ಅಕ್ಷರ ವಂಚಿತರ ಎದೆಯಲ್ಲಿ ಅಕ್ಷರ ಬಿತ್ತಿದ ಮಹಾನ್ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ
ಇಂದು ಸಾವಿತ್ರಿಬಾಯಿ ಫುಲೆ ಜನ್ಮದಿನ
1831ರ ಜನವರಿ 3ರಂದು ಮಹರಾಷ್ಟ್ರದ ಸತಾರ ಜಿಲ್ಲೆಯ ನೈಗಾನಿನಲ್ಲಿ ಜನಿಸಿದ ಸಾವಿತ್ರಿಬಾಯಿ ಬಾಲ್ಯದಲ್ಲಿಯೇ ಜ್ಯೋತಿಬಾ ಫುಲೆಯವರನ್ನು ವಿವಾಹವಾದರು. ಬಾಲ್ಯವಿವಾಹ ಸಾಮಾನ್ಯವಾಗಿದ್ದ ಅಂದು ಸಾವಿತ್ರಿ ಬಾಯಿ ವೈವಾಹಿಕ ಬದುಕಿಗೆ ಕಾಲಿಟ್ಟಾಗ ಆಕೆಯ ವಯಸ್ಸು 8 ವರ್ಷ, ಪತಿ ಜ್ಯೋತಿಬಾ ಫುಲೆಯ ವಯಸ್ಸು 13 ವರ್ಷವಾಗಿತ್ತು. ಪತ್ನಿಗೆ ಪತಿಯ ಮನೆಯೇ ಪಾಠಶಾಲೆಯಾಯಿತು. ಪತಿ ಜ್ಯೋತಿಬಾ ಫುಲೆಯವರೇ ಗುರುವಾದರು. ತನ್ನ 17ನೇ ವಯಸ್ಸಿನಲ್ಲಿ ಸಾವಿತ್ರಿಬಾಯಿ ಶಿಕ್ಷಕಿ ತರಬೇತಿ ಪಡೆದು ಹೊರಬಂದಾಗ ಮಹರಾಷ್ಟ್ರದಲ್ಲಿ ತರಬೇತಿ ಹೊಂದಿದ ಮೊದಲ ಶಿಕ್ಷಕಿ ಎಂದು ಗುರುತಿಸಲ್ಪಟ್ಟರು. ಆ ದಿನಗಳಲ್ಲಿ ಹೆಣ್ಣೊಬ್ಬಳು ಶಿಕ್ಷಕಿಯಾಗುವುದೆಂದರೆ ಅದು ಸಮಾಜ ದ್ರೋಹವೆಂಬ ಭಾವನೆಗಳು ವ್ಯಾಪಕವಾಗಿದ್ದವು. ಸಮಾಜದ ಕೆಂಗಣ್ಣಿಗೆ ಗುರಿಯಾದ ಸಾವಿತ್ರಿಬಾಯಿ ಅಕ್ಷರ ವಂಚಿತರ ಎದೆಯಲ್ಲಿ ಎರಡಕ್ಷರ ಬಿತ್ತಲು ಪಾಠ ಶಾಲೆಗೆ ಹೊರಟಾಗ ನಿಜವಾದ ಸಮಾಜದ್ರೋಹಿಗಳು ಕೆಸರು ನೀರು ಎರಚಿದರು, ಕೇಕೇ ಹಾಕಿ ನಗುತ್ತಿದ್ದರು. ಅಪಹಾಸ್ಯ ಮಾಡುತ್ತಿದ್ದರು. ಸೆಗಣಿ ಎರಚಿದರು, ಕಲ್ಲು ತೂರಿದರು. ಇಷ್ಟಕ್ಕೂ ಸಾವಿತ್ರಿಬಾಯಿ ಮಾಡಿದ ಅಪರಾಧವೇನು? ಅಂದಿನ ಶೋಷಿತರ, ದುರ್ಬಲರ, ದಮನಿತರ ಬಹುತೇಕ ದಾರಿದ್ರ್ಯವುಳ್ಳ ಜನರ ಮಕ್ಕಳ ಎದೆಯಲ್ಲಿ ನಾಲ್ಕಕ್ಷರ ಬಿತ್ತಿ ಅಕ್ಷರ ಜ್ಯೋತಿ ಬೆಳಗಿದ್ದು ಸಮಾಜದ ದೃಷ್ಟಿಯಲ್ಲಿ ಮಹಾ ಅಪರಾಧವಾಗಿತ್ತು.
ಶತ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಜನರ ಮಕ್ಕಳ ಮೆದುಳಿಗೆ ನಾಲ್ಕಕ್ಷರ ಪರಿಚಯ ಮಾಡಿ ಮೇವು ನೀಡಿದ್ದು ಘೋರ ಅಪರಾಧವಾಗಿತ್ತು. ಅದಕ್ಕೆ ಪ್ರತಿಯಾಗಿ ತನ್ನ ಮೇಲೆ ತೂರಿ ಬರುತ್ತಿದ್ದ ಕಲ್ಲು, ಸಗಣಿಯನ್ನು ಸ್ವೀಕರಿಸಲು ತಯಾರಾಗಿಯೇ ಹೊರಡುತ್ತಿದ್ದ ಸಾವಿತ್ರಿಬಾಯಿ ಸಹಿಸಿದ ಅವಮಾನ ಅಷ್ಟಿಷ್ಟಲ್ಲ. ಆಕೆ ಎದುರಿಸಿದ ಸವಾಲು ಬೆಟ್ಟದಷ್ಟು. ಆಕೆ ಸಹಿಸಿದ ತಾಳ್ಮೆ ಸಾಗರದಷ್ಟು. ತನ್ನ ಚೀಲವೊಂದರಲ್ಲಿ ಹೆಚ್ಚುವರಿ ಬದಲಿ ಸೀರೆಯೊಂದನ್ನು ಇಟ್ಟುಕೊಂಡೇ ತೂರಿ ಬರುವ, ಸೆಗಣಿ ಕಲ್ಲುಗಳಿಗೆ ಸಿದ್ಧಳಾಗಿ ಹೋಗಿ ಪಾಠಶಾಲೆಯಲ್ಲಿ ಸೀರೆ ಬದಲಾಯಿಸಿ ಅಕ್ಷರ ಬಿತ್ತಿದ ಪರಿ ನಿಜಕ್ಕೂ ವಿಸ್ಮಯ. ಆ ಗಟ್ಟಿಗಿತ್ತಿ ಮಹಾನ್ ಮಹಿಳೆಯ ಜನ್ಮ ದಿನವಿಂದು.
ಫುಲೆ ದಂಪತಿ ಜೊತೆ ಸೇರಿ 18 ಪಾಠಶಾಲೆಗಳನ್ನು ತೆರೆದರು. ಈ ಪಾಠಶಾಲೆಗಳ ಶಿಕ್ಷಕಿ, ಮುಖ್ಯೋಪಾಧ್ಯಾಯಿನಿ, ಸಂಚಾಲಕಿ ಮುಂತಾದ ಬಹುಮುಖ ಹೊಣೆಗಾರಿಕೆಯನ್ನು ನಿರ್ವಹಿಸಿ ಪತಿ ಜ್ಯೋತಿಬಾ ಫುಲೆಗೆ ಹೆಗಲು ಕೊಟ್ಟು ದುಡಿದರು. ತಾನು ಬಾಲ್ಯವಿವಾಹ ಬಂಧನಕ್ಕೆ ಒಳಗಾಗಿದ್ದರೂ ತನ್ನಂತಿರುವ ಇತರ ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗದಂತೆ ಜಾಗೃತಿ ಉಂಟು ಮಾಡಿದರು. ಸತಿಸಹಗಮನದ ವಿರುದ್ಧ ಕೇಶಮುಂಡನದ ವಿರುದ್ಧ ಧ್ವನಿ ಎತ್ತಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ. ತನ್ನ ವೃತ್ತಿಯನ್ನು ಸಂಪಾದನೆಯ ಮಾರ್ಗವಾಗಿ ಎಂದೂ ಪರಿಗಣಿಸದ ಈ ಮಹಿಳೆ ಶಿಕ್ಷಕಿಯಾಗಿ ಅಂದು ಗಳಿಸಿದ್ದು ಅಪಮಾನ, ಅಪಹಾಸ್ಯ ನಿಂದನೆಗಳನ್ನು ಮಾತ್ರ. ಎಲ್ಲಾ ದಿಕ್ಕುಗಳಿಂದ ಬರುತ್ತಿದ್ದ ಟೀಕಾಸ್ತ್ರಗಳನ್ನು ಮೆಟ್ಟಿ ನಿಂತು ತನ್ನ ಸೇವೆಯಲ್ಲಿ ಎದೆಗುಂದದೆ ಮುನ್ನಡೆದ ಸಾವಿತ್ರಿಬಾಯಿ ಅಂದಿನ ಕಾಲದಲ್ಲೇ ಶಾಲೆಗೆ ನಿರಂತರವಾಗಿ ಬರುವ ಮಕ್ಕಳಿಗಾಗಿ ಶಿಷ್ಯವೇತನ ನೀಡುವ ಯೋಜನೆ ಜಾರಿ ಮಾಡಿದರು. ಜ್ಯೋತಿಬಾ ಫುಲೆಯವರ ಅಕ್ಷರ ಕ್ರಾಂತಿ ಪರಿಕಲ್ಪನೆ ಸಾಕಾರಗೊಳ್ಳಲು ಬೆನ್ನೆಲುಬಾಗಿ ನಿಂತವರು ಪತ್ನಿ ಸಾವಿತ್ರಿಬಾಯಿ. ಶಾಲೆಗೆ ಕರೆದರೂ ಬಾರದ, ದಮನಿತರ ಮನೆಬಾಗಿಲಿಗೆ ಹೋದರೂ ಅಕ್ಷರ ಕಲಿಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ದೀನದುರ್ಬಲರ ಮನವೊಲಿಸಿ ಅವರಿದ್ದಲ್ಲಿಗೆ ಹೋಗಿ ಪಾಠಶಾಲೆ ತೆರೆಯುತ್ತಾ ಶಿಕ್ಷಣ ನೀಡಿದ ಸಾವಿತ್ರ್ರಿಬಾಯಿ ಜಗತ್ತಿನ ಎಲ್ಲಾ ಶಿಕ್ಷಕರಿಗೂ ಮಾದರಿ.
ಶಿಕ್ಷಣದ ಜೊತೆ ಜೊತೆಯಲ್ಲಿಯೇ ತನ್ನ ಸಾಮಾಜಿಕ ಹೊಣೆಗಾರಿಕೆಗೆ ಕಟಿಬದ್ದರಾದ ಇವರು ವಿಧವೆಯರ ತಲೆಬೋಳಿಸುವ ಪದ್ಧತಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಅವಿವಾಹಿತ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನು ತೆರೆದರು. ವಿವಾಹಬಾಹಿರ ಸಂಬಂಧದಿಂದ ಜನಿಸಿದ ಮಕ್ಕಳಿಗಾಗಿ ಶಿಶುಕೇಂದ್ರಗಳನ್ನು ತೆರೆದು ಸಮಾಜದ ಕಣ್ಣನ್ನು ಮಾನವೀಯ ನೆಲೆಯಲ್ಲಿ ತೆರೆಸುವ ಪ್ರಯತ್ನ ಮಾಡಿದರು. ಫುಲೆ ದಂಪತಿಗೆ ಮಕ್ಕಳಿರಲಿಲ್ಲ, ಆದರೆ ಆ ಕೊರಗನ್ನು ಎಂದೂ ಕಾಣಲಿಲ್ಲ. ಬಡ, ದುರ್ಬಲ ಮಕ್ಕಳನ್ನು ತಮ್ಮ ಮಕ್ಕಳೆಂದೇ ಬಗೆದು ಅವರ ಬದುಕಿಗೆ ಬೆಳಕಾದರು. ಸಾಲದು ಎಂಬಂತೆ ವಿಧವೆಯೊಬ್ಬಳ ಮಗನನ್ನು ದತ್ತು ಪಡೆದು ಸಾಕಿ, ಸಲಹಿ, ಸುಶಿಕ್ಷಿತನನ್ನಾಗಿ ಮಾಡಿದರು. ಈ ದಂಪತಿಯ ನಡುವೆ ಅಗಾಧ ಪ್ರೀತಿಯಿತ್ತು, ಅನ್ಯೋನ್ಯತೆಯಿತ್ತು. ಅವರಿಬ್ಬರ ಆಸಕ್ತಿಯೂ ಸಮಾನವಾಗಿತ್ತು. ಮಹಾತ್ಮ ಗಾಂಧೀಜಿ ಸುಶಿಕ್ಷಿತ ಸಮಾಜದ ಕನಸನ್ನು ಕಂಡರೆ, ಅದನ್ನು ನನಸು ಮಾಡುವ ಯಶಸ್ವಿ ಪ್ರಯತ್ನವನ್ನು ಫುಲೆ ದಂಪತಿ ಮಾಡಿದರು.
1848ರಲ್ಲಿ ದೇಶದ ಪ್ರಪ್ಪಥಮ ಹೆಣ್ಣು ಮಕ್ಕಳ ಶಾಲೆಯನ್ನು ಪೂನಾದಲ್ಲಿ ಸ್ಥಾಪಿಸಿದರು. ಶೂದ್ರರ ಶಿಕ್ಷಣಕ್ಕಾಗಿ ಹಗಲಿರುಳು ದುಡಿಯುತ್ತಿದ್ದ ಈ ದಂಪತಿ ತಮ್ಮ ಮನೆಯನ್ನು ಶಾಲೆಯನ್ನಾಗಿ ಪರಿವರ್ತಿಸಿದ್ದರು. ಸಂಪ್ರದಾಯಸ್ತ ಕುಟುಂಬದ ಈ ದಂಪತಿ ಪ್ರವಾಹದ ವಿರುದ್ಧ ಈಜಿದಾಗ ಈ ಕುಟುಂಬದ ಮುಖ್ಯಸ್ಥರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಮನೆಯಿಂದ ಹೊರ ಹೋಗಬೇಕಾದ ಸನ್ನಿವೇಶ ನಿರ್ಮಾಣವಾದಾಗ ಮನೆ, ಆಸರೆ, ಆದಾಯ ಭದ್ರತೆ ಯಾವುದನ್ನು ಲೆಕ್ಕಿಸದೆ ಅಕ್ಷರ ವಂಚಿತರ ಶಿಕ್ಷಣವನ್ನೇ ಪ್ರಥಮ ಆದ್ಯತೆಯಾಗಿ ಪರಿಗಣಿಸಿದ ಫುಲೆ ದಂಪತಿಗೆ ಆಶ್ರಯ ಸಿಕ್ಕಿದ್ದು ಜ್ಯೋತಿಬಾ ಫುಲೆಯವರ ಮಿತ್ರ ಉಸ್ಮಾನ್ ಶೇಖ್ ಅವರ ಮನೆಯಲ್ಲಿ. ಉಸ್ಮಾನ್ ಶೇಖ್ ಅಂದಿನ ದಿನಗಳಲ್ಲಿ ಆಧುನಿಕ ಶಿಕ್ಷಣಕ್ಕೆ ತನ್ನನ್ನು ತೆರೆದುಕೊಂಡಿದ್ದ ಮುಸ್ಲಿಂ ಯುವಕ. ತನ್ನ ಸಹೋದರಿ ಫಾತಿಮಾ ಶೇಖ್‌ಳನ್ನು ಶಾಲಾ ಶಿಕ್ಷಣ ಪಡೆಯಲು ಪ್ರೇರೇಪಿಸಿ ಯಶಸ್ವಿಯಾಗಿದ್ದರು. ಇದರ ಫಲವಾಗಿ ಫಾತಿಮಾ ಶೇಖ್ ಶಿಕ್ಷಕಿ ತರಬೇತಿಯನ್ನು ಪೂರ್ಣಗೊಳಿಸಿ ಭಾರತದ ಪ್ರಥಮ ಮುಸ್ಲಿಂ ಶಿಕ್ಷಕಿ ಎಂಬ ಬಿರುದಿಗೆ ಪಾತ್ರಳಾಗಿದ್ದರು. ಅದಮ್ಯ ಉತ್ಸಾಹದ ಚಿಲುಮೆಗಳಾಗಿದ್ದ ಸಮಾನ ಆಸಕ್ತಿಯನ್ನು ಹೊಂದಿದ್ದ ಈ ಇಬ್ಬರು ಅಗ್ರಗಣ್ಯ ಶಿಕ್ಷಕಿಯರು ಜೊತೆ ಸೇರಿ ತಮ್ಮ ಮುಂದಿನ ಅಕ್ಷರ ಕ್ರಾಂತಿಯನ್ನು ಮುನ್ನಡೆಸಿದರು.
ಸಾವಿತ್ರಿಬಾಯಿ ಆರಂಭಿಸಿದ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಗಟ್ಟಿ ಬುನಾದಿ ಹಾಕಿದ ಫಾತಿಮಾ ಶೇಖ್ ಮುಸ್ಲಿಂ ಮಹಿಳೆಯರಿಗೆ ಆಧುನಿಕ ಶಿಕ್ಷಣದ ಅಗತ್ಯತೆಯನ್ನು ಸಾರಿದರು. ನಂತರ ಉಸ್ಮಾನ್ ಶೇಖರ ಮನೆಯೇ ಪಾಠಶಾಲೆಯಾಗಿ ಬದಲಾಯಿತು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಈ ಶಾಲೆಯನ್ನು ನಿರ್ವಹಿಸಿದರು. ಸಾವಿತ್ರಿ ಬಾಯಿ ಆರಂಭಿಸಿದ ಶಾಲೆಗಳ ಪಠ್ಯಕ್ರಮ ಅಂದಿನ ಸಾಮಾನ್ಯ ಸಾಂಪ್ರದಾಯಿಕ ಪಠ್ಯಕ್ರಮಕ್ಕಿಂತ ಭಿನ್ನವಾಗಿತ್ತು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನದಂತಹ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಫುಲೆ ದಂಪತಿ ಸ್ಥಾಪಿಸಿದ ಪೂನಾ ಪರಿಸರದ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯರ ಸಂಖ್ಯೆ 150ಕ್ಕೇರಿತ್ತು. “ಜಡತ್ವದಿಂದ ಹೊರ ಬನ್ನಿ, ಹೋಗಿ ಶಿಕ್ಷಣ ಪಡೆಯಿರಿ’’ ಎಂದು ಅಂದಿನ ಜಡ ಸಮಾಜವನ್ನು ಬಡಿದೆಬ್ಬಿಸಿದ ಸಾವಿತ್ರಿಬಾಯಿ ಫುಲೆ ಕೇವಲ ಶಿಕ್ಷಕಿಯಾಗಿ ಮಾತ್ರವಲ್ಲದೆ ಸಮಾಜ ಸುಧಾರಕಿಯಾಗಿಯೂ ಇತಿಹಾಸದ ಪುಟಗಳಲ್ಲಿ ಅಜರಾಮರವಾದವರು.
ಜ್ಯೋತಿಬಾ ಸ್ಥಾಪಿಸಿದ ಸತ್ಯಶೋಧಕ ಸಮಾಜದ ಮುಖೇನ ಅಕ್ಷರಶಃ ಸತ್ಯವನ್ನೇ ಶೋಧಿಸಿ ದುರ್ಬಲ ಹಿಂದುಳಿದ ವರ್ಗಗಳ ಜನರ ಮುಂದಿಟ್ಟವರು. ತಮ್ಮ ಅಕ್ಷರ ಕೃಷಿಯ ಕೈಂಕರ್ಯಕ್ಕಾಗಿ ಮನೆಯಿಂದಲೇ ಹೊರ ನಡೆಯಬೇಕಾದ ಸಂದರ್ಭ ಬಂದರೂ ವಿಚಲಿತರಾಗದೆ ಪತಿಯೊಂದಿಗೆ ಹೆಜ್ಜೆ ಹಾಕಿ ಪ್ರೀತಿಯಿಂದಲೇ ಹೆಣ್ಣು ಮಕ್ಕಳ ಕೋಮಲ ಕೈ ಹಿಡಿದು ಅಕ್ಷರಾಭ್ಯಾಸ ಮಾಡಿಸಿದವರು ಈ ಸಾವಿತ್ರಿಬಾಯಿ. ಕವಯಿತ್ರಿಯಾಗಿ, ಲೇಖಕಿಯಾಗಿಯೂ ಹೆಸರುವಾಸಿಯಾಗಿದ್ದ ಸಾವಿತ್ರಿ ಬಾಯಿ ಫುಲೆ, ತನಗೆ ತೂರಿ ಬಂದ ಕಲ್ಲು ಸೆಗಣಿಗಳ ರಾಶಿಯನ್ನು ಮಡಿಲಲ್ಲಿ ಕಟ್ಟಿಕೊಂಡೇ ಹಿಂದಡಿಯಿಡದೆ ಶಾಲೆಗಳನ್ನು ತೆರೆಯುತ್ತಲೇ ಹೋದವರು. ಅಂದು ಇವರು ಸ್ಥಾಪಿಸಿದ ದೇಶದ ಮೊದಲ ಹೆಣ್ಣು ಮಕ್ಕಳ ಶಾಲೆಯಿಂದು ಸಾವಿತ್ರಿಬಾಯಿ ವಿಶ್ವವಿದ್ಯಾಲಯವಾಗಿ ಪುಣೆಯಲ್ಲಿ ನೆಲೆ ನಿಂತಿದೆ. ಶಿಕ್ಷಣ ಪಡೆಯಲು ಅವಕಾಶವಿಲ್ಲದೆ ನೂರಾರು ವರ್ಷಗಳಿಂದ ಅಕ್ಷರ ವಂಚಿತರಾಗಿಯೇ ಬದುಕನ್ನ ಸಾಗಿಸಿ ಸಮಾಜದಿಂದ ಅಕ್ಷರವಿಲ್ಲದವರು ಎಂಬ ಅಪಹಾಸ್ಯಕ್ಕೂ ಒಳಗಾಗಿ ಇತ್ತ ಕಲಿಯುವ ಆಸೆಯಿದ್ದರೂ ಅವಕಾಶವಿಲ್ಲದೆ ಬದುಕಿದ್ದವರ ಬಾಳಿಗೆ ಅಕ್ಷರಗಳನ್ನು ಪೋಣಿಸಿದ ಸಾವಿತ್ರಿಬಾಯಿ ಸಾರ್ವತ್ರಿಕ ಗೌರವಕ್ಕೆ ಅರ್ಹರು. 1831ರ ಜನವರಿ 3ರಂದು ಜನಿಸಿದ ಸಾವಿತ್ರಿಬಾಯಿ ಫುಲೆ ಇಹಲೋಕ ತ್ಯಜಿಸಿದ್ದು 1897ರ ಮಾರ್ಚ್ 10ರಂದು. ಸಾವಿಗೆ ಕಾರಣ ಬೇಡವೇ? ಹೌದು. ಈ ಮಹಾನ್ ಶಿಕ್ಷಕಿ ಪ್ಲೇಗ್ ರೋಗಿಗಳ ಸೇವೆಗೈಯುತ್ತಲೇ ಅದೇ ಪ್ಲೇಗ್‌ಗೆ ತುತ್ತಾಗಿ ತನ್ನ ಪ್ರಾಣವನ್ನು ಅರ್ಪಿಸಿದರು. ಈ ತ್ಯಾಗಮಯಿ ಶಿಕ್ಷಕಿಗೆ ದೇಶದ ನಿಜಾರ್ಥದ ಗೌರವ ಸಲ್ಲಬೇಕಿದೆ.