿ ಅಡ್ಡಾಡುವುದು, ಸಿಗರೇಟ್ ಬದಲು ಬೀಡಿ ಸೇದುವುದು, ಎತ್ತಿನ ಬಂಡಿಯಲ್ಲಿ ಅಡ್ಡಾಡುವುದರಿಂದ ಇಲ್ಲವೇ ಮೂರನೆಯ ದರ್ಜೆಯಲ್ಲಿ ಪ್ರವಾಸ ಮಾಡಿಕೊಂಡು ಜನರ ಕಣ್ಣಲ್ಲಿ ಮಣ್ಣು ಯಾಕೆ ಎರಚುತ್ತೀರಿ. ವಿದೇಶದ ಮಧ್ಯಯುಗೀನ ಭಿಕ್ಷುಗಳು ಬ್ರಹ್ಮಚರ್ಯ, ಶುಚಿರ್ಭೌತ್ಯ ಮತ್ತು ದಾರಿದ್ರ-ಇದರಲ್ಲಿ ತಮ್ಮ ಜೀವನವನ್ನು ಸಾಗಿಸುವುದರ ಪ್ರತಿಜ್ಞೆ ಮಾಡುತ್ತಿದ್ದರು. ನಮ್ಮ ಮಂತ್ರಿಗಳಿಗೆ ಬ್ರಹ್ಮಚರ್ಯ ಸಮಸ್ಯೆ ಇಲ್ಲ. ಕಾರಣ ಅದು ಅವರ ಕೈ ಮೀರಿದೆ. ಶುಚಿರ್ಭೌತ್ಯತೆಯ ಪ್ರತಿಜ್ಞೆಯನ್ನು ಅವರು ಮುರಿದಿದ್ದಾರೆ. ಆದ ಕಾರಣ ಈ ಸಭೆಯಲ್ಲಿ ಅವರು ಆ ಕುರಿತು ತಕರಾರು ಮಾಡುವ ಅಗತ್ಯವಿಲ್ಲ. ದಾರಿದ್ರ್ಯದ ಕುರಿತು ಹೇಳುವುದಾದರೆ ಆ ಭಿಕ್ಷುಗಳು ಸ್ವೇಚ್ಛಾಚಾರಿಗಳಿರುವುದರಿಂದ ಅವರಿಗೆ ಸಮಸ್ಯೆಯಾಗಿರಲಿಲ್ಲ. ಆದರೆ ಈಗಿನ ಮಂತ್ರಿಗಳಿಗೆ ದಾರಿದ್ರ್ಯದಲ್ಲಿ ಬದುಕನ್ನು ಸಹಿಸುವುದು ಸಾಧ್ಯವಿದೆಯೇ? ನಾನು ಹೇಳಲು ಹೊರಟಿದ್ದೇನೆಂದರೆ, ರೂ. 500 ಸಂಬಳ ನಿರ್ಧಾರದ ಮಂತ್ರಿ ಮಂಡಳದ ಉದ್ದೇಶ ಪವಿತ್ರವಾಗಿಲ್ಲ. ಅದರ ಹಿಂದೆ ಹೊಂಚಿದೆ.

ಈ ಮಂತ್ರಿ ಸ್ಥಾನ ಖಾಯಂ ಆಗಿ ತಮ್ಮಲ್ಲಿಯೇ ಉಳಿಯಬೇಕು, ಬೇರೆಯವರು ಯಾರೂ ಅದನ್ನು ಆರೂಢ ಮಾಡಬಾರದೆಂಬ ಹೊಂಚಿದೆ. ಮಂತ್ರಿಗಳ ಸಂಬಳ ಪ್ರತಿ ತಿಂಗಳು 4,000 ಅಥವಾ 3,000 ರೂ. ಇರಬೇಕು ಅಂತೇನೂ ಹೇಳುವುದಿಲ್ಲ. ನಾನೇನು ಈ ಬಿಲ್‌ನ ಕುರಿತು ಟೀಕೆ ಮಾಡಿದ್ದೇನೋ ಇದು ಕೇವಲ ಸಾರ್ವಜನಿಕವಾಗಿ ಚರ್ಚೆಯಾಗಬೇಕೆಂಬ ಉದ್ದೇಶದಿಂದಲೇ ಮಾಡಿರುವೆ. ಡಾ ಜಾನ್ಸನ್ ಒಮ್ಮೆ ಹೇಳಿದ್ದರು ಬದ್ಮಾಶ್‌ರಿಗೆ ದೇಶಭಕ್ತಿಯ ಆಶ್ರಯ ಪಡೆಯುವುದು ಸುಲಭ. ನಮಗೆ ನಂಬಿಕೆಯಿದೆ, ಬದ್ಮಾಶ್‌ರಿಗೆ ಮಂತ್ರಿ ಸ್ಥಾನವನ್ನು ಅಲಂಕರಿಸುವುದು ಸುಲಭವಾಗುವುದೆಂದು ಹೇಳುವ ಸರದಿ ನಮಗೆ ಬರುವುದಿಲ್ಲ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾಷಣದ ನಂತರ ಪ್ರೊಗ್ರೆಸಿವ್ ಪಕ್ಷದ ಮುಂದಾಳು ಮಿಸ್ಟರ್ ಅಬರ ಕ್ರಾಂಬಿಯವರು ಡಾಕ್ಟರ್ ಅಂಬೇಡ್ಕರ್‌ರ ಭಾಷಣದ ಅನೇಕ ವಿಷಯಗಳ ಮೇಲೆ ಮಾತನಾಡಿದರು. ಬ್ಯಾರಿಸ್ಟರ್ ಜಮುನಾ ದಾಸ್ ಮೆಹ್ತಾ ಅವರು ಕೂಡ ಕಾಂಗ್ರೆಸ್‌ನ ಈ ಬಿಲ್‌ನ ಅವ್ಯವಹಾರದ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)